Tag: ಮಾಮಲ್ಲಪುರಂ

  • ಮಾಮಲ್ಲಪುರಂ ಬೀಚ್‍ನಲ್ಲಿ ಪ್ಲಾಸ್ಟಿಕ್ ಹೆಕ್ಕಿದ ಮೋದಿ – ವಿಡಿಯೋ

    ಮಾಮಲ್ಲಪುರಂ ಬೀಚ್‍ನಲ್ಲಿ ಪ್ಲಾಸ್ಟಿಕ್ ಹೆಕ್ಕಿದ ಮೋದಿ – ವಿಡಿಯೋ

    ಮಹಾಬಲಿಪುರಂ: ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಶುಕ್ರವಾರ ಭೇಟಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ಬೆಳಗ್ಗೆ ತಮ್ಮ ವಾಯು ವಿಹಾರದ ಸಮಯದಲ್ಲಿ ಮಾಮಲ್ಲಪುರಂ ಸಮುದ್ರ ತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕಸವನ್ನು ಹೆಕ್ಕುವ ಮೂಲಕ ಸ್ವಚ್ಛತಾ ಕಾರ್ಯವನ್ನು ಮಾಡಿದ್ದಾರೆ.

    ಸ್ವಚ್ಛ ಭಾರತದ ಅಭಿಯಾನಕ್ಕೆ ವಿಶೇಷ ಸಂದೇಶ ರವಾನಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ಬೆಳಗ್ಗೆ ಸುಮಾರು 30 ನಿಮಿಷಗಳ ಕಾಲ ವಾಯು ವಿಹಾರ ಮಾಡಿದರು. ಈ ಸಮಯದಲ್ಲಿ ಬೀಚ್‍ನಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು (ಪ್ಲಾಗಿಂಗ್) ಸಂಗ್ರಹಿಸಿದರು.

    ಈ ಕುರಿತ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಅವರು, ಸಂಗ್ರಹಿಸಲಾದ ಕಸವನ್ನು ಹೋಟೆಲ್‍ನ ಸಿಬ್ಬಂದಿ ಜಯರಾಜ್ ಅವರಿಗೆ ನೀಡಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ಕಾರ್ಯವನ್ನು ಮಾಡೋಣ, ಸದೃಡ ಆರೋಗ್ಯವನ್ನು ಪಡೆಯೋಣ ಎಂದಿದ್ದಾರೆ.

    ವಿಡಿಯೋದಲ್ಲಿ ಮೋದಿ ಅವರು, ಸಮುದ್ರದ ಮರಳಿನ ಮೇಲೆ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿ, ಚೀಲ ಹಾಗೂ ಚಪ್ಪಲಿಗಳನ್ನು ತೆಗೆದು ದೊಡ್ಡ ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸುತ್ತಿರುವುದನ್ನು ಕಾಣಬಹುದಾಗಿದೆ. ಪ್ರಧಾನಿಗಳ ಈ ವಿಡಿಯೋವನ್ನು ಇದುವರೆಗೂ ಸುಮಾರು 60 ಸಾವಿರ ಮಂದಿ ಲೈಕ್ ಮಾಡಿದ್ದು, 18 ಸಾವಿರಕ್ಕೂ ಹೆಚ್ಚು ಮಂದಿ ಟ್ವಿಟನ್ನು ರಿಟ್ವೀಟ್ ಮಾಡಿದ್ದಾರೆ.