Tag: ಮಾನ್ಸೂನ್ ಮಳೆ

  • ಮಹಾ ಮಳೆಗೆ ಮುಂಬೈ ಮೆಟ್ರೋ ಸ್ಟೇಷನ್ ಸಂಪೂರ್ಣ ಜಲಾವೃತ

    ಮಹಾ ಮಳೆಗೆ ಮುಂಬೈ ಮೆಟ್ರೋ ಸ್ಟೇಷನ್ ಸಂಪೂರ್ಣ ಜಲಾವೃತ

    – ಎಸ್ಕಲೇಟರ್, ಸ್ಟೆಪ್ ಮೂಲಕ ಮೆಟ್ರೋ ನಿಲ್ದಾಣಕ್ಕೆ ನುಗ್ಗಿದ ನೀರು

    ಮುಂಬೈ: ದೇಶದ ಆರ್ಥಿಕ ರಾಜಧಾನಿ ಮುಂಬೈಗೆ (Mumbai) ಅವಧಿಗೂ ಮುನ್ನವೇ ಮುಂಗಾರು ಪ್ರವೇಶಿಸಿದ್ದು, ಮೊದಲ ದಿನವೇ ಭಾರೀ ಮಳೆಗೆ ನೂತನ ಆಚಾರ್ಯ ಅತ್ರೆ ಚೌಕ್ ಅಂಡರ್‌ಗ್ರೌಂಡ್ ಮೆಟ್ರೋ ನಿಲ್ದಾಣದ(Acharya Atre Chowk underground Metro Station) ಆಕ್ವಾಲೈನ್-3 ಸಂಪೂರ್ಣ ಜಲಾವೃತವಾಗಿದೆ.

    ಮೇ 10ರಿಂದ ಕಾರ್ಯನಿರ್ವಹಿಸುತ್ತಿರುವ ಆಚಾರ್ಯ ಅತ್ರೆ ಚೌಕ್ ಅಂಡರ್‌ಗ್ರೌಂಡ್ ಮೆಟ್ರೋ ನಿಲ್ದಾಣದ ಆಕ್ವಾಲೈನ್ ಮಳೆ ನೀರಿನಿಂದ ತುಂಬಿದ್ದು, ಎಸ್ಕಲೇಟರ್, ಸ್ಟೆಪ್ ಮೂಲಕ ಮೆಟ್ರೋ ನಿಲ್ದಾಣದೊಳಗೆ ನೀರು ಹರಿದು ಬಂದಿದೆ. ಇದನ್ನೂ ಓದಿ: ಪ್ರವಾಸಿಗರ ಹಾಟ್‌ಸ್ಪಾಟ್ ಬಲಮುರಿ ಡೆತ್ ಸ್ಪಾಟ್ ಆಯ್ತಾ? – ಒಂದೂವರೆ ವರ್ಷದಲ್ಲಿ 20ಕ್ಕೂ ಅಧಿಕ ಮಂದಿ ಸಾವು

    ಮುಂಬೈ ಆಕ್ವಾಲೈನ್ 3 (Aqua Line 3) ಸೇವಾ ನವೀಕರಣ ಹಾಗೂ ಅನಿರೀಕ್ಷಿತ ತಾಂತ್ರಿಕ ಸಮಸ್ಯೆಯಿಂದಾಗಿ, ಆಕ್ವಾಲೈನ್ -3ರಲ್ಲಿ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಆಚಾರ್ಯ ಅತ್ರೆ ಚೌಕ್ ಬದಲಿಗೆ ವರ್ಲಿ ನಿಲ್ದಾಣದವರೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂದು ಮುಂಬೈ ಮೆಟ್ರೋ ರೈಲು ನಿಗಮ ಲಿಮಿಟೆಡ್  (MMRCL) ಅಧಿಕೃತ ಸಾರ್ವಜನಿಕ ಸೂಚನೆಯನ್ನು ಹೊರಡಿಸಿದೆ. ಇದನ್ನೂ ಓದಿ: ಮುಂಬೈನಲ್ಲಿ 107 ವರ್ಷದ ದಾಖಲೆ ಮುರಿದ ಮಳೆ – 75 ವರ್ಷದಲ್ಲಿ ಮೊದಲ ಬಾರಿಗೆ ಅವಧಿ ಪೂರ್ವ ಮುಂಗಾರು

    ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು ಪ್ರಯಾಣಿಕರ ಸುರಕ್ಷತೆಯ ಸಲುವಾಗಿ ವರ್ಲಿ ಮತ್ತು ಆಚಾರ್ಯ ಅತ್ರೆ ಚೌಕ್ ನಡುವಿನ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂಎಂಆರ್‌ಸಿಎಲ್ ತಿಳಿಸಿದೆ. ಇದನ್ನೂ ಓದಿ: 6 ಗನ್‌ಮ್ಯಾನ್‌ಗಳೊಂದಿಗೆ ಪಾಕ್ ಬೀದಿಯಲ್ಲಿ ಜ್ಯೋತಿ ಸುತ್ತಾಟ- ಸ್ಫೋಟಕ ವಿಡಿಯೋ ಔಟ್

    ಮುಂಬೈನಲ್ಲಿ ಸೋಮವಾರ ಸುರಿದ ಭಾರೀ ಮಳೆಯಿಂದಾಗಿ, ಆಚಾರ್ಯ ಅತ್ರೆ ಚೌಕ್ ನಿಲ್ದಾಣದ ಪ್ರವೇಶ/ನಿರ್ಗಮನ ಸ್ಟೆಪ್ ಹಾಗೂ ಎಸ್ಕಲೇಟರ್‌ಗಳ ಮೂಲಕ ನಿಲ್ದಾಣದೊಳಗೆ ಮಳೆ ನೀರು ನುಗ್ಗಿದೆ. ಮೆಟ್ರೋ ನಿಲ್ದಾಣದ ಒಳಗೆ ಹಠಾತ್ ನೀರು ಹರಿದು ಬಂದ ಕಾರಣ ಪ್ರವೇಶ/ನಿರ್ಗಮನ ಮಾರ್ಗದಲ್ಲಿನ ಆರ್‌ಸಿಸಿ ನೀರು ತಡೆಗೋಡೆ ಕುಸಿದು ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: ಪುಟಿನ್ ಹೆಲಿಕಾಪ್ಟರ್ ಗುರಿಯಾಗಿಸಿ ಉಕ್ರೇನ್ ಡ್ರೋನ್ ದಾಳಿ – ರಷ್ಯಾದ ಕಮಾಂಡರ್‌ಗೆ ಗಾಯ

    ಈ ಬಾರಿ ಮುಂಬೈ ನಗರಕ್ಕೆ ಅವಧಿಗೆ ಮುಂಚಿತವಾಗಿಯೇ ಮುಂಗಾರು ಪ್ರವೇಶಿಸಿದೆ. ಭಾರತೀಯ ಹವಾಮಾನ ಇಲಾಖೆ ಸೂಚಿಸಿದಂತೆ ಜೂನ್ 11ರಂದು ಮುಂಗಾರು ಅಪ್ಪಳಿಸಬೇಕಿತ್ತು. ಆದ್ರೆ 16 ದಿನ ಮುಂಚಿತವಾಗಿಯೇ ಮಳೆ ಆರ್ಭಟಿಸಿದೆ. ಇದು ಕಳೆದ 75 ವರ್ಷಗಳಲ್ಲೇ ಅವಧಿಪೂರ್ವ ಮುಂಗಾರು ಪ್ರವೇಶಿಸಿದೆ..

  • ಬಂಗಾಳ ಕೊಲ್ಲಿ, ನಿಕೋಬಾರ್ ದ್ವೀಪಕ್ಕೆ ಮುಂಗಾರು ಆಗಮನ: ಹವಾಮಾನ ಇಲಾಖೆ

    ಬಂಗಾಳ ಕೊಲ್ಲಿ, ನಿಕೋಬಾರ್ ದ್ವೀಪಕ್ಕೆ ಮುಂಗಾರು ಆಗಮನ: ಹವಾಮಾನ ಇಲಾಖೆ

    ನವದೆಹಲಿ: ನೈಋತ್ಯ ಮಾನ್ಸೂನ್(Southwest Monsoon) ಮಂಗಳವಾರ ದಕ್ಷಿಣ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ದಕ್ಷಿಣ ಅಂಡಮಾನ್ ಸಮುದ್ರ, ನಿಕೋಬಾರ್ ದ್ವೀಪ ಮತ್ತು ಉತ್ತರ ಅಂಡಮಾನ್ ಸಮುದ್ರದ ಕೆಲವು ಭಾಗಗಳಿಗೆ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

    ಕಳೆದ ಎರಡು ದಿನಗಳಲ್ಲಿ ನಿಕೋಬಾರ್ ದ್ವೀಪಗಳಲ್ಲಿ ಭಾರೀ ಮಳೆಯಾಗಿದೆ. ದಕ್ಷಿಣ ಬಂಗಾಳ ಕೊಲ್ಲಿ, ನಿಕೋಬಾರ್ ದ್ವೀಪಗಳು ಮತ್ತು ಅಂಡಮಾನ್ ಸಮುದ್ರದ ಮೇಲೆ ಪಶ್ಚಿಮ ದಿಕ್ಕಿನ ಗಾಳಿಯ ಬಲವು ಹೆಚ್ಚಾಗಿದೆ. ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದಲ್ಲಿ ಗಾಳಿಯ ವೇಗ 20 ನಾಟಿಕಲ್ ಮೈಲ್ ಮೀರಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಧಾರಾಕಾರ ಮಳೆ – ಅಂಚೆ ಕಚೇರಿ, ಅಂಡರ್ ಪಾಸ್‌ಗಳಲ್ಲಿ ನೀರು, ವಾಹನ ಸವಾರರ ಪರದಾಟ

    ಈ ಪ್ರದೇಶದಲ್ಲಿ ದೀರ್ಘ ತರಂಗ ವಿಕಿರಣ(OLR) ಸಹ ಕಡಿಮೆಯಾಗಿದೆ. ಇದು ಮಾನ್ಸೂನ್ ಆಗಮನದ ಮುನ್ಸೂಚನೆಯನ್ನು ನೀಡುತ್ತದೆ. ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಆಲಿಕಲ್ಲು ಮಳೆ

    ದಕ್ಷಿಣ ಅರೇಬಿಯನ್ ಸಮುದ್ರ, ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶಗಳು, ದಕ್ಷಿಣ ಬಂಗಾಳ ಕೊಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಕೆಲವು ಭಾಗಗಳಿಗೆ ಮಾನ್ಸೂನ್ ಆಗಮಿಸಿದೆ. ಇನ್ನುಳಿದ ಅಂಡಮಾನ್ ಸಮುದ್ರದ ಭಾಗಗಳಿಗೆ ಹಾಗೂ ಬಂಗಾಳ ಕೊಲ್ಲಿಯ(Bay of Bengal) ಮಧ್ಯ ಭಾಗಗಳಿಗೆ ಮುಂದಿನ ಮರ‍್ನಾಲ್ಕು ದಿನಗಳಲ್ಲಿ ಮಾನ್ಸೂನ್ ಪ್ರವೇಶಿಸಲಿದ್ದು, ಮೇ 27ರಂದು ಕೇರಳವನ್ನು(Kerala) ತಲುಪುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

  • NFSM ಅಭಿಯಾನದಡಿ 12.60 ಕೋ.ರೂ. ಮೌಲ್ಯದ ಬಿತ್ತನೆ ಬೀಜ ಮಿನಿಕಿಟ್ ವಿತರಣೆ: ಬಿ.ಸಿ.ಪಾಟೀಲ್

    NFSM ಅಭಿಯಾನದಡಿ 12.60 ಕೋ.ರೂ. ಮೌಲ್ಯದ ಬಿತ್ತನೆ ಬೀಜ ಮಿನಿಕಿಟ್ ವಿತರಣೆ: ಬಿ.ಸಿ.ಪಾಟೀಲ್

    ಬೆಂಗಳೂರು: ತೊಗರಿ, ಹೆಸರು, ಶೇಂಗಾ, ಸೋಯಾ, ಅವರೆ ಬೆಳೆಗಳ ವಿಸ್ತೀರ್ಣ ಹಾಗೂ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಉತ್ತೇಜನ ನೀಡಲು ರೈತರಿಗೆ ಪ್ರಮುಖವಾಗಿ ಬೆಳೆಯುವ 19 ಜಿಲ್ಲೆಗಳಲ್ಲಿ ಬಿತ್ತನೆ ಬೀಜಗಳ ಮಿನಿಕಿಟ್ ರೂಪದಲ್ಲಿ “ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ”(ಎನ್.ಎಫ್.ಎಸ್.ಎಂ)ಯೋಜನೆಯಡಿ ರೈತರಿಗೆ ಉಚಿತವಾಗಿ ಬಿತ್ತನೆ ಬೀಜಗಳನ್ನು ನೀಡಲಾಗುತ್ತಿದ್ದು, ಇಲ್ಲಿಯವರೆಗೆ 12.60 ಕೋ.ರೂ. ಮೌಲ್ಯದ ಮಿನಿಕಿಟ್ ಗಳನ್ನು ವಿತರಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

    ವಿಕಾಸಸೌಧದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿ.ಸಿ.ಪಾಟೀಲ್, ಎನ್.ಎಫ್.ಎಸ್.ಎಂ ಯೋಜನೆಯಡಿ 4 ಕೆಜಿ ತೊಗರಿಯನ್ನು 16 ಜಿಲ್ಲೆಗಳಿಗೆ, 4 ಕೆ.ಜಿ.ಹೆಸರು 4 ಜಿಲ್ಲೆಗಳಿಗೆ 20 ಕೆ.ಜಿಯಂತೆ 8 ಜಿಲ್ಲೆಗಳಿಗೆ ಹಾಗೂ 8 ಕೆ.ಜಿಯಂತೆ 2 ಜಿಲ್ಲೆಗಳಿಗೆ ಸೋಯಾ ಅವರೆಗಳ ಮಿನಿಕಿಟ್ ಗಳನ್ನು ವಿತರಿಸಲಾಗಿದ್ದು, ಮಿಶ್ರಬೆಳೆಗಳನ್ನು ಬೆಳೆಯಲು ಸಹ ಈ ಅಭಿಯಾನದಡಿ ರೈತರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.

    2020-21 ನೇ ಸಾಲಿನಲ್ಲಿ 153.08 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಾಗಿದ್ದು, ದೇಶದ ಸರಾಸರಿಗೆ ಹೋಲಿಸಿದಲ್ಲಿ ಶೇ.2 ರಷ್ಟು ಹಾಗೂ ರಾಜ್ಯದ ಸರಾಸರಿಗೆ ಇದನ್ನು ಹೋಲಿಸಿದರೆ ಕರ್ನಾಟಕದಲ್ಲಿ ಶೇ.10 ರಷ್ಟು ಹೆಚ್ಚಿನ ಆಹಾರ ಧಾನ್ಯಗಳ ಉತ್ಪಾದನೆಯಾಗಿದೆ. ಕೋವಿಡ್ ಸಂಕಷ್ಟದಲ್ಲಿಯೂ ಕೂಡ ಕಳೆದ ಬಾರಿ ದಾಖಲೆಯ ಪ್ರಮಾಣದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಾಗಿರುವುದನ್ನು ನೋಡಿದರೆ ಕೃಷಿಯತ್ತ ಜನರ ಒಲವು ಹಾಗೂ ಕೋವಿಡ್ ಅವಧಿಯಲ್ಲಿಯೂ ಸಹ ರೈತರ ಶ್ರಮಕ್ಕೆ ಇದು ಸಾಧನೆಯಾಗಿದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.

    ಬಿತ್ತನೆ ಗುರಿ:
    ಮುಂಗಾರು ಹಂಗಾಮಿಗೆ 77 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಿದ್ದು, ಇಲ್ಲಿಯವರೆಗೆ 11.73 ಲಕ್ಷ ಹೆಕ್ಟೇರ್ ಬಿತ್ತನೆ ಅಂದರೆ ಶೇ.15.23 ಬಿತ್ತನೆಯಾಗಿದೆ. ಈ ಬಾರಿ 6 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆಯಿದ್ದು, 7.74 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಲಭ್ಯತೆಯಿದ್ದು, ಇಲ್ಲಿಯವರೆಗೆ 1.79 ಲಕ್ಷ ಕ್ವಿಂಟಾಲ್ ವಿತರಣೆಯಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ 1.15 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನುಯಿದೆ.

    ರಸಗೊಬ್ಬರ ವಿವರ:
    ಏಪ್ರಿಲ್ ನಿಂದ ಜೂನ್ ವರೆಗೆ ಡಿಎಪಿ, ಎಂಒಪಿ, ಕಾಂಪ್ಲೆಕ್ಸ್ ಹಾಗೂ ಯೂರಿಯಾ ಸೇರಿದಂತೆ ಒಟ್ಟು 12,77,815 ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆಯಿದ್ದು, ಇದರಲ್ಲಿ ಒಟ್ಟು 8,02.504 ಮೆ.ಟನ್ ಸರಬರಾಜು, ಒಟ್ಟು 11,54,320 ಆರಂಭಿಕ ಶಿಲ್ಕು, 7,84,075 ಮಾರಾಟವಾಗಿದ್ದು, ಇನ್ನೂ 11,72,750 ದಾಸ್ತಾನು ಉಳಿದಿದೆ. ಈ ಬಾರಿ ಹಂಗಾಮಿನಲ್ಲಿ ಇಲ್ಲಿಯವರೆಗೆ 12 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಇಲ್ಲಿಯವರೆಗೆ ಎಲ್ಲಿಯೂ ರಸಗೊಬ್ಬರವಾಗಲೀ, ಬಿತ್ತನೆ ಬೀಜದ ಕೊರತೆ ಕಂಡುಬಂದಿಲ್ಲ. ಕಾಳಸಂತೆಯಲ್ಲಿ ಕೃತಕ ಅಭಾವ ಸೃಷ್ಟಿಸುವ ಮೇಲೆ ಹದ್ದಿನ ಕಣ್ಣು ಇಡಲಾಗಿದ್ದು, ಕೃಷಿ ವಿಚಕ್ಷಣಾ ದಳ ನಿರಂತರವಾಗಿ ಕಾಳಸಂತೆಕೋರರು ನಕಲಿ ಮಾರಾಟಗಾರರ ಮೇಲೆ ದಾಳಿ ಮಾಡುತ್ತಲೇ ಇದೆ. ಕಳೆದ ಬಾರಿ 1731.63 ಲಕ್ಷ ಮೌಲ್ಯದ ಕೃಷಿ ಪರಿಕರ ನಕಲಿಬಿತ್ತನೆ ಬೀಜ ರಸಗೊಬ್ಬರ ವಶಪಡಿಸಿಕೊಳ್ಳಲಾಗಿದ್ದು, 263 ಮೊಕ್ಕದ್ದಮೆಗಳನ್ನು ನ್ಯಾಯಾಲಯದಲ್ಲಿ ಹೂಡಲಾಗಿದೆ. ಈ ಬಾರಿ 2021-22 ನೇ ಸಾಲಿನಲ್ಲಿ ಏಪ್ರಿಲ್ 1 ರಿಂದ ಜೂನ್ 11 ರವರೆಗೆ 424.52 ಲಕ್ಷ ಮೌಲ್ಯದ ವಿವಿಧ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ಹಾವೇರಿ, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜಪ್ತಿ ಮಾಡಲಾಗಿದೆ. ಇನ್ನೂ ಏಪ್ರಿಲ್ 1 ರಿಂದ ಜೂ 13 ರವರೆಗೆ ಶೇ.31 ಹೆಚ್ಚುವರಿ ಅಂದರೆ 169 ಮಿಮೀ ವಾಡಿಕೆ ಮಳೆಯಾಗಿದ್ದು, 222 ಮಿ.ಮೀ ವಾಸ್ತವಿಕ ಮಳೆಯಿತ್ತು.

    ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ:
    2021-22 ನೇ ಸಾಲಿನಲ್ಲಿ 53,35.967 ಕೇಂದ್ರ ಸರ್ಕಾರದಿಂದ ರೈತ ಫಲಾನುಭವಿಯಾಗಿದ್ದು, ಇದರಲ್ಲಿ 1067.1934 ಕೋ.ರೂ.ಆರ್ಥಿಕ ನೆರವು ನೀಡಲಾಗಿದ್ದು, 55,07,256 ಫಲಾನುಭವಿಗಳಿಗೆ ಇಲ್ಲಿಯವರೆಗೆ 7017.1520 ಕೋ.ರೂ. ಆರ್ಥಿಕ ನೆರವು ನೀಡಲಾಗಿದೆ.ರಾಜ್ಯ ಸರ್ಕಾರ 47,98.095 ರೈ ಫಲಾನುಭವಿಗಳಿಗೆ 2849.1632 ಕೋ.ರೂ. ಆರ್ಥಿಕ ನೆರವು ನೀಡಲಾಗಿದೆ. ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಈಗಾಗಲೇ ಶೇಕಡಾ 85 ರಷ್ಟು ಆಧಾರ್ ಲಿಂಕ್ ಮಾಡಿದ್ದೇವೆ. ಶೇಕಡ 15 ರಷ್ಟು ಅಕೌಂಟ್ ಮೂಲಕ ನೀಡಲಾಗುತ್ತಿದೆ. 2020-21 ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 5.01 ಲಕ್ಷ ಟಾರ್ಪಲಿನ್ ಗಳನ್ನು ವಿತರಿಸಲಾಗಿದೆ. ರಾಜ್ಯದಲ್ಲಿ 690 ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಿದ್ದು, 210 ಕೃಷಿ ಯಂತ್ರೋಪಕರಣಗಳ ಬ್ಯಾಂಕ್ ಗಳ ಸ್ಥಾಪನೆ ಮಾಡಲಾಗಿದೆ.

  • ಬೆಂಗಳೂರಿನಲ್ಲಿ ಧಾರಾಕಾರ ಮಳೆ – ಕರ್ನಾಟಕದಲ್ಲಿ ಮೂರು ದಿನ ಯೆಲ್ಲೋ ಅಲರ್ಟ್

    ಬೆಂಗಳೂರಿನಲ್ಲಿ ಧಾರಾಕಾರ ಮಳೆ – ಕರ್ನಾಟಕದಲ್ಲಿ ಮೂರು ದಿನ ಯೆಲ್ಲೋ ಅಲರ್ಟ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವರುಣರಾಯ ತಂಪರೆದಿದ್ದಾನೆ. ಮುಂದಿನ ಮೂರು ದಿನ ವ್ಯಾಪಕ ಮಳೆಯಾಗುವ ಹಿನ್ನೆಲೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

    ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನದ ವೇಳೆಗೆ ಬೆಂಗಳೂರಿನ ಮಲ್ಲೇಶ್ವರಂ, ವಸಂತನಗರ, ಶೇಷಾದ್ರಿಪುರಂ, ವೈಯಾಲಿಕಾವಲ್, ಕೋದಂಡ ರಾಂಪುರದಲ್ಲಿ ಭಾರೀ ಮಳೆಯಾಗಿದೆ. ನೆಹರು ಸರ್ಕಲ್ ಸೇರಿದಂತೆ ಮೆಜೆಸ್ಟಿಕ್ ಸುತ್ತಮುತ್ತಿನ ರಸ್ತೆಗಳು ಕೆರೆಗಳಾಗಿ ಬದಲಾದವು. ಬೆಂಗಳೂರಿನಲ್ಲಿ ಎರಡು ದಿನ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ.

    ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ. ಜೂನ್ 3ರಿಂದ 5ರವರೆಗೆ ಈ ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಹಿನ್ನೆಲೆ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡಿನ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ 3 ದಿನ ಭಾರಿ ಮಳೆಯಾಗುವ ಸಾಧ್ಯತೆ. ಶಿವಮೊಗ್ಗ, ಚಿತ್ರದುರ್ಗ, ಹಾಸನ, ಕೊಡಗು, ಚಾಮರಾಜನಗರ, ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರದಲ್ಲಿಯೂ ಮಳೆ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.

    ಹಾಸನ ನಗರ ಹಲವೆಡೆ ಸಾಧಾರಣ ಮಳೆಯಾಗಿದ್ದು, ನಿನ್ನೆ ರಾತ್ರಿ ಚನ್ನರಾಯಪಟ್ಟಣ ತಾಲ್ಲೂಕಿನ ಹಲವೆಡೆ ಉತ್ತಮ ಮಳೆಯಾಗಿತ್ತು. ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆಯಲ್ಲಿ ನಿನ್ನೆ ರಾತ್ರಿಯಿಂದಲೇ ಮಳೆಯಾಗುತ್ತಿದೆ.

    ಎರಡು ದಿನಗಳು ತಡವಾದರೂ ಅಂತಿಮವಾಗಿ ನೈಋತ್ಯ ಮಾನ್ಸೂನ್ ಮಾರುತಗಳು ಕೇರಳ ಪ್ರವೇಶಿಸಿವೆ. ಕೇರಳದ ದಕ್ಷಿಣ ಭಾಗಗಳಿಗೆ ನೈಋತ್ಯ ಮಾನ್ಸೂನ್ ಪ್ರವೇಶಿಸಿವೆ. ಈ ಕುರಿತು ಭಾರತೀಯ ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮೋಹಪಾತ್ರ ಮಾಹಿತಿ ನೀಡಿದ್ದು, ಸಾಮಾನ್ಯವಾಗಿ ಜೂನ್ 1ರಂದೇ ನೈಋತ್ಯ ಮಾನ್ಸೂನ್ ಮಾರುತಗಳು ಕೇರಳ ಪ್ರವೇಶಿಸುತ್ತಿದ್ದವು. ಆದರೆ ಈ ವರ್ಷ 2 ದಿನಗಳ ಕಾಲ ತಡವಾಗಿದೆ. ಕೇರಳ ಪ್ರವೇಶಿಸಿರುವ ಮಾನ್ಸೂನ್ ಮಾರುತಗಳು ಭಾರತದಲ್ಲಿ ಬಾಲ್ಕು ತಿಂಗಳ ಕಾಲ ಸುಧೀರ್ಘ ಮಳೆಗಾಲದ ಆರಂಭವನ್ನು ಸೂಚಿಸುತ್ತವೆ ಎಂದು ಹೇಳಿದ್ದಾರೆ.

    ಅರಬ್ಬಿ ಸಮುದ್ರ ದಕ್ಷಿಣ ಭಾಗ, ಲಕ್ಷದ್ವೀಪ ಪ್ರದೇಶ, ದಕ್ಷಿಣ ಕೇರಳ, ದಕ್ಷಿಣ ತಮಿಳುನಾಡು, ಕೊಮೊರಿನ್- ಮಾಲ್ಡೀವ್ಸ್ ನ ಕೆಲ ಭಾಗಗಳು ಹಾಗೂ ಬಂಗಾಳಕೊಲ್ಲಿಯ ನೈಋತ್ಯ ಭಾಗಗಳಲ್ಲಿ ಇಂದು ಮಳೆಯಾಗಲಿದೆ ಎಂದು ವಿವರಿಸಿದ್ದಾರೆ.

  • ಕ್ಷಣಾರ್ಧದಲ್ಲಿ ಕಾಲುವೆಗೆ ಉರುಳಿದ 3 ಅಂತಸ್ತಿನ ಕಟ್ಟಡ- ವಿಡಿಯೋ ವೈರಲ್

    ಕ್ಷಣಾರ್ಧದಲ್ಲಿ ಕಾಲುವೆಗೆ ಉರುಳಿದ 3 ಅಂತಸ್ತಿನ ಕಟ್ಟಡ- ವಿಡಿಯೋ ವೈರಲ್

    ಕೋಲ್ಕತ್ತಾ: ನಿರ್ಮಾಣ ಹಂತದಲ್ಲಿದ್ದ ಮೂರು ಅಂತಸ್ತಿನ ಕಟ್ಟಡವೊಂದು ಕಾಲುವೆಗೆ ಉರುಳಿ ಬಿದ್ದಿರುವ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪೋರ್ ಜಿಲ್ಲೆಯಲ್ಲಿ ನಡೆದಿದೆ.

    ದಾಸ್‍ಪುರದ ನಿಶ್ಚಿಂತಾಪುರ ಗ್ರಾಮದಲ್ಲಿ ನಡೆದಿದೆ. ನಿರ್ಮಾಣ ಹಂತದಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ಕಾಲುವುಗೆ ಬೀಳುತ್ತಿರುವ 30 ಸೆಕೆಂಡುಗಳ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕ್ಷಣಾರ್ಧದಲ್ಲಿ ಮೂರು ಅಂತಸ್ತಿನ ಕಟ್ಟಡ ಕಾಲುವೆಗೆ ಬೀಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಕಟ್ಟಡ ಹತ್ತಿರದ ರಾಜ್ಯ ನೀರಾವರಿ ಕಾಲುವೆಯಲ್ಲಿ ಸ್ವಚ್ಛತೆ ಮಾಡುವಾಗ ಕಟ್ಟಡದ ಅಡಿಪಾಯ ಸಡಿಲಗೊಂಡಿದೆ. ಇದರಿಂದ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕಾಲುವೆಗೆ ಬಿದ್ದಿದೆ. ಎರಡು ದಿನಗಳ ಹಿಂದೆಯೇ ಕಟ್ಟಡ ಬಿರುಕು ಬಿಟ್ಟಿತ್ತು ಎಂದು ವರದಿಯಾಗಿದೆ.

    ನಿರ್ಮಾಣ ಹಂತದಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ಕ್ಷಣಾರ್ಧದಲ್ಲಿ ಕಾಲುವೆಗೆ ಉರುಳಿ ಬಿದ್ದಿದೆ. ಇದರಿಂದ ನನಗೆ ಭಾರೀ ನಷ್ಟವಾಗಿದೆ. ಆದರೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಕಟ್ಟಡದ ಮಾಲೀಕ ಹೇಳಿದ್ದಾರೆ.

    ನಿಸರ್ಗ ಚಂಡಮಾರುತ್ತದಿಂದ ಹಲವು ಕಡೆ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ದಕ್ಷಿಣ ಬಂಗಾಳದಲ್ಲಿ ಶುಕ್ರವಾರದಿಂದ ಭಾರೀ ಮಾನ್ಸೂನ್ ಮಳೆಯಾಗುತ್ತಿದೆ.

  • ಉಡುಪಿಯಲ್ಲಿ ಮಾನ್ಸೂನ್ ಅಬ್ಬರ- ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

    ಉಡುಪಿಯಲ್ಲಿ ಮಾನ್ಸೂನ್ ಅಬ್ಬರ- ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

    ಉಡುಪಿ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಮುಂಗಾರು ಮಳೆ ಅಬ್ಬರಿಸುತ್ತಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ.

    ಉಡುಪಿ ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಕಳೆದ ರಾತ್ರಿಯಿಂದ ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿದೆ. ಜಿಲ್ಲೆಯಾದ್ಯಂತ ಕಾರ್ಮೋಡ ಆವರಿಸಿದ್ದು, ಮಳೆ ಮುಂದುವರಿಯುವ ಸಾಧ್ಯತೆ ಇದೆ. ಕಾಪು, ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ಅತಿಹೆಚ್ಚು ಮಳೆಯಾಗಿದೆ. ವಿಪರೀತ ಗಾಳಿ ಮಳೆಗೆ ಕಾರ್ಕಳ ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

    ಉಡುಪಿ ಜಿಲ್ಲೆಯಾದ್ಯಂತ ಭಾನುವಾರ ಕೂಡ ಆರೆಂಜ್ ಅಲರ್ಟ್ ಘೋಷಣೆಯಾಗಿದೆ. ಸೋಮವಾರ ಮಳೆಯ ಪ್ರಮಾಣ ಕಡಿಮೆಯಾಗಲಿದ್ದು, ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಈಗಾಗಲೇ ನದಿ ಪಾತ್ರದ ಜನರಿಗೆ ಎಚ್ಚರಿಕೆ ರವಾನಿಸಲಾಗಿದೆ. ಅಲ್ಲದೇ ಸಮುದ್ರ ತೀರಕ್ಕೆ ಸ್ಥಳೀಯರು ಯಾರೂ ತೆರಳದಂತೆ ಸೂಚಿಸಲಾಗಿದೆ.

    ನಗರ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಚರಂಡಿಗಳು ಉಕ್ಕಿ ಹರಿದಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಪರಿಣಾಮ ಜನ ಸಂಚಾರಕ್ಕೂ ಕೊಂಚ ವ್ಯತ್ಯಯ ಉಂಟಾಯಿತು. ಕುಂದಾಪುರ ಮತ್ತು ಬೈಂದೂರು ಭಾಗದಲ್ಲಿ ತಗ್ಗು ಪ್ರದೇಶದಲ್ಲಿರುವ ಅಂಗಡಿಗಳಿಗೆ ಮಳೆ ನೀರು ನುಗ್ಗಿ ಸಮಸ್ಯೆ ಉಂಟಾಯಿತು.

  • ಭಾರೀ ಮಳೆಗೆ ನೋಡ ನೋಡುತ್ತಿದ್ದಂತೆ ಸೇತುವೆ ಕುಸಿದು ಬಿತ್ತು – ವಿಡಿಯೋ

    ಭಾರೀ ಮಳೆಗೆ ನೋಡ ನೋಡುತ್ತಿದ್ದಂತೆ ಸೇತುವೆ ಕುಸಿದು ಬಿತ್ತು – ವಿಡಿಯೋ

    ಗಾಂಧಿನಗರ/ ಬೆಂಗಳೂರು: ದಕ್ಷಿಣ ಗುಜರಾತ್‍ನಲ್ಲಿ ಮಳೆ ಅಬ್ಬರಿಸುತ್ತಿದ್ದು  ವಲ್ಸಾದ್‍ನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದು ಬಿದ್ದಿದೆ.

    ದಕ್ಷಿಣ ಗುಜರಾತಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಭಾನುವಾರ 203 ಮಿ.ಮೀ. ಮಳೆಯಾಗಿದೆ. ಅನುರಾಗ ಮತ್ತು ಪಾರ್ ನದಿಗಳು ತುಂಬಿ ಹರಿಯುತ್ತಿವೆ.

    ಮುಂಬೈ ಮತ್ತು ಸೂರತ್ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮಳೆಯಿಂದಾಗ ನೀರು ನಿಂತಿದ್ದು ಹಲವೆಡೆ ಟ್ರಾಫಿಕ್ ಜಾಮ್ ಆಗಿದೆ. ಮುಂದಿನ 24 ಗಂಟೆಯಲ್ಲಿ ದಕ್ಷಿಣ ಗುಜರಾತಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಈ ತಿಂಗಳಲ್ಲಿ ಮಳೆ: ತಡವಾಗಿ ಎಂಟ್ರಿ ಕೊಟ್ಟಿರುವ ಮುಂಗಾರು ಮಳೆ ಮೊದಲ ತಿಂಗಳಲ್ಲಿ ಕೈ ಕೊಟ್ಟರೂ ಜುಲೈ ಆರಂಭದಲ್ಲಿ ಕರ್ನಾಟಕಕ್ಕೆ ಖುಷಿ ನೀಡುವ ಸಾಧ್ಯತೆ ಇದೆ.

    ಭಾನುವಾರದಿಂದ ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆ ಆಗುತ್ತಿದ್ದು, ಕೊಂಚ ಸಮಾಧಾನ ತಂದಿದೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡದಲ್ಲಿ ಧಾರಾಕಾರ ಮಳೆ ಆಗಿದೆ. ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆಯಲ್ಲಿ ಸಾಧಾರಣ ವರ್ಷಧಾರೆ ಆಗಿದೆ.

    ಚಿಕ್ಕಮಗಳೂರು ಜಿಲ್ಲೆಯಲ್ಲಿ ಭದ್ರಾ ನದಿ, ಬೆಳಗಾವಿ ಜಿಲ್ಲೆಯಲ್ಲಿ ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದಾಳೆ. ಮಹಾರಾಷ್ಟ್ರದಲ್ಲಿ ಭರ್ಜರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದತ್ತ ನೀರಿನ ಹರಿವು ಹೆಚ್ಚಾಗಿದೆ. ಮಹಾರಾಷ್ಟ್ರದ ಜಲ್ನಾದಲ್ಲಿ ನೀರಿನ ರಭಸಕ್ಕೆ ರಸ್ತೆಯೊಂದು ಕೊಚ್ಚಿಹೋಗಿದ್ದು, ಕಾರು ಮತ್ತು ಬೈಕ್ ಸವಾರರು ಸ್ವಲ್ಪದರಲ್ಲೇ ಬಚಾವಾಗಿದ್ದಾರೆ.

     

  • ವಾಡಿಕೆಗಿಂತ ಕಡಿಮೆ ಮಳೆ – ಜೂನ್ 4 ರಂದು ಮುಂಗಾರು ಭಾರತಕ್ಕೆ ಪ್ರವೇಶ

    ವಾಡಿಕೆಗಿಂತ ಕಡಿಮೆ ಮಳೆ – ಜೂನ್ 4 ರಂದು ಮುಂಗಾರು ಭಾರತಕ್ಕೆ ಪ್ರವೇಶ

    ಬೆಂಗಳೂರು: ಮಾನ್ಸೂನ್ ಮಳೆಯು ದಕ್ಷಿಣ ಕರಾವಳಿಯನ್ನು ಜೂನ್ 4 ರಂದು ತಲುಪಲಿದ್ದು, ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ತಿಳಿಸಿದೆ.

    ಭಾರತದ ಕೃಷಿ ಚಟುವಟಿಕೆಗಳಿಗೆ ಆಧಾರ ಸ್ತಂಭವಾದ ಮಾನ್ಸೂನ್ ಮಳೆಯೂ ಜೂನ್ 1ರಂದು ಕೇರಳ ರಾಜ್ಯದ ದಕ್ಷಿಣ ತುದಿಯನ್ನು ತಲುಪಲಿದೆ ಎಂದು ಸ್ಕೈಮೆಟ್ ಹೇಳಿದೆ.

    ಜೂನ್ ನಿಂದ ಸೆಪ್ಟೆಂಬರ್‌ವರೆಗೆ ಮಳೆಯಾಗಲಿದ್ದು, 2019 ರಲ್ಲಿ ಮುಂಗಾರಿನ ದೀರ್ಘಾವಧಿ ಸರಾಸರಿ(ಎಲ್‍ಪಿಎ) ಶೇ.93 ರಷ್ಟು ಇರಲಿದೆ ಎಂದು ಸ್ಕೈಮೆಟ್ ವ್ಯವಸ್ಥಾಪಕ ನಿರ್ದೇಶಕ ಜತಿನ್ ಸಿಂಗ್ ತಿಳಿಸಿದ್ದಾರೆ.

    ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಬೆಳೆಯುವ ದಕ್ಷಿಣ ಭಾರತದಲ್ಲಿ ಶೇ.95, ವಾಯುವ್ಯ ಭಾರತದಲ್ಲಿ ಶೇ.96, ಮಧ್ಯ ಭಾರತದಲ್ಲಿ ಶೇ.91, ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಶೇ.92 ರಷ್ಟು ಮಳೆಯಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಭಾರತೀಯ ಹವಾಮಾನ ಇಲಾಖೆ ಎಲ್‍ಪಿಎ ಲೆಕ್ಕಾಚಾರವನ್ನು ಹಾಕಿ ಸಾಧಾರಣ, ಕೊರತೆ, ಅಧಿಕ ಮಳೆ ಎಂದು ವಿಂಗಡಿಸಿದೆ. ದೀರ್ಘಾವಧಿ ಸರಾಸರಿ 90-96ರಷ್ಟಿದ್ದರೆ ಅದು ಸಹಜಕ್ಕಿಂತ ಕಡಿಮೆ ಮಳೆ ಎಂದು ಪರಿಗಣಿಸಲಾಗುತ್ತದೆ. ಎಲ್‍ಪಿಎ 90ಕ್ಕಿಂತಲೂ ಕಡಿಮೆಯಿದ್ದರೆ ಅದನ್ನು ಕೊರತೆಯ ಮುಂಗಾರು ಎಂದು ಕರೆಯಲಾಗುತ್ತದೆ. ಎಲ್‍ಪಿಎ 104ಕ್ಕಿಂತ ಹೆಚ್ಚಿದ್ದರೆ ಅದು ಸಹಜಕ್ಕಿಂತ ಅಧಿಕ ಮಳೆ ಎಂದು ವಿಶ್ಲೇಷಿಸಲಾಗುತ್ತದೆ.

    ಆರ್ಥಿಕತೆಯಲ್ಲಿ ಏಷ್ಯಾದ ಮೂರನೇ ಅತಿ ದೊಡ್ಡ ದೇಶವಾದ ಭಾರತ ಬೀಳುವ ವಾರ್ಷಿಕ ಮಳೆಯಲ್ಲಿ ಶೇ.70 ರಷ್ಟು ಮಳೆ ಮಾನ್ಸೂನ್ ಅವಧಿಯಲ್ಲಿ ಬೀಳುತ್ತದೆ.

  • ಬೆಂಗಳೂರಿಗೆ ಮೇಘ ಸ್ಫೋಟದ ಭೀತಿ – ಮೊನ್ನೆ ದಿಢೀರ್ ಮಳೆಯಾಗಿದ್ದು ಯಾಕೆ?

    ಬೆಂಗಳೂರಿಗೆ ಮೇಘ ಸ್ಫೋಟದ ಭೀತಿ – ಮೊನ್ನೆ ದಿಢೀರ್ ಮಳೆಯಾಗಿದ್ದು ಯಾಕೆ?

    ಬೆಂಗಳೂರು: ಮುನ್ಸೂಚನೆ ಇಲ್ಲದೇ ಈ ವರ್ಷ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

    ಕಳೆದ ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ದಿಢೀರ್ ಭಾರೀ ಮಳೆಯಾಗಿತ್ತು. ಈ ರೀತಿ ಮಳೆ ಯಾಕೆ ಆಗುತ್ತದೆ ಎಂದು ಪಬ್ಲಿಕ್ ಟಿವಿ ಭೂಗರ್ಭ ವಿಜ್ಞಾನಿ ಪ್ರಕಾಶ್ ಅವರನ್ನು ಸಂಪರ್ಕಿಸಿದಾಗ ಅವರು ಹಲವಾರು ವಿಚಾರಗಳನ್ನು ತಿಳಿಸಿದ್ದಾರೆ.

    ಸಾಧಾರಣವಾಗಿ ಮುಂಗಾರು ಪೂರ್ವ, ಮುಂಗಾರು ಮಳೆ ಆಗುವುದನ್ನು ನಾವು ಅಂದಾಜಿಸುತ್ತೇವೆ. ಆದರೆ ದಿಢೀರ್ ಆಗಿ ಮಳೆ ಆಗುವುದನ್ನು ಅಂದಾಜಿಸುವುದು ಬಹಳ ಕಷ್ಟ. ಮೊನ್ನೆ ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿಯೊಂದು ಸ್ಫೋಟಗೊಂಡ ಪರಿಣಾಮ ಮಳೆಯಾಗಿದೆ. ಸುಮತ್ರಾ ದ್ವೀಪದಲ್ಲಿರುವ ಸ್ಫೋಟಗೊಂಡ ಸಿನಾಬಂಗ್ ಜ್ವಾಲಾಮುಖಿಯ ದಟ್ಟ ಹೊಗೆ 15 ಸಾವಿರ ಅಡಿ ಎತ್ತರಕ್ಕೆ ಹೋಗಿತ್ತು. ಇದರಿಂದಾಗಿ ಬೆಂಗಳೂರು ನಗರದಲ್ಲಿ ದಿಢೀರ್ ಮಳೆಯಾಗಿದೆ ಎಂದು ವಿವರಿಸಿದರು.

    ಪ್ರಕೃತಿಯಲ್ಲಿ ಈ ರೀತಿ ವಿದ್ಯಮಾನಗಳು ನಡೆದಾಗ ಹವಾಮಾನ ಇಲಾಖೆಗೆ ಈ ಪ್ರದೇಶದಲ್ಲೇ ಮಳೆಯಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಸುಮತ್ರಾ ಭಾರತಕ್ಕೆ ಹತ್ತಿರದಲ್ಲಿರುವ ಕಾರಣ ಇಲ್ಲಿ ಮಳೆಯಾಗುತ್ತದೆ. ಬೆಂಗಳೂರು ಮಾತ್ರ ಅಲ್ಲ ಭಾರತದ ಯಾವುದೇ ಪ್ರದೇಶದಲ್ಲಿ ಮುನ್ಸೂಚನೆ ಇಲ್ಲದೇ ಭಾರೀ ಮಳೆಯಾಗಬಹುದು ಎಂದು ಅವರು ತಿಳಿಸಿದರು.

    ಭಾರತದಲ್ಲಿ ಜೂನ್ ತಿಂಗಳಿನ ಮೊದಲ ವಾರದಲ್ಲಿ ಸಾಧಾರಣವಾಗಿ ಮುಂಗಾರು ಮಳೆ ಆಗುತ್ತದೆ. ಆದರೆ ಈ ರೀತಿಯ ದಿಢೀರ್ ಮಳೆಯಿಂದಾಗಿ ಮುಂಗಾರು ಮಳೆಯ ಪಥವೇ ಬದಲಾಗಬಹುದು. ಈ ವರ್ಷ ಮತ್ತಷ್ಟು ದಿಢೀರ್ ಮಳೆಯಾಗಬಹುದು ಎಂದು ಪ್ರಕಾಶ್ ಅವರು ಮಾಹಿತಿಯನ್ನು ನೀಡಿದರು.

    ಇಂಡೋನೇಷ್ಯಾದಲ್ಲಿ ಸುಮಾರು 130 ಜ್ವಾಲಾಮುಖಿಗಳು ಕಾರ್ಯ ಪ್ರವೃತ್ತವಾಗಿದ್ದು. 400 ವರ್ಷಗಳಲ್ಲೇ ಮೊದಲ ಬಾರಿಗೆ 2010ರಲ್ಲಿ ಸಿನಾಬಂಗ್ ಪರ್ವತದಿಂದ ಜ್ವಾಲಾಮುಖಿ ಸ್ಫೋಟಿಸಿತ್ತು. ನಂತರ 2013ರಲ್ಲಿಯೂ ಜ್ವಾಲಾಮುಖಿ ಸ್ಫೋಟಿಸಿ, ಅಂದಿನಿಂದ ನಿರಂತರವಾಗಿ ಜ್ವಾಲಾಮುಖಿ ಸಕ್ರಿಯವಾಗಿದೆ. 2014ರಲ್ಲಿ ಉಂಟಾದ ಸ್ಫೋಟದಲ್ಲಿ 16 ಮಂದಿ ಸಾವನ್ನಪ್ಪಿದ್ದರೆ, 2016ರಲ್ಲಿ ಸಂಭವಿಸಿದ್ದ ಜ್ವಾಲಾಮುಖಿ ಸ್ಫೋಟದಲ್ಲಿ 7 ಮಂದಿ ಮೃತಪಟ್ಟಿದ್ದಾರೆ.