Tag: ಮಾನ್ಸೂನ

  • ಒಂದೇ ಗಂಟೆಗೆ ಒಂದುಕಾಲು ಇಂಚು ಮಳೆ – ಮಲೆನಾಡಿಗರಿಗೆ ಸಂತೋಷದ ಜೊತೆ ಆತಂಕ

    ಒಂದೇ ಗಂಟೆಗೆ ಒಂದುಕಾಲು ಇಂಚು ಮಳೆ – ಮಲೆನಾಡಿಗರಿಗೆ ಸಂತೋಷದ ಜೊತೆ ಆತಂಕ

    ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಕೆಲ ಭಾಗದಲ್ಲಿ ಮಳೆರಾಯ ಅಪ್ಪರಿಸಿ ಬೊಬ್ಬಿರಿದಿದ್ದಾನೆ. ಮಳೆ ಕಂಡು ಮಲೆನಾಡಿಗರಿಗೆ ಒಂದೆಡೆ ಖುಷಿ, ಮತ್ತೊಂದೆಡೆ ಆತಂಕದ ಸ್ಥಿತಿ ನಿರ್ಮಾಣವಾಗಿದೆ.

    ಕೊಪ್ಪ ತಾಲೂಕಿನ ಜಯಪುರದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದಿದೆ. ಮಳೆಯ ಅಬ್ಬರ ಎಷ್ಟು ಜೋರಾಗಿತ್ತು ಎಂದರೆ, ಸುಮಾರು ಒಂದು ಗಂಟೆಗೆ ಒಂದೂಕಾಲು ಇಂಚಿನಷ್ಟು ಮಳೆ ಸುರಿದಿದೆ. ಮಳೆಯ ಅಬ್ಬರ ಕಂಡು ಜಯಪುರ ಸುತ್ತಮುತ್ತಲ್ಲಿನ ಜನ ಆತಂಕಕ್ಕೀಡಾಗಿದ್ದರು. ಸಂಜೆ 4 ಗಂಟೆ ಸುಮಾರಿಗೆ ಆರಂಭವಾದ ಮಳೆ ಸಂಜೆ 5.30ರ ತನಕವೂ ಒಂದೇ ಸಮನೆ ಸುರಿದಿದೆ. ಭಾರೀ ಮಳೆಗಾಳಿಗೆ ರಸ್ತೆ ಬದಿಯ ಮರದ ಟೊಂಗೆಗಳು ಮುರಿದು ಬಿದ್ದಿವೆ. ಜಯಪುರ ಸುತ್ತಮುತ್ತಲಿನ ಕೆಲ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ.

    ಇನ್ನೂ ಮಲೆನಾಡು ಭಾಗಗಳಾದ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರದಲ್ಲೂ ಮೋಡಕವಿದ ವಾತಾವರಣವಿದ್ದು ಅಲ್ಲಲ್ಲೆ ಸಾಧಾರಣ ಮಳೆ ಸುರಿದಿದೆ. ಬಿಸಿಲಿನ ಝಳಕ್ಕೆ ಬೇಸತ್ತಿದ್ದ ಮಲೆನಾಡಿಗರಿಗೆ ವರುಣದೇವ ತಂಪೆರೆದಿದ್ದಾನೆ. ಕಳೆದೊಂದು ವಾರದಿಂದಲೂ ಮಲೆನಾಡಲ್ಲಿ ಮೋಡಕವಿಯುತ್ತಿದ್ದು ಅಷ್ಟಾಗಿ ಮಳೆಯಾಗಿರಲಿಲ್ಲ. ಇಂದು ಜಯಪುರದಲ್ಲಿ ಸುರಿದ ಮಳೆ ಕಂಡು ಮಲೆನಾಡಿಗರು ಮತ್ತೆ ಆತಂಕಕ್ಕೀಡಾಗಿದ್ದಾರೆ. ಇನ್ನೇನು ಮಲೆನಾಡಲ್ಲಿ ನಾಳೆ-ನಾಡಿದ್ದು ಎನ್ನುವಷ್ಟರಲ್ಲಿ ಮಳೆಗಾಲದ ಆರಂಭವಾಗಲಿದೆ.

    ಮಳೆಗಾಲದ ಆರಂಭದ ಮೊದಲ ಮಳೆಯೇ ಈ ಪ್ರಮಾಣದಲ್ಲಿ ಸುರಿದಿದೆ ಅಂದರೆ, ಈ ಬಾರಿಯ ಮಳೆಗಾಲ ಹೇಗಿರಬಹುದು ಎಂದು ಜನ ಈಗಲೇ ಚಿಂತಾಕ್ರಾಂತರಾಗಿದ್ದಾರೆ. ಯಾಕಂದರೆ ಕಾಫಿನಾಡಲ್ಲಿ ಕಳೆದ ಎರಡ್ಮೂರು ವರ್ಷಗಳ ಮಳೆ ಮಲೆನಾಡಿಗರಿಗೆ ಮಳೆ ಎಂದರೆ ಭಯಪಡುವಂತಹಾ ಸ್ಥಿತಿ ನಿರ್ಮಿಸಿತ್ತು.

  • ಬೆಂಗಳೂರಿನಲ್ಲಿ ಮತ್ತೆ ಆರಂಭವಾದ ಮಳೆ- ರಾಜ್ಯದ ವಿವಿಧಡೆ ವರುಣನ ಸಿಂಚನ

    ಬೆಂಗಳೂರಿನಲ್ಲಿ ಮತ್ತೆ ಆರಂಭವಾದ ಮಳೆ- ರಾಜ್ಯದ ವಿವಿಧಡೆ ವರುಣನ ಸಿಂಚನ

    ಬೆಂಗಳೂರು: ಇಂದು ಮತ್ತೆ ವರುಣನ ಅಬ್ಬರ ಜೋರಾಗಿದ್ದು, ಸಂಜೆಯಿಂದಲೇ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಜೋರಾಗಿದೆ. ಇತ್ತ ಕೊಡಗು, ಶಿವಮೊಗ್ಗ, ಕೋಲಾರ, ಬೀದರ್ ಜಿಲ್ಲೆಗಳಲ್ಲಿ ಮಳೆ ಆರಂಭಗೊಂಡಿದೆ. ಮಂಗಳವಾರ ರಾತ್ರಿಯಿಂದಲೇ ಮಳೆ ಆರ್ಭಟ ಆರಂಭಗೊಂಡಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ. ಮಂಗಳವಾರ ಸುರಿದ ಮಳೆಗೆ ರಾಜ್ಯದ ಬಹುತೇಕ ಕೆರೆ-ಕುಂಟೆಗಳು ಭರ್ತಿಯಾಗಿವೆ.

    ಇಂದು ಮಧ್ಯಾಹ್ನದಿಂದಲೇ ರಾಜಧಾನಿಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಸಂಜೆಯಿಂದ ಮಲ್ಲೇಶ್ವರಂ, ವಿಧಾನಸೌಧ, ಕಾರ್ಪೋರೇಷನ್, ವಿಲ್ಸನ್ ಗಾರ್ಡನ್, ಬನ್ನೇರುಘಟ್ಟ ರಸ್ತೆಯಲ್ಲಿ ಭಾರೀ ಮಳೆ ಆಗುತ್ತಿದೆ. ಭಾರೀ ಮಳೆ ಹಿನ್ನೆಲೆ ನಗರದ ಬಹುತೇಕ ಭಾಗಗಳಲ್ಲಿ ಟ್ರಾಫಿಕ್ ಸಮಸ್ಯೆಯುಂಟಾಗಿದ್ದು, ವಾಹನಗಳು ನಿಧಾನಗತಿ ಸಾಗುತ್ತಿವೆ. ಮಳೆಯಲ್ಲಿ ಸಿಲುಕಿ ವಾಹನ ಸವಾರರು ಸಿಲುಕಿ ಪರದಾಡುತ್ತಿದ್ದಾರೆ.

    ಕೋಲಾರ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಮಂಗಳವಾರ ಮಧ್ಯರಾತ್ರಿ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದ್ದು, ಸಂಜೆ 5 ಗಂಟೆಯಿಂದ ಜಿಲ್ಲೆಯ ಹಲವೆಡೆ ಜೋರು ಮಳೆಯಾಗುತ್ತಿದೆ. ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಯ ಬಹುತೇಕ ಕೆರೆ ಕುಂಟೆಗಳು ತುಂಬಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಸದ್ಯಕ್ಕೆ ಮಳೆಯಿಂದ ರಸ್ತೆಗಳ ತುಂಬ ನೀರು ಆವರಿಸಿ, ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಕೋಲಾರ-ಚಿಕ್ಕಬಳ್ಳಾಪುರ ಮುಖ್ಯ ಸಂಗೊಂಡಹಳ್ಳಿ ಬಳಿ ರಸ್ತೆಯಲ್ಲಿರುವ ರೈಲ್ವೇ ಅಂಡರ್ ಪಾಸ್ ನಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರ ಪರದಾಡಬೇಕಾಯಿತು. ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ ಮಾಡಿರುವುದೆ ಇದಕ್ಕೆ ಕಾರಣ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕುತ್ತಿದ್ದಾರೆ.

    ಗಡಿ ಜಿಲ್ಲೆ ಬೀದರ್ ನಲ್ಲಿ ಸತತ ಒಂದು ಗಂಟೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಬೀದರ್, ಔರಾದ್, ಬಸವಕಲ್ಯಾಣ, ಭಾಲ್ಕಿ ಸೇರಿದಂತೆ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಎರಡು ದಿನಗಳಿಂದ ಸತತವಾಗಿ ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸಿದ್ದು ಜಿಲ್ಲೆಯ ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ. ಹವಾಮಾನ ಇಲಾಖೆಯ ಪ್ರಕಾರ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಬಾರಿ ಮಳೆಯಾಗಲಿದೆ.

    ಇನ್ನು ಶಿವಮೊಗ್ಗದಲ್ಲಿ ಅರ್ಧಗಂಟೆಗೂ ಹೆಚ್ಚು ಮಳೆಯಾಗಿದೆ. ಇತ್ತ ಕೊಡಗು ಜಿಲ್ಲೆಯ ಮಡಿಕೇರಿ, ಭಾಗಮಂಡಲ ಸುತ್ತಮುತ್ತ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ನಾಲ್ಕು ದಿನಗಳಿಂದ ಬಿಡುವು ನೀಡಿದ್ದ ಮಳೆ ಇಂದು ಸಂಜೆಯಿಂದ ಆರಂಭಗೊಂಡಿದೆ. ಮಂಗಳವಾರ ರಾತ್ರಿ ಸುರಿದ ಮಳೆಗೆ ಚಿತ್ರದುರ್ಗದ ಚಂದ್ರವಳ್ಳಿ ಕೆರೆ ಬಳಿ ಜಲಪಾತ ನಿರ್ಮಾಣವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

  • ಉತ್ತರ ಕರ್ನಾಟಕದಲ್ಲಿ ತಗ್ಗಿದ ಪ್ರವಾಹ – ಡ್ಯಾಂಗಳು ಭರ್ತಿ, ಕಟ್ಟೆಚ್ಚರ

    ಉತ್ತರ ಕರ್ನಾಟಕದಲ್ಲಿ ತಗ್ಗಿದ ಪ್ರವಾಹ – ಡ್ಯಾಂಗಳು ಭರ್ತಿ, ಕಟ್ಟೆಚ್ಚರ

    ಬೆಂಗಳೂರು: ಮಳೆಯಬ್ಬರ ತಗ್ಗಿದ್ದು, ಉತ್ತರ ಕರ್ನಾಟಕದಲ್ಲೂ ಪ್ರವಾಹ ಇಳಿಮುಖವಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಕೇವಲ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಆಗಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಬರಬಹುದು. ಮಹಾರಾಷ್ಟ್ರದ ಪುಣೆ, ರತ್ನಗಿರಿ, ಸತಾರದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಎಚ್ಚರಿಸಲಾಗಿದೆ.

    ಕಳೆದ ಆರೇಳು ದಿನಗಳಿಂದ ಆಗುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಡ್ಯಾಂಗಳು ಬಹುತೇಕ ಭರ್ತಿ ಆಗಿವೆ. ಈ ಹಿನ್ನೆಲೆಯಲ್ಲಿ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಬಹುದಾಗಿದ್ದು ಕೃಷ್ಣ, ಭೀಮಾ, ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಜಲ ಆಯೋಗ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣಕ್ಕೆ ಸಲಹೆ ನೀಡಿದೆ.

    ತುಂಗಭದ್ರಾ ನದಿಗೆ 1 ಲಕ್ಷದ 10 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದ್ದು, ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಜಪದ ಕಟ್ಟೆ ಮುಳುಗಡೆ ಆಗಿದೆ. ಜಮೀನುಗಳಿಗೆ ನೀರು ನುಗ್ಗುವ ಭೀತಿ ಹಿನ್ನೆಲೆಯಲ್ಲಿ ರೈತರು ಪಂಪ್‍ಸೆಟ್‍ಗಳನ್ನ ತೆರವುಗೊಳಿಸಿದ್ದಾರೆ. ಕಲಬುರಗಿ ನಗರದ ಹೊರವಲಯದ ಭೋಸಗಾ ಕೆರೆ ತುಂಬಿದ್ದು ಜಲಪಾತ ಸೃಷ್ಟಿ ಆಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳದ ಕುಂಬಾರಗಲ್ಲಿ ಜಲಾವೃತವಾಗಿದ್ದು ಸ್ಥಳೀಯರನ್ನು ಆಸರೆ ಕೇಂದ್ರಗಳಿಗೆ ಶಿಫ್ಟ್ ಮಾಡಲಾಗಿದೆ. ಆದ್ರೆ ಆಸರೆ ಕೇಂದ್ರದಲ್ಲಿ ಸೂಕ್ತ ಸೌಲಭ್ಯ ಇಲ್ಲ ಎಂದು ಸಂತ್ರಸ್ತರು ಆಕ್ರೋಶ ಹೊರಹಾಕಿದ್ದಾರೆ.

    ಹುನಗುಂದ ತಾಲೂಕಿನ ಗಂಜಿಹಾಳದಲ್ಲಿ ಪ್ರವಾಹಕ್ಕೆ ಮನೆಗಳು ಜಲಾವೃತವಾಗಿವೆ. ಮನೆ ಸಾಮಾನು, ಕೃಷಿ ಉಪಕರಣ ಎತ್ತಿಕೊಂಡು ಜನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗಿದ್ದಾರೆ. ತುಂಗಭದ್ರಾ ಜಲಾಶಯದಿಂದ ನೀರು ಬಿಡಲಾಗಿದ್ದು, ಹಂಪಿಯಲ್ಲಿ ಪುರಂದರದಾಸರ ಮಂಟಪ, ಸಾಲುಮಂಟಪ, ಧಾರ್ಮಿಕ ವಿಧಿಗಳನ್ನು ಮಾಡೋ ಮಂಟಪಗಳು ಜಲಾವೃತಗೊಂಡಿವೆ. ಹಂಪಿಯಿಂದ ವಿರೂಪಾಪುರಗಡ್ಡೆಗೆ ತೆರಳುವ ಬೋಟ್‍ಗಳನ್ನ ಸ್ಥಗಿತಗೊಳಿಸಲಾಗಿದೆ. ಕಂಪ್ಲಿ ಮತ್ತು ಗಂಗಾವತಿ ನಡುವಿನ ಸೇತುವೆಯೂ ಜಲಾವೃತಗೊಂಡಿದೆ.

    ಬೆಳಗಾವಿ ಜಿಲ್ಲೆಯ ಗೋಕಾಕ್‍ನ ಉಪ್ಪಾರಗಲ್ಲಿ, ಹಳೆದನದಪೇಟೆ, ಕುಂಬಾರಗಲ್ಲಿ, ಮಟನ್ ಮಾರ್ಕೆಟ್ ಮತ್ತು ಮಹಾಲಿಂಗೇಶ್ವರ ನಗರ ಜಲಾವೃತಗೊಂಡಿರುವ ಕಾರಣ ಅಲ್ಲಿನ ಕುಟುಂಬಗಳಿಗೆ ಆಸರೆ ಕೇಂದ್ರ ಸ್ಥಾಪಿಸಲಾಗಿದೆ. ಘಟಪ್ರಭೆಯ ಅಬ್ಬರಕ್ಕೆ ಗೋಕಾಕ್‍ನ ಮೆಳವಂಕಿಗೆ ನೆರೆ ಬಂದಿದೆ. ಮೆಳವಂಕಿ ಸರ್ಕಾರಿ ಶಾಲೆಯಲ್ಲಿ 285 ಮಂದಿಗೆ ಆಸರೆ ನೀಡಲಾಗಿದ್ದು, ಇಲ್ಲೇ ಗರ್ಭಿಣಿಯೊಬ್ಬರು ತಮ್ಮ ಮಗುವಿನೊಂದಿಗೆ ಇದ್ದಾರೆ. ವಿಚಿತ್ರ ಅಂದ್ರೆ ಕೊರೋನ ಭಯಕ್ಕೆ ಸಂಬಂಧಿಕರು ಇವರನ್ನ ಮನೆಗೆ ಸೇರಿಸಿಕೊಳ್ಳಲು ತಯಾರಿಲ್ಲ.

  • ಮಳೆಯ ತವರು ಕೊಟ್ಟಿಗೆಹಾರದಲ್ಲಿ ಕಾಮನಬಿಲ್ಲು- ಸ್ಥಳೀಯರಲ್ಲಿ ಆಶ್ಚರ್ಯ

    ಮಳೆಯ ತವರು ಕೊಟ್ಟಿಗೆಹಾರದಲ್ಲಿ ಕಾಮನಬಿಲ್ಲು- ಸ್ಥಳೀಯರಲ್ಲಿ ಆಶ್ಚರ್ಯ

    ಚಿಕ್ಕಮಗಳೂರು: ಜಿಲ್ಲೆಯ ಮಳೆಯ ತವರೂರಾದ ಕೊಟ್ಟಿಗೆಹಾರ ಗ್ರಾಮದಲ್ಲಿ ಕಾಮನಬಿಲ್ಲು ಕಂಡು ಜನರು ಆಶ್ಚರ್ಯಚಕಿತರಾಗಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿ ಘಾಟ್ ಸೇರಿದಂತೆ ಸುತ್ತಮುತ್ತ ಹಳ್ಳಿಗಳ ಜನ ಜೂನ್ 10-15ರಿಂದ ಸೆಪ್ಟೆಂಬರ್-ಅಕ್ಟೋಬರ್ ವರೆಗೂ ಸೂರ್ಯನನ್ನ ನೋಡೋದೇ ತೀರಾ ವಿರಳ. ಕಾರಣ ಇಲ್ಲಿ ಜೂನ್ ಮೊದಲು ಅಥವಾ ಎರಡನೇ ವಾರದಲ್ಲಿ ಮಳೆ ಆರಂಭವಾದರೆ ಸೆಪ್ಟೆಂಬರ್-ಅಕ್ಟೋಬರ್ ವರೆಗೂ ಒಂದೇ ಸಮನೆ ಸುರಿಯುತ್ತಿರುತ್ತದೆ. ಜನ ಮನೆಯಿಂದ ಹೊರಬರೋದಕ್ಕೂ ಹಿಂದೇಟು ಹಾಕುತ್ತಾರೆ. ಸೂರ್ಯನನ್ನ ನೋಡೋದು ತೀರಾ ವಿರಳ.

    ಜುಲೈ ಎರಡನೇ ವಾರ ಕೊಟ್ಟಿಗೆಹಾರ ಸಮೀಪದ ಬಿನ್ನಡಿ ಗ್ರಾಮದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹಬ್ಬಿರುವಂತೆ ಭಾಸವಾಗ್ತಿರೋ ಮನಮೋಹಕ ಕಾಮನಬಿಲ್ಲು ಸ್ಥಲೀಯರಲ್ಲಿ ಆಶ್ಚರ್ಯದ ಜೊತೆ ಕುತೂಹಲ ಮೂಡಿಸಿದೆ. ಸಂಜೆ 6.30ರ ವೇಳೆಗೆ ಗೋಚರವಾದ ಈ ಕಾಮನಬಿಲ್ಲಿಗೆ ಸ್ಥಳೀಯರು ಫಿದಾ ಆಗೋದ್ರ ಜೊತೆ ಕಾಮನಬಿಲ್ಲನ್ನ ಕಂಡು ಮೂಕವಿಸ್ಮಿತರಾಗಿದ್ದಾರೆ. ಅಷ್ಟೆ ಅಲ್ಲದೆ ಉತ್ತರದಿಂದ ದಕ್ಷಿಣಕ್ಕೆ ಹಬ್ಬಿರೋ ಕಾಮನಬಿಲ್ಲು ಹೇಮಾವತಿ ನದಿಯ ಒಡಲಿನ ಮೇಲೆ ಬೆಳಕು ಚೆಲ್ಲಿದಂತೆ ಕಾಣುತ್ತಿದ್ದನ್ನು ಕಂಡು ಸ್ಥಳೀಯರು ಮತ್ತಷ್ಟು ಪುಳಕಿತರಾಗಿದ್ದಾರೆ.

    ಕಳೆದೊಂದು ವಾರದ ಹಿಂದೆ ಇದೇ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿ ಘಾಟ್ ಸುತ್ತಮುತ್ತ ಸುರಿದ ಭಾರೀ ಮಳೆಗೆ ಜನ ಆತಂಕಕ್ಕೀಡಾಗಿದ್ದರು. ಮಳೆ ಆರಂಭವಾಯಿತು. ಕಳೆದ ವರ್ಷ ಬದುಕನ್ನೇ ನುಂಗಿ ಹಾಕಿದ್ದ ವರುಣದೇವ ಈ ವರ್ಷ ಇನ್ನೇನು ಅನಾಹುತ ಸೃಷ್ಠಿಸಿ ಅವಾಂತರ ಮಾಡುತ್ತಾನೋ ಎಂದು ಸ್ಥಳೀಯರು ಕಂಗಾಲಾಗಿದ್ದರು. ಆದರೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸಂಪೂರ್ಣ ಕ್ಷೀಣಿಸಿದೆ.

    ಮಳೆ ಇಲ್ಲದಿದ್ದರೂ ಸದಾ ತಣ್ಣನೆಯ ಗಾಳಿ ಜೊತೆ ಯಾವಾಗಲು ಮೋಡ ಕವಿದ ವಾತಾವರಣವಿರೋ ಕೊಟ್ಟಿಗೆಹಾರದಲ್ಲಿ ಜುಲೈ ಎರಡನೇ ವಾರದಲ್ಲಿ ಬಿಸಿಲಿನ ಮಧ್ಯೆ ಕಾಮನಬಿಲ್ಲನ್ನು ಕಂಡು ಜನ ಪುಳಕಿತರಾಗಿದ್ದಾರೆ. ಜೊತೆಗೆ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಹೋದಂತೆ ಭಾಸವಾಗ್ತಿರೋ ಕಾಮನಬಿಲ್ಲನ್ನ ಕಂಡ ಸ್ಥಳೀಯರು ಸಂತಸ ಪಟ್ಟಿದ್ದಾರೆ.

  • ಕೊಡಗಿನಲ್ಲಿ ಮತ್ತೆ ಭೂ ಕುಸಿತದ ಆತಂಕ

    ಕೊಡಗಿನಲ್ಲಿ ಮತ್ತೆ ಭೂ ಕುಸಿತದ ಆತಂಕ

    ಮಡಿಕೇರಿ: ಎರಡು ವರ್ಷಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ್ದ ಭೀಕರ ಭೂ ಕುಸಿತದ ಆತಂಕ ಜನರ ಮನಸ್ಸಿನಿಂದ ಇನ್ನೂ ದೂರವಾಗಿಲ್ಲ. ಈ ನಡುವೆಯೇ ಬಂದ ಗಂಡಾಂತರ ಮುಗಿದು ಹೋಯಿತೆಂದು ಜನರು ಕೃಷಿ ಮಾಡುತ್ತಾ ತಮ್ಮ ಬದುಕು ಮತ್ತೆ ಕಟ್ಟಿಕೊಳ್ಳಲು ಮುಂದಾಗಿದ್ದರು. ಆದರೆ ಎರಡು ವರ್ಷಗಳ ಹಿಂದೆ ಭೂಕುಸಿತ ಸಂಭವಿಸಿದ್ದ ಸ್ಥಳಗಳಲ್ಲಿ ಮತ್ತೆ ಆತಂಕ ಶುರುವಾಗಿದೆ.

    ಹೌದು ಕರ್ನಾಟಕದ ಕಾಶ್ಮೀರ, ಮಂಜಿನ ನಗರಿ ಎಂದೆಲ್ಲಾ ಕರೆಸಿಕೊಳ್ಳುವ ಮಡಿಕೇರಿ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ 2018ರಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತ ಇಡೀ ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿತ್ತು. ಎಮ್ಮೆತಾಳು, ಮೇಘತಾಳು, ಜೋಡುಪಾಲ, ಮದೆನಾಡು ಕಾಟಿಕೇರಿ ಸೇರಿದಂತೆ ಒಟ್ಟು 37 ಗ್ರಾಮಗಳು ಭೂಕುಸಿತಕ್ಕೆ ನಲುಗಿ ಹೋಗಿದ್ದವು. ಅದರಲ್ಲಿ ಎರಡನೇ ಮೊಣ್ಣಂಗೇರಿಯೂ ತೀವ್ರ ಸಮಸ್ಯೆ ಎದುರಿಸಿದ ಗ್ರಾಮಗಳಲ್ಲಿ ಒಂದು. ಸುತ್ತಲೂ ಬೆಟ್ಟಗುಡ್ಡಗಳ ಹೊದ್ದು, ಹಸಿರು ಕಾನನಗಳಿಂದ ಕಂಗೊಳಿಸುವ ಮೊಣ್ಣಂಗೇರಿ ಭೂಕುಸಿತದಿಂದ ಸ್ಮಶಾನ ಮೌನದಂತೆ ಆಗಿತ್ತು.

    ಮುಗಿಲೆತ್ತರದ ಬೆಟ್ಟಗಳೇ ಉರುಳಿದ್ದರಿಂದ 20 ಕ್ಕೂ ಹೆಚ್ಚು ಮನೆಗಳು ಭೂಮಿಯಾಳಕ್ಕೆ ಸೇರಿ ಹೋದವು. ಆದರೂ ಉಳಿದ 50 ಕ್ಕೂ ಹೆಚ್ಚು ಕುಟುಂಬಗಳು ಮಾತ್ರ ಯಾವುದಕ್ಕೂ ಎದೆಗುಂದದೆ ಅಲ್ಲಿಯೇ ಕೃಷಿ ಮಾಡುತ್ತಾ ಮತ್ತೆ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಹೇಗೋ ಬಂದ ಗಂಡಾಂತರ ಮುಗಿದು ಹೋಯಿತು ಅನ್ನೋ ಹೊತ್ತಿಗೆ ಮೊಣ್ಣಂಗೇರಿ ಸುತ್ತಮುತ್ತ ಪ್ರದೇಶದಲ್ಲಿ ಮತ್ತೆ ಆತಂಕ ಎದುರಾಗಿದೆ. 2018ರಲ್ಲಿ ಭೂಮಿ ಕುಸಿದಾಗ ಮೊಣ್ಣಂಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯೇ ಕಣ್ಮರೆಯಾಗಿತ್ತು.

    https://www.facebook.com/339166656101093/posts/4342660619084990/

    ಒಂದು ವರ್ಷದ ಬಳಿಕ ಮತ್ತೆ ರಸ್ತೆ ನಿರ್ಮಿಸಲಾಗಿತ್ತು. ಆದರೆ ರಸ್ತೆ ಸೇರಿದಂತೆ ಸುತ್ತಮುತ್ತಲ ಸುಮಾರು ಎಕರೆಯಷ್ಟು ಪ್ರದೇಶ ಬರೋಬ್ಬರಿ 10 ಅಡಿಯಷ್ಟು ಆಳಕ್ಕೆ ಹೋಗಿದೆ. ಒಂದು ವೇಳೆ ಈ ಭೂಮಿ ಕುಸಿದಲ್ಲಿ ಇಡೀ ಗ್ರಾಮ ಸಂಪೂರ್ಣ ಸಂಪರ್ಕ ಕಡಿತಕೊಳ್ಳುತ್ತದೆ ಅನ್ನೋದು ಜನರ ತೀವ್ರ ಆತಂಕಕ್ಕೆ ಕಾರಣವಾಗಿದೆ. ಮೊಣ್ಣಂಗೇರಿ ಗ್ರಾಮಕ್ಕೆ ಮದೆನಾಡಿನ ಮುಖ್ಯ ರಸ್ತೆಯಿಂದ ಐದು ಕಿಲೋ ಮೀಟರ್ ಸಾಗಬೇಕು. ಮಾರ್ಗ ಮಧ್ಯೆ ನಾಲ್ಕೈದು ತಿರುವುಗಳಲ್ಲಿ ಭಾರೀ ಭೂಕುಸಿತವಾಗಿದ್ದು, ಇಲ್ಲೆಲ್ಲವೂ ರಸ್ತೆ ಪುನರ್ ನಿರ್ಮಾಣ ಮಾಡಲಾಗಿತ್ತು.

    https://www.facebook.com/339166656101093/posts/4344065368944515/

    ಇದೀಗ ಮಳೆ ಆರಂಭವಾಗಿದ್ದು, ಹಲವೆಡೆ ಭೂಮಿ ಬಿರುಕುಬಿಟ್ಟಿದೆ. ಅಲ್ಲದೆ, ಮೊಣ್ಣಂಗೇರಿ ಶಾಲೆ ಬಳಿ ರಸ್ತೆ ಸೇರಿ ಎಕರೆಯಷ್ಟು ಪ್ರದೇಶ 10 ಅಡಿ ಆಳಕ್ಕೆ ಭೂಮಿ ಕುಸಿದಿದೆ. ಇದು ಜನರ ತೀವ್ರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ 2018 ರಲ್ಲಿ ಭೂಮಿ ಕುಸಿದಿದ್ದ ಪ್ರದೇಶದಲ್ಲಿ ಚಿಕ್ಕ ಚಿಕ್ಕ ನೀರಿನ ಝರಿಗಳೇ ಹರಿಯುತ್ತಿದ್ದು, ಮಳೆಗಾಲದಲ್ಲಿ ಭಾರೀ ಪ್ರಮಾಣದಲ್ಲಿ ಹರಿಯುತ್ತವೆ. ಹೀಗಾಗಿ ಈ ಪ್ರದೇಶದಲ್ಲೆಲ್ಲಾ ಮತ್ತೆ ಭೂಮಿ ಕುಸಿಯುವ ಆತಂಕ ಎದುರಾಗಿದೆ. ಮಳೆಗಾಲ ಮುಗಿಯುವವರೆಗೆ ಬೇರೆಡೆಗೆ ತೆರಳೋಣ ಎಂದುಕೊಂಡರೆ, ಸದ್ಯ ಕೊರೊನಾ ಆತಂಕವೂ ಇದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಕ್ಕಳು ಮರಿಗಳನ್ನು ಎಲ್ಲಿಗೆ ಕರೆದೊಯ್ಯುವುದು ಎನ್ನೋದು ಜನರ ಆತಂಕ.