Tag: ಮಾಧ್ಯಮ ಹಕ್ಕು

  • ವಿಶ್ವದ ಎರಡನೇ ದುಬಾರಿ ಲೀಗ್‌ – ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ?

    ವಿಶ್ವದ ಎರಡನೇ ದುಬಾರಿ ಲೀಗ್‌ – ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ?

    ನವದೆಹಲಿ: ಬಿಸಿಸಿಐ ಲೆಕ್ಕಾಚಾರ ಯಶಸ್ವಿಯಾದರೆ ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ರೂ. ದಾಟುವ ನಿರೀಕ್ಷೆಯಿದೆ.

    ಹೌದು. 2023-2027ರ ಅವಧಿಗೆ ಐಪಿಎಲ್‌ ಮಾಧ್ಯಮ ಪ್ರಸಾರ ಹಕ್ಕು ಹರಾಜಿಗೆ ಕೆಲವೇ ದಿನಗಳು ಬಾಕಿಯಿದೆ. ಸದ್ಯದ ಲೆಕ್ಕಾಚಾರ ನೋಡಿದರೆ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ರೂ. ದಾಟುವ ನಿರೀಕ್ಷೆಯಿದೆ ಎಂದು ಮಾರುಕಟ್ಟೆ ಪಂಡಿತರು ಅಂದಾಜಿಸಿದ್ದಾರೆ. ಒಂದು ವೇಳೆ ಭಾರೀ ಮೊತ್ತಕ್ಕೆ ಹಕ್ಕು ಮಾರಾಟವಾದರೆ ಐಪಿಎಲ್‌ ವಿಶ್ವದ ಎರಡನೇ ದುಬಾರಿ ಟೂರ್ನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

    2018-2022ರ ಅವಧಿಗೆ 16,348 ಕೋಟಿ ರೂ.ಗೆ ಪ್ರಸಾರ ಹಕ್ಕು ಖರೀದಿಸಿದ್ದ ಸ್ಟಾರ್‌ ಇಂಡಿಯಾ ಪ್ರತಿ ಪಂದ್ಯಕ್ಕೆ 54.5 ಕೋಟಿ ರೂ. ಪಾವತಿಸಿತ್ತು. ಈಗ ಮುಂದಿನ 5 ವರ್ಷಗಳಿಗೆ ಬಿಸಿಸಿಐ 32,890 ಕೋಟಿ ರೂ. ಮೂಲಬೆಲೆ ನಿಗದಿ ಮಾಡಿದೆ. ಈ ಪ್ರಕಾರ ಪ್ರತಿ ಪಂದ್ಯದ ಟಿವಿ ಹಕ್ಕು 49 ಕೋಟಿ ರೂ. ಮತ್ತು ಪ್ರತಿ ಪಂದ್ಯದ ಡಿಜಿಟಲ್‌ ಹಕ್ಕು 33 ಕೋಟಿ ರೂ. ಇದನ್ನೂ ಓದಿ: ಐಪಿಎಲ್‍ನಲ್ಲಿ ಕಳ್ಳಾಟ ನಡೆದಿದೆ, ಪಿಐಎಲ್‍ನ ಅಗತ್ಯ ಬರಬಹುದು: ಸುಬ್ರಮಣಿಯನ್ ಸ್ವಾಮಿ

    ಸಾಧಾರಣವಾಗಿ ಟೀವಿ ಹಕ್ಕು ಮೂಲ ಬೆಲೆಗಿಂತ ಕನಿಷ್ಠ ಶೇ.20ರಿಂದ 25ರಷ್ಟು ಹೆಚ್ಚಿನ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆ ಇದ್ದು, ಡಿಜಿಟಲ್‌ ಹಕ್ಕು ಇನ್ನೂ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಬಹುದು ಎಂದು ಅಂದಾಜಿಸಲಾಗಿದೆ. ಎರಡನ್ನೂ ಸೇರಿಸಿದರೆ ಕನಿಷ್ಠ ಒಂದು ಪಂದ್ಯಕ್ಕೆ 115 ರಿಂದ 120 ಕೋಟಿ ರೂ. ಆಗುವ ಸಾಧ್ಯತೆಯಿದೆ.

    ಪ್ರಸ್ತುತ ವಿಶ್ವದ ಅತಿ ದುಬಾರಿ ಕ್ರೀಡಾ ಲೀಗ್‌ ಎನ್ನುವ ಹಿರಿಮೆ ಅಮೆರಿಕದ ನ್ಯಾಷನಲ್‌ ಫುಟ್ಬಾಲ್‌ ಲೀಗ್‌ (ಎನ್‌ಎಫ್‌ಎಲ್‌)ಗೆ ಇದೆ. ಪ್ರತಿ ಎನ್‌ಎಫ್‌ಎಲ್‌ ಪಂದ್ಯದ ಮೌಲ್ಯ 134 ಕೋಟಿ ರೂ. ಇದೆ. ಎರಡನೇ ಸ್ಥಾನದಲ್ಲಿ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಫುಟ್ಬಾಲ್‌(ಇಪಿಎಲ್‌) ಇದ್ದು, ಪ್ರತಿ ಪಂದ್ಯದ ಮೌಲ್ಯ 81 ಕೋಟಿ ರೂ. ಈಗ ಬಿಸಿಸಿಐ ನಿಗದಿಪಡಿಸಿರುವ ಮೂಲಬೆಲೆಯೇ ಇಪಿಎಲ್‌ ಮೌಲ್ಯವನ್ನು ಹಿಂದಿಕ್ಕಲಿದೆ. ಇದನ್ನೂ ಓದಿ: ಚಿನ್ನದ ಮೊಟ್ಟೆ ಇಟ್ಟ ಐಪಿಎಲ್‌ – 2008ರಲ್ಲಿ ಬಿಡ್‌ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

    ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್‌ ಪ್ರತಿಕ್ರಿಯಿಸಿ, ಐಪಿಎಲ್ ಮಾಧ್ಯಮ ಹಕ್ಕುಗಳು ಕ್ರೀಡಾ ಉದ್ಯಮಕ್ಕೆ ಹೊಸ ಬೆಂಚ್-ಮಾರ್ಕ್‌ ಆಗಲಿದೆ. ಯಾವುದೇ ಸಂಖ್ಯೆಯನ್ನು ಊಹಿಸಲು ಬಯಸುವುದಿಲ್ಲ. ಆದರೆ ಇದು ದಾಖಲೆ ಮುರಿಯುವ ಸಂಖ್ಯೆಯಾಗಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

    ಈ ಬಾರಿ ದುಬೈಯಲ್ಲಿ ನಡೆದ ಬಿಡ್ಡಿಂಗ್‌ನಲ್ಲಿ ಸಿವಿಸಿ ಕ್ಯಾಪಿಟಲ್‌ 5,600 ಕೋಟಿ ರೂ. ನೀಡಿ ಅಹಮದಾಬಾದ್‌ ತಂಡವನ್ನು ಖರೀದಿಸಿದರೆ ಆರ್‌ಪಿಎಸ್‌ಜಿ ಗ್ರೂಪ್‌ 7,090 ಕೋಟಿ ರೂ. ಬಿಡ್‌ ಮಾಡಿ ಲಕ್ನೋ ತಂಡವನ್ನು ಖರೀದಿಸಿದೆ. ಬಿಸಿಸಿಐ ಎರಡು ಫ್ರಾಂಚೈಸಿಗಳ ಮಾರಾಟದಿಂದ ಒಟ್ಟು 10 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಿತ್ತು. ಆದರೆ ಬಿಸಿಸಿಐ ನಿರೀಕ್ಷೆಗೂ ಮೀರಿ 2,690 ಕೋಟಿ ರೂ. ಹೆಚ್ಚುವರಿ ಆದಾಯವನ್ನು ಗಳಿಸಿದೆ.

  • ಐಪಿಎಲ್ ಮಾಧ್ಯಮ ಹಕ್ಕು ಟೆಂಡರ್ ಆಹ್ವಾನ – ಬಂಪರ್ ನಿರೀಕ್ಷೆಯಲ್ಲಿ ಬಿಸಿಸಿಐ

    ಐಪಿಎಲ್ ಮಾಧ್ಯಮ ಹಕ್ಕು ಟೆಂಡರ್ ಆಹ್ವಾನ – ಬಂಪರ್ ನಿರೀಕ್ಷೆಯಲ್ಲಿ ಬಿಸಿಸಿಐ

    ಮುಂಬೈ: 2023 ರಿಂದ 2027ರ ಅವಧಿಯ ಐಪಿಎಲ್ ಮಾಧ್ಯಮ ಹಕ್ಕು ಹರಾಜಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೆಂಡರ್ ಆಹ್ವಾನಿಸಿದೆ.

    ಈ ಬಗ್ಗೆ ಪ್ರಕಟಣೆ ಹೊರಡಿಸಿದ ಬಿಸಿಸಿಐ, ಟೆಂಡರ್ ಖರೀದಿಸಲು ಇಚ್ಚಿಸುವ ಕಂಪನಿಗೆ ಮೇ 10ರ ವರೆಗೆ ಅವಕಾಶ ನೀಡಿದ್ದು, ಟೆಂಡರ್‌ಗೆ 25 ಲಕ್ಷ ರೂಪಾಯಿ ಮೂಲ ಬೆಲೆ ನಿಗದಿ ಮಾಡಿದೆ. ಹರಾಜು ಪ್ರಕ್ರಿಯೆಗೆ ಭಾಗವಹಿಸುವ ಕಂಪನಿ ಸೂಕ್ತ ದಾಖಲೆಯೊಂದಿಗೆ ಭಾಗವಹಿಸಲು ಸೂಚಿಸಿದೆ. ಟೆಂಡರ್‌ಗೆ 25 ಲಕ್ಷ ರೂ. ನಿಗದಿ ಪಡಿಸಿರುವ ಬಿಸಿಸಿಐ, ಮಾಧ್ಯಮ ಹಕ್ಕು 50,000 ಕೋಟಿ ರೂ.ಗೂ ಹೆಚ್ಚು ಮೊತ್ತಕ್ಕೆ ಮಾರಾಟಗುವ ನಿರೀಕ್ಷೆಯಲ್ಲಿದೆ. ಹರಾಜು ಪ್ರಕ್ರಿಯೆಯನ್ನು ಟಿವಿ, ಡಿಜಿಟಲ್ ಹಕ್ಕು ಸೇರಿದಂತೆ 4 ವಿಭಾಗಗಳಲ್ಲಿ ನಡೆಸುವ ಸಾಧ್ಯತೆ ಇದೆ. ಇದನ್ನೂ ಓದಿ: ಐಪಿಎಲ್ ರದ್ದು ಬಿಸಿಸಿಐಗೆ 2000 ಕೋಟಿ ನಷ್ಟ

    ಇದೀಗ 15ನೇ ಆವೃತ್ತಿ ಐಪಿಎಲ್ ನಡೆಯುತ್ತಿದ್ದು, ಈ ಬಾರಿ 10 ತಂಡಗಳು ಟೂರ್ನಿಯಲ್ಲಿ ಆಡುತ್ತಿದೆ. ಮುಂದಿನ ಆವೃತ್ತಿಯಲ್ಲೂ 10 ತಂಡಗಳು ಮುಂದುವರಿಯುವ ಕಾರಣ ಪಂದ್ಯಗಳ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಹಾಗಾಗಿ ಜಾಹೀರಾತು ಮೂಲಕ ಹರಿದುಬರುವ ಹಣ ಮತ್ತಷ್ಟು ಏರಿಕೆಯಾಗಲಿದೆ. ಈಗಾಗಲೇ ಹರಾಜಿನಲ್ಲಿ ಹಲವು ಕಂಪನಿಗಳು ಭಾಗವಹಿಸಲು ಇಚ್ಚಿಸಿದ್ದು, ಬಿಸಿಸಿಐ ಬಂಪರ್ ಆದಾಯದ ಲೆಕ್ಕಾಚಾರದಲ್ಲಿದೆ.

    ಬಿಡ್ ಗೆದ್ದಿದ್ದು ಸ್ಟಾರ್ ಇಂಡಿಯಾ:
    2018 ರಿಂದ 2022ರವರೆಗಿನ ಐಪಿಎಲ್ ಜಾಗತಿಕ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿದೆ. 2017ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 16,347 ಕೋಟಿ ರೂ. ನೀಡಿ ಟಿವಿ ಮತ್ತು ಡಿಜಿಟಲ್ ಮೀಡಿಯಾದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿತ್ತು. ಇದನ್ನೂ ಓದಿ: ಐಪಿಎಲ್ ರದ್ದಾದ್ರೆ ಕೋಟಿ ಕೋಟಿ ನಷ್ಟ – ಯಾರಿಗೆ ಎಷ್ಟು? ಇಲ್ಲಿದೆ ಲೆಕ್ಕ

    ಭಾರತದಲ್ಲಿ ಪ್ರಸಾರದ ಹಕ್ಕಿಗಾಗಿ ಸೋನಿ ಪಿಕ್ಚರ್ಚ್ 11,050 ಕೋಟಿ ರೂ. ಹಣವನ್ನು ಬಿಡ್ ಮಾಡಿದ್ದರೆ, ಸ್ಟಾರ್ ಇಂಡಿಯಾ 6,196.94 ಕೋಟಿ ರೂ. ಹಣವನ್ನು ಭಾರತದ ಪ್ರಸಾರಕ್ಕೆ ಬಿಡ್ ಮಾಡಿತ್ತು. ಆದರೆ ಸೋನಿ ಪಿಕ್ಚರ್ಸ್ ಇತರ ಹಕ್ಕುಗಳಿಗೆ ಬಿಡ್ ಮಾಡದ ಕಾರಣ ಅಂತಿಮವಾಗಿ ಐಪಿಎಲ್ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿತ್ತು.

    ಈ ಬಿಡ್ ಪ್ರಕ್ರಿಯೆಯಲ್ಲಿ ಯುಪ್ ಟಿವಿ, ಗಲ್ಫ್ ಡಿಟಿಎಚ್ ಒಎಸ್‍ಎನ್, ಪರ್‍ಫಾರ್ಮ್ ಮೀಡಿಯಾ, ಏರ್‍ಟೆಲ್, ರಿಲಯನ್ಸ್ ಜಿಯೋ, ಟೈಮ್ಸ್ ಇಂಟರ್ ನೆಟ್, ಫೇಸ್‍ಬುಕ್, ಅಮೆಜಾನ್, ಇಎಸ್‍ಪಿಎನ್ ಡಿಜಿಟಲ್ ಮೀಡಿಯಾಗಳು ಭಾಗವಹಿಸಿತ್ತು. ಭಾರತದಲ್ಲಿ ಡಿಜಿಟಲ್ ಪ್ರಸಾರದ ಹಕ್ಕಿಗೆ ಏರ್‌ಟೆಲ್‌ ರಿಲಯನ್ಸ್ ಜಿಯೋ, ಟೈಮ್ಸ್ ಇಂಟರ್ ನೆಟ್, ಫೇಸ್‍ಬುಕ್ ಬಿಡ್ ಮಾಡಿತ್ತು.