ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬಗ್ಗೆ ಮಂಗಳವಾರ ವಿಧಾನ ಪರಿಷತ್‍ನಲ್ಲಿ ಚರ್ಚೆ ನಡೆಯಿತು. ಸಂವಿಧಾನದ ಚರ್ಚೆ ವೇಳೆ ಗಾಂಧೀಜಿ ಅವರನ್ನ ಸ್ಮರಿಸಿಕೊಂಡು ಚರ್ಚೆ ನಡೆಸಲಾಯಿತು. ಗಾಂಧೀಜಿ ಅಂದರೆ ಒಂದು ವಿಶ್ವವಿದ್ಯಾಲಯ. ಅವರಿಗೆ ಗೊತ್ತಿಲ್ಲದ ವಿಷಯ ಇಲ್ಲ. ಮಹಾತ್ಮ ಗಾಂಧೀಜಿ ನಮ್ಮ ದೇಶದ ರಾಷ್ಟ್ರಪಿತ ಆಗಿದ್ದು ನಮ್ಮದೇಶದ ಹೆಮ್ಮೆ ಅಂತ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅಭಿಪ್ರಾಯಪಟ್ಟರು.
ಸಂವಿಧಾನದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಗಾಂಧೀಜಿ ತಿಳಿದುಕೊಳ್ಳದ ವಿಷಯವೇ ಇಲ್ಲ. ಶ್ರಮಿಕರ ಬದುಕು, ಮಹಿಳಾ ಸಬಲೀಕರಣ, ಗ್ರಾಮ ಸ್ವರಾಜ್ಯ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಅಧ್ಯಯನ ಮಾಡಿದ್ದರು. ಮಾನವ ಶಕ್ತಿಯಿಂದ ಯಾಂತ್ರಿಕ ಶಕ್ತಿ ಸೇರಿದಂತೆ ಎಲ್ಲದರ ಬಗ್ಗೆಯೂ ತಿಳಿದಿದ್ದರು. ಗಾಂಧೀಜಿ ಕಂಡ ಕನಸು ಸಾಮಾನ್ಯವಾಗಿ ಇರಲಿಲ್ಲ. ಅವರು ಯಾರೊಬ್ಬರ ಸ್ವತ್ತಲ್ಲ. ಜನಪ್ರಿಯ ಯೋಜನೆಗಳು ಎಂದರೆ ಹುಡುಗಾಟವಲ್ಲ ಅಂತ ಗಾಂಧೀಜಿ ಅವರ ಪರಿಕಲ್ಪನೆ, ಕನಸು ಕುರಿತು ಬೆಳಕು ಚೆಲ್ಲಿದರು ಎಂದು ತಿಳಿಸಿದರು.
ಇದೇ ವೇಳೆ ಪ್ರತಿಪಕ್ಷದ ಕೆಲ ಸದಸ್ಯರು ತಮ್ಮ ಆಸನದಲ್ಲೇ ಕುಳಿತು ಮಾಧುಸ್ವಾಮಿ ಅವರ ಮಾತನ್ನು ಮುಖಭಾವದಲ್ಲೇ ವ್ಯಂಗ್ಯವಾಡುವುದನ್ನು ಸಚಿವರು ಕಂಡರು. ಇದಕ್ಕೆ ಅಸಮಾಧಾನ ಗೊಂಡ ಸಚಿವರು, ನಾನು ನಾಟಕೀಯವಾಗಿ ಮಾತನಾಡುತ್ತಿಲ್ಲ. ನನ್ನ ಅಭಿಪ್ರಾಯ ನಾನು ವ್ಯಕ್ತಪಡಿಸುತ್ತೇನೆ. ಯಾರು ಏನೇ ಅಂದರೂ ಐ ಆ್ಯಮ್ ನಾಡ್ ಬಾದರ್ಡ್ ಎಬೌಟ್ ಎಂದರು. ಸಚಿವರ ಪದ ಬಳಕೆಗೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸದಸ್ಯರಿಗೆ ತಿರುಗೇಟು ನೀಡಿದ ಸಚಿವ ಮಾಧುಸ್ವಾಮಿ, ಮುಖಭಾವ ನೋಡಿದರೆ ಯಾರು ಏನು ಅಂದುಕೊಳ್ಳುತ್ತಿದ್ದಾರೆ ಎಂದು ನನಗೆ ಗೊತ್ತಾಗುತ್ತಿದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸಂವಿಧಾನದ ಬಗ್ಗೆ ಚರ್ಚೆಗೆ ಅವಕಾಶ ನೀಡಿದ್ದನ್ನು ನಾವು ಸ್ವಾಗತಿಸಿ ನಿಮ್ಮ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದೇವೆ. ಹಾಗಿದ್ದರೂ ನೀವು ಬಾದರ್ಡ್ ಪದ ಬಳಸಿದ್ದು ಸರಿಯಲ್ಲ. ನೀವು ಚೆನ್ನಾಗಿ ಮಾತನಾಡುತ್ತಿದ್ದೀರಿ ಮಾತನಾಡಿ ಎಂದರು. ಸದಸ್ಯರ ಅಭಿಪ್ರಾಯಕ್ಕೆ ಮನ್ನಣೆ ನೀಡಿದ ಸಚಿವ ಮಾಧುಸ್ವಾಮಿ ಕ್ಷಮೆ ಕೇಳಿ ಮಾತು ಮುಂದುವರಿಸಿದರು.
– ಪವಿತ್ರ ಕಡ್ತಲ
ಮಂಗಳೂರು ಗಲಭೆ, ಸಿಎಎ, ರೈತರ ಸಾಲಮನ್ನಾ ಅಂತಾ ಟಗರು, ಕುಮಾರಣ್ಣ, ಯಡಿಯೂರಪ್ಪ ಎಲ್ಲಾ ಸದನದೊಳಗೆ ಸುಸ್ತು ಮರೆತು ಫೈಟಿಂಗ್‍ಗೆ ಇಳಿದಿದ್ರು. ಆದ್ರೆ ನಮ್ ಮಹಿಳಾ ಶಾಸಕಿಯರು ಇದೆಲ್ಲ ಪ್ರಾಬ್ಲಂ ಅಲ್ಲ, ನಮ್ದು ಅಸಲಿ ಪ್ರಾಬ್ಲಂ ಅಂತಾ ಲಂಚ್ ಬ್ರೇಕ್ ಟೀ ಬ್ರೇಕ್ ಟೈಂನಲ್ಲಿ ಹೆವಿ ಕಿತ್ತಾಡ್ತವ್ರಂತೆ.!
ಏನ್ ನಮ್ಗೆ ಸೆಷನ್‍ನಲ್ಲಿ ಸಿದ್ರಾಮಣ್ಣ, ಕುಮಾರಣ್ಣ, ಬಿಎಸ್‍ವೈ ಮಾತಾನಾಡೋಕೆ ಅವಕಾಶ ಕೊಡಲ್ಲ ಅಂತಾ ಮ್ಯಾಟ್ರಿಗಲ್ಲ ಅಥ್ವಾ ಊರಿಗೆ ಅನುದಾನ ಬಂದಿಲ್ಲ ಅಂತಾನೂ ಅಲ್ಲ ಸ್ವಾಮಿ..! ಬದಲಾಗಿ ಟಾಯ್ಲೆಟ್ ಮ್ಯಾಟ್ರಿಗಂತೆ.! ಮೊದ್ಲೇ ಮಹಿಳಾ ಶಾಸಕಿಯರು ಕಡಿಮೆ ಇದ್ದಾರೆ. ಹಂಗಾಗಿ ಮ್ಯಾನೇಜ್ ಆಗುತ್ತೆ ಅಂತಾ ಒಂದೇ ಟಾಯ್ಲೆಟ್ ಅಧಿವೇಶನದ ಕೊಠಡಿಯ ಪಕ್ಕ ಇದೆ.
ಇಷ್ಟ್ ವರ್ಷ ಹೆಂಗೋ ಅಧಿವೇಶನದ ಒಳಗೆ ಕಿತ್ತಾಡಿಕೊಂಡ್ರೂ ಒಂದೇ ಶೌಚಾಲಯ ಬಳಸುತ್ತಿದ್ದ ಮಹಿಳಾ ಶಾಸಕರಿಗೆ ಈಗ ಇದ್ ದೊಡ್ಡ ಪ್ರಾಬ್ಲಂ ಆಗಿದೆಯಂತೆ. ಪಕ್ಷದ ಲೆಕ್ಕದಲ್ಲಿ ಟಾಯ್ಲೆಟ್ ಕಟ್ಕೊಡಿ ಅಂತಾ ಕಾರ್ಯದರ್ಶಿಗೆ ಡಿಮ್ಯಾಂಡ್ ಇಟ್ಟಿದ್ದಾರಂತೆ. ಕಾಂಗ್ರೆಸ್‍ನವರು ಹೋಗೋ ರೆಸ್ಟ್ ರೂಂಗೆ ನಾವ್ ಹೋಗಲ್ಲ ಅಂತಾ ಬಿಜೆಪಿಯವರು, ಬಿಜೆಪಿಯವರು ಹೋಗೋ ರೆಸ್ಟ್ ರೂಂಗೆ ನಾವ್ ಹೋಗಲ್ಲ ಕಾಂಗ್ರೆಸ್‍ನ ಮಹಿಳಾಮಣಿಗಳು ಕ್ಯಾತೆ ತೆಗೆದಿದ್ದಾರಂತೆ.
ಏನೋ ಹೆಣ್ಣು ಮನಸು ಕಷ್ಟ ಅರ್ಥ ಆಯ್ತದೆ, ನಮ್ ಪ್ರಾಬ್ಲಂನ ಹೋಗಿ ಸದನದಲ್ಲಿ ಡಿಸ್ಕಸ್ ಮಾಡ್ತಾರೆ ಅಂತಾ ವೋಟು ಹಾಕಿದ್ದೀವಿ, ಇವ್ರು ಟಾಯ್ಲೆಟ್‍ಗೆ ಕಿತ್ತಾಡ್ತಾವ್ರ ಗುರು ಅಂತಾ ಜನ ಕನ್‍ಫ್ಯೂಸ್ ಮಾಡ್ಕೊಂಡ್ರೆ, ಮೋಟಮ್ಮನೋರು ಮಾತ್ರ, `ಶೋಭಾ ನೋಡು ಈಗ ಹಿಂಗಾಗದೇ ಸೆಷೆನ್‍ವೊಳಗೆ, ನಮ್ ಟೈಂನಲ್ಲಿ ಪಕ್ಷ ಭೇದ ಎಲ್ಲಾ ಇರ್ಲಿಲ್ಲಪ್ಪ ಅಂತಾ ಡೆಲ್ಲಿಲ್ಲಿದ್ದ ಶೋಭಕ್ಕಂಗೆ ಇಮ್ಮಿಡಿಯೆಟ್ ಮ್ಯಾಟ್ರು ತಿಳಿಸಿದ್ರಂತೆ.!
ಅಧಿವೇಶನದಲ್ಲಷ್ಟೇ `ಮಾತು(ಧು)ಸ್ವಾಮಿ’..!
ಒಂಚೂರು ನಗದೆ, ಮಾತೆತ್ತಿದ್ರೇ ತೋಳೇರಿಸಿಕೊಂಡು ಜಗಳಕ್ಕೆ ಬೀಳುವ, ಹೇ ಕುತ್ಕೊಳ್ರೀ ನಾನು ಕಂಡಿದ್ದೀನಿ ಅಂತಾ ವಿಪಕ್ಷಗಳ ಬಾಯಿಮುಚ್ಚಿಸುವ ಸೆಷನ್ ಸೆನ್ಸೇಷನಲ್ ಸ್ಟಾರ್ ಸಚಿವ ಮಾಧುಸ್ವಾಮಿಗೆ ಅಧಿವೇಶನ ಟೈಂನಲ್ಲಷ್ಟೇ ಬಿಜೆಪಿ ಮಾತಾನಾಡೋಕೆ ಪರ್ಮಿಶನ್ ಕೊಟ್ಟಿದ್ಯಂತೆ.! ಬೇರೆ ಟೈಂನಲ್ಲಿ ಮಾತಾನಾಡೋ ಹಂಗಿಲ್ಲ, ಮಾಧ್ಯಮದ ಮುಂದೆ ಕಾಣಿಸೋಹಂಗಿಲ್ಲ ಅಂತಾ ಫರ್ಮಾನು ಹೊರಡಿಸಿದೆಯಂತೆ.!
ಮೊದ ಮೊದಲು ಬಿಜೆಪಿ ಪಾಲಿಗೆ ಆಪ್ತರಕ್ಷಕ, ಸದನದಲ್ಲಿ ಸಂಕಟವಾದಗೆಲ್ಲ ಕಾಪಾಡುವ ಶಕ್ತಿಮಾನ್‍ನಂತೆ ಕಾಣಿಸುತ್ತಿದ್ದ ಮಾಧುಸ್ವಾಮಿ ರಫ್ ಆಂಡ್ ಟಫ್ ಪರ್ಸನಾಲಿಟಿ ಅಧಿವೇಶನ ಬಿಟ್ಟು ಹೊರಗಡೆ ವರ್ಕೌಟ್ ಆಗಲ್ವಂತೆ. ಈಗಾಗಲೇ ಥೇಟು ಅಧಿವೇಶನದಲ್ಲಿ ಮುಗಿಬಿದ್ದ ಹಾಗೆ ಸ್ವಾಮೀಜಿ ಮೇಲೆ, ಜನ್ರ ಮೇಲೆ ಮುಗಿಬಿದ್ದು ಮಾಧುಸ್ವಾಮಿ ಬಿಎಸ್‍ವೈ ಪಾಲಿಗೆ ಬಿಸಿ ಕಡುಬು ಥರ ಆಗಿದ್ದಾರೆ.
ಹಾಗಾಗಿ ಬೇರೆ ದಿನಗಳಲ್ಲಿ ಸೈಲೆಂಟ್ ಆಗಿರಿ, ನೀವು ಪಕ್ಷದ ಚಟುವಟಿಕೆಯಿಂದಲೂ ಸ್ವಲ್ಪ ಅಂತರ ಕಾಯ್ದುಕೊಳ್ಳಿ, ಸೆಷನ್‍ನಲ್ಲಿ ಎಷ್ಟು ಬೇಕೋ ಅಷ್ಟು ಒಬ್ರೇ ಮಾತಾನಾಡಿ ಅಂತಾ ಬಿಎಸ್‍ವೈ ಹೇಳಿದ್ದಾರಂತೆ. ಹೀಗಾಗಿ ಅಷ್ಟು ದಿನ ಸೈಲೆಂಟ್ ಆಗಿದ್ದು ಹಾರ್ಟಿನೊಳಗೆ ಅದುಮಿಟ್ಟ ಮಾತು, ಸಿಟ್ಟು, ಕಿಚ್ಚು ರೋಷಾವೇಷ ಎಲ್ಲಾ ಸೇರ್ಕೊಂಡು ಸೆಷನ್‍ನಲ್ಲಿ ವಿಪಕ್ಷಗಳಿಗೆ ಬೈದು ಚಚ್ಚಿ ಬಿಸಾಕಿ ರಿಲ್ಯಾಕ್ಸ್ ಆಗ್ತಾರಂತೆ ಮಾಧುಸ್ವಾಮಿ.
ಲಾಸ್ಟ್ ಕಿಕ್- ಮಾಧುಸ್ವಾಮಿ ಇಡೋ ಕೆಲವು ಟಾಂಗ್, ಖಡಕ್ ಮಾತು ನಮ್ಗಾ, ವಿಪಕ್ಷದವರಿಗಾ ಅಂತಾ ಸಿಎಂ ಕನ್‍ಫ್ಯೂಸ್ ಆಗಿ ಪದೇ ಪದೇ ಮಾಧುಸ್ವಾಮಿ ಮಾತಾನಾಡೋವಾಗ ಹಿಂದಿಂದೆ ತಿರುಗಿ ನೋಡ್ತಾರಂತೆ.
[ಸದಾ ಸೀರಿಯಸ್ ಆಗಿರುವ ಸುದ್ದಿಗಳನ್ನು ಓದಿ, ಓದಿ ನಿಮಗೂ ಬೇಜಾರಾಗಿರುತ್ತೆ. ಸೀರಿಯಸ್ ಓದಿನ ನಡುವೆಯೂ ಸ್ವಲ್ಪ ನವಿರಾದ ಹಾಸ್ಯವೂ ಇರಲಿ ಎಂಬ ಕಾರಣಕ್ಕೆ `ಈ ನ್ಯೂಸ್ ಓದ್ಲೇಬೇಡಿ. ಇದು ತಮಾಷೆಗಾಗಿ..!’ ಅಂಕಣ.]
ಬೆಂಗಳೂರು: ಅಗತ್ಯ ಬಿದ್ದರೆ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ ಎಂದು ಭಾನುವಾರ ಹೇಳಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಇಂದು ಯೂಟರ್ನ್ ಹೊಡೆದಿದ್ದಾರೆ. ಅಷ್ಟೆ ಅಲ್ಲ ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತಾನಾಡಿದ ಸಚಿವ ಮಾಧುಸ್ವಾಮಿ, ಪತ್ರಕರ್ತರ ಪ್ರಶ್ನೆಯೊಂದಕ್ಕೆ ನಾನು ನಿನ್ನೆ ಉತ್ತರಿಸಿದ್ದೆ. ಪತ್ರಕರ್ತರು ಕೇಳಿದ ಪ್ರಶ್ನೆಯಿಂದ ಹೆಚ್ಚು ಕಿರಿಕಿರಿ ಆಗುತ್ತಿತ್ತು. ಹೀಗಾಗಿ ರಾಜೀನಾಮೆ ನೀಡುತ್ತೇನೆ ಅಂತ ಹೇಳಿದ್ದೆ. ಆದರೆ ನನಗೆ ರಾಜೀನಾಮೆ ನೀಡುವ ಬಗ್ಗೆ ಯೋಚನೆ ಇಲ್ಲ. ಹೈಕಮಾಂಡ್ ಕೂಡ ಅಂತಹ ಪ್ರಸ್ತಾವ ಇಟ್ಟಿಲ್ಲ ಅಂತ ಸ್ಪಷ್ಟಪಡಿಸಿದರು.
ಪತ್ರಕರ್ತರು ಒತ್ತಿ ಒತ್ತಿ ಅದೇ ಪ್ರಶ್ನೆಯನ್ನ ಕೇಳಿದ್ದರು. ಹೀಗಾಗಿ ಅನಿವಾರ್ಯವಾಗಿ ನಾನು ರಾಜೀನಾಮೆ ನೀಡಲು ಸಿದ್ಧ ಎಂದೆ ಅಂತ ತಿಳಿಸಿದೆ. ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಮಾತ್ರ ಆಗಲಿದೆ. ಯಾವುದೇ ಕಾರಣಕ್ಕೂ ಸಂಪುಟ ಪುನಾರಚನೆ ಆಗುವುದಿಲ್ಲ ಅಂತ ಸ್ಪಷ್ಟಪಡಿಸಿದ್ರು.
ಮೇಲ್ಮನೆ ರದ್ದು ಮಾಡೋ ಪ್ರಸ್ತಾಪವಿಲ್ಲ:
ವಿಪಕ್ಷಗಳು ಪ್ರಮುಖ ಬಿಲ್ ಗಳಿಗೆ ತೊಡಕು ಹಾಕುತ್ತಿದೆ ಅಂತ ಆಂಧ್ರ ಪ್ರದೇಶದಲ್ಲಿ ಮೇಲ್ಮನೆಯನ್ನೆ ರದ್ದು ಮಾಡಲು ಹೊರಟಿರುವ ಸಿಎಂ ಜಗನ್ ರೆಡ್ಡಿ ನಿಲುವಿಗೆ ಕರ್ನಾಟಕ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದೆ. ಸಚಿವ ಮಾಧುಸ್ವಾಮಿ ಅವರೇ ನಮ್ಮ ರಾಜ್ಯದಲ್ಲಿ ಮೇಲ್ಮನೆ ರದ್ದು ಮಾಡೊಲ್ಲ ಅನ್ನೋ ಮೂಲಕ ಜಗನ್ ಪ್ರಸ್ತಾಪಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು.
ರಾಜ್ಯದಲ್ಲೂ ಮೇಲ್ಮನೆ ರದ್ದು ಮಾಡೋ ಚಿಂತನೆ ಇದೆಯಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕದಲ್ಲಿ ಮೇಲ್ಮನೆ ರದ್ದು ಮಾಡೋ ಬಗ್ಗೆ ಪ್ರಸ್ತಾಪವೂ ಇಲ್ಲ ಅಂತಹ ಚಿಂತನೆ ಇಲ್ಲ ಅಂದರು. ಇದೇ ವೇಳೆ ತಮ್ಮದೇ ಉದಾಹರಣೆಯೊಂದನ್ನ ಕೊಟ್ಟ ಸಚಿವರು, ಹಿಂದೊಮ್ಮೆ ನನ್ನ ಕೆಲಸಕ್ಕೆ ವಿಧಾನ ಪರಿಷತ್ ಸದಸ್ಯರು ತೊಂದರೆ ಕೊಟ್ಟಿದ್ರು. ಆಗ ನನಗೆ ಕೋಪ ಬಂದು ವಿಧಾನ ಪರಿಷತನ್ನೇ ರದ್ದು ಮಾಡಬೇಕು ಅಂತ ತಮಾಷೆಗೆ ಹೇಳಿದ್ದೆ. ಆದರೆ ಸದ್ಯ ತಮ್ಮ ಮುಂದೆ ಮೇಲ್ಮನೆ ರದ್ದು ಮಾಡೋ ಬಗ್ಗೆ ಪ್ರಸ್ತಾಪವೇ ಇಲ್ಲ. ಚಿಂತನೆಯೂ ಇಲ್ಲ ಅಂತ ಸ್ಪಷ್ಟಪಡಿಸಿದ್ರು.
ಹಾಸನ: ಬಡವರ ಹೆಣ್ಣು ಸಾಯಲಿ ಅಂತಿದ್ದೀರಾ. ನಾಚಿಕೆಯಾಗುವುದಿಲ್ವಾ ನಿಮಗೆ ಎಂದು ಸಚಿವ ಮಾಧುಸ್ವಾಮಿ ಹಾಸನ ಡಿಎಚ್‍ಓ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಹಾಸನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ, ತಮ್ಮ ಕ್ಷೇತ್ರದ ಆಸ್ಪತ್ರೆಯಲ್ಲಿ ಸ್ತ್ರೀರೋಗತಜ್ಞರು, ಅನಸ್ತೇಷಿಯ ಸ್ಪೆಷಲಿಸ್ಟ್ ಇಲ್ಲದೇ ಇರುವ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು.
ಈ ವೇಳೆ ಕೋಪಗೊಂಡ ಸಚಿವರು ಹಾಸನ ಡಿಎಚ್‍ಓ ಸತೀಶ್ ಕುರಿತು, ನೀವು ಒಬ್ಬರು ಡಿಎಚ್‍ಓ ಎಂದು ನಿಂತಿದ್ದೀರಿ. ಬಡವರ ಹೆಣ್ಣು ಸಾಯಲಿ ಅಂತಿದ್ದೀರಾ, ನಾಚಿಕೆಯಾಗುವುದಿಲ್ವಾ. ಈ ಸಂಬಂಧ ನೀವು ಯಾರಿಗೆ ಪತ್ರ ಬರೆದಿದ್ದೀರಿ. ಅದನ್ನು ತೆಗೆದುಕೊಂಡು ಬಾ ಇಲ್ಲಿ. ಉತ್ತರ ಕೊಡಿ ನನಗೆ ಎಂದು ಗರಂ ಆದರು.
ಇದೇ ವೇಳೆ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಒಂದು ಕಡೆ ಸರಿಯಾಗಿ ವೈದ್ಯರಿಲ್ಲ. ಮತ್ತೊಂದು ಕಡೆ ಇರುವ ವೈದ್ಯರು ಖಾಸಗಿ ಆಸ್ಪತ್ರೆಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಇದನ್ನು ತಪ್ಪಿಸುವ ಕಾನೂನು ತರಬೇಕು ಎಂದು ಸೂಚಿಸಿದರು.
ಸಚಿವ ಮಾಧುಸ್ವಾಮಿ ಇಂದು ಹಾಸನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳು ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ಪ್ರಭಾಕರ್ ಭಟ್ ಹೇಳಿಕೆ ಅದು ಅವರ ವೈಯಕ್ತಿಕ. ಆದರೆ ಸಿಎಂ ಬಿಎಸ್‍ವೈ ಯಾವ ಸಭೆಯಲ್ಲೂ ನಾನು ಕೇವಲ ಮೂರು ವರ್ಷ ಸಿಎಂ ಆಗಿ ನಂತರ ನಾನು ಚುನಾವಣೆಗೆ ಹೋಗುವುದಿಲ್ಲ ಎಂದು ಹೇಳಿಲ್ಲ. ಈ ಹಿಂದೆ ಹಲವಾರು ಸಭೆಯಲ್ಲಿ 150 ಸೀಟ್ ಗೆಲ್ಲಿಸಿ ಮತ್ತೆ ರಾಜ್ಯದ ಚುಕ್ಕಾಣಿ ಹಿಡಿಯುತ್ತೇವೆ ಎಂದು ಹೇಳಿದ್ದಾರೆ. ನಾವೆಲ್ಲರೂ ಸಿಎಂ ನಾಯಕತ್ವವನ್ನು ಒಪ್ಪಿಕೊಂಡಿದ್ದೇವೆ ಎಂದರು.
ಸಚಿವ ಸಂಪುಟ ವಿಸ್ತರಣೆಯನ್ನು ಸಿಎಂ ಯಡಿಯೂರಪ್ಪ ಪ್ರವಾಸದಿಂದ ಬಂದ ನಂತರ ಮಾಡುತ್ತಾರೆ ಎಂದು ತಿಳಿಸಿದರು. ಡಿಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ಅಯ್ಯೋ ನಾನು ಅಷ್ಟೊಂದು ಆಳವಾಗಿ ಯೋಚನೆ ಮಾಡಿಲ್ಲ. ಅದು ದೊಡ್ಡವರಿಗೆ ಬಿಟ್ಟ ವಿಚಾರ ಎಂದು ಹೇಳಿದರು.
ಉಡುಪಿ: ರಾಮನಗರ ಜಿಲ್ಲೆಯಲ್ಲಿ ಏಸುಸ್ವಾಮಿ ಪ್ರತಿಮೆಗೆ ಮಾಜಿ ಸಚಿವ ಡಿಕೆ ಶಿವಕುಮಾರ್ ಸರಕಾರಿ ಜಮೀನು ನೀಡಿಕೆ ರಾಜ್ಯಾದ್ಯಂತ ಭಾರೀ ಚರ್ಚೆಯಲ್ಲಿದೆ. ಈ ಬಗ್ಗೆ ಕಾನೂನು ಸಚಿವ ಮಾಧುಸ್ವಾಮಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಮೊದಲು ನಾನೇನು ಈ ಬಗ್ಗೆ ರಿಯಾಕ್ಟ್ ಮಾಡಲ್ಲ ಅಂದ ಅವರು, 2014 ರಿಂದ 18ರ ಅವಧಿಯಲ್ಲಿ ಅಂದ್ರೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಸರ್ಕಾರಿ ಜಮೀನು ಮಂಜೂರು ಆದ ಬಗ್ಗೆ ತನಿಖೆಗೆ ತರಬೇಕು. ಬಗರ್ ಹುಕುಂ ಜಮೀನು ಬಗ್ಗೆ ಕೂಡಾ ತನಿಖೆಯಾಗಬೇಕು. ನಾನೇ ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿದ್ದೆ ಎಂದರು. ಅದರಲ್ಲೂ 2017-18ರ ನಡುವೆ ಬೇಕಾಬಿಟ್ಟಿ ಸರ್ಕಾರಿ ಜಮೀನು ಕೊಟ್ಟಿದ್ದಾರೆ. ಜಮೀನು ಮಂಜೂರಾಗುವಾಗ ಸಾಕಷ್ಟು ಪಕ್ಷಪಾತವಾಗಿದೆ. ಈ ಬಗ್ಗೆ ತನಿಖೆ ನಡೆಸಲು ಎಸಿಗೆ ವಹಿಸಲಾಗಿದೆ ಎಂದು ಹೇಳಿದರು.
ವಿಧಾನಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿದೆ. ಎಸಿಯಿಂದ ಬಂದಂತಹ ವರದಿ ನೋಡಿ ಅಕ್ರಮ ಆಗಿರುವುದು ನಿಜವಾದರೆ ಜಮೀನು ರದ್ದು ಮಾಡುತ್ತೇವೆ ಎಂದು ಹೇಳಿದರು. ಶಿವಮೊಗ್ಗ, ಬೆಂಗಳೂರು, ತುಮಕೂರಲ್ಲಿ ಜಮೀನು ಹಂಚಿಕೆಯಾಗಿದೆ. ಅಲ್ಲೂ ಸ್ವಜನಪಕ್ಷಪಾತವಾದ ಬಗ್ಗೆ ಆರೋಪಗಳಿವೆ ಈ ಬಗ್ಗೆ ಕೂಡಾ ತನಿಖೆ ನಡೆಸುತ್ತೇವೆ ಎಂದು ತಿಳಿಸಿದರು,
ಉಡುಪಿ: ಜಾತಿ, ಧರ್ಮ, ದೇವರ ಮೇಲೆ ನಂಬಿಕೆ ಇಲ್ಲದ ಕಾನೂನು ಸಚಿವ ಮಾಧುಸ್ವಾಮಿ ಒತ್ತಾಯಕ್ಕೆ ಮಣಿದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಚಂಡಿಕಾ ಹೋಮದಲ್ಲಿ ಭಾಗಿಯಾಗಿದ್ದಾರೆ.
ಜಿಲ್ಲೆಯ ಬೈಂದೂರು ಬಿಜೆಪಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಒತ್ತಾಯ ಮಾಡಿ, ಚಂಡಿಕಾ ಹೋಮದಲ್ಲಿ ಭಾಗಿಯಾಗಿ ಪೂಜೆಗೆ ಕುಳಿತುಕೊಳ್ಳುವಂತೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಧುಸ್ವಾಮಿ, ನನಗೆ ಗ್ರಹಣ- ಹೋಮ ಎಲ್ಲ ಗೊತ್ತಿಲ್ಲ. ನಮ್ಮ ಶಾಸಕರು ಪೂಜೆಗೆ ಕೂರಿಸಿದ್ರು ನಾನು ಕೂತೆ. ಇವತ್ತಿನ ಪೂಜೆಗೂ ಗ್ರಹಣಕ್ಕೂ ಸಂಬಂಧವಿಲ್ಲ ಎಂದರು.
ನಾನು ಹರಕೆ ಹೊರುವವನಲ್ಲ. ನಮ್ಮ ಕಥೆನೇ ಬೇರೆ ಇದೆ, ಅದೆಲ್ಲಾ ಈಗ್ಯಾಕೆ ಬಿಡಿ. ರಾತ್ರಿಯೇ ಜಾಗ ಖಾಲಿ ಮಾಡಿ ಉಡುಪಿಯಲ್ಲಿ ವಾಸ್ತವ್ಯ ಹೂಡಲು ಹೊರಟಿದ್ದೆ. ನಾನು ನಾಸ್ತಿಕ, ಆದರೆ ಎಲ್ಲರ ಒತ್ತಾಯಕ್ಕೆ ಮಣಿದು ಹೋಮದಲ್ಲಿ ಭಾಗಿಯಾಗಿದ್ದೇನೆ ಎಂದು ಮಾಧುಸ್ವಾಮಿ ಹೇಳಿದರು. ನಾನು ಹೋಮದಲ್ಲಿ ಭಾಗಿಯಾದರೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತದೆ ಎಂದು ಮೊದಲೇ ಗೊತ್ತಿತ್ತು. ಆದರೆ ಎಲ್ಲರ ಒತ್ತಾಯಕ್ಕೆ ಮಣಿದು ಪೂಜೆ, ಹೋಮದಲ್ಲಿ ಭಾಗಿಯಾಗಿದ್ದೇನೆ ಎಂದು ಹೇಳಿ ಮಾಧುಸ್ವಾಮಿ ನಕ್ಕರು.
ತುಮಕೂರು: ಅತ್ಯಾಚಾರಿಗಳಿಗೆ ತಕ್ಷಣ ಶಿಕ್ಷೆಯಾಗುವ ಸ್ಥಿತಿ ತರದೇ ಹೋದರೆ ಕಷ್ಟವಾಗಲಿದೆ. ಹಾಗಾಗಿ ಕೆಲ ಕಾನೂನು ತಿದ್ದುಪಡಿ ಮಾಡುವಂತೆ ರಾಜ್ಯದಿಂದ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದರಾಬಾದ್ ಎನ್ ಕೌಂಟರ್ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಆದರೆ ನಮ್ಮ ಕಾನೂನಿನಲ್ಲೇ ಕೆಲ ತಿದ್ದುಪಡಿಯಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
1860 ರಲ್ಲಿ ಆಗಿರುವಂತಹ ಭಾರತೀಯ ದಂಡ ಸಂಹಿತೆ(ಐಪಿಸಿ), ಅಪರಾಧ ಪ್ರಕ್ರಿಯೆ ಸಂಹಿತೆ(ಸಿಆರ್ ಪಿಸಿ) ಕಾಯಿದೆಯಲ್ಲಿ ಏನೂ ಸತ್ವ ಇಲ್ಲದಾಗಿದ್ದು ಅದರ ತಿದ್ದುಪಡಿ ಆಗಬೇಕಾದ ಇಂಗಿತವನ್ನ ಮಾಧುಸ್ವಾಮಿ ವ್ಯಕ್ತಪಡಿಸಿದ್ದಾರೆ. ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಮಾಡಿದರೆ 1 ಸಾವಿರ ರೂ ದಂಡ ಅಂತಿದ್ದು, ಆ 1 ಸಾವಿರ ರೂ ದಂಡ ಆರೋಪಿಗಳು ಖುಷಿಯಾಗಿ ಕೊಟ್ಟು ಹೋಗುತ್ತಾರೆ. ಈ ಬಗ್ಗೆ ಕಾನೂನು ಬಿಗಿಯಾಗಬೇಕಿದೆ. ಇದರ ಕುರಿತು ನಾವು ಸೆಮಿನಾರ್ ಮಾಡಿ ಚರ್ಚೆ ಮಾಡಿ ಕಾನೂನು ತಿದ್ದುಪಡಿ ಮಾಡುವಂತೆ ಸಂಸತ್ತಿಗೆ ಸಲಹೆ ನೀಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ- ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ ಪೊಲೀಸರು
ಅತ್ಯಾಚಾರಿಗಳಿಗೆ ತಕ್ಷಣ ಶಿಕ್ಷೆಯಾಗುವ ಸ್ಥಿತಿ ತರದೇ ಹೋದರೆ ಕಷ್ಟವಾಗಲಿದ್ದು ಆ ನಿಟ್ಟಿನಲ್ಲಿ ನಾವು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ ಎಂದಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಇಂತಹ ಪ್ರಕರಣ ಆಗಲು ಬಿಡೋದಿಲ್ಲ. ನಾನು ಮತ್ತು ಗೃಹ ಸಚಿವರು ಸದಾ ಸಂಪರ್ಕದಲ್ಲಿ ಇದ್ದು, ಮುಖ್ಯವಾಗಿ ಬೆಂಗಳೂರು ನಗರವನ್ನ ಮಾನಿಟರಿಂಗ್ ಮಾಡುತ್ತಿದ್ದೇವೆ ಎಂದರು.
ಬೆಂಗಳೂರು: ಹುಳಿಯಾರು ಕನಕ ವೃತ್ತ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಕ್ಷಮೆ ಕೇಳಿದರೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿಯವರು ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದಾರೆ.
ವಿವಾದದ ಕುರಿತು ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸ್ವಾಮೀಜಿಗೆ ಏಕ ವಚನ ಬಳಸಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಯಾವುದೇ ಸ್ವಾಮೀಜಿಗೆ ಅಪಚಾರ ಮಾಡುವುದು, ಏಕ ವಚನ ಬಳಸುವುದು ನನ್ನ ಬದುಕಿನಲ್ಲಿ ಬಂದಿಲ್ಲ. ನಾವು ಸಿದ್ದಗಂಗಾ ಶ್ರೀಗಳ ಸಂಸ್ಕಾರದಲ್ಲಿ ಬೆಳೆದಿರುವವರು, ಖಾವಿ ಹಾಕಿದವರೆಲ್ಲರಿಗೂ ಸಿದ್ದಗಂಗಾ ಶ್ರೀಗಳಿಗೆ ನೀಡಿದಷ್ಟೇ ಗೌರವವನ್ನು ಕೊಡುತ್ತೇವೆ. ದುರಂತವೆಂದರೆ ಸ್ವಾಮೀಜಿಗಳು ವಿವಾದಕ್ಕೆ ಬರುವುದು, ಚರ್ಚೆಗೆ ಭಾಗವಹಿಸುವುದು, ಸಿಟ್ಟಾಗುವುದು. ಅಲ್ಲದೆ ಮಾತಿಗೆ ಮಾತು ಬೆಳೆಯುವ ಸ್ಥಿತಿಯನ್ನು ಅವರೂ ನಿರ್ಮಾಣ ಮಾಡಿಕೊಳ್ಳಬಾರದು ಎಂದರು.
ನಂತರ ನಮ್ಮ ನಾಯಕ ಯಡಿಯೂರಪ್ಪನವರು ಕ್ಷಮೆ ಕೇಳುವ ವಾತಾವರಣ ನಿರ್ಮಾಣವಾಗಿದ್ದರೆ, ನಾನೂ ಕೂಡ ಅವರೊಂದಿಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
ನಾನು ಏಕವಚನದಲ್ಲಿ ಮಾತನಾಡಿಲ್ಲ, ಇದೆಲ್ಲ ಸುಳ್ಳು. ನಾನು ಅವರಿಗಾಗಿ 2 ಗಂಟೆ ಕಾದಿದ್ದೇನೆ. ಅವರು ಬಂದಾಗ ಎದ್ದು ನಿಂತು ಸ್ವಾಗತಿಸಿದ್ದೇನೆ. ಅಲ್ಲದೆ ಅವರ ಸಂಪೂರ್ಣ ಮಾತುಗಳನ್ನು ಕೇಳಿದ್ದೇನೆ. ಅವರು ನನಗೆ ಮಾತನಾಡಲಿಕ್ಕೆ ಅವಕಾಶ ನೀಡಲಿಲ್ಲ ಎಂದು ದೂರಿದರು.
ಅಲ್ಲಿನ ಪರಿಸ್ಥಿತಿ ನನಗೆ ತಿಳಿದಿಲ್ಲ ಎಂದು ಹೇಳಿದಾಗ ನೀವು ಸುಳ್ಳು ಹೇಳುತ್ತಿದ್ದೀರಿ ಎಂದು ನನ್ನೊಂದಿಗೆ ವಾದ ಮಾಡಿದ್ದಾರೆ. ನನಗೆ ಇರುವ ಮಾಹಿತಿಯನ್ನಾದರೂ ಹೇಳಲು ಬಿಡಿ ಎಂದೆ, ಆದರೂ ಅವರು ಅವರದ್ದೇ ಮಾತನ್ನು ಹೇಳಿದರು. ಅವರು ರೇಗಿದಾಗಲೂ ನಾನು ಏಕವಚನ ಬಳಸಿಲ್ಲ. ನಂತರ ಅವರು ನಾನು ಹೋರಾಟ ಮಾಡುತ್ತೇನೆ ಎಂದರು ನಾನು ಮಾಡಿ, ನಾನು ಹೋರಾಟ ಮಾಡಿಕೊಂಡೆ ಬಂದವನು ಎಂದು ಹೇಳಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಕನಕ ವೃತ್ತ ಎಂದು ಹೆಸರಿಡುವುದರಲ್ಲಿ ನನ್ನ ಯಾವುದೇ ತಕರಾರಿಲ್ಲ. 2006 ರಲ್ಲಿ ಪಂಚಾಯಿತಿಯಲ್ಲಿ ಆಗಿದ್ದ ಪ್ರಸ್ತಾವನೆ ನನಗೆ ತಿಳಿದಿರಲಿಲ್ಲ. ಇದೀಗ ಪಟ್ಟಣ ಪಂಚಾಯಿತಿ ಆದ ನಂತರ ಪ್ರಸ್ತಾವನೆ ಸಲ್ಲಿಸಲು ಹೇಳಿದ್ದೇನೆ. ಇದಾದ ನಂತರ ಅವರು ವೃತ್ತಕ್ಕೆ ಕನಕದಾಸರ ಹೆಸರನ್ನು ಇಟ್ಟುಕೊಳ್ಳಬಹುದು ನನ್ನದೇನೂ ತಕರಾರಿಲ್ಲ ಎಂದರು.
ಈ ಕುರಿತು ರಾಜ್ಯಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಕುರುಬ ಸಮುದಾಯದಲ್ಲೇ ಎರಡು ಬಣಗಳಾಗಿವೆ. ಚಿಕ್ಕನಾಯಕನಹಳ್ಳಿಯಲ್ಲಿ ಸಚಿವ ಮಾಧುಸ್ವಾಮಿ ಪರ ಕುರುಬ ಸಮುದಾಯದ ಮುಖಂಡರು ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಶಾಂತಿ ಸಭೆಯಲ್ಲಿ ನಡೆದ ಸತ್ಯವನ್ನು ಮುಖಂಡರು ಬಿಚ್ಚಿಟ್ಟಿದ್ದಾರೆ. ಸಚಿವ ಮಾಧುಸ್ವಾಮಿ ವಿರುದ್ಧ ಪಿತೂರಿ ನಡೆಸಿ ವಿಡಿಯೋ ಎಡಿಟ್ ಮಾಡಲಾಗಿದೆ ಎಂದು ಕುರುಬ ಸಮುದಾಯದ ಮುಖಂಡರು ತಿಳಿಸಿದ್ದಾರೆ.
ಮಾಧುಸ್ವಾಮಿಯವರ ಏಳಿಗೆ ಸಹಿಸಲಾಗದೆ ಪಿತೂರಿ ಮಾಡಲಾಗಿದೆ. ಮಾಧುಸ್ವಾಮಿಗೆ ಜಾತಿ ವಿರೋಧಿ ಪಟ್ಟಕಟ್ಟಲು ಯತ್ನಿಸಲಾಗಿದೆ. ಅವರ ವಿರುದ್ಧ ಕುರುಬ ಸಮಾಜ ಎತ್ತಿಕಟ್ಟುವ ಪ್ರಯತ್ನ ನಡೆಸಲಾಗಿದೆ. ಮೂರು ವರ್ಷಗಳ ಹಿಂದೆ ಕುರುಬ ಸಮುದಾಯದ ಮೇಲೆ ದೌರ್ಜನ್ಯ ನಡೆದಿತ್ತು. ಅಂದು ಯಾಕೆ ಸ್ವಾಮೀಜಿ ಬರಲಿಲ್ಲ, ರಾಜ್ಯಸಂಘ ಯಾಕೆ ಬರಲಿಲ್ಲ. ಈಗ 21 ಸೆಕೆಂಡ್ ವಿಡಿಯೋ ಕಟ್ ಮಾಡಿ ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುರುಬ ಸಮಾಜದ ಬಗ್ಗೆ ಮಾಧುಸ್ವಾಮಿಯವರಿಗೆ ಗೌರವವಿದೆ. ಕುರುಬ ಸಮಾಜ ಕೆಲವರಿಗೆ ಮಾತ್ರ ಸೀಮಿತವಾಗಿದೆ. ಶಿವಕುಮಾರ ಸ್ವಾಮೀಜಿ ಸರ್ಕಲ್ ಅಂತ ಹೆಸರಿಡಲು ನಾನು ಬಿಡುವುದಿಲ್ಲ, ಕನಕವೃತ್ತ ಅಂತ ಹೆಸರಿಡಲು ಅಭ್ಯಂತರವಿಲ್ಲ ಎಂದು ಸಭೆಯಲ್ಲಿ ಮಾಧುಸ್ವಾಮಿ ಹೇಳಿದ್ದರು. ಸಚಿವರು ಕಾನೂನಾತ್ಮಕವಾಗಿ ಹೆಸರಿಡಲು ಸೂಚನೆ ನೀಡಿದ್ದರು. ಆದರೆ ಸ್ವಾಮೀಜಿ ಈಗಲೇ ನಾಮಫಲಕ ಹಾಕಲು ಪಟ್ಟು ಹಿಡಿದು, ಹೆಸರು ಬದಲಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಹೇಳಿದರು. ಆಗ ಮಾಧುಸ್ವಾಮಿ ಸ್ವಾಮೀಜಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.
ಸಚಿವ ಸ್ಥಾನದಿಂದ ವಜಾಗೆ ಆಗ್ರಹ
ಈ ಬೆಳವಣಿಗೆ ಬೆನ್ನಲ್ಲೇ ಸಚಿವ ಮಾಧುಸ್ವಾಮಿ ವಿರುದ್ಧ ಪ್ರತಿಭಟನೆ ರಾಜ್ಯಾದ್ಯಂತ 17 ಕಡೆ ಪ್ರತಿಭಟನೆ ನಡೆಸಲಾಗಿದೆ. ದಾವಣಗೆರೆಯಲ್ಲಿ ಸಹ ಕುರುಬ ಸಮಾಜದಿಂದ ಪ್ರತಿಭಟನೆ ನಡೆಸಲಾಗಿದ್ದು, ನಗರದ ಎಸಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿ, ಕುರುಬ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಮಾಧುಸ್ವಾಮಿಯವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಹಾಲುಮತ ಸಮಾಜದಿಂದ ಒತ್ತಾಯ ಮಾಡಲಾಯಿತು.
ಸಭೆಯಲ್ಲಿ ಆಗಿದ್ದೇನು?
ಹುಳಿಯಾರು ಪಟ್ಟಣದ ಪೆಟ್ರೋಲ್ ಬಂಕ್ ವೃತ್ತದಲ್ಲಿ ಕನಕದಾಸರ ನಾಮಫಲಕ ಅಳವಡಿಕೆ ಸಂಬಂಧ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿತ್ತು. ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲು ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ಶಾಂತಿಸಭೆ ಕರೆಯಲಾಗಿತ್ತು. ಸಭೆಯಲ್ಲಿ ಒಮ್ಮತ ಮೂಡದ ಕಾರಣ ಸಭೆ ಅಪೂರ್ಣಗೊಂಡಿತ್ತು. ಇದರಲ್ಲಿ ಕುರುಬ ಸಮುದಾಯದ ಮುಖಂಡರು ಸಹ ಭಾಗವಹಿಸಿದ್ದರು.
15 ವರ್ಷಗಳಿಂದ ಆ ವೃತ್ತವನ್ನು ಕನಕವೃತ್ತ ಎಂದು ಕರೆಯಲಾಗುತ್ತದೆ. ಈಗ ಆ ಸ್ಥಳಕ್ಕೆ ಶಿವಕುಮಾರ ಸ್ವಾಮೀಜಿ ನಾಮಫಲಕ ಹಾಕಲು ಲಿಂಗಾಯತ ಸಮುದಾಯದವರು ಮುಂದಾಗಿದ್ದಾರೆ. ಇದಕ್ಕೆ ಕನಕ ವೃತ್ತ ಎಂದು ನಾಮಕರಣ ಮಾಡಲು ಕುರುಬ ಸಮುದಾಯದವರು ಒತ್ತಾಯಿಸುತ್ತಿದ್ದಾರೆ ಎಂದು ಸಭೆಯಲ್ಲಿ ಸ್ವಾಮೀಜಿ ತಿಳಿಸಿದ್ದರು. ವೃತ್ತಕ್ಕೆ ಕನಕದಾಸರ ಹೆಸರಿಡಲೇಬೇಕು, ಇಲ್ಲವಾದಲ್ಲಿ ಹೋರಾಟ ಮಾಡುತ್ತೇವೆ ಎಂದು ಸ್ವಾಮೀಜಿ ಎಚ್ಚರಿಸಿದ್ದರು.
ಇದಕ್ಕೆ ಪ್ರತಿಯಾಗಿ ಮಾಧುಸ್ವಾಮಿಯವರು, ನೀವು ಧಮ್ಕಿ ಹಾಕುತ್ತೀರ, ನಾನೂ ಹೋರಾಟಗಾರನೇ ಕಾನೂನು ಬಿಟ್ಟು ಹೋಗುವುದಿಲ್ಲ. ಕಾನೂನಿಗೆ ಆದ್ಯತೆ ನೀಡುವುದೇ ನನ್ನ ಹೋರಾಟ ಎಂದು ಸಿಡಿಮಿಡಿಗೊಂಡಿದ್ದರು. ಹೀಗಾಗಿ ಸಭೆಯಲ್ಲಿ ಗದ್ದಲ ಉಂಟಾಗಿ ಸಭೆ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.
– ಕೆ.ಎರ್.ಪೇಟೆಯಲ್ಲಿ ಚುನಾವಣೆ, ತುರುವೇಕೆರೆಯಲ್ಲಿ ಮತಯಾಚನೆ
– ಮಾವಿನಹಳ್ಳಿಯ ಕೆರೆ ತುಂಬಿಸಿದ್ದೇನೆ, ನನಗೆ ಸಹಾಯ ಮಾಡ್ಬೇಕು
ತುಮಕೂರು: ಕೆ.ಆರ್.ಪೇಟೆ ಉಪ ಚುನಾವಣೆ ಉಸ್ತುವಾರಿ ಹೊತ್ತ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ತುಮಕೂರು ಜಿಲ್ಲೆಯಲ್ಲಿ ಮತಯಾಚನೆ ಮಾಡಿದ್ದಾರೆ.
ತುರುವೇಕೆರೆ ಕ್ಷೇತ್ರದ ಮಾವಿನಹಳ್ಳಿ ಕೆರೆಗೆ ಬಾಗಿನ ಅರ್ಪಿಸಿದ ಸಚಿವ ಮಾಧುಸ್ವಾಮಿ ಸಾರ್ವಜನಿಕರಲ್ಲಿ ಮತ ಕೇಳಿದ್ದಾರೆ. ಮಾವಿನಹಳ್ಳಿಯ ಕೆರೆ ತುಂಬಿಸಿದ್ದೇನೆ. ಹಾಗಾಗಿ ನೀವು ನನಗೆ ಸಹಾಯ ಮಾಡಬೇಕು. ಕೆ.ಆರ್.ಪೇಟೆಯಲ್ಲಿ ನಿಮ್ಮ ಬಂಧು-ಬಳಗ ಇದ್ದರೆ ಒಂದ್ ವೋಟ್ ಹಾಕಿಸಿ ಎಂದು ಕಾರ್ಯಕ್ರಮದಲ್ಲಿ ಸೇರಿದ್ದ ಜನರಿಗೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕೆ.ಆರ್.ಪೇಟೆ ಚುನಾವಣೆ: 2018ರಲ್ಲಿ ಕೇವಲ 9,819 ಮತ ಗಳಿಸಿದ್ದ ಬಿಜೆಪಿ ಅಭ್ಯರ್ಥಿ
ನನ್ನ ಕಾಲದಲ್ಲಿ ಕೆ.ಆರ್.ಪೇಟೆಯ ಎಲ್ಲಾ ಕೆರೆಯೂ ಭರ್ತಿಯಾಗಿವೆ. ಸಣ್ಣ ನೀರಾವರಿ ಸಚಿವನಾಗಿ ಅನೇಕ ಕೆಲಸ ಮಾಡಿದ್ದೇನೆ. ನನ್ನ ಪರವಾಗಿ ಬಿಜೆಪಿ ಅಭ್ಯರ್ಥಿಗೆ ಒಂದ್ ವೋಟ್ ಹಾಕಿ ಅಂತ ನಿಮ್ಮ ಸಂಬಂಧಿಕರಿಗೆ ಕೇಳಿಕೊಳ್ಳಿ ಎಂದು ಸಚಿವರು ತುರುವೇಕೆರೆ ಕ್ಷೇತ್ರದ ಜನರಿಗೆ ಕೇಳಿಕೊಂಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೆ.ಆರ್.ಪೇಟೆ ಉಸ್ತುವಾರಿ ಕೊಟ್ಟಿದ್ದಾರೆ. ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿಲ್ಲ. ಹೀಗಾಗಿ ಕೆಳಮಟ್ಟದಿಂದ ಸಂಘಟನೆ ಕೆಲಸ ಮಾಡಬೇಕಿದೆ ಎಂದು ಸಿಎಂ ಬಳಿ ಹೇಳಿಕೊಂಡಿದ್ದೇನೆ. ಇದಕ್ಕೆ ಸಲಹೆ ನೀಡಿದ ಸಿಎಂ, ನೀನು ಸಣ್ಣ ನೀರಾವರಿ ಸಚಿವನಾಗಿ ಒಳ್ಳೆಯ ಕೆಲಸ ಮಾಡಿರುವೆ. ಅದನ್ನು ಮುಂದಿಟ್ಟುಕೊಂಡು ಮತ ಕೇಳು, ಜಾತಿ ರಾಜಕಾರಣ ಬೇಡ ಎಂದಿದ್ದಾರೆ. ಹೀಗಾಗಿ ನಾನು ಜವಾಬ್ದಾರಿ ಒಪ್ಪಿಕೊಂಡಿರುವೆ. ನೀವೆಲ್ಲಾ ನಿಮ್ಮ ನೆಂಟರಿಷ್ಟರಿಗೆ ಹೇಳಿ ಒಂದು ವೋಟ್ ಹಾಕಿಸಿ ಪುಣ್ಯ ಮಾಡಿ ಎಂದು ಸಚಿವರು ಅಂಗಲಾಚಿದರು.