Tag: ಮಾಧುಸ್ವಾಮಿ

  • ರಾತ್ರಿ 11 ಗಂಟೆಗೆ ನಿರ್ಧಾರ – ತಡವಾಗಿದ್ದಕ್ಕೆ ಕಾರಣ ತಿಳಿಸಿದ ಮಾಧುಸ್ವಾಮಿ

    ರಾತ್ರಿ 11 ಗಂಟೆಗೆ ನಿರ್ಧಾರ – ತಡವಾಗಿದ್ದಕ್ಕೆ ಕಾರಣ ತಿಳಿಸಿದ ಮಾಧುಸ್ವಾಮಿ

    ನವದೆಹಲಿ: ಯಡಿಯೂರಪ್ಪನವರು ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬುದು ತುಂಬಾ ದಿನಗಳ ಬಯಕೆಯಾಗಿತ್ತು ಅದೀಗ ಈಡೇರಿದೆ. ರಾಜ್ಯಕ್ಕೆ ಏನೇನು ಒಳ್ಳೆಯ ಕೆಲಸಗಳಾಗಬೇಕೋ ಅದೆಲ್ಲವನ್ನು ಯಡಿಯೂರಪ್ಪನವರು ಮಾಡುತ್ತಾರೆ ಎಂದು ಮಾಧುಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

    ದೆಹಲಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಅಸ್ತಿತ್ವದ ನಂತರ ತುಂಬಾ ಸಂಕಟವಾಗಿತ್ತು. ಯಡಿಯೂರಪ್ಪನವರಿಗೂ ಸಹ ತುಂಬಾ ದಿನಗಳಿಂದ ಒಂದು ರೀತಿಯ ಬೇಸರ ಕಾಡುತ್ತಿತ್ತು. ಇದೀಗ ಮರಳಿ ಅಧಿಕಾರಕ್ಕೇರುತ್ತಿರುವುದು ಹಾಗೂ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗುತ್ತಿರುವುದು ತುಂಬಾ ಸಂತಸ ತಂದಿದೆ. ರಾಜ್ಯಕ್ಕೆ ಏನೇನು ಒಳ್ಳೆಯ ಕೆಲಸ ಮಾಡಬೇಕೋ ಅದನ್ನು ಅವರು ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟರು.

    ವಿಧಾನಸಭೆ ಚುನಾವಣೆಯಲ್ಲಿ ಮತದಾರರು 105 ಜೊತೆಗೆ ಇನ್ನು 5-6 ಸ್ಥಾನ ನೀಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಕೆಲವೇ ಸ್ಥಾನ ಕಡಿಮೆ ಬಂದಿದ್ದರಿಂದ ದೊಡ್ಡ ಪಾರ್ಟಿಯಾಗಿದ್ದರೂ ಅಧಿಕಾರದಿಂದ ದೂರ ಉಳಿಯಬೇಕಾಯಿತು. ಹೀಗಾಗಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. ನಂತರ ಅವರ ಕಚ್ಚಾಟ ಶುರುವಾಯಿತು. ಆಗಲೇ ಇವರು ತುಂಬಾ ದಿನ ಉಳಿಯುವುದಿಲ್ಲ ಎಂದು ನಾವು ಅಂದುಕೊಂಡಿದ್ದೆವು. ನಂತರ ನಡೆದ ಲೋಕಸಭಾ ಚುನಾವಣೆ ವೇಳೆ ಮತದಾರರು ಜಾಗೃತಿಯಿಂದ ಮತ ಹಾಕಿದರು ಎಂದು ತಿಳಿಸಿದರು.

    ವಿಧಾನಸಭೆಯಲ್ಲಾದ ತಪ್ಪು ಲೋಕಸಭೆಯಲ್ಲಾಗಬಾರದು ಎಂದು ಉತ್ತಮ ತೀರ್ಪು ನೀಡಿದರು. ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಿಸಿ ಕೊಟ್ಟರು. ಇದರಿಂದ ಜನರ ಅಭಿಪ್ರಾಯವೇನು ಎಂಬುದು ಸ್ಪಷ್ಟವಾಗುತ್ತದೆ. ಇಡೀ ರಾಜ್ಯದ ಜನತೆ ಇದೀಗ ನಮ್ಮ ಜೊತೆಗಿದ್ದಾರೆ. ಮೈತ್ರಿ ಸರ್ಕಾರದ ಶಾಸಕರಿಗೂ ಅಲ್ಲಿನ ದುರಾಡಳಿತ ನೋಡಿ ಬೇಸರವಾಯಿತು. ಶಾಸಕರು ನಿರೀಕ್ಷಿಸಿದ ಕೆಲಸ ಆಗುತ್ತಿಲ್ಲ. ಕೆಲವೇ ಜನರ ಕೆಲಸವಾಗುತ್ತದೆ. ಒಂದೇ ಕುಟುಂಬದ ಮಾತನ್ನು ಎಲ್ಲರೂ ಕೇಳುವ ಪರಿಸ್ಥಿತಿ ಇದೆ ಎಂದು ಅವರಲ್ಲೇ ಭಿನ್ನಾಭಿಪ್ರಾಯ ಮೂಡಿ ಹೊರ ನಡೆದರು. ಇದೇ ಸಂದರ್ಭವನ್ನು ನಾವು ಸದ್ಬಳಕೆ ಮಾಡಿಕೊಂಡಿದ್ದೇವೆ ಎಂದು ಹೇಳಿ ಸರ್ಕಾರ ರಚನೆಗೆ ಮುಂದಾಗಿದನ್ನು ಸಮರ್ಥಿಸಿಕೊಂಡರು.

    ನಮ್ಮ ಪಕ್ಷದಲ್ಲಿ ಹೈ ಕಮಾಂಡ್ ಅವರೇ ಅಂತಿಮ ನಿರ್ಧಾರ ಮಾಡಬೇಕು. ಹೀಗಾಗಿ ನಾವು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೆವು. ಈ ವೇಳೆ ಅವರು ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು. ಅವರು ಸಂಸತ್‍ನಲ್ಲಿ ಕಾರ್ಯನಿರತರಾಗಿದ್ದರಿಂದ ರಾತ್ರಿ ವೇಳೆ ಸಭೆ ನಡೆಸಿ ಚರ್ಚಿಸಿ, ರಾತ್ರಿ 11ಕ್ಕೆ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಸರ್ಕಾರ ರಚನೆಗೆ ತಡವಾಗಿ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.

    ನಮ್ಮದು 105 ಇದ್ದರೂ ಇಬ್ಬರು ಪಕ್ಷೇತರರು ಬೆಂಬಲ ನೀಡಿದ್ದಾರೆ. ಅಲ್ಲದೆ, ಬಿಎಸ್‍ಪಿಯ ಮಹೇಶ್ ಅವರನ್ನು ಉಚ್ಛಾಟನೆ ಮಾಡಿದ್ದಾರೆ. ಬಿಎಸ್‍ಪಿ ಹೈ ಕಮಾಂಡ್ ಮಹೇಶ್ ಅವರಿಗೆ ಮೈತ್ರಿ ಸರ್ಕಾರಕ್ಕೆ ಮತ ಹಾಕಿ ಎಂದರೂ ಸಹ ಹೋಗಿಲ್ಲದ್ದನ್ನು ಕಂಡರೆ ಅವರು ನಮ್ಮ ಪರವಾಗಿದ್ದಾರೆ ಎಂದರ್ಥ. ಹೀಗಾಗಿ ನಾವು 108 ಜನ ಆಗುತ್ತೇವೆ. ಬಹುಮತಕ್ಕೆ ಕೇವಲ 5 ಸ್ಥಾನ ಮಾತ್ರ ವ್ಯತ್ಯಾಸವಾಗಲಿದೆ ಎಂದು ಮಾಧುಸ್ವಾಮಿ ತಿಳಸಿದರು.

    ಈ ಹಿಂದೆ ಯಡಿಯೂರಪ್ಪನವರು ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ರಾಜ್ಯಪಾಲರು ಸಂವಿಧಾನದಕ್ಕೆ ಬದ್ಧವಾಗಿ ಕ್ರಮ ಕೈಗೊಂಡರು. ಅಲ್ಲದೆ, ಮೈತ್ರಿ ನಾಯಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ, ಕೇವಲ 24 ಗಂಟೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚಿಸಿದರು. ಹೀಗಾಗಿ ಗಲಿಬಿಲಿಯಾಯಿತು. ಅಲ್ಲದೆ, ಆಗ ಪಕ್ಷೇತರರು ಸಹ ಅವರೊಂದಿಗೆ ಹೋಗಿದ್ದರು. ಇಂದು ಆ ಪರಿಸ್ಥಿತಿ ಇಲ್ಲ ಅವರೊಂದಿಗೆ ಪಕ್ಷೇತರರು, ಬಿಎಸ್‍ಪಿ ಶಾಸಕರಿಲ್ಲ. ನಾವು ಒಟ್ಟು 108 ಜನ ಇದ್ದೇವೆ. ಅಲ್ಲದೆ, ಅತೃಪ್ತ ಶಾಸಕರೂ ಸಹ ಯಾವುದೇ ಕಾರಣಕ್ಕೂ ಮರಳಿ ಮೈತ್ರಿ ಪಕ್ಷಗಳನ್ನು ಸೇರುವುದಿಲ್ಲ. ಹೀಗಾಗಿ ಸರ್ಕಾರ ನಡೆಸುವ ಕುರಿತು ನಮಗೆ ವಿಶ್ವಾಸವಿದೆ ಎಂದರು.

  • ದೇವೇಗೌಡರನ್ನು ಹೊರಗೆ ಹಾಕಿದ್ದ ಕುಮಾರಸ್ವಾಮಿ – ಸಿಎಂ ವಿರುದ್ಧ ಮಾಧುಸ್ವಾಮಿ ಆರೋಪ

    ದೇವೇಗೌಡರನ್ನು ಹೊರಗೆ ಹಾಕಿದ್ದ ಕುಮಾರಸ್ವಾಮಿ – ಸಿಎಂ ವಿರುದ್ಧ ಮಾಧುಸ್ವಾಮಿ ಆರೋಪ

    – ಅಪ್ಪನ ಮೇಲೆ ಕಲ್ಲೊಡೆಸಿದ್ರೂ ಊಟ ಹಾಕಿದ್ದು ನಾವು

    ತುಮಕೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಮಾಧುಸ್ವಾಮಿ ಗಂಭೀರ ಆರೋಪ ಮಾಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರನ್ನು ಕುಮಾರಸ್ವಾಮಿ ಮನೆಯಿಂದ ಹೊರಹಾಕಿದ್ದರು. ಬೆಂಗಳೂರಿನ ವಿದ್ಯಾರ್ಥಿ ಭವನದ ಬಳಿ ಪ್ರಚಾರ ಮಾಡುತ್ತಿದ್ದಾಗ ಕಲ್ಲಿನಿಂದ ಹೊಡೆಸಿದ್ದರು ಎಂದು ಮಾಧುಸ್ವಾಮಿ ಆರೋಪಿಸಿದ್ದಾರೆ.

    ವಿಡಿಯೋದಲ್ಲೇನಿದೆ?
    ದೇವೇಗೌಡರು ಹಳೇ ವಿದ್ಯಾರ್ಥಿ ಭವನದ ಸ್ಟೇಷನ್ ಎದುರು ಭಾಷಣ ಮಾಡುವಾಗ ಕುಮಾರಸ್ವಾಮಿ ಕಲ್ಲಿನಲ್ಲಿ ಹೊಡೆಸಿದ್ದರು. ನಾನು ಎದೆಕೊಟ್ಟೆ. ತಬ್ಬಿಕೊಂಡು ದೇವೇಗೌಡರು ಅತ್ತಿದ್ದರು. ನನ್ನ ಮಕ್ಕಳಾದ್ರೂ ಬಂದು ಕಲ್ಲೇಟು ತಿನ್ನುತ್ತಿರಲಿಲ್ಲ. ನೀನು ತಿಂದೆ ಅಂದಿದ್ದರು. ದೇವೇಗೌಡರನ್ನು ಒದ್ದು ಆಚೆಗೆ ಹಾಕಿದ್ದರು. ಉಗ್ರಪ್ಪ, ದೇವೇಗೌಡರ ಬೆನ್ನುಜ್ಜುತ್ತಿದ್ದರು. ಕುಮಾರಸ್ವಾಮಿಯವರು ದೇವೇಗೌಡರನ್ನು ಮನೆಯಿಂದ ಹೊರಗೆ ಅಟ್ಟಿದ್ದರು ಎಂದು ಶಾಸಕರು ವಿಡಿಯೋದಲ್ಲಿ ಹೇಳಿದ್ದಾರೆ.

    ಬೆಂಗಳೂರಿನ ಕುಮಾರಪಾರ್ಕಿನ ಸಣ್ಣ ಕ್ವಾಟರ್ಸ್ ನಲ್ಲಿ ವಾಸ ಮಾಡುತ್ತಿದ್ದರು. ದೇವೇಗೌಡರನ್ನು ಮನೆಯಲ್ಲಿ ಇಟ್ಟುಕೊಂಡಿರಲಿಲ್ಲ. ಈಗ ಬರಲಿ ಕುಮಾರಸ್ವಾಮಿ ನನ್ನ ಬಳಿ ಯಾಕಪ್ಪ ಅವತ್ತು ನಿಮ್ಮ ಅಪ್ಪನನ್ನು ಹೊರಗೆ ಹಾಕಿದ್ದೆ ಎಂದು ಕೇಳ್ತೀನಿ. ಟಿಫನ್ ಕ್ಯಾರಿಯರ್ ನಲ್ಲಿ ಊಟ ತೆಗೆದುಕೊಂಡು ಹೋಗಿ ಕೊಡುತ್ತಿದ್ದವರು ನಾವೇ ಹೊರತು ಅವರ ಮಕ್ಕಳಲ್ಲ. ಬೆನ್ನು ತಿಕ್ಕಿದ್ದ ಉಗ್ರಪ್ಪ, ಮಾನಸಪುತ್ರ ಬಿ.ಎಲ್ ಶಂಕರ್ ಯಾಕೆ ಆಚೆ ಹೋದರು. ವೈ.ಕೆ ರಾಮಯ್ಯ ಯಾಕೆ ಕಾಂಗ್ರೆಸ್‍ಗೆ ಹೋದರು ಎಂದು ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ವಾಮಿ ಪ್ರಶ್ನಿಸಿ ಟಾಂಗ್ ನೀಡಿದ್ದಾರೆ.

    ಬಿಜೆಪಿ ಪ್ರಚಾರದ ವೇಳೆ ಮಾತನಾಡಿದ ಮಾಧುಸ್ವಾಮಿ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

  • ತನಿಖೆಯನ್ನು ಎಸ್‍ಐಟಿಗೆ ಒಪ್ಪಿಸಬೇಡಿ- ಬಿಜೆಪಿ ಶಾಸಕ ಮಾಧುಸ್ವಾಮಿ

    ತನಿಖೆಯನ್ನು ಎಸ್‍ಐಟಿಗೆ ಒಪ್ಪಿಸಬೇಡಿ- ಬಿಜೆಪಿ ಶಾಸಕ ಮಾಧುಸ್ವಾಮಿ

    ಬೆಂಗಳೂರು: ಆಪರೇಷನ್ ಆಡಿಯೋ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ಒಪ್ಪಿಸಬೇಡಿ ಎಂದು ಶಾಸಕ ಮಾಧುಸ್ವಾಮಿ ಆಗ್ರಹಿಸಿದ್ದಾರೆ.

    ಕಲಾಪದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತನಿಖೆ ಶಾಸನ ಸಭೆಯ ಅಧ್ಯಕ್ಷರಿಂದ ನಡೆಯಬೇಕು ಎಂದು ನಾವು ಬಹಳ ಸ್ಪಷ್ಟವಾಗಿಯೇ ಹೇಳಿದ್ದೇವೆ. ಅವರು ನೇಮಕ ಮಾಡಬಹುದಾದ ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ನಮ್ಮ ಅಪೇಕ್ಷೆಯಾಗಿದೆ. ಯಾಕಂದ್ರೆ ಈ ಎಲ್ಲಾ ಹಗರಣಗಳ ರೂವಾರಿ ಮುಖ್ಯಮಂತ್ರಿಗಳಾಗಿದ್ದಾರೆ.

    ಅಕಸ್ಮಾತ್ ಯಾರೋ ಒಬ್ಬರು ಸದಸ್ಯ ಸ್ಪೀಕರ್ ಬಗ್ಗೆ ಮಾತನಾಡಿದ್ರೂ ಕೂಡ ಅದನ್ನು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರು ಸಾರ್ವಜನಿಕವಾಗಿ ಚರ್ಚೆಗೆ ಬರುವಂತಹ ಸ್ಥಿತಿಗೆ ತಂದಿದ್ದಾರೆ. ಆ ಮಾತಿಗೆ ಇಷ್ಟೊಂದು ಪ್ರಚಾರ ಕೊಡದೇ ಹೋಗಿದ್ರೆ ಇಂದು ರಮೇಶ್ ಕುಮಾರ್ ಅವರು ಈ ರೀತಿ ಮಾತನಾಡಬೇಕಾದ ಅಗತ್ಯ ಇರಲಿಲ್ಲ ಅಂದ್ರು.

    ಯಾರೋ ಖಾಸಗಿಯಾಗಿ ಮಾತನಾಡಿದ್ದನ್ನು ಪ್ರಚಾರ ಕೊಟ್ಟು ಶಾಸನ ಸಭಾ ಅಧ್ಯಕ್ಷರ ಸ್ಥಾನಕ್ಕೆ ಕಳಂಕ ಬಂತು ಎಂದು ಹೇಳಿ ಅವರು ಮನಸ್ಸಿಗೆ ತೆಗೆದುಕೊಂಡಿದ್ದಾರೆ. ಇವರಿಗೆ ಗೊತ್ತಿತ್ತಲ್ವ ಅವರು ಬಹಳ ಸೂಕ್ಷ್ಮವಾದ ವ್ಯಕ್ತಿಯಾಗಿದ್ದು, ಅವರು ಇಂತಹ ವಿಚಾರಗಳನ್ನು ಮನಸ್ಸಿಗೆ ತೆಗೆದುಕೊಳ್ಳುತ್ತಾರೆ ಎಂದು ಕುಮಾರಸ್ವಾಮಿಗೆ ಗೊತ್ತಿದ್ದು ಅವರು ಅದನ್ನು ಸಾರ್ವಜನಿಕವಾಗಿ ಮಾತಾಡಿ ಇಷ್ಟೊಂದು ದೊಡ್ಡ ಸುದ್ದಿ ಮಾಡುವ ಅವಶ್ಯಕತೆ ಇರಲಿಲ್ಲ. ಚರ್ಚೆಯನ್ನು ಮೊದಲನೇ ಪಾರ್ಟ್‍ಗೆ ನಿಲ್ಲಬಹುದಾಗಿತ್ತು. ತನಿಖೆ ಶುರುವಾದಾಗ ಇದನ್ನು ಹೇಳಬಹುದಾಗಿತ್ತು. ಅವರ ಅಧೀನದಲ್ಲಿರುವ ಇಲಾಖೆಗಳು, ತನಿಖಾ ಸಂಸ್ಥೆಗಳಿಂದ ನ್ಯಾಯವಾದ ತನಿಖೆ ಆಗುತ್ತೆ ಎಂದು ನಮಗೆ ವಿಶ್ವಾಸ ಇಲ್ಲ. ಹೀಗಾಗಿ ಮರುಪರಿಶೀಲನೆ ಮಾಡಿ ಎಂದು ಸದನದಲ್ಲಿ ಸ್ಪೀಕರ್ ಅವರನ್ನು ಕೇಳಿಕೊಳ್ಳುವುದಾಗಿ ಹೇಳಿದ್ದಾರೆ.

    ಸ್ಪೀಕರ್ ಬಗ್ಗೆ ಮಾತನಾಡಿರುವವರನ್ನು ಬಿಟ್ಟು ಬಿಡಿ ಎಂದು ಹೇಳುವ ಸ್ಥಿತಿಯಲ್ಲಿ ನಾವಿಲ್ಲ. ಆದ್ರೆ ಅವರಿಗೆ ಅವಕಾಶ ಕೊಡಬೇಡಿ ಎಂದು ಅವರು ಮನವಿ ಮಾಡಿಕೊಂಡರು. ಇದೇ ವೇಳೆ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಎಲ್ಲಾ ಶಾಸಕರು ಎಸ್‍ಐಟಿ ತನಿಖೆಯನ್ನು ವಿರೋಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕರೀರಿ ಆ ಮಾಧುಸ್ವಾಮಿನ- ಶಾಸಕರ ವಿರುದ್ಧ ಬಿಎಸ್‍ವೈ ಕೆಂಡಾಮಂಡಲ

    ಕರೀರಿ ಆ ಮಾಧುಸ್ವಾಮಿನ- ಶಾಸಕರ ವಿರುದ್ಧ ಬಿಎಸ್‍ವೈ ಕೆಂಡಾಮಂಡಲ

    ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಆಪರೇಷನ್ ಆಡಿಯೋ ಸಾಕಷ್ಟು ಗದ್ದಲವೆಬ್ಬಿಸಿದ್ದು, ಕಲಾಪ ಮುಕ್ತಾಯದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕೆಂಡಾಮಂಡಲರಾಗಿದ್ದಾರೆ.

    ಕಲಾಪ ಮುಗಿಸಿ ಹೊರಬಂದ ನಂತರ ವಿರೋಧ ಪಕ್ಷದ ಮೊಗಸಾಲೆಯಲ್ಲಿ ಕುಳಿತಿದ್ದ ಶಾಸಕರ ಬಳಿ ಬಂದ ಬಿಎಸ್‍ವೈ ಬಂದು ಕರೀರಿ ಆ ಮಾಧುಸ್ವಾಮಿನ ಎಂದು ಗರಂ ಆಗಿದ್ದಾರೆ. ಮಾತನಾಡಲು ಪ್ಲಾನ್ ಇರಲಿಲ್ಲ ಎಂಬುದು ಅವರ ಅಸಮಾಧಾನ ಹಾಗೂ ಸಿಟ್ಟಿಗೆ ಕಾರಣವಾಗಿದೆ. ಪ್ಲಾನ್ ಮಾಡಿಲ್ಲ, ಏನೂ ಇಲ್ಲ. ಒಬ್ಬೊಬ್ಬರೂ ಒಂದೊಂದು ರೀತಿ ಮಾತನಾಡಿದ್ರೆ ಹೇಗೆ. ಎಂದು ಬಿಎಸ್‍ವೈ ಸಿಡಿಮಿಡಿಗೊಂಡಿದ್ದಾರೆ.

    ಕಲಾಪ ಮುಂದೂಡುತ್ತಿದ್ದಂತೆಯೇ ತನ್ನ ಶಾಸಕರನ್ನು ಎಲ್ಲರೂ ಬನ್ನಿ ಎಂದು ಹೇಳಿ ಅಲ್ಲೇ ಇದ್ದ ಕಚೇರಿಗೆ ಶಾಸಕರನ್ನು ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಆಪರೇಷನ್ ಆಡಿಯೋ ಸದನದಲ್ಲಿ ನಡೆದಿಲ್ಲ: ಬಿಜೆಪಿ ಶಾಸಕ ಮಾಧುಸ್ವಾಮಿ

    ಮಾಧುಸ್ವಾಮಿ ಹೇಳಿದ್ದೇನು..?
    ಆಡಿಯೋ ವಿಚಾರವನ್ನು ಅಷ್ಟೊಂದು ಗಂಭಿರವಾಗಿ ತೆಗೆದುಕೊಳ್ಳಬೇಡಿ. ಯಾಕಂದ್ರೆ ಇದು ಸದನದ ಹೊರಗಡೆ ನಡೆದ ಘಟನೆಯಾಗಿದೆ. ಹೊರಗಡೆ ಎಲ್ಲರ ಬಗ್ಗೆ ಮಾತನಾಡುತ್ತಾರೆ. ಅದರ ಆಡಿಯೋಗಳು ನನ್ನಲ್ಲಿದೆ. ನೀವು ಅವಕಾಶ ಕೊಟ್ಟರೇ ಈಗಲೇ ಬಹಿರಂಗಪಡಿಸುತ್ತೇನೆ. ಹೀಗಾಗಿ ಇಷ್ಟು ಸಣ್ಣ ವಿಚಾರವನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದು ಶಾಸಕ ಮಾಧುಸ್ವಾಮಿ ಹೇಳಿದ್ದರು.

    ಒಟ್ಟಿನಲ್ಲಿ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ರಮೇಶ್ ಕುಮಾರ್ ಅವರು ಎಸ್‍ಐಟಿ ತನಿಖೆಗೆ ಸೂಚನೆ ನೀಡಿದ್ದು, 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಪರೇಷನ್ ಆಡಿಯೋ ಸದನದಲ್ಲಿ ನಡೆದಿಲ್ಲ: ಬಿಜೆಪಿ ಶಾಸಕ ಮಾಧುಸ್ವಾಮಿ

    ಆಪರೇಷನ್ ಆಡಿಯೋ ಸದನದಲ್ಲಿ ನಡೆದಿಲ್ಲ: ಬಿಜೆಪಿ ಶಾಸಕ ಮಾಧುಸ್ವಾಮಿ

    ಬೆಂಗಳೂರು: ಇಂದು ಸದನದಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಿದೆ ಎನ್ನಲಾದ ಆಡಿಯೋ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಆರಂಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಬೆಂಗಳೂರಿನ ಬಾಡಿಗೆ ಮನೆಯಲ್ಲಿದ್ದೇನೆ. ಅಷ್ಟು ದೊಡ್ಡ ಪ್ರಮಾಣದ ಹಣವನ್ನು ನಾನು ಎಲ್ಲಿ ಇಟ್ಟುಕೊಳ್ಳಲಿ ಎಂದು ಹೇಳುತ್ತಾ ಭಾವುಕರಾಗಿ ಕಣ್ಣೀರಿಟ್ಟರು.

    ಸ್ಪೀಕರ್ ಮಾತಿನ ಮಧ್ಯೆ ಪ್ರವೇಶಿಸಿದ ಸಚಿವ ಕೃಷ್ಣೆಬೈರೇಗೌಡರು, ವಿಪಕ್ಷ ನಾಯಕರ ಮೇಲೆ ಆರೋಪ ಮಾಡಿದರು. ಈ ವೇಳೆ ಬಿಜೆಪಿ ಶಾಸಕ ಮಾಧುಸ್ವಾಮಿ, ಆಪರೇಷನ್ ಕಮಲ ಸದನದ ಒಳಗಡೆ ನಡೆದಿಲ್ಲ. ಹೀಗಾಗಿ ಆ ವಿಚಾರವನ್ನು ಇಲ್ಲಿ ಮಾತನಾಡೋದು ಸರಿಯಲ್ಲ ಎಂದು ಆಗ್ರಹಿಸಿದರು.

    ಹೊರಗಡೆ ಮಾತನಾಡೋದನ್ನು ನೀವು ಇಷ್ಟು ಸೀರಿಯಸ್ ಆಗಿ ತೆಗೆದುಕೊಂಡು ಭಾವುಕರಾಗುವುದು ಬೇಡ. ಸದನದಲ್ಲಿ ಈ ರೀತಿಯಾಗಿ ನಡೆದಿದ್ದರೆ ಮೊದಲೇ ನಾವು ವಿರೋಧ ಮಾಡುತ್ತಿದ್ದೆವು. ಆ ವಿಚಾರ ಸದನದ ಹೊರಗಡೆ ನಡೆದಿದೆ. ನೀವು ಈ ರೀತಿ ಭಾವುಕರಾಗಿ ಮಾತನಾಡಿದ್ರೆ ನಾವು ಏನು ಮಾಡೋದು. ಮುಂದೆ ನೀವು ಏನು ಹೇಳಬಹುದು ಎಂಬ ಭಯ ಶುರುವಾಗಿದ್ದರಿಂದ ನಾನು ಮಾತನಾಡುತ್ತಿದ್ದೇನೆ ಎಂದರು.

    ಕೃಷ್ಣಬೈರೇಗೌಡರು ಈ ರೀತಿ ನಮ್ಮ ಮೇಲೆ ಆರೋಪ ಮಾಡೋದು ಸರಿಯಲ್ಲ. ಎಲ್ಲಿ ನಡೆದಿದೆ, ಯಾರು ಮಾತನಾಡಿದ್ದಾರೆ ಎಂಬುವುದು ಸ್ಪಷ್ಟವಾಗಿಲ್ಲ. ಎಲ್ಲೋ ನಡೆದ ವಿಚಾರವನ್ನು ಇಷ್ಟೊಂದು ತೀಕ್ಷ್ಣವಾಗಿ ಮಾತಾಡೋದು ತಪ್ಪಾಗುತ್ತದೆ. ರಮೇಶ್ ಕುಮಾರ್ ಅವರ ಬಗ್ಗೆ ಯಾರು ಏನು ಮಾತನಾಡ್ತಾರೆ ಎಂಬ ಆಡಿಯೋಗಳು ನಮ್ಮ ಬಳಿ ಇವೆ. ನೀವು ಅವಕಾಶ ನೀಡಿದ್ರೆ, ಸದನದಲ್ಲಿ ಹಾಜರು ಮಾಡುತ್ತೇನೆ. ಈ ಆಡಿಯೋಗೆ ಸಂಬಂಧಿಸಿದಂತೆ ತನಿಖೆ ನಡೆಸಬಹುದು. ಒಂದು ವೇಳೆ ನಮ್ಮಿಂದ ತಪ್ಪಾಗಿದ್ರೆ, ನಾವು ವಿಷಾದ ವ್ಯಕ್ತಪಡಿಸುತ್ತೇವೆ. ಸದನದಲ್ಲಿ ಮಾತನಾಡಿದ್ರೆ ಹಕ್ಕುಚ್ಯುತಿ ಮಾಡಬಹುದು ಎಂದು ಕೃಷ್ಣೇಬೈರೇಗೌಡರಿಗೆ ತಿರುಗೇಟು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv