Tag: ಮಾಧವಿ ಲತಾ

  • ಚೆನಾಬ್ ರೈಲ್ವೆ ಸೇತುವೆ ನಿರ್ಮಾಣ ಕಾರ್ಯದಲ್ಲಿ 17 ವರ್ಷ ಕಳೆದ IISC ಪ್ರೊಫೆಸರ್ ಮಾಧವಿ ಲತಾ

    ಚೆನಾಬ್ ರೈಲ್ವೆ ಸೇತುವೆ ನಿರ್ಮಾಣ ಕಾರ್ಯದಲ್ಲಿ 17 ವರ್ಷ ಕಳೆದ IISC ಪ್ರೊಫೆಸರ್ ಮಾಧವಿ ಲತಾ

    ನವದೆಹಲಿ: ಜಮ್ಮು ಕಾಶ್ಮೀರದಲ್ಲಿರುವ ವಿಶ್ವದ ಅತಿ ಎತ್ತರದ ‘ಚೆನಾಬ್’ ರೈಲ್ವೆ ಸೇತುವೆಯನ್ನು (Chenab Railway Bridge) ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಚೆನಾಬ್ ಸೇತುವೆ ನಿರ್ಮಾಣ ಕಾರ್ಯದಲ್ಲಿ ಅನೇಕ ತಂತ್ರಜ್ಞರು ಕೊಡುಗೆ ನೀಡಿದ್ದಾರೆ. ಈ ಪೈಕಿ ಐಐಎಸ್‌ಸಿ ಪ್ರೊಫೆಸರ್ (IISC) ಮಾಧವಿ ಲತಾ (Madhavi Latha) ಕೂಡ ಒಬ್ಬರು. ಚೆನಾಬ್ ನಿರ್ಮಾಣ ಕಾರ್ಯದಲ್ಲಿ ಮಾಧವಿ ಲತಾ 17 ವರ್ಷಗಳನ್ನು ಕಳೆದಿದ್ದಾರೆ.

    ಹೌದು, ಚೆನಾಬ್ ಸೇತುವೆ ನಿರ್ಮಾಣ ಕಾರ್ಯದಲ್ಲಿ ಮಾಧವಿ ಲತಾ ಅವರ ಕೊಡಗೆ ಅಪಾರವಾದದ್ದು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಪ್ರಾಧ್ಯಾಪಕರಾಗಿರುವ ಅವರು, ಚೆನಾಬ್ ಸೇತುವೆ ಯೋಜನೆಯಲ್ಲಿ ಭೂತಾಂತ್ರಿಕ ಸಲಹೆಗಾರರಾಗಿ 17 ವರ್ಷಗಳ ಕಾಲ ತೊಡಗಿಸಿಕೊಂಡಿದ್ದರು. ಈ ಸೇತುವೆ ರಚನೆಯ ಯೋಜನೆ, ವಿನ್ಯಾಸ ಮತ್ತು ನಿರ್ಮಾಣದಲ್ಲಿ ಭೂಪ್ರದೇಶದಿಂದ ಉಂಟಾಗುವ ಅಡೆತಡೆಗಳ ಮೇಲೆ ಗಮನ ಕೇಂದ್ರೀಕರಿಸಿದ್ದರು.

    ಮಾಧವಿ ಲತಾ ಸಾಧನೆಗಳೇನು?
    ಮಾಧವಿ ಲತಾ 1992ರಲ್ಲಿ ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಬಿ.ಟೆಕ್ ಪದವಿ ಗಳಿಸಿದರು. ನಂತರ ತೆಲಂಗಾಣದ ವಾರಂಗಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಭೂತಾಂತ್ರಿಕ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್ ವಿದ್ಯಾರ್ಥಿನಿಯಾಗಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಅಲ್ಲದೇ 2000ನೇ ಇಸವಿಯಲ್ಲಿ ಐಐಟಿ ಮದ್ರಾಸ್‌ನಿಂದ ಜಿಯೋಟೆಕ್ನಿಕಲ್ ಎಂಜಿನಿಯರಿಂಗ್‌ನಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.

    ತಮ್ಮ ಸಾಧನೆಗಾಗಿ ಮಾಧವಿ ಲತಾ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2021ರಲ್ಲಿ ಅವರಿಗೆ ಭಾರತೀಯ ಭೂತಾಂತ್ರಿಕ ಸೊಸೈಟಿಯಿಂದ ಅತ್ಯುತ್ತಮ ಮಹಿಳಾ ಭೂತಾಂತ್ರಿಕ ಸಂಶೋಧಕಿ ಪ್ರಶಸ್ತಿಯನ್ನು ನೀಡಲಾಯಿತು. ಬಳಿಕ 2022ರಲ್ಲಿ ಅವರು ಭಾರತದ ಸ್ಟೀಮ್‌ನಲ್ಲಿ ಟಾಪ್ 75 ಮಹಿಳೆಯರಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟರು. ಪ್ರಸ್ತುತ ಮಾಧವಿ ಲತಾ ಅವರು ಪ್ರಸ್ತುತ ಐಐಎಸ್‌ಸಿಯಲ್ಲಿ HAG ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಚೆನಾಬ್ ಸೇತುವೆ ಕಾರ್ಯದಲ್ಲಿ ಮಾಧವಿ ಲತಾ ಪಾತ್ರ:
    1,315 ಮೀಟರ್ ಉದ್ದದ ಈ ಬ್ರಿಡ್ಜ್ ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಸಂಪರ್ಕದ ಪ್ರಮುಖ ಭಾಗವಾಗಿದೆ. ಅಷ್ಟೇ ಅಲ್ಲದೆ, ಭಾರತೀಯ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ.

    ಚೆನಾಬ್ ಸೇತುವೆಯ ಗುತ್ತಿಗೆಪಡೆದ ಆಫ್ಕಾನ್ಸ್ ಸಂಸ್ಥೆಯ ಮನವಿಯ ಮೇರೆಗೆ ಮಾಧವಿ ಲತಾ ನಿರ್ಮಾಣ ಕಾಮಗಾರಿಗೆ ಮಾರ್ಗದರ್ಶನ ಮಾಡಿದ್ದಾರೆ. ಇಳಿಜಾರು ಸ್ಥಿರೀಕರಣ ಮತ್ತು ಸೇತುವೆಯ ಅಡಿಪಾಯದ ಕುರಿತು ಮಾಧವಿ ಲತಾ ಮಾರ್ಗದರ್ಶನ ಮಾಡಿದ್ದಾರೆ. 1,486 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಸೇತುವೆ ಒಂದು ಶತಮಾನಕ್ಕೂ ಹೆಚ್ಚು ಕಾಲ ಅತ್ಯಂತ ಕಠಿಣ ನೈಸರ್ಗಿಕ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

    ಸೇತುವೆಯ ಅಡಿಭಾಗದಲ್ಲಿ ಬರುವ ಬಂಡೆಗಳ ನಡುವೆ ಹೆಚ್ಚಿನ ಅಂತರವಿದ್ದು, ಇಳಿಜಾರುಗಳು ತುಂಬಾ ಕಡಿದಾಗಿರುವುದರಿಂದ ಸ್ಥಿರತೆಯ ಬಗ್ಗೆ ಕಳವಳಗಳಿದ್ದವು. ಹೀಗಾಗಿ ಇಳಿಜಾರುಗಳಲ್ಲಿ ಕಮಾನು ಆಧಾರಸ್ತಂಭಗಳು ಮತ್ತು ಕಂಬಗಳಿಗೆ ಅಡಿಪಾಯಗಳ ನಿರ್ಮಾಣವು ಪ್ರಾಥಮಿಕ ಸವಾಲುಗಳಲ್ಲಿ ಒಂದಾಗಿತ್ತು. ಗಂಟೆಗೆ 220 ಕಿ.ಮೀ. ವೇಗದಲ್ಲಿ ಬೀಸುವ ಗಾಳಿಯನ್ನು ತಡೆದುಕೊಳ್ಳಲು ಸೇತುವೆಯ ಅಡಿಪಾಯವನ್ನು ದೊಡ್ಡದಾಗಿ ಮತ್ತು ಹೆಚ್ಚು ಆಳದಿಂದಲೇ ಮಾಡಲಾಗಿತ್ತು. ಅಲ್ಲದೆ ಈ ಸೇತುವೆ ಇರುವ ಪ್ರದೇಶ ಭೂಕಂಪನ ವಲಯದಲ್ಲಿ ಬರುತ್ತಿದ್ದು, ಎಂಜಿನಿಯರ್‌ಗಳಿಗೆ ಹೆಚ್ಚಿನ ಸವಾಲು ಒಡ್ಡಿತ್ತು. ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು ನಾವು ವಿನ್ಯಾಸ ಮಾರ್ಪಾಡುಗಳನ್ನು ಮಾಡಿದ್ದೇವೆ ಎಂದು ಮಾಧವಿ ಲತಾ ತಿಳಿಸಿದ್ದಾರೆ.

  • ಬುರ್ಖಾ ತೆಗೆದು ವೋಟರ್‌ ಐಡಿ ತೋರಿಸಲು ಹೇಳಿದ ಮಾಧವಿ ಲತಾ ವಿರುದ್ಧ ಪ್ರಕರಣ ದಾಖಲು

    ಬುರ್ಖಾ ತೆಗೆದು ವೋಟರ್‌ ಐಡಿ ತೋರಿಸಲು ಹೇಳಿದ ಮಾಧವಿ ಲತಾ ವಿರುದ್ಧ ಪ್ರಕರಣ ದಾಖಲು

    ಹೈದರಾಬಾದ್:‌ ಮುಸ್ಲಿಂ ಮಹಿಳೆಯರಿಗೆ ಬುರ್ಖಾ ತೆಗೆದು ವೋಟರ್‌ ಐಡಿ ತೋರಿಸುವಂತೆ ಒತ್ತಡ ಹೇರಿದ್ದಕ್ಕಾಗಿ ಹೈದರಾಬಾದ್‌ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ (Madhavi Latha) ವಿರುದ್ಧ ಪ್ರಕರಣ ದಾಖಲಾಗಿದೆ.

    ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ (Loksabha Elections 2024) ಸ್ಪರ್ಧಿಸುತ್ತಿರುವ ಮಾಧವಿ ಲತಾ ಅವರು ಸೋಮವಾರ ಮತದಾನ ಕೇಂದ್ರದಲ್ಲಿ ಮುಸ್ಲಿಂ ಮಹಿಳೆಯರ ಬಳಿ ಹೋಗಿ ಬುರ್ಖಾ ತೆಗೆಯುವಂತೆ ಹೇಳುತ್ತಿರುವ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಭಾರೀ ವಿವಾದ ಸೃಷ್ಟಿಸಿತ್ತು.

    ವೈರಲ್ ಆದ ವೀಡಿಯೊದಲ್ಲಿ, ಮಾಧವಿ ಲತಾ ಅವರು ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರನ್ನು ಪರಿಶೀಲನೆಗಾಗಿ ತಮ್ಮ ಬುರ್ಖಾ ತೆಗೆಯುವಂತೆ ಹೇಳುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ನೀವು ಎಷ್ಟು ವರ್ಷಗಳ ಹಿಂದೆ ಇದನ್ನು (Voter ID) ಮಾಡಿದ್ದೀರಿ ಎಂದು ಇದೇ ವೇಳೆ ಮುಸ್ಲಿಂ ಮಹಿಳೆಯರನ್ನು ಪ್ರಶ್ನಿಸಿದ್ದಾರೆ. ಜೊತೆಗೆ ಹೆಚ್ಚಿನ ಪರಿಶೀಲನೆಗಾಗಿ ಆಧಾರ್‌ ಕಾರ್ಡ್‌ (Adhar Card) ಕೂಡ ಕೊಡುವಂತೆ ಮನವಿ ಮಾಡಿದ್ದಾರೆ.

    ಈ ದೃಶ್ಯ ವೈರಲ್‌ ಆಗುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ಮಾಧವಿ ಲತಾ, ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಒಬ್ಬಳು ಅಭ್ಯರ್ಥಿಯಾಗಿದ್ದು, ಕಾನೂನಿನ ಪ್ರಕಾರ ಮುಖಕ್ಕೆ ಮಾಸ್ಕ್ ಇಲ್ಲದೆ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಹಕ್ಕು ಇದೆ. ಮುಸ್ಲಿಂ ಮಹಿಳೆಯರ ಬಳಿ ತಮ್ಮ ಬುರ್ಖಾವನ್ನು ತೆಗೆಯುವಂತೆ ಕೇಳುವುದು ದೊಡ್ಡ ವಿಷಯವಲ್ಲ, ಏಕೆಂದರೆ ನಾನು ಪರುಷ ಅಲ್ಲ, ತಾನೂ ಮಹಿಳೆಯಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

    ದಯವಿಟ್ಟು ನಾನು ಐಡಿ ಕಾರ್ಡ್‌ಗಳನ್ನು ನೋಡಿ ಮತ್ತು ಪರಿಶೀಲಿಸಬಹುದೇ ಎಂದು ತುಂಬಾ ವಿನಮ್ರತೆಯಿಂದ ಅವರಲ್ಲಿ ವಿನಂತಿಸಿದ್ದೇನೆ. ಆದರೆ ಯಾರಿಗಾದರೂ ಅದನ್ನು ದೊಡ್ಡ ಸಮಸ್ಯೆಯನ್ನು ಮಾಡಬೇಕು ಎಂದು ಬಯಸಿದರೆ, ಅವರಿಗೆ ಭಯವಿದೆ ಎಂದು ಅರ್ಥ ಅಂತಾ ಮಾಧವಿ ಲತಾ ತಿಳಿಸಿದ್ದಾರೆ. ಇತ್ತ ವೀಡಿಯೋ ವೈರಲ್‌ ಆಗುತ್ತಾ ವಿವಾದವಾಗುತ್ತಿದ್ದಂತೆಯೇ ಮಾಧವಿ ಲತಾ ವಿರುದ್ಧ ಮಲಕಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಧರೆಗುರುಳಿದ ಬೃಹತ್ ಬಿಲ್ ಬೋರ್ಡ್- ಸಾವಿನ ಸಂಖ್ಯೆ 14ಕ್ಕೆ ಏರಿಕೆ

    ಈ ಹಿಂದೆ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಮಸೀದಿಯತ್ತ ಬಾಣ ಬಿಡುವ ಕ್ರಿಯೆಯನ್ನು ಅನುಕರಿಸುವ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಬೆನ್ನಲ್ಲೇ ಮಾಧವಿ ಲತಾ ಅವರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಒಟ್ಟಿನಲ್ಲಿ ಇದೀಗ ಮಾಧವಿ ಲತಾ ವಿರುದ್ಧ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯಗಳನ್ನು ತಿಳಿಸುವ 295A ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

    ಮಾಧವಿ ಲತಾ ಅವರು ಹೈದರಾಬಾದ್‌ನ ಹಾಲಿ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಹಿರಿಯ ಬಿಆರ್‌ಎಸ್ ನಾಯಕ ಗದ್ದಂ ಶ್ರೀನಿವಾಸ್ ಯಾದವ್ ವಿರುದ್ಧ ಕಣಕ್ಕಿಳಿದಿದ್ದಾರೆ.

  • ಓವೈಸಿ ವಿರುದ್ಧ ಅಖಾಡಕ್ಕೆ ಇಳಿದಿರೋ, ಮೋದಿ ಮೆಚ್ಚುಗೆ ಪಡೆದಿರೋ ಮಾಧವಿ ಲತಾ ಯಾರು?

    ಓವೈಸಿ ವಿರುದ್ಧ ಅಖಾಡಕ್ಕೆ ಇಳಿದಿರೋ, ಮೋದಿ ಮೆಚ್ಚುಗೆ ಪಡೆದಿರೋ ಮಾಧವಿ ಲತಾ ಯಾರು?

    ಲೋಕಸಭಾ ಚುನಾವಣೆಯ (Loksabha Elections 2024) ದಿನ ಸಮೀಪಿಸುತ್ತಿದ್ದಂತೆಯೇ ಅದರ ಕಾವು ರಂಗೇರಿದೆ. ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಕ್ಷದ ನಾಯಕರು ಪಣತೊಟ್ಟರೆ, ಇತ್ತ ಅಭ್ಯರ್ಥಿಗಳು ಕೂಡ ತಮ್ಮದೇ ಶೈಲಿಯಲ್ಲಿ, ವಿಭಿನ್ನ ರೀತಿಯಲ್ಲಿ ಪ್ರಚಾರಕ್ಕೆ ಇಳಿದಿದ್ದಾರೆ. ಈ ನಡುವೆ ಗಮನಾರ್ಹ ವಿಷಯ ಅಂದರೆ ಮುಸ್ಲಿಂ ಪ್ರಾಬಲ್ಯವಿರುವ ಹೈದರಾಬಾದ್ ಭದ್ರಕೋಟೆ ಬೇಧಿಸಲು ಬಿಜೆಪಿ ಈ ಬಾರಿ ವಿಭಿನ್ನ ಅಸ್ತ್ರವೊಂದನ್ನು ಪ್ರಯೋಗ ಮಾಡಿದೆ.

    ಹೌದು. ದೇಶದ ಅತಿಹೆಚ್ಚು ಜನಸಂಖ್ಯೆ ಇರುವ ಲೋಕಸಭಾ ಕ್ಷೇತ್ರಗಳಲ್ಲಿ ಹೈದರಾಬಾದ್‌ ಲೋಕಸಭಾ ಕ್ಷೇತ್ರ ಕೂಡ ಒಂದಾಗಿದೆ. ಈ ಕ್ಷೇತ್ರದಲ್ಲಿ ಅಸಾದುದ್ದೀನ್‌ ಓವೈಸಿ (Asaduddin Owaisi) ಕುಟುಂಬವು ಕಳೆದ 40 ವರ್ಷಗಳಿಂದ ಸತತ ಗೆಲುವಿನ ಮೂಲಕ ಭದ್ರಕೋಟೆ ನಿರ್ಮಿಸಿದೆ. ಈ ಕ್ಷೇತ್ರದ ಮತದಾರರ ಪೈಕಿ ಶೇ. 70 ರಷ್ಟು ಮುಸ್ಲಿಮರಿದ್ದಾರೆ. ಆದರೂ ಇಲ್ಲಿ ಬಿಜೆಪಿಯು ಮುಸ್ಲಿಮೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಲಕ್ಷಕ್ಕಿಂತಲೂ ಅಧಿಕ ಮತಗಳಿಸುವ ಮೂಲಕ ಪ್ರತಿಬಾರಿ ಅಸಾದುದ್ದೀನ್‌ ಓವೈಸಿ ಗೆಲುವನ್ನು ಕಠಿಣಗೊಳಿಸುತ್ತಾ ಬಂದಿದೆ. ಅಂತೆಯೇ ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಓವೈಸಿಗೆ ಟಫ್‌ ಫೈಟ್‌ ಕೊಡಲು ಸಜ್ಜಾಗಿದೆ. ಹಾಗಿದ್ರೆ ಈ ಮಾಧವಿ ಲತಾ ಯಾರು?, ಅವರ ಹಿನ್ನೆಲೆ ಏನು..?, ಮಾಧವಿ ಲತಾ ಅವರನ್ನೇ ಬಿಜೆಪಿ ಯಾಕೆ ಅಖಾಡಕ್ಕಿ ಇಳಿಸಿದೆ ಎಂಬುದನ್ನು ನೋಡೋಣ.

    ಮಾಧವಿ ಲತಾ ಯಾರು?: ಆರ್‌ಎಸ್‌ಎಸ್‌ನ ಕಟ್ಟಾ ಕಾರ್ಯಕರ್ತೆ, ಹೋರಾಟಗಾರ್ತಿ, ಭರತನಾಟ್ಯ ಕಲಾವಿದೆ ಮಾಧವಿ ಲತಾ (Madhavi Latha) ಅವರನ್ನು ಭಾರತೀಯ ಜನತಾ ಪಾರ್ಟಿ ಅಖಾಡಕ್ಕೆ ಇಳಿಸಿದೆ. ಈ ಮೂಲಕ ಓವೈಸಿ ವಿರುದ್ಧ ಈ ಬಾರಿ ಗೆಲ್ಲಲೇಬೇಕು ಎಂಬ ಹಠಕ್ಕೆ ಬಿಜೆಪಿ ಬಿದ್ದಂತಿದೆ.

    ನಿಜಾಮ್ ಕಾಲೇಜಿನಲ್ಲಿ ಸಾರ್ವಜನಿಕ ಆಡಳಿತದಲ್ಲಿ ಪದವಿ ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಧವಿ ಲತಾ ಅವರು ಪಡೆದಿದ್ದಾರೆ. ಇವರ ಮೂವರು ಮಕ್ಕಳಲ್ಲಿ ಇಬ್ಬರು ಐಐಟಿ ಮದ್ರಾಸ್‌ನಲ್ಲಿ ಓದುತ್ತಿದ್ದಾರೆ. ಹೋಮ್‌ ಸ್ಕೂಲಿಂಗ್‌ ನಡೆಸಿಯೇ ಮಕ್ಕಳನ್ನು ಐಐಟಿಗೆ ಕಳುಹಿಸಿರುವುದು ವಿಶೇಷವಾಗಿದೆ.

    ವೃತ್ತಿಪರ ಭರತನಾಟ್ಯಂ ಡಾನ್ಸರ್‌ ಆಗಿರುವ 49 ವರ್ಷದ ಮಾಧವಿ ಲತಾ ಅವರು ಹೆಣ್ಣುಮಕ್ಕಳ ಶಿಕ್ಷಣದ ಪ್ರಾಯೋಜಕರಾಗಿದ್ದಾರೆ ಮತ್ತು ಆರೋಗ್ಯ ಶಿಬಿರಗಳನ್ನು ಆಯೋಜಿಸುವಲ್ಲಿ ಮತ್ತು ಪ್ರವಾಹ ನೆರವು ನೀಡುವಲ್ಲಿನ ಪ್ರಯತ್ನಗಳಿಗೆ ಹೆಸರುವಾಸಿಯಾಗಿದ್ದಾರೆ. ಪ್ರಸ್ತುತ ಹೈದರಾಬಾದ್ ಮೂಲದ ಪ್ರಮುಖ ಆರೋಗ್ಯ ಸಂಸ್ಥೆಯಾದ ವಿರಿಂಚಿ ಹಾಸ್ಪಿಟಲ್ಸ್‌ನ ಅಧ್ಯಕ್ಷರಾಗಿದ್ದಾರೆ. ರೋಗಿಗಳಿಗೆ ಹೆಚ್ಚಿನ ಶುಲ್ಕ ವಿಧಿಸಿದ ಆರೋಪದ ನಂತರ ಆರೋಗ್ಯ ಅಧಿಕಾರಿಗಳು ಕೋವಿಡ್‌-19 ಚಿಕಿತ್ಸೆಗಾಗಿ ಅದರ ಪರವಾನಗಿಯನ್ನು ರದ್ದುಗೊಳಿಸಿದಾಗ ವಿರಿಂಚಿ ಹಾಸ್ಪಿಟಲ್ಸ್‌ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

    ಮೋದಿ ಮೆಚ್ಚುಗೆ: ಮಾಧವಿ ಲತಾ ಅವರು 2019 ರಲ್ಲಿ ಕಾನೂನುಬಾಹಿರವಾದ ತ್ರಿವಳಿ ತಲಾಖ್ ವಿರುದ್ಧ ಸಕ್ರಿಯವಾಗಿ ಪ್ರಚಾರ ಮಾಡಿದರು. ಅವರು ಹಳೇ ಹೈದರಾಬಾದ್‌ನಲ್ಲಿ ಈ ಸಮಸ್ಯೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ಈ ಪದ್ಧತಿಯನ್ನು ರದ್ದುಗೊಳಿಸುವಂತೆ ಮುಸ್ಲಿಂ ಹೆಣ್ಣುಮಕ್ಕಳೊಂದಿಗೆ ಸೇರಿ ಒತ್ತಾಯಿಸಿದ್ದರು. ಮಾಧವಿ ಲತಾ ಅವರ ಈ ನಡೆ ಪ್ರಧಾನಿ ನರೇಂದ್ರ ಮೋದಿಯವರ ಗಮನಸೆಳೆದಿತ್ತು. ಕೆಲ ತಿಂಗಳ ಹಿಂದೆ ಪ್ರಚಾರದ ವೇಳೆ ಬುರ್ಕಾ ಧರಿಸಿದ್ದ ಸಾಕಷ್ಟು ಮುಸ್ಲಿಂ ಹೆಣ್ಣುಮಕ್ಕಳು ಇವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ಫೋಟೋ ಕೂಡ ವೈರಲ್‌ ಆಗಿತ್ತು. ಒಟ್ಟಿನಲ್ಲಿ ಪಕ್ಷದ ವಲಯದಲ್ಲಿ ಗುರುತಿಸಿಕೊಳ್ಳದಿದ್ದರೂ ಹೊರಗೆ ತಮ್ಮ ವಾಕ್ಚಾತುರ್ಯದಿಂದ ಭಾರೀ ಪ್ರಸಿದ್ಧಿ ಪಡೆದಿದ್ದಾರೆ. ಈ ಕಾರಣದಿಂದ ಇಂದು ಇವರನ್ನು ಬಿಜೆಪಿ ಚುನಾವಣಾ ಅಖಾಡಕ್ಕೆ ಇಳಿಸಿರುವ ಸಾಧ್ಯತೆಗಳಿವೆ.

    ಇತ್ತೀಚೆಗೆ ಆಪ್‌ ಕೀ ಅದಾಲತ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಧವಿ ಲತಾಗೆ ಪ್ರಮುಖ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಮುಸ್ಲಿಂ ಸಮುದಾಯದ ಆಂತರಿಕ ವಿಚಾರಗಳಲ್ಲಿ ನೀವು ಮೂಗು ತೂರಿಸೋದ್ಯಾಕೆ ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಕಡ್ಡಿಮುರಿದಂತೆ ಉತ್ತರ ನೀಡಿದ್ದ ಮಾಧವಿ ಲತಾ, ಮುಸ್ಲಿಂ ಹೆಣ್ಣುಮಕ್ಕಳು ಬೇರೆಯವರಲ್ಲ. ಅವರೂ ನಮ್ಮ ಪ್ರಜೆಗಳು. ದೇಶದ ಪ್ರಜೆಯಾಗಿ ನಾನು ಇದರ ಬಗ್ಗೆ ಮಾತನಾಡಬಹುದು ಎಂದಿದ್ದರು.

    ಟಿಕೆಟ್‌ ಘೋಷಣೆ ಬಳಿಕ ಲತಾ ಹೇಳಿದ್ದೇನು?: ವಿಶೇಷವೆಂದರೆ, ಮುಂಬರುವ ಲೋಕಸಭಾ ಚುನಾವಣೆ 2024 ರ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಮಾಧವಿ ಲತಾ ಅವರು ಮಾರ್ಚ್ 2 ರವರೆಗೂ ರಾಜಕೀಯ ವಲಯಗಳಲ್ಲಿ ಹೆಚ್ಚು ಪರಿಚಿತರಾಗಿರಲಿಲ್ಲ. ಅಂದರೆ ಟಿಕೆಟ್‌ ಘೋಷಣೆ ಮಾಡುವ ವೇಳೆ ಮಾಧವಿ ಲತಾ ಬಿಜೆಪಿಯ ಸದಸ್ಯೆ ಕೂಡ ಆಗಿರಲಿಲ್ಲ. ಟಿಕೆಟ್‌ ಘೋಷಣೆ ಬಳಿಕ ಪ್ರತಿಕ್ರಿಯಿಸಿದ್ದ ಮಾಧವಿ, ಕಳೆದ ಒಂದು ವರ್ಷದಿಂದ ಪ್ರತಿದಿನ ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡಿ 11 ರಿಂದ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಏನೂ ಇಲ್ಲ, ಸ್ವಚ್ಛತೆ ಇಲ್ಲ, ಶಿಕ್ಷಣವಿಲ್ಲ, ಮದರಸಾಗಳಲ್ಲಿ ಮಕ್ಕಳಿಗೆ ಆಹಾರವಿಲ್ಲ. ಮುಸ್ಲಿಂ ಮಕ್ಕಳು ಬಾಲ ಕಾರ್ಮಿಕರಾಗುತ್ತಿದ್ದಾರೆ. ಹಿಂದೂ ದೇವಾಲಯಗಳು ಮತ್ತು ಮನೆಗಳನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದರು.

    ಮತ್ತೊಂದೆಡೆ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಸಂಸದರಾಗಿರುವ ಅಸಾದುದ್ದೀನ್‌ ಓವೈಸಿ ಮತ್ತೊಮ್ಮೆ ಕಣಕ್ಕಿಳಿದಿದ್ದು, ಸುಲಭ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಬಿಆರ್‌ಎಸ್‌ನಿಂದಲೂ ಚಂದ್ರಶೇಖರ್‌ ರಾವ್‌ ಹಿಂದಿನಷ್ಟು ಆಕ್ರಮಣಕಾರಿ ಶೈಲಿಯಲ್ಲಿ ಪ್ರಚಾರ ಮಾಡದಿರುವುದು ಈ ಬಾರಿ ಕ್ಷೇತ್ರದಲ್ಲಿ ಇಬ್ಬರ ನಡುವಿನ ನೇರ ಹಣಾಹಣಿಗೆ ವೇದಿಕೆ ಸಿದ್ಧಗೊಳಿಸಬಹುದು. ಒಟ್ಟಿನಲ್ಲಿ ಹೈದರಾಬಾದ್‌ನಲ್ಲಿ ಜನರ ನಿರಂತರ ಸಂಪರ್ಕ ಹೊಂದಿರುವ ಮಾಧವಿ ಲತಾ, ಹಿಂದೂ ಫೈರ್‌ ಬ್ರಾಂಡ್‌ ನಾಯಕಿ ಕೂಡ ಹೌದು. ಓವೈಸಿ ವಿರುದ್ಧ ಸತತ ಹೋರಾಟ ಮಾಡುತ್ತಿರುವ ಅವರು ಈ ಬಾರಿಯ ಚುನಾವಣೆಯಲ್ಲಿ ಕಮಾಲ್‌ ಮಾಡಬಹುದು ಎನ್ನುವ ನಿರೀಕ್ಷೆ ಬಿಜೆಪಿಯದ್ದಾಗಿದೆ. ಮಾಧವಿ ಲತಾ ಮೂಲಕ ಮುಸ್ಲಿಂ ಮಹಿಳೆಯರನ್ನು ಓಲೈಸುವ ಬಿಜೆಪಿಯ ಲೆಕ್ಕಾಚಾರ ಫಲಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.

    2019ರ ಫಲಿತಾಂಶ: ಒಟ್ಟು 7 ವಿಧಾನಸಭಾ ಕ್ಷೇತ್ರಗಳಿರುವ ಸ್ಟಾರ್‌ ಕ್ಷೇತ್ರ ಹೈದರಾಬಾದ್‌ ನಲ್ಲಿ ಮೇ 13 ರಿಂದ ಮತದಾನ ನಡೆಯಲಿದೆ. ಅಸಾದದುದ್ದೀನ್‌ ಓವೈಸಿ (ಎಐಎಂಐಎಂ), ಮಾಧವಿ ಲತಾ (ಬಿಜೆಪಿ) ಹಾಗೂ ಗದ್ದಂ ಶ್ರೀನಿವಾಸ್‌ ಯಾದವ್ (ಬಿಆರ್‌ಎಸ್‌) ಚುನಾವಣಾ ಕಣದಲ್ಲಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಭಗವಂತ ರಾವ್‌ ವಿರುದ್ಧ ಓವೈಸಿ ಅಭೂತಪೂರ್ವ ಗೆಲುವು ಸಾಧಿಸಿದ್ದರು.

  • ಓವೈಸಿ ವಿರುದ್ಧ ಸ್ಪರ್ಧಿಸ್ತಿರೋ ಬಿಜೆಪಿ ಅಭ್ಯರ್ಥಿಗೆ Y+ ಭದ್ರತೆ

    ಓವೈಸಿ ವಿರುದ್ಧ ಸ್ಪರ್ಧಿಸ್ತಿರೋ ಬಿಜೆಪಿ ಅಭ್ಯರ್ಥಿಗೆ Y+ ಭದ್ರತೆ

    ಹೈದರಾಬಾದ್:‌ ಇಲ್ಲಿನ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ (Madhavi Latha) ಅವರಿಗೆ ವೈ+ ಭದ್ರತೆ ಒದಗಿಸಲಾಗಿದೆ. ಅವರು ಅಸಾದುದ್ದೀನ್ ಓವೈಸಿ (Asaduddin Owaisi) ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

    ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಬೆದರಿಕೆ ವರದಿಯ ಆಧಾರದ ಮೇಲೆ ಗೃಹ ಸಚಿವಾಲಯವು ಮಾಧವಿ ಲತಾ ಅವರಿಗೆ ಈ ಭದ್ರತೆಯನ್ನು ನೀಡುತ್ತಿದೆ. ಮಾಹಿತಿ ಪ್ರಕಾರ, Y+ ಕೆಟಗರಿಯ ಭದ್ರತೆಗಾಗಿ 11 ಕಮಾಂಡೋಗಳನ್ನು ನಿಯೋಜಿಸಲಾಗಿದೆ. ಇನ್ನು ವಿಐಪಿಯ ಮನೆಯ ಸುತ್ತಲೂ ಐದು ಸ್ಟಾಟಿಕ್ ಪೊಲೀಸ್ ಸಿಬ್ಬಂದಿ ಅವರ ಭದ್ರತೆಗಾಗಿ ಹಾಜರಿರುತ್ತಾರೆ. ಜೊತೆಗೆ 6 ಮಂದಿ ಪಿಎಸ್‌ಒಗಳು ಆಯಾ ವಿಐಪಿಗಳಿಗೆ ಮೂರು ಪಾಳಿಯಲ್ಲಿ ಭದ್ರತೆಯನ್ನು ಒದಗಿಸುತ್ತಾರೆ.

    ಮಾಧವಿ ಲತಾ ಯಾರು?: ಕೋಟಿ ಮಹಿಳಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಎಂಎ ಮಾಡಿದ್ದಾರೆ. ಮಾಧವಿಯವರು ಹಿಂದುತ್ವದ ಪರವಾಗಿ ಧ್ವನಿ ಎತ್ತುತ್ತಾರೆ. ವಿರಿಂಚಿ ಆಸ್ಪತ್ರೆಯ ಅಧ್ಯಕ್ಷೆಯಾಗಿರುವ ಮಾಧವಿ ಲತಾ, ಭರತನಾಟ್ಯ ನೃತ್ಯಗಾರ್ತಿಯೂ ಹೌದು. ಅವರು ಹೈದರಾಬಾದ್‌ನಲ್ಲಿ ಸಾಮಾಜಿಕ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಜೊತೆಗೆ ಲೋಪಾಮುದ್ರಾ ಚಾರಿಟೇಬಲ್ ಟ್ರಸ್ಟ್ ಮತ್ತು ಲತಾಮಾ ಫೌಂಡೇಶನ್ ಮುಖ್ಯಸ್ಥರಾಗಿದ್ದು, ಈ ಟ್ರಸ್ಟ್‌ಗಳು ಮತ್ತು ಸಂಸ್ಥೆಗಳು ಆರೋಗ್ಯ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ.

    ಬಿಜೆಪಿಯಿಂದ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿ ಕಣಕ್ಕೆ: ಇದೇ ಮೊದಲ ಬಾರಿಗೆ ಹೈದರಾಬಾದ್‌ನ ಮಹಿಳಾ ಅಭ್ಯರ್ಥಿಯ ಮೇಲೆ ಬಿಜೆಪಿ ತನ್ನ ಪಣತೊಟ್ಟಿದೆ. ಈ ಹಿಂದೆ ಪಕ್ಷವು ಭಾಗವತ್ ರಾವ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಮಾಡಿತ್ತು. ಆದರೆ ಭಾಗವತ್ ಅವರು ಓವೈಸಿಯಿಂದ ಸುಮಾರು 3 ಲಕ್ಷ ಮತಗಳಿಂದ ಸೋಲನ್ನು ಎದುರಿಸಬೇಕಾಯಿತು. ಈ ಬಾರಿ ಬಿಜೆಪಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಸ್ಪರ್ಧೆಯನ್ನು ಕಠಿಣಗೊಳಿಸಲು ಪ್ರಯತ್ನಿಸಿದೆ.

  • ರೌಡಿಯಂತೆ ವರ್ತಿಸಿದ್ರಾ ಬಾಲಯ್ಯ? ನಟನ ವಿರುದ್ಧ ಮಾಧವಿ ಲತಾ ಗರಂ

    ರೌಡಿಯಂತೆ ವರ್ತಿಸಿದ್ರಾ ಬಾಲಯ್ಯ? ನಟನ ವಿರುದ್ಧ ಮಾಧವಿ ಲತಾ ಗರಂ

    ತೆಲುಗು ನಟ ಬಾಲಯ್ಯ(Balayya) ಎಕ್ಸ್‌ಪ್ರೆಸ್ಸಿವ್ ಮತ್ತು ಅಗ್ರೆಸ್ಸಿವ್ ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರವೇ. ಆದರೆ ಮೊನ್ನೆ ಮೊನ್ನೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಆಂಧ್ರಪ್ರದೇಶದ ಹಿಂದುಪುರಂ ಶಾಸಕ- ನಟ ಅಗ್ರೆಸ್ಸಿವ್ ಆಗಿ ವರ್ತಿಸಿ ಓರ್ವ ನಟಿಯಿಂದ ಟೀಕೆಗೆ ಒಳಗಾಗಿದ್ದಾರೆ. ಆ ನಟಿ ಮಾಧವಿ, ಬಾಲಯ್ಯ ವಿಧಾನಸಭೆಯಲ್ಲಿ ರೌಡಿಯಂತೆ ವರ್ತಿಸಿದ್ದಾರೆ ಎಂದಿದ್ದಾರೆ. ನಟಿಯ ಹೇಳಿಕೆ ಬಾಲಯ್ಯ ಫ್ಯಾನ್ಸ್‌ ಕಿಡಿಕಾರಿದ್ದಾರೆ.

    60ರಲ್ಲೂ ಸೂಪರ್ ಸ್ಟಾರ್ ನಂದಿಮೂರಿ ಬಾಲಕೃಷ್ಣ. ನಟರಾಗಿಯೂ ಜನಪ್ರತಿನಿಧಿಯಾಗಿಯೂ ಗುರುತಿಸಿಕೊಂಡಿರೋ ಬಾಲಯ್ಯ ಆಂಧ್ರದಲ್ಲಿ ಅಪಾರ ಅಭಿಮಾನಿ ಬಳಗವನ್ನ ಹೊಂದಿರುವ ಲೀಡರ್. ನಡೆ ನುಡಿ ವಿಚಾರದಲ್ಲಿ ಬಾಲಯ್ಯ ಮೇಲೆ ಟೀಕೆ ಟಿಪ್ಪಣಿ ಇದ್ದಿದ್ದೇ, ಆದರೆ ಬಾಲಯ್ಯ ಎಲ್ಲದಕ್ಕೂ ಡೋಂಟ್‌ಕೇರ್ ಗುಣದವರು. ಆದ್ರೀಗ ಬಾಲಯ್ಯ ವಿದಾನಸಭೆಯಲ್ಲಿ ಗುಡುಗಿರುವ ವಿಚಾರ ಅವರನ್ನ ರೌಡಿಗೆ ಹೋಲಿಸುವಂತೆ ಆಗಿದೆ. ನಟಿ ಮಾಧವಿ ಲತಾ (Madhavi Latha), ಬಾಲಯ್ಯರನ್ನ ರೌಡಿ ಎಂದಿದ್ದಾರೆ.

    ನಟಿಯಾಗಿ ಬಿಜೆಪಿ (Bjp) ಪಕ್ಷದಲ್ಲೂ ಗುರುತಿಸಿಕೊಂಡಿರೋ ಮಾಧವಿ ಲತಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬಾಲಯ್ಯರ ಅಗ್ರೆಸ್ಸಿವ್ ಭಾಷಣದ ಝಲಕ್ಕನ್ನ ಹಂಚಿಕೊಂಡು ಆಂಧ್ರದ ಜನ ರೌಡಿಯನ್ನೇ ಆಯ್ಕೆ ಮಾಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ:ಖ್ಯಾತ ಹಿರಿಯ ನಟಿ ವಹೀದಾ ರೆಹಮಾನ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

    ಅಷ್ಟಕ್ಕೂ ಮಾಧವಿ ಲತಾ (Madhavi Latha) ಹೀಗೆ ಹೇಳುವುದಕ್ಕೆ ಕಾರಣ ಹಿಂದುಪುರಂ ಶಾಸಕರಾಗಿರೋ ಬಾಲಯ್ಯ ಇತ್ತೀಚೆಗೆ ವಿಧಾನಸಭೆಯಲ್ಲಿ ಭಾಗಿಯಾಗಿ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಬಂಧನ ವಿರೋಧಿಸಿ ಆಕ್ರೋಶ ಹೊರಹಾಕಿ ಗದ್ದಲ ಮಾಡಿದ್ರು. ಇದನ್ನೇ ನಟಿ ಮಾಧವಿ ಪೋಸ್ಟ್ ಮಾಡಿ ಆಂಧ್ರದ ಜನ ರೌಡಿಗಳನ್ನ ಆಯ್ಕೆಮಾಡಿದ್ದಾರೆ. ಕ್ಷಮಿಸಿಬಿಡಿ ಅವರನ್ನ ಎಂಎಲ್‌ಎ ಎಂದೂ ಕರೆಯುತ್ತಾರೆ ಎಂದು ಬರೆದಿದ್ದಾರೆ. ಮಾಧವಿ ಲತಾ ಈ ಹೇಳಿಕೆ ಬಾಲಯ್ಯ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ. ಮಾಧವಿ ಕ್ಷಮಾಪಣೆ ಕೇಳ್ತಾರ? ಪರಿಸ್ಥಿತಿ ಎದುರಿಸುತ್ತಾರಾ ಎಂದು ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]