Tag: ಮಾತು

  • ‘ರಾಜಕುಮಾರ’ನ ಮನದಾಳದ ಮಾತು ಹಂಚಿಕೊಂಡ ಪವರ್ ಸ್ಟಾರ್

    ‘ರಾಜಕುಮಾರ’ನ ಮನದಾಳದ ಮಾತು ಹಂಚಿಕೊಂಡ ಪವರ್ ಸ್ಟಾರ್

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ತನ್ನದೆಯಾದ ಛಾಪು ಮೂಡಿಸಿ, ಅಭಿಮಾನಿಗಳಲ್ಲಿ ಹೊಸ ಕ್ರೇಜ್ ಹುಟ್ಟಿಸಿದ್ದ ಚಿತ್ರ ರಾಜಕುಮಾರ. ಈ ಚಿತ್ರ ಬಿಡುಗಡೆಯಾಗಿ ಎರಡು ವರ್ಷ ಕಳೆದಿದ್ದು, ಈ ಬಗ್ಗೆ ಪವರ್ ಸ್ಟಾರ್ ಪುನಿತ್ ರಾಜ್‍ಕುಮಾರ್ ಫುಲ್ ಖುಷಿಯಿಂದ ಚಿತ್ರದ ಬಗ್ಗೆ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ.

    ರಾಜಕುಮಾರ ಚಿತ್ರ ಪುನೀತ್ ರಾಜ್‍ಕುಮಾರ್ ಅವರ ವೃತ್ತಿ ಜೀವನದಲ್ಲಿ ಒಂದು ದೊಡ್ಡ ಮೈಲಿಗಲ್ಲು. ಅದರಲ್ಲೂ ಈ ಚಿತ್ರ ತಂದುಕೊಟ್ಟ ಯಶಸ್ಸನ್ನು ನಾನು ಜೀವನ ಪೂರ್ತಿ ಮರೆಯಲ್ಲ ಎಂದು ಅಪ್ಪು ತಮ್ಮ ಫೇಸ್‍ಬುಕ್‍ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ರಾಜಕುಮಾರ ಚಿತ್ರ ಬಿಡುಗಡೆಯಾಗಿ 2 ವರ್ಷವಾಯ್ತು. 2015ರಲ್ಲಿ ಈ ಸಿನಿಮಾ ಕಥೆ ರೆಡಿಯಾಗಿತ್ತು, 2016ರಲ್ಲಿ ಚಿತ್ರೀಕರಣ ಶುರಯವಾಯ್ತು ಬಳಿಕ 2017ರಲ್ಲಿ ಚಿತ್ರ ತೆರೆಕಂಡಿತ್ತು. ಚಿತ್ರ ಬಿಡುಗಡೆಯಾದಾಗ ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಪ್ರೋತ್ಸಾಹವನ್ನು ನಾನು ಜೀವನ ಪೂರ್ತಿ ಮರೆಯಲ್ಲ. ಈ ಚಿತ್ರ ನನಗೆ ತುಂಬಾ ಇಷ್ಟವಾಗಲು ಮುಖ್ಯ ಕಾರಣ ಅಂದ್ರೆ ಅದರ ಹೆಸರು. ನಮ್ಮ ತಂದೆಯವರ ಹೆಸರಿನಲ್ಲಿ ಈ ಸಿನಿಮಾ ಇದೆ. ಸಂತೋಷ್ ಅವರ ನಿರ್ದೇಶನ ಮಾಡಿದ್ದು, ಹೊಂಬಾಳೆ ಸಿನಿಮಾದ ವಿಜಯ್ ಅವರ ನಿರ್ಮಾಣ ಹಾಗೂ ಹರಿಕೃಷ್ಣ ಅವರ ಸಂಗೀತದಲ್ಲಿ ಸಿನಿಮಾ ಅದ್ಭುತವಾಗಿ ಮೂಡಿಬಂತು.

    ಅದರಲ್ಲೂ ನೀವು ತೋರಿಸಿದ ಪ್ರೀತಿ, ಗೌರವವನ್ನು ಯಾವತ್ತಿಗೂ ಮರೆಯಲ್ಲ. ‘ರಾಜಕುಮಾರ’ ಚಿತ್ರ, ‘ಗೊಂಬೆ ಹೇಳುತೈತೆ’ ಹಾಡನ್ನೂ ಯಾವತ್ತು ಮರೆಯಲ್ಲ. ಈ ಚಿತ್ರದ ಬಗ್ಗೆ ಇಂದಿಗೂ ಜನರು ಮಾತನಾಡುತ್ತಾರೆ. ಇದು ತುಂಬಾ ಖುಷಿಕೊಡುತ್ತೆ. ಸಂತೋಷ್, ವಿಜಯ್ ಹಾಗೂ ಹರಿಕೃಷ್ಣ ಅವರಿಗೆ ಧನ್ಯವಾದ. ಅಭಿಮಾನಿಗಳ ಪ್ರೀತಿಗೂ ಧನ್ಯವಾದ ಎಂದು ಸಂತೋಷವನ್ನು ಹಂಚಿಕೊಂಡರು.

    ಸದ್ಯ ಈ ವಿಡಿಯೋವನ್ನು 35 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 500ಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.

    https://www.facebook.com/PuneethRajkumar/videos/336624367207812/

  • ಮದುವೆಗೆ ಮುಂಚೆ ಮಾತಾಡಿದ್ದಕ್ಕೆ ಯುವತಿ, ಭಾವಿ ಪತಿಯ ಕೊಲೆ

    ಮದುವೆಗೆ ಮುಂಚೆ ಮಾತಾಡಿದ್ದಕ್ಕೆ ಯುವತಿ, ಭಾವಿ ಪತಿಯ ಕೊಲೆ

    ಕರಾಚಿ: ಮದುವೆಗೆ ಮುಂಚೆಯೇ ಮಾತನಾಡಿದ್ರು ಎಂಬ ಕಾರಣಕ್ಕೆ ಮರ್ಯಾದಾ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಯುವತಿ ಹಾಗೂ ಆಕೆಯ ಭಾವಿ ಪತಿಯನ್ನು ಯುವತಿಯ ಸೋದರಮಾವನೇ ಕೊಲೆ ಮಾಡಿದ್ದಾನೆ.

    ಮೃತ ಯುವತಿ ನಜ್ರೀನ್ ತನ್ನ ಭಾವಿ ಪತಿ ಶಾಹಿದ್‍ರೊಂದಿಗೆ ಇಲ್ಲಿನ ಗೋಟ್ಕಿ ನಗರ ಸಮೀಪದ ನಯೀ ವಹೀ ಗ್ರಾಮದಲ್ಲಿ ಮಾತನಾಡ್ತಿದ್ದಾಗ ಆಕೆಯ ಸೋದರಮಾವ ಇದನ್ನ ನೋಡಿದ್ದರು. ಇದರಿಂದ ಕೋಪಗೊಂಡ ಆತ ಗುಂಡಿನ ದಾಳಿ ನಡೆಸಿ ಇಬ್ಬರನ್ನೂ ಕೊಂದಿದ್ದಾನೆಂದು ವರದಿಯಾಗಿದೆ.

    ಪೊಲೀಸರ ಪ್ರಕಾರ ಮೃತ ಯುವಕ, ಯುವತಿ ಸಂಬಂಧಿಗಳೇ ಆಗಿದ್ದು, ಇದು ಮರ್ಯಾದಾ ಹತ್ಯೆ ಪ್ರಕರಣ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಸೋದರ ಮಾವಂದಿರಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಪಾಕಿಸ್ತಾನದಲ್ಲಿ ಮರ್ಯಾದಾ ಹತ್ಯೆ ಪ್ರಕರಣಗಳು ಹೆಚ್ಚಾಗಿದ್ದು, ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಕಳೆದ ತಿಂಗಳು ಪಾಕಿಸ್ತಾನದ ಯುವಕನೊಬ್ಬ ಕುಟುಂಬದ ಸಮ್ಮತಿಯಿಲ್ಲದೆ ಮದುವೆಯಾಗಿದ್ದಾರೆಂದು ರಾವಲ್‍ಪಿಂಡಿಯಲ್ಲಿ ತನ್ನ ತಂಗಿ ಹಾಗೂ ಆಕೆಯ ಗಂಡನನ್ನು ಗುಂಡಿಟ್ಟು ಕೊಲೆ ಮಾಡಿದ್ದ. ನವೆಂಬರ್‍ನಲ್ಲಿ ಸಿಂಧ್ ಪ್ರಾಂತ್ಯದಲ್ಲಿ ಹಿರಿಯರ ಸಮ್ಮತಿಯಿಲ್ಲದೆ ಹೊಸದಾಗಿ ಮದುವೆಯಾಗಿದ್ದ ಜೋಡಿಯನ್ನು ಗ್ರಾಮದ ಹಿರಿಯರ ಆದೇಶದಂತೆ ಕೊಲೆ ಮಾಡಲಾಗಿತ್ತು ಎಂದು ವರದಿಯಾಗಿದೆ.

    ಕಳೆದ ದಶಕದಲ್ಲಿ ಪಾಕಿಸ್ತಾನದಲ್ಲಿ ವರ್ಷಕ್ಕೆ 650 ಮರ್ಯಾದಾ ಹತ್ಯೆಗಳು ನಡೆದಿರುವ ಬಗ್ಗೆ ಪಾಕಿಸ್ತಾನ ಮಾನವ ಹಕ್ಕುಗಳ ಆಯೋಗ ವರದಿ ನೀಡಿದೆ. ಆದ್ರೆ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರದಿರುವ ಕಾರಣ ಇದರ ಸಂಖ್ಯೆ ಮತ್ತಷ್ಟು ಹೆಚ್ಚಿರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

  • ಮಾತು ಬಾರದ, ಕಿವಿ ಕೇಳದ 3 ವರ್ಷದ ಮಗುವಿಗೆ ಶ್ರವಣಯಂತ್ರ ಖರೀದಿಸಲು ಬೇಕಿದೆ ಸಹಾಯ

    ಮಾತು ಬಾರದ, ಕಿವಿ ಕೇಳದ 3 ವರ್ಷದ ಮಗುವಿಗೆ ಶ್ರವಣಯಂತ್ರ ಖರೀದಿಸಲು ಬೇಕಿದೆ ಸಹಾಯ

    ಬಳ್ಳಾರಿ: ಈ ಬಾಲಕನಿಗಿನ್ನೂ ಮೂರು ವರ್ಷ ವಯಸ್ಸು. ತೊದಲು ನುಡಿಯಾಡುತ್ತಾ ಹೆತ್ತವರನ್ನು ನಗಿಸಿ, ನಲಿಯಬೇಕಾದ ಈ ಬಾಲಕನಿಗೆ ಮಾತೇ ಬರಲ್ಲ. ಅಷ್ಟೆ ಅಲ್ಲ ಕಿವಿಯೂ ಸಹ ಕೇಳಲ್ಲ. ಹೀಗಾಗಿ ಹೆತ್ತವರಿಗೆ ಈತನದ್ದೆ ಚಿಂತೆ. ಮಗನ ಬಾಯಲ್ಲಿ ಅಮ್ಮ ಅಪ್ಪಾ ಅಂತಾ ಮಾತು ಕೇಳಲು ಹಾತೊರೆಯುತ್ತಿರುವ ಈ ಹೆತ್ತವರಿಗೆ ಮಗನಿಗೆ ಚಿಕಿತ್ಸೆ ಕೊಡಿಸಲು ಸಹ ಹಣವಿಲ್ಲ. ಹೀಗಾಗಿ ಇರೋ ಒಬ್ಬ ಮಗನಿಗೆ ಚಿಕಿತ್ಸೆ ಕೊಡಿಸಲು ದಾನಿಗಳ ಮೊರೆ ಹೋಗಿದೆ ಈ ಕುಟುಂಬ.

    ಸಿರಗುಪ್ಪ ತಾಲೂಕಿನ ಅರಳಿಗನೂರು ಗ್ರಾಮದ ಪಂಪಯ್ಯಸ್ವಾಮಿ ಜಲಜಾಕ್ಷಿಯವರ ಒಬ್ಬನೇ ಮಗ ಸತೀಶನಿಗೆ 3 ವರ್ಷವಾದ್ರೂ ಮಾತು ಮೂಡಿ ಬಂದಿಲ್ಲ. ಇರೋ ಒಬ್ಬ ಮಗನಿಗೆ ಮೂರು ವರ್ಷವಾದ್ರೂ ಮಾತು ಬಾರದಿರುವುದರಿಂದ ಹೆತ್ತವರಿಗೆ ಚಿಂತೆಯಾಗಿದೆ.

    ಸತೀಶನ ತಂದೆ ಪಂಪಯ್ಯಸ್ವಾಮಿ ಕಡುಬಡವ. ಬೇರೆಯವರ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಾ ಕುಟುಂಬ ಸಲಹುತ್ತಿರುವ ಪಂಪಯ್ಯಸ್ವಾಮಿಗೆ ಮಗನಿಗೆ ಮಾತು ಬರುವಂತೆ ಚಿಕಿತ್ಸೆ ಕೊಡಿಸಲು ಸಹ ಹಣಕಾಸಿನ ಕೊರತೆ ಎದುರಾಗಿದೆ. ಮೊದಲು ಕಿವಿ ಕೇಳಿದ್ರೆ ಮಾತ್ರ ಬಾಲಕ ಮಾತನಾಡಲು ಸಾಧ್ಯವೆಂದು ವೈದ್ಯರು ಹೇಳುತ್ತಿದ್ದಾರೆ. ಶ್ರವಣದೋಷದಿಂದ ಬಳಲುತ್ತಿರುವುದರಿಂದ ಶ್ರವಣ ಯಂತ್ರಕ್ಕಾಗಿ 50 ಸಾವಿರದಿಂದ ಒಂದು ಲಕ್ಷ ರೂಪಾಯಿಯವರೆಗೆ ಹಣಕಾಸಿನ ನೆರವು ಬೇಕಾಗಿದೆ. ಹೀಗಾಗಿ ಈ ಕಡುಬಡತನದ ಕುಟುಂಬದ ಮಗುವಿಗೆ ಮಾತು ಬರಲು, ಕಿವಿ ಕೇಳಲು ಶ್ರವಣಯಂತ್ರ (ಹಿಯರಿಂಗ್ ಮಷೀನ್) ಖರೀದಿಸಲು ಹಣಕಾಸಿನ ನೆರವು ನೀಡಲು ದಾನಿಗಳು ನೆರವಿನ ಹಸ್ತ ಚಾಚಬೇಕು ಅಂತಾರೆ ಸ್ಥಳೀಯರು.

    ಈಗಾಗಲೇ ಹಲವು ವೈದ್ಯರ ಬಳಿ ಮಗನಿಗೆ ಚಿಕಿತ್ಸೆ ಕೊಡಿಸಲು ಹೆತ್ತವರು ಸಾಕಷ್ಟು ಹಣ ಖರ್ಚು ಮಾಡಿಕೊಂಡಿದ್ದಾರೆ. ಇದೀಗ ಮಗನಿಗೆ ಕಿವಿ ಕೇಳಲು ಮೊದಲು ಹಿಯರಿಂಗ್ ಮಷೀನ್ ಖರೀದಿಸಲು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಯಾರಾದ್ರೂ ದಾನಿಗಳು ನೆರವು ನೀಡಿದ್ರೆ ಈ ಬಡ ಬಾಲಕನಿಗೆ ಕಿವಿ ಕೇಳಲು ಸಹಾಯವಾಗಿ ಮಾತನಾಡಬಲ್ಲವನಾಗುತ್ತಾನೆ ಅನ್ನೋ ಹಂಬಲ ಪೋಷಕರದ್ದು.

    https://www.youtube.com/watch?v=Drx0lVtn_zw