Tag: ಮಾಣಿ ಡ್ಯಾಂ

  • ನಾಲ್ಕನೇ ಬಾರಿ ಭರ್ತಿಯಾದ ಶಿವಮೊಗ್ಗದ ಮಾಣಿ ಜಲಾಶಯ

    ನಾಲ್ಕನೇ ಬಾರಿ ಭರ್ತಿಯಾದ ಶಿವಮೊಗ್ಗದ ಮಾಣಿ ಜಲಾಶಯ

    ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನಲ್ಲಿರುವ ಮಾಣಿ ಡ್ಯಾಂ ನಾಲ್ಕನೇ ಬಾರಿ ಭರ್ತಿಯಾಗಿದೆ. ಡ್ಯಾಂನ ಮೂರು ಗೇಟ್ ತೆರೆದು 1,000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

    ವರಾಹಿ ನದಿಗೆ 1988ರಲ್ಲಿ ನಿರ್ಮಾಣವಾದ ಈ ಡ್ಯಾಂ ಇದಕ್ಕೂ ಮುಂಚೆ 1994, 2006 ಹಾಗೂ 2007ರಲ್ಲಿ ಭರ್ತಿಯಾಗಿತ್ತು. ಇದೀಗ ಹನ್ನೆರಡು ವರ್ಷಗಳ ನಂತರ ಮತ್ತೊಮ್ಮೆ ಭರ್ತಿಯಾಗಿದೆ. ಕೆಪಿಸಿ ಅಸ್ತಿತ್ವಕ್ಕೆ ಬಂದ ಮೇಲೆ ನಿರ್ಮಾಣಗೊಂಡ ಮೊದಲ ಅಣೆಕಟ್ಟು ಇದಾಗಿದ್ದು, 31 ಟಿಎಂಸಿ ಸಾಮರ್ಥ್ಯದ ಈ ಅಣೆಕಟ್ಟು ವಿಶಿಷ್ಟ ವಿನ್ಯಾಸದಿಂದ ಗಮನ ಸೆಳೆಯುತ್ತಿದೆ.

    ಇಲ್ಲಿರುವ ಹನ್ನೊಂದು ಗುಡ್ಡಗಳಿಗೆ ಅಡ್ಡಕಟ್ಟೆ ನಿರ್ಮಿಸಿರುವ ಈ ಅಣೆಕಟ್ಟನ್ನು `ಬೆಟ್ಟದ ಮೇಲಿನ ಬಟ್ಟಲು’ ಎಂದು ಕರೆಯಲಾಗುತ್ತಿದೆ. ವಿದ್ಯುತ್ ಉತ್ಪಾದನೆಗೆ ಮಾತ್ರ ಮೀಸಲಾಗಿರುವ ಈ ಅಣೆಕಟ್ಟಿನ ಬಳಿಯೇ ಪವರ್ ಹೌಸ್ ಇದೆ. ಇಲ್ಲಿ ವಿದ್ಯುತ್ ಉತ್ಪಾದನೆಯಾದ ನಂತರ ಇದೇ ನೀರನ್ನು ಬಳಸಿ ಭೂಗರ್ಭ ವಿದ್ಯುದಾಗಾರದಲ್ಲೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.

    ಹನ್ನೆರಡು ವರ್ಷಗಳ ನಂತರ ತುಂಬಿರುವ ಈ ಜಲಾಶಯದ ಮನಮೋಹಕ ದೃಶ್ಯ ನೋಡಲು ಪ್ರವಾಸಿಗರಿಗೆ ಮುಕ್ತ ಅವಕಾಶ ಇಲ್ಲ. ಹೊಸಂಗಡಿಯಲ್ಲಿರುವ ಕೆಪಿಸಿ ಕಚೇರಿಯಲ್ಲಿ ಪಾಸ್ ಪಡೆದ ನಂತರವಷ್ಟೇ ಈ ಅಣೆಕಟ್ಟೆಯ ಮೇಲೆ ನಿಂತು ಇಲ್ಲಿನ ಸೌಂದರ್ಯ ಸವಿಯಲು ಸಾಧ್ಯ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಕ್ರಮ ಕಲ್ಲು ಗಣಿಗಾರಿಕೆ- ಸಂಕಷ್ಟದಲ್ಲಿ ಮಾಣಿ ಆಣೆಕಟ್ಟು

    ಅಕ್ರಮ ಕಲ್ಲು ಗಣಿಗಾರಿಕೆ- ಸಂಕಷ್ಟದಲ್ಲಿ ಮಾಣಿ ಆಣೆಕಟ್ಟು

    ಶಿವಮೊಗ್ಗ: ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶದಲ್ಲಿರುವ ಮಾಣಿ ಡ್ಯಾಂನ ಕಣ್ಣಳತೆ ದೂರದಲ್ಲಿ ಮತ್ತೆ ಡೈನಮೈಟ್ಗಳ ಸ್ಫೋಟ ಕೇಳಿ ಬರುತ್ತಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ಮಾಫಿಯಾ ಮತ್ತೊಮ್ಮೆ ತಲೆ ಎತ್ತಿ ನಿಂತಿದೆ.

    ಮಾಸ್ತಿಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿ 52ಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ವರಾಹಿ ನದಿ ದಂಡೆಯಲ್ಲೇ ನಡೆಯುತ್ತಿರುವ ಈ ಕಲ್ಲು ಗಣಿಗಾರಿಕೆ ಬಗ್ಗೆ ಗಣಿಗಾರಿಕೆ ಇಲಾಖೆ, ಅರಣ್ಯ ಹಾಗೂ ಪೊಲೀಸ್ ಇಲಾಖೆಗಳು ಜಾಣ ಕುರುಡುತನ ತೋರುತ್ತಿವೆ. ಆರು ತಿಂಗಳ ಹಿಂದೆ ಪಬ್ಲಿಕ್ ಟಿವಿ ಈ ಕುರಿತು ಸಮಗ್ರ ವರದಿ ಮಾಡಿದಾಗ ಈ ಗಣಿಗಾರಿಕೆ ಸ್ಥಗಿತಗೊಂಡಿತ್ತು.

    ಈ ಅಕ್ರಮ ಕ್ವಾರಿಯಲ್ಲಿ ಶಕ್ತಿಶಾಲಿ ಜಿಲೆಟಿನ್ ಸ್ಫೋಟ ನಡೆಸಲಾಗುತ್ತಿದ್ದು, ಅಣೆಕಟ್ಟೆಯ ಭದ್ರತೆಗೆ ಧಕ್ಕೆ ಆಗುವ ಸಾಧ್ಯತೆ ಇದೆ. ರಾಜ್ಯ ಹೆದ್ದಾರಿ 52ಕ್ಕೆ ಹೊಂದಿಕೊಂಡೇ ಕ್ರಷರ್ ಇದೆ. ಈ ಕ್ರಷರ್‍ನಿಂದ ಒಂದು ಕಿ.ಮೀ.ದೂರದಲ್ಲೇ ಕ್ವಾರಿ ಸಹ ಇದೆ. ಈ ಕ್ವಾರಿ ಮಾಲೀಕ ರವೀಂದ್ರ ಎಂಬಾತ ಕಾಂಗ್ರೆಸ್ ಕಾರ್ಯಕರ್ತರಾಗಿದ್ದು, ಒಮ್ಮೆ ತಾಲೂಕು ಪಂಚಾಯ್ತಿಗೆ ಅಧ್ಯಕ್ಷರೂ ಆಗಿದ್ದರು. ಕ್ಷೇತ್ರದ ಶಾಸಕ ಕಿಮ್ಮನೆ ಆವರ ಕೃಪಾಕಟಾಕ್ಷದಲ್ಲಿ ಈ ಕ್ವಾರಿ ಯಾವುದೇ ಅಡೆ ತಡೆ ಇಲ್ಲದೆ ಎಲ್ಲಾ ನೀತಿನಿಯಮಗಳನ್ನು ಮೀರಿ ನಡೆಯುತ್ತಿದೆ.

    ನದಿ ಪಾತ್ರದಲ್ಲಿ ಅದೂ ಅಣೆಕಟ್ಟೆಯ ಸಮೀಪದಲ್ಲಿ ಕಲ್ಲುಕ್ವಾರಿಗೆ ಅವಕಾಶ ನೀಡಲು ಸಾಧ್ಯವಿಲ್ಲ. ಆದರೂ ಇಲ್ಲಿ ನಿರಾತಂಕವಾಗಿ ಕ್ವಾರಿ ನಡೆಯುತ್ತಿದೆ. ಈ ಅಕ್ರಮ ಕ್ವಾರಿಯಿಂದ ತೆಗೆದಿರುವ ಕಲ್ಲುಗಳನ್ನು ವಶಪಡಿಸಿಕೊಳ್ಳಬೇಕು. ಇದೂವರೆಗೂ ಇಲ್ಲಿ ಪರಿಸರ ನಾಶ ಮಾಡಿರುವ, ನದಿ ದಂಡೆಯಲ್ಲಿ ಕ್ವಾರಿ ನಡೆಸಿದ ಪ್ರಭಾವಿ ರಾಜಕಾರಣಿ ಮೇಲೆ ಕ್ರಮಕೈಗೊಳ್ಳಬೇಕು. ಜೊತೆಗೆ ಇಂಥ ಅಕ್ರಮಕ್ಕೆ ಅವಕಾಶ ನೀಡಿದ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಕೆಪಿಸಿ, ಪೊಲೀಸ್ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ. ಆದರೆ ಕಾಂಗ್ರೆಸ್ ನಾಯಕರೇ ಇವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆಂದು ಹೇಳಲಾಗಿದ್ದು ಇದು ಸಾಧ್ಯವೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.

    ನದಿ ದಂಡೆಯಲ್ಲಿ ಹಾಗೂ ಅಣೆಕಟ್ಟೆ ಸಮೀಪದಲ್ಲಿ ಸ್ಫೋಟಕ ಬಳಸಿ ಕಲ್ಲುಗಣಿಗಾರಿಕೆ ನಡೆಸುವುದು ಕರ್ನಾಟಕ ಗಣಿ ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿರುವ ಮಾಣಿ ಅಣೆಕಟ್ಟೆ ಕಲ್ಲು ಕ್ವಾರಿ ಕಾರಣದಿಂದ ಆಪಾಯದಲ್ಲಿದೆ. ಈ ಕಲ್ಲು ಕ್ವಾರಿಯಲ್ಲಿ ಜಿಲೆಟಿನ್ ಬಳಸಲಾಗುತ್ತಿದೆ. ಈ ಕಲ್ಲುಕ್ವಾರಿ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿದೆ. ರಾಜ್ಯದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಕರ್ನಾಟಕದ ಚಿರಾಂಪುಂಜಿ ಹುಲಿಕಲ್ ಪ್ರದೇಶಕ್ಕೆ ತಾಗಿಕೊಂಡಿದೆ.