Tag: ಮಾಣಿಕ್ ಸರ್ಕಾರ್

  • ದೇಶದ ಅತೀ ಬಡ ಮುಖ್ಯಮಂತ್ರಿ ಈಗ ಸಿಂಗಲ್ ರೂಮ್ ಮನೆಗೆ ಶಿಫ್ಟ್

    ದೇಶದ ಅತೀ ಬಡ ಮುಖ್ಯಮಂತ್ರಿ ಈಗ ಸಿಂಗಲ್ ರೂಮ್ ಮನೆಗೆ ಶಿಫ್ಟ್

    ಅಗರ್ತಲ: ತ್ರಿಪುರ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಸೋಲಿನ ಹಿನ್ನಲೆಯಲ್ಲಿ ದೇಶದ ಬಡ ಮುಖ್ಯಮಂತ್ರಿಯಾಗಿದ್ದ ಮಾಣಿಕ್ ಸರ್ಕಾರ್ ಈಗ ಪಕ್ಷದ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದಾರೆ.

    ಮಾಜಿ ಮುಖ್ಯಮಂತ್ರಿಯಾದ ಮಾಣಿಕ್ ಸರ್ಕಾರ್ ತಮ್ಮ ಸಿಎಂ ನಿವಾಸವನ್ನ ಖಾಲಿ ಮಾಡಿ ಪಕ್ಷದ ಅತಿಥಿ ಗೃಹಕ್ಕೆ ಸ್ಥಳಾಂತರವಾಗಿದ್ದಾರೆ. ಸಿಪಿಎಂ ಪಕ್ಷದ ನಾಯಕ ಬಿಜನ್ ಧಾರ್ ಇದಕ್ಕೆ ಪ್ರತಿಕ್ರಿಯಿಸಿ, ಶ್ರೀಯುತ ಮಾಣಿಕ್ ಸರ್ಕಾರ್ ಮತ್ತು ಅವರ ಪತ್ನಿ ಪಾಂಚಾಲಿ ಭಟ್ಟಾಚಾರ್ಯರೊಂದಿಗೆ ಪಕ್ಷದ ಕಚೇರಿ ಅತಿಥಿ ಗೃಹವೊಂದರಲ್ಲಿ ವಾಸಿಸಲಿದ್ದಾರೆ ಎಂದು ಹೇಳಿದರು.

    ಸಿಪಿಎಂ ಅತಿಥಿ ಗೃಹಕ್ಕೆ ತೆರಳಿದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್, ನನಗೆ ಪಕ್ಷದ ಕಚೇರಿಯಲ್ಲಿ ಮಾಡುವ ಅಡುಗೆಯನ್ನೇ ಕೊಡಿ ಎಂದು ಅಡುಗೆ ಮಾಡುವ ಸಿಬ್ಬಂದಿಗೆ ಹೇಳಿದ್ದಾರೆ.

    ಮಾಣಿಕ್ ಅವರ ಪತ್ನಿ ಪಾಂಚಾಲಿ ತಮ್ಮ ಪುಸ್ತಕಗಳನ್ನು ಪಕ್ಷದ ಗ್ರಂಥಾಲಯ ಮತ್ತು ಅಗರ್ತಲದ ಬಿರ್‍ಚಂದ್ರ ಕೇಂದ್ರ ಗ್ರಂಥಾಲಯಕ್ಕೆ ಕೊಡಲಾಗುವುದು ಎಂದು ಹೇಳಿದ್ದರು. ದಂಪತಿಗೆ ಮಕ್ಕಳಿರದ ಕಾರಣ, ತಮ್ಮ 900 ಚದರ ಅಡಿ ಆಸ್ತಿಯನ್ನ ಸಂಬಂಧಿಕರಿಗೆ ನೀಡಿದ್ದಾರೆ. ಮಾಣಿಕ್ ಸರ್ಕಾರ್ ತಮ್ಮ ರಾಜಕೀಯ ಬದುಕಿನಲ್ಲಿ ಸಂಪಾದಿಸಿದ ಆಸ್ತಿ ಇದೊಂದೆ ಆಗಿದೆ.

    ಚುನಾವಣೆ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರದಲ್ಲಿ ಮಾಣಿಕ್ ತನ್ನ ಬಳಿ 1,520 ರೂ. ಹಣವಿದ್ದು ಮತ್ತು 2,410 ರೂ. ಎಸ್‍ಬಿಐ ಬ್ಯಾಂಕ್ ಖಾತೆಯಲ್ಲಿ ಇದೆ. 2013 ರಲ್ಲಿ ಬ್ಯಾಂಕ್ ಖಾತೆಯಲ್ಲಿ 9,720 ರೂ. ಇತ್ತು ಎಂದು ಉಲ್ಲೇಖಿಸಿದ್ದರು.

    ಸ್ವಂತ ಮನೆಯನ್ನ ಕೂಡ ಹೊಂದದ ಮಾಣಿಕ್ ಅವರು, ಅಗರ್ತಲದ ಕೃಷ್ಣ ನಗರದಲ್ಲಿ ಇರುವ ಸ್ಥಿರ ಆಸ್ತಿಯಾದ 0.0118 ಎಕರೆ ಕೃಷಿಯೇತರ ಭೂಮಿಯ ಹೊಂದಿದ್ದಾರೆ. ಈ ಆಸ್ತಿಯು ಸ್ವಾಮ್ಯ ಹಕ್ಕನ್ನು ಅವರ ಸಹೋದರ ಮತ್ತು ಸಹೋದರಿಯರು ಹೊಂದಿದ್ದಾರೆ. ಮೊಬೈಲ್ ಫೋನ್ ಇಲ್ಲದ ಇವರು ತಮ್ಮ ಪ್ರತಿ ತಿಂಗಳ ವೇತನವನ್ನ (26,315 ರೂ) ಪಕ್ಷದ ನಿಧಿಗೆ ದಾನ ಮಾಡಿ ಉಳಿದ 9,700 ರೂ ಗಳನ್ನು ಬಳಸುತ್ತಿದ್ದರು.

    ಮಾಣಿಕ್ ಅವರ ಪತ್ನಿ ಪಾಂಚಾಲಿ ಭಟ್ಟಾಚಾರ್ಯ ನಿವೃತ್ತ ರಾಜ್ಯ ಸರ್ಕಾರಿ ನೌಕರರಾಗಿದ್ದಾರೆ. ಸರ್ಕಾರಕ್ಕೆ ಸಲ್ಲಿಸಿದ್ದ ಆಸ್ತಿ ವಿವರದಲ್ಲಿ ಅವರ ಬಳಿ 20,140 ರೂ. ನಗದು, ಒಟ್ಟು 12,15,714.18 ರೂ. 3 ಉಳಿತಾಯ ಖಾತೆಗಳಿದ್ದು ಮತ್ತು 20 ಗ್ರಾಂ ಚಿನ್ನವನ್ನ ಹೊಂದಿದ್ದಾರೆ.

    ಗುರುವಾರ ಸಂಜೆ ಮಾಣಿಕ್ ಸರ್ಕಾರ್ ಮನೆಗೆ ಬಿಜೆಪಿ ನಾಯಕ ರಾಮ್ ಮಾಧವ್ ತೆರಳಿ ಸರ್ಕಾರದ ಪ್ರಮಾಣವಚನ ಸಮಾರಂಭಕ್ಕೆ ಮಾಣಿಕ್ ಅವರನ್ನು ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಮಾಣಿಕ್ ಸರ್ಕಾರ ಭಾಗವಹಿಸಿದ್ದರು.