Tag: ಮಾಣಿ

  • ಮಾಣಿ-ಸಂಪಾಜೆ ಹೈವೇ ಚತುಷ್ಪಥಕ್ಕೆ ಡಿಪಿಆರ್‌ ತಯಾರಿಸಲು ಸರ್ಕಾರ ಅನುಮೋದನೆ

    ಮಾಣಿ-ಸಂಪಾಜೆ ಹೈವೇ ಚತುಷ್ಪಥಕ್ಕೆ ಡಿಪಿಆರ್‌ ತಯಾರಿಸಲು ಸರ್ಕಾರ ಅನುಮೋದನೆ

    – ಕಳೆದ ವಾರ ಸತೀಶ್‌ ಜಾರಕಿಹೊಳಿಗೆ ಮನವಿ ಮಾಡಿದ್ದ ಚೌಟ
    – ಶೀಘ್ರದಲ್ಲೇ ಟೆಂಡರ್‌ ಪ್ರಕ್ರಿಯೆ ಆರಂಭ

    ಮಂಗಳೂರು: ರಾಷ್ಟ್ರೀಯ ಹೆದ್ದಾರಿ-275 ರಲ್ಲಿ ಮಾಣಿಯಿಂದ ಕೊಡಗಿನ ಗಡಿಭಾಗ ಸಂಪಾಜೆವರೆಗಿನ (Mani- Sampaje) ರಸ್ತೆಯನ್ನು ಚತುಷ್ಪಥವಾಗಿ ವಿಸ್ತರಿಸುವುದಕ್ಕೆ ಸಂಬಂಧಿಸಿ ವಿಸ್ತೃತ ಯೋಜನಾ ವರದಿ(DPR) ತಯಾರಿಸುವುದಕ್ಕೆ ರಾಜ್ಯ ಸರ್ಕಾರದಿಂದ ಅನುಮತಿ ದೊರೆತಿರುವುದಾಗಿ ದಕ್ಷಿಣ ಕನ್ನಡ ಸಂಸದ (Dakshina Kannada) ಕ್ಯಾ. ಬ್ರಿಜೇಶ್‌ ಚೌಟ (Brijesh Chowta) ತಿಳಿಸಿದ್ದಾರೆ.

    ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ಅವರು ಕಳೆದ ವಾರ ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಣಿ-ಸಂಪಾಜೆ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಡಿಪಿಆರ್‌ ತಯಾರಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕ್ಯಾ. ಚೌಟ ಅವರು ಖುದ್ದು ಮನವಿ ಮಾಡಿದ್ದರು. ಈ ಮನವಿಗೆ ತುರ್ತು ಸ್ಪಂದಿಸಿರುವ ಲೋಕೋಪಯೋಗಿ ಇಲಾಖೆಯು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮಾಣಿಯಿಂದ ಸಂಪಾಜೆವರೆಗಿನ 71.60 ಕಿಮೀ. ದೂರದ ರಸ್ತೆ ಅಗಲೀಕರಣಕ್ಕೆ ಡಿಪಿಆರ್‌ ಸಿದ್ಧಪಡಿಸಲು ಸಮಾಲೋಚಕರನ್ನು ನೇಮಕಗೊಳಿಸುವುದಕ್ಕೆ ಅನುಮತಿ ನೀಡಿದೆ. ಜೊತೆಗೆ ಇದಕ್ಕೆ ತಗಲುವ ವೆಚ್ಚವಾದ 3.19 ಕೋಟಿ ರೂ.ವನ್ನು ಏಜೆನ್ಸಿ ವೆಚ್ಚದಡಿ ಭರಿಸುವುದಕ್ಕೆ ಅನುಮೋದನೆಯನ್ನು ಕೂಡ ನೀಡಿ ಆದೇಶ ಹೊರಡಿಸಿದೆ. ಹೀಗಿರುವಾಗ ಶೀಘ್ರದಲ್ಲೇ ಮಾಣಿ-ಸಂಪಾಜೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವಲ್ಲಿ ವಿಸ್ತೃತ ಯೋಜನಾ ವರದಿ ತಯಾರಿಸುವುದಕ್ಕೆ ಏಜೆನ್ಸಿ ಆಯ್ಕೆ ಮಾಡಲು ಟೆಂಡರ್‌ ಪ್ರಕ್ರಿಯೆ ನಡೆಯಲಿದೆ. ಇದನ್ನೂ ಓದಿ: ಬೆಂಗಳೂರು-ಮಂಗಳೂರು ಮಧ್ಯೆ ಹೊಸ ಎಕ್ಸ್‌ಪ್ರೆಸ್‌ವೇ ನಿರ್ಮಾಣ- ಪ್ರಯಾಣ ಸಮಯ ಅರ್ಧಕರ್ಧ ಇಳಿಕೆ

     

    ಲೋಕೋಪಯೋಗಿ ಇಲಾಖೆಯ ತುರ್ತು ಸ್ಪಂದನೆಯನ್ನು ಶ್ಲಾಘಿಸಿರುವ ಸಂಸದ ಕ್ಯಾ. ಚೌಟ ಅವರು, ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಬಿಸಿ ರೋಡ್‌-ಅಡ್ಡಹೊಳೆ, ಪುಂಜಾಲಕಟ್ಟೆ-ಚಾರ್ಮಾಡಿ ಸೇರಿ ಹಲವು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಈಗ ಜಿಲ್ಲೆಯ ಮತ್ತೊಂದು ಹೆದ್ದಾರಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮುಖ್ಯ ಎಂಜಿನಿಯರ್‌ಗೆ ಅನುಮತಿಯನ್ನು ನೀಡಿ ಆದೇಶ ಬಂದಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.

    ದಕ್ಷಿಣ ಕನ್ನಡವನ್ನು ಮಡಿಕೇರಿ-ಮೈಸೂರು ಕಡೆಯಿಂದ ಸಂಪರ್ಕಿಸುವಲ್ಲಿ ಮಾಣಿ-ಸಂಪಾಜೆ ಹೆದ್ದಾರಿಯು ಪ್ರಮುಖ ರಾಷ್ಟ್ರೀಯ ಹೆದ್ದಾರಿಯಾಗಿದೆ. ಈ ಹೆದ್ದಾರಿ ಅಭಿವೃದ್ಧಿಯಾದರೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಮಂಗಳೂರು ಬಂದರು ಅಥವಾ ಮಂಗಳೂರು ವಿಮಾನ ನಿಲ್ದಾಣ ಸಂಪರ್ಕಿಸುವುದಕ್ಕೆ ಮತ್ತಷ್ಟು ಸುಲಭವಾಗಲಿದ್ದು, ಜಿಲ್ಲೆಯ ವಾಣಿಜ್ಯೋದ್ಯಮ ಚಟುವಟಿಕೆಗಳ ಅಭಿವೃದ್ಧಿಗೂ ಹೆಚ್ಚಿನ ಅನುಕೂಲವಾಗಲಿದೆ. ಈ ಹಿನ್ನಲೆ ಲೋಕೋಪಯೋಗಿ ಇಲಾಖೆಯಿಂದ ಡಿಪಿಆರ್‌ ತಯಾರಿಕೆಗೆ ಅನುಮತಿ ಲಭಿಸಿರುವುದು ಈ ಹೆದ್ದಾರಿಯನ್ನು ಚತುಷ್ಪಥವಾಗಿ ಪರಿವರ್ತಿಸುವುದಕ್ಕೆ ಎದುರಾಗಿದ್ದ ಅಡ್ಡಿ ದೂರವಾಗಿದ್ದು, ಆದಷ್ಟು ಬೇಗ ಹೆದ್ದಾರಿ ಇಲಾಖೆಗಳಿಂದ ಮುಂದಿನ ಪ್ರಕ್ರಿಯೆ ಪೂರ್ಣಗೊಂಡು ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮಾಣಿ-ಸಂಪಾಜೆ ಹೆದ್ದಾರಿ ಅಭಿವೃದ್ಧಿ ಯೋಜನೆಯನ್ನು ಇದಕ್ಕೆ ಸಂಬಂಧಪಟ್ಟ ಸ್ಥಳೀಯ ಶಾಸಕರುಗಳ ಸಹಕಾರದೊಂದಿಗೆ ಆದಷ್ಟು ಬೇಗ ಕಾರ್ಯರೂಪಕ್ಕೆ ತರುವ ವಿಶ್ವಾಸವಿದೆ ಎಂದು ಕ್ಯಾ. ಚೌಟ ಹೇಳಿದ್ದಾರೆ. ಇದನ್ನೂ ಓದಿ: ಶಿರಾಡಿಯಲ್ಲಿ ಸುರಂಗ ಮಾರ್ಗ – ಡಿಪಿಆರ್‌ ತಯಾರಿಸಲು ಕೇಂದ್ರ ಒಪ್ಪಿಗೆ

    ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಮಂಗಳೂರು ವಿಭಾಗದ ವ್ಯಾಪ್ತಿಯ ಉಪವಿಭಾಗದಲ್ಲಿ ಬರುವ ಮಾಣಿ-ಸಂಪಾಜೆ ಹೆದ್ದಾರಿಯನ್ನು ಕೂಡ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಆದರೆ ಡಿಪಿಆರ್‌ಗೆ ಸಂಬಂಧಿಸಿದಂತೆ 2022 ರಲ್ಲಿ ಸಲ್ಲಿಕೆಯಾಗಿದ್ದ ಪ್ರಸ್ತಾವನೆಯು ನಾನಾ ಕಾರಣಗಳಿಂದ ನೆನೆಗುದ್ದಿಗೆ ಬಿದ್ದಿತ್ತು. ಅಲ್ಲದೇ ಹಿಂದಿನ ಪ್ರಸ್ತಾವನೆಯಲ್ಲಿ ಯಾವುದೇ ಪ್ರಗತಿಯನ್ನು ಕಾಣದ ಕಾರಣ ಹಿಂದಿನದನ್ನು ಹೊರತುಪಡಿಸಿ ಸಂಸದ ಕ್ಯಾ. ಚೌಟ ಹೆಚ್ಚಿನ ಮುತುವರ್ಜಿ ವಹಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಈ ಜನವರಿ ತಿಂಗಳಿನಲ್ಲಿ ಹೊಸದಾಗಿ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಅಲ್ಲದೆ ಇತ್ತೀಚೆಗೆ ಲೋಕೋಪಯೋಗಿ ಸಚಿವರು ಜಿಲ್ಲೆಗೆ ಬಂದ ವೇಳೆ ಆದಷ್ಟು ಬೇಗ ಡಿಪಿಆರ್‌ಗೆ ಅನುಮತಿಸಲು ಕ್ರಮ ಜರುಗಿಸುವಂತೆ ಕೋರಿದ್ದರು.

     

  • ಮಹತ್ವದ ಸಲಹೆ ನೀಡಿದ್ದ ಮಾಣಿ ಹುಡುಕಾಟದಲ್ಲಿದ್ದಾರೆ ತೆಂಡಲ್ಕೂರ್

    ಮಹತ್ವದ ಸಲಹೆ ನೀಡಿದ್ದ ಮಾಣಿ ಹುಡುಕಾಟದಲ್ಲಿದ್ದಾರೆ ತೆಂಡಲ್ಕೂರ್

    – ನೆಟ್ಟಿಗರ ಸಹಾಯ ಕೋರಿದ ಸಚಿನ್

    ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್, ತಮಗೆ ವಿಶೇಷ ಸಲಹೆ ನೀಡಿದ್ದ ಮಾಣಿಯ ಹುಡುಕಾಟದಲ್ಲಿದ್ದಾರೆ. ಜೊತೆಗೆ ಆತನ ಹುಡುಕಿ ಕೊಡುವಂತೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

    ತಮ್ಮ ಟ್ವೀಟ್ ಖಾತೆಯಲ್ಲಿ ವಿಡಿಯೋವೊಂದನ್ನು ಟ್ವೀಟ್ ಮಾಡಿರುವ ಅವರು, ಕೆಲವು ವರ್ಷಗಳ ಹಿಂದೆ ಚೆನ್ನೈನಲ್ಲಿ ಹೋಟೆಲ್ ಮಾಣಿಯೊಬ್ಬರೊಂದಿಗೆ ನಡೆದ ಸ್ಮರಣೀಯ ಮಾತುಕತೆಯನ್ನು ವಿವರಿಸಿದ್ದಾರೆ. ಮಾಣಿಯ ಸಲಹೆಯ ಮೇರೆಗೆ ಸಚಿನ್ ತಮ್ಮ ಆರ್ಮ್ ಗಾರ್ಡ್ ಮರುವಿನ್ಯಾಸಗೊಳಿಸಿದ್ದರು.

    ನಾನು ಕೆಲವು ವರ್ಷಗಳ ಹಿಂದೆ ಟೆಸ್ಟ್ ಸರಣಿಯ ಸಮಯದಲ್ಲಿ ಚೆನ್ನೈನ ಹೋಟೆಲ್‍ನಲ್ಲಿದ್ದೆ. ಆಗ ಒಬ್ಬ ಮಾಣಿಯೊಬ್ಬರು ಕಾಫಿ ಹಿಡಿದು ರೂಮ್‍ಗೆ ಬಂದಿದ್ದರು. ನೀವು ಅನುಮತಿ ನೀಡಿದರೆ, ನಾನು ನಿಮ್ಮೊಂದಿಗೆ ಕ್ರಿಕೆಟ್ ಬಗ್ಗೆ ಮಾತನಾಡಲು ಬಯಸುತ್ತೇನೆ ಎಂದು ಕೇಳಿದ್ದರು. ಆಗ ನಾನು ಕೇಳಿ ಎಂದು ಹೇಳಿದೆ. ಮಾತು ಮುಂದುವರಿಸಿದ ಅವರು, ನಾನು ನಿಮ್ಮ ದೊಡ್ಡ ಅಭಿಮಾನಿ. ನಾನು ನಿಮ್ಮ ಬ್ಯಾಟಿಂಗ್ ಅನ್ನು ಬಹಳ ಎಚ್ಚರಿಕೆಯಿಂದ ನೋಡುತ್ತೇನೆ. ನಾನು ಪ್ರತಿ ಚೆಂಡನ್ನು 5-7 ಬಾರಿ ರಿವೈಂಡ್ ಮಾಡುತ್ತೇನೆ. ಆದ್ದರಿಂದ ನೀವು ಆರ್ಮ್ ಗಾರ್ಡ್ ಧರಿಸಿದಾಗಲೆಲ್ಲಾ, ನಿಮ್ಮ ಬ್ಯಾಟ್ ಸ್ವಲ್ಪ ವಿಭಿನ್ನವಾಗಿ ಸ್ವಿಂಗ್ ಮಾಡಲು ಪ್ರಾರಂಭಿಸುತ್ತದೆ ಎಂದು ನಾನು ಭಾವಿಸಿದೆ ಎಂದಿದ್ದರು.

    ಮಾಣಿಯ ಮಾತು ಕೇಳಿದ ನಾನು, ಹೌದು. ಇಷ್ಟು ಒಳ್ಳೆಯದನ್ನು ಗಮನಿಸಿದ ವಿಶ್ವದ ಏಕೈಕ ವ್ಯಕ್ತಿ ನೀನು ಎಂದಿದ್ದೆ. ಆ ಘಟನೆಯ ನಂತರ ನನ್ನ ಆರ್ಮ್ ಗಾರ್ಡ್ ಅನ್ನು ಸರಿಯಾದ ಗಾತ್ರ ಮತ್ತು ಸರಿಯಾದ ಪ್ರಮಾಣದ ಪ್ಯಾಡಿಂಗ್‍ನೊಂದಿಗೆ ಮರುವಿನ್ಯಾಸಗೊಳಿಸಿದೆ ಎಂದು ಸಚಿನ್ ಹೇಳಿಕೊಂಡಿದ್ದಾರೆ.

    ನಾನು ಈವರೆಗೂ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಅವರ ಹುಡುಕಾಟದಲ್ಲಿದ್ದೇನೆ. ನೀವು ಅವರನ್ನು ಹುಡುಕಲು ಸಹಾಯ ಮಾಡಿ ಪ್ಲೀಸ್ ಎಂದು ಸಚಿನ್ ತೆಂಡೂಲ್ಕರ್, ನೆಟ್ಟಿಗರಿಗೆ ಮನವಿ ಮಾಡಿಕೊಂಡಿದ್ದಾರೆ.