Tag: ಮಾಜಿ ಸಿ.ಎಂ ಸಿದ್ದರಾಮಯ್ಯ

  • ನಾವು ಮಾಡಿದ ಕೆಲಸವನ್ನು ತಾನು ಮಾಡಿದ್ದೆಂದು ಹೇಳಿ ತಿರುಗುತ್ತಿದ್ದಾನೆ – ಸಿದ್ದರಾಮಯ್ಯ

    ನಾವು ಮಾಡಿದ ಕೆಲಸವನ್ನು ತಾನು ಮಾಡಿದ್ದೆಂದು ಹೇಳಿ ತಿರುಗುತ್ತಿದ್ದಾನೆ – ಸಿದ್ದರಾಮಯ್ಯ

    – ಪ್ರತಾಪ್ ಸಿಂಹ ವಿರುದ್ಧ ಏಕವಚನದಲ್ಲಿ ವಾಗ್ದಾಳಿ
    – ರಾಜ್ಯದ ಅಭಿವೃದ್ಧಿ ಚರ್ಚೆಗೆ ಬಿಜೆಪಿ ಸಂಸದರನ್ನು ಆಹ್ವಾನಿಸಿದ ಸಿದ್ದರಾಮಯ್ಯ

    ಮೈಸೂರು: ನಾನು, ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಬೆಂಗಳೂರು-ಮೈಸೂರು ರಸ್ತೆ ಅಭಿವೃದ್ಧಿಪಡಿಸುವಾಗ ಸಂಸದ ಪ್ರತಾಪ್ ಸಿಂಹ ಎಲ್ಲಿದ್ದ? ಮೈಸೂರಿಗೆ ಅವನ ಕೊಡುಗೆ ಏನು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ನಾವು ಮಾಡಿದ ಕೆಲಸವನ್ನು ನಾನು ಮಾಡಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾನೆ. ನಾನು ಪ್ರತಾಪ್ ಸಿಂಹ ಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ. ಪ್ರತಾಪ್ ಸಿಂಹ ಅಷ್ಟೇ ಅಲ್ಲ ಬಿಜೆಪಿಯ ರಾಜ್ಯ ಸಂಸದರು ಯಾವುದೇ ಕೆಲಸವನ್ನು ಮಾಡಿಲ್ಲ ಎಂದು ಕಿಡಿಕಾರಿದರು.

    ಚಾಮರಾಜನಗರ ಕ್ಷೇತ್ರದ ಹಾಲಿ ಸಂಸದ ಧ್ರುವನಾರಾಯಣ ಅವರ ಜೊತೆಗೆ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಲು ಬಿಜೆಪಿಯವರು ಬರುತ್ತಾರಾ? ಸಂಸದೆ ಶೋಭಾ ಕರಂದ್ಲಾಜೆ ಬರುತ್ತಾರಾ? ಇಲ್ಲವೇ ಸಂಸದರಾದ ನಳಿನ್ ಕುಮಾರ್ ಹಾಗೂ ಅನಂತಕುಮಾರ್ ಹೆಗ್ಡೆ ಚರ್ಚೆಗೆ ಬರುತ್ತಾರಾ? ಬಿಜೆಪಿ ಸಂಸದರು ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಮಾಡದೇ ಸುಮ್ಮನೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ತುಮಕೂರಿನ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ, ಈ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಜೊತೆಗೆ ಮಾತನಾಡುತ್ತೇನೆ. ನಾನು ಇಲ್ಲಿಯವರ ಜೊತೆ ಮಾತನಾಡುವುದಿಲ್ಲ ಅದರ ಅಗತ್ಯವಿಲ್ಲ. ಸ್ಥಳೀಯರು ಏನೇ ಮಾತನಾಡಿಕೊಳ್ಳಲಿ ನಾನು 28 ಕ್ಷೇತ್ರದಲ್ಲೂ ಪ್ರಚಾರಕ್ಕೆ ಹೋಗುತ್ತೇನೆ. ಇದರಲ್ಲಿ ಮಂಡ್ಯ ಹಾಸನ ಎಂದು ಪ್ರತ್ಯೇಕಿಸಬೇಡಿ. ಈ ಬಾರಿ ನಾವು ರಾಜ್ಯದಲ್ಲಿ 20 ಸ್ಥಾನಗಳನ್ನು ಗೆಲ್ಲುತ್ತೇವೆ. ಮೈತ್ರಿ ಸರ್ಕಾರದಲ್ಲಿ ಯಾವುದೇ ಬಿರುಕಿಲ್ಲ ಎಂದರು.

    ಮಾಜಿ ಸಚಿವ ಎ.ಮಂಜು ಅವರು ಪಕ್ಷ ಬಿಡುವುದಿಲ್ಲ. ಅವರ ಜೊತೆ ಮಾತನಾಡಿದ್ದೇನೆ. ಅಷ್ಟೇ ಅಲ್ಲದೆ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ನಮ್ಮ ಜೊತೆಯಲ್ಲಿದ್ದಾರೆ. ಯಾರೂ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv