ಬೆಂಗಳೂರು: ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಇನ್ನು ಹತ್ತು ದಿನಗಳ ಕಾಲ ರಾಜಕೀಯದಿಂದ ದೂರ ಉಳಿಯಲಿದ್ದಾರೆ. ಇಂದಿನಿಂದ ಆಗಸ್ಟ್ 31ರ ವರೆಗೆ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡಯಲಿದ್ದಾರೆ.
ಇಂದು ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ತೆರಳಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಆಗಸ್ಟ್ 31ರ ವರೆಗೆ ಅಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾರೆ. ಈ ಮೂಲಕ 10 ದಿನಗಳ ಕಾಲ ರಾಜಕೀಯದಿಂದ ಸಂಪೂರ್ಣ ದೂರವಿರಲಿರಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಓಣಂ ಸಂಭ್ರಮ- ಉಯ್ಯಾಲೆ ಆಡಿದ ಶಶಿ ತರೂರ್
ಜಿಂದಾಲ್‍ಗೆ ಹೊರಡುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಹೋಗುತ್ತಿದ್ದೇನೆ. 10 ದಿನಗಳ ಕಾಲ ನಾನು ಮನೆಯಲ್ಲಿ ಇರಲ್ಲ ಎಂದಿದ್ದಾರೆ. ಇದೇ ವೇಳೆ ನೆಹರು ಮತ್ತು ವಾಜಪೇಯಿ ಮಾದರಿ ನಾಯಕರು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪಾಪ ಗಡ್ಕರಿ ಅವರು ಸತ್ಯ ಹೇಳಿದ್ದಾರೆ. ಸಿ.ಟಿ.ರವಿಗೆ ಸ್ವಲ್ಪ ಜ್ಞಾನೋದಯವಾದರೆ ಒಳ್ಳೆಯದು ಎಂದಿದ್ದಾರೆ.
– ಆರು ಮಂದಿ ಮಾಜಿ ಸಿಎಂಗಳಿದ್ದೇವೆ
– ಸರ್ಕಾರ, ಗೃಹ ಸಚಿವರಿಗೆ ಪತ್ರ ಬರೆಯುವೆ
ಬೆಂಗಳೂರು: ನಿರೂಪಕಿ, ನಟಿ ಅನುಶ್ರೀ ಪ್ರಕರಣದಲ್ಲಿ ‘ಮಾಜಿ ಸಿಎಂ’ ಹೆಸರು ಪ್ರಸ್ತಾಪ ಆಗಿದ್ದು, ಈ ಹಿನ್ನೆಲೆಯಲ್ಲಿ ಆ ಮಾಜಿ ಸಿಎಂ ಯಾರು ಎಂದು ಬಹಿರಂಗ ಪಡಿಸಿ ಎಂದು ಹೆಚ್. ಡಿ ಕುಮಾರಸ್ವಾಮಿ ಗರಂ ಆಗಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡ್ರಗ್ಸ್ ಕೇಸ್ ಪ್ರಕರಣ ಹಳ್ಳ ಹಿಡಿಯುತ್ತೆ ಎಂದು ನಾನು ಮೊದಲೇ ಹೇಳಿದ್ದೆ. ದಿನಕ್ಕೊಂದು ಕಪೋಲ ಕಲ್ಪಿತ ವರದಿಗಳು ಬರುತ್ತಿವೆ. ಇತ್ತೀಚೆಗೆ ಟಿವಿ ಆ್ಯಂಕರ್ ಅನುಶ್ರೀ ವಿಚಾರವಾಗಿ ಲಿಂಕ್ ಗಳು ಶುರುವಾಗಿವೆ. ಸಿಸಿಬಿ ಪೊಲೀಸರು ನೋಟಿಸ್ ನೀಡಿದ ತಕ್ಷಣ ರಾಜ್ಯದ ಮೂರು ರಾಜಕೀಯ ಪಕ್ಷಗಳ ಪ್ರಭಾವಿ ನಾಯಕರಿಗೆ ಒತ್ತಡ ತರಲು ಆ ಹೆಣ್ಣು ಮಗಳು ಫೋನ್ ಮೂಲಕ ಚರ್ಚೆ ಮಾಡಿದ್ದಾರೆ. ಸಿಸಿಬಿ ಅಧಿಕಾರಿಗಳಿಗೆ ನಂಬರ್ ಸಿಕ್ಕಿದೆ ಅಂತೆ. ಅವರ ಕಾಲ್ ಲಿಸ್ಟ್‌ನಲ್ಲಿ ಪ್ರಭಾವಿ ನಾಯಕರ ನಂಬರ್ ನೋಡಿ ಸಿಸಿಬಿ ಪೊಲೀಸ್ ಶಾಕ್ ಆಗಿದ್ದಾರಂತೆ ಎಂಬ ವರದಿಯನ್ನು ನಾನು ನೋಡಿದೆ ಎಂದರು.
ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿರೋದು ನಾನು. ನಾನು ಬದುಕಿದ್ದೇನೆ. ಮಾಜಿ ಮುಖ್ಯಮಂತ್ರಿಗಳಲ್ಲಿ ನಾನು, ಸಿದ್ದರಾಮಯ್ಯ, ಎಸ್.ಎಂ.ಕೃಷ್ಣ, ಮೊಯ್ಲಿ, ಜಗದೀಶ್ ಶೆಟ್ಟರ್, ಡಿವಿಎಸ್ ಇನ್ನೂ ಇದ್ದೇವೆ. ಯಾವ ಅಧಿಕಾರಿ ಮಾಜಿ ಸಿಎಂ ಅಂತ ಮಾಹಿತಿ ಕೊಟ್ಟಿದ್ದಾರೆ. ಯಾವ ಆಧಾರದ ಮೇರೆಗೆ ಮಾಜಿ ಮುಖ್ಯಮಂತ್ರಿ ಹೆಸರು ಬಂದಿದೆ. ಯಾರು ಆ ಮಾಜಿ ಸಿಎಂ ಹೇಳಬೇಕು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಆ ಹೆಣ್ಣು ಮಗಳು ಮಾಜಿ ಸಿಎಂ ಜೊತೆ ಮಾತಾಡಿದ್ದರೆ ಸತ್ಯ ಗೊತ್ತಾಗಲಿ. ಯಾರು ಆ ಮಾಜಿ ಸಿಎಂ ಅಂತ ಸಾರ್ವಜನಿಕವಾಗಿ ಮೊದಲು ಜನರ ಮುಂದೆ ಇಡಲಿ. ಆ ಮಾಜಿ ಸಿಎಂಗೆ ಶಿಕ್ಷೆ ಆಗಲಿ. ಯಾವ ಮಾಜಿ ಸಿಎಂ ಮಗನ ಹೆಸರು ಇದೆ ಗೊತ್ತಾಗಲಿ. ನಾನು ಯಾರು ಈ ವರದಿ ಕೊಟ್ಟಿದ್ದಾರೋ ಆ ವರದಿಗಾರರ ಬಳಿ ಬೇರೆ ಮೂಲದಿಂದ ತಿಳಿದುಕೊಂಡೆ. ಒಂದು ನಂಬರ್‌ನಿಂದ ಮಾಹಿತಿ ಕೊಟ್ಟಿದ್ದಾನೆ ಎಂದು ನನಗೆ ವರದಿಗಾರ ಫೋನ್ ನಂಬರ್ ಕೊಟ್ಟಿದ್ದಾರೆ. ಆ ನಂಬರ್ ಯಾರದು ಎಂದು ಪರಿಶೀಲಿಸಿದೆ. ಇದು ಶಿವಪ್ರಕಾಶ್ ನಾಯಕ್ ಬಳಸುತ್ತಿದ್ದ ನಂಬರ್ ಆಗಿದೆ. ಹೀಗಾಗಿ ಇದರ ಬಗ್ಗೆ ಅಧಿಕಾರಿ ಶಿವಪ್ರಕಾಶ್ ನಾಯಕ್ ಸತ್ಯ ಹೇಳಬೇಕು. ಮಾಹಿತಿ ಕೊಟ್ಟಿರೋದು ಸತ್ಯನಾ ಅನ್ನೋದನ್ನ ಹೇಳಲಿ ಎಂದರು.
ಯಾವ ಮಾಜಿ ಸಿಎಂ ಅಂತ ಜನರು ತಿಳಿದುಕೊಳ್ಳಬೇಕು. ನಾನು ಸರ್ಕಾರಕ್ಕೆ, ಸಿಎಂಗೆ, ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಲ್ಲಿ ಸತ್ಯಾಸತ್ಯತೆ ಏನು ಅನ್ನೋದು ಗೊತ್ತಾಗಬೇಕಿದೆ. ಯಾರು ಮಾಹಿತಿ ಕೊಟ್ಟಿದ್ದಾರೆ? ಯಾರು ಇದ್ದಾರೆ? ಯಾವ ಮಾಜಿ ಸಿಎಂ ಇದ್ದಾರೆ ಅನ್ನೋ ಸತ್ಯ ಗೊತ್ತಾಗಲಿ. ಆ ಮಾಜಿ ಮುಖ್ಯಮಂತ್ರಿ ಯಾರು ಎಂಬುದನ್ನು ಸರ್ಕಾರ ಹೊರ ತರಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಯಾರು ಆ ಮಾಜಿ ಮುಖ್ಯಮಂತ್ರಿ ಎಂಬುದನ್ನು ಮಾಧ್ಯಮಗಳಿಗೆ ಕೊಟ್ಟವರು ಯಾರು?, ಮಾಜಿ ಸಿಎಂ ಮಗ ಎಂದೂ ವರದಿಗಳು ಬರುತ್ತಿವೆ. ಈ ರೀತಿಯ ಕಪೋಲಕಲ್ಪಿತ ವರದಿಗಳನ್ನು ಸುಮ್ಮನೆ ಬಿಡಬಾರದು. ನಾನಂತೂ ಇದನ್ನು ತನಿಖೆಗೆ ಒತ್ತಾಯ ಮಾಡುತ್ತೇನೆ. ನಾನು ಅಷ್ಟು ಸುಲಭಕ್ಕೆ ಬಿಡೋನು ಅಲ್ಲ. ಯಾರು ಒತ್ತಡ ಹಾಕಿದವರು ಅನ್ನೋದು ಗೊತ್ತಾಗಬೇಕು?. ತನಿಖೆ ಹಳ್ಳ ಹಿಡಿಸಲು, ದಾರಿ ತಪ್ಪಿಸಲು ಬಿಡಲ್ಲ. ಒತ್ತಡ ಹಾಕಿದವನು ಯಾವನೇ ಆಗಿರಲಿ, ಅವನನ್ನ ಒದ್ದು ಒಳಗೆ ಹಾಕಲಿ. ಮಂಗಳೂರು ಕಮಿಷನರ್‌ಗೂ ನಾನು ಕರೆ ಮಾಡಿ ಮಾತಾಡಿದ್ದೇನೆ ಎಂದು ಎಚ್‍ಡಿಕೆ ಹೇಳಿದರು.
– ಪಿಪಿಇ ಕಿಟ್ ಕೊಡಿ ಅಂದ್ರೆ ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಅಂತಾರೆ
– ಪ್ರಧಾನಿ ಮೋದಿ ವಿರುದ್ಧ ಮಾಜಿ ಸಿಎಂ ವಾಗ್ದಾಳಿ
– ಬಿಎಸ್‍ವೈ ಸರ್ಕಾರ ಬಿದ್ರೆ ನಮ್ಮ ಕೈವಾಡ ಇರಲ್ಲ
ಬೆಂಗಳೂರು: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನ ಭಾರತಕ್ಕೆ ಕರೆದುಕೊಂಡು ಬಾರದಿದ್ದರೆ ಕೊರೊನಾ ವೈರಸ್ ಹೆಚ್ಚಾಗುತ್ತಿರಲಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕುಮಾರಕೃಪ ನಂಬರ್ 1 ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ಹಬ್ಬಿದ್ದನ್ನು ತಬ್ಲಿಘಿಗಳ ಮೇಲೆ ಡೈವರ್ಟ್ ಮಾಡಲಾಯಿತು. ಅಮೆರಿಕ, ಇಟಲಿ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ತಬ್ಲಿಘಿಗಳು ಇದ್ರಾ? ಕೊರೊನಾ ಸಂಕಷ್ಟದ ಸಮಯದಲ್ಲೂ ರಾಜಕೀಯ ಮಾಡಿದರು ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದರು.
ದೇಶದಲ್ಲಿ ಮಾರ್ಚ್ 1ರಿಂದಲೇ ವಿಮಾನ ಸಂಪೂರ್ಣ ಬಂದ್ ಮಾಡಬೇಕಿತ್ತು. ತಬ್ಲಿಘಿಗಳಿಗೆ ಯಾಕೆ ಸಮಾವೇಶ ಮಾಡುವುದಕ್ಕೆ ಅವಕಾಶ ಕೊಟ್ಟಿದ್ದರು. ಕೇಂದ್ರ ಸರ್ಕಾರದ ಗುಪ್ತಚರ ಏನಾಗಿತ್ತು? ಇಲ್ಲಿನ ತಬ್ಲಿಘಿಗಳಿಗೆ ಬೇರೆ ದೇಶದಿಂದ ಬಂದವರಿಂದ ಕೊರೊನಾ ಸೋಂಕು ತಗುಲಿದೆ ಎಂದು ಹೇಳಿದರು.
ನರೇಂದ್ರ ಮೋದಿ ಅವರು 2019ರ ಮೇ 30ರಲ್ಲಿ ಎರಡನೇ ಅವಧಿಗೆ ಪ್ರಧಾನಿಯಾದರು. ದೇಶದ ಜನ ಅವರಿಗೆ ಎರಡನೇ ಅವಧಿಗೂ ಅವಕಾಶ ಕಲ್ಪಿಸಿದ್ದಾರೆ. ಮೊದಲ ಅವಧಿಯಲ್ಲಿ ಅವರ ಆಡಳಿತ ಸಂಪೂರ್ಣವಾಗಿ ವೈಪಲ್ಯವನ್ನು ಕಂಡಿತ್ತು. ದೇಶದ ಆರ್ಥಿಕ ಪರಿಸ್ಥಿತಿ ಕೆಲಮಟ್ಟಕ್ಕೆ ಹೋಗಿತ್ತು. ಮೊದಲ 5 ವರ್ಷದಲ್ಲಿ ಜನತೆಗೆ ಕೊಟ್ಟ ಭರವಸೆ ಈಡೇರಿಸಿಲ್ಲ. ಸುಳ್ಳುಗಳನ್ನು ಹೇಳುತ್ತಿದ್ದರು. 6ನೇ ವರ್ಷದಲ್ಲೂ ಕೂಡ ಅವರ ಸುಳ್ಳು ಮುಂದುವರಿದಿದೆ. ಇದೇ ಅವರ ಒಂದು ವರ್ಷದ ಸಾಧನೆ ಎಂದು ವಾಗ್ದಾಳಿ ನಡೆಸಿದರು.
ಕೋವಿಡ್ ನಿರ್ವಹಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪೂರ್ಣ ವಿಫಲರಾಗಿದ್ದಾರೆ. ಮಾರ್ಚ್ 8ರಂದು ಕರ್ನಾಟಕದಲ್ಲಿ ಮೊದಲ ಕೇಸ್ ಬಂದಿತ್ತು. ನಮ್ಮ ರಾಜ್ಯಕ್ಕೆ ಪಿಪಿಇ ಕಿಟ್ ಯಾವಾಗ ಬಂತು? ಹತ್ತು ಲಕ್ಷದಲ್ಲಿ ಹತ್ತು ಸಾವಿರ ಜನರಿಗೆ ಟೆಸ್ಟ್ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ದೇಶದಲ್ಲಿ 2,800, ರಾಜ್ಯದಲ್ಲಿ 4,100 ಜನರಿಗೆ ಮಾತ್ರ ಟೆಸ್ಟ್ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ನಂಬರ್ 1 ಅಂತ ಹೇಳುತ್ತಿದ್ದಾರೆ. ಆದರೆ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಪಿಪಿಇ ಕಿಟ್ ಕೊಡಿ ಅಂದ್ರೆ ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಅಂತಾರೆ. ಇದು ಅವರ ಸಾಧನೆ ಎಂದು ದೂರಿದರು.
ಲಾಕ್‍ಡೌನ್ ಆಗಿ ಕೆಲಸವೇ ಇಲ್ಲದವರಿಗೆ ದುಡ್ಡು ಎಲ್ಲಿಂದ ಬರುತ್ತದೆ? ವೃತ್ತಿಪರ ಸಮುದಾಯಕ್ಕೆ 10 ಸಾವಿರ ರೂ. ಕೊಡಿ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇವೆ. ಇದಕ್ಕೆ 10 ಸಾವಿರ ಕೋಟಿ ರೂ. ವೆಚ್ಚವಾಗುತ್ತಿತ್ತು. ಆದರೆ ಅವರು ಮಾಡಿದ್ದೇನು? ಏನು ಮಾಡಲಿಲ್ಲ ಎಂದು ಕಿಡಿಕಾರಿದರು.
ಬಿಎಸ್‍ವೈ ಸರ್ಕಾರ ಅಧಿಕಾರಕ್ಕೆ ಬಂದು 10 ತಿಂಗಳು ಆಯ್ತು. ಪ್ರವಾಹ ಸಂತ್ರಸ್ಥರಿಗೆ ಮನೆ ಕಟ್ಟಿಕೊಟ್ಟಿಲ್ಲ. ಇದಕ್ಕೆ ಕೇಂದ್ರ ಸರ್ಕಾರ ಸಹಾಯ ಮಾಡಿಲ್ಲ. ಒಂದು ಲಕ್ಷ ಕೋಟಿ ನಷ್ಟ ಆಗಿತ್ತು. ಒಂದು ಸರ್ವೇ ಕೂಡ ಮಾಡಿಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಕೇಳುವ ಧೈರ್ಯ ಸಿಎಂ ಅವರಿಗೆ ಇದೆಯಾ ಎಂದು ಪ್ರಶ್ನಿಸಿದರು.
ಸಿಎಂ ಯಡಿಯೂರಪ್ಪ ನಮ್ಮ ಲೀಡರ್ ಅಲ್ಲ. ಮುಖ್ಯಮಂತ್ರಿ ಮಾತ್ರ ಅಂತ ಶಾಸನ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಹಾಗಾದರೆ ಯಡಿಯೂರಪ್ಪ ಅವರು ನಾಯಕರಲ್ಲ ಅಂತ ಒಪ್ಪಿಕೊಂಡಿಲ್ಲ. ಅವರಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬಿಜೆಪಿಯವರ ಆಂತರಿಕ ಕಚ್ಚಾಟದಲ್ಲಿ ನಾವು ಮಧ್ಯಪ್ರವೇಶ ಮಾಡಲ್ಲ ಎಂದು ಹೇಳಿದರು.
ಮಾಜಿ ಸಚಿವ ಉಮೇಶ್ ಕತ್ತಿ ನನ್ನ ಸ್ನೇಹಿತ. ಜೆ.ಎಚ್.ಪಟೇಲ್ ಸರ್ಕಾರದಲ್ಲಿ ನಾನು ಡಿಸಿಎಂ, ಅವರು ಲೋಕೋಪಯೋಗಿ ಸಚಿವರಾಗಿದ್ದರು. ಹಾಗಾಗಿ ನಮ್ಮಿಬ್ಬರ ಸ್ನೇಹ ಚೆನ್ನಾಗಿದೆ. ಉಮೇಶ್ ಕತ್ತಿ ನನ್ನ ಭೇಟಿಯಾಗಿಲ್ಲ. ಇಂತಹ ಭ್ರಷ್ಟ ಸರ್ಕಾರ ಹೋಗಬೇಕು. ಅವತ್ತು ಪ್ರಧಾನಿ ಮೋದಿ ಶೇ.10 ಸರ್ಕಾರ ಅಂತ ನಮ್ಮ ಮೇಲೆ ಆರೋಪ ಮಾಡಿದ್ದರು. ಇವತ್ತು ಎಷ್ಟು ಪರ್ಸೆಂಟ್ ಸರ್ಕಾರ ಎನ್ನುವುದನ್ನ ಅವರ ಪಕ್ಷದವರೇ ಹೇಳುತ್ತಿದ್ದಾರೆ. ಈ ಕೆಟ್ಟ ಸರ್ಕಾರ ಇರಬಾರದು, ಹೋಗಬೇಕು ಎಂದು ಗುಡುಗಿದರು.
ಬಿಜೆಪಿ ಅಸಮಾಧಾನ ಶುರುವಾಗಿದೆ. ಹೀಗಾಗಿ ಸಚಿವ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿ ಇದ್ದಾರೆ ಅಂತ ಹೇಳಿದ್ದಾರೆ. ಅವರ ಜೊತೆಗೆ ಮಹೇಶ್ ಕುಮಟಳ್ಳಿ ಬಿಟ್ರೆ ಬೇರೆ ಯಾರು ಹೋಗಲಿಲ್ಲ. ಆದ್ರೆ ಕುಮಟಳ್ಳಿ ಅವರನ್ನು ಮಂತ್ರಿ ಮಾಡಲಿಲ್ಲ. ಈ ಸರ್ಕಾರ ಬಿಜೆಪಿ ಅವರಿಂದಲೇ ಬೀಳುವ ಸಾಧ್ಯತೆ ಇದೆ. ಸರ್ಕಾರ ಬಿದ್ರೆ ನಮ್ಮ ಕೈವಾಡ ಇರಲ್ಲ. ಇಷ್ಟೊಂದು ಕೆಟ್ಟ ಭ್ರಷ್ಟ ಸರ್ಕಾರ ನಾನು ನೋಡಿರಲಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಸರ್ಕಾರ ಹೋಗುವುದು ಉತ್ತಮ ಎಂದು ವಾಗ್ದಾಳಿ ನಡೆಸಿದರು.
ನನ್ನ ಕ್ಷೇತ್ರಕ್ಕೆ 600 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ ಎನ್ನುವುದು ಸುಳ್ಳು. ಒಂದು ವೇಳೆ ಕೊಟ್ಟಿದ್ದರೆ ದಾಖಲೆ ತೋರಿಸಲಿ. ನಾನು ಒಬ್ಬ ಶಾಸಕ, ಸರ್ಕಾರದಿಂದ ಅನುದಾನ ಪಡೆಯುವುದಕ್ಕೆ ಅರ್ಹ ಎಂದು ಹೇಳಿದರು.
ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿ ನಾಲ್ಕು ಕುಟುಂಬ ಸ್ವಜಾತಿಯವರಿಂದಲೇ ಬಹಿಷ್ಕಾರಕ್ಕೆ ಒಳಗಾಗಿದೆ.
ತಮಗಾದ ಅನ್ಯಾಯ ಪ್ರಶ್ನೆ ಮಾಡಿದ್ದಕ್ಕೆ ಕಳೆದ 9 ವರ್ಷಗಳಿಂದ ನಾಲ್ಕು ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ. ನಿವೇಶನ ವಿಚಾರವಾಗಿ ನಾಲ್ಕು ಕುಟುಂಬಗಳನ್ನು ಸಮುದಾಯದ ಮುಖಂಡರು ಬಹಿಷ್ಕಾರಕ್ಕೆ ಒಳಪಡಿಸಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಎಸ್. ಹೊಸಕೋಟೆಯಲ್ಲಿ ಈ ಬಹಿಷ್ಕಾರ ನಡೆದಿದೆ. ಗ್ರಾಮದ ಉಪ್ಪಾರ ಸಮುದಾಯದ ಮುಖಂಡರು ಸ್ವಜಾತಿಯವರಿಗೆ ಬಹಿಷ್ಕಾರ ಹಾಕಿದ್ದಾರೆ. ಗ್ರಾಮದ ರೇವಮ್ಮ, ಮಾದಶೆಟ್ಟಿ ಕುಟುಂಬಗಳ ಮೇಲೆ ಹಲವಾರು ನಿರ್ಬಂಧಗಳನ್ನು ಹೇರಿ ಬಹಿಷ್ಕಾರ ಹಾಕಲಾಗಿದೆ.
ಗ್ರಾಮದಲ್ಲಿ ಯಾರು ಕೂಡ ಇವರನ್ನು ಕೆಲಸಕ್ಕೆ ಕರೆಯುವಂತಿಲ್ಲ. ಜೊತೆಗೆ ಯಾರು ಕೂಡ ಇವರನ್ನು ಮಾತನಾಡಿಸುವಂತಿಲ್ಲ. ಅಂಗಡಿಗಳಲ್ಲಿ ಪದಾರ್ಥಗಳನ್ನು ಕೊಡುವಂತಿಲ್ಲ. ಈ ಬಗ್ಗೆ ಈ ಕುಟುಂಬಗಳು ತಾಲೂಕು ಆಡಳಿತಕ್ಕೆ ದೂರು ನೀಡಿದ್ದರು.
ಬಹಿಷ್ಕಾರದಿಂದ ಮುಕ್ತಿ ಕೊಡಿಸುವಲ್ಲಿ ನಂಜನಗೂಡು ತಾಲೂಕು ಆಡಳಿತ ವಿಫಲವಾಗಿದೆ. ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸದೇ ತಹಶೀಲ್ದಾರ್ ಬೇಜಾವ್ದಾರಿ ತೋರಿದ್ದಾರೆ. ಇದು ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದ ವ್ಯಾಪ್ತಿಗೆ ಈ ಗ್ರಾಮ ಬರುತ್ತದೆ.
– ಸಿದ್ದರಾಮಯ್ಯ ಬಡಿಗೆ ಹೇಳಿಕೆಗೆ ಸಿಎಂ ತಿರುಗೇಟು
– ಬಜೆಟ್‍ನಲ್ಲಿ ಕೃಷಿಗೆ ಆದ್ಯತೆ
ಮೈಸೂರು: ಪಾಕಿಸ್ತಾನ ಜಿಂದಾಬಾದ್ ಎಂದ ದೇಶದ್ರೋಹಿ ಅಮೂಲ್ಯಾಗೆ ಹಿಂದೆ ನಕ್ಸಲ್ ಜೊತೆ ಸಂಬಂಧ ಇದ್ದಿದ್ದು ಸಾಬೀತಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಸಿಎಂ, ಮಗಳ ಕೈ-ಕಾಲು ಮುರಿಯಿರಿ. ಅವಳಿಗೆ ಜಾಮೀನು ಸಿಗಬಾರದು. ಮಗಳ ರಕ್ಷಣೆಗೆ ನಾವು ಹೋಗುವುದಿಲ್ಲ ಅಂತ ಅಮೂಲ್ಯಾ ತಂದೆ ಹೇಳಿದ್ದಾರೆ. ಬಹಳ ಮುಖ್ಯವಾಗಿ ಇದರ ಹಿಂದೆ ಇರುವ ಸಂಘಟನೆ ಯಾವುದು? ಯಾರು ಈ ರೀತಿ ಮನೋಭಾವ ಬೆಳೆಸುತ್ತಿದ್ದಾರೆ ಎನ್ನುವುದನ್ನು ತಿಳಿಯಬೇಕಿದೆ. ಜೊತೆಗೆ ಅವರ ಮೇಲೂ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇದು ಇಲ್ಲಿಗೆ ಕೊನೆಯಾಗುವುದಿಲ್ಲ ಎಂದರು. ಇದನ್ನೂ ಓದಿ: ನಿನ್ನೆ ಅಮೂಲ್ಯ, ಇಂದು ಆರ್ದ್ರಾ- ಹಿಂದೂ ಸಂಘಟನೆ ಪ್ರತಿಭಟನೆಯಲ್ಲಿ ದೇಶದ್ರೋಹಿಯ ಬಂಧನ
ಶಾಂತಿ ಸುವ್ಯವಸ್ಥೆ ಹಾಳು ಮಾಡಲು ಷಡ್ಯಂತ್ರ ನಡೆದಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಮುಂದಿನ ದಿನಗಳಲ್ಲಿ ಇದರ ಹಿಂದೆ ಯಾವ ಸಂಘಟನೆ ಇದೆ ಎಂದು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ತನಿಖೆಯಿಂದ ಅಮೂಲ್ಯಾಳಿಗೆ ಯಾರು ಪ್ರೇರಣೆ ಕೊಡುತ್ತಿದ್ದಾರೆ ಎನ್ನುವುದು ಗೊತ್ತಾಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ದೇಶದ್ರೋಹಿಗಳನ್ನ ಸಹಿಸೋಕೆ ಸಾಧ್ಯವಿಲ್ಲ: ಸಚಿವ ಬೊಮ್ಮಾಯಿ ಎಚ್ಚರಿಕೆ
ಬಜೆಟ್:
2020ರ ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಸಿಎಂ, ಈ ಬಾರಿಯ ಬಜೆಟ್‍ನಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆಯ ಸಿಗಲಿದೆ. ರೈತರಿಗೆ ಹೆಚ್ಚಿನ ಆದ್ಯತೆ ಕೊಡುತ್ತೇವೆ, ನೆರೆ ಸಂತ್ರಸ್ತರಿಗೆ ನಾವು ಎಲ್ಲ ರೀತಿಯ ಸಹಾಯ ಮಾಡಿದ್ದೇವೆ. ಚಿಕ್ಕ ಪುಟ್ಟ ಲೋಪವಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳುತ್ತೇವೆ ಎಂದರು.
ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾದಲ್ಲಿ ಎಷ್ಟು ಖೋತಾ ಆಗಿದೆ ಎಂಬುದನ್ನು ಲೆಕ್ಕ ಹಾಕುತ್ತಿದ್ದೇವೆ. ಅದನ್ನೆಲ್ಲ ಸರಿದೂಗಿಸಿ ಬಜೆಟ್ ಮಾಡುತ್ತೇವೆ ಎಂದು ಹೇಳಿದರು.
ಸಿದ್ದುಗೆ ತಿರುಗೇಟು:
ಕೆಲಸ ಮಾಡದಿದ್ದರೆ ಜನ ಬಡಿಗೆಯಲ್ಲಿ ಹೊಡೆಯುತ್ತಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ಮುಂದಿನ 6 ತಿಂಗಳಲ್ಲಿ ಸಿದ್ದರಾಮಯ್ಯ ಅವರ ಬಣ್ಣ ಬಯಲು ಮಾಡಲು ನಾನು ಸಿದ್ಧನಿದ್ದೇನೆ. ಅಲ್ಲಿಯವರೆಗೆ ತಾಳ್ಮೆಯಿಂದ ಕಾದು ನೋಡಲಿ ಎಂದು ಹೊಸ ಬಾಂಬ್ ಸಿಡಿಸಿದರು.
ಸಿದ್ದರಾಮಯ್ಯ ಅವರು 5 ವರ್ಷ ಹಾಗೂ ಎಚ್.ಡಿ. ಕುಮಾರಸ್ವಾಮಿ ಒಂದೂವರೆ ವರ್ಷ ಸಿಎಂ ಆಗಿದ್ದರು. ಆದರೆ ನಾನು ಮುಖ್ಯಮಂತ್ರಿಯಾಗಿ ಆರು ತಿಂಗಳಾಗಿದೆ ಅಷ್ಟೆ. ನನ್ನ ಕಡೆ ಬೊಟ್ಟು ಮಾಡುವ ಮೊದಲು ಅವರು ಏನು ಮಾಡಿದ್ದಾರೆ ಎನ್ನುವುದನ್ನು ತಿರುಗಿ ನೋಡಲಿ. ಆಗ ಜನ ಅವರ ಹಿಂದೆ ಬಡಿಗೆ ಹಿಡಿದು ಬರುತ್ತಾರೋ? ನಮ್ಮ ಬೆನ್ನು ಹಿಂದೆ ಬರುತ್ತಾರೋ ನೋಡೋಣ ಎಂದರು.
ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ಹಾಡಿ ಹೊಗಳಿದ್ದಾರೆ.
ಪ್ರತಾಪ್ ಸಿಂಹ ತಮ್ಮ ಫೇಸ್‍ಬುಕ್ ಹಾಗೂ ಟ್ವಿಟರ್ ಖಾತೆಯಲ್ಲಿ ಸಿದ್ದರಾಮಯ್ಯ ಅವರ ಕೆಲಸವನ್ನು ಹೊಗಳಿ ಪೋಸ್ಟ್ ಮಾಡಿದ್ದಾರೆ. ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ನಿರ್ಮಾಣ ಮಾಡಿರುವ ಬಗ್ಗೆ ಸಿದ್ದರಾಮಯ್ಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ, ಸಿದ್ದರಾಮಯ್ಯರನ್ನು ಸಾಹೇಬ್ರು ಎಂದು ಉಲ್ಲೇಖಿಸಿದ್ದಾರೆ.
ಆತ್ಮೀಯರಾದ ಅಣ್ಣಯ್ಯ ನಾಯಕರು ಲಘು ಹೃದಯಾಘಾತಕ್ಕೊಳಗಾಗಿ ಮೈಸೂರಿನ ಜಯದೇವ ಆಸ್ಪತ್ರೆ ಸೇರಿದ್ದು,ಅವರನ್ನು ನೋಡಲು ಹೋಗಿದ್ದೆ. ಕಟ್ಟಡ ಮತ್ತು ವ್ಯವಸ್ಥೆ ಅದ್ಭುತವಾಗಿದೆ. 168 ಕೋಟಿ ಕೊಟ್ಟು ಅತ್ಯಾಧುನಿಕ ಕಟ್ಟಡ ನಿರ್ಮಾಣಕ್ಕೆ ಕಾರಣರಾದ ಮಾಜಿ ಮುಖ್ಯಮಂತ್ರಿ @siddaramaiah ಸಾಹೇಬ್ರಿಗೆ,ಉತ್ತಮ ಸೇವೆ ನೀಡುತ್ತಿರುವ ಡಾ. ಮಂಜುನಾಥ್ ಧನ್ಯವಾದಗಳು. pic.twitter.com/WsUuusDuBE
ಟ್ವೀಟ್‍ನಲ್ಲಿ ಏನಿದೆ?
ಆತ್ಮೀಯರಾದ ಅಣ್ಣಯ್ಯ ನಾಯಕರು ಲಘು ಹೃದಯಾಘಾತಕ್ಕೊಳಗಾಗಿ ಮೈಸೂರಿನ ಜಯದೇವ ಆಸ್ಪತ್ರೆ ಸೇರಿದ್ದು, ಅವರನ್ನು ನೋಡಲು ಹೋಗಿದ್ದೆ. ಕಟ್ಟಡ ಮತ್ತು ವ್ಯವಸ್ಥೆ ಅದ್ಭುತವಾಗಿದೆ. 168 ಕೋಟಿ ಕೊಟ್ಟು ಅತ್ಯಾಧುನಿಕ ಕಟ್ಟಡ ನಿರ್ಮಾಣಕ್ಕೆ ಕಾರಣರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರಿಗೆ, ಉತ್ತಮ ಸೇವೆ ನೀಡುತ್ತಿರುವ ಡಾ. ಮಂಜುನಾಥ್ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ಜೊತೆಗೆ ಜಯದೇವ ಆಸ್ಪತ್ರೆ ಇರುವ ಚಾಮರಾಜ ಕ್ಷೇತ್ರದ ಕಾಂಗ್ರೆಸ್‍ನ ಮಾಜಿ ಶಾಸಕ ವಾಸು, ಜಯದೇವ ಆಸ್ಪತ್ರೆ ನಿರ್ದೇಶಕರಾದ ಡಾ.ಮಂಜುನಾಥ್, ಡಾ.ಸದಾನಂದಗೌಡರಿಗು ಧನ್ಯವಾದ ಅರ್ಪಿಸಿದ್ದಾರೆ.
ಮೈಸೂರು: ಮಂತ್ರಿಗಳನ್ನು ಅನರ್ಹರು ಎಂದ ಮಾಜಿ ಸಿಎಂ ಸಿದ್ದುಗೆ ಹಳ್ಳಿಹಕ್ಕಿ ವಿಶ್ವನಾಥ್ ಕುಟುಕಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯರಿಂದ ಸಂವಿಧಾನಕ್ಕೆ ಅಪಚಾರ ಆಗಿದೆ. ಸಿದ್ದರಾಮಯ್ಯ ಸಂವಿಧಾನಕ್ಕೆ ಗೌರವ ಕೊಡುತ್ತಿದ್ದಾರೋ ಅಥವಾ ಅಗೌರವ ಕೊಡುತ್ತಿದ್ದಾರೋ ಎಂದು ವಿಶ್ವನಾಥ್ ಪ್ರಶ್ನೆ ಹಾಕಿದ್ದಾರೆ.
ಜನತಾ ನ್ಯಾಯಾಲಯದಲ್ಲಿ ಗೆದ್ದು ಬಂದವರನ್ನು ನೀವು ಹೇಗೆ ಗೆದ್ರಿ, ನನಗೆ ಗೊತ್ತಿದೆ ಎಂದರೆ ಏನರ್ಥ? ಹಾಗಾದರೆ ಇವರು ಹೇಗೆ ಗೆದ್ದರು? ಎಲ್ಲ ಎಲೆಕ್ಷನ್‍ಗಳು ದುಡ್ಡಿನಿಂದಲೇ ಆಗುತ್ತಾ? ಸಂವಿಧಾನ ಡೇಂಜರ್ ಎಂದು ಭಾಷಣ ಮಾಡುವ ಸಿದ್ದರಾಮಯ್ಯ ಅವರೇ ಸಂವಿಧಾನಕ್ಕೆ ಅಗೌರವ ಕೊಡುತ್ತಿದ್ದಾರೆ. ಹಾಗಾದರೆ ಸುಪ್ರೀಂಕೋರ್ಟ್ ತೀರ್ಪಿಗೆ ಸಿದ್ದರಾಮಯ್ಯ ಗೌರವ ಕೊಡುತ್ತಿಲ್ಲ ಎಂದು ಅರ್ಥ ಎಂದು ವಿಶ್ವನಾಥ್ ಗರಂ ಆದರು. ಸಿದ್ದರಾಮಯ್ಯ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದರು.
ಪಕ್ಷಾಂತರಿಗಳು 17 ಜನ ಒಟ್ಟಾಗಿ ಇಲ್ಲವೆಂಬ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾವಾಗಲು ಅವರನ್ನು ತಬ್ಬಿಕೊಂಡು ಇರಲು ಆಗುತ್ತಾ. ಗಂಡ- ಹೆಂಡತಿಯೇ ಜೊತೆಯಾಗಿ ಇರೋದಿಲ್ಲ. ನಾವು ಯಾವಾಗಲು ಜೊತೆಯಾಗಿ ಇರಲು ಆಗುತ್ತಾ ಎಂದು ಹೇಳಿದರು. ಅಲ್ಲದೆ ಗುರುವಾರ ಕಾರ್ಯಕ್ರಮಕ್ಕೆ ಹೋಗಿದ್ದೆ. ಗುರುವಾರ ಕಾರ್ಯಕ್ರಮ ಚೆನ್ನಾಗಿ ಆಯಿತು. ನನ್ನ ಅನುಭವ ಬಳಸಿಕೊಳ್ಳಿ ಎಂದು ಕೂಗಿ ಹೇಳೋಕೆ ಆಗೋಲ್ಲ. ಮಂತ್ರಿಯಾಗಿರಲಿ ಆಗಿಲ್ಲದೆ ಇರಲಿ ಅನುಭವಸ್ಥರ ಅನುಭವ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಾಗಲಕೋಟೆ: ಹೌದ ಹುಲಿಯಾ ಭಾರೀ ವೈರಲ್ ಆಗಿದೆ. ಈಗ ಬನಶಂಕರಿ ಜಾತ್ರೆಯಲ್ಲೂ ಹೌದ ಹುಲಿಯಾ ನಾಟಕ ಹಾಕಿದ್ದಾರೆ. ನೀವೆಲ್ರೂ ಹೌದ ಹುಲಿಯಾ ನೋಡಿ ಖುಷಿಪಡಿ ಎಂದು ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದ ಕಾಳಿದಾಸ ಉತ್ಸವದಲ್ಲಿ ಸಿದ್ದರಾಮಯ್ಯ ಭಾಷಣ ಪ್ರಾರಂಭಿಸುತ್ತಿದ್ದಂತೆ ಹೌದ ಹುಲಿಯಾ ಎಂಬ ಘೋಷಣೆ ಮೊಳಗಿತು. ಈ ವೇಳೆ ಹೌದ ಹುಲಿಯಾ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಏನಪ್ಪ ಹೌದ ಹುಲಿಯಾ ಭಾರೀ ಪಾಪ್ಯುಲರ್ ಆಗಿದೆಯಲ್ಲ ಎಂದು ಹೇಳಿ ಮುಂದಿನ ಕಥೆ ಹೇಳಿದರು.
ಅಥಣಿ ಉಪಚುನಾವಣೆಯಲ್ಲಿ ಅವನು ಹುಲಿಯಾ ಅಂದ. ಅವನು ಕುಡಿದಿದ್ದಾನೆ ಕೂತ್ಕೋ ಎಂದು ಹೇಳಿದ್ದೆ. ಪೊಲೀಸರು ಹೊರ ಕಳಿಸಿದ್ದರು. ಹೊರಗೆ ನಿಂತು ನಾನು ಹೋಗುವಾಗ ಕೈಕುಲಕಿ ನಾನು ನಿಮ್ಮ ಅಭಿಮಾನಿ ಅಂದ. ಹಾಗಾಗಿ ನಾಟಕದಲ್ಲಿ ನನ್ನ ಪಾತ್ರನೂ ಇರಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದಲ್ಲದೇ ನನಗೂ ನಾಟಕ ನೋಡಬೇಕು ಎಂದು ಆಸೆ. ನಾನು ನಾಳೆ ಇರಲ್ಲ ಎಂದು ಹೇಳಿದರು.
ಸರ್ಕಾರ ಒಂದೇ ಎಲ್ಲರಿಗೂ ಶಿಕ್ಷಣ ಕೊಡಲು ಆಗಲ್ಲ. ಅನೇಕ ಖಾಸಗಿ ಸಂಸ್ಥೆಗಳು ಶಿಕ್ಷಣ ಕೊಡುತ್ತಿವೆ. ಶಿಕ್ಷಣ ಕೊಡುವುದರಲ್ಲಿ ತಾರತಮ್ಯ ಇರಬಾರದು. ಸಮಾನ ಜ್ಞಾನ ಪಡೆಯಲು ಸಾಧ್ಯ. ಶಿಕ್ಷಣದಿಂದ ಸ್ವಾಭಿಮಾನ ಬರುತ್ತದೆ. ಸ್ವಾಭಿಮಾನ ಬಂದಾಗ ಗುಲಾಮಗಿರಿಯಿಂದ ಹೊರಬರಲು ಸಾಧ್ಯ. ಮೇಲ್ವರ್ಗ, ಶ್ರೀಮಂತರು ಕಂಡ ತಕ್ಷಣ ನಮಸ್ಕಾರ ಬುದ್ದಿ ಎಂದು ಹೇಳುತ್ತೇವೆ. ಶೂದ್ರ ಜಾತಿಯವರು ನಮಗಿಂತ ಕೆಳಗಿನವರು ಕಂಡಾಗ ಏನೋ, ಏನ್ಲಾ ಎಂದು ಹೇಳುತ್ತೇವೆ. ಇದು ಗುಲಾಮಗಿರಿಗೆ ಸಾಕ್ಷಿ. ಮಾರ್ಕೆಟ್ ನಲ್ಲಿ ಡಿಮ್ಯಾಂಡ್ ಇರುವ ಶಿಕ್ಷಣ ಕೊಡಬೇಕೇ ಎಂದು ಪ್ರಶ್ನಿಸಿದರು.
ಅಲ್ಲದೆ ರಾಜಕಾರಣಿಗಳು ಜನಸೇವೆ ಮಾಡುತ್ತೇವೆ ಎಂದು ಬರುತ್ತಾರೆ. ಕಾಯ್ದೆ, ಕಾನೂನು ಜನರಿಗೆ ತರ್ತೆವಿ. ಅದನ್ನು ಪ್ರಾಮಾಣಿಕವಾಗಿ ಅನುಷ್ಠಾನ ತರುವುದು ಅಧಿಕಾರಿಗಳು. ಅದನ್ನು ಬಹಳ ಪ್ರಮಾಣಿಕತೆಯಿಂದ ಮಾಡಬೇಕು ಎಂದು ಸನ್ಮಾನಿತ ಕೆಎಎಸ್ ಪಾಸ್ ಮಾಡಿದವರಿಗೆ ಸಿದ್ದರಾಮಯ್ಯ ಸಲಹೆ ನೀಡಿದರು.
ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ಸಿದ್ದರಾಮಯ್ಯ ಅವರನ್ನು ಶಾಸಕ ರಮೇಶ್ ಜಾರಕಿಹೊಳಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ರಮೇಶ್ ಅವರ ಕಾಲೆಳೆದಿದ್ದಾಳೆ.
ಜಾರಕಿಹೊಳಿ ಮಾಜಿ ಸಿಎಂ ಅವರನ್ನು ನೋಡಲು ಮಲ್ಲೇಶ್ವರಂ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ಸಿದ್ದರಾಮಯ್ಯ, “ಏನಯ್ಯ ರಮೇಶ ಬಾ ಅಂದಾಗ ಬರಲಿಲ್ಲ, ಈಗ ಬಂದಿದ್ಯಲ್ಲ” ಎಂದು ಕಾಲೆಳೆದಿದ್ದಾರೆ. ಆಗ ರಮೇಶ್, “ನೀವು ನಮ್ಮ ನಾಯಕರು ನಿಮ್ಮ ಆರೋಗ್ಯ ಮುಖ್ಯ ನಮಗೆ ಅದಕ್ಕೆ ಬಂದೆ” ಎಂದು ಉತ್ತರಿಸಿದರು. ಇದನ್ನೂ ಓದಿ: ಸಿಎಂ ಬಂದ್ರು ಚೇರ್ ಕೊಡ್ರಪ್ಪ: ಸಿದ್ದರಾಮಯ್ಯ
ಸುಮಾರು ಹತ್ತು ನಿಮಿಷಗಳ ಕಾಲ ರಮೇಶ್ ಹಾಗೂ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ತಮ್ಮ ಅನಾರೋಗ್ಯದ ಬಗ್ಗೆ ಮಾತನಾಡಿದ ಬಳಿಕ ಏನು ಮಿನಿಸ್ಟರ್ ಆಗ್ತಿಯ ಎಂದು ರಮೇಶ್ ಅವರಿಗೆ ಕೇಳಿದ್ದಾರೆ. ಇದಕ್ಕೆ ರಮೇಶ್ ಆಗುತ್ತೆ ನಿಮ್ಮ ಆಶಿರ್ವಾದ ಇರಲಿ ಎಂದಾಗ ನಂದಲ್ಲಪ್ಪ ಇವಾಗ ಯಡಿಯೂರಪ್ಪಂದು ಆಶೀರ್ವಾದ ಇರಬೇಕು ನಿನಗೆ ಎಂದು ಹೇಳಿ ಸಿದ್ದರಾಮಯ್ಯ ನಕ್ಕಿದ್ದಾರೆ. ಇದನ್ನೂ ಓದಿ: ಇನ್ನು 6 ತಿಂಗಳು ‘ಟಗರು’ ಮೌನ
ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ನಮ್ಮ ನಾಯಕರು. ಅವರು ಈಗ ಆರೋಗ್ಯವಾಗಿದ್ದಾರೆ. ಅವರು ನಾಳೆ ಡಿಸ್ಚಾರ್ಜ್ ಆಗುತ್ತಾರೆ. ನಾನು ಗೆದ್ದಾಗಲೂ ಅವರೇ ನಮ್ಮ ನಾಯಕರು ಎಂದು ಡಿಕ್ಲೇರ್ ಮಾಡಿದ್ದೆ. ಪಕ್ಷ ಬದಲಾವಣೆ ಮಾಡಿದರೂ ಅವರೇ ನಮ್ಮ ಗುರುಗಳು. ಆಸ್ಪತ್ರೆಯಲ್ಲಿ ನಾವಿಬ್ಬರು ಏನೇನ್ ಮಾತನಾಡಿದ್ದೀವಿ ಎಂದು ಹೇಳುವುದಕ್ಕೆ ಆಗಲ್ಲ ಎಂದು ಸಿದ್ದರಾಮಯ್ಯ ಭೇಟಿ ಬಳಿಕ ರಮೇಶ್ ಜಾರಕಿಹೊಳಿ ತಿಳಿಸಿದರು.
ಸಿದ್ದು ಭೇಟಿಯಾದ ಸಿಎಂ:
ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಗುರುವಾರ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ಮಾಡಿ ಆರೋಗ್ಯದ ಕುರಿತು ವಿಚಾರಿಸಿದರು. ಸಚಿವ ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಸಿದ್ದರಾಮಯ್ಯ ಭೇಟಿ ವೇಳೆ ಹಾಜರಿದ್ದರು. ಸಿಎಂ ಬಿಎಸ್‍ವೈ ಆಗಮಿಸುತ್ತಿರುವುದನ್ನು ಕಂಡ ಕೂಡಲೇ ಅಚ್ಚರಿಗೊಂಡ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿಗಳು ಬಂದಿದ್ದಾರೆ. ಅವರಿಗೆ ಕುಳಿತುಕೊಳ್ಳಲು ಚೇರ್ ನೀಡಿ ಎಂದು ಹೇಳಿದರು. ಸಿದ್ದರಾಮಯ್ಯ ಅವರ ಆರೋಗ್ಯದ ಕುರಿತು ಸಿಎಂ, ಸಂಪೂರ್ಣ ಚೇತರಿಕೆ ಆಗುವವರೆಗೂ ಆಸ್ಪತ್ರೆಯಲ್ಲೇ ಇದ್ದು ಸಂಪೂರ್ಣವಾಗಿ ವಿಶ್ರಾಂತಿ ಪಡೆಯಿರಿ ಎಂದರು.
ಬೆಂಗಳೂರು: ಉಪ ಚುನಾವಣೆಯ ಸೋಲಿನ ಹೊಣೆ ಹೊತ್ತು ಮಾಜಿ ಸಿಎಂ ಸಿದ್ದರಾಮಯ್ಯನವರು ಸಿಎಲ್‍ಪಿ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮತದಾರರು ನೀಡಿರುವ ತೀರ್ಪನ್ನು ನಾನು ಒಪ್ಪಿಕೊಂಡಿದ್ದೇನೆ. ಕುದುರೆ ವ್ಯಾಪಾರಕ್ಕೆ ಒಳಗಾಗಿದ್ದವರಿಗೆ ಜನರು ಶಿಕ್ಷೆ ನೀಡುತ್ತಾರೆಂಬ ನಿರೀಕ್ಷೆ ಇತ್ತು. ಇಂದು ನನ್ನ ನಿರೀಕ್ಷೆ ಹುಸಿಯಾಗಿದ್ದು, ಜನಾದೇಶವನ್ನು ಒಪ್ಪಿಕೊಂಡಿದ್ದೇನೆ. ಕಾಂಗ್ರೆಸ್ ಶಾಸಕಾಂಗ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ವಿಪಕ್ಷ ನಾಯಕನಾಗಿ ಮುಂದುವರಿಯುತ್ತಿದ್ದೇನೆ. ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರಿಗೆ ರಾಜೀನಾಮೆ ನೀಡಿದ್ದೇನೆ ಎಂದು ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ 15ರಲ್ಲಿ ಕೇವಲ 2 ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಿದ್ದು, ಚುನಾವಣೆಯ ಉಸ್ತುವಾರಿ ಹೊತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನುವ ವಿಚಾರ ಸದ್ದು ಮಾಡಿತ್ತು. ಆದ್ರೆ ಸಿದ್ದರಾಮಯ್ಯನವರು ಸಿಎಲ್ ಪಿ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ವಿಪಕ್ಷ ನಾಯಕರಾಗಿ ಮುಂದುವರಿಯಲಿದ್ದಾರೆ. ಇದರ ಜೊತೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡುತ್ತಾರೆ ಎನ್ನಲಾಗುತ್ತಿದೆ.
15 ಕ್ಷೇತ್ರಗಳಲ್ಲಿಯೂ ಸಿದ್ದರಾಮಯ್ಯನವರು ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಟಿಕೆಟ್ ಕೊಡಿಸಿದ್ದ 13 ಜನರನ್ನು ಗೆಲ್ಲಿಸುವಲ್ಲಿ ಸಿದ್ದರಾಮಯ್ಯನವರು ವಿಫಲರಾಗಿದ್ದಾರೆ. ಯಾವುದೇ ಚರ್ಚೆ ನಡೆಸದೇ ಸಿದ್ದರಾಮಯ್ಯನವರು ಆಪ್ತರಿಗೆ ಟಿಕೆಟ್ ಕೊಡಿಸಿದ್ದಾರೆ ಎಂದು ಮುನಿಸಿಕೊಂಡಿದ್ದ ಕಾಂಗ್ರೆಸ್ ಹಿರಿಯ ನಾಯಕರು ಚುನಾವಣೆ ಪ್ರಚಾರದಿಂದ ದೂರವೇ ಉಳಿದುಕೊಂಡಿದ್ದರು. ಮೈತ್ರಿ ಸರ್ಕಾರ ಪತನದ ಬಳಿಕ ಸಿದ್ದರಾಮಯ್ಯನವರ ನಾಯಕತ್ವದ ಬಗ್ಗೆ ಮೂಲ ಕಾಂಗ್ರೆಸ್ಸಿಗರು ಪ್ರಶ್ನೆ ಮಾಡಿದ್ದರು. ಹೀಗೆ ಮೂಲ ಕಾಂಗ್ರೆಸ್ ಮತ್ತು ವಲಸಿಗ ಕಾಂಗ್ರೆಸ್ ಎಂಬ ಎರಡು ಬಣಗಳು ರಾಜ್ಯ ಕೈಕೂಟದಲ್ಲಿ ಹುಟ್ಟುಕೊಂಡಿದ್ದವು.
ಆಂತರಿಕ ಕಲಹ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಏಕಾಂಗಿಯಾಗಿ 15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಮತ ಯಾಚಿಸಿದ್ದರು. ಹುಣಸೂರಿನಲ್ಲಿ ಹೆಚ್.ಪಿ. ಮಂಜುನಾಥ್ ಮತ್ತು ಶಿವಾಜಿ ನಗರದಲ್ಲಿ ರಿಜ್ವಾನ್ ಅರ್ಷದ್ ಮಾತ್ರ ಗೆಲುವಿನ ನಗೆ ಬೀರಿದ್ದಾರೆ.
ಉಪ ಚುನಾವಣಾ ಫಲಿತಾಂಶ ಹೊರ ಬೀಳುವ ಮೊದಲೇ ಕಾಂಗ್ರೆಸ್ ನಾಯಕರು ರಹಸ್ಯ ಸಭೆ ನಡೆಸಿದ್ದರು. ಡಿಸೆಂಬರ್ 11 ಅಥವಾ 12 ರಂದು ಮೂಲ ಕಾಂಗ್ರೆಸ್ಸಿಗರ ದಂಡು ದೆಹಲಿಗೆ ದೌಡಾಯಿಸಿ ಹೈಕಮಾಂಡ್ ಗೆ ಸಿದ್ದರಾಮಯ್ಯನವರ ವಿರುದ್ಧ ದೂರು ಸಲ್ಲಿಸಲು ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ.
ಮೂಲ ಕಾಂಗ್ರೆಸ್ ನಾಯಕರಾದ ಬಿ.ಕೆ.ಹರಿಪ್ರಸಾದ್, ಜಿ.ಸಿ.ಚಂದ್ರಶೇಖರ್, ಪ್ರೊ.ರಾಜೀವ್ ಗೌಡ, ಮಾಜಿ ಕೇಂದ್ರ ಸಚಿವ ಮುನಿಯಪ್ಪ, ಮಾಜಿ ಸಚಿವರಾದ ಮೋಟಮ್ಮ, ರಾಣಿ ಸತೀಶ್ ಸೇರಿದಂತೆ ಹಿರಿಯ ನಾಯಕರಿಂದ ಶನಿವಾರ ಸಂಜೆ ಬೆಂಗಳೂರಿನಲ್ಲಿ ಗುಪ್ತ ಸಭೆ ನಡೆದಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ತಮಗಿಷ್ಟ ಬಂದವರಿಗೆ ಟಿಕೆಟ್ ಕೊಡಿಸಿಕೊಂಡು ಯಾವ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪಕ್ಷದ ಹಿನ್ನಡೆಗೆ ಸಿದ್ದರಾಮಯ್ಯ ಅವರೇ ಕಾರಣ ಎಂದು ದೂರು ಕೊಡಲು ರೆಡಿಯಾಗಿದ್ದಾರೆ. ಅಲ್ಲದೆ ಸತತ ಸೋಲು ಹಾಗೂ ಹಿನ್ನಡೆ ಆಗುತ್ತಿದ್ದರೂ ಸಿದ್ದರಾಮಯ್ಯ ಪ್ರಶ್ನಾತೀತ ನಾಯಕರಂತೆ ವರ್ತಿಸುತಿದ್ದಾರೆ ಎಂದು ಆರೋಪ ಕೂಡ ಮಾಡಿದ್ದಾರೆ. ಸಿಎಲ್‍ಪಿ ನಾಯಕನ ಸ್ಥಾನ ಅಥವಾ ವಿಪಕ್ಷ ನಾಯಕನ ಸ್ಥಾನ ಒಂದರಿಂದ ತಲೆದಂಡ ಮಾಡುವಂತೆ ಹೈ ಕಮಾಂಡ್ ಮುಂದೆ ಪಟ್ಟು ಹಿಡಿಯಲು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.