Tag: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ

  • ಬಹುಮತವಿಲ್ಲದ ಸಿಎಂ ವಿಶ್ವಾಸ ಮತಯಾಚಿಸೋದ್ರಲ್ಲಿ ಅರ್ಥವೇ ಇಲ್ಲ: ಬಿಎಸ್‍ವೈ

    ಬಹುಮತವಿಲ್ಲದ ಸಿಎಂ ವಿಶ್ವಾಸ ಮತಯಾಚಿಸೋದ್ರಲ್ಲಿ ಅರ್ಥವೇ ಇಲ್ಲ: ಬಿಎಸ್‍ವೈ

    ಬೆಂಗಳೂರು: ಸದನದ ಆರಂಭದ ಮೊದಲ ದಿನವೇ ಸಿಎಂ ಅವರು ವಿಶ್ವಾಸ ಮತಯಾಚನೆ ಮಾಡಲು ಸಿದ್ಧ ಎಂದು ಹೇಳಿದ್ದಾರೆ. ಆದರೆ ಬಹುಮತ ಇಲ್ಲದ ಸಂದರ್ಭದಲ್ಲಿ ವಿಶ್ವಾಸ ಮತಯಾಚಿಸೋದ್ರದಲ್ಲಿ ಯಾವುದೇ ಅರ್ಥವಿಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

    ಈಗಾಗಲೇ 10 ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇಂದು 5 ಶಾಸಕರು ಕೂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಇಬ್ಬರು ಪಕ್ಷೇತರರು ಬೆಂಬಲ ವಾಪಸ್ ಪಡೆದಿದ್ದಾರೆ. ಇಷ್ಟಾದ್ರು ಸಿಎಂ ವಿಶ್ವಾಸ ಮತಯಾಚನೆ ಮಾಡಲು ಸ್ವಯಂ ಮುಂದೇ ಬಂದಿರುವ ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಆದ್ದರಿಂದ ಬಹುಬೇಗ ಈ ನಿರ್ಧಾರ ಮಾಡಲಿ. ನ್ಯಾಯಾಲಯದ ತೀರ್ಪು ಬರುವವರೆಗೂ ಕಾದು ನೋಡುತ್ತೇವೆ ಎಂದರು.

    ಮೈತ್ರಿ ಸರ್ಕಾರದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಬಿಟ್ಟು ಹೋಗುವುದನ್ನ ತಡೆಯಲು ಸಿಎಂ ಮಾಡಿರುವ ವ್ಯವಸ್ಥಿತ ರಾಜಕೀಯ ಷಡ್ಯಂತರಷ್ಟೇ. ಆದರೆ ಈಗಾಗಲೇ ಶಾಸಕರು ಸುಪ್ರೀಂ ಕೋರ್ಟಿಗೆ ತೆರಳಿರುವುದಿಂದ ಮತ್ತೆ ವಾಪಸ್ ಬರುವ ಕಾರ್ಯಕ್ಕೆ ಮುಂದಾಗುವುದಿಲ್ಲ. ಇದು ಅವರಿಗೂ ಸ್ಪಷ್ಟವಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಸರ್ಕಾರ ಉಳಿಯವುದಿಲ್ಲ. ಸದ್ಯದ ವಾತಾವರಣ ನಮಗೆ ಅನುಕೂಲಕರವಾಗಿದೆ ಎಂದರು.

    ಇತ್ತ ಬಿಎಸ್ ಯಡಿಯೂರಪ್ಪ ಬಿಜೆಪಿ ಶಾಸಕರೊಂದಿಗೆ ಸಭೆಗೆ ರೆಸಾರ್ಟಿಗೆ ತೆರಳಿದ್ದು, ಬುಧವಾರ ಬಹುಮತ ಸಾಬೀತಿಗೆ ಸಮಯ ಕೇಳಿರುವುದರಿಂದ ಶಾಸಕರ ಜೊತೆ ಸದ್ಯದ ಬೆಳವಣಿಗೆಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ. ಇತ್ತ ಇದೇ ಸಂದರ್ಭದಲ್ಲಿ ಮಾತನಾಡಿದ ವಿ.ಸೋಮಣ್ಣ ಅವರು, ರಿವರ್ಸ್ ಆಪರೇಷನ್ ಭಯದಿಂದ ಶಾಸಕರು ರೆಸಾರ್ಟಿಗೆ ತೆರಳಿಲ್ಲ. ಎಲ್ಲರೂ ಒಂದೆಡೆ ಸೇರಿ ತುಂಬಾ ಸಮಯ ಆಗಿತ್ತು. ಸದನದಲ್ಲಿ ವಿಶ್ವಾಸ ಮತ ಇರುವುದರಿಂದ ಈಗ ಎಲ್ಲರೂ ಇದ್ದೇವೆ ಅಷ್ಟೇ ಎಂದರು. ಅಲ್ಲದೇ ಸಚಿವ ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ಒನ್ ಮ್ಯಾನ್ ಆರ್ಮಿ ಆಗಿದ್ದಾರೆ. 2-3 ದಿನಗಳಿಂದ ಏಕೆ ಹೀಗೆ ನಡೆದುಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ನಮಗೆ ಮಾಹಿತಿ ಇದೆ. ಯಾವುದೇ ಮಾಹಿತಿ ಇಲ್ಲದೇ ನಾವು ಕೂಡ ಮಾತನಾಡಲ್ಲ. ಸಿಎಂ ಅವರು ಹಳಿ ತಪ್ಪಿ ತುಂಬಾ ದಿನವಾಗಿದೆ. ಮಂಗಳವಾರ ಅಥವಾ ಬುಧವಾರ ಎಲ್ಲಾ ರೀತಿಯ ತೀರ್ಮಾನವಾಗುತ್ತೆ ಬಿಡಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಮಧ್ಯಂತರ ಚುನಾವಣೆ ಬೇಡ, ಸರ್ಕಾರ ನಡೆಸಲು ಆಗಲಿಲ್ಲ ಅಂದ್ರೆ ಬಿಟ್ಟು ಹೋಗಿ – ಯಡಿಯೂರಪ್ಪ ಗುಡುಗು

    ಮಧ್ಯಂತರ ಚುನಾವಣೆ ಬೇಡ, ಸರ್ಕಾರ ನಡೆಸಲು ಆಗಲಿಲ್ಲ ಅಂದ್ರೆ ಬಿಟ್ಟು ಹೋಗಿ – ಯಡಿಯೂರಪ್ಪ ಗುಡುಗು

    ಬೆಂಗಳೂರು: ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಮಧ್ಯಂತರ ಚುನಾವಣೆ ನಡೆಯುವ ಬಗ್ಗೆ ನೀಡಿರುವ ಹೇಳಿಕೆ ವಿರುದ್ಧ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕಿಡಿಕಾರಿದ್ದಾರೆ. ಅಲ್ಲದೇ ಸರ್ಕಾರ ನಡೆಸಲು ಸಾಧ್ಯವಾಗದಿದ್ದರೆ ಬಿಟ್ಟು ಹೋಗಲಿ. ನಾವು ಸರ್ಕಾರ ರಚಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್‍ವೈ, ನಾವು ಸರ್ಕಾರ ರಚಿಸಲು ಸಿದ್ಧರಾಗಿದ್ದು, ಯಾವುದೇ ಕಾರಣಕ್ಕೆ ಮಧ್ಯಂತರ ಚುನಾವಣೆ ಬೇಡ. ಜನರು ನೀಡಿರುವ ಜನಾದೇಶಕ್ಕೆ ವಿರೋಧವಾಗಿ ನಡೆಯುವುದು ಸೂಕ್ತವಲ್ಲ. ನಾವು 105 ಶಾಸಕರನ್ನು ಹೊಂದಿದ್ದು, ಸರ್ಕಾರ ರಚನೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆಗೆ ಬಿಜೆಪಿ ಸಿದ್ಧವಾಗಿಲ್ಲ ಎಂದರು.

    ಈ ಬಗ್ಗೆ ನಾನು ಈಗಾಗಲೇ ಸ್ಪಷ್ಟನೆ ನೀಡಿದ್ದು, 37 ಶಾಸಕರನ್ನು ಇಟ್ಟುಕೊಂಡು ಸರ್ಕಾರ ರಚನೆ ಮಾಡಿ ಈಗ ಚುನಾವಣೆ ಹೋಗೋಣ ಎನ್ನುತ್ತಾರೆ. 11 ತಿಂಗಳಿನಿಂದ ಅಭಿವೃದ್ಧಿ ಕಾರ್ಯಗಳಲ್ಲಿ ಹಿನ್ನಡೆಯಾಗಿದ್ದು, ಅವರ ತೀಟೆ ತಿರಿಸಿಕೊಳ್ಳಲು ಮತ್ತೊಂದು ಚುನಾವಣೆ ಬೇಕಾ ಎಂದು ಪ್ರಶ್ನಿಸಿದರು. ಅಲ್ಲದೇ ಇಂದು ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಎಂದು ತೆರಳಿದ್ದರೆ, ಆದರೆ ಇತ್ತ ಅವರ ತಂದೆ ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡುತ್ತಾರೆ. ಆದರೆ ಈ ಮಾತಿಗೆ ಕಾಂಗ್ರೆಸ್, ಸಿದ್ದರಾಮಯ್ಯ ಅವರ ಒಪ್ಪಿಗೆ ಅಗತ್ಯವಿದೆ. ಆದರೆ ಈ ರೀತಿ ಹೇಳಿಕೆ ನೀಡುವುದರಿಂದ ಅಧಿಕಾರಿಗಳಲ್ಲಿ ಗೊಂದಲ ಉಂಟಾಗುತ್ತದೆ ಎಂದರು.

    ಇದೇ ವೇಳೆ ಸಿಎಂ ಕುಮಾರಸ್ವಾಮಿ ಅವರ ಆಪರೇಷನ್ ಕಮಲ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಬಿಎಸ್‍ವೈ ಅವರು, ಅವರ ಬಳಿ 135 ರಿಂದ 136 ಮಂದಿ ಶಾಸಕರಿದ್ದಾರೆ. ಆದರೆ ಅವರಲ್ಲಿ ಸುಮಾರು 20 ಜನ ಅತೃಪ್ತ ಶಾಸಕರಿದ್ದಾರೆ. ಅವರಾಗಿಯೇ ಸರ್ಕಾರವನ್ನು ಬಿಟ್ಟು ಹೋದರೆ ನಾವು ಜವಾಬ್ದಾರಿ ಅಲ್ಲ. ಈ ಹಿಂದೆ ಸ್ಪಷ್ಟಪಡಿಸಿರುವಂತೆ ಯಾವುದೇ ಶಾಸಕರನ್ನು ಸಂಪರ್ಕ ಮಾಡಿಲ್ಲ. ಅವರಾಗಿಯೇ ಸರ್ಕಾರ ಬಿಟ್ಟು ಬಂದರೆ ಮಾತ್ರ ವಿಚಾರಣೆ ಮಾಡುತ್ತೇವೆ. ಅಲ್ಲಿಯವರೆಗೂ ನಾವು ಕಾದು ನೋಡುತ್ತೇವೆ ಎಂದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಹಾಸನ ಬಿಜೆಪಿ ಕಾರ್ಯಕರ್ತನ ಮೇಲೆ ಕಲ್ಲೆಸೆತ ಪ್ರಕರಣ – 8 ಮಂದಿ ವಿರುದ್ಧ ಎಫ್‍ಐಆರ್ ದಾಖಲು

    ಹಾಸನ ಬಿಜೆಪಿ ಕಾರ್ಯಕರ್ತನ ಮೇಲೆ ಕಲ್ಲೆಸೆತ ಪ್ರಕರಣ – 8 ಮಂದಿ ವಿರುದ್ಧ ಎಫ್‍ಐಆರ್ ದಾಖಲು

    ಹಾಸನ: ಶಾಸಕ ಪ್ರೀತಂ ಗೌಡ ಮನೆಯ ಮುಂದೆ ಬಿಜೆಪಿ ಕಾರ್ಯಕರ್ತರ ಮೇಲೆ ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಬಡಾವಣೆ ಪೊಲೀಸರು 8 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಇಂದು ಶಾಸಕ ಪ್ರೀತಂ ಗೌಡ ಅವರ ಮನೆಯ ಎದುರು ದೇವೇಗೌಡ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಶಾಸಕ ಪ್ರೀತಂ ಗೌಡ ಅವರ ಮನೆಯ ಮೇಲೆ ಕಲ್ಲೆಸೆಯಲಾಗಿತ್ತು. ಪರಿಣಾಮ ಬಿಜೆಪಿ ಕಾರ್ಯಕರ್ತ ರಾಹುಲ್ ಕಿಣಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಅವರ ಹೇಳಿಕೆಯನ್ನು ಪಡೆದ ಪೊಲೀಸರು ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್ ಅನಿಲ್, ಜಿಪಂ ಸದಸ್ಯ ಎಚ್.ಪಿ ಸ್ವರೂಪ್ ಸೇರಿದಂತೆ ಒಟ್ಟು ಎಂಟು ಮಂದಿಯ ವಿರುದ್ಧ ಸೆಕ್ಷನ್ 324(ಹಲ್ಲೆ) ಅಡಿ ಎಫ್‍ಐಆರ್ ದಾಖಲಾಗಿದೆ. ಗಾಯಾಳು ರಾಹುಲ್ ಕಿಣಿ ಹೇಳಿಕೆ ಆಧಾರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಪ್ರೀತಂ ಮನೆಗೆ ಭೇಟಿ ಕೊಟ್ಟ ಬಿಎಸ್‍ವೈ:
    ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ನಡೆದಿರುವ ವಿರುದ್ಧ ಬೆಂಗಳೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿಯ 16 ಹೆಚ್ಚು ಶಾಸಕರೊಂದಿಗೆ ಶಾಸಕ ಪ್ರೀತಂ ಅವರ ಮನೆಗೆ ಭೇಟಿಕೊಟ್ಟು ಕಾರ್ಯಕರ್ತರಿಗೆ ಧೈರ್ಯ ತುಂಬಿದರು. ಅಲ್ಲದೇ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿ ನಾಳೆ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.

    ಇದೇ ವೇಳೆ ಮಾತನಾಡಿದ ಮಾಜಿ ಡಿಸಿಎಂ ಆರ್ ಅಶೋಕ್ ಅವರು, ಪ್ರೀತಂ ಗೌಡ ನನ್ನ ತಮ್ಮನಿದ್ದಂತೆ, ಬಿಜೆಪಿಯ ಒಬ್ಬ ಕಾರ್ಯಕರ್ತನನ್ನು ಮುಟ್ಟಿದ್ರೆ ಹುಲಿಯಂತಹ ಯಡಿಯೂರಪ್ಪ ಇದ್ದಾರೆ. ಶಾಸಕರ ತಂದೆ ತಾಯಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಇದೇನು ಗೂಂಡಾ ರಾಜ್ಯ ಎಂದುಕೊಂಡಿದ್ದೀರಾ? ಶಾಸಕರಿಗೆ ರಕ್ಷಣೆ ಇಲ್ಲ ಎಂದರೆ, ಜನ ಸಾಮಾನ್ಯರನ್ನು ಹೇಗೆ ರಕ್ಷಣೆ ಮಾಡುತ್ತೀರಿ ಎಂದು ಪ್ರಶ್ನಿಸಿದರು. ಅಲ್ಲದೇ ಶಾಸಕರಿಗೆ ರಕ್ಷಣೆ ನೀಡುವಂತೆ ಸದನದಲ್ಲಿ ಸ್ಪೀಕರ್ ಅವರಲ್ಲಿ ಮನವಿ ಮಾಡಲಾಗುವುದು ಎಂದು ತಿಳಿಸಿದರು.

    https://www.youtube.com/watch?v=V2Yszl9rLEg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾವೇನು ಸನ್ಯಾಸಿಗಳಲ್ಲ, ಕುರ್ಚಿ ಉಳಿಸಿಕೊಳ್ಳಲು ರಿಲೀಸ್ ಮಾಡಿದ್ದೇನೆ – ಬಿಜೆಪಿಗೆ ಎಚ್‍ಡಿಕೆ ಟಾಂಗ್

    ನಾವೇನು ಸನ್ಯಾಸಿಗಳಲ್ಲ, ಕುರ್ಚಿ ಉಳಿಸಿಕೊಳ್ಳಲು ರಿಲೀಸ್ ಮಾಡಿದ್ದೇನೆ – ಬಿಜೆಪಿಗೆ ಎಚ್‍ಡಿಕೆ ಟಾಂಗ್

    ಬೆಂಗಳೂರು: ನಾವು ಕೂಡ ಸನ್ಯಾಸಿಗಳಲ್ಲ ಎಂದು ತೋರಿಸಿಕೊಳ್ಳಲು ಮತ್ತು ಕುರ್ಚಿ ಉಳಿಸಿಕೊಳ್ಳಲು ಆಪರೇಷನ್ ಕಮಲ ಆಡಿಯೋವನ್ನು ಪತ್ರಿಕಾಗೋಷ್ಠಿ ನಡೆಸಿ ರಿಲೀಸ್ ಮಾಡಿದ್ದೇನೆ ಎದು ವಿಧಾನಸಭೆಯಲ್ಲಿ ಬಿಜೆಪಿ ಆರೋಪಕ್ಕೆ ಸಿಎಂ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

    ಸದನದಲ್ಲಿ ಇಂದು ಬಿಜೆಪಿ ನಾಯಕರು ಆಡಿಯೋ ಬಗ್ಗೆ ಎಸ್‍ಐಟಿ ತನಿಖೆಗೆ ಒಪ್ಪಿಸುವುದನ್ನು ವಿರೋಧಿಸಿ ಸ್ಪೀಕರ್ ಅವರಿಗೆ ಮನವಿ ಸಲ್ಲಿಸಿದ್ದರು. ಈ ಹಂತದಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು, ಸಿಎಂ ಕುಮಾರಸ್ವಾಮಿ ಅವರು ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿ ಸ್ಪೀಕರ್ ಅವರನ್ನು ಬೀದಿಗೆ ತಂದಿದ್ದಾರೆ ಎಂದು ಆರೋಪಿಸಿದರು. ಶೆಟ್ಟರ್ ಅವರ ಆರೋಪಕ್ಕೆ ತಕ್ಷಣ ತಿರುಗೇಟು ನೀಡಿದ ಸಿಎಂ ಅವರು, ಬಿಜೆಪಿ ನಾಯಕರು ಪದೇ ಪದೇ ಆಪರೇಷನ್ ಕಮಲ ನಡೆಯುತ್ತಿಲ್ಲ ಎಂದು ಹೇಳುತ್ತಿದ್ದರು. ಅಲ್ಲದೇ ಸರ್ಕಾರ ಉರುಳಿದರೆ ನಾವೇನು ಸುಮ್ಮನೆ ಕೂರಲು ಸನ್ಯಾಸಿಗಳಲ್ಲ ಎಂದು ಹೇಳುತ್ತಿದ್ದರು. ಹಾಗೆಯೇ ನಾವು ಕೂಡ ಸನ್ಯಾಸಿಗಳು ಅಲ್ಲ. ನಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ನಾವು ಪ್ರತಿಕಾಗೋಷ್ಠಿ ನಡೆಸಿ ಈ ಆಡಿಯೋ ರೆಕಾರ್ಡ್ ಬಿಡುಗಡೆ ಮಾಡಿದ್ದೇವೆ ಅಷ್ಟೇ ಎಂದು ಎಚ್‍ಡಿಕೆ ಟಾಂಗ್ ನೀಡಿದರು.

    ಇದೇ ವೇಳೆ ಏನೂ ತಪ್ಪು ಮಾಡಿಲ್ಲ ಅಂದರೆ ಬಿಜೆಪಿಯವರಿಗೆ ಭಯ ಏಕೆ ಎಂದು ಪ್ರಶ್ನಿಸಿದ ಸಿಎಂ ಕುಮಾರಸ್ವಾಮಿ ಅವರು, ಸತ್ಯವನ್ನ ಜನರಿಗೆ ತೋರಿಸಬೇಕಿತ್ತಲ್ವಾ? ಅದಕ್ಕೆ ಆಡಿಯೋ ನೀಡಿದೆ. ಸ್ಪೀಕರ್ ಹೆಸರನ್ನು ಬೀದಿಗೆ ತಂದಿದ್ದು ಯಾರು? ಎನ್ನುವುದನ್ನು ಅವರೇ ಯೋಚನೆ ಮಾಡಲಿ ಎಂದರು. ಅಲ್ಲದೇ ಶೆಟ್ಟರ್ ಅವರು ಫೋನ್ ಕದ್ದಾಲಿಕೆ ಆರೋಪ ನಿರಾಕರಿಸಿ, ನಾನು ಯಾರ ಫೋನ್ ಕದ್ದಾಲಿಕೆ ಮಾಡಿಲ್ಲ ಎಂದರು.

    ಎರಡು ಪಕ್ಷಗಳ ನಾಯಕರಿಗೆ ತಿಳಿ ಹೇಳಿದ ಸ್ಪೀಕರ್ ಅವರು, ಸಿಎಂ ಕುಮಾರಸ್ವಾಮಿ ಅವರಿಗೆ ನಾಗನಗೌಡ ಮಗ ಕೇಳಿದ್ದರು. ಅದಕ್ಕೆ ಹೋಗು ಎಂದು ಹೇಳಿ, ರೆಕಾರ್ಡ್ ಮಾಡಿ ತಂದಿದ್ದಾರೆ. ರೆಕಾರ್ಡ್ ಕೈಗೆ ಬಂದು, ಸ್ಪೀಕರ್ ಅವರ ಹೆಸರು ಪ್ರಸ್ತಾಪ ಆದಾಗ ಅವರು ಹೇಳಲೇ ಬೇಕಾಗಿತ್ತು. ಒಂದೊಮ್ಮೆ ಅವರು ಸುಮ್ಮನಾಗಿ 3ನೇ ವ್ಯಕ್ತಿಯಿಂದ ನನಗೆ ಆಗ ವಿಚಾರ ತಿಳಿದಿದ್ದರೆ ಏನಾಗುತಿತ್ತು? ಆಗ ಸಿಎಂ ಕುಮಾರಸ್ವಾಮಿ ಅವರು ಅಪರಾಧಿ ಆಗುತ್ತಿದ್ದರು. ಆದ್ದರಿಂದ ಅವರು ನನಗೆ ಮಾಹಿತಿ ನೀಡಿದ್ದಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

    ಸಿಎಂ ಕುಮಾರಸ್ವಾಮಿ ಅವರ ಮಾತಿಗೆ ಮತ್ತೆ ಮಧ್ಯಪ್ರವೇಶ ಮಾಡಿದ ಶೆಟ್ಟರ್ ಅವರು, ಸಭಾಧ್ಯಕ್ಷರನ್ನೇ ಈಗ ಸನ್ಯಾಸಿ ಮಾಡಿದ್ದಾರೆ. ಸಭಾಧ್ಯಕ್ಷರ ಹೆಸರು ಬಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡಿದ್ದಾರೆ. ಅವರು ಸುದ್ದಿಗೋಷ್ಠಿ ಮಾಡಿದ್ದೆ ಇಷ್ಟೆಲ್ಲಾ ನಡೆಯಲು ಕಾರಣ ಎಂದು ಆರೋಪಿಸಿದರು.

    ಶೆಟ್ಟರ್ ಆರೋಪ: ಆಪರೇಷನ್ ಕಮಲ ಆಡಿಯೋ ಬಿಡುಗಡೆ ಮಾಡಿರುವ ಕುರಿತು ಸಿಎಂ ಕುಮಾರಸ್ವಾಮಿ ಮೇಲೆಯೇ ಆರೋಪಗಳನ್ನು ಮಾಡಿದ ಶೆಟ್ಟರ್ ಅವರು, ಸಿಎಂ ಸ್ಥಾನದಲ್ಲಿರುವ ಕುಮಾರಸ್ವಾಮಿ ಅವರು ಆಡಿಯೋ ರೆಕಾರ್ಡ್ ಮಾಡಿಸಿಕೊಳ್ಳಲು ಕಳುಹಿಸಿದ್ದು ಅವರ ಮೊದಲನೇ ಅಪರಾಧ ಹಾಗೂ ಕಾನ್ಫರೆನ್ಸ್ ಕುಳಿತು ಕೇಳಿಸಿಕೊಂಡಿದ್ದು 2ನೇ ಅಪರಾಧ. ಈ ಬಗ್ಗೆ ನೇರ ಸ್ಪೀಕರ್ ಅವರಿಗೆ ದೂರು ನೀಡದೇ ಸುದ್ದಿಗೋಷ್ಠಿ ನಡೆಸಿದ್ದು ಮತ್ತೊಂದು ತಪ್ಪು. ಸ್ವತಃ ಸಿಎಂ ಅವರೇ ಶಾಸಕರೊಬ್ಬರಿಗೆ ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದು ಹೇಳಿ ಆರೋಪಗಳ ಸುರಿಮಳೆಗೈದರು.

    https://www.youtube.com/watch?v=s2WxVzZmLyo

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತನಿಖೆಯಿಂದ ಓಡಿ ಹೋಗುತ್ತಿಲ್ಲ – ಕೊನೆಗೂ ಮೌನ ಮುರಿದ ಬಿಎಸ್‍ವೈ

    ತನಿಖೆಯಿಂದ ಓಡಿ ಹೋಗುತ್ತಿಲ್ಲ – ಕೊನೆಗೂ ಮೌನ ಮುರಿದ ಬಿಎಸ್‍ವೈ

    – ಸಿಎಂ ಕುಮಾರಸ್ವಾಮಿಯೇ ಪ್ರಕರಣದ ಮೊದಲ ಆರೋಪಿ

    ಬೆಂಗಳೂರು: ಬೆಳಗ್ಗೆಯಿಂದಲೂ ಸದನದಲ್ಲಿ ಸೇರಿದಂತೆ ಪಕ್ಷದ ಶಾಸಕರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮೌನವಾಗಿದ್ದರು. ಅಧಿವೇಶನದ ಬಳಿಕ ಕೊನೆಗೂ ಆಡಿಯೋ ತನಿಖೆ ಕುರಿತು ಮೌನ ಮುರಿದಿದ್ದು, ನಾವು ತನಿಖೆಯಿಂದ ಓಡಿ ಹೋಗುತ್ತಿಲ್ಲ ಎಂದಿದ್ದಾರೆ.

    ಬಿಜೆಪಿ ಕಚೇರಿ ಬಳಿ ಶಾಸಕರ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್‍ವೈ, ನಾವು ತನಿಖೆಯಿಂದ ಓಡಿ ಹೋಗುತ್ತಿಲ್ಲ. ಆದರೆ ಆರೋಪಿ ಸ್ಥಾನದಲ್ಲಿ ನಿಂತಿರುವ ಸರ್ಕಾರದ ಅಡಿ ಕಾರ್ಯ ನಿರ್ವಹಿಸುವ ಸಂಸ್ಥೆಯಿಂದ ತನಿಖೆ ನಡೆಸುವುದು ಸೂಕ್ತವಲ್ಲ ಎಂದು ಹೇಳಿದ್ದೇವೆ. ಪ್ರಕರಣದಲ್ಲಿ ಸಿಎಂ ಕುಮಾರಸ್ವಾಮಿ ಅವರೇ ಮೊದಲ ಆರೋಪಿ ಆಗಿದ್ದು, ಅವರೇ ಸ್ಪೀಕರ್ ಮೇಲೆ ಆರೋಪ ಮಾಡಿದ್ದಾರೆ. ಆದ್ದರಿಂದ ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆಗೆ ಪ್ರಕರಣವನ್ನು ನೀಡಬೇಕು ಎಂದರು.

    ನಾಳೆಯೂ ಕೂಡ ಸದನದಲ್ಲಿ ಸ್ಪೀಕರ್ ಅವರಿಗೆ ಈ ಬಗ್ಗೆ ಸ್ಪಷ್ಟನೆ ನೀಡುತ್ತೇವೆ. ನಮ್ಮ 104 ಶಾಸಕರ ಅಭಿಪ್ರಾಯವೂ ಇದೇ ಆಗಿದೆ. ಸದನದಲ್ಲಿ ಸ್ಪೀಕರ್ ಅವರೊಂದಿಗೆ ಬಹಳ ಸೌಜನ್ಯದಿಂದ ನಡೆದುಕೊಂಡಿದ್ದೇವೆ. ಸಿಎಂ ಕುಮಾರಸ್ವಾಮಿ ಅವರೇ ರಾತ್ರಿ ಒಂದು ಗಂಟೆ ಸಮಯದಲ್ಲಿ ಶರಣಗೌಡರನ್ನು ನನ್ನ ಬಳಿ ಕಳುಹಿಸಿದ್ದಾರೆ. ಆದ್ದರಿಂದ ಅವರೇ ಪ್ರಕರಣದ ಮೊದಲ ಆರೋಪಿ ಆಗುತ್ತಾರೆ. ಹೀಗಾಗಿ ಅವರ ಅಡಿಯಲ್ಲಿ ತನಿಖೆ ನಡೆಯಲು ನಾವು ಒಪ್ಪಿಗೆ ನೀಡುವುದಿಲ್ಲ. ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.

    ಸದನದ ಬಳಿಕ ಬಿಎಸ್ ಯಡಿಯೂರಪ್ಪ ಅವರು ತುರ್ತು ಶಾಸಕರ ಸಭೆಯನ್ನು ಬಿಜೆಪಿ ಕಚೇರಿಯಲ್ಲಿ ನಡೆಸಿದರು. ಸಭೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕರಾದ ಈಶ್ವರಪ್ಪ, ಸಿ.ಟಿ ರವಿ, ಸುರೇಶ್ ಕುಮಾರ್, ವಿಶ್ವೇಶ್ವರ್ ಹೆಗಡೆ ಕಾಗೇರಿ, ಪ್ರೀತಂ ಗೌಡ, ತುರವೇಕೆರೆ ಶಾಸಕ ಜಯರಾಂ, ಶಿವನಗೌಡ ಅವರು ಭಾಗವಹಿಸಿದ್ದರು. ನಾಳೆ ಸದನದಲ್ಲಿ ಎಸ್‍ಐಟಿ ತನಿಖೆ ವಿರೋಧಿಸಿ ಯಾವ ರೀತಿ ಹೋರಟ ನಡೆಸಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಯಾವುದೇ ಕಾರಣಕ್ಕೂ ಎಸ್‍ಐಟಿ ತನಿಖೆ ಒಪ್ಪಿಗೆ ನೀಡದೆ ಧರಣಿ ಮುಂದುವರಿಸಬೇಕು. ಆಡಳಿತ ಪಕ್ಷದ ವಿರುದ್ಧ ಪಕ್ಷದ ಸದಸ್ಯರು ಒಗ್ಗಟ್ಟಿನಿಂದ ಮಾತನಾಡಬೇಕು ಎಂದು ಬಿಎಸ್‍ವೈ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಪರೇಷನ್ ಆಡಿಯೋ ಪ್ರಕರಣ – ಎಸ್‍ಐಟಿ ತನಿಖೆ ವಹಿಸಿಕೊಂಡರೆ ತನಿಖೆ ಹೇಗೆ ನಡೆಯುತ್ತೆ?

    ಆಪರೇಷನ್ ಆಡಿಯೋ ಪ್ರಕರಣ – ಎಸ್‍ಐಟಿ ತನಿಖೆ ವಹಿಸಿಕೊಂಡರೆ ತನಿಖೆ ಹೇಗೆ ನಡೆಯುತ್ತೆ?

    ಬೆಂಗಳೂರು: ಆಪರೇಷನ್ ಕಮಲ ವಿರುದ್ಧ ಸಿಎಂ ಕುಮಾರಸ್ವಾಮಿ ಅವರು ಸಿಡಿಸಿರುವ ಆಡಿಯೋ ಕುರಿತು ಮುಖ್ಯಮಂತ್ರಿಗಳು ಇಂದು ಎಸ್‍ಐಟಿ ತನಿಖೆಗೆ ನಡೆಸುವುದಾಗಿ ತಿಳಿಸಿದ್ದು, ಈ ಕ್ರಮಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ವಿಶೇಷ ತನಿಖಾ ದಳಕ್ಕೆ ಪ್ರಕರಣದ ತನಿಖೆ ಒಪ್ಪಿಸುವುದರ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸುವ ಹಿಂದೆ ಕಾರಣವೂ ಇದ್ದು, ಸರ್ಕಾರದ ಅಡಿ ಕಾರ್ಯ ನಿರ್ವಹಿಸುವ ಅಧಿಕಾರಿಗಳೆ ತನಿಖೆ ನಡೆಸುವುದಿಂದ ಸರ್ಕಾರದ ಮೇಲೆ ನಂಬಿಕೆ ಇಲ್ಲ ಎಂದು ಬಿಜೆಪಿ ಸ್ಪೀಕರ್ ಎದುರು ತಿಳಿಸಿದೆ. ಒಂದೊಮ್ಮೆ ಸ್ಪೀಕರ್ ಬಿಜೆಪಿ ನಾಯಕರ ಮಾತಿಗೆ ಮಾನ್ಯತೆ ನೀಡದೆ ಎಸ್‍ಐಟಿ ತನಿಖೆಗೆ ಒಪ್ಪಿಸಿದರೆ ಹೇಗಲ್ಲಾ ತನಿಖೆ ನಡೆಯುತ್ತದೆ ಎಂಬ ಮಾಹಿತಿ ಇಂತಿದೆ.

    ತನಿಖೆ ಹೇಗೆ ನಡೆಯುತ್ತದೆ?:
    ಎಸ್‍ಐಟಿ ಅಧಿಕಾರಿಗಳು ಆಪರೇಷನ್ ಆಡಿಯೋ ಕುರಿತು ತನಿಖೆ ನಡೆಸಲು ಅವಕಾಶ ಪಡೆದರೆ ಮೊದಲು ಎಫ್‍ಐಆರ್ ದಾಖಲು ಮಾಡಲಾಗುತ್ತದೆ. ಪೊಲೀಸ್ ಅಧಿಕಾರಿಗಳು ಹೇಗೆ ತನಿಖೆ ನಡೆಸುತ್ತಾರೋ ಹಾಗೆಯೇ ಎಸ್‍ಐಟಿ ತನಿಖೆಯೂ ಆರಂಭವಾಗುತ್ತದೆ. ಇದರೊಂದಿಗೆ ಕ್ರಿಮಿನಿನಲ್ ಪ್ರಕರಣದ ರೀತಿ ತನಿಖೆ ನಡೆಯುವ ಅವಕಾಶಗಳಿದ್ದು, ಎಫ್‍ಐಆರ್ ದಾಖಲಾದ ಬಳಿಕ ಡೀಲ್ ನಡೆದಿದೆ ಎನ್ನಲಾದ ಸ್ಥಳದ ಮಹಜರು ಕಾರ್ಯವನ್ನು ಎಸ್‍ಐಟಿ ತಂಡ ಮಾಡಲಿದೆ.

    ತನಿಖೆಗೂ ಮುನ್ನವೇ ಶಾಸಕ ನಾಗನಗೌಡ ಪುತ್ರ ಶರಣಗೌಡರ ಹೇಳಿಕೆ ಸಂಗ್ರಹ ಮಾಡಬಹುದಾಗಿದ್ದು, ಆಡಿಯೋವನ್ನು ವಶಕ್ಕೆ ಪಡೆದು ಕೂಲಂಕುಷವಾಗಿ ದಾಖಲೆ ಸಂಗ್ರಹ ಮಾಡಲಾಗುತ್ತದೆ. ಜೊತೆಗೆ ಆಡಿಯೋ ಕುರಿತು ಯಾರೆಲ್ಲಾ ಹೆಸರು ಪ್ರಸ್ತಾಪ ಆಗಿದೆಯೋ ಅವರಿಗೆಲ್ಲಾ ಕೂಡ ನೋಟಿಸ್ ನೀಡಲಾಗುತ್ತದೆ. ನಂತರದಲ್ಲಿ ವಶಕ್ಕೆ ಪಡೆದ ಆಡಿಯೋ ದಾಖಲೆಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಮುನ್ನ (ಎಫ್‍ಎಸ್‍ಎಲ್) ವಾಯ್ಸ್ ಸ್ಯಾಂಪಲ್ ಪಡೆಯುವ ಸಾಧ್ಯತೆ ಇದ್ದು, ಈ ವೇಳೆ ವಾಯ್ಸ್ ಸ್ಯಾಂಪಲ್ ನೀಡಲು ಒಪ್ಪಿಗೆ ನೀಡದಿದ್ದರೆ ಬಂಧನ ಮಾಡಲು ಕೂಡ ಅವಕಾಶವಿದೆ.

    ಒಂದೊಮ್ಮೆ ಎಫ್‍ಎಸ್‍ಎಲ್ ವರದಿ ಬಂದರೆ ಆ ವರದಿಯನ್ನು ಆಧರಿಸಿ ಬಂಧನ ನಡೆಸುವ ಸಾಧ್ಯತೆ ಇದ್ದು, ಯಾರನ್ನಾದರೂ ಕೂಡ ಬಂಧಿಸುವ ಅವಕಾಶವಿದೆ. ಅಲ್ಲದೇ ಪ್ರಕರಣದಲ್ಲಿ ಸ್ಪೀಕರ್ ಹಾಗೂ ನ್ಯಾಯಮೂರ್ತಿಗಳ ಹೆಸರು ಪ್ರಸ್ತಾಪ ಆಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆ ನಡೆಸುವ ಹಾಗು 50/25 ಕೋಟಿ ರೂ. ಪ್ರಸ್ತಾಪ ಆಗಿರುವ ಕಾರಣ ಅದಾಯ ತೆರಿಗೆ ಇಲಾಖೆ (ಐಟಿ) ಹಾಗೂ ಜಾರಿ ನಿರ್ದೇಶನಾಲಯದ (ಇಡಿ)ಗೆ ತನಿಖೆ ನಡೆಸಲು ಸೂಚಿಸಬಹುದಾಗಿದೆ. ಅಲ್ಲದೇ ಎಸ್‍ಐಟಿ ನೀಡಲಿರುವ ಚಾರ್ಜ್ ಶೀಟನ್ನು ನ್ಯಾಯಾಲಯಕ್ಕೂ ಸಲ್ಲಿಕೆ ಮಾಡಬಹುದು.

    ಪ್ರಕರಣದಲ್ಲಿ ಸಿಎಂ ಕುಮಾರಸ್ವಾಮಿ ಅವರು ಕೂಡ ಆಡಿಯೋ ರೆಕಾರ್ಡ್ ಮಾಡಲು ನಾನು ಸೂಚನೆ ನೀಡಿದ್ದೇ ಎಂದು ಹೇಳಿದ ಮಾತಿನ ಅನ್ವಯ ಎಚ್‍ಡಿಕೆ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಬಹುದಾಗಿದೆ. ತನಿಖೆಯ ವೇಳೆ ಪ್ರಕರಣ ದಾಖಲಾದ ಬಳಿಕ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಬಂಧನ ಸಾಧ್ಯತೆ ಇದ್ದು, ತನಿಖೆಗೆ ಸಹಕಾರ ನೀಡದಿದ್ದರೆ ಬಿಎಸ್ ಯಡಿಯೂರಪ್ಪ ಅವರನ್ನು ಕೂಡ ಬಂಧಿಸುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 5 ನಿಮಿಷದಲ್ಲೇ ಇಡೀ ಜಿಲ್ಲೆಯ ಬರ ಅಧ್ಯಯನ ಮಾಡಿದ ಯಡಿಯೂರಪ್ಪ!

    5 ನಿಮಿಷದಲ್ಲೇ ಇಡೀ ಜಿಲ್ಲೆಯ ಬರ ಅಧ್ಯಯನ ಮಾಡಿದ ಯಡಿಯೂರಪ್ಪ!

    ಚಿಕ್ಕಬಳ್ಳಾಪುರ: ಬರೀ ಐದೇ ನಿಮಿಷದಲ್ಲಿ ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯ ಬರ ಪರಿಶೀಲನೆಯನ್ನ ಮಾಜಿ ಸಿಎಂ ಯಡಿಯೂರಪ್ಪ ಮುಗಿಸಿದ್ದಾರೆ.

    ಕೋಲಾರ ಜಿಲ್ಲೆಯ ಬರ ಪ್ರವಾಸ ಮುಗಿಸಿ ಸಂಜೆ 5 ಗಂಟೆ 10 ನಿಮಿಷ ಸುಮಾರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಬರ ಪ್ರವಾಸಕ್ಕೆ ಆಗಮಿಸಿದ ಯಡಿಯೂರಪ್ಪ ಮತ್ತು ತಂಡ ಚಿಕ್ಕಬಳ್ಳಾಪುರ ತಾಲ್ಲೂಕಿನ ಗಿಡ್ನಹಳ್ಳಿ ಬಳಿ ರಸ್ತೆ ಬದಿಯೇ ಇರುವ ರೈತ ಜಯರಾಮ್ ರವರ ಹಿಪ್ಪುನೇರಳೆ ತೋಟಕ್ಕೆ ಭೇಟಿ ನೀಡಿ ಬರ ಪರಿಶೀಲನೆ ನಡೆಸಿದರು. ವಿಫಲ ಕೊಳವೆಬಾವಿಯ ಬಗ್ಗೆ ರೈತನ ಬಳಿ ಮಾಹಿತಿ ಪಡೆದ ಯಡಿಯೂರಪ್ಪ ವಿದ್ಯುತ್ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ಓಣಗಿದ ರಾಗಿ ಬೆಳೆ ವೀಕ್ಷಣೆ ಮಾಡಿದರು. ಇದೆಲ್ಲವೂ ಕೇವಲ 5 ನಿಮಿಷದಲ್ಲಿ ನೋಡಿದ್ದಾರೆ ಅನ್ನೋದು ವಿಶೇಷ.

    ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ನೇರವಾಗಿ ಚಿಕ್ಕಬಳ್ಳಾಪುರ ಜಿಲ್ಲಾಢಳಿತ ಭವನಕ್ಕೆ ಅಗಮಿಸಿದ ಯಡಿಯೂರಪ್ಪ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ಜೊತೆ ಜಿಲ್ಲೆಯ ಬರದ ಬಗ್ಗೆ ಚರ್ಚಿಸಿ ಅಂಕಿ ಸಂಖ್ಯೆಗಳ ಮಾಹಿತಿ ಪಡೆದುಕೊಂಡರು. ಹೀಗಾಗಿ ಬರೀ ಕೇವಲ ಜಿಲ್ಲೆಯ ಒಂದು ಕಡೆ ಮಾತ್ರ ಬರ ಪರಿಶೀಲನೆ ನಡೆಸಿ, ಅದು 5 ನಿಮಿಷದಲ್ಲಿಯೇ ಇಡೀ ಜಿಲ್ಲೆಯ ಬರ ಅಧ್ಯಯನ ಮಾಡಿದ ಯಡಿಯೂರಪ್ಪ ನವರ ನಡೆ ಇದೆಂಥಾ ಬರ ಅಧ್ಯಯನ ಅಂತ ಹಲವರಲ್ಲಿ ಪ್ರಶ್ನೆ ಮೂಡುವಂತೆ ಮಾಡಿತ್ತು.

    ಜಿಲ್ಲೆಯ ಗಡಿ ತಾಲೂಕುಗಳಾದ ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ ಭಾಗದಲ್ಲಿ ತೀವ್ರತರವಾದ ಬರದಿಂದ ಜನ ಕಂಗೆಟ್ಟಿದ್ದರು. ಆ ಕಡೆಗೆ ರಾಜ್ಯ ಸರ್ಕಾರದ ಬರ ಸಂಪುಟದ ಉಪಸಮಿತಿ ಸಹ ಭೇಟಿ ನೀಡಿರಲಿಲ್ಲ. ಈಗ ವಿರೋಧ ಪಕ್ಷದ ನಾಯಕರಾದ ಯಡಿಯೂರಪ್ಪ ನವರು ಭೇಟಿ ಮಾಡಲಿಲ್ಲ. ಹೀಗಾಗಿ ಬರ ಅಧ್ಯಯನ ಅನ್ನೋದು ಕಾಟಚಾರಕ್ಕೆ ಮಾಡಿದ್ರಾ ಅನ್ನೋ ಪ್ರಶ್ನೆ ಎದುರಾಗುವಂತೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಚ್‍ಡಿಕೆ ಬೇಜವಾಬ್ದಾರಿ ಸಿಎಂ – ಹೊಸ ವರ್ಷದಲ್ಲಿ ಏನಾದ್ರು ಆಗಬಹುದು : ಬಿಎಸ್‍ವೈ

    ಎಚ್‍ಡಿಕೆ ಬೇಜವಾಬ್ದಾರಿ ಸಿಎಂ – ಹೊಸ ವರ್ಷದಲ್ಲಿ ಏನಾದ್ರು ಆಗಬಹುದು : ಬಿಎಸ್‍ವೈ

    – ರಾಜ್ಯ ರಾಜಕೀಯದಲ್ಲಿ ಏನ್ ಬೇಕಾದ್ರೂ ಆಗಬಹುದು
    – ಸುಮ್ಮನೆ ಕೂರಲು ನಾವೇನು ಸನ್ಯಾಸಿಗಳಲ್ಲ

    ಬೆಂಗಳೂರು: ರಾಜ್ಯದಲ್ಲಿ 156 ತಾಲೂಕುಗಳು ಬರದಿಂದ ತತ್ತರಿಸಿ ಹೋಗಿದ್ದು, ಹಲವು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸಿಎಂ ಕುಮಾರಸ್ವಾಮಿ ಅವರು ಬೇಜವಾಬ್ದಾರಿಯಿಂದ ಹೊಸ ವರ್ಷದ ಸಂಭ್ರಮಾಚರಣೆಗೆ ಸಿಂಗಾಪುರ ಪ್ರವಾಸ ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕಿಡಿಕಾಡಿದ್ದಾರೆ.

    ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಸ್‍ವೈ, ಸಿಎಂ ಎಚ್‍ಡಿಕೆ ಬೇಜವಾಬ್ದಾರಿ ಸಿಎಂ ಆಗಿದ್ದು, ಬರಗಾಲದಿಂದ ರಾಜ್ಯ ಜನತೆ ತತ್ತರಿಸುತ್ತಿದ್ದರೆ ಸಿಎಂ ವಿದೇಶದಲ್ಲಿ ಹೊಸ ವರ್ಷ ಆಚರಣೆ ಮಾಡುವುದು ಎಷ್ಟು ಸರಿ? ಅವರ ಸಚಿವ ಸಂಪುಟ ಸಹದ್ಯೋಗಿಗಳು ಹಲವರು ಹೊಸ ವರ್ಷ ಆಚರಣೆಗೆ ರಾಜ್ಯ ಬೇರೆ ಬೇರೆ ಕಡೆ ಹೋಗಿದ್ದಾರೆ. ರೈತರ ಸಾಲಮನ್ನಾ ಬಗ್ಗೆ ಪ್ರಶ್ನಿಸಿದರೆ ಕಥೆ ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

    ಸಮ್ಮಿಶ್ರ ಸರ್ಕಾರದ ನಾಯಕರು ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದು, ನನ್ನ ಸೋಲಿಗೆ ಕಾರಣರಾಗಿ ಸಿಎಂ ಸ್ಥಾನ ತಪ್ಪಿಸಿದ್ದಾರೆ ಎಂದು ಪದೇ ಪದೇ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಹೇಳುತ್ತಾರೆ. ಆಡಳಿತ ನಡೆಸುತ್ತಿರುವ ಎರಡು ಪಕ್ಷದ ಮುಖಂಡರ ನಡುವಿನ ಕಚ್ಚಾಟದಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲಿ ಗೊಂದಲ ಇದೆ. ಸರ್ಕಾರ ಅಸ್ತಿರಗೊಳ್ಳುತ್ತಿದೆ ಎಂದು ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ನೋಡಿ ನಾವು ಹೇಳಿಕೆ ಕೊಡುತ್ತಿದ್ದೇವೆ. ನಾವಾಗಿಯೇ ಸರ್ಕಾರ ಅಸ್ತಿರಗೊಳಿಸುತ್ತಿಲ್ಲ. ಒಂದೊಮ್ಮೆ ಸರ್ಕಾರ ತಾನಾಗಿಯೇ ಬಿದ್ದು ಹೋದರೆ ಸುಮ್ಮನೆ ಕೂರಲು ನಾವೇನು ಸನ್ಯಾಸಿಗಳಲ್ಲ. ಹೊಸ ವರ್ಷದಲ್ಲಿ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಅಷ್ಟರ ಮಟ್ಟಿಗೆ ಕಾಂಗ್ರೆಸ್, ಜೆಡಿಎಸ್ ನಲ್ಲಿ ಅತೃಪ್ತಿ, ಅಸಮಾಧಾನ ಜಾಸ್ತಿಯಾಗಿದೆ. ಆದ್ದರಿಂದ ರಾಜ್ಯ ರಾಜಕಾರಣದಲ್ಲಿ ಯಾವಾಗ ಬೇಕಾದರೂ ಏನು ಬೇಕಾದರೂ ಆಗಬಹುದು ಎಂದರು.

    ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್ ಕುರಿತ ಪ್ರಶ್ನೆಗೆ ಉತ್ತರಿಸಿದ ಬಿಎಸ್‍ವೈ, ಆಪರೇಷನ್ ಕಮಲದ ಮೂಲಕ ಶಾಸಕರ ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪದೇ ಪದೇ ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಈ ರೀತಿ ಮಾತನಾಡುವುದು ಶೋಭೆ ತರುವುದಿಲ್ಲ. ರಾಜ್ಯ ರಾಜಕೀಯದಲ್ಲಿ ಏನು ಬೇಕಾದರು ಆಗಬಹುದು. ಅವರ ಸರ್ಕಾರ ಬಿದ್ದರೆ ನಾವು ಸರ್ಕಾರ ರಚನೆ ಮಾಡುತ್ತೇವೆ. ಬಿಜೆಪಿ ಸರ್ಕಾರ ರಚನೆ ಆದರೆ ಸಿದ್ದರಾಮಯ್ಯ ಅವರು ವಿರೋಧಿ ಪಕ್ಷದ ನಾಯಕರಾಗುತ್ತಾರೆ ಎಂದು ತಿಳಿಸಿದರು.

    ದೆಹಲಿ ಭೇಟಿ ಬಗ್ಗೆ ಸ್ಪಷ್ಟನೆ: ಬಿಜೆಪಿ ರಾಷ್ಟ್ರೀಯ ಸಭೆ ನಡೆಯಲಿದ್ದು ಅಲ್ಲಿಗೆ ರಾಜ್ಯದಿಂದ ತೆರಳುವ ಕಾರ್ಯಕರ್ತರಿಗೆ ವ್ಯವಸ್ಥೆ ಮಾಡಬೇಕಿತ್ತು. ಅಲ್ಲದೇ ರಾಜ್ಯದ ಕೆಲ ಯೋಜನೆಗಳ ಬಗ್ಗೆ ಚರ್ಚೆ ನಡೆಸಲು ಕೆಲ ಸಚಿವರನ್ನು ಭೇಟಿ ಮಾಡಿದ್ದೆ ಅಷ್ಟೇ. ಯಾವುದೇ ಆಪರೇಷನ್ ಕಮಲ ಇಲ್ಲ. ಜನವರಿಯಲ್ಲಿ ಜಂಟಿ ಅಧಿವೇಶನ ಕರೆಯಲಿದ್ದು, ಆಗ ಎಲ್ಲಾ ಶಾಸಕರು ಒಂದೆಡೆ ಸೇರುತ್ತಾರೆ. ಈ ಹಂತದಲ್ಲಿ ಏನಾದರೂ ಆಗಬಹುದು ಎಂದು ಮಾರ್ಮಿಕವಾಗಿ ಉತ್ತರಿಸಿದರು. ಅಲ್ಲದೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕುರಿತ ಪ್ರಶ್ನೆಗೆ ಉತ್ತರಿಸಿ, ರಮೇಶ್ ಜಾರಕಿಹೊಳಿ ಅವರು ಎಲ್ಲೆಲ್ಲಿ, ಯಾರ ಜೊತೆ ತಿಂಡಿ ಮಾಡುತ್ತಾರೆ ಎಂಬುವುದು ಮಾಧ್ಯಮಗಳಿಗೆ ಗೊತ್ತಿರಬೇಕು ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.

    ನಟ ಲೋಕನಾಥ್ ನಿಧನಕ್ಕೆ ಸಂತಾಪ: ಕನ್ನಡದ ಹಿರಿಯ ನಟ ಲೋಕನಾಥ್ ನಿಧನಕ್ಕೆ ಬಿಎಸ್ ಯಡಿಯೂರಪ್ಪ ಅವರು ಸಂತಾಪ ಸೂಚಿಸಿದರು. 5 ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಲೋಕನಾಥ್ ಅವರನ್ನ ಕಳೆದುಕೊಂಡ ನಾಡು ಹಾಗೂ ಚಿತ್ರರಂಗ ಬಡವಾಗಿದೆ. ಅವರ ಅಗಲಿಕೆ ನೋವನ್ನ ಸಹಿಸಿಕೊಳ್ಳುವ ಶಕ್ತಿಯನ್ನ ಭಗವಂತ ಅವರ ಕುಟುಂಬಕ್ಕೆ ಕೊಡಲಿ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಜಿ ವರದಿ ಕುರಿತ ಸಿದ್ದರಾಮಯ್ಯ ಹೇಳಿಕೆಗೆ ಬಿಎಸ್‍ವೈ ತಿರುಗೇಟು

    ಸಿಎಜಿ ವರದಿ ಕುರಿತ ಸಿದ್ದರಾಮಯ್ಯ ಹೇಳಿಕೆಗೆ ಬಿಎಸ್‍ವೈ ತಿರುಗೇಟು

    ಬೆಂಗಳೂರು: ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋಗಿ ಬಂದಿಲ್ಲ ಎಂದು ಸಿಎಜಿ ಸಲ್ಲಿಸಿರುವ ವರದಿಯ 35 ಸಾವಿರ ಕೋಟಿ ರೂ. ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ವಾಗ್ದಾಳಿ ನಡೆಸಿದ್ದು, ಕಾನೂನು ಗೊತ್ತಿದ್ದವರೇ ಈ ರೀತಿಯಲ್ಲಿ ಹೇಳಿಕೆ ನೀಡಿದರೆ ಸಾಮಾನ್ಯ ಅಪರಾಧಿ ಯಾವ ರೀತಿ ಕಾನೂನಿಗೆ ಗೌರವ ಕೊಡಬಹುದು ಎಂದು ಪ್ರಶ್ನೆ ಮಾಡುವ ಮೂಲಕ ಕಿಡಿಕಾರಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿಎಸ್‍ವೈ, ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋಗಿ ಬಂದಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರು ಟೀಕೆ ಮಾಡಿದ್ದು, ರಾಜ್ಯ ರಾಜಕೀಯದಲ್ಲಿ ಇದು ವಾಡಿಕೆ ಆಗಿದೆ. ನಿಮ್ಮ ಪಕ್ಷದವರ ಮೇಲೆ ಆಪಾದನೆ ಬಂದರೆ, ನನ್ನ ಕಡೆ ಬೊಟ್ಟು ಮಾಡಿ ತೋರಿಸುವುದು. 35,000 ಸಾವಿರ ಕೋಟಿಗಳಿಗೆ ಲೆಕ್ಕಪತ್ರವಿಲ್ಲ ಎಂದು ಸಿಎಜಿ ವರದಿ ನೀಡಿದೆ. ಆದರೆ ನಾವೇನು ಜೈಲಿಗೆ ಹೋಗಿಲ್ಲ ಎಂದು ಮಾಜಿ ಸಿಎಂ ಉತ್ತರ ಕೊಡುತ್ತಾರೆ. ಕಾನೂನು ಓದಿದವರೇ ಈ ರೀತಿ ಅಸಂಬದ್ಧ ಹೇಳಿಕೆ ನೀಡಿದರೆ, ಇನ್ನು ಸಾಮಾನ್ಯ ಅಪರಾಧಿ ಏನು ಹೇಳುತ್ತಾನೆ. ಅವರು ಈ ನೆಲದ ಕಾನೂನಿಗೆ ಏಕೆ ಗೌರವ ಕೊಡುತ್ತಾರೆ ಎಂದು ಪ್ರಶ್ನೆ ಮಾಡಿ ಟೀಕೆ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದಿಂದ 35 ಸಾವಿರ ಕೋಟಿ ರೂ. ಅವ್ಯವಹಾರ: ಬಿಜೆಪಿಯಿಂದ ಸಿಎಜಿ ವರದಿ ಆಧರಿಸಿ ಆರೋಪ

    ಇದೇ ವೇಳೆ ಮಂಡ್ಯದಲ್ಲಿ ಭತ್ತ ಕಟಾವು ಕಾರ್ಯದಲ್ಲಿ ಸಿಎಂ ಭಾಗಿಯಾಗಿಯಾಗುವ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಿ, ಸಿಎಂ ಧೋರಣೆಯನ್ನು ನೋಡಿದರೆ ಉತ್ತರ ಕರ್ನಾಟಕ ಬಗ್ಗೆ ಮಲತಾಯಿ ಧೋರಣೆಯನ್ನು ತೋರಿಸುತ್ತದೆ. ಅದ್ದರಿಂದ ಸಿಎಂ ಅಸಡ್ಡೆ ಬಗ್ಗೆ ಹೆಚ್ಚು ಚರ್ಚಿಸುವುದು ಅನಗತ್ಯವಾಗಿದೆ. ರಾಜ್ಯಕ್ಕೆ ಸಿಎಂ ಆಗಿರುವವರು ತಾಯಿಯ ಸ್ಥಾನದಲ್ಲಿ ಇರಬೇಕೇ ಹೊರತು ಮಲತಾಯಿ ಸ್ಥಾನದಲ್ಲಿ ಇರಬಾರದು ಎಂದು ತಿರುಗೇಟು ನೀಡಿದ್ದಾರೆ.

    ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಬಹಳಷ್ಟು ತಾಲೂಕುಗಳು ಬರದಿಂದ ತತ್ತರಿಸಿವೆ. ಜನರಿಗೆ ಕುಡಿಯಲು ನೀರು ಇಲ್ಲ. ಆದರೆ ಸಿಎಂ ಆಗಲಿ ಸಂಪುಟದ ಮಂತ್ರಿಗಳಾಗಲಿ ಬರ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿಲ್ಲ. ಜನರ ಸಂಕಷ್ಟಗಳನ್ನು ಅರಿಯಲು ಪ್ರಯತ್ನಿಸುತ್ತಿಲ್ಲ ಎಂದು ಟೀಕೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕನ್ನಡ ಮೇರು ನಟರ ಸ್ಮಾರಕ ಒಂದೆಡೆ ಆಗಬೇಕು – ಬಿಎಸ್‍ವೈ

    ಕನ್ನಡ ಮೇರು ನಟರ ಸ್ಮಾರಕ ಒಂದೆಡೆ ಆಗಬೇಕು – ಬಿಎಸ್‍ವೈ

    ಬೆಂಗಳೂರು: ಕನ್ನಡ ಚಿತ್ರರಂಗದ ಮೂವರು ಮೇರು ನಟರ ಸ್ಮಾರಕಗಳು ಒಂದೇ ಕಡೆ ಆಗಬೇಕೇಂಬುದು ನನ್ನ ಬಯಕೆ ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.

    ನಗರದಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕನ್ನಡದ ಮೂವರು ಮೇರು ನಟರಾದ ಡಾ. ರಾಜ್‍ಕುಮಾರ್, ಡಾ. ವಿಷ್ಣುವರ್ಧನ್, ಡಾ. ಅಂಬರೀಶ್ ಅವರ ಸ್ಮಾರಕಗಳು ಒಂದೇ ಕಡೆ ಆಗಬೇಕು ಎಂಬುವುದು ನನ್ನ ಬಯಕೆ. ನಾನು ಹೇಳಿದ್ದು ಆದರೆ ಒಳ್ಳೆಯದು ಎಂದು ವಿಷ್ಣು ಸ್ಮಾರಕ ಸ್ಥಳಾಂತರ ಬಗ್ಗೆ ಪರೋಕ್ಷವಾಗಿ ಒಪ್ಪಿಗೆ ನೀಡಿದ್ದಾರೆ.

    ಸದ್ಯ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಚರ್ಚೆ ಬೇಡ. ಈಗಾಗಲೇ ಅಂಬರೀಶ್ ಅವರ ಅಂತಿಮ ಕಾರ್ಯಗಳನ್ನು ಮಾಡಲು ಸರ್ಕಾರ ಯಶಸ್ವಿಯಾಗಿ ವ್ಯವಸ್ಥೆ ಮಾಡಿದೆ. ಸಿಎಂ ಕುಮಾರಸ್ವಾಮಿ ಅವರು, ಸಚಿವ ಡಿಕೆ ಶಿವಕುಮಾರ್ ಅವರು ಸ್ಮಾರಕದ ಬಗ್ಗೆ ಚಿಂತನೆ ಹೊಂದಿದ್ದಾರೆ. ನನ್ನ ಅಭಿಪ್ರಾಯದಂತೆ ಮೂವರಿಗೂ ಸರಿಸಮಾನವಾಗಿ ಒಂದೇ ಕಡೆ ಸ್ಮಾರಕ ನಿರ್ಮಾಣ ಮಾಡುವುದು ಒಳ್ಳೆಯದು ಎಂಬ ಸಲಹೆ ನೀಡುವುದಾಗಿ ಹೇಳಿದರು. ಅಲ್ಲದೇ ಈ ಹಿಂದೆ ನಡೆದ ಬಗ್ಗೆ ಈಗ ಚರ್ಚೆ ಮಾಡುವುದು ಬೇಡ. ಏಕೆಂದರೆ ಈಗಿನ ಸರ್ಕಾರ ಉತ್ತಮ ನಿರ್ಧಾರ ಕೈಗೊಳ್ಳಲಿ ಎಂದರು. ಅಂದ ಹಾಗೇ, ವಿಷ್ಣುವರ್ಧನ್ ಅವರು 2009ರಲ್ಲಿ ಇಹಲೋಕ ತ್ಯಜಿಸಿದಾಗ ಯಡಿಯೂರಪ್ಪ ಅವರೇ ಸಿಎಂ ಆಗಿದ್ದರು.

    ಅಭಿಮಾನಿಗಳ ಬೇಡಿಕೆ ಬಗ್ಗೆ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ಭಾರತಿ ವಿಷ್ಣು ವರ್ಧನ್ ಅವರು, ಈಗಾಗಲೇ ಮೈಸೂರಿನಲ್ಲಿ ಅವರ ಸ್ಮಾರಕ ನಿರ್ಮಾಣ ಕಾರ್ಯ ಒಂದು ಹಂತಕ್ಕೆ ಆಗಿರುವುದರಿಂದ ಮತ್ತೆ ಅದರ ಸ್ಥಳಾಂತರದ ಚರ್ಚೆ ಬೇಡ. ಈ ಬಗ್ಗೆ ಚರ್ಚೆ ಮಾಡಲು ನಮಗೆ ಇಷ್ಟವಿಲ್ಲ. ಏಕೆಂದರೆ ಅದಕ್ಕೆ ಕಾಲಾವಕಾಶ ಅಂತ್ಯವಾಗಿದೆ. ಕೆಲವರು ಸ್ಮಾರಕದ ಬಗ್ಗೆ ಕೋರ್ಟ್ ಮೆಟ್ಟಿಲು ಹತ್ತಿದ್ದು, ಸಿಎಂ ಅವರು ಈ ಕುರಿತು ಚರ್ಚೆ ನಡೆಸಿ ತೀರ್ಮಾನ ಕೈಗೊಂಡರೆ ಒಳಿತು ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv