Tag: ಮಾಜಿ ಸಿಎಂ ಕುಮಾರಸ್ವಾಮಿ

  • ಜನರಿಗೆ ನೀರು ಕೊಡಲು ಈಗ ಜ್ಞಾನೋದಯ ಆಗಿದ್ಯಾ – ಕಾಂಗ್ರೆಸ್‍ಗೆ ಹೆಚ್‍ಡಿಕೆ ಪ್ರಶ್ನೆ

    ಜನರಿಗೆ ನೀರು ಕೊಡಲು ಈಗ ಜ್ಞಾನೋದಯ ಆಗಿದ್ಯಾ – ಕಾಂಗ್ರೆಸ್‍ಗೆ ಹೆಚ್‍ಡಿಕೆ ಪ್ರಶ್ನೆ

    ಬೆಂಗಳೂರು: ಕಾಂಗ್ರೆಸ್ ಪಾದಯಾತ್ರೆ ರಾಜಕೀಯ ಸ್ಟಂಟ್, ಜನರಿಗೆ ವಿಷ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ ಜನರಿಗೆ ನೀರು ಕೊಡಲು ಈಗ ಜ್ಞಾನೋದಯ ಆಗಿದ್ಯಾ ಎಂದು ಮಾಜಿ ಸಿಎಂ ಹೆಚ್‍.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

    ಜೆಪಿ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಮಾಯಾ ಜಿಂಕೆಗಳು ಇದ್ದ ಹಾಗೇ. ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿವೆ. ಕಾಂಗ್ರೆಸ್ ಪಕ್ಷ ಪಾದಯಾತ್ರೆ ಮಾಡುತ್ತಿದೆ. ಇದರಿಂದ ನಮಗೇನು ಆತಂಕ ಇಲ್ಲ. ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಅಂತ ಹೋಗಿದ್ದರು ಆಗ ಏನಾಗಿತ್ತು. ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಪ್ರಾರಂಭ ಮಾಡಿದೆ ಎಂದು ಆಕ್ರೋಶ ಹೊರ ಹಾಕಿದರು.

    ಸಿದ್ದರಾಮಯ್ಯ ಅವಧಿಯಲ್ಲಿ ಡಿಪಿಆರ್ ಆಗೇ ಇಲ್ಲ. ಡಿಪಿಆರ್ ಆಗಿದ್ದು ನನ್ನ ಕಾಲದಲ್ಲಿ. ಪಾದಯಾತ್ರೆ ಮಾಡುವ ಮೂಲಕ ಕಾಂಗ್ರೆಸ್ ಕಾವೇರಿ ಭಾಗದ ಜನರ ಜೀವನ ಹಾಳು ಮಾಡುವುದಕ್ಕೆ ಹೊರಟಿದೆ. ಇಷ್ಟು ದಿನ ಇಲ್ಲದವರು ಈಗ ಬೆಂಗಳೂರು ಜನರಿಗೆ ನೀರು ಕೊಡಿಸುವುದಕ್ಕೆ ಜ್ಞಾನೋದಯ ಆಗಿದೆಯಾ ಅಂತ ಪ್ರಶ್ನಿಸಿದರು. ಇದನ್ನೂ ಓದಿ: ಅಧಿಕಾರದಲ್ಲಿದ್ದಾಗ ಕುಂಭಕರ್ಣ ನಿದ್ದೆ, ಈಗ ಮೇಕೆದಾಟು ಹೋರಾಟ: ಡಿಕೆಶಿಗೆ ಕಾರಜೋಳ ಟಾಂಗ್

    ಕಾಂಗ್ರೆಸ್ ಪಾದಯಾತ್ರೆಯಿಂದ ಆ ಭಾಗದ ಜನರ ಜೀವಕ್ಕೆ ಎಫೆಕ್ಟ್ ಆಗುತ್ತದೆ. ನೀವು ಎಸಿಯಲ್ಲಿ ಹಾಯಾಗಿ ಇರುತ್ತೀರಾ. ಬಡವರನ್ನು ನೋಡುವವರು ಯಾರು ಎಂದು ಪ್ರಶ್ನಿಸುವುದರ ಜೊತೆಗೆ 5 ವರ್ಷದ ಅಧಿಕಾರ ಜೆಡಿಎಸ್‍ಗೆ ಕೊಟ್ಟರೆ. ಪಾದಯಾತ್ರೆ ಮೂಲಕ ಸ್ಟಂಟ್ ಮಾಡುವುಲ್ಲ. ನಿಗದಿತ ಅವಧಿಯೊಳಗೆ ಈ ಯೋಜನೆಗಳನ್ನು ಮುಗಿಸುತ್ತೇವೆ. ಬಿಜೆಪಿ- ಕಾಂಗ್ರೆಸ್ ತರಹ ಬೂಟಾಟಿಕೆ ಮಾಡುವುದಿಲ್ಲ ಎಂದು ಭರವಸೆ ನೀಡಿದರು.

    ಡಿ.ಕೆ. ಶಿವಕುಮಾರ್ ಕುಮಾರಣ್ಣ ನಮ್ಮ ಅಣ್ಣ ಅಂತಾರೆ. ಏನ್ ನಾಟಕ ಮಾಡುತ್ತಿದ್ದೀರಾ? ಈ ಡ್ರಾಮಾ ಮಾಡಿಕೊಂಡು ನೀವು ಜೀವನ ಮಾಡಲು ಸಾಧ್ಯವಿಲ್ಲ. ಇವೆಲ್ಲಾ ವ್ಯಂಗ್ಯ ಅಷ್ಟೇ ಎಂದು ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಧಿಕಾರದಲ್ಲಿದ್ದಾಗ ನಿಮ್ಮ ಗಂಡಸ್ತನ ಎಲ್ಲಿ ಹೋಗಿತ್ತು: ರೇಣುಕಾಚಾರ್ಯ

    ಕಾಂಗ್ರೆಸ್ ಪಾದಯಾತ್ರೆ ಮಾಡಿದ ಕೂಡಲೇ ಮೋದಿ ಯೋಜನೆಗೆ ಕ್ಲಿಯರ್ ಕೊಡ್ತಾರಾ? ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ಅವಕಾಶ ಕೊಡುವುದಿಲ್ಲ ಅಂತಿದ್ದಾರೆ. ಅಲ್ಲಿ ಕಾಂಗ್ರೆಸ್ ಬೆಂಬಲಿತ ಸರ್ಕಾರ ಇದೆ. ಆದರೂ ಕಾಂಗ್ರೆಸ್ ಅವರು ಅಣ್ಣಾಮಲೈ ಮೇಲೆ ಆರೋಪ ಮಾಡುತ್ತಿದ್ದಾರೆ. ಪಾದಯಾತ್ರೆ ಮೂಲಕ ಜಾತ್ರೆ ಮಾಡಿ. ಈ ಕೋವಿಡ್ ಸಮಯದಲ್ಲಿ 10-20 ಜನ ಸೇರಿಸಿ. ನಿಮ್ಮ ಜಾತ್ರೆ ಮೂಲಕ ನಿಮಗೆ ನೀರು ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದರು.

    ಕರ್ನಾಟಕದ ನೀರಾವರಿ ವಿಚಾರದಲ್ಲಿ ದೇವೇಗೌಡರನ್ನು ನಿರ್ಲಕ್ಷ್ಯ ಮಾಡಿದರೆ ಕನ್ನಡಿಗರಿಗೆ ಅನ್ಯಾಯವಾಗುತ್ತದೆ. ಎಷ್ಟು ದಿನ ಅವರು ಬದುಕುತ್ತಾರೋ ಗೊತ್ತಿಲ್ಲ. ಅವರು ಇರುವ ಒಳಗೆ ರಾಜಕೀಯ ಮಾಡದೇ ಯೋಜನೆಗಳನ್ನು ಮುಗಿಸಿಕೊಳ್ಳಿ. ಸರ್ಕಾರದಲ್ಲಿ ದುಡ್ಡಿನ ಕೊರತೆ ಇಲ್ಲ. ಆದರೆ ಯೋಜನೆ ಅನುಷ್ಠಾನ ಮಾಡುವ ಬದ್ದತೆ ಎರಡು ಪಕ್ಷಗಳಿಗೆ ಇಲ್ಲ. ದೇವೇಗೌಡ ಅನುಭವ ಪಡೆದು ಯೋಜನೆ ಅನುಷ್ಠಾನ ಮಾಡಿ ಅಂತ ಸಲಹೆ ನೀಡಿದರು. ಇದನ್ನೂ ಓದಿ: ಸೆಲ್ಫ್ ಕೋವಿಡ್ ಟೆಸ್ಟಿಂಗ್ ಮಾಡಿಕೊಳ್ಳುವವರಿಗೆ ಮಾರ್ಗಸೂಚಿ ನೀಡಬೇಕು: ಡಾ.ವಿಶಾಲ್ ರಾವ್

    ಪಾದಯಾತ್ರೆ ಮಾಡಿ ಶೋ ಕೊಡುವುದರಿಂದ ರಾಜ್ಯಕ್ಕೆ ಸಮಸ್ಯೆ ಆಗಬಹುದು. ಪಾದಯಾತ್ರೆ ಮಾಡಿ ಅಂತ ಸಲಹೆ ಕೊಟ್ಟವರು ಯಾರು? ನಾಳೆ ತಮಿಳುನಾಡಿನವರು ಸುಮ್ಮನೆ ಇರುತ್ತಾರಾ? ಸುಪ್ರೀಂಕೋರ್ಟ್ ನಲ್ಲಿ ಕೇಸ್ ಇದೆ. ಇವರ ಪಾದಯಾತ್ರೆ ಮತ್ತಷ್ಟು ಸಮಸ್ಯೆ ಆಗಬಹುದು. ಪಾದಯಾತ್ರೆಯಿಂದ ಈ ಕೆಲಸ ಆಗುತ್ತದೆ ಅಂದರೆ ನಾನು ಕೂಡಾ ಪಾದಯಾತ್ರೆಗೆ ಹೋಗುವುದಕ್ಕೆ ಸಿದ್ದ. ಈ ಬಗ್ಗೆ ವಾಸ್ತವಾಂಶವನ್ನು ಕಾಂಗ್ರೆಸ್ ಇಡಲಿ. ಪಾದಯಾತ್ರೆ ಮೂಲಕ ಜನರಿಗೆ ವಿಷ ಹಾಕುತ್ತಿದ್ದೀರಾ. ಓಟ್ ಬ್ಯಾಂಕ್‍ಗೆ ಈ ಪಾದಯಾತ್ರೆ ಅಷ್ಟೇ ಅಂತ ವಾಗ್ದಾಳಿ ನಡೆಸಿದರು.

  • ಶಾಸಕರ ಭಿನ್ನಮತ ಶಮನಕ್ಕೆ ಎಚ್‍ಡಿಕೆ ಪ್ಲಾನ್- ಮಲೇಷಿಯಾಗೆ ದಳ ನಾಯಕರ ಪ್ರವಾಸ

    ಶಾಸಕರ ಭಿನ್ನಮತ ಶಮನಕ್ಕೆ ಎಚ್‍ಡಿಕೆ ಪ್ಲಾನ್- ಮಲೇಷಿಯಾಗೆ ದಳ ನಾಯಕರ ಪ್ರವಾಸ

    ಬೆಂಗಳೂರು: ಮೈತ್ರಿ ಸರ್ಕಾರ ಪತನ ಬಳಿಕ 2ನೇ ಹಂತದ ಆಪರೇಷನ್ ಕಮಲ ನಡೆಸಲು ತೆರೆಮರೆಯಲ್ಲಿ ಸಿದ್ಧತೆ ನಡೆಸಲಾಗುತ್ತಿದೆ ಎಂಬ ಸುದ್ದಿ ಈ ಹಿಂದೆಯೇ ಕೇಳಿ ಬಂದಿತ್ತು. ಸದ್ಯ ಜೆಡಿಎಸ್ ಪಕ್ಷದ ಶಾಸಕರು, ಪರಿಷತ್ ಸದಸ್ಯರು ಹಾಗೂ ಪಕ್ಷದ ವರಿಷ್ಠರ ನಡುವೆ ಉಂಟಾಗಿರುವ ಅಸಮಾಧಾನವನ್ನು ಶಮನ ಮಾಡಲು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ವಿಶೇಷ ಪ್ಲಾನ್ ಮಾಡಿದ್ದಾರೆ.

    ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಶಾಸಕರು ಹಾಗೂ ಪರಿಷತ್ ಸದಸ್ಯರು, ಮುಖಂಡರು ಮಲೇಷಿಯಾ ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ಪ್ರವಾಸ ತೆರಳಲು ಬೇಕಾದ ಅಗತ್ಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.

    ನ.3 ರಿಂದ ನ.6ವರೆಗೂ ಜೆಡಿಎಸ್ ಮುಖಂಡರು ಮಲೇಷಿಯಾ ಪ್ರವಾಸಕ್ಕೆ ತೆರಳಿದ್ದು, ಪಕ್ಷದಲ್ಲಿ ಒಗ್ಗಟ್ಟು ಸಾಧಿಸುವ ಉದ್ದೇಶ ಈ ಪ್ರವಾಸ ಹಿಂದಿದೆ ಎನ್ನಲಾಗಿದೆ. ಪ್ರವಾಸ ವೇಳೆ ಪಕ್ಷದ ನಾಯಕರ ಸಮಸ್ಯೆಗಳು ಹಾಗೂ ಅವರ ಅಸಮಾಧಾನಕ್ಕೆ ಕಾರಣಗಳನ್ನು ತಿಳಿದು ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ವರಿಷ್ಠರು ನೀಡಲಿದ್ದಾರೆ. ಸದ್ಯ ಎಚ್‍ಡಿಕೆಯವರ ಈ ನಿರ್ಧಾರಕ್ಕೆ ಕೆಲ ಅಪ್ತ ಶಾಸಕರು ಒಪ್ಪಿಗೆ ನೀಡಿದ್ದು, ಪಕ್ಷದ ನಾಯಕರ ಸಮಸ್ಯೆ ಕೇಳಲು ಈ ಪ್ರವಾಸ ಶಾಸಕರಿಗೆ ಹೊಸ ಅನುಭವ ಹಾಗೂ ಹೊಸತನ ನೀಡಲಿದೆ ಎಂಬುವುದು ಅವರ ಪ್ಲಾನ್ ಆಗಿದೆ.

    ಎಚ್‍ಡಿಕೆರ ಪ್ಲಾನ್ ನಂತೆ ಪ್ರವಾಸ ತೆರಳುವ ಕುರಿತು ಇನ್ನು ಕೆಲ ನಾಯಕರು ನಿರ್ಧಾರ ತೆಗೆದುಕೊಳ್ಳಬೇಕಿದ್ದು, ನಾಳೆ ಬಸವರಾಜ್ ಹೊರಟ್ಟಿ ಅವರ ನೇತೃತ್ವದಲ್ಲಿ ಅಸಮಾಧಾನಿತ ನಾಯಕರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮಲೇಷಿಯಾ ಪ್ರವಾಸಕ್ಕೆ ತೆರಳುವ ಅಥವಾ ನಿರಾಕರಿಸುವ ಕುರಿತ ನಿರ್ಧಾರ ಅಂತಿಮವಾಗಲಿದೆ ಎಂಬ ಮಾಹಿತಿ ಲಭಿಸಿದೆ.

    ಈಗಾಗಲೇ ಜೆಡಿಎಸ್‍ನ ಹಲವು ಶಾಸಕರು ಹಾಗೂ ಪರಿಷತ್ ನಾಯಕರು, ನಾಯಕರು ಜೆಡಿಎಸ್ ವರಿಷ್ಠರ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದಾರೆ. ಆದರೆ ಎಚ್‍ಡಿಕೆಯವರ ಈ ಮಲೇಷಿಯಾ ಪ್ರವಾಸ ಪ್ಲಾನ್ ಯಾವ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

  • ಜೆಡಿಎಸ್‍ನಲ್ಲಿ ಬಂಡಾಯದ ಕಹಳೆ- ವರಿಷ್ಠ ವಿರುದ್ಧ ಹೊರಟ್ಟಿ ಅಸಮಾಧಾನ

    ಜೆಡಿಎಸ್‍ನಲ್ಲಿ ಬಂಡಾಯದ ಕಹಳೆ- ವರಿಷ್ಠ ವಿರುದ್ಧ ಹೊರಟ್ಟಿ ಅಸಮಾಧಾನ

    ಬೆಂಗಳೂರು: ಜೆಡಿಎಸ್ ಪಕ್ಷದಲ್ಲಿ ಮತ್ತೆ ಬಂಡಾಯದ ಕಹಳೆ ಮೊಳಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿಯೇ ಪಕ್ಷದ ಹಿರಿಯ ಮುಖಂಡ, ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ.

    ನಮ್ಮ ಮೇಲೆ ಕುಮಾರಸ್ವಾಮಿಗೆ ಸರ್ಕಾರ ಇದ್ದಾಗ ಇದ್ದ ಕಾಳಜಿ ಈಗಿಲ್ಲ. ನಮ್ಮ ಸಮಸ್ಯೆ ಕೇಳೋರು ಕೂಡ ಯಾರು ಇಲ್ಲ, ವರಿಷ್ಠರು ಕೂಡ ನಮ್ಮ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಈ ಬಗ್ಗೆ ನಿನ್ನೆ ನಮ್ಮೆಲ್ಲಾ ಪಕ್ಷದ ಸದಸ್ಯರು ಒಂದು ಸಭೆ ಮಾಡಿದ್ದೇವೆ. ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದೇವೆ. ಮತ್ತೆ ಸೋಮವಾರ ಸಭೆ ಕರೆದಿದ್ದು, ಮುಂದಿನ ತೀರ್ಮಾನ ತೆಗೆದುಕೊಳ್ತೇವೆ ಎಂದರು.

    ಇದೇ ವೇಳೆ ಪಕ್ಷ ಬಿಡುವ ಬಗ್ಗೆ ಆಲೋಚನೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಇದೆ ರೀತಿ ವರ್ತನೆ ಮುಂದುವರಿದರೆ ಕಷ್ಟ. ನಮ್ಮ ದಾರಿ ನಾವು ನೋಡಿಕೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆಯನ್ನು ನೀಡಿದರು.

    ನೆರೆ ಕುರಿತ ಸರ್ಕಾರದ ಕ್ರಮಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ನೀಡಿದ ಉತ್ತರ ತೃಪ್ತಿ ತಂದಿದೆ. ನಾವು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಅವರು ಉತ್ತರ ಕೊಟ್ಟಿದ್ದಾರೆ. ಸರ್ಕಾರ ಕೂಡ ಪರಿಹಾರ ಕಾರ್ಯಗಳನ್ನು ಸಮರ್ಥವಾಗಿ ಮಾಡಿದೆ. ಆದರೆ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಬಗ್ಗೆ ಅವರು ಹೇಳಿಲ್ಲ. ಅದಕ್ಕಾಗಿ ಕಾಂಗ್ರೆಸ್ ಪಕ್ಷದವರು ಧರಣಿ ಮಾಡಿದರು. ಆದರೆ ನಾವು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಅವರು ಉತ್ತರ ಕೊಟ್ಟಿದ್ದರು. ಆದ್ದರಿಂದಲೇ ನಾವು ಸದನದಲ್ಲಿ ಹೋರಾಟ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಮಾಜಿ ಡಿಸಿಎಂ ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆ ಪ್ರಕರಣ ಬಗ್ಗೆ ಪ್ರತಿಕ್ರಿಯೆ ನೀಡಿ, ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಬಲಿ ಪಶು ಆಗುವಂತಾಯಿತು. ಇದಕ್ಕೆ ಉದಾಹರಣೆ ಈ ರಮೇಶ್ ಆತ್ಮಹತ್ಯೆ. ಹೀಗಾಗಿ ಮುಂದೆ ಆದರೂ ರಾಜಕಾರಣಿಗಳ ಪಿಎಗಳು, ಪಿಎಸ್ ಗಳು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.

  • ಅಲೋಕ್‍ ಕುಮಾರ್ ಈಗ್ಲೂ ದಕ್ಷ ಅಧಿಕಾರಿ – ಸಿಬಿಐ ದಾಳಿಗೂ ನನಗೂ ಸಂಬಂಧವಿಲ್ಲ: ಎಚ್‍ಡಿಕೆ

    ಅಲೋಕ್‍ ಕುಮಾರ್ ಈಗ್ಲೂ ದಕ್ಷ ಅಧಿಕಾರಿ – ಸಿಬಿಐ ದಾಳಿಗೂ ನನಗೂ ಸಂಬಂಧವಿಲ್ಲ: ಎಚ್‍ಡಿಕೆ

    ಬೆಂಗಳೂರು: ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರ ನಿವಾಸದಲ್ಲಿ ಸಿಬಿಐ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರುವ ಕುರಿತ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ, ಸಿಬಿಐ ದಾಳಿಗೂ ನನಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

    ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಫೋನ್ ಕದ್ದಾಲಿಕೆ ಕುರಿತ ವಿಚಾರಣೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಎಚ್‍ಡಿಕೆ, ಯಾರ ಮನೆ ಮೇಲಾದರೂ ದಾಳಿ ನಡೆಯಲಿ. ನನ್ನನ್ನು ಯಾಕೆ ಕೇಳುತ್ತೀರಿ. ಅದಕ್ಕೂ ನನಗೂ ಏನು ಸಂಬಂಧ? ಎಲ್ಲರ ಅವಧಿಯಲ್ಲೂ ಫೋನ್ ಟ್ಯಾಪಿಂಗ್ ನಡೆದಿದೆ. ಯಾರ ಯಾರ ಅವಧಿಯಲ್ಲಿ ಹೇಗೆ ನಡೆಸಿದ್ದಾರೆ ಎಂದು ತನಿಖೆ ನಡೆಸುತ್ತಿದ್ದಾರೆ. ಅದಕ್ಕೆ ನಾನು ಏಕೆ ತಲೆ ಕೆಡಿಸಿಕೊಳ್ಳಲಿ ಎಂದರು.

    ಈಗಲೂ ನಾನು ಹೇಳುತ್ತಿದ್ದೇನೆ. ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರು ದಕ್ಷ ಅಧಿಕಾರಿಯಾಗಿದ್ದಾರೆ. ಪ್ರಕರಣದಲ್ಲಿ ನನ್ನ ಮನೆಗೂ ವಿಚಾರಣೆಗೆ ಬಂದರೆ ಬರಲಿ. ದೇಶದ ಕಾನೂನು ವ್ಯವಸ್ಥೆಯ ಅಡಿ ಯಾರನ್ನು ಬೇಕಾದರು ತನಿಖೆ ಮಾಡಬಹುದು. ಇದಕ್ಕೆ ಗಾಬರಿ ಪಡುವ ಅಗತ್ಯವಿಲ್ಲ ಎಂದರು.

    ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆಯ್ಕೆ ಕುರಿತು ಇಂದು ಜೆಡಿಎಸ್ ಕಚೇರಿಯಲ್ಲಿ ಸಭೆ ನಡೆಸಿದರು. ಜೆಡಿಎಸ್ ವರಿಷ್ಠರಾದ ದೇವೇಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 15 ಕ್ಷೇತ್ರಗಳ ಅಭ್ಯರ್ಥಿ ಬಗ್ಗೆ ನಿರ್ಧಾರವಾಗಲಿದೆ. ಈಗಾಗಲೇ ಎಲ್ಲಾ ಕ್ಷೇತ್ರಗಳ ಮುಖಂಡರ ಸಭೆ ಮಾಡಿ ಅಭ್ಯರ್ಥಿಗಳನ್ನ ಕುಮಾರಸ್ವಾಮಿ ಫೈನಲ್ ಮಾಡಿದ್ದು, ಇಂದಿನ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಮಂಡಿಸಿ ಚರ್ಚೆ ಮಾಡಿ ಅಂತಿಮವಾಗಿ ಅಭ್ಯರ್ಥಿ ಗಳನ್ನ ಘೋಷಣೆ ಮಾಡಲಾಗುತ್ತೆ ಎಂಬ ಮಾಹಿತಿ ಲಭಿಸಿದೆ.

  • ಅನರ್ಹ ಶಾಸಕರ ಜೊತೆ ಸಿಎಂ ಬಿಎಸ್‍ವೈರನ್ನ ಭೇಟಿಯಾದ ಜಿಟಿಡಿ

    ಅನರ್ಹ ಶಾಸಕರ ಜೊತೆ ಸಿಎಂ ಬಿಎಸ್‍ವೈರನ್ನ ಭೇಟಿಯಾದ ಜಿಟಿಡಿ

    ಬೆಂಗಳೂರು: ಅಚ್ಚರಿಯ ಬೆಳವಣಿಗೆ ಎಂಬಂತೆ ಮಾಜಿ ಸಚಿವ ಜಿಟಿ ದೇವೇಗೌಡ ಅವರು ಇಂದು ಸಿಎಂ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

    ಅನರ್ಹ ಶಾಸಕ ವಿಶ್ವನಾಥ್, ಎಸ್.ಟಿ.ಸೋಮಶೇಖರ್ ಅವರೊಂದಿಗೆ ಬಿಎಸ್‍ವೈ ಅವರ ಧವಳಗಿರಿ ನಿವಾಸಕ್ಕೆ ಆಗಮಿಸಿದ್ದ ಜಿ.ಟಿ.ದೇವೇಗೌಡ ಅವರು, ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದರು. ಈ ಭೇಟಿ ಜೆಡಿಎಸ್‍ನ ಮತ್ತೊಂದು ವಿಕೆಟ್ ಪತನಕ್ಕೆ ಕಾರಣವಾಗುತ್ತಾ ಎಂಬ ಅನುಮಾನ ಮೂಡಿದೆ.

    ಬಿಎಸ್‍ವೈರನ್ನ ಭೇಟಿ ಮಾಡಿದ್ದ ಜಿಟಿ ದೇವೇಗೌಡರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಚುನಾವಣೆ ಕಳೆದ ತಿಂಗಳ 9 ರಂದು ನಿಗದಿಯಾಗಿತ್ತು. ಆದರೆ ಚುನಾವಣೆಯಲ್ಲಿ ಗೊಂದಲ ಉಂಟಾಗಿದ್ದು, ಈ ಬಗ್ಗೆ ಸಿಎಂ ಅವರೊಂದಿಗೆ ಮಾತುಕತೆ ನಡೆಸಲು ಆಗಮಿಸಿದ್ದೆ. ಡೈರಿ ಚುನಾವಣೆ ನಡೆಯದ ಕಾರಣ ಹುದ್ದೆ ಖಾಲಿ ಇದ್ದು, ಪರಿಣಾಮ ರೈತರಿಗೆ ಬಿಡುಗಡೆಯಾಗಬೇಕಾದ ಹಣ ಲಭಿಸುತ್ತಿಲ್ಲ ಎಂದರು.

    ರೈತರ ಸಮಸ್ಯೆಯಿಂದ ನಾನೇ ಬಂದು ಈ ಬಗ್ಗೆ ಸಿಎಂ ಅವರಿಗೆ ಮನವರಿಕೆ ಮಾಡಿದ್ದೇನೆ. ಸಿಎಂ ಅವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ಬಿಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ಹಿಂದೆಯೇ ಹಲವು ಬಾರಿ ಸ್ಪಷ್ಟ ಪಡಿಸಿದ್ದು, ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಬಳಿಕ ಮಾತನಾಡಿದ ಬಿಎಸ್‍ವೈ ಅವರು, ಈ ಭೇಟಿಯಲ್ಲಿ ಯಾವುದೇ ವಿಶೇಷ ಇಲ್ಲ. ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡಲು ಅವರು ಬಂದಿದ್ದರು ಅಷ್ಟೇ ಎಂದರು.

    ಈ ಹಿಂದೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದ ಜಿಟಿ ದೇವೇಗೌಡ ಅವರು, ಪರೋಕ್ಷವಾಗಿ ಜೆಡಿಎಸ್ ದಳಪತಿಗಳ ವಿರುದ್ಧ ಅಸಮಾದಾನ ಹೊರ ಹಾಕಿದ್ದರು. ಮೈತ್ರಿ ಸರ್ಕಾರದ ಆರಂಭದ ಒಂದು ತಿಂಗಳು ನಾನು ಸಚಿವ ಸ್ಥಾನ ಪಡೆಯಲಿಲ್ಲ. ಸಚಿವ ಸ್ಥಾನ ಸ್ವೀಕರಿಸಿದ ಬಳಿಕ ದಸರಾ, ಮಹಾನಗರ ಪಾಲಿಕೆ ಮತ್ತು ಲೋಕಸಭಾ ಚುನಾವಣೆ, ವಿಶ್ವವಿದ್ಯಾಲಯಗಳ ಘಟಿಕೋತ್ಸವ, ನಿರಂತರ ಸಭೆಗಳಲ್ಲಿ ಭಾಗಿಯಾಗಿದ್ದರಿಂದ ಸ್ವ-ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಈ ಹಿಂದೆ ಸಿಗುತ್ತಿದ್ದ ಜಿ.ಟಿ.ದೇವೇಗೌಡ ಸಿಗುತ್ತಿಲ್ಲ ಎಂದು ಕ್ಷೇತ್ರದ ಜನತೆ ನನ್ನ ಮೇಲೆ ಮುನಿಸಿಕೊಂಡಿದ್ದರು. ರಾಜಕೀಯದಲ್ಲಿ ಸಹ ವಿವಿಧ ಬೆಳವಣಿಗೆಗಳು ನಡೆದಿದ್ದರಿಂದ ಮೈತ್ರಿ ಸರ್ಕಾರ ಸಹ ಪತನಗೊಂಡಿತು. ಈ ಎಲ್ಲ ಕಾರಣಗಳಿಂದ ರಾಜಕಾರಣ ಸಾಕು ಎಂಬ ನಿರ್ಣಯಕ್ಕೆ ಬಂದಿದ್ದೇನೆ. ಬೇರೆಯವರಿಗಿಂತ ನಮ್ಮ ಪಕ್ಷದ ನಾಯಕರೇ ನನ್ನ ವಿರುದ್ಧ ಕೆಲಸ ಮಾಡಿದ್ದರಿಂದ ತುಂಬಾ ನೋವಾಯ್ತು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬೇಕೆಂದು ತಾಯಿ ಚಾಮುಂಡಿಯಲ್ಲಿ ನನ್ನ ಕುಟುಂಬವೇ ಪ್ರಾರ್ಥನೆ ಮಾಡಿದೆ. ಆದರೆ ಅವರ ಬಳಿ ನಾನು ಪ್ರೀತಿ ಮತ್ತು ವಿಶ್ವಾಸವನ್ನು ನೋಡಲೇ ಇಲ್ಲ. ಹಾಗಾಗಿ ನನ್ನನ್ನು ನಿರ್ಲಕ್ಷ್ಯ ಮಾಡಲಾಯ್ತು ಎಂದು ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಟಿಡಿ ಹಾಗೂ ಬಿಎಸ್‍ವೈ ಅವರ ಭೇಟಿಗೆ ಹೆಚ್ಚಿನ ಮಹತ್ವ ಲಭಿಸಿತ್ತು.

  • ಚಿನ್ನ, ಭೂಮಿ ಅಡವಿಟ್ಟ ಖಾಸಗಿ ಸಾಲ ಮನ್ನಾ – ಎಚ್‍ಡಿಕೆ ಗಿಫ್ಟ್

    ಚಿನ್ನ, ಭೂಮಿ ಅಡವಿಟ್ಟ ಖಾಸಗಿ ಸಾಲ ಮನ್ನಾ – ಎಚ್‍ಡಿಕೆ ಗಿಫ್ಟ್

    – ಕೊನೆ ಕ್ಷಣದಲ್ಲೂ ರಾಜ್ಯದ ಜನರಿಗೆ ಸಿಹಿ ಸುದ್ದಿ
    – ನಿನ್ನೆಯೇ ಸಾಲ ಮನ್ನಾ ಆದೇಶ ಜಾರಿ

    ಬೆಂಗಳೂರು: ಅಧಿಕಾರ ಕಳೆದುಕೊಂಡ ಹೊತ್ತಲ್ಲೇ ಕುಮಾರಸ್ವಾಮಿ ಬಂಪರ್ ಗಿಫ್ಟ್ ಕೊಟ್ಟಿದ್ದು ಖಾಸಗಿ ವ್ಯಕ್ತಿಗಳಿಂದ ಪಡೆದ ಸಾಲವನ್ನು ಮನ್ನಾ ಮಾಡಿದ್ದಾರೆ. ಫೈನಾನ್ಸ್ ಸೇರಿದಂತೆ ಖಾಸಗಿ ವ್ಯಕ್ತಿಗಳಿಂದ ಪಡೆದಿದ್ದ ಸಾಲವನ್ನು ಮನ್ನಾ ಮಾಡುವ ಕರ್ನಾಟಕ ಋಣ ಪರಿಹಾರ ಕಾಯ್ದೆ ನಿನ್ನೆಯಿಂದಲೇ ಜಾರಿಯಾಗಿದೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭೂರಹಿತರು, ಕಾರ್ಮಿಕರು ಹಾಗೂ ಬಡವರ ಆದಾಯ 1.20 ಲಕ್ಷ ರೂ.ಗಳಿಗಿಂತ ಕಡಿಮೆ ಇದ್ದರೆ ಅವರಿಗೆ ಈ ಕಾಯ್ದೆ ಅನ್ವಯ ಆಗಲಿದೆ. ಅಲ್ಲದೇ ಈ ಬಗ್ಗೆ ಕಾಯ್ದೆಯ ಜಾರಿಗೆ ನಾನು ಕೊನೆಯ ಸಹಿ ಹಾಕಿದ್ದು, ಖಾಸಗಿ ಅವರ ಬಳಿ ಪಡೆದ ಮಾಹಿತಿಯನ್ನು ಪಡೆಯಲು ಸೂಚನೆ ನೀಡಿದ್ದೇನೆ. ಋಣ ಮುಕ್ತ ಕಾಯ್ದೆ ಅಡಿ ಅವರು ಋಣ ಮುಕ್ತರಾಗಲಿದ್ದಾರೆ. ಒಂದು ವರ್ಷಗಳ ಕಾಲ ಈ ಕಾಯ್ದೆಯ ಅವಧಿ ಇದ್ದು, 90 ದಿನಗಳ ಒಳಗೆ ನೋಡಲ್ ಅಧಿಕಾರಿಗೆ ಮಾಹಿತಿ ನೀಡಬೇಕು ಮನವಿ ಮಾಡಿದರು.

    ಒನ್ ಟೈಂ ಅವಧಿಯಲ್ಲಿ ಇದು ಜಾರಿ ಆಗಲಿದ್ದು, ಚಿನ್ನ, ಭೂಮಿ ಅಡವಿಟ್ಟ ಸಾಲಮನ್ನಾ ಆಗಲಿದೆ ಎಂದರು. ಇದಕ್ಕೆ ಪ್ರೇರಣೆ ನೀಡಿದ ಮಹಿಳೆಯ ಕಥೆಯನ್ನ ವಿವರಿಸಿದ ಕುಮಾರಸ್ವಾಮಿ ಅವರು, ಪತಿಯೊಬ್ಬರು ಸಾಲ ಮಾಡಿ ಮೃತಪಟ್ಟಿದ್ದರು. ಈ ಸಾಲದ ಹೊರೆ ಪತ್ನಿಯ ಮೇಲೆ ಬಿದ್ದಿತ್ತು. ಈ ಸಾಲವನ್ನು ತೀರಿಸಲು ಮಹಿಳೆಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಆ ಮಹಿಳೆ ರೈತರ ಸಾಲವನ್ನು ಮಾಡಿದಂತೆ ಈ ರೀತಿಯ ಸಾಲವನ್ನು ಮನ್ನಾ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿ ಮನವಿ ಮಾಡಿದರು. ಹೀಗಾಗಿ ನಾನು ಈ ಕಾಯ್ದೆಯನ್ನು ಜಾರಿಗೆ ತರಲಾಯಿತು ಎಂದು ವಿವರಿಸಿದರು.

    ನಿನ್ನೆಯವರೆಗೆ ಎಷ್ಟು ಸಾಲ ಮಾಡಿದ್ದಾರೆ ಎಷ್ಟು ವರ್ಷದ ಹಿಂದೆ ಮಾಡಿದ್ದರೂ ಕೂಡ ಇದು ಅನ್ವಯ ಆಗಲಿದೆ. 90 ದಿನಗಳ ಒಳಗೆ ಈ ಬಗ್ಗೆ ಮಾಹಿತಿ ನೀಡಿ, 5 ಎಕರೆ ಗಿಂತ ಭೂಮಿ ಕಡಿಮೆ ಇರುವವರಿಗೂ ಇದು ಅನ್ವಯ ಆಗಲಿದೆ. ಖಾಸಗಿ ಅವರಿಂದ ಪಡೆದ ಸಾಲವಷ್ಟೇ ಮನ್ನಾ ಆಗಲಿದೆ. ಆದರೆ ರಿಸರ್ವ್ ಬ್ಯಾಂಕ್ ನಿಂದ ಅನುಮತಿ ಪಡೆದು ವ್ಯವಹಾರ ಮಾಡುವವರಿಗೆ ಇದು ಅನ್ವಯ ಆಗುವುದಿಲ್ಲ. ಈ ಯೋಜನೆ ಬಗ್ಗೆ ಕೇಂದ್ರ ಸರ್ಕಾರವೂ ಮಾಹಿತಿ ಕೇಳಿತ್ತು. ಅಧಿಕಾರಿಗಳು ನಿರಂತರವಾಗಿ ಮಾಹಿತಿ ನೀಡಿ ಕೇಂದ್ರದ ಗೊಂದಲಗಳನ್ನು ನಿವಾರಣೆ ಮಾಡಿದ್ದಾರೆ. ಫೆಬ್ರವರಿಯಲ್ಲಿ ವಿಧಾನಸಭೆಯಲ್ಲಿ ಅಂಗೀಕಾರಗೊಂದಿದ್ದ ಮಸೂದೆಗೆ ರಾಷ್ಟ್ರಪತಿಗಳು ಜುಲೈ 16 ರಂದು ಅಂಕಿತ ಹಾಕಿದ್ದಾರೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಖಾಸಗಿಯವರಿಗೆ ಸರ್ಕಾರದಿಂದ ಹಣವನ್ನು ಪಾವತಿಸಲಾಗುತ್ತಾ ಎಂಬ ಪ್ರಶ್ನೆಗೆ, ಇಲ್ಲಿಯವರೆಗೆ ಖಾಸಗಿ ವ್ಯಕ್ತಿಗಳು ಬಡ್ಡಿ ಹಣವನ್ನು ತಿಂದದ್ದು ಸಾಕು. ಯಾವುದೇ ಹಣವನ್ನು ಮರು ಪಾವತಿ ಮಾಡುವುದಿಲ್ಲ ಎಂದು ಉತ್ತರಿಸಿದರು.

    ಕಳೆದ 14 ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಹಲವು ರಾಜಕೀಯ ಸಮಸ್ಯೆಗಳ ನಡುವೆ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲು ಸಹಕಾರ ನೀಡಿದ ಎಲ್ಲ ಅಧಿಕಾರಿ ವರ್ಗಕ್ಕೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.

    ರೈತರ ಸಾಲಮನ್ನಾ, ರೈತರ ಅಭಿವೃದ್ಧಿ, ಕೈಗಾರಿಕೆಗಳ ಅಭಿವೃದ್ಧಿಗೆ ಸಹಕಾರ ನೀಡಿದ ಅಧಿಕಾರಿಗಳಿಗೆ ಧನ್ಯವಾದ. ರಾಜಕೀಯ ಅಸ್ಥಿರತೆ ಉಂಟು ಮಾಡಲು ಕಳೆದ 14 ತಿಂಗಳು ನಡೆದ ಪ್ರಯತ್ನ ನಡುವೆ ರಾಜ್ಯದ ಆರ್ಥಿಕ ಸ್ಥಿತಿ ಕಾಪಾಡಲು ಅಸಹಕಾರ ನೀಡಿದ ಅಧಿಕಾರಿಗಳಿಗೆ ವಂದನೆ ತಿಳಿಸಿದ್ದೇನೆ ಎಂದರು.

    ಮುಂದಿನ ಅವಧಿಯಲ್ಲೂ ರಾಜಕೀಯ ಅಸ್ಥಿರತೆ ನಿರ್ಮಾಣವಾಗುವ ಸಂದರ್ಭಗಳು ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಸರ್ಕಾರ ಅಸ್ಥಿರವಾಗಿದ್ದರೂ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ನಿರ್ವಹಿಸಲು ಸಲಹೆ ನೀಡಿದ್ದೇನೆ. ಅಧಿಕಾರದಿಂದ ನಿರ್ಗಮಿಸುತ್ತಿರುವ ಸಂದರ್ಭದಲ್ಲಿ ಜನರಿಗೂ ಧನ್ಯವಾದ ತಿಳಿಸುತ್ತೇನೆ. 1976 ರಲ್ಲಿ ದೇವರಾಜ ಅರಸು ಅವರ ಕಾಲದಲ್ಲಿ ಇದ್ದ ಋಣ ಪರಿಹಾರ ಕಾಯ್ದೆ ಮುಂದುವರಿಸಲು ಪ್ರಯತ್ನ ಪಟ್ಟಿದ್ದೆ.