Tag: ಮಾಜಿ ಸಚಿವ ರಮೇಶ್ ಜಾರಕಿಹೊಳಿ

  • ರಮೇಶ್ ಜಾರಕಿಹೊಳಿ ಬಂಡಾಯ – ಪಕ್ಷಕ್ಕೆ ಯಾರನ್ನು ಆಹ್ವಾನಿಸಿಲ್ಲ: ಬಿಎಸ್‍ವೈ ಸ್ಪಷ್ಟನೆ

    ರಮೇಶ್ ಜಾರಕಿಹೊಳಿ ಬಂಡಾಯ – ಪಕ್ಷಕ್ಕೆ ಯಾರನ್ನು ಆಹ್ವಾನಿಸಿಲ್ಲ: ಬಿಎಸ್‍ವೈ ಸ್ಪಷ್ಟನೆ

    ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅಧಿಕ ಸ್ಥಾನದಲ್ಲಿ ಗೆಲುವು ಪಡೆಯಲಿದ್ದು, ಈ ಬಾರಿ 22 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರಿಗೆ ಪಕ್ಷಕ್ಕೆ ಆಹ್ವಾನ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿ, ನಾವು ಯಾರನ್ನೂ ಆಮಂತ್ರಣ ಮಾಡಿಲ್ಲ. ಈ ರೀತಿಯ ಗೊಂದಲದಲ್ಲಿ ನಾವು ಯಾವುದೇ ಕಾರಣಕ್ಕೂ ಕೈ ಹಾಕಿಲ್ಲ. ಸದ್ಯ ನಮ್ಮ ಗಮನ ಏನಿದ್ದರೂ ಎರಡು ಉಪಚುನಾವಣೆ ಕ್ಷೇತ್ರಗಳಲ್ಲಿ ಗೆಲುವು ಪಡೆಯುವತ್ತ ಇದೆ. ಉಪ ಚುನಾವಣೆಯ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆ ಸೇರಿ, ಅಭ್ಯರ್ಥಿ ಆಯ್ಕೆ ಮಾಡುವ ಹಾಗೂ ಗೆಲುವಿಗೆ ಶ್ರಮ ವಹಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

    ಇದೇ ವೇಳೆ ಮೇ 23ರ ಬಳಿಕ ಬದಲಾವಣೆಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ನಾವು 22 ಸ್ಥಾನ ಗೆದ್ದ ಮೇಲೆ ಏನೇನು ಪರಿಣಾಮಗಳು ಆಗುತ್ತೇವೆ ಎಂಬುವುದನ್ನು ಕಾದು ನೋಡಿ. ಇಂದು ಶಿವಮೊಗ್ಗ ಲೋಕಸಭಾ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದ ಮುಖಂಡರ ಸಭೆ ನಡೆಸಿದ್ದು, ಕನಿಷ್ಠ ಒಂದೂವರೆ ಲಕ್ಷ ಅಂತರದಲ್ಲಿ ರಾಘವೇಂದ್ರ ಅವರು ಗೆದ್ದು ಸಂಸತ್ ಪ್ರವೇಶ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಹಣ ಹಂಚಿ ಚುನಾವಣೆ ಗೆಲ್ಲಬಹುದು ಎನ್ನುವವರಿಗೆ ಶಿವಮೊಗ್ಗ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ರೇವಣ್ಣ, ದೇವೇಗೌಡ, ಕುಮಾರಸ್ವಾಮಿ ಹಾಗೂ ಡಿಕೆಶಿವಕುಮಾರ್ ಎಲ್ಲರೂ ಬಂದರು. ಅಪ್ಪಾಜಿಗೌಡರಿಗೆ ಸೇರಿದ ಹಣ ಕೂಡ ಸಿಕ್ತು. ಆದರೆ ರಾಘವೇಂದ್ರ ಅವರ ಗೆಲುವು ನಿಶ್ಚಿತ. ರಾಜ್ಯದಲ್ಲಿ ಬಿಜೆಪಿ ಕಲಬುರಗಿ, ಕೋಲಾರ, ಮಂಡ್ಯ ಕ್ಷೇತ್ರದಲ್ಲೂ ಗೆಲುವು ಪಡೆಯಲಿದೆ. ಬಹುತೇಕ ಕಾಂಗ್ರೆಸ್ ನಾಯಕರು ಮನೆಗೆ ಹೋಗುತ್ತಾರೆ ಎಂದು ತಿಳಿಸಿದರು.

  • ಒಂದೇ ಒಂದು ‘ವಸ್ತು’ವಿಗಾಗಿ ‘ಸಾಹುಕಾರ’ನ ಸಿಟ್ಟು – ಸಹೋದರನ ರಹಸ್ಯ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ

    ಒಂದೇ ಒಂದು ‘ವಸ್ತು’ವಿಗಾಗಿ ‘ಸಾಹುಕಾರ’ನ ಸಿಟ್ಟು – ಸಹೋದರನ ರಹಸ್ಯ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ

    ಬೆಂಗಳೂರು: ಲೋಕಸಭಾ ಚುನಾವಣೆ ಮತದಾನ ಮುಕ್ತಾಯವಾಗುತ್ತಿದಂತೆ ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿದೆ. ಇತ್ತ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದು, ಪಕ್ಷದ ವಿರುದ್ಧ ಅವರು ಸಿಟ್ಟು ಮಾಡಿಕೊಳ್ಳಲು ಕಾರಣ ಏನು ಎನ್ನುವುದನ್ನು ಸಚಿವ ಸತೀಶ್ ಜಾರಕಿಹೊಳಿ ಬಿಚ್ಚಿಟ್ಟಿದ್ದಾರೆ.

    ರಮೇಶ್ ಜಾರಕಿಹೊಳಿ ಅವರು ಆ ಒಂದೇ ಒಂದು ವಸ್ತುಗಾಗಿ ಸಿಟ್ಟಾಗಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಸಹೋದರರನ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಇದ್ದು ಬಿಜೆಪಿ ಬೆಂಬಲ ನೀಡುತ್ತಾರೆ. ಈ ಬಗ್ಗೆ ಅವರಿಗೆ ಪ್ರಶ್ನೆ ಮಾಡಿ. ಬೇರೆ ಅವರ ವಿರುದ್ಧ ಆರೋಪ ಮಾಡುವ ಮುನ್ನ ಅವರು ಸ್ಪಷ್ಟವಾಗಿ ಇದ್ದರಾ ಎಂಬುವುದನ್ನು ತಿಳಿದುಕೊಳ್ಳಬೇಕು. ಎಂಎಲ್‍ಎ ಎಂಬ ಒಂದು ಅಂಶವನ್ನು ಬಿಟ್ಟರೇ ಅವರಿಗೆ ಬೇರೆ ಯಾವುದೇ ಅರ್ಹತೆ ಇಲ್ಲ. ಇದು ರಾಜ್ಯದ ಎಲ್ಲಾ ಜನರಿಗೂ ಗೊತ್ತು. ಪಕ್ಷಕ್ಕೆ ರಾಜೀನಾಮೆ ನೀಡಿ ಮರು ಆಯ್ಕೆ ಆಗಿ ಬರಲಿ. ಅವರ ಅರ್ಹತೆ ತಿಳಿಯುತ್ತದೆ ಎಂದು ಸವಾಲು ಎಸೆದರು.

    ಇದೇ ವೇಳೆ ರಮೇಶ್ ಅವರು ತಮ್ಮ ಜೀವನದಲ್ಲಿ ಮಾಡಿಕೊಂಡಿದ್ದ ಒಂದು ವಸ್ತುವನ್ನು ಕಳೆದುಕೊಂಡಿದ್ದು, ಅದಕ್ಕಾಗಿಯೇ ಈ ರೀತಿ ಆಡುತ್ತಿದ್ದಾರೆ ಎಂದು ನುಕ್ಕು ಸುಮ್ಮನಾದರು. ಆ ವಸ್ತುವನ್ನು ಕಳೆದುಕೊಂಡ ಬಗ್ಗೆ ಅವರಿಗೆ ಪ್ರಶ್ನೆ ಮಾಡಿ. ಆ ಬಗ್ಗೆ ನಾನು ಹೇಳಲು ಆಗಲ್ಲ. ಅವನೇ ಏನೋ ತಿಳಿದುಕೊಂಡು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾನೆ. ನೀವೇ ಈ ಬಗ್ಗೆ ಪ್ರಶ್ನೆ ಮಾಡಿ ಎಂದರು.

    ಇತ್ತ ರಾಜೀನಾಮೆ ಅಂತಿಮ ತೀರ್ಮಾನ ಕೈಗೊಳ್ಳುವ ಉದ್ದೇಶದಿಂದ ಬೆಂಗಳೂರಿಗೆ ಆಗಮಿಸಿರುವ ರಮೇಶ್ ಜಾರಕಿಹೊಳಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಸತೀಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದರು. ಆ ವಸ್ತು ಅಂದರೆ ‘ಮಂತ್ರಿ ಸ್ಥಾನ’ ಎನ್ನಬಹುದು ಅದಕ್ಕಾಗಿಯೇ ಈ ಬಗ್ಗೆ ಮಾತನಾಡಿದ್ದಾರೆ. ಆದರೆ ನಾನು ಸ್ವತಃ ಸಚಿವ ಸ್ಥಾನ ಬಿಟ್ಟುಕೊಟ್ಟಿದ್ದೇನೆ. ಸಚಿವ ಸ್ಥಾನ ಬೇಕು ಎಂದಿದ್ದರೆ ದೆಹಲಿಗೆ ಹೋಗಿ ತರುತ್ತೇನೆ. ನಾನು ಯಾವತ್ತು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ. ಅವನೇ ನನ್ನ ಮನೆಗೆ 2 ಬಾರಿ ಭೇಟಿ ನೀಡಿದ್ದನ್ನು ನೀವು ನೋಡಿದ್ದೀರಿ ಎಂದು ತಿರುಗೇಟು ನೀಡಿದರು.

    ಸತೀಶ್ ಅವರ ವಸ್ತು ಹೇಳಿಕೆ ಸದ್ಯ ಇಬ್ಬರ ನಡುವೆ ವಾಕ್ ಸಮರಕ್ಕೆ ಕಾರಣವಾಗಿದ್ದು, ಸತೀಶ್ ಅವರ ನಗುವಿನ ಹಿಂದೆ ಇರುವ ‘ವಸ್ತು’ ಏನು ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇತ್ತ ಪಕ್ಷಕ್ಕೆ ರಾಜೀನಾಮೆ ನೀಡಿಯೇ ಸಿದ್ಧ ಎನ್ನುತ್ತಿರುವ ರಮೇಶ್ ಜಾರಕಿಹೊಳಿ ಅವರು ಇನ್ನೇರಡು ದಿನಗಳಲ್ಲಿ ನಿಮಗೇ ಸಿಹಿ ಸುದ್ದಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.

  • ಕಾಂಗ್ರೆಸ್ಸಿನಲ್ಲಿ ಅಸಮಾಧಾನ ಇರೋದು ನಿಜ – ಮೇ 23 ಬಳಿಕ ಎಲ್ಲವೂ ಗೊತ್ತಾಗಲಿದೆ: ಬಿಎಸ್‍ವೈ

    ಕಾಂಗ್ರೆಸ್ಸಿನಲ್ಲಿ ಅಸಮಾಧಾನ ಇರೋದು ನಿಜ – ಮೇ 23 ಬಳಿಕ ಎಲ್ಲವೂ ಗೊತ್ತಾಗಲಿದೆ: ಬಿಎಸ್‍ವೈ

    ಶಿವಮೊಗ್ಗ: ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ರಾಜೀನಾಮೆ ನೀಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನಿರಾಕರಿಸಿದ್ದಾರೆ.

    ಶಿಕಾರಿಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಹೇಳಿಕೆಯನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ನಾನು ಆ ಬಗ್ಗೆ ಪ್ರತಿಕ್ರಿಯೆ ಕೊಡಲ್ಲ. ಮೇ 23ಕ್ಕೆ ನಿಮಗೆ ಎಲ್ಲ ಗೊತ್ತಾಗುತ್ತೆ ಎಂದರು.

    ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ಶಾಸಕರು ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನದಿಂದ ಇದ್ದಾರೆ. ಆದರೆ ನಾವು ಸರ್ಕಾರವನ್ನು ಉರುಳಿಸುತ್ತೇವೆ ಎನ್ನುವುದು ಅವರ ಆರೋಪ ಅಷ್ಟೇ. ಮೇ 23 ರಂದು ಬಿಜೆಪಿ ಗೆಲುವಿನ ನಗೆ ಬೀರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸರ್ಕಾರದಲ್ಲಿ ಶಾಸಕರ ಅಸಮಾಧಾನ ಹೊಂದಿರುವುದು ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ತಿಳಿದಿದೆ. ಆದ್ದರಿಂದ ಅವರು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ. ಅದನ್ನು ಬಿಟ್ಟು ನಮ್ಮ ಮೇಲೆ ಆರೋಪ ಮಾಡಿದರೆ ಹೇಗೆ? ಕಾಂಗ್ರೆಸ್ ಶಾಸಕರಿಗೆ ಅಸಮಾಧಾನ ಇರೋದು ನಿಜ ಆಗಿರುವುದಿಂದ ಯಾರಿಗೆ ಅಸಮಾಧಾನ ಇದೆಯೋ ಅವರು ಹೊರಗೆ ಬರುತ್ತಾರೆ. ಈ ಬಾರಿಯ ಚುನಾವಣೆಯಲ್ಲಿ ಹಲವು ಕಾಂಗ್ರೆಸ್ ಶಾಸಕರು ಪಕ್ಷದ ಪರ ಕಾರ್ಯನಿರ್ವಹಿಸದೆ ಸುಮ್ಮನಿದ್ದಾರೆ ಎಂದರು.

    ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 22 ಸ್ಥಾನ ಗಳಿಸುವುದು ಖಚಿತ. ಆ ವೇಳೆ ಕಾಂಗ್ರೆಸ್, ಜೆಡಿಎಸ್ ಎರಡು ಪಕ್ಷದಲ್ಲಿ ಅಂತರಿಕ ಕಚ್ಚಾಟ ಹೆಚ್ಚಾಗುತ್ತದೆ. ಸರ್ಕಾರ ತನಗೆ ತಾನೇ ಉರುಳುವ ಎಲ್ಲಾ ಲಕ್ಷಣಗಳು ಇವೆ ಎಂದರು.

    ರಮೇಶ್ ಜಾರಕಿಹೊಳಿ ಹೇಳಿದ್ದೇನು?
    ಬೆಳಗಾವಿಯಲ್ಲಿ ಮತದಾನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, ನಾನು ರಾಜೀನಾಮೆ ನೀಡುವುದು ಖಚಿತ. ತಾಂತ್ರಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ. ನನಗೆ ಜವಾಬ್ದಾರಿ ಗೊತ್ತಿದೆ. ಕತ್ತಲಲ್ಲಿ ಕುಳಿತು ಕಲ್ಲು ಎಸೆಯುವ ವ್ಯಕ್ತಿ ನಾನಲ್ಲ. ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ದೇಶಕ್ಕೆ ಒಳ್ಳೆಯದಾಗಲಿ ಎಂದು ಮತದಾನ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ನೋಡೋಣ ಎಂದರು.

  • ಜಾರಕಿಹೊಳಿ ಯೂ ಟರ್ನ್ – ಬೆಳಗಾವಿ ಸಾಹುಕಾರನ ಬೇಡಿಕೆಯನ್ನು ಒಪ್ಪಿದ ಹೈಕಮಾಂಡ್

    ಜಾರಕಿಹೊಳಿ ಯೂ ಟರ್ನ್ – ಬೆಳಗಾವಿ ಸಾಹುಕಾರನ ಬೇಡಿಕೆಯನ್ನು ಒಪ್ಪಿದ ಹೈಕಮಾಂಡ್

    ಬೆಂಗಳೂರು: ಬೆಳಗಾವಿಯಲ್ಲಿ ಕಾಂಗ್ರೆಸ್ ವಿರುದ್ಧವೇ ಬಂಡಾಯ ಹಾರಿಸಿ ಆಪರೇಷನ್ ಕಮಲಕ್ಕೆ ಮೂಲ ವ್ಯಕ್ತಿ ಎಂದು ಹೇಳಲಾಗುತ್ತಿದ್ದ ಕುಂದಾ ನಗರಿಯ ಸಾಹುಕಾರ ರಮೇಶ್ ಜಾರಕಿಹೊಳಿ ಈಗ ಯೂ ಟರ್ನ್ ಹೊಡೆದಿದ್ದಾರೆ. ಈ ಮೂಲಕ ಸಂಕ್ರಾಂತಿಯ ಬಳಿಕ ಬಿಜೆಪಿ ಪಥದಲ್ಲಿ ಸಾಗಲು ಮುಂದಾಗಿದ್ದ ಜಾರಕಿಹೊಳಿ ಮತ್ತೆ ಕಾಂಗ್ರೆಸ್ ಪಥದಲ್ಲೇ ಮುಂದುವರಿಯುವ ಸುಳಿವು ಸಿಕ್ಕಿದೆ.

    ಹೌದು, ದೋಸ್ತಿ ಪಕ್ಷವಾದ ಕಾಂಗ್ರೆಸ್ ಪಾಳೆಯದಲ್ಲಿ ಬಂಡಾಯ ಬಾವುಟ ಹಾರಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಬೇಡಿಕೆಗಳಿಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ. ಅಷ್ಟೇ ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿಯಿಂದ ಟಿಕೆಟ್ ನೀಡಲು ಕಾಂಗ್ರೆಸ್ ಮುಂದಾಗುತ್ತಿದ್ದಂತೆ ಜಾರಕಿಹೊಳಿ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಕಾಂಗ್ರೆಸ್ಸಿನಿಂದ ಬೇಡಿಕೆ ಈಡೇರುತ್ತಿದ್ದಂತೆ ಮುಂಬೈ ಹೋಟೆಲ್ ನಲ್ಲಿದ್ದ ರಮೇಶ್ ಜಾರಕಿಹೊಳಿ ಅವರು ಶೀಘ್ರವೇ ಬೆಂಗಳೂರಿಗೆ ಮರಳಲಿದ್ದಾರೆ.

    ಮೈತ್ರಿ ಸರ್ಕಾರದ ಸಂಪುಟ ರಚನೆ ವೇಳೆ ಸಚಿವ ಸ್ಥಾನದಿಂದ ಕೈಬಿಟ್ಟ ಬಳಿಕ ಕಾಂಗ್ರೆಸ್ ಪಕ್ಷದ ಮುಖಂಡರ ಸಂಪರ್ಕಕ್ಕೆ ಸಿಗದೇ ತೆರಳಿದ್ದ ರಮೇಶ್ ಜಾರಕಿಹೊಳಿ ಅವರು ಕೆಲ ಅಸಮಾಧಾನಿತ ಶಾಸಕರೊಂದಿಗೆ ಮುಂಬೈಗೆ ತೆರಳಿದ್ದರು. ಅಲ್ಲದೇ ಕೆಲ ಶಾಸಕರು ಕೂಡ ಅವರೊಂದಿಗೆ ತೆರಳಿ ಬೆಂಬಲ ನೀಡಿದ್ದರು ಎಂಬ ಸುದ್ದಿಯೂ ಲಭಿಸಿತ್ತು.

    ಸದ್ಯ ಕಾಂಗ್ರೆಸ್ ಪಕ್ಷದ ನಾಯಕರು ರಮೇಶ್ ಜಾರಕಿಹೊಳಿ ಅವರ ಮನವೊಲಿಕೆ ಮಾಡಲು ಯಶಸ್ವಿಯಾಗಿದ್ದು, ರಮೇಶ್ ಅವರು ಬಿಜೆಪಿಗೆ ತೆರಳಿದರೆ ರಾಜಕೀಯ ಭವಿಷ್ಯ ಅಂತ್ಯವಾಗುತ್ತೆ ಎಂದು ತಿಳಿಸಿ ಮನವೊಲಿಕೆಗೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ನಿರೀಕ್ಷೆ ಮಟ್ಟದಲ್ಲಿ ಬಿಜೆಪಿಯಿಂದ ಬೆಂಬಲ ಲಭಿಸದ ಕಾರಣದಿಂದಾಗಿ ರಮೇಶ್ ಜಾರಕಿಹೊಳಿ ಅವರು ಯೂ ಟರ್ನ್ ಹೊಡೆದಿದ್ದಾರೆ ಎನ್ನಲಾಗಿದೆ.

    ರಮೇಶ್ ಜಾರಕಿಹೊಳಿ ಅವರು ತಮ್ಮೊಂದಿಗೆ 9 ಶಾಸಕರನ್ನು ಕರೆದುಕೊಂಡು ಬರುವುದಾಗಿ ಖಚಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಆಪರೇಷನ್ ಕಮಲಕ್ಕೆ ಕೈ ಹಾಕಿತ್ತು. ಇದರೊಂದಿಗೆ ರಮೇಶ್ ಜಾರಕಿಹೊಳಿ ಅವರಿಗೆ ಬೆಂಬಲ ನೀಡಿದ್ದ ಶಾಸಕರು ಕೂಡ ವಾಪಸ್ ಬರುವ ಸಾಧ್ಯತೆ ಇದೆ. ಆಪರೇಷನ್ ಕಮಲ ವಿಫಲವಾದ ಹಿನ್ನೆಲೆಯಲ್ಲಿ ಬಿಜೆಪಿಯ ಮುಂದಿನ ನಡೆ ಏನು ಎನ್ನುವ ಕುತೂಹಲ ಮೂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಡರಾತ್ರಿ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಪ್ರತ್ಯಕ್ಷ – ಬೆಳಗ್ಗೆ 8 ಗಂಟೆಗೆ ಮತ್ತೆ ಅಜ್ಞಾತವಾಸ

    ತಡರಾತ್ರಿ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಪ್ರತ್ಯಕ್ಷ – ಬೆಳಗ್ಗೆ 8 ಗಂಟೆಗೆ ಮತ್ತೆ ಅಜ್ಞಾತವಾಸ

    – ರಮೇಶ್ ರಾಜೀನಾಮೆ ಕೊಟ್ರೆ ನಾವೇನು ಮಾಡೋಕಾಗುತ್ತೆ: ಸಚಿವ ಸತೀಶ್ ಜಾರಕಿಹೊಳಿ

    ಬೆಳಗಾವಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ಪಕ್ಷದ ಮುಖಂಡರು ವಿರುದ್ಧ ಅಸಮಾಧಾನಗೊಂಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಡರಾತ್ರಿ ತಮ್ಮ ಗೋಕಾಕ್ ನಿವಾಸದಲ್ಲಿ ಪ್ರತ್ಯಕ್ಷರಾಗಿದ್ದಾರೆ.

    ತಡರಾತ್ರಿ ಮನೆಗೆ ಆಗಮಿಸಿದ್ದ ರಮೇಶ್ ಜಾರಕಿಹೊಳಿ ಅವರು ಬೆಳಗ್ಗೆ 8 ಗಂಟೆ ಬಳಿಕ ಮತ್ತೆ ಮನೆಯಿಂದ ಹೊರ ನಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ವೇಳೆ ಬೆಳಗಾವಿಗೆ ತೆರಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿತ್ತು.

    ಕಳೆದ 8 ದಿನಗಳಿಂದ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಫೋನ್ ಸ್ವಿಚ್ ಆಫ್ ಮಾಡಿದ್ದ ರಮೇಶ್ ಜಾರಕಿಹೊಳಿ ಅವರು, 8 ದಿನಗಳ ಬಳಿಕ ಮನೆಗೆ ಆಗಮಿಸಿದ್ದರು. ಬೆಳಗಾವಿಯ ಗೋಕಾಕ್ ನ ನಿವಾಸಕ್ಕೆ ಬಂದಿದ್ದ ಅವರು ಬೆಳಗಾವಿಗೂ ಬಾರದೇ ಮತ್ತೆ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.

    ಇತ್ತ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿರುವ ಸಹೋದರ, ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರು, ಅವರು ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲವೇ ಇಲ್ಲ. ನಮ್ಮ ಪಕ್ಷದಲ್ಲೇ ರಮೇಶ್ ಮುಂದುವರಿಯುತ್ತಾರೆ, ನಮಗೆ ಅವರು ಸಿಕ್ಕಿಲ್ಲ. ರಮೇಶ್ ಅವರು ಇಂದು ಸಿಗುತ್ತಾರೆ ಅವರೊಂದಿಗೆ ಮಾತನಾಡುತ್ತೇನೆ. ಪಕ್ಷದ ಹೈಕಮಾಂಡ್ ಕೂಡ ರಮೇಶ್ ಜಾರಕಿಹೊಳಿ ಅವರನ್ನ ಸಂಪರ್ಕ ಮಾಡಲು ಪ್ರಯತ್ನಿಸುತ್ತಿದೆ ಎಂದು ಸ್ಪಷ್ಟನೆ ನೀಡಿದರು.

    ನಾವೇನು ಮಾಡೋಕೆ ಬರುತ್ತೆ:
    ಇದೇ ವೇಳೆ ಗೋಕಾಕ್ ನಗರಸಭೆ ಸದಸ್ಯರು ರಾಜೀನಾಮೆ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಸದಸ್ಯರು ಕೂಡ ರಾಜೀನಾಮೆ ಕೊಡುವ ಪರಿಸ್ಥಿತಿ ಇನ್ನೂ ಬಂದಿಲ್ಲ. ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಅವಶ್ಯಕತೆ ಇದೆ. ಒಂದು ವೇಳೆ ಅವರು ರಾಜೀನಾಮೆ ಕೊಟ್ಟರೆ ನಾವೇನು ಮಾಡೋಕೆ ಬರುತ್ತೆ. ಅವರು ನಮ್ಮ ಪಕ್ಷದ ಪರವಾಗಿ ಇದ್ದಾರೆ. ರಮೇಶ್ ರಾಜೀನಾಮೆ ಕೊಟ್ಟರೆ ಅದಕ್ಕೂ ನಮಗೂ ಸಂಬಂಧವಿಲ್ಲ. ನಾವು ಪಕ್ಷದಲ್ಲೇ ಮುಂದುವರಿಯುತ್ತೇವೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಮೇಶ್ ಜಾರಕಿಹೊಳಿ ಪ್ರಾಮಾಣಿಕ ವ್ಯಕ್ತಿ, ಎಲ್ಲೂ ಹೋಗಲ್ಲ- ಸಿದ್ದರಾಮಯ್ಯ

    ರಮೇಶ್ ಜಾರಕಿಹೊಳಿ ಪ್ರಾಮಾಣಿಕ ವ್ಯಕ್ತಿ, ಎಲ್ಲೂ ಹೋಗಲ್ಲ- ಸಿದ್ದರಾಮಯ್ಯ

    ಬಾಗಲಕೋಟೆ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಾಮಾಣಿಕ ವ್ಯಕ್ತಿ. ಅವರು ಪಕ್ಷ ಬಿಟ್ಟು ಹೋಗಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಬದಾಮಿಯಲ್ಲಿ ಮಾತನಾಡಿದ ಮಾಜಿ ಸಿಎಂ, ರಮೇಶ್ ಜಾರಕಿಹೊಳಿ ಅವರು ಎಲ್ಲೂ ಹೋಗಲ್ಲ. ಕಾಂಗ್ರೆಸ್‍ನಲ್ಲಿಯೇ ಇರುತ್ತಾರೆ. ದೆಹಲಿ ಪ್ರವಾಸ ಸುಳ್ಳು ಮಾಹಿತಿಯಾಗಿದ್ದು, ಅವರು ಬೆಳಗಾವಿಯಲ್ಲೇ ಇದ್ದಾರೆ. ಆದರೆ ಫೋನ್‍ಗೆ ಸಿಗುತ್ತಿಲ್ಲ ಅಷ್ಟೇ. ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಅವರ ಜೊತೆಗೆ ನಾನು ಮಾತಾಡಿದ್ದೇನೆ. ಸಚಿವ ಸ್ಥಾನ ಕಳೆದುಕೊಂಡಿದ್ದಕ್ಕೆ ಅವರಿಗೆ ಸ್ವಲ್ಪ ಅಸಮಾಧಾನ ಇದೆ. ಎಲ್ಲವೂ ಸರಿ ಹೋಗುತ್ತದೆ ಎಂದು ತಿಳಿಸಿದರು. ಇದನ್ನು ಓದಿ: ಇರೋ ಒಬ್ಬ ಮಗನ ಮೇಲಾಣೆ ಸಾಲಮನ್ನಾ ಮಾಡ್ತೀನಿ: ಸಿಎಂ

    ರಮೇಶ್ ಜಾರಕಿಹೊಳಿ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಆಗುತ್ತಿದ್ದಾರೆ ಎನ್ನುವುದು ಸುಳ್ಳು. ಬಿಜೆಪಿಯವರು ಸುಳ್ಳು ಹೇಳುತ್ತಾರೆ. ಅದಕ್ಕೆಲ್ಲಾ ಪ್ರತಿಕ್ರಿಯೆ ಕೊಡಲ್ಲ ಎಂದು ಸಿದ್ದರಾಮಯ್ಯ ಗುಡುಗಿದರು.

    ವಿವಿಧ ಕಾರ್ಯಕ್ರಮ ಉದ್ಘಾಟನೆ ಹಾಗೂ ಮಹಾಕೂಟದಲ್ಲಿ ಆಯೋಜಿಸಿದ್ದ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಭಾಗವಹಿಸಲು ಇಂದು ಬದಾಮಿಗೆ ಆಗಮಿಸಿದ್ದರು. ಈ ವೇಳೆ ಬದಾಮಿ ಗೃಹ ಕಚೇರಿಯಲ್ಲಿ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿ ಮನವಿ ಸ್ವೀಕರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿವ ಸ್ಥಾನವೇ ಹೋಯ್ತು, ಇನ್ನು ಶಾಸಕ ಸ್ಥಾನ ಯಾಕ್ರೀ ಬೇಕು – ಆಪ್ತರ ಬಳಿ ರಮೇಶ್ ಜಾರಕಿಹೊಳಿ ಮಾತು

    ಸಚಿವ ಸ್ಥಾನವೇ ಹೋಯ್ತು, ಇನ್ನು ಶಾಸಕ ಸ್ಥಾನ ಯಾಕ್ರೀ ಬೇಕು – ಆಪ್ತರ ಬಳಿ ರಮೇಶ್ ಜಾರಕಿಹೊಳಿ ಮಾತು

    – ಸಂಪುಟ ವಿಸ್ತರಣೆ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರಕ್ಕೆ ಬಿಗ್ ಶಾಕ್
    – ಈ ವಾರ ಎಲ್ಲವೂ ನಿರ್ಧಾರ

    ಬೆಳಗಾವಿ: ಸಮ್ಮಿಶ್ರ ಸರ್ಕಾರದ 2ನೇ ಹಂತದ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಲು ಅತೃಪ್ತರು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಇದರ ಭಾಗವಾಗಿ ಮಾಜಿ ಪೌರಾಡಳಿತ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

    ಸಚಿವ ಸ್ಥಾನದಿಂದ ಕೈಬಿಟ್ಟ ವಿಚಾರವಾಗಿ ಆಪ್ತವಲಯದಲ್ಲಿ ಅಸಮಾಧಾನ ಹೊರ ಹಾಕಿರುವ ರಮೇಶ್ ಜಾರಕಿಹೊಳಿ, ಸಚಿವ ಸ್ಥಾನವೇ ಹೋಯ್ತು, ಇನ್ನು ಶಾಸಕ ಸ್ಥಾನ ಯಾಕೆ ಬೇಕು? ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಾನು ಏನು ಎನ್ನುವುದನ್ನು ತೋರಿಸಿಕೊಡುತ್ತೇನೆ. ನನ್ನೊಂದಿಗೆ ಎಷ್ಟು ಮಂದಿ ಶಾಸಕರಿದ್ದಾರೆ ಅನ್ನೊಂದನ್ನು ಈಗ ಹೇಳಲ್ಲ. ಒಂದು ವಾರ ಕಾದು ನೋಡಿ, ಎರಡು ಮೂರು ದಿನಗಳಲ್ಲಿ ರಾಜೀನಾಮೆ ನೀಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ. ಆದರೆ ನಾನು ಬೇಕಾದರೆ ನಾಳೆಯೇ ರಾಜೀನಾಮೆ ನೀಡಬಹುದು ಎಂದು ತಿಳಿಸಿದ್ದಾರೆ.

    ಈ ಕುರಿತು ಶಾಸಕ ರಮೇಶ್ ಜಾರಕಿಹೊಳಿ ಅವರು ಮಾತನಾಡಿರುವ ಆಡಿಯೋ ಧ್ವನಿ ಪಬ್ಲಿಕ್ ಟಿವಿಗೆ ಲಭ್ಯವಿದ್ದು, ರಾಜೀನಾಮೆ ನಿರ್ಧಾರ ಮಾಡಿರುವುದು ನಿಜ, ಆದರೆ ಎಷ್ಟು ಶಾಸಕರು ರಾಜೀನಾಮೆ ನೀಡಿಲಿದ್ದಾರೆ ಎಂಬುದು ಹೇಳಲು ಸಾಧ್ಯವಿಲ್ಲ. ಈ ಕುರಿತು ಕುಳಿತು ಚರ್ಚೆ ನಡೆಸಲು ಸ್ಥಳ ನಿಗದಿ ಮಾಡಲಾಗಿದ್ದು, ಈ ವಾರ ಎಲ್ಲವೂ ನಿರ್ಧಾರ ಆಗಲಿದೆ ಎಂದು ಹೇಳಿದ್ದಾರೆ. ಇದನ್ನು ಓದಿ: ಸಚಿವ ರಮೇಶ್ ಜಾರಕಿಹೊಳಿ ಶಕ್ತಿ ಪ್ರದರ್ಶನ  

    ಇದರೊಂದಿಗೆ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ನೀಡುವುದು ಖಚಿತವಾಗಿದ್ದು, ಯಾವ ಸಮಯದಲ್ಲಿ ಎಷ್ಟು ಮಂದಿಗೆ ರಾಜೀನಾಮೆ ನೀಡಲಿದ್ದಾರೆ ಎನ್ನುವುದನ್ನು ಮಾತ್ರ ತಿಳಿಯಬೇಕಿದೆ. ಕಾಂಗ್ರೆಸ್ಸಿನ 5 ಜನ ಪರಿಷತ್ ಸದಸ್ಯರು ಹಾಗೂ 5 ರಿಂದ 6 ಜಿಲ್ಲೆಗಳ ಶಾಸಕರು ರಮೇಶ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

    ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಜಾರಕಿಹೊಳಿ ಆಪ್ತ ಕಾಂಗ್ರೆಸ್ ಎಂಎಲ್‍ಸಿ ವಿವೇಕ್ ರಾವ್ ಪಾಟೀಲ್ ಸೇರಿದಂತೆ, ಹಲವು ಮುಖಂಡರು ರಮೇಶ್ ಅವರು ಯಾವುದೇ ನಿರ್ಧಾರ ಕೈಗೊಂಡರೂ ನಮ್ಮ ಬೆಂಬಲವಿರುತ್ತದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಸದ್ಯ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ನಿರ್ಧಾರ ರಾಜ್ಯ ರಾಜಕೀಯ ವಲಯದಲ್ಲಿ ಏನು ಪರಿಣಾಮ ಉಂಟು ಮಾಡಲಿದೆ ಎನ್ನುವುದು ಈ ವಾರ ಗೊತ್ತಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶರಬತ್ತು ಕುಡಿಸಿದ್ರೆ ಲೀಡರ್ ಆಗಲ್ಲ, ರಮೇಶ್, ಹೆಬ್ಬಾಳ್ಕರ್, ಡಿಕೆಶಿ ಒಂದೇ ಪರಿವಾರ – ಸತೀಶ್ ಜಾರಕಿಹೊಳಿ ಟಾಂಗ್

    ಶರಬತ್ತು ಕುಡಿಸಿದ್ರೆ ಲೀಡರ್ ಆಗಲ್ಲ, ರಮೇಶ್, ಹೆಬ್ಬಾಳ್ಕರ್, ಡಿಕೆಶಿ ಒಂದೇ ಪರಿವಾರ – ಸತೀಶ್ ಜಾರಕಿಹೊಳಿ ಟಾಂಗ್

    ಬೆಳಗಾವಿ: ಸಚಿವ ರಮೇಶ್ ಜಾರಕಿಹೊಳಿ, ಡಿಕೆ ಶಿವಕುಮಾರ್, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒಂದೇ ಪರಿವಾರದವರಾಗಿದ್ದು, ಕಳೆದ ಇಪ್ಪತ್ತು ವರ್ಷಗಳಿಂದ ಜೊತೆಯಾಗಿ ಇದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹಾಗೂ ಪೌರಾಡಳಿತ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ರಮೇಶ್ ಜಾರಕಿಹೊಳಿ ಅವರ ನಡುವೆ ಯಾವ ವಿಚಾರಕ್ಕೆ ಅಸಮಾಧಾನ ವ್ಯಕ್ತವಾಗಿದೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಬೆಳಗಾವಿಯಲ್ಲಿ ಪಕ್ಷದ ಪರ ಡಿಕೆ ಶಿವಕುಮಾರ್ ಅವರು ಆಗಮಿಸಿ ರೈತರ ಹೋರಾಟಕ್ಕೆ ಭರವಸೆ ನೀಡಿ ಹೋರಾಟವನ್ನು ಹಿಂಪಡೆಯುವಂತೆ ಮಾಡಿದ್ದಾರೆ ಅಷ್ಟೇ. ಕೇವಲ ಶರಬತ್ತು ಕುಡಿಸಿದ್ರೆ ಲೀಡರ್ ಆಗಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಟಾಂಗ್ ನೀಡಿದರು.

    ಬೆಳಗಾವಿ ಕಬ್ಬು ಬೆಳಗಾರರ ಹೋರಾಟದಲ್ಲಿ ರಾಜಕೀಯ ಲೇಪನ ಮಾಡುವುದು ಸರಿಯಲ್ಲ. ಪಕ್ಷದ ಕಾರ್ಯಕರ್ತರು ಈ ಕುರಿತು ಮುಖಂಡರಿಗೆ ಮಾಹಿತಿ ನೀಡಿದ್ದರು. ಅದ್ದರಂತೆ ಸರ್ಕಾರದ ಪರ ಡಿಕೆ ಶಿವಕುಮಾರ್ ಅವರು ಪ್ರತಿಭಟನಕಾರರ ಮನವೊಲಿಕೆ ಮಾಡಿದ್ದಾರೆ. ನಾವು ಬೇರೆ ಬೇರೆ ಜಿಲ್ಲೆಗಳಿಗೆ ಭೇಟಿ ನೀಡಿ ಹಲವು ಹೋರಾಟಗಾರರೊಂದಿಗೆ ಚರ್ಚೆ ನಡೆಸಿದ್ದೇವೆ ಎಂದರು. ಇದನ್ನು ಓದಿ : ಬಳ್ಳಾರಿ ಆಯ್ತು ಈಗ ಜಾರಕಿಹೊಳಿ ಕೋಟೆಯಲ್ಲಿ ಹವಾ – ರೈತರ ಜೊತೆ ಡಿಕೆಶಿ ಸಂಧಾನ ಯಶಸ್ವಿ 

    ಇದೇ ವೇಳೆ ಡಿಕೆ ಶಿವಕುಮಾರ್ ಹಾಗೂ ರಮೇಶ್ ಅವರ ನಡುವಿನ ಅಸಮಾಧಾನದ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ ಅವರು, ಬೆಳಗಾವಿ ಪಿಎಲ್‍ಡಿ ಬ್ಯಾಂಕ್ ವಿಚಾರದಲ್ಲಿ ಸಚಿವ ರಮೇಶ್ ಅವರೇ ಮಧ್ಯಸ್ಥಿಕೆಗೆ ಬಂದರು. ಆದರೆ ಡಿಕೆ ಶಿವಕುಮಾರ್ ಹಾಗೂ ರಮೇಶ್ ಮುನಿಸಿಗೂ ಪಿಎಲ್‍ಡಿ ಬ್ಯಾಂಕ್ ಚುನಾವಣೆಗೂ ಸಂಬಂಧವಿಲ್ಲ. ಈ ಬಗ್ಗೆ ಅವರಿಗೆ ಕೇಳಿದರೆ ಅವರಿಬ್ಬರೂ ಒಂದೇ ಎಂದು ಹೇಳುತ್ತಾರೆ. ಡಿಕೆ ಶಿವಕುಮಾರ್, ರಮೇಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಒಂದೇ ಪರಿವಾರಕ್ಕೆ ಸೇರಿದವರು. ಕಳೆದ 20 ವರ್ಷಗಳಿಂದ ಪಕ್ಷದಲ್ಲಿ ಒಟ್ಟಿಗೆ ಬಂದಿದ್ದಾರೆ. ಆದರೆ ಅವರ ಹಳೇ ವ್ಯವಹಾರ ನನಗೆ ಏನೂ ಗೊತ್ತಿಲ್ಲ ಎಂದು ಹೊಸ ಬಾಂಬ್ ಸಿಡಿಸಿದರು.

    ಇಬ್ಬರ ನಡುವೆ ಯಾವುದಾದರೂ ವ್ಯವಹಾರ ಇರಬಹುದು ಎಂದು ಹೊಸ ಬಾಂಬ್ ಹಾಕಿದ ಶಾಸಕ ಸತೀಶ್ ಜಾರಕಿಹೊಳಿ ಅವರು, ಅವರ ಪರಿವಾರ ಒಡೆಯುವ ಕೆಲಸ ನಾನು ಮಾಡಿಲ್ಲ. ಅವರಿಗೆ ಅವರೇ ಪರಿವಾರ ಒಡೆದುಕೊಂಡಿದ್ದಾರೆ. ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಅದ್ದರಿಂದ ಏಕೆ ಜಗಳವಾಡಿದ್ದೀರಿ ಎಂದು ಮಾಧ್ಯಮಗಳೇ ಅವರನ್ನು ಪ್ರಶ್ನೆ ಮಾಡಿ. ಕಳೆದ 6 ತಿಂಗಳ ಹಿಂದೆಯಷ್ಟೇ ಜಿಲ್ಲೆಯಲ್ಲಿ ಇವರ ಮಧ್ಯೆ ಬಂದೆ. ಪಿಎಲ್‍ಡಿ ಚುನಾವಣೆಯಲ್ಲಿ ಸಚಿವ ರಮೇಶ್ ಅವರು ನನಗೆ ಬೆಂಬಲ ಕೊಟ್ಟರು. ಯಾರ ಸ್ನೇಹವನ್ನ ಒಡೆಯಬೇಕು, ಬಿಡಬೇಕು ಎಂಬ ಉದ್ದೇಶ ನಮಗಿಲ್ಲ ಎಂದು ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv