Tag: ಮಾಜಿ ಸಚಿವ ಡಿಕೆ ಶಿವಕುಮಾರ್

  • ‘ಡಿಕೆ ಶಿವಕುಮಾರ್ ನೀವು ಏಸುಕುಮಾರ್ ಆಗಬೇಡಿ’ – ಪ್ರತಾಪ್ ಸಿಂಹ ವ್ಯಂಗ್ಯ

    ‘ಡಿಕೆ ಶಿವಕುಮಾರ್ ನೀವು ಏಸುಕುಮಾರ್ ಆಗಬೇಡಿ’ – ಪ್ರತಾಪ್ ಸಿಂಹ ವ್ಯಂಗ್ಯ

    ಮೈಸೂರು: ಕನಕಪುರ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಪ್ರತಾಪ್ ಸಿಂಹ ನಡುವಿನ ಜಟಾಪಟಿ ಮುಂದುವರಿದಿದೆ. ಈ ಕುರಿತು ವ್ಯಂಗ್ಯವಾಡಿರುವ ಸಂಸದರು, ಡಿ.ಕೆ.ಶಿವಕುಮಾರ್ ಅವರೇ ನೀವೂ ಏಸುಕುಮಾರ್ ಆಗಬೇಡಿ ಎಂದಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕಪಾಲ ಬೆಟ್ಟ ಶಿವನ ಬೆಟ್ಟ. ಆ ಬೆಟ್ಟವನ್ನು ಏಸು ಬೆಟ್ಟ ಮಾಡಿ ನೀವು ಏಸುಕುಮಾರ ಅನಿಸಿಕೊಳ್ಳಬೇಡಿ. ಶಿವ ಮತ್ತು ಭಕ್ತರ ನಡುವಿನ ಸಂಬಂಧ ಇದು. ಆ ಸಂಬಂಧವನ್ನು ನೀವು ಮುರಿಯಬೇಡಿ ಎಂದರು.

    ಕೆಲ ದಿನಗಳ ಹಿಂದೆಯಷ್ಟೇ ಪ್ರತಾಪ್ ಸಿಂಹ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲೂ ಡಿಕೆಶಿ ಅವರಿಗೆ ಈ ವಿಚಾರದಲ್ಲಿ 4 ಪ್ರಶ್ನೆ ಕೇಳಿದ್ದರು.

    ಪ್ರತಾಪ್ ಸಿಂಹ ಪ್ರಶ್ನೆಗಳು:
    1. ಏನು ಡಿ.ಕೆ. ಶಿವಕುಮಾರರೇ, ಸ್ವಂತ ಹಣದಲ್ಲಿ 114 ಅಡಿ ಎತ್ತರದ ಏಸು ಪ್ರತಿಮೆ ನಿರ್ಮಾಣದ ಹಿಂದಿರುವ ಉದ್ದೇಶವೇನು?
    2. ಆಂಧ್ರದಲ್ಲಿ ಮತಾಂತರವನ್ನೇ ಅಧಿಕಾರದ ಮೆಟ್ಟಿಲಾಗಿಸಿಕೊಂಡ ಜಗನ್ ಮೋಹನ್ ರೆಡ್ಡಿಯವರಂತೆ, ಕನಕಪುರದ ಒಕ್ಕಲಿಗರನ್ನು ಕನ್ವರ್ಟ್ ಮಾಡುವ ಸ್ಕೀಮಾ ಇದು?
    3. ಸಿದ್ದಗಂಗಾ, ಸುತ್ತೂರು, ಸಿರಿಗೆರೆಗಳಂತೆ ಆದಿಚುಂಚನಗಿರಿ ಸಂಸ್ಥೆಯನ್ನೂ ಉತ್ತುಂಗಕ್ಕೆ ತೆಗೆದುಕೊಂಡು ಹೋದ ಬಾಲಗಂಗಾಧರ ಶ್ರೀಗಳು ಮರೆತುಹೋದರಾ ನಿಮಗೆ?
    4. ಸರ್ವ ಜಾತಿಜನಾಂಗದ ದೈವ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯವರ ಪ್ರತಿಮೆ ನಿರ್ಮಿಸಿದ್ದರೆ ಕಪಾಲಿ ಬೆಟ್ಟಕ್ಕೆ ಕಳಶಪ್ರಾಯವಾಗುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದ್ದರು.

    ಡಿಕೆಶಿ ಸಮರ್ಥನೆ: ಏಸು ಪ್ರತಿಮೆ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಿರುವುದನ್ನು ಸಮರ್ಥನೆ ಮಾಡಿಕೊಂಡಿದ್ದ ಡಿಕೆಶಿ ಅವರು, ಎಲ್ಲಾ ಸಮುದಾಯಗಳಿಗೂ ನಾನು ನೆರವಾಗಿದ್ದು, ಅಂಬೇಡ್ಕರ್ ಅವರು ರಚಿಸಿದ್ದ ಸಂವಿಧಾನವನ್ನು ಬದಲಾಯಿಸಲು ಹೊರಟಿರುವ ಅವರಿಂದ ನೀತಿಪಾಠ ನನಗೆ ಬೇಕಿಲ್ಲ. ಬಿಜೆಪಿ ನಾಯಕರು ಯಾವಾಗಲೂ ಬೇರೊಬ್ಬರ ವಿಚಾರದಲ್ಲಿ ತಪ್ಪು ಕಂಡು ಹಿಡಿರುವ ಕೆಲಸವನ್ನಷ್ಟೇ ಮಾಡುತ್ತಾರೆ. ಈಗಲೂ ಅವರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಕಪಾಲ ಬೆಟ್ಟ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಅಲ್ಲಿನ ಜನರು ನನ್ನ ಪರವಾಗಿ ನಿಂತು ಬೆಳೆಸಿದ್ದಾರೆ. ಇಡೀ ಗ್ರಾಮದ ಜನರು ನನ್ನ ಪರ ಪ್ರಾರ್ಥನೆ ಮಾಡಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಗ್ರಾಮಸ್ಥರು ಮೂರ್ತಿ ನಿರ್ಮಾಣ ಮಾಡುವ ಪ್ರಸ್ತಾಪ ಮಾಡಿದ್ದರು. ಆದರೆ ಈ ಜಾಗ ಸರ್ಕಾರಿ ಸ್ಥಳವಾಗಿದೆ. ಆದ್ದರಿಂದ ಬೇಡ ಎಂದು ಹೇಳಿ ಯಾವುದೇ ತೊಂದರೆ ಇಲ್ಲದೇ ಜಮೀನು ನೀಡುವ ಭರವಸೆ ನೀಡಿದ್ದೆ.

    ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಈ ಸ್ಥಳವನ್ನು ಮಂಜೂರು ಮಾಡಿಸಿ ಸ್ವತಃ ಹಣವನ್ನೂ ನೀಡಿ ಅವರಿಗೆ ಹಕ್ಕು ಪತ್ರವನ್ನು ನೀಡಿದ್ದೇನೆ. ಬೆಟ್ಟ 16 ಎಕರೆ ಇದ್ದು, 10 ಎಕರೆ ಜಮೀನು ಮಾತ್ರ ಅವರಿಗೆ ಕಾನೂನಾತ್ಮಕವಾಗಿ ನೀಡಿದ್ದೇನೆ. ಈ ಒಂದು ಸ್ಥಳ ಮಾತ್ರವಲ್ಲ, ನನ್ನದೇ ಸ್ವತಃ ಜಮೀನನ್ನು ಕೂಡ ಕರ್ನಾಟಕ ಸರ್ಕಾರದ ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡಲು ನೀಡಿದ್ದೇನೆ. ಅಲ್ಲದೇ ನೂರಾರು ದೇವಾಲಯಗಳನ್ನು ನಿರ್ಮಾಣ ಮಾಡಲು ನೆರವು ನೀಡಿದ್ದೇವೆ ಎಂದು ಹೇಳಿದ್ದರು.

  • ಬಾಲ್ಯದಲ್ಲಿ ಅಸ್ಪೃಶ್ಯತೆಯ ನೋವುಂಡಿದ್ದೇನೆ: ಧೃವನಾರಾಯಣ್

    ಬಾಲ್ಯದಲ್ಲಿ ಅಸ್ಪೃಶ್ಯತೆಯ ನೋವುಂಡಿದ್ದೇನೆ: ಧೃವನಾರಾಯಣ್

    ಮೈಸೂರು: ಏಸು ಪ್ರತಿಮೆ ಸ್ಥಾಪನೆಗೆ ಕನಕಪುರ ಹಾರೋಬೆಲೆಯಲ್ಲಿ ಜಮೀನು ನೀಡಿರುವ ವಿಚಾರಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನಡೆಗೆ ಮಾಜಿ ಸಂಸದ ಧೃವನಾರಾಯಣ್ ಬೆಂಬಲ ನೀಡಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಧೃವನಾರಾಯಣ್, ತಾವು ಬಾಲ್ಯದಲ್ಲಿ ಅಸ್ಪೃಶ್ಯತೆ ವಿಚಾರದಲ್ಲಿ ಅನುಭವಿಸಿದ ನೋವಿನ ಬಗ್ಗೆ ಬೇಸರದಿಂದ ಮಾತನಾಡಿದರು. ಅಸ್ಪೃಶ್ಯತೆ ನೋವುಂಡವರಿಗೆ ಮಾತ್ರ ಅದರ ನೋವು ಗೊತ್ತು. ನಾನು ಬಾಲ್ಯದಲ್ಲಿ ಅಸ್ಪೃಶ್ಯತೆಗೆ ಒಳಗಾಗಿದ್ದೆ ಎಂದು ತಮ್ಮ ನೋವನ್ನು ಬಿಚ್ಚಿಟ್ಟರು.

    ನಾನು ಸೆಂಟ್‍ಫಿಲೋಮಿನ ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದ್ದಾಗ ಅಸ್ಪೃಶ್ಯತೆ ನೋವಿಗೆ ಒಳಗಾಗಿದ್ದೆ. 5ನೇ ತರಗತಿ ಓದುತ್ತಿದ್ದ ನಾನು ಹಾಸ್ಟೆಲ್‍ಗೆ ಹೋದ ಮೊದಲ ದಿನವೇ ಸಹಪಾಠಿಯೊಬ್ಬ ನನ್ನ ಜಾತಿ ಕೇಳಿದ್ದರು. ಹಾಸ್ಟೆಲ್ ಕೋಣೆಯಲ್ಲಿ ಬ್ಯಾಗ್ ಇಟ್ಟು ಬರುತ್ತಿದ್ದ ನನಗೆ ವಿದ್ಯಾರ್ಥಿಯೊಬ್ಬ ನೀನು ಯಾವ ಜಾತಿಯವ ಎಂದು ಕೇಳಿದ್ದ. ಆ ಸಂದರ್ಭದಲ್ಲಿ ಶಾಲೆಯಲ್ಲಿ ಇದ್ದ ಏಕೈಕ ದಲಿತ ವಿದ್ಯಾರ್ಥಿ ನಾನಾಗಿದ್ದೆ. ಈ ರೀತಿ ಯಾರು ಅಸ್ಪೃಶ್ಯತೆಗೆ ಒಳಗಾಗಿಲ್ಲವೋ ಅವರಿಗೆ ಅದು ಗೊತ್ತಾಗುವುದಿಲ್ಲ ಎಂದು ಜಾತಿ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

    ಹಬ್ಬದ ಸಂದರ್ಭದಲ್ಲಿ ಸಮುದಾಯಕ್ಕೆ ನೋವುಂಟು ಮಾಡುವುದು ಸಮಂಜಸವಲ್ಲ. ಆದ್ದರಿಂದ ನಾನು ಬಿಜೆಪಿ ನಾಯಕರಿಗೆ ಸಲಹೆ ನೀಡುತ್ತಿದ್ದೇನೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದು, ಉತ್ತಮ ಆಡಳಿತ ನೀಡುವ ಅವಕಾಶ ಲಭಿಸಿದೆ. ಆದ್ದರಿಂದ ಇಂತಹ ಸಂಗತಿಗಳನ್ನು ರಾಜಕೀಯ ಮಾಡುವುದನ್ನು ಬಿಡಬೇಕು. ಆ ಗ್ರಾಮದಲ್ಲಿ ಶೇ.90 ರಷ್ಟು ಒಂದೇ ಧರ್ಮದವರಿದ್ದು, ಅವರ ಬೇಡಿಕೆಯಂತೆ ಸ್ಥಳೀಯ ಶಾಸಕರು ಕಾನೂನಿನ ಅಡಿ ಜಮೀನು ಮಂಜೂರು ಮಾಡಿದ್ದಾರೆ. ಒಂದು ಧರ್ಮದ ವಿರುದ್ಧ ವೈಷಮ್ಯ ಮೂಡಿಸುವ ಮೂಲಕ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

  • ಕಸ್ಟಡಿಯಲ್ಲಿ ಕರಗಿದ ಕನಕಪುರ ಬಂಡೆ- ಕಣ್ಣೀರಿಡುತ್ತಾ ಫ್ಯಾಮಿಲಿಯೆದ್ರು ಊಟ ಮಾಡಿದ ಡಿಕೆ

    ಕಸ್ಟಡಿಯಲ್ಲಿ ಕರಗಿದ ಕನಕಪುರ ಬಂಡೆ- ಕಣ್ಣೀರಿಡುತ್ತಾ ಫ್ಯಾಮಿಲಿಯೆದ್ರು ಊಟ ಮಾಡಿದ ಡಿಕೆ

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತು ಇಡಿ ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಭಾನುವಾರ ರಾತ್ರಿ ಕುಟುಂಬ ಭೇಟಿ ಮಾಡಿದೆ. ಡಿ.ಕೆ ಶಿವಕುಮಾರ್ ಪತ್ನಿ ಉಷಾ, ಪುತ್ರಿ ಐಶ್ವರ್ಯ ನಾದಿನಿ ಸುಮಾ, ಸಹೋದರ ಡಿ.ಕೆ ಸುರೇಶ್ ಸಮ್ಮುಖದಲ್ಲಿ ಭೇಟಿಯಾದರು. ದೆಹಲಿಯ ಲೋಕನಾಯಕ್ ಭವನದಲ್ಲಿರುವ ಇಡಿ ಕಚೇರಿಯಲ್ಲಿ ಸಂಜೆ ಆರು ಗಂಟೆಗೆ ಭೇಟಿಯಾಗಿ ಸುಮಾರು ಒಂದೂವರೆ ಗಂಟೆ ಕೌಶಲ್ಯ ವಿಚಾರಿಸಿದರು.

    ಇಡಿ ಕಚೇರಿಯಲ್ಲಿ ಕುಳಿತಿದ್ದ ತಂದೆಯನ್ನು ನೋಡುತ್ತಿದ್ದಂತೆಯೇ ಪುತ್ರಿ ಐಶ್ವರ್ಯ ಅಪ್ಪಿ ಕಣ್ಣೀರಿಟ್ಟಿದ್ದಾರೆ. ಪತಿಯ ಪರಿಸ್ಥಿತಿ ಕಂಡು ಪತ್ನಿ ಉಷಾ ಭಾವುಕರಾಗಿದ್ದು, ಕುಟುಂಬಸ್ಥರ ಕಣ್ಣೀರ ಕಟ್ಟೆ ಒಡೆದು ಹೋಗಿತ್ತು. ರಾಜನಂತೆ ಮೆರೆದ ಡಿ.ಕೆ ಶಿವಕುಮಾರ್ ಪರಿಸ್ಥಿತಿ ಕಂಡು ಮರಗಿದರು. ಉಮ್ಮಳಿಸುವ ದುಃಖದ ನಡುವೆಯೂ ಬೇಗ ಮನೆಗೆ ಬರುವಂತೆ ಉಷಾ ಮತ್ತು ಪುತ್ರಿ ಐಶ್ವರ್ಯ ಸಾಂತ್ವನದ ಮಾತುಗಳನ್ನು ಆಡಿದ್ದಾರೆ.

    ಫ್ಯಾಮಿಲಿ ಭೇಟಿ ವೇಳೆ ಡಿ.ಕೆ ಶಿವಕುಮಾರ್ ಗಾಗಿ ರಾತ್ರಿ ಏಳು ಗಂಟೆಗೆ ಸಹೋದರ ಡಿ.ಕೆ ಸುರೇಶ್ ನಿವಾಸದಿಂದ ಊಟ ತರಲಾಗಿತ್ತು. ಈ ವೇಳೆ ಒಳಗಿದ್ದ ಕುಟುಂಬಸ್ಥರು ಡಿ.ಕೆ ಶಿವಕುಮಾರ್ ಗೆ ಊಟ ಮಾಡಿಸಿದ್ದಾರೆ. ಪತ್ನಿ ಮತ್ತು ಪುತ್ರಿ ವಾತ್ಸಲ್ಯ ಕಂಡು ಕನಕಪುರದ ಬಂಡೆ ಡಿಕೆ ಕರಗಿ ನೀರಾದರು. ಕಣ್ಣಾಲಿಗಳನ್ನು ಒದ್ದೆಯಾಗಿಸಿಕೊಂಡು ಡಿ.ಕೆ ಭಾವುಕರಾದರು. ಇತ್ತ ಅಣ್ಣನ ಕುಟುಂಬದ ಪರಿಸ್ಥಿತಿ ಕಂಡು ಸಹೋದರ ಡಿ.ಕೆ ಸುರೇಶ್ ಕೂಡ ಗದ್ಗದಿತರಾದರು.

    ಕೋರ್ಟ್ ಮೆಟ್ಟಿಲೇರಲಿರುವ ಡಿಕೆಶಿ:
    ಇಡಿ ಅಧಿಕಾರಿಗಳು ಕಸ್ಟಡಿಗೆ ತೆಡಗೆದುಕೊಂಡಾಗಿನಿಂದ ಶೇವ್ ಮಾಡಿಕೊಂಡಿಲ್ಲ. ಶೇವ್ ಮಾಡಲು ಶೇವಿಂಗ್ ಬ್ಲೇಡ್ ಕೊಡಿ ಎಂದು ಡಿ.ಕೆ ಕೇಳಿದರೂ ದೆಹಲಿ ಪೊಲೀಸರು ನಿರಾಕರಿಸಿದ್ದಾರೆ. ಕನಿಷ್ಠ ಪೆನ್ನು ಪೇಪರ್ ಆದರೂ ಕೊಡಿ ಪಾಯಿಂಟ್ಸ್ ಮಾಡಬೇಕು ಅಂದರೂ ಇಡಿ ಅಧಿಕಾರಿಗಳು ಕೊಟ್ಟಿಲ್ಲ. ಬ್ಲೇಡ್ ನಿಂದ ಮುಂದೆ ಅನಾಹುತವಾದರೆ ಯಾರು ಜವಾಬ್ದಾರಿ ಎಂದು ಇಡಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ.

    ಇಡಿ ಅಧಿಕಾರಿಗಳ ವರ್ತನೆಯಿಂದ ಬೇಸತ್ತ ಡಿಕೆಶಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಶೇವಿಂಗ್ ಮಾಡಿಕೊಳ್ಳಲು ಅವಕಾಶ ಕೊಡಬೇಕು ಮತ್ತು ಪೆನ್ನು ಪೇಪರ್ ನಂತಹ ಅಗತ್ಯ ವಸ್ತುಗಳನ್ನು ನೀಡಲು ಸೂಚಿಸುವಂತೆ ಮನವಿ ಮಾಡಿದ್ದಾರೆ. ಈ ಅರ್ಜಿ ಇಡಿ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ.

     

  • ಡಿಕೆಶಿ ಬಂಧನ ಖಂಡಿಸಿ ಪ್ರತಿಭಟನೆ- 18 ಕೆಎಸ್‌ಆರ್‌ಟಿಸಿ ಬಸ್‍ಗಳಿಗೆ ಹಾನಿ

    ಡಿಕೆಶಿ ಬಂಧನ ಖಂಡಿಸಿ ಪ್ರತಿಭಟನೆ- 18 ಕೆಎಸ್‌ಆರ್‌ಟಿಸಿ ಬಸ್‍ಗಳಿಗೆ ಹಾನಿ

    ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧನ ಮಾಡಿರುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳಿಂದ ಕೆಎಸ್‌ಆರ್‌ಟಿಸಿ ಭಾರೀ ನಷ್ಟ ಎದುರಿಸಿದೆ. ಪ್ರತಿಭಟನೆ ವೇಳೆ ರಾಜ್ಯದ ವಿವಿಧೆಡೆ ಒಟ್ಟು 18 ಬಸ್ಸುಗಳಿಗೆ ಹಾನಿಯಾಗಿದ್ದು, 13 ಲಕ್ಷದ 67 ಸಾವಿರ ರೂ. ನಷ್ಟ ಸಂಭವಿಸಿದೆ.

    ರಾಜ್ಯದ ವಿವಿಧ ಭಾಗಗಳಲ್ಲಿ ನಿನ್ನೆ ರಾತ್ರಿಯಿಂದ ಡಿಕೆ ಶಿವಕುಮಾರ್ ಅವರ ಬಂಧನ ವಿರೋಧಿಸಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕಿಡಿಗೇಡಿಗಳು 2 ಬಸ್ ಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ 16 ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಮಾಹಿತಿ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಗೆ ತಲುಪಿದೆ.

    ಕನಕಪುರ ನಗರವೊಂದರಲ್ಲೇ 10 ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಉಪ್ಪಿನಂಗಡಿ ಬಳಿ ವೋಲ್ವೋ ಬಸ್ಸಿಗೆ ಹಾನಿಯಾಗಿದೆ. ಉಳಿದಂತೆ ಬೆಂಗಳೂರಿನ ನವರಂಗ, ಮೌರ್ಯ ಸರ್ಕಲ್, ತವರೇಕೆರೆಯ ಚಿಕ್ಕನಹಳ್ಳಿ ಗೇಟ್ ಹಾಗೂ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ ಬಸ್ಸುಗಳಿಗೆ ಕಲ್ಲು ತೂರಲಾಗಿದೆ. ಕನಕಪುರ ನಗರದಲ್ಲಿ ಎರಡು ಬಸ್ಸಿಗೆ ಬೆಂಕಿ ಹಚ್ಚಲಾಗಿದ್ದು, ಇದರಲ್ಲಿ ಒಂದು ಬಸ್ಸು ಸಂಪೂರ್ಣ ಸುಟ್ಟು ಹೋಗಿದ್ದೆ. ಮತ್ತೊಂದು ಬಸ್ಸಿಗೆ ಭಾಗಶಃ ಹಾನಿಯಾಗಿದೆ.

  • ತಡರಾತ್ರಿ ಡಿಕೆಶಿಯಿಂದ ವಿನಯ್ ಗುರೂಜಿ ಭೇಟಿ

    ತಡರಾತ್ರಿ ಡಿಕೆಶಿಯಿಂದ ವಿನಯ್ ಗುರೂಜಿ ಭೇಟಿ

    – ಇಂದು ಬೆಳಗ್ಗೆ ಅಜ್ಜಯ್ಯನ ಭೇಟಿ

    ಬೆಂಗಳೂರು: ಗುರುವಾರ ತಡರಾತ್ರಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಸಂಕಷ್ಟದಿಂದ ಪಾರು ಮಾಡುವಂತೆ ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿ ಸಂಕಷ್ಟ ತೋಡಿಕೊಂಡಿದ್ದಾರೆ.

    ಡಿಕೆಶಿ ಖಾಸಗಿ ಹೋಟೆಲಿನಿಂದ ನೇರವಾಗಿ ಉತ್ತರ ಹಳ್ಳಿಗೆ ಹೋಗಿ ದೇವ ಮಾನವ ವಿನಯ್ ಗುರೂಜಿಯನ್ನು ಭೇಟಿ ಮಾಡಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಡಿ.ಕೆ ಶಿವಕುಮಾರ್ ಕುಟುಂಬ ವಿನಯ್ ಗುರೂಜಿ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪತಿಯ ಸಂಕಷ್ಟ ಕಂಡು ವಿನಯ್ ಗುರೂಜಿ ಮುಂದೆ ಡಿಕೆಶಿ ಪತ್ನಿ ಕಣ್ಣೀರಿಟ್ಟಿದ್ದಾರೆ. ಈ ವೇಳೆ ಗುರೂಜಿ ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.

    ನವೆಂಬರ್‌ವರೆಗೆ ಇಂತಹ ಅಗ್ನಿ ಪರಿಕ್ಷೆ ಎದುರಾಗುತ್ತಲೇ ಇರುತ್ತದೆ. ನವೆಂಬರ್‌ವರೆಗೆ ನಿಮ್ಮ ಟೈಂ ಸರಿ ಇಲ್ಲ. ನವೆಂಬರ್ ನಂತರ ನಿಮ್ಮ ಎಲ್ಲಾ ಸಂಕಷ್ಟಗಳು ಹಂತ ಹಂತವಾಗಿ ದೂರ ಆಗಲಿದೆ. ಯಾವುದೇ ರಾಜಕೀಯವಾದ ಮಾತುಗಳನ್ನಾಡದೇ ಮೌನವಾಗಿರುವುದು ಒಳಿತು ಎಂದು ವಿನಯ್ ಗುರೂಜಿ ಭವಿಷ್ಯ ನುಡಿದಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿದ ನಂತರ ದತ್ತಾತ್ರೆಯನ ಸನ್ನಿಧಿಯಲ್ಲಿ ಸಂಕಷ್ಟ ಹರ ಸಂಕಲ್ಪ ಪೂಜೆ ಮಾಡಿ ಸಂಕಷ್ಟದಿಂದ ಪಾರು ಮಾಡುವಂತೆ ದೇವರ ಬಳಿ ಕೇಳಿಕೊಂಡಿದ್ದಾರೆ. ಇಂದು ಬೆಳಗ್ಗೆ ಕೂಡ ಡಿ.ಕೆ ಶಿವಕುಮಾರ್ ಸಂಕಷ್ಟದಿಂದ ಪಾರು ಮಾಡುವಂತೆ ತಮ್ಮ ನಂಬಿಕೆಯ ದೈವ ಮಾನವ ನೊಣವಿನಕೆರೆ ಅಜ್ಜಯ್ಯನನ್ನು ಭೇಟಿ ಮಾಡಿದ್ದಾರೆ.

    ಬೆಂಗಳೂರಿನ ಭಕ್ತರೊಬ್ಬರ ಮನೆಯಲ್ಲಿ ಅಜ್ಜಯ್ಯ ತಂಗಿದ್ದರು. ಮಾಹಿತಿ ತಿಳಿದು ಆ ಭಕ್ತರ ಮನೆಗೆ ಹೋಗಿ ಭೇಟಿ ಮಾಡಿದ್ದಾರೆ. ಜೊತೆಗೆ ಅಜ್ಜಯ್ಯನ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಅಮವಾಸ್ಯೆ ಪೂಜೆ ಮಾಡಿಸಿದ್ದಾರೆ.

    ಕಾಂಗ್ರೆಸ್ ಟ್ರಬಲ್ ಶೂಟರ್, ಮಾಜಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದು ಜಾರಿ ನಿರ್ದೇಶನಾಲಯದ(ಇಡಿ) ವಿಚಾರಣೆಗೆ ಹಾಜರಾಗಬೇಕೆಂದು ಹೈಕೋರ್ಟ್ ಆದೇಶಿಸಿದೆ. ಇದರಿಂದ ಡಿಕೆಶಿ ಫುಲ್ ಟೆನ್ಶನ್ ಆಗಿದ್ದು, ತಡರಾತ್ರಿ ಮಾಜಿ ಸಂಸದ ಶಿವರಾಮೇಗೌಡ ಹಾಗೂ ಡಿಕೆಶಿ ಆಪ್ತರು ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಆದರೆ ಯಾವೊಬ್ಬ ಕಾಂಗ್ರೆಸ್ ನಾಯಕರು ಭೇಟಿ ಮಾಡಿಲ್ಲ ಎನ್ನಲಾಗಿದೆ.