Tag: ಮಾಜಿ ಸಚಿವ ಗೋವಿಂದ ಕಾರಜೋಳ

  • ಮೈತ್ರಿ ಸರ್ಕಾರಕ್ಕೆ ಬೆಟ್ಟಿಂಗ್ ಸವಾಲು ಎಸೆದ ಕಾರಜೋಳ

    ಮೈತ್ರಿ ಸರ್ಕಾರಕ್ಕೆ ಬೆಟ್ಟಿಂಗ್ ಸವಾಲು ಎಸೆದ ಕಾರಜೋಳ

    ವಿಜಯಪುರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಖಚಿತ. ನಾನು ಈ ವಿಚಾರವಾಗಿ ಬೆಟ್ಟಿಂಗ್ ಕಟ್ಟಲು ಸಿದ್ಧ. 1 ರೂ. ಬೆಟ್ ಕಟ್ಟಿ ಎಂದರೂ ಯಾರು ಸಿದ್ಧರಿಲ್ಲ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ನಮ್ಮ ಪಕ್ಷ ಗೆಲ್ಲುವ ವಿಶ್ವಾಸವಿದೆ. ಬೇಕಾದರೆ ನನ್ನ ಜೊತೆಗೆ ಒಂದು ರೂಪಾಯಿ ಬೆಟ್ಟಿಂಗ್ ಕಟ್ಟಿ. ಮೊದಲು ಮುಧೋಳ ಮೈತ್ರಿ ಕಾರ್ಯಕರ್ತರು ಬೆಟ್ಟಿಂಗ್ ಮಾಡಲು ಸಿದ್ಧ ಎಂದು ಕೇಳಿದ್ದರು. ಆದರೆ ಕೊನೆ ಕ್ಷಣದಲ್ಲಿ ಅವರು ಬೇಡವೆಂದರು. ಅದಕ್ಕೆ ಅವರಿಗೆ ರಾಜಕೀಯ ಸನ್ಯಾಸಕ್ಕೆ ಸಿದ್ಧರಾಗಿ ಎಂದು ತಿಳಿಸಿದ್ದಾಗಿ ಹೇಳಿದರು.

    ಮೈತ್ರಿ ಸರ್ಕಾರ ಹಾಲು ಕುಡಿದು ಸಾಯುತ್ತದೆ. ಅಂತಹವರಿಗೆ ವಿಷ ಹಾಕಿ ಸಾಯಿಸುವುದು ಏಕೆ? ಅಂತಹ ಕೆಲಸ ನಾವು ಮಾಡಲ್ಲ. ಬಿಜೆಪಿ ಪಕ್ಷ ಎಂದು ವಿಷ ಬೇರಸುವ ಕೆಲಸ ಮಾಡಲ್ಲ ಎಂದು ಹೇಳಿ ಆಪರೇಷನ್ ಕಮಲವನ್ನು ಪರೋಕ್ಷವಾಗಿ ತಿರಸ್ಕರಿಸಿದರು. ಇದೇ ವೇಳೆ ರಾಹುಲ್ ಗಾಂಧಿ ಒಬ್ಬ ಜೋಕರ್. ಅವರಿಗೆ ರಾಜಕೀಯ ನಾಯಕತ್ವದ ಕೊರತೆ ಇದ್ದು, ದೇಶದ ಭಾಷೆ, ಬಡತನ, ಆರ್ಥಿಕತೆಯ ಬಗ್ಗೆ ಗೊತ್ತಿಲ್ಲ ಎಂದು ದೂರಿದರು.

    ಮೈತ್ರಿ ಸರ್ಕಾರ ಭ್ರಷ್ಟಾಚಾರಕ್ಕೆ ಹೆಸರುವಾಸಿಯಾಗಿದೆ. ಮೈತ್ರಿ ಸರ್ಕಾರ ರಾಜ್ಯದ ಬೊಕ್ಕಸವನ್ನು ಲೂಟಿ ಮಾಡಿದ್ದು, ಮೈತ್ರಿ ಸರ್ಕಾರದಲ್ಲಿ ಕಚ್ಚಾಟ ಶುರುವಾಗಿದೆ. ಒಬ್ಬರಿಗೆ ಒಬ್ಬರು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿಕೊಳ್ಳುತ್ತಿದ್ದು, ಸರ್ಕಾರ ಪತನವಾಗುವ ಕಾಲ ಬಂದಿದೆ ಎಂದು ಭವಿಷ್ಯ ನುಡಿದರು. ಅಲ್ಲದೇ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುತ್ತಾರೆ. ಲೋಕಸಭಾ ಚುನಾವಣೆ ಫಲಿತಾಂಶ ಬಂದ ಮೇಲೆ ಕಾಂಗ್ರೆಸ್ ಮೂರು ಭಾಗವಾಗುತ್ತದೆ. ಇದರಲ್ಲಿ ಕೆಲವರು ಬಿಜೆಪಿ, ಕೆಲವರು ಮತ್ತೊಂದು ಕಡೆಗೆ ಹೋಗುತ್ತಾರೆ ಎಂದರು.

  • ಅನೈತಿಕ ಸಂಬಂಧ ಹೆಚ್ಚು ದಿನ ಬಾಳದು: ಸಮ್ಮಿಶ್ರ ಸರ್ಕಾರವನ್ನು ಕುಟುಕಿದ ಗೋವಿಂದ ಕಾರಜೋಳ

    ಅನೈತಿಕ ಸಂಬಂಧ ಹೆಚ್ಚು ದಿನ ಬಾಳದು: ಸಮ್ಮಿಶ್ರ ಸರ್ಕಾರವನ್ನು ಕುಟುಕಿದ ಗೋವಿಂದ ಕಾರಜೋಳ

    ವಿಜಯಪುರ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿಗೆ ಹೆಚ್ಚಿನ ಸ್ಥಾನ ನೀಡಿ ಆಶೀರ್ವಾದ ಮಾಡಿದ್ದಾರೆ. ಆದರೆ ಸೂಕ್ತ ಬಹುಮತ ಪಡೆಯುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಚುನಾವಣೆಯಲ್ಲಿ ಜನರು ಬಿಜೆಪಿಗೆ ಜನರು ಹೆಚ್ಚಿನ ಸ್ಥಾನ ನೀಡಿ ಆಶೀರ್ವಾದ ಮಾಡಿದ್ದಾರೆ. ಆದರೆ ಪಕ್ಷ ಸೂಕ್ತ ಬಹುಮತ ಪಡೆಯುವಲ್ಲಿ ನಮ್ಮ ಲೆಕ್ಕಾಚಾರ ತಪ್ಪಿದೆ. ಗುಣಾಕಾರ ಭಾಗಾಕಾರವಾಗಿ ಬಹುಮತ ಸಂಖ್ಯೆ ಕಡಿಮೆಯಾಗಿದೆ. ಆದರೆ ಅಧಿಕಾರಕ್ಕಾಗಿ ಹಾವು ಮುಂಗುಸಿಯಂತಿದ್ದ ಜೆಡಿಎಸ್, ಕಾಂಗ್ರೆಸ್ ಒಂದಾಗಿದ್ದು, ಅಧಿಕಾರಕ್ಕಾಗಿ ಕೂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

    ಕಾಂಗ್ರೆಸ್ ಪಕ್ಷ ಸದ್ಯ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ಮೂಲೆಗುಂಪು ಮಾಡಿ ಜೆಡಿಎಸ್ ನೊಂದಿಗೆ ಕೈ ಜೋಡಿಸಿದೆ. ಇದು ಅನೈತಿಕ ಸಂಬಂಧವಾಗಿದ್ದು ಹೆಚ್ಚಿನ ದಿನ ಬಾಳದು. ಅಂದರೆ ಹಾಲು ಕುಡಿದು ಸಾಯುವವರಿಗೆ ನಾವೇಕೆ ವಿಷ ಹಾಕಬೇಕೆಂದು ಪರೋಕ್ಷವಾಗಿ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ಇದೇ ವೇಳೆ ಪೇಜಾವರ ಶ್ರೀಗಳು ನರೇಂದ್ರ ಮೋದಿ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕುರಿತು ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾಹಿತಿ ಕೊರತೆಯಿಂದ ಅವರು ಹೀಗೆ ಹೇಳಿಕೆ ನೀಡಿದ್ದಾರೆ. ಆದರೆ ಶ್ರೀ ಗಳ ಕುರಿತು ನನಗೆ ಅಪಾರ ನಂಬಿಕೆ ಇದೆ ಎಂದರು.