Tag: ಮಾಜಿ ಸಚಿವ ಎ.ಮಂಜು

  • ನನಗೆ ಅವಮಾನ ಮಾಡಿದ್ದಾರೆ, ಈಗ ಅನುಭವಿಸಲಿ – ಬಿಜಿಪಿ ನಾಯಕರ ವಿರುದ್ಧವೇ ಎ.ಮಂಜು ಕಿಡಿ

    ನನಗೆ ಅವಮಾನ ಮಾಡಿದ್ದಾರೆ, ಈಗ ಅನುಭವಿಸಲಿ – ಬಿಜಿಪಿ ನಾಯಕರ ವಿರುದ್ಧವೇ ಎ.ಮಂಜು ಕಿಡಿ

    ಹಾಸನ: ನನ್ನ ಕ್ಷೇತ್ರದ ಮತದಾರರು ಯಾವ ಪಕ್ಷಕ್ಕೆ ಹೋಗಿ ಎನ್ನುವರೋ ಅಲ್ಲಿಗೆ ಹೋಗುತ್ತೇನೆ. ನನಗೆ ಬಿಜೆಪಿ ಅವರು ಅವಮಾನ ಮಾಡಿದ್ದಾರೆ ಅದಕ್ಕೆ ಅನುಭವಿಸಿದ್ದಾರೆ ಎ.ಮಂಜು ನಾಯಕರ ವಿರುದ್ಧವೇ ಮಾಜಿ ಸಚಿವ ಎ.ಮಂಜು ಕಿಡಿ ಕಾರಿದ್ದಾರೆ.

    ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಹಾಸನದಲ್ಲಿ ನನ್ನ ಮಗನಿಗೆ ಟಿಕೆಟ್ ಕೊಡಿ ಎಂದು ನಾವು ಕೇಳಿರಲಿಲ್ಲ. ಆದರೆ ಬಿಜೆಪಿ ಅವರೇ ಬಂದು ಮಂಥರ್ ಗೌಡಗೆ ಟಿಕೆಟ್ ನೀಡುವ ವಿಚಾರ ಮಾತನಾಡಿದ್ದರು. ಜೊತೆಗೆ ನಾನು ಐದು ಕೋಟಿ ರೂ. ಬಂಡವಾಳ ಹಾಕುತ್ತೇನೆ ಎಂದು ಹಾಸನದ ಶಾಸಕರು ಪಾರ್ಟಿ ಮೀಟಿಂಗ್‌ನಲ್ಲಿ ಹೇಳಿದ್ದರು ಎಂದರು.

    ಈ ಮಾತುಕತೆಯ ಬಳಿಕ ಶಾಸಕ ಪ್ರೀತಂ ಗೌಡ ಹಾಗೂ ಅವರ ಬೆಂಬಲಿಗರು ನಂತರದಲ್ಲಿ ಕ್ವಾಲಿಟಿ ಬಾರ್ ಶರತ್ ಅವರನ್ನು ಮಂಥರ್ ಬಳಿ ಕಳುಹಿಸಿ, ಚುನಾವಣೆಗೆ ನಿಲ್ಲಬಾರದು ಎಂದು ಹೇಳಿಸಿದ್ದಾರೆ. ನಂತರ ಕಾಂಗ್ರೆಸ್ ನಾಯಕರು ಮಂಥರ್ ಗೌಡನನ್ನು ಗುರುತಿಸಿ ಕೊಡಗಿನಲ್ಲಿ ಟಿಕೆಟ್ ನೀಡಿದ್ದಾರೆ ಎಂದು ತಿಳಿಸಿದರು.

    ಒಳ ಒಪ್ಪಂದ ಮಾಡಿಕೊಳ್ಳುವ ಪ್ರವೃತ್ತಿ ಹಾಸನದ ಕೆಲವು ನಾಯಕರಲ್ಲಿ ಇದೆ. ಮತದಾರರ ಮನವೊಲಿಸುವಲ್ಲಿ ಮುಖಂಡರು ವಿಫಲರಾಗಿದ್ದಾರೆ. ಅವರವರ ಸ್ವಾರ್ಥಕ್ಕೆ, ಸ್ವಹಿತಾಸಕ್ತಿಗೆ ಪಕ್ಷ ಬಲಿ ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ಶಾಸಕರ ವಿರುದ್ಧ ಹರಿಹಾಯದ್ದರು.

    ಮತದಾರರು ಕೊಡಗು ವಿಧಾನ ಪರಿಷತ್ ಚುನಾವಣೆಯಲ್ಲಿ ಸರ್ಕಾರದ ಪರ ಮತ ಹಾಕಿದ್ದಾರೆ. ಆದ್ದರಿಂದ ಕೊಡಗಿನಲ್ಲಿ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಪೈಪೋಟಿ ಕೊಟ್ಟಿದೆ. ಕೇವಲ ಹದಿನೈದು ದಿನದಲ್ಲಿ ಅಷ್ಟು ಮತ ನೀಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎನ್ನುವುದನ್ನು ಕೊಡಗು ವಿಧಾನ ಪರಿಷತ್ ಚುನಾವಣೆಯಿಂದ ಸಾಬೀತಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಲು ಅಣ್ಣ-ತಂಗಿಯನ್ನೇ ಮದುವೆಯಾದ!

    ಇದೇ ವೇಳೆ ಕಾಂಗ್ರೆಸ್ ಬೆಂಬಲ ನೀಡಿರುವ ವಿಚಾರವಾಗಿ ಮಾತನಾಡಿದ ಅವರು, ಮಗನಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದೇನೆ ಹೊರತು ಬಿಜೆಪಿ ವಿರುದ್ಧ ಹೇಳಿಕೆ ನೀಡಿಲ್ಲ. ಹಾಸನದ ಎಂಎಲ್‌ಸಿ ಚುನಾವಣೆಯಲ್ಲಿ ನಾಯಕರ ಕೊರತೆಯೇ ಎರಡು ಪಕ್ಷಗಳು ಹೀನಾಯವಾಗಿ ಸೋಲಲು ಕಾರಣವಾಗಿದೆ ಎಂದರು. ಇದನ್ನೂ ಓದಿ: ಕೊಡಗಿನ ಗ್ರಾಮವೊಂದರಲ್ಲಿ ಪುರಾತನ ಈಶ್ವರ ಕೆತ್ತನೆ ಕಲ್ಲುಗಳು ಪತ್ತೆ

    ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ತಟಸ್ಥವಾಗಿದ್ದೆ, ಯಾರನ್ನೂ ಬೆಂಬಲಿಸಿಲ್ಲ. ನಾನು ಬಿಜೆಪಿಯಲ್ಲಿದ್ದೇನೆ ಅಂಥಾ ನನಗೆ ಅನ್ನಿಸುತ್ತದೆ. ಆದರೆ ಪಕ್ಷ ಏನು ಹೇಳುತ್ತದೆ ಎನ್ನುವುದು ಗೊತ್ತಿಲ್ಲ. ಅಧಿಕೃತವಾಗಿ ಬಿಜೆಪಿ ಪಕ್ಷದಲ್ಲಿದ್ದೇನೆ ಎಂದರು. ಇದನ್ನೂ ಓದಿ: ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕೆ ಜಾಲ ಪತ್ತೆ- ಗೇಡೌನ್‌ ಮೇಲೆ ಅಧಿಕಾರಿಗಳ ದಾಳಿ

  • ಬಿಎಸ್‍ವೈ ಹೇಳಿದಂತೆ ಡಿಕೆಶಿಯನ್ನ ಅಪ್ಪ-ಮಕ್ಕಳು ಬೀದಿಯಲ್ಲಿ ನಿಲ್ಲಿಸಿದ್ದಾರೆ: ಎ.ಮಂಜು

    ಬಿಎಸ್‍ವೈ ಹೇಳಿದಂತೆ ಡಿಕೆಶಿಯನ್ನ ಅಪ್ಪ-ಮಕ್ಕಳು ಬೀದಿಯಲ್ಲಿ ನಿಲ್ಲಿಸಿದ್ದಾರೆ: ಎ.ಮಂಜು

    – ಕೆಎಂಎಫ್ ನಲ್ಲಿ ಭಾರೀ ಹಗರಣ
    – ರೇವಣ್ಣ ವರ್ಗಾವಣೆ ಮಂತ್ರಿ

    ಹಾಸನ: ಸದನದಲ್ಲಿ ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಹೇಳಿದಂತೆ ಇಂದು ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಅಪ್ಪ-ಮಕ್ಕಳು ಮುಂಬೈ ಬೀದಿಯಲ್ಲಿ ನಿಲ್ಲಿಸಿದ್ದಾರೆ ಎಂದು ಮಾಜಿ ಸಚಿವ ಎ.ಮಂಜು ಹೇಳಿದ್ದಾರೆ.

    ನಗರದಲ್ಲಿ ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಪ್ಪ-ಮಕ್ಕಳ ಜೊತೆ ಹೋದರೆ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಯಾವುದೋ ಕಾಲದಿಂದಲೂ ಹೇಳಲಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಈ ಬಗ್ಗೆ ನೇರವಾಗಿ ಹೇಳಿದ್ದೆ. ಈಗ ಅವರು ಇದನ್ನು ಅರ್ಥೈಸಿಕೊಂಡಂತೆ ಕಾಣಿಸುತ್ತಿದೆ. ಆದರೆ ಈಗಲೂ ಕೂಡ ಸಿದ್ದರಾಮಯ್ಯ ಅವರ ಮೇಲೆಯೇ ಆರೋಪ ಮಾಡಲಾಗುತ್ತಿದೆ. ಜೆಡಿಎಸ್ ಪಕ್ಷದಿಂದ ಹೋದ ಶಾಸಕರ ಬಗ್ಗೆ ಮಾತನಾಡುತ್ತಿಲ್ಲ ಎಂದರು.

    ಇದೇ ಸಂದರ್ಭದಲ್ಲಿ ಕೆಎಂಎಫ್ ನಲ್ಲಿ ಭಾರೀ ಹಗರಣ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಈ ಹಗರಣಗಳು ಹಾಸನ ಜಿಲ್ಲೆಯ ರೈತರಿಗೆ ಮಾರಕವಾಗಿದೆ. ಕೆಎಂಎಫ್ ಆಡಳಿತ ಮಂಡಳಿಯಿಂದ ಒಂದು ಲೀಟರ್ ಗೆ 23 ರೂ. ನೀಡುತ್ತಿದೆ. ಮಂಡ್ಯ, ಮೈಸೂರಿನಲ್ಲಿ 25 ರೂ. ಲೀಟರ್ ನೀಡಲಾಗುತ್ತಿದೆ. ಒಬ್ಬ ರೈತನಿಗೆ ಎರಡು ರೂಪಾಯಿ ಕಡಿಮೆ ಹಣ ನೀಡುತ್ತಿದ್ದಾರೆ. ಪ್ರತಿ ದಿನ 10 ಲಕ್ಷ ಲೀಟರ್ ಹಾಲು ಸಂಗ್ರಹಣೆ ಆಗುತ್ತಿದೆ. ದಿನಕ್ಕೆ 20 ಲಕ್ಷ ರೂ. ತಿಂಗಳಿಗೆ 6 ಕೋಟಿ ರೂ. ರೈತರಿಗೆ ನಷ್ಟ ಆಗುತ್ತಿದೆ ಎಂದರು.

    ಸಚಿವ ರೇವಣ್ಣ ಅವರಿಗೆ ಕೆಎಂಎಫ್ ಮೇಲೆ ವ್ಯಾಮೋಹವಿದೆ. ಅದು ಕೂಡ ಸರ್ಕಾರ ಅಭದ್ರತೆಗೆ ಇದು ಒಂದು ಕಾರಣವಾಗಿದ್ದು, ಆದರೂ ಅವರು ತಮ್ಮ ಹಳೇ ಚಾಳಿ ಬಿಟ್ಟಿಲ್ಲ. ಸರ್ಕಾರ ಸಂಕಷ್ಟದಲ್ಲಿದ್ದರೂ ಲೋಕೋಪಯೋಗಿ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಸಚಿವರ ಸ್ಥಾನ ಬದಲಾಗಿದ್ದು, ಅವರು ವರ್ಗಾವಣೆ ಮಂತ್ರಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ಸುಪ್ರೀಂಕೋರ್ಟ್ ನ ಎಲ್ಲಾ ಆದೇಶಗಳನ್ನು ಗಾಳಿಗೆ ತೂರಿ ಬಡ್ತಿ ನೀಡಿ ವರ್ಗಾವಣೆ ಮಾಡಲಾಗುತ್ತಿದೆ. ಇದಕ್ಕೆ ರಾಜ್ಯಪಾಲರು ಕೂಡಲೇ ತಡೆ ನೀಡಬೇಕು ಎಂದು ಒತ್ತಾಯಿಸಿದರು.

    ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯಲ್ಲಿ ತನ್ನ ಸ್ಥಾನಗಳನ್ನು ಕಳೆದುಕೊಂಡಿದೆ. ಅಲ್ಲದೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದಿಂದ ಅಭಿವೃದ್ಧಿಯಾಗಲ್ಲ ಎಂದು ಜನ ಮನಗಂಡಿದ್ದಾರೆ. ಬಿಜೆಪಿ ಸರ್ಕಾರ ಮುಂದಿನ ದಿನಗಳಲ್ಲಿ ಜನಪರವಾದ ಕೆಲಸವನ್ನು ಮಾಡುತ್ತದೆ. ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಯು ಟರ್ನ್ ರಾಜಕಾರಣಿಗಳಲ್ಲಿ ಎಚ್‍ಡಿಡಿ ಮೊದಲಿಗರು: ಎ. ಮಂಜು

    ಯು ಟರ್ನ್ ರಾಜಕಾರಣಿಗಳಲ್ಲಿ ಎಚ್‍ಡಿಡಿ ಮೊದಲಿಗರು: ಎ. ಮಂಜು

    ಹಾಸನ: ದೇವೇಗೌಡರನ್ನು ಕಾಂಗ್ರೆಸ್ ಪ್ರಧಾನಿಯನ್ನಾಗಿ ಮಾಡಿದೆ. ಆದರೆ ಎಚ್‍ಡಿಡಿ ಅವರು ಯು ಟರ್ನ್ ರಾಜಕಾರಣಿಗಳಲ್ಲಿ ಮೊದಲಿಗರಾಗಿದ್ದು, ಐದು ಬಾರಿ ಸ್ಪರ್ಧೆ ಮಾಡಲ್ಲ ಎಂದು ಹೇಳಿ ಮಾಡಿದ್ದಾರೆ. ಆದ್ದರಿಂದ ಈ ಬಾರಿಯೂ ಅವರು ಮಾಡುತ್ತಾರ ಕಾದು ನೋಡಬೇಕು. ಎಚ್‍ಡಿಡಿ ಬಿಟ್ಟು ಬೇರೆ ಅವರು ಸ್ಪರ್ಧೆ ಮಾಡಿದರೆ ನಮ್ಮ ವಿರೋಧ ಇರುತ್ತದೆ ಎಂದು ಮಾಜಿ ಸಚಿವ ಎ ಮಂಜು ಹೇಳಿದ್ದಾರೆ.

    ದೇಶದಲ್ಲಿ ಇಂದಿರಾ ಗಾಂಧಿ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರನ್ನ ವಿರೋಧ ಮಾಡುತ್ತ ಎಚ್‍ಡಿಡಿ ರಾಜಕೀಯವಾಗಿ ಬೆಳೆದಿದ್ದಾರೆ. ಆದರೆ ಅವರೇ ಇಂದು ತಮ್ಮ ಕುಟುಂಬದವರಿಗೆ ಟಿಕೆಟ್ ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಅಲ್ಲದೇ ಮೈತ್ರಿ ಧರ್ಮದಲ್ಲಿ ಹಾಸನ ಹಾಗೂ ಮಂಡ್ಯ ಎರಡರಲ್ಲಿ ಒಂದು ನಮಗೆ ಕೊಡಬೇಕು. ಆದರೆ ಈ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಆಗದೆ ಸಚಿವ ಸಾರಾ ಮಹೇಶ್ ಅಭ್ಯರ್ಥಿ ಘೋಷಣೆ ತಪ್ಪು. ದೇವೇಗೌಡರು ಮಕ್ಕಳು ಮತ್ತು ಸೊಸೆ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಆದರೆ ಪಕ್ಷದಲ್ಲಿ ಇರುವ 2ನೇ ಹಂತದ ನಾಯಕರ ಗತಿ ಏನು ಎಂದು ಕಿಡಿಕಾರಿದರು.

    ಇದೇ ವೇಳೆ ಮಂಡ್ಯ ಕ್ಷೇತ್ರವನ್ನು ಅಂಬರೀಶ್ ಕುಟುಂಬಕ್ಕೆ ಬಿಟ್ಟು ಕೊಡಲು ಒತ್ತಾಯ ಮಾಡುತ್ತೇವೆ. ಸುಮಲತಾ ಅವರೇ ಅಭ್ಯರ್ಥಿ ಮಾಡಬೇಕು ಎಂಬುವುದು ನಮ್ಮ ಒತ್ತಾಯ. ನಾನು ಹಾಸನ ಬಿಟ್ಟು ಎಲ್ಲಿಯೂ ಹೋಗಲ್ಲ. ದೇವೇಗೌಡರ ಸ್ಪರ್ಧೆ ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬಿ ಪುತ್ರ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ: ರಾಜಕೀಯ ತಂತ್ರಗಾರಿಕೆಯ ಬಗ್ಗೆ ಎ ಮಂಜು ಮಾತು

    ಅಂಬಿ ಪುತ್ರ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ: ರಾಜಕೀಯ ತಂತ್ರಗಾರಿಕೆಯ ಬಗ್ಗೆ ಎ ಮಂಜು ಮಾತು

    ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರವನ್ನು ಜೆಡಿಎಸ್ ಕೇಳಿದರೆ, ಮಂಡ್ಯ ಕ್ಷೇತ್ರವನ್ನು ನಮಗೆ ಬಿಟ್ಟುಕೊಡಬೇಕು ಎಂಬ ಬೇಡಿಕೆ ಇದೆ ಎಂದು ಮಾಜಿ ಸಚಿವ, ಕೈ ನಾಯಕ ಎ. ಮಂಜು ಹೇಳಿದ್ದಾರೆ.

    ಕೆಲ ಆಯ್ದು ಮಾಜಿ ಶಾಸಕರು ಹಾಗೂ ಸಚಿವರ ಜೊತೆ ತಮ್ಮ ನಿವಾಸದಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹಾಸನದಲ್ಲಿ ಸದ್ಯ ಜೆಡಿಎಸ್ ಸಂಸದರಿದ್ದರೆ, ಮಂಡ್ಯದಲ್ಲಿ ನಮ್ಮ ಸಂಸದರಿದ್ದಾರೆ. ಹಾಸನ ಕ್ಷೇತ್ರವನ್ನು ಅವರು ಕೇಳಿದರೆ ನಮಗೆ ಮಂಡ್ಯ ಬಿಟ್ಟು ಕೊಡಬೇಕೆಂಬ ಬೇಡಿಕೆ ನಮ್ಮಲಿದೆ. ನಮ್ಮ ಪಕ್ಷದ ನಾಯಕರಾದ ಅಂಬರೀಶ್ ಅವರು ಈಗ ಇಲ್ಲ, ಆದ್ದರಿಂದ ಅವರ ಮಗನಿಗೆ ಟಿಕೆಟ್ ನೀಡಲು ಕೇಳುತ್ತೇವೆ. ಆದರೆ ಈ ಬಗ್ಗೆ ಅಂತಿಮ ತೀರ್ಮಾನವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದರು.

    ಜೆಡಿಎಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ 12 ಸ್ಥಾನಗನ್ನು ಕೇಳಿರುವ ವಿಚಾರ ಅವರ ಬೇಡಿಕೆಗೆ ಸಂಬಂಧಿಸಿದೆ. ಅವರು 15 ಸ್ಥಾನಗಳನ್ನು ಕೇಳಿದರೂ ಕೂಡ ತೀರ್ಮಾನ ಮಾಡುವುದು ಹೈಕಮಾಂಡ್ ಮಾತ್ರ. ಆದ್ದರಿಂದ ಇದು ಕೂಡ ಅವರ ನಿರ್ಧಾರಕ್ಕೆ ಅಂತಿಮವಾಗುತ್ತದೆ. ಅಲ್ಲದೇ ನಿಗಮ ಮಂಡಳಿ ನೇಮಕವೂ ಕೂಡ ಪಕ್ಷದ ಮುಖಂಡರ ಸೂಚನೆಯಂತೆಯೇ ಆಗಿದೆ. ಅವರ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

    ಮಾಜಿ ಸಚಿವರ ನಿವಾಸದಲ್ಲಿ ನಡೆದ ಸಭೆಗೆ ಕುರಿತು ಪ್ರತಿಕ್ರಿಯೆ ನೀಡಿದ ಮಂಜು ಅವರು, ಇದು ಕೇವಲ ಆಪ್ತ ಗೆಳೆಯರ ಸಭೆ ಮಾತ್ರ ಸಾಮಾನ್ಯವಾಗಿ ಭೇಟಿ ಮಾಡುತ್ತೇವೆ ಅಷ್ಟೇ ಎಂದರು. ಸಭೆಯಲ್ಲಿ ಕಾಂಗ್ರೆಸ್ ಮುಖಂಡರದ ಟಿ.ಬಿ ಜಯಚಂದ್ರ, ಮಹದೇವಪ್ಪ, ಚಲುವರಾಯಸ್ವಾಮಿ, ಪಿರಿಯಪಟ್ಟಣ ಮಾಜಿ ಶಾಸಕರಾದ ವೆಂಕಟೇಶ್, ಮಂಜುನಾಥ್ ಸೇರಿದಂತೆ ಕಳೆದ ಚುನಾವಣೆಯಲ್ಲಿ ಸೋತ ಮೈಸೂರು, ಹಾಸನ, ಮಂಡ್ಯ ಹಾಗೂ ತುಮಕೂರು ಭಾಗದ ಮಾಜಿ ಶಾಸಕರು ಹಾಗೂ ಸಚಿವರುಗಳು ಭಾಗವಹಿಸಿದ್ದರು. ಈ ವೇಳೆ ಜೆಡಿಎಸ್ ಪ್ರಾಬಲ್ಯ ಇರುವ ಜಿಲ್ಲೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲಾಗುತ್ತಿರುವ ದೌರ್ಜನ್ಯ ಸೇರಿದಂತೆ ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv