Tag: ಮಾಜಿ ಸಚಿವರು

  • ಸರ್ಕಾರ ಬಿದ್ರೂ ಮನೆ ಖಾಲಿ ಮಾಡದ ಮಾಜಿ ಸಚಿವರು

    ಸರ್ಕಾರ ಬಿದ್ರೂ ಮನೆ ಖಾಲಿ ಮಾಡದ ಮಾಜಿ ಸಚಿವರು

    ಬೆಂಗಳೂರು: ಸರ್ಕಾರ ಹೋದ ಮೇಲೂ ಮಾಜಿ ಸಚಿವರು ಸರ್ಕಾರಿ ಬಂಗಲೆಯಲ್ಲೇ ಠಿಕಾಣಿ ಹೂಡಿದ್ದಾರೆ.

    ಸಮ್ಮಿಶ್ರ ಸರ್ಕಾರ ಬಿದ್ದು ಹೋದ ಮೇಲೆ ಅರ್ಧಕ್ಕರ್ಧ ಮಾಜಿ ಮಂತ್ರಿಗಳು ಇನ್ನು ಸರ್ಕಾರಿ ಬಂಗಲೆ ಖಾಲಿ ಮಾಡಿಲ್ಲ. ಅಲ್ಲದೆ ಲಕ್ಷಾಂತರ ರೂ. ಖರ್ಚು ಮಾಡಿ ವಾಸ್ತು ಪ್ರಕಾರ ರೆಡಿ ಮಾಡಿದ ಬಂಗಲೆ ಬಿಡುವುದಕ್ಕೆ ಕಷ್ಟ ಆಗುತ್ತಿದೆ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.

    ಸದ್ಯ ಹೊಸ ಸಚಿವರಿಗೆ ಬಂಗಲೆ ಕೊಡುವುದಕ್ಕೆ ಅಧಿಕಾರಿಗಳು ಕಷ್ಟಪಡುತ್ತಿದ್ದಾರೆ. ಬಂಗಲೆ ಖಾಲಿ ಮಾಡಲು ಸೂಚಿಸಿದರು ಮಾಜಿ ಸಚಿವರು ಇನ್ನು ಬಂಗಲೆ ಖಾಲಿ ಮಾಡಿಲ್ಲ. ಮಾಜಿ ಮಂತ್ರಿಗಳು ಸರ್ಕಾರಿ ಬಂಗಲೆಯಲ್ಲಿ ಇರುವುದರಿಂದ ಹಾಲಿ ಮಂತ್ರಿಗಳು ಬಂಗಲೆ ಇಲ್ಲದೆ ಪರದಾಡುತ್ತಿದ್ದಾರೆ.

    ಸದ್ಯ ಅಧಿಕಾರಿಗಳು ಇದುವರೆಗೂ 3-4 ಸಚಿವರಿಗೆ ಮಾತ್ರ ಬಂಗಲೆ ನೀಡಿದ್ದಾರೆ. ಅಧಿಕಾರಿಗಳು ಬಂಗಲೆ ಬಿಟ್ಟು ಹೋಗ್ರಿ ಎಂದರು ಸಹ ಮಾಜಿ ಸಚಿವರು ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿ ಹೋಗುತ್ತಿಲ್ಲ. ಇದನ್ನೂ ಓದಿ: ನಾವು ಮನೆ ಖಾಲಿ ಮಾಡಲ್ಲ – ಎಚ್ಚರಿಕೆಗೆ ಡೋಂಟ್‍ಕೇರ್ ಎಂದ 80 ಮಾಜಿ ಸಂಸದರು

    ಬಂಗಲೆ ಖಾಲಿ ಮಾಡದ ಮಾಜಿ ಸಚಿವರು:
    * ಸಿದ್ದರಾಮಯ್ಯ- ಮಾಜಿ ಸಿಎಂ, ಕಾವೇರಿ ಬಂಗಲೆ.
    * ಪರಮೇಶ್ವರ್ – ಮಾಜಿ ಡಿಸಿಎಂ, ಸದಾಶಿವನಗರ ಬಂಗಲೆ.
    * ಎಚ್.ಡಿ.ರೇವಣ್ಣ- ಸೂಪರ್ ಸಿಎಂ, ಕುಮಾರಕೃಪ ಬಂಗಲೆ.
    * ಡಿಕೆ ಶಿವಕುಮಾರ್- ಕ್ರಸೆಂಟ್ ರೋಡ್ ಬಂಗಲೆ.
    * ಆರ್.ವಿ.ದೇಶಪಾಂಡೆ- ರೇಸ್ ಕೋರ್ಸ್ ಬಂಗಲೆ.
    * ಮನಗುಳಿ – ಸೆವೆನ್ ಮಿನಿಸ್ಟರ್ ಕ್ವಾಟ್ರಸ್.
    * ಬಂಡೆಪ್ಪ ಕಾಶಂಪೂರ್- ಸೆವೆನ್ ಮಿನಿಸ್ಟರ್ ಕ್ವಾಟ್ರಸ್.
    * ರಮೇಶ್ ಜಾರಕಿಹೋಳಿ- ಸೆವೆನ್ ಮಿನಿಸ್ಟರ್ ಕ್ವಾಟ್ರಸ್.

  • ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ರಾಮನಗರ ಜಿಲ್ಲೆಯವರೇ ಅಭ್ಯರ್ಥಿ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು

    ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ರಾಮನಗರ ಜಿಲ್ಲೆಯವರೇ ಅಭ್ಯರ್ಥಿ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು

    ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸುತ್ತೇವೆ. ಆ ಅಭ್ಯರ್ಥಿ ರಾಮನಗರ ಜಿಲ್ಲೆಯವರೇ ಆಗಿರುತ್ತಾರೆ ಎಂದು ಬಿಜೆಪಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದ್ದಾರೆ.

    ನಗರದಲ್ಲಿ ನಡೆದ ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಬೂತ್‍ಮಟ್ಟದ ಕಾರ್ಯಕರ್ತರ, ಮುಖಂಡರ ಸಭೆಯ ಬಳಿಕ ಮಾತನಾಡಿದ ಮಾಜಿ ಸಚಿವರು, ಜೆಡಿಎಸ್‍ನಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನವಿದೆ. ಜೆಡಿಎಸ್‍ಗೆ ಬಿಟ್ಟುಕೊಟ್ಟ 8 ಕ್ಷೇತ್ರಗಳಲ್ಲೂ ಕಾಂಗ್ರೆಸ್‍ನ ಸ್ಥಳೀಯ ಮುಖಂಡರು, ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಕೆಲವು ಕಡೆ ಅಭ್ಯರ್ಥಿಗಳೇ ಇಲ್ಲ. ಮತ್ತೆ ಕೆಲವು ಕಡೆ ಹೊಂದಾಣಿಕೆಯೇ ಇಲ್ಲ ಎಂದು ಲೇವಡಿ ಮಾಡಿದರು.

    ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಅಭ್ಯರ್ಥಿಯೇ ಇಲ್ಲ. ತುಮಕೂರನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿದ್ದಕ್ಕೆ ಕಾಂಗ್ರೆಸ್‍ನ ವಿರೋಧ ವ್ಯಕ್ತವಾಗಿದೆ. ರಾಜ್ಯಕ್ಕೆ ಭೇಟಿ ನೀಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಕಾಂಗ್ರೆಸ್-ಜೆಡಿಎಸ್ ದೋಸ್ತಿಯು 13 ಸೀಟಿಗಿಂತ ಹೆಚ್ಚು ಗೆಲ್ಲಲ್ಲ ಎಂದು ಈಗಾಗಲೇ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ಕೊಟ್ಟಿದ್ದಾರಂತೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿಯೇ ಹೆಚ್ಚು ಕ್ಷೇತ್ರದಲ್ಲಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಟ್ಟಿ ಬಿಡುಗಡೆಗೂ ಮುನ್ನ ನಾನೇ ಅಭ್ಯರ್ಥಿ ಎಂದು ಘೋಷಿಸಿಕೊಳ್ಳಲು ಸಾಧ್ಯವಿಲ್ಲ. ಈ ಹಿಂದೆ ತಮಗೆ ಸಾಕಷ್ಟು ಕಹಿ ಅನುಭವವಾಗಿದೆ. ಹೀಗಾಗಿ ಪಕ್ಷದ ವರಿಷ್ಠರು ಇಂದು ಸಾಯಂಕಾಲ ಇಲ್ಲವೇ ನಾಳೆ ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.

    ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರು ಮಾತನಾಡಿ, ದೇಶದಲ್ಲಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಇದೆ. ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು, ದೇಶವನ್ನು ಮುನ್ನಡೆಸಲು ಅವರೇ ಸಮರ್ಥ ವ್ಯಕ್ತಿ ಎಂದು ಯುವಜನತೆ ಬಯಸುತ್ತಿದ್ದಾರೆ ಎಂದ ಅವರು, ಪಕ್ಷ ಟಿಕೆಟ್ ಯಾರಿಗೆ ಕೊಡುತ್ತದೆ ಎನ್ನುವುದು ನನಗೆ ಗೊತ್ತಿಲ್ಲ. ಪಟ್ಟಿಬಿಡುಗಡೆಯಾದ ಮೇಲೆ ಯಾರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವುದು ತಿಳಿಯುತ್ತದೆ ಎಂದರು.

  • ಮಾಜಿ ಸಚಿವ ಖಮರುಲ್ ಸಾವಿಗೆ ಮಲ್ಲಿಕಾರ್ಜುನ ಖರ್ಗೆ ಕಾರಣ: ಬಾಬುರಾವ್ ಚಿಂಚನಸೂರು

    ಮಾಜಿ ಸಚಿವ ಖಮರುಲ್ ಸಾವಿಗೆ ಮಲ್ಲಿಕಾರ್ಜುನ ಖರ್ಗೆ ಕಾರಣ: ಬಾಬುರಾವ್ ಚಿಂಚನಸೂರು

    ಕಲಬುರಗಿ: ಮಾಜಿ ಸಚಿವ ಖಮರುಲ್ ಇಸ್ಲಾಂ ಸಾವಿಗೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೇ ಕಾರಣ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಗಂಭೀರವಾಗಿ ಆರೋಪಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕಲಬುರಗಿ ಉತ್ತರ ಕ್ಷೇತ್ರದ ಖಮರುಲ್ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಸಚಿವ ಸಂಪುಟ ವಿಸ್ತರಣೆ ವೇಳೆ ನನ್ನನ್ನು ಹಾಗೂ ಖಮರುಲ್ ಇಸ್ಲಾಂ ಅವರನ್ನು ಕೈಬಿಡುವಂತೆ ಮಲ್ಲಿಕಾರ್ಜುನ ಖರ್ಗೆ ಹೈಕಮಾಂಡ್ ಮೂಲಕ ಒತ್ತಡ ಹೇರಿದ್ದರು. ಈ ಮೂಲಕ ನಮ್ಮನ್ನು ಸಚಿವಸ್ಥಾನದಿಂದ ಕೆಳಗೆ ಇಳಿಸಿ ತಮ್ಮ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಮಂತ್ರಿ ಮಾಡಿದರು ಎಂದು ದೂರಿದರು.

    ಸಚಿವ ಸ್ಥಾನ ಕೈತಪ್ಪಿದ್ದರಿಂದ ಖಮರುಲ್ ಅವರು ಮಾನಸಿಕವಾಗಿ ನೊಂದಿದ್ದರು. ಇದಾದ ಕೆಲವೇ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು. ಒಂದು ವೇಳೆ ಸಚಿವ ಸ್ಥಾನದಲ್ಲಿ ಖಮರುಲ್ ಅವರು ಇದ್ದಿದ್ದರೆ ಹೆಚ್ಚುಕಾಲ ಬಾಳುತ್ತಿದ್ದರು. ಹೀಗಾಗಿ ಖಮರುಲ್ ಅವರ ಸಾವಿಗೆ ಮಲ್ಲಿಕಾರ್ಜುನ ಖರ್ಗೆ ಅವರೇ ಕಾರಣ ಎಂದು ಕಿಡಿಕಾರಿದರು.

    ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ, ಅಷ್ಟೇ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲುವುದು ಸತ್ಯ ಎಂದು ಚಿಂಚನಸೂರ್ ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv