Tag: ಮಾಜಿ ಶಾಸಕ

  • ಬಿಜೆಪಿ ಮಾಜಿ ಶಾಸಕ ಸಿಎಸ್ ಮುತ್ತಿನಪೆಂಡಿಮಠ ವಿಧಿವಶ

    ಬಿಜೆಪಿ ಮಾಜಿ ಶಾಸಕ ಸಿಎಸ್ ಮುತ್ತಿನಪೆಂಡಿಮಠ ವಿಧಿವಶ

    ಗದಗ: ಬಿಜೆಪಿ ಹಿರಿಯ ಮುಖಂಡ, ಮಾಜಿ ಶಾಸಕ ಸಿ.ಎಸ್ ಮುತ್ತಿನಪೆಂಡಿಮಠ (90) ವಿಧಿವಶರಾಗಿದ್ದಾರೆ.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಸ್ವಗೃಹದಲ್ಲಿ ವಿಧಿವಶರಾದರು. 2 ಬಾರಿ ಗದಗ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಇವರು, 1978 ರಲ್ಲಿ ಜನತಾ ಪಾರ್ಟಿಯಿಂದ ಹಾಗೂ 1985 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು.

    2004 ರಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಅವರು ಮಲಪ್ರಭಾ, ಘಟಪ್ರಭಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಮಾಜಿ ಶಾಸಕರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಸೇರಿ ಅಪಾರ ಬಂಧು ಬಳಗ ಆಗಲಿದ್ದು, ನಾಳೆ ಬೆಳಗ್ಗೆ 11ಕ್ಕೆ ಗದಗ ನಗರದ ವೀರಶೈವ ರುದ್ರ ಭೂಮಿಯಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ.

  • ಮತದಾರರಿಗೆ ಹಣ ಹಂಚುತ್ತಿದ್ದಾಗಲೇ ಸಿಕ್ಕಿ ಬಿದ್ದ ಜೆಡಿಎಸ್ ಮುಖಂಡನ ಪುತ್ರ

    ಮತದಾರರಿಗೆ ಹಣ ಹಂಚುತ್ತಿದ್ದಾಗಲೇ ಸಿಕ್ಕಿ ಬಿದ್ದ ಜೆಡಿಎಸ್ ಮುಖಂಡನ ಪುತ್ರ

    – 1.39 ಲಕ್ಷ ರೂ. ನಗದು ಜಪ್ತಿ ಮಾಡಿದ ಐಟಿ ಅಧಿಕಾರಿಗಳು

    ಶಿವಮೊಗ್ಗ: ಮಾಜಿ ಶಾಸಕ, ಜೆಡಿಎಸ್ ಮುಖಂಡ ಅಪ್ಪಾಜಿ ಗೌಡ ಅವರ ಪುತ್ರ ಅಜಿತ್ ಕುಮಾರ್ ಮತದಾರರಿಗೆ ಹಣ ಹಂಚುತ್ತಿದ್ದಾಗಲೇ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

    ಭದ್ರಾವತಿಯ ಎಂಪಿಎಂ – ಸುರಗಿ ತೋಪಿನಲ್ಲಿ ಅಜಿತ್ ಕುಮಾರ್ ಹಣ ಹಂಚುತ್ತಿದ್ದರು. ಈ ಕುರಿತು ಐಟಿ ಅಧಿಕಾರಿಗಳಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಹೀಗಾಗಿ ಎಂಪಿಎಂ ಠಾಣೆಯ ಪೊಲೀಸರ ಸಹಕಾರದಿಂದ ದಾಳಿ ಮಾಡಿದ ಅಧಿಕಾರಿಗಳು 1.39 ಲಕ್ಷ ರೂ. ನಗದು ಹಣವನ್ನು ಜಪ್ತಿ ಮಾಡಿದ್ದಾರೆ. ಇದನ್ನು ಓದಿ: ಶಿವಮೊಗ್ಗಕ್ಕೆ ಹೊರಟಿದ್ದ ಕಾರಿನ ಸ್ಟೆಪ್ನಿಯಲ್ಲಿತ್ತು 2.30 ಕೋಟಿ ರೂ.!

    ಅಜಿತ್ ಕುಮಾರ್ ಬೆಳಗ್ಗೆಯಿಂದಲೇ ಭದ್ರಾವತಿಯ ವಿವಿಧ ಗ್ರಾಮಗಳಿಗೆ ತೆರಳಿ ಮತದಾರರಿಗೆ ಹಣ ಹಂಚುತ್ತಿದ್ದರು. ಮಧ್ಯಾಹ್ನ ಎಂಪಿಎಂ- ಸುರಗಿ ತೋಪಿಗೆ ಬಂದಾಗ ಐಟಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

    ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮತದಾನ ಮಂಗಳವಾರ ನಡೆಯಲಿದ್ದು, ಕುರುಡು ಕಾಂಚಣ ಭಾರೀ ಸದ್ದು ಮಾಡುತ್ತಿದೆ. ಬೆಂಗಳೂರಿನಿಂದ ಶಿವಮೊಗ್ಗ ಹಾಗೂ ಭದ್ರಾವತಿಗೆ ಕಾರಿನ ಸ್ಟೆಪ್ನಿ ಟೈರ್ ಒಳಗಡೆ ಸಾಗಿಸುತ್ತಿದ್ದ 2.30 ಕೋಟಿ ರೂ.ವನ್ನು ಶನಿವಾರ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ಪ್ರಕರಣಕ್ಕೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಭದ್ರಾವತಿ ಮಾಜಿ ಶಾಸಕ ಅಪ್ಪಾಜಿ ಗೌಡ ಅವರಿಗೆ ಐಟಿಯಿಂದ ನೋಟಿಸ್ ಜಾರಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಾಜಿ ಶಾಸಕರ ಓರ್ವ ಆಪ್ತನನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.

  • ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‍ಐಆರ್ ದಾಖಲು

    ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‍ಐಆರ್ ದಾಖಲು

    ತುಮಕೂರು: ಪ್ರಚೋದನಕಾರಿಯಾಗಿ ಭಾಷಣ ಮಾಡಿದ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದ ಬಿಜೆಪಿಯ ಮಾಜಿ ಶಾಸಕ ಸುರೇಶ್‍ಗೌಡ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಹೊನಸಿಗೆರೆ ಗ್ರಾಮದಲ್ಲಿ ನಡೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಸುರೇಶ್ ಗೌಡ ಅವರು, ಜೆಡಿಎಸ್ ಬಗ್ಗೆ ಜನರಲ್ಲಿ ದ್ವೇಷ ಹುಟ್ಟುವ ರೀತಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದರು. ಈ ಸಂಬಂಧ ವಿಚಕ್ಷಣಾದಳದ ಅಧಿಕಾರಿ ಡಿ.ಜಯರಾಮಣ್ಣ ಅವರು ಮಾಜಿ ಶಾಸಕರ ವಿರುದ್ಧ ಹೆಬ್ಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಮಾಜಿ ಶಾಸಕ ಸುರೇಶ್ ಗೌಡ ಅವರ ವಿರುದ್ಧ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 188, 505 (ಸಾರ್ವಜನಿಕ ಕೇಡಿಗೆ ಕಾರಣವಾಗುವ ಹೇಳಿಕೆ) ಅಡಿ ಎಫ್‍ಐಆರ್ ದಾಖಲಾಗಿದೆ.

    ಸುರೇಶ್‍ಗೌಡ ಹೇಳಿದ್ದೇನು?:
    ಒಂದೊಂದು ವೋಟು ಕೂಡ ಮುಖ್ಯ. ಯಾವುದಕ್ಕೂ ಎದೆಗುಂದದೆ ದೊಣ್ಣೆ ಹಿಡಿದು ನಿಂತುಕೊಳ್ಳಿ. ಯಾವನ್ ಬರ್ತಾನೋ ಬರಲಿ, ನನ್ಮಕ್ಳು ಜೆಡಿಎಸ್‍ನವರನ್ನು ಹೆದರಿಸಬೇಕು. ಅವರು ಮೋಸ ಮಾಡ್ತಾರೆ. ಅವರು ಕೌರವ ವಂಶಸ್ಥರು. ಅವರ ಮೇಲೆ ಯುದ್ಧ ಮಾಡಬೇಕಾದರೆ ಕೃಷ್ಣನಂತೆ ನಾನು ಇರುತ್ತೀನಿ. ನಿಂತ್ಕೊಂಡು ಯುದ್ಧ ಮಾಡಿ ಅವರನ್ನು ಸಂಹಾರ ಮಾಡೋಣ. ಅವರ ಟೆಕ್ನಿಕ್ಸ್ ನಂಗೆ ಗೊತ್ತಿದೆ ಎಂದು ಹೇಳಿದ್ದರು.

  • ಯಾವನ್ ಬರ್ತಾನೋ ಬರ್ಲಿ, ನನ್ಮಕ್ಳು ಜೆಡಿಎಸ್‍ನವರನ್ನ ಹೆದರಿಸ್ಬೇಕು: ಮಾಜಿ ಶಾಸಕ

    ಯಾವನ್ ಬರ್ತಾನೋ ಬರ್ಲಿ, ನನ್ಮಕ್ಳು ಜೆಡಿಎಸ್‍ನವರನ್ನ ಹೆದರಿಸ್ಬೇಕು: ಮಾಜಿ ಶಾಸಕ

    ತುಮಕೂರು: ಯಾವನ್ ಬರ್ತಾನೋ ಬರ್ಲಿ, ನನ್ಮಕ್ಳು ಜೆಡಿಎಸ್‍ನವರನ್ನ ಹೆದರಿಸ್ಬೇಕು ಎಂದು ಮಾಜಿ ಶಾಸಕ ಸುರೇಶ್ ಗೌಡ ಜೆಡಿಎಸ್ ವಿರುದ್ಧ ಗುಡುಗಿದ್ದಾರೆ.

    ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಸುರೇಶ್ ಗೌಡ ನಾಲಗೆ ಹರಿಬಿಟ್ಟಿದ್ದಾರೆ. ಒಂದೊಂದು ವೋಟು ಕೂಡ ಮುಖ್ಯ. ಯಾವುದಕ್ಕೂ ಎದೆಗುಂದದೆ ದೊಣ್ಣೆ ಹಿಡಿದು ನಿಂತುಕೊಳ್ಳಿ. ಯಾವನ್ ಬರ್ತಾನೋ ಬರಲಿ, ನನ್ಮಕ್ಳು ಜೆಡಿಎಸ್‍ನವರನ್ನು ಹೆದರಿಸಬೇಕು. ಅವರು ಮೋಸ ಮಾಡ್ತಾರೆ. ಅವರು ಕೌರವ ವಂಶಸ್ಥರು. ಅವರ ಮೇಲೆ ಯುದ್ಧ ಮಾಡಬೇಕಾದರೆ ಕೃಷ್ಣನಂತೆ ನಾನು ಇರುತ್ತೀನಿ. ನಿಂತ್ಕೊಂಡು ಯುದ್ಧ ಮಾಡಿ ಅವರನ್ನು ಸಂಹಾರ ಮಾಡೋಣ. ಅವರ ಟೆಕ್ನಿಕ್ಸ್ ನಂಗೆ ಗೊತ್ತಿದೆ ಎಂದು ಹೇಳಿದ್ದಾರೆ.

    ಗೌರಿಶಂಕರ್ ವಿರುದ್ಧ ವಾಗ್ದಾಳಿ:
    ಗೌರಿಶಂಕರ್ ನಮ್ ದುಡ್ಡೇ ಹೊಡೀತಾನೆ. ನಮ್ ದುಡ್ಡೇ ಹಂಚ್ತಾನೆ. ಅವನೇನು ಕೋಟ್ಯದೀಶ್ವರ ಅಲ್ಲ. ಅಪ್ಪ ಪೊಲೀಸ್ ಆಗಿದ್ದವನು. ಅವನೊಬ್ಬ ದೊಡ್ಡ ಕಳ್ಳ. ಗಣಿ ಧಣಿಯ 150 ಕೇಸಲ್ಲಿ ಲೂಟಿ ಹೊಡೆದಿದ್ದಾನೆ. ಇಂತಹ ಕಳ್ಳರನ್ನು ದೇವೇಗೌಡರು ಕರೆದುಕೊಂಡು ಬಂದು ನಾಟಿ ಮಾಡುತ್ತಾರೆ. ಚೆನ್ನಾಗಿ ಇಸ್ಕೊಳ್ಳಿ. ಚೆನ್ನಾಗಿ ತಿನ್ನಿ. ಎಲ್ಲಾ ಇಸ್ಕೊಂಡು ಬಿಜೆಪಿಗೆ ವೋಟು ಹಾಕಿ. ದುಡ್ಡು ಬಂದರೆ ಚೆನ್ನಾಗ್ ಇಸ್ಕೊಂಡು ತಿನ್ರಲೇ. ಅವನು ಕ್ಯಾನ್ವಸ್ ಗೆ ಬಂದರೆ ಊರಿನ ಒಳಗಡೆ ಬಿಡಬೇಡಿ. ನೀರ್ ಬಿಡಿಸ್ದಲೇ ಇರೋ ಕಳ್ಳ ಕಳ್ಳ ಎಂದು ಕೂಗಿ ಎಂದು ತಮ್ಮದೇ ಶೈಲಿಯಲ್ಲಿ ಕಿಡಿಕಾರಿದ್ದಾರೆ.

    ಅಲ್ಲದೆ ಸುರೇಶ್ ಗೌಡ ಅವರು ದೇವೇಗೌಡರು, ಚೆನ್ನಿಗಪ್ಪ, ಶಾಸಕ ಗೌರಿಶಂಕರ್ ವಿರುದ್ಧ ಕೂಡ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

  • ಎಚ್‍ಡಿಡಿ ಮತ್ತೊಮ್ಮೆ ಪ್ರಧಾನಿ? ಎಂ.ಟಿ.ಕೃಷ್ಣಪ್ಪ

    ಎಚ್‍ಡಿಡಿ ಮತ್ತೊಮ್ಮೆ ಪ್ರಧಾನಿ? ಎಂ.ಟಿ.ಕೃಷ್ಣಪ್ಪ

    ತುಮಕೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ದೈವಭಕ್ತರು. ಹೀಗಾಗಿ ದೈವ ಶಕ್ತಿಯಿಂದ ದೆಹಲಿಯಲ್ಲಿ ಉನ್ನತ ಸ್ಥಾನ ಅಲಂಕರಿಸಲಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಪರೋಕ್ಷವಾಗಿ ದೇವೇಗೌಡರು ಪ್ರಧಾನಿ ಆಗಬಹುದು ಎಂದು ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಮಾಜಿ ಶಾಸಕರು, ಎಚ್.ಡಿ.ದೇವೇಗೌಡ ಅವರು ತುಮಕೂರು ಕ್ಷೇತ್ರದಲ್ಲಿ ಹೆಚ್ಚು ಮತಗಳ ಅಂತರದಲ್ಲಿ ಜಯಗಳಿಸಿ ಸಂಸತ್‍ಗೆ ಹೋದರೆ ಒಂದು ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಿದೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕಾರ್ಯಕರ್ತರು ದೇವೇಗೌಡರ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿಕೊಂಡರು.

    ಹೇಮಾವತಿ ನದಿಯ ನೀರು ಹಂಚಿಕೆ ವಿಚಾರದಲ್ಲಿ ದೇವೇಗೌಡರಿಂದ ತುಮಕೂರಿಗೆ ಯಾವುದೇ ರೀತಿ ಅನ್ಯಾಯವಾಗಿಲ್ಲ. ಹೇಮಾವತಿಯ ನೀರು ಸರಿಯಾಗಿ ಹಂಚಿಕೆ ಆಗುತ್ತಿರಲಿಲ್ಲ. ಹೀಗಾಗಿ ಹೋರಾಟ ಮಾಡುತ್ತಿದ್ದೇವು. ಸುಖಾಸುಮ್ಮನೆ ಎಚ್.ಡಿ.ದೇವೇಗೌಡರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.

    ಹೇಮಾವತಿ ನದಿ ನೀರು ಹಂಚಿಕೆಯಲ್ಲಿ ಹಾಸನದ ರಾಜಕಾರಣಿಗಳಿಂದಲೂ ಯಾವುದೇ ರೀತಿಯ ತೊಂದರೆ ಆಗುತ್ತಿರಲಿಲ್ಲ. ಎರಡು ಜಿಲ್ಲೆಯ ಅಧಿಕಾರಿಗಳೇ ನಿರ್ಲಕ್ಷ್ಯ ತೋರುತ್ತಿದ್ದರು. ಹೀಗಾಗಿ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುತ್ತಿದ್ದೆವು. ಈಗ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಯಥೇಚ್ಛವಾಗಿ ಹರಿಯುತ್ತಿದೆ ಎಂದು ಎಂ.ಟಿ.ಕೃಷ್ಣಪ್ಪ ಅವರು, ದೇವೇಗೌಡರನ್ನು ಸಮರ್ಥಿಸಿಕೊಂಡರು.

  • ಮೈತ್ರಿ ಸರ್ಕಾರ ಉಳಿಸೋ ಶಕ್ತಿ ಡಿ.ಕೆ.ಶಿವಕುಮಾರ್: ಎಚ್‍ಡಿಕೆ

    ಮೈತ್ರಿ ಸರ್ಕಾರ ಉಳಿಸೋ ಶಕ್ತಿ ಡಿ.ಕೆ.ಶಿವಕುಮಾರ್: ಎಚ್‍ಡಿಕೆ

    – ರಾಮನಗರ ಕ್ಷೇತ್ರದ ಜನತೆ ನನ್ನ ಪ್ರಾಣ
    – ಸಂಕಷ್ಟದ ನಡುವೆ ಅಧಿಕಾರ ಮಾಡಿಕೊಂಡು ಹೋಗ್ತಿದ್ದೇನೆ

    ರಾಮನಗರ: ಆಪರೇಷನ್ ಕಮಲದಿಂದ ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಶಕ್ತಿ ನಮಗಿದೆ. ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನನ್ನ ಜೊತೆಗಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾತನಾಡಿದ ಸಿಎಂ, ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅವರು ಸರ್ಕಾರ ಬೀಳಿಸಲು ಅನೇಕ ಪ್ರಯತ್ನಗಳನ್ನು ನಡೆಸಿ ವಿಫಲರಾದರು. ಅವರು ನಮ್ಮ ಶಾಸಕರಿಗೆ 30-40 ಕೋಟಿ ರೂ. ಆಮಿಷ ಒಡ್ಡಿದ್ದರು. ಅಷ್ಟೊಂದು ಹಣವನ್ನು ಯೋಗೇಶ್ವರ್ ಅವರು ಎಲ್ಲಿಂದ ಸಂಪಾದನೆ ಮಾಡಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ ಎಂದು ಆರೋಪಿಸಿದರು.

    ಸಂಕಷ್ಟದ ನಡುವೆ ಅಧಿಕಾರ ಮಾಡಿಕೊಂಡು ಹೋಗುತ್ತಿರುವೆ ಎಂದು ಸಿಎಂ ಕುಮಾರಸ್ವಾಮಿ ಮತ್ತೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಂದಾಗಿನಿಂದಲೂ ಬಿಜೆಪಿಯವರು ಕಿರುಕುಳ ನೀಡುತ್ತಲೇ ಇದ್ದಾರೆ. ಜೊತೆಗೆ ಮಾಧ್ಯಮಗಳಲ್ಲಿ ಇಂದು, ನಾಳೆ ಸರ್ಕಾರ ಬೀಳುತ್ತೆ ಎಂದು ಪ್ರತಿ ದಿನ ಡೆಡ್‍ಲೈನ್ ಕೊಡುತ್ತಲೆ ಇದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

    ಹಳೇ ಮೈಸೂರು ಪ್ರಾಂತ್ಯದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಕುಮಾರಸ್ವಾಮಿ ಅವರು, ಹಳೇ ಮೈಸೂರು ಪ್ರಾಂತ್ಯದ ಜಿಲ್ಲೆಗಳಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಅಭಿವೃದ್ಧಿ ಮಾಡಲಾಗುವುದು. ಸಣ್ಣತನದ ಅಸೂಹೆ ಇರುವವರಿಗೆ ನಮ್ಮ ಯೋಜನೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಆಗಸ್ಟ್ ನಂತರ ಸರ್ಕಾರ ಪತನವಾಗುತ್ತದೆ ಎಂದು ಗಡುವು ನೀಡಿದ್ದಾರೆ ಎಂದು ಆರೋಪಿಸಿದರು.

    ಕ್ಷೇತ್ರದ ಜನತೆ ನನ್ನ ಪ್ರಾಣ. ಅವರ ಋಣ ತೀರಿಸುವ ಕೆಲಸ ನನ್ನ ಮೇಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ನನ್ನ ಬಳಿ ಹೇಳಿಕೊಳ್ಳಿ. ಅದನ್ನು ಈಡೇರಿಸಲು ನಾನು ಸಿದ್ಧನಿರುವೆ. ನಿಮ್ಮ ಮನೆಯ ಮಕ್ಕಳು ನಾವು. ನಾಡಿನ ಅಭಿವೃದ್ಧಿಗೆ ಕಟಿಬದ್ಧರಾಗಿದ್ದೇವೆ ಎಂದು ಹೇಳುವ ಮೂಲಕ ಕ್ಷೇತ್ರದ ಜನರ ಮನವೊಲಿಸಲು ಪ್ರಯತ್ನಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಸ್ತೆ ಅಪಘಾತದಲ್ಲಿ ಮಾಜಿ ಶಾಸಕ ದುರ್ಮರಣ

    ರಸ್ತೆ ಅಪಘಾತದಲ್ಲಿ ಮಾಜಿ ಶಾಸಕ ದುರ್ಮರಣ

    ಚಿಕ್ಕೋಡಿ: ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದತ್ತು ಹಕ್ಯಾಗೋಳ (78) ಹಾಗೂ ಮತ್ತೋರ್ವರು ಮೃತಪಟ್ಟಿದ್ದಾರೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರ ಸುರೇಶ್ ಈರಪ್ಪ ಗಡೇಕಾರ (50) ಗಂಭೀರವಾಗಿ ಗಾಯಗೊಂಡಿದ್ದು, ಸಂಕೇಶ್ವರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಘಟನೆಯ ವಿವರ?:
    ಕೆಲಸ ನಿಮಿತ್ತ ಮಾಜಿ ಶಾಸಕರು ಸಹಚರರ ಜೊತೆಗೆ ನಿಪ್ಪಣಿಯಿಂದ ಬೆಳಗಾವಿಗೆ ಬೈಕ್‍ನಲ್ಲಿ ತೆರಳುತ್ತಿದ್ದರು. ಈ ವೇಳೆ ಫೋನ್ ಕರೆ ಬಂದಿದೆ. ಹೀಗಾಗಿ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 4 ಬೈಕ್ ನಿಲ್ಲಿಸಿದ್ದರು. ಮಾತು ಮುಗಿಸಿ ಬೈಕ್ ಸ್ಟಾರ್ಟ್ ಮಾಡಿ ರಸ್ತೆಗೆ ಬರುತ್ತಿದ್ದಂತೆಯೇ ಹಿಂದುಗಡೆಯಿಂದ ವೇಗವಾಗಿ ಬಂದ ಲಾರಿ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಶಾಸಕರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸವಾರ ಸುರೇಶ್ ಈರಪ್ಪ ಗಡೇಕಾರ ಅವರನ್ನು ಸಂಕೇಶ್ವರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರನೂ ಮೃತಪಟ್ಟಿದ್ದಾರೆ.

    ಚಿಕ್ಕೋಡಿ ತಾಲೂಕಿನ ಕೆರೂರು ನಿವಾಸಿ ದತ್ತು ಹಕ್ಯಾಗೋಳ ಅವರು 2004ರಲ್ಲಿ ಬಿಜೆಪಿಯಿಂದ ಚಿಕ್ಕೋಡಿ-ಸದಲಗಾ (ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ) ಶಾಸಕರಾಗಿ ಆಯ್ಕೆಯಾಗಿದ್ದರು.

    ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಮೇಶ್ ಜಾರಕಿಹೊಳಿ ಪಕ್ಷ ಬಿಡೋದು ಖಚಿತ: ಮಾಜಿ ಶಾಸಕ ಕೆ.ಎನ್ ರಾಜಣ್ಣ

    ರಮೇಶ್ ಜಾರಕಿಹೊಳಿ ಪಕ್ಷ ಬಿಡೋದು ಖಚಿತ: ಮಾಜಿ ಶಾಸಕ ಕೆ.ಎನ್ ರಾಜಣ್ಣ

    ತುಮಕೂರು: ಕೈ ಪಕ್ಷದ ಬಂಡಾಯ ಶಾಸಕರ ಪೈಕಿ ಮುಂಚೂಣಿಯಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪಕ್ಷ ಬಿಡೋದು ಖಚಿತ ಎಂದು ತುಮಕೂರಿನಲ್ಲಿ ಬಿಜೆಪಿ ಮಾಜಿ ಶಾಸಕ ಕೆ.ಎನ್ ರಾಜಣ್ಣ ಸುಳಿವು ನೀಡಿದ್ದಾರೆ.

    ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ಅಂತಿಮ ದರ್ಶನದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೆ.ಎನ್.ಆರ್, “ನನ್ನ ಪ್ರಕಾರ ಕಾಂಗ್ರೆಸ್ ನಲ್ಲಿ ಅವರು ಇರೋದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ.

    ರಮೇಶ್ ರಾಜೀನಾಮೆ ಕೊಡ್ತಾರಾ. ಸರ್ಕಾರ ಉರುಳಿಸ್ತಾರಾ. ಶಾಸಕರನ್ನು ಕರೆದುಕೊಂಡು ಹೋಗ್ತಾರಾ ಈ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಪಕ್ಷ ತೊರೆಯೋದು ಖಚಿತ ಎಂದು ರಾಜಣ್ಣ ಭವಿಷ್ಯ ನುಡಿದಿದ್ದಾರೆ. ಆದರೆ ಕೆಲ ಕಾಂಗ್ರೆಸ್ ಶಾಸಕರು ಅವರ ಜೊತೆ ಸಂಪರ್ಕದಲ್ಲಿ ಇದ್ದಾರೆ. ಆ ಶಾಸಕರನ್ನೂ ಕರೆದುಕೊಂಡು ಹೋಗ್ತಾರಾ ಎನ್ನುವ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ.

    ನನಗೆ ಸತೀಶ್ ಜಾರಕಿಹೊಳಿ, ಬಿಜೆಪಿ ಬಾಲಚಂದ್ರ, ಲಖನ್ ಜಾರಕೀಹೊಳಿ ಎಲ್ಲರೂ ಆತ್ಮಿಯರೇ. ರಾಜಕೀಯ ದೃಷ್ಟಿಯಲ್ಲಿ ಅವರ ತೀರ್ಮಾನಕ್ಕೆ ಅವರೇ ಸ್ವತಂತ್ರರು. ಸರ್ಕಾರದ ಬಗ್ಗೆ ಸಿಎಂ ಕುಮಾರಸ್ವಾಮಿಯೇ ಇದು ಪರಿಸ್ಥಿತಿಯ ಪ್ರನಾಳ ಶಿಶು ಎಂದು ಹೇಳಿದ್ದಾರೆ. ಏಳೂವರೆ, ಎಂಟು ತಿಂಗಳಿಗೆ ಹುಟ್ಟಿದ್ದು ಎಷ್ಟು ವರ್ಷ ಬದುಕುತ್ತೆ ಅಂತಾ ಗೊತ್ತಿಲ್ಲ ಎಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಲಮನ್ನಾ ಮಾಡ್ತೀವಿ ಅಂತಾ, ಅಪ್ಪ-ಮಕ್ಕಳು ಸೇರ್ಕೊಂಡು ನಾಡಿನ ಜನ್ರಿಗೆ ತುಪ್ಪ ಸವ್ರುತ್ತಿದ್ದಾರೆ- ಸಿದ್ದು ಆಪ್ತ ಕಿಡಿ

    ಸಾಲಮನ್ನಾ ಮಾಡ್ತೀವಿ ಅಂತಾ, ಅಪ್ಪ-ಮಕ್ಕಳು ಸೇರ್ಕೊಂಡು ನಾಡಿನ ಜನ್ರಿಗೆ ತುಪ್ಪ ಸವ್ರುತ್ತಿದ್ದಾರೆ- ಸಿದ್ದು ಆಪ್ತ ಕಿಡಿ

    ಮೈಸೂರು: ಸಾಲಮನ್ನಾ ಮಾಡುತ್ತೇವೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಅವರ ಮಕ್ಕಳಾದ ಸಿಎಂ ಕುಮಾರಸ್ವಾಮಿ ಮತ್ತು ಸಚಿವ ರೇವಣ್ಣ ನಾಡಿನ ಜನತೆಯ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆಂದು ಮಾಜಿ ಸಿಎಂ ಸಿದ್ದರಾಮಯ್ಯನವರ ಪರಮಾಪ್ತ ಮಾಜಿ ಶಾಸಕ ಕೆ. ವೆಂಕಟೇಶ್ ಕಿಡಿಕಾರಿದ್ದಾರೆ.

    ಜಿಲ್ಲೆಯ ಪಿರಿಯಾಪಟ್ಟಣದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆಂದು ಅವರಿಗೆ ಗೊತ್ತಿರಲಿಲ್ಲ. ಅಲ್ಲದೇ ಸಾಂದರ್ಭಿಕ ಮುಖ್ಯಮಂತ್ರಿಯಂದು ಅವರೇ ಹೇಳಿದ್ದಾರೆ. ಅವರು ಚುನಾವಣೆಗೂ ಮುನ್ನ ನಿಮಗೆಲ್ಲ ಭರವಸೆ ಕೊಟ್ಟಿದ್ದು ಹೇಗೆ ಅಂದರೆ ನಾನು ಹೇಗೂ ಮುಖ್ಯಮಂತ್ರಿ ಆಗಲ್ಲ. ಬೇಡಿಕೆ ಈಡೇರಿಸುವ ಪ್ರಶ್ನೆಯೂ ಬರಲ್ಲ ಅಂತಾ ಎಷ್ಟು ಸುಳ್ಳು ಹೇಳ್ಕೋಬೇಕೋ, ಹೇಳಿ ಎಲ್ಲ ಭರವಸೆ ಕೊಟ್ಟಿದ್ದರು. ಏಕೆಂದರೆ 25 ರಿಂದ 30 ಸೀಟ್ ಮೇಲೆ ನಾವು ಗೆಲ್ಲುವುದಿಲ್ಲ ಎನ್ನುವ ವಿಚಾರ ಅವರಿಗೆ ಗೊತಿತ್ತು ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಈಗ ಅವರು ಗೆದ್ದಿರುವುದೇ ಮ್ಯಾಕ್ಸಿಮಮ್ ಸೀಟ್. ಯಾವುದೇ ಚುನಾವಣೆ ನಡೆದರೂ ಅವರು ಹಿಂದಕ್ಕೆ ಇರ್ತಾರೆ. ಯಾವತ್ತು ಜೆಡಿಎಸ್ ಮುಂದಕ್ಕೆ ಹೋಗೋದಿಲ್ಲ. ಅಲ್ಲದೇ ನಾವು ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಸಾಲಮನ್ನಾ ಮಾಡುತ್ತೀವಿ ಎಂದು ಹೇಳಿದ್ದರು. ಈಗ ಅಧಿಕಾರಕ್ಕೆ ಬಂದು ಎಷ್ಟು ತಿಂಗಳಾಯ್ತು? ನಾವು ಕಾಂಗ್ರೆಸ್ ಪಕ್ಷದವರು, ಅವರು ಜನತಾದಳದವರು. ನಾವೇ ಅವರಿಗೆ ಏನು ಮಾಡುತ್ತೀರೋ ಮಾಡಿ ಎಂದು ಹೇಳಿ ಬಿಟ್ಟಿದ್ದೇವೆ. ಇದುವರೆಗೂ ನಾವು ಯಾವುದೇ ತಕರಾರು ಸಹ ಮಾಡಿಲ್ಲ. ಆದರೆ ಅವರು ಯಾವುದೇ ಯೋಜನೆಗಳನ್ನು ಮಾಡದೇ ಸುಮ್ಮನಿದ್ದಾರೆಂದು ಹೇಳುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.

    ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡೋ ಚಿಂತನೆಯಲ್ಲಿದೆ ಎಂಬುದು ಇವರಿಗೆ ಮೂರು ತಿಂಗಳ ಮೊದಲೇ ಗೊತ್ತಿತ್ತು. ಅದಕ್ಕೆ ರೈತರಿಗೆ ಯಾರು ಧೃತಿಗೇಡಬೇಡಿ, ಧೈರ್ಯವಾಗಿರಿ ಎಂದು ಹೇಳುತ್ತಿದ್ದರು. ಈಗ ಕೇಂದ್ರ ಸರ್ಕಾರದವರು ರೈತರ ಸಾಲಮನ್ನಾ ಮಾಡುತ್ತಾರೆ. ಈಗಲೂ ಸಹ ನೀವು ಧೈರ್ಯವಾಗಿರಿ ಎಂದು ಹೇಳುತ್ತಿದ್ದಾರೆಂದು ಟೀಕಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 15 ಕೋಟಿ ರೂ. ವಾಪಸ್ ಕೇಳಿದ್ದಕ್ಕೆ ಉದ್ಯಮಿಯಿಂದ ಅನಿಲ್ ಲಾಡ್‍ಗೆ ಜೀವ ಬೆದರಿಕೆ

    15 ಕೋಟಿ ರೂ. ವಾಪಸ್ ಕೇಳಿದ್ದಕ್ಕೆ ಉದ್ಯಮಿಯಿಂದ ಅನಿಲ್ ಲಾಡ್‍ಗೆ ಜೀವ ಬೆದರಿಕೆ

    ಬೆಂಗಳೂರು: ಬಳ್ಳಾರಿಯಲ್ಲಿ ಗಣಿಗಾರಿಕೆ ವಿಚಾರಕ್ಕೆ ನೀಡಿದ್ದ ಹಣವನ್ನು ಕೇಳಿದ್ದಕ್ಕೆ ಉದ್ಯಮಿಯೊಬ್ಬರು ಮಾಜಿ ಶಾಸಕ ಅನಿಲ್ ಲಾಡ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ.

    ಉದ್ಯಮಿ ಆರ್.ಶಿವಕುಮಾರ್ ನಿಂದ ಮಾಜಿ ಶಾಸಕ ಅನಿಲ್ ಲಾಡ್ ಗೆ ಜೀವ ಬೆದರಿಕೆ ಬಂದಿದೆ. ಹಣ ನೀಡದೆ ಸತಾಯಿಸಿ ಮತ್ತೊಮ್ಮೆ ಬಂದರೆ ಮರ್ಡರ್ ಮಾಡುವುದಾಗಿ ಶಿವಕುಮಾರ್ ಬೆದರಿಕೆ ಹಾಕಿದ್ದಾರೆ. ಈ ಕುರಿತು ಶಾಸಕರು ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಏನಿದು ಪ್ರಕರಣ?:
    ಬಳ್ಳಾರಿ ಗಣಿಗಾರಿಕೆ ವಿಚಾರವಾಗಿ ಅನಿಲ್ ಲಾಡ್ ಮತ್ತು ಉದ್ಯಮಿ ಶಿವಕುಮಾರ್ ನಡುವೆ ಒಪ್ಪಂದವಾಗಿತ್ತು. ಅದರಂತೆ ಗಣಿಗಾರಿಕೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ಸಿಕ್ಕ ಬಳಿಕ ಮಾರಾಟ ಮಾಡಲು ನಿರ್ಧರಿಸಲಾಗಿತ್ತು. ಹೀಗಾಗಿ ಅನಿಲ್ ಲಾಡ್ ಅವರು ಗಣಿಗಾರಿಕೆ ಕೆಲಸಕ್ಕೆ ಸುಮಾರು 15 ಕೋಟಿ ರೂ. ಮುಂಗಡವಾಗಿ ನೀಡಿದ್ದರು. ಒಂದು ವೇಳೆ ಗಣಿಗಾರಿಕೆಗೆ ಅನುಮತಿ ಸಿಗದಿದ್ದರೆ ಹಣ ವಾಪಾಸ್ ಕೊಡಬೇಕೆಂದು ಇಬ್ಬರು ಒಪ್ಪಂದ ಮಾಡಿಕೊಂಡಿದ್ದರು.

    ಈ ನಡುವೆ ನನ್ನ ಹಣ ಮರಳಿ ಕೊಡಿ ಅಂತ ಅನಿಲ್ ಲಾಡ್ ಅವರು ಶಿವಕುಮಾರ್ ನನ್ನು ಕೇಳಿದ್ದಾರೆ. ಆದರೆ ಇದಕ್ಕೆ ಒಪ್ಪದ ಶಿವಕುಮಾರ್ ಹಣ ನೀಡದೆ ಸತಾಯಿಸಿ ಮತ್ತೊಮ್ಮೆ ಬಂದರೆ ಮರ್ಡರ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೇ ಬಾಂಬೆಯಿಂದ ಸುಪಾರಿ ಕೊಟ್ಟು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿದ್ದಾರೆ. ಇದರಿಂದಾಗಿ ಶಾಸಕ ಅನಿಲ್ ಲಾಡ್, ಉದ್ಯಮಿ ಶಿವಕುಮಾರ್ ವಿರುದ್ಧ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv