Tag: ಮಾಜಿ ರಾಷ್ಟ್ರಪತಿ

  • ದೆಹಲಿಯಲ್ಲಿ ಪ್ರಣಬ್ ಮುಖರ್ಜಿ ಅಂತ್ಯಕ್ರಿಯೆ – ದೇಶಾದ್ಯಂತ 7 ದಿನ ಶೋಕಾಚರಣೆ

    ದೆಹಲಿಯಲ್ಲಿ ಪ್ರಣಬ್ ಮುಖರ್ಜಿ ಅಂತ್ಯಕ್ರಿಯೆ – ದೇಶಾದ್ಯಂತ 7 ದಿನ ಶೋಕಾಚರಣೆ

    ನವದೆಹಲಿ: ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ಅವರು ಇಹಲೋಕ ತ್ಯಜಿಸಿ, ಬಾರದ ಲೋಕಕ್ಕೆ ತೆರಳಿದ್ದಾರೆ. ಇಂದು ದೆಹಲಿಯ ಲೋಧಿ ರಸ್ತೆಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಲಿದ್ದು, ಕೋವಿಡ್ ಮಾರ್ಗಸೂಚಿ ಪ್ರಕಾರ ಅಂತ್ಯಸಂಸ್ಕಾರ ನೆರವೇರಲಿದೆ. ಇದನ್ನೂ ಓದಿ: ಕೈ ತಪ್ಪಿದ ಪ್ರಧಾನಿ ಹುದ್ದೆಯಿಂದ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಆಗಿದ್ದು ಹೇಗೆ?

    ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸಿದೆ ಸೋಮವಾರ ನಿಧರಾಗಿದ್ದಾರೆ. ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ, ಗೃಹ ಸಚಿವ ಅಮಿತ್ ಶಾ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ವಿದೇಶಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಶ್ರೇಷ್ಠ ವಿದ್ವಾಂಸ ಪ್ರಣಬ್‌ ಮುಖರ್ಜಿಯವರ ಸಲಹೆಯನ್ನು ಎಂದಿಗೂ ಮರೆಯಲ್ಲ- ಮೋದಿ

    ಪ್ರಣಬ್ ಮುಖರ್ಜಿ ಅವರ ಅಂತ್ಯಕ್ರಿಯೆಯನ್ನು ಇಂದು ದೆಹಲಿಯಲ್ಲಿಯೇ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಮೊದಲಿಗೆ ಹುಟ್ಟೂರು ಬಂಗಾಳದಲ್ಲಿಯೇ ಅಂತ್ಯಕ್ರಿಯೆ ನಡೆಸುವ ಬಗ್ಗೆ ಚರ್ಚೆಯಾಗಿತ್ತು. ಬಳಿಕ ಕುಟುಂಬ ಸದಸ್ಯರ ತೀರ್ಮಾನದಂತೆ ದೆಹಲಿಯ ಲೋಧಿ ರಸ್ತೆಯ ನಿಗಮ್ ಬೋಧ್ ಘಾಟ್‍ನಲ್ಲಿ ಪ್ರಣಬ್ ಅವರ ಅಂತ್ಯಕ್ರಿಯೆ ನಡೆಯಲಿದೆ.

    ಪ್ರಣಬ್ ಅವರ ಪಾರ್ಥೀವ ಶರೀರ ದೆಹಲಿಯ ಸೇನಾ ಆಸ್ಪತ್ರೆಯಲ್ಲಿಯೇ ಇದ್ದು, ಇಂದು ಬೆಳಗ್ಗೆ 9 ಗಂಟೆಗೆ ರಾಜಾಜಿಮಾರ್ಗ್ ನಿವಾಸಕ್ಕೆ ರವಾನೆ ಮಾಡಲಾಗುತ್ತೆ. ಬೆಳಗ್ಗೆ 9.15ರಿಂದ 10.15ರವರೆಗೆ ಪಿಎಂ ಸೇರಿದಂತೆ ಹಲವು ಗಣ್ಯರಿಂದ ಅಂತಿಮ ನಮನ ಸಲ್ಲಿಸಲಾಗುತ್ತದೆ. ಬೆಳಗ್ಗೆ 10.15ರಿಂದ 11.15ರವರೆಗೆ ಇತರ ಪ್ರಮುಖ ಗಣ್ಯರಿಂದ ಅಂತಿಮ ನಮನ ಅಲ್ಲಿಸಲಾಗುತ್ತದೆ. ಪ್ರಣಬ್ ಮುಖರ್ಜಿ ಅವರಿಗೆ ಕೊರೊನಾ ಸೋಂಕು ಪಾಸಿಟಿವ್ ಇರುವುದರಿಂದ ಗಣ್ಯರು ಹೆಚ್ಚಿನ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ಆಗಮಿಸುವ ಸಾಧ್ಯತೆ ತೀರ ವಿರಳವಾಗಿದೆ.

    ಮಧ್ಯಾಹ್ನದ ಬಳಿಕ ಲೋಧಿ ರಸ್ತೆಯಲ್ಲಿರುವ ನಿಗಮ್ ಬೋದ್ ಘಾಟ್‍ನಲ್ಲಿ ಸುಮಾರು 2.30ಕ್ಕೆ ಅಂತಿಮ ಸಂಸ್ಕಾರ ನಡೆಯಲಿದೆ. ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡದಿರುವ ಸಾಧ್ಯತೆ ಹೆಚ್ಚಿದೆ. ಪ್ರಣಬ್ ಮುಖರ್ಜಿ ಅವರ ಸಾವಿಗೆ ಗೌರವಾರ್ಥವಾಗಿ ಕೇಂದ್ರ ಸರ್ಕಾರ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.

    ಅಗಲಿದ ಗಣ್ಯರಿಗೆ ಗೌರವದ ಸಂಕೇತವಾಗಿ, ಆಗಸ್ಟ್ 31 ರಿಂದ ಸೆಪ್ಟೆಂಬರ್ 6 ರವರೆಗೆ ದೇಶದಾದ್ಯಂತ ಏಳು ದಿನಗಳ ಶೋಕಾಚರಣೆಯನ್ನು ಆಚರಿಸಲಾಗುತ್ತಿದೆ. ಶೋಕಾಚರಣೆಯ ಅವಧಿಯಲ್ಲಿ, ರಾಷ್ಟ್ರಧ್ವಜವು ಎಲ್ಲಾ ಕಟ್ಟಡಗಳ ಮೇಲೆ ಅರ್ಧದಷ್ಟು ಹಾರಿಸಲಾಗುತ್ತದೆ ಮತ್ತು ಯಾವುದೇ ಅಧಿಕೃತ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

  • ಅನಾರೋಗ್ಯಕ್ಕೂ ಮುನ್ನ ಹಳ್ಳಿಯ ಹಲಸಿನ ಹಣ್ಣು ತರಿಸಿ ತಿಂದಿದ್ರು ಪ್ರಣಬ್ ಮುಖರ್ಜಿ

    ಅನಾರೋಗ್ಯಕ್ಕೂ ಮುನ್ನ ಹಳ್ಳಿಯ ಹಲಸಿನ ಹಣ್ಣು ತರಿಸಿ ತಿಂದಿದ್ರು ಪ್ರಣಬ್ ಮುಖರ್ಜಿ

    ನವದೆಹಲಿ: ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಅನಾರೋಗ್ಯಕ್ಕೂ ಮುನ್ನ ಹಳ್ಳಿಯಲ್ಲಿ ಸಿಗುವ ಹಲಸಿನ ಹಣ್ಣು ತರಿಸಿಕೊಂಡು ತಿಂದಿದ್ದರು.

    ಪಶ್ಚಿಮ ಬಂಗಾಳದ ರಾಜಕಾರಣಿಯಾಗಿರುವ ಮಗ ಅಭಿಜಿತ್ ಜೊತೆ ಮಾಜಿ ರಾಷ್ಟ್ರಪತಿಯವರು ತನಗೆ ಹಲಸಿನ ಹಣ್ಣು ತಿನ್ನಬೇಕು ಎಂಬ ಆಸೆಯಾಗುತ್ತಿದೆ. ಹೀಗಾಗಿ ಅದನ್ನು ತಂದುಕೊಡುವಂತೆ ಹೇಳಿದ್ದರು. ಅಂತೆಯೇ ಅಭಿಜಿತ್ ಕೂಡ ತಮ್ಮ ತಂದೆಗೆ ಹಲಸಿನ ಹಣ್ಣು ತಂದು ಕೊಟ್ಟಿದ್ದರು.

    ತಂದೆ ಮನವಿಯಂತೆ ನಾನು ಪಶ್ಚಿಮ ಬಂಗಾಳದ ಬಿರ್‍ಭುಮ್ ಜಿಲ್ಲೆಯ ಮಿರಾತಿ ಎಂಬ ಗ್ರಾಮಕ್ಕೆ ತೆರಳಿ ಹಲಸಿನ ಹಣ್ಣು ತೆಗೆದುಕೊಂಡು ಬಂದಿದ್ದೆ. 25 ಕೆ.ಜಿಯಷ್ಟು ಹಣ್ಣು ಹಿಡಿದುಕೊಂಡು ಆಗಸ್ಟ್ 3 ರಂದು ದೆಹಲಿ ರೈಲು ಹತ್ತಿ ಅವರನ್ನು ಭೇಟಿಯಾಗಿ ಅವರ ಆಸೆಯಂತೆ ಹಣ್ಣನ್ನು ನೀಡಿದ್ದೆ. ತಂದೆ ಹಾಗೂ ನನಗೆ ರೈಲು ಪ್ರಯಾಣ ಅಂದರೆ ಅಚ್ಚುಮೆಚ್ಚು ಎಂದು ಅಭಿಜಿತ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ನಾನು ತಂದು ಕೊಟ್ಟ ದಿನವೇ ತಂದೆ ಹಣ್ಣು ತಿಂದಿದ್ದಾರೆ. ಅದೃಷ್ಟವಶಾತ್ ಅವರ ಶುಗರ್ ಲೆವೆಲ್ ನಲ್ಲಿ ಏನೂ ಬದಲಾವಣೆಯಾಗಿಲ್ಲ. ಹಣ್ಣನ್ನು ನೋಡುತ್ತಿದ್ದಂತೆಯೇ ತಂದೆಗೆ ತುಂಬಾನೆ ಖುಷಿಯಾಗಿತ್ತು. ಆಗ ಅವರಿಗೆ ಅನಾರೋಗ್ಯ ಇರಲಿಲ್ಲ. ಆದರೆ ವಾರದ ಬಳಿಕ ಅವರು ಹಠಾತ್ ಅನಾರೋಗ್ಯಕ್ಕೀಡಾದರು. ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಪರಿಣಾಮ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಇದೇ ವೇಳೆ ಅವರ ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಎಂದು ವರದಿ ಬಂದಿದೆ.

    ಸದ್ಯ ಅವರು ದೆಹಲಿಯ ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇದೂವರೆಗೆ ನನಗೆ 4 ಬಾರಿ ಅವರನ್ನು ನೋಡಲು ಅವಕಾಶ ಸಿಕ್ಕಿತ್ತು. ಅವರನ್ನು ನೋಡಲು ತೆರಳುವಾಗ ನಾನು ಪಿಪಿಇ ಕಿಟ್ ಧರಿಸಿ ಹಾಗೂ ಇತರ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ನಾನು ನಾಲ್ಕನೇ ಬಾರಿ ನೋಡಲು ಹೋದಾಗ ಅವರು ವೆಂಟಿಲೇಟರ್ ಸಹಾಯವಿಲ್ಲದೆ ಉಸಿರಾಡುತ್ತಿದ್ದರು ಎಂದು ಅಭಿಜಿತ್ ತಿಳಿಸಿದರು.

  • ಪ್ರಣಬ್ ಮುಖರ್ಜಿ ಸ್ಥಿತಿ ಗಂಭೀರ, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

    ಪ್ರಣಬ್ ಮುಖರ್ಜಿ ಸ್ಥಿತಿ ಗಂಭೀರ, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

    ನವದೆಹಲಿ: ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಹೌದು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಹಿನ್ನೆಲೆಯಲ್ಲಿ ಮಾಜಿ ರಾಷ್ಟ್ರಪತಿಯವರಿಗೆ ಸೋಮವಾರ ದೆಹಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆದರೂ ಇದೀಗ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

    ನಿನ್ನೆ ಮಧ್ಯಾಹ್ನದ ಬಳಿಕ ಟ್ವೀಟ್ ಮಾಡಿದ್ದ ಪ್ರಣಬ್ ಮುಖರ್ಜಿ, ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದು, ವರದಿ ಪಾಸಿಟಿವ್ ಎಂದು ಬಂದಿದೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ನನ್ನೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರೂ ಪರೀಕ್ಷೆ ಮಾಡಿಸಿಕೊಂಡು ಐಸೋಲೇಷನ್ ಗೆ ಒಳಗಾಗಿ ಎಂದು ತಿಳಿಸಿದ್ದರು.

    ಮಾಜಿ ರಾಷ್ಟ್ರಪತಿಗಳಿಗೂ ಕೊರೊನಾ ಸೋಂಕು ಹರಡಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ರಾಷ್ಟ್ರಪತಿ ರಮಾನಾಥ್ ಕೋವಿಂದ್, ಕೇಂದ್ರ ಸಚಿವ ರಾಜನಾಥ್ ಸಿಂಗ್, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಸಚಿವ ಸುಧಾಕರ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರದಂತೆ ಹಲವಾರು ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ್ದಾರೆ.

  • ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಕೊರೊನಾ ಪಾಸಿಟಿವ್

    ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಕೊರೊನಾ ಪಾಸಿಟಿವ್

    ಬೆಂಗಳೂರು: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ.

    ಈ ಸಂಬಂಧ ಟ್ವೀಟ್ ಮಾಡಿರುವ ಮುಖರ್ಜಿಯವರು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೊರೊನಾ ಟೆಸ್ಟ್ ಮಾಡಿದ್ದು, ವರದಿ ಪಾಸಿಟಿವ್ ಎಂದು ಬಂದಿದೆ ಅಂತ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ನನ್ನ ಸಂಪರ್ಕದಲ್ಲಿ ಇದ್ದವರು ಈ ಕೂಡಲೇ ಕೋವಿಡ್ 19 ಟೆಸ್ಟ್ ಮಾಡಿಕೊಂಡು ಸ್ವತಃ ಐಸೋಲೇಷನ್ ಗೆ ಒಳಗಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಈ ಹಿಂದೆ ಅಂದರೆ ಆಗಸ್ಟ್ 2ರಂದು ಅಮಿತ್ ಶಾ ಅವರು ಕೊರೊನಾ ದೃಢವಾಗಿರುವ ಬಗ್ಗೆ ಟ್ವೀಟ್ ಮಾಡಿ ತಿಳಿಸಿದ್ದರು. ಅಲ್ಲದೆ ಅದೇ ದಿನ ದೆಹಲಿ ಹೊರವಲಯದ ಗುರುಗ್ರಾಮದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಬಿಜೆಪಿ ಸಂಸದ ಮನೋಜ್ ತಿವಾರಿ, ಅಮಿತ್ ಶಾಗೆ ಎರಡನೇ ಬಾರಿ ಕೋವಿಡ್ 19 ಟೆಸ್ಟ್ ಮಾಡಿದ್ದು, ವರದಿ ನೆಗೆಟಿವ್ ಬಂದಿದೆ ಎಂದು ಭಾನುವಾರ ಟ್ವೀಟ್ ಮಾಡಿದ್ದರು. ಈ ಸಂಬಂಧ ಗೃಹ ಸಚಿವಾಲಯ 2ನೇ ಬಾರಿ ಟೆಸ್ಟ್ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ ಬಳಿಕ ತಿವಾರಿ ಟ್ವೀಟ್ ಡಿಲೀಟ್ ಮಾಡಿದ್ದಾರೆ.

    ಕೊರೊನಾ ಹಿನ್ನೆಲೆಯಲ್ಲಿ ಶಾ ಅವರು ಅಯೋಧ್ಯೆ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಆಸ್ಪತ್ರೆಯಲ್ಲಿದ್ದುಕೊಂಡೇ ಶುಭಹಾರೈಸಿದ್ದರು.

  • ಅತೃಪ್ತ ಶಾಸಕರು ಪಕ್ಷ ಬಿಡುತ್ತಾರೆ ಅನಿಸ್ತಿದೆ: ಜಿ.ಪರಮೇಶ್ವರ್

    ಅತೃಪ್ತ ಶಾಸಕರು ಪಕ್ಷ ಬಿಡುತ್ತಾರೆ ಅನಿಸ್ತಿದೆ: ಜಿ.ಪರಮೇಶ್ವರ್

    – ಜಿ.ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿದ ಶ್ರೀಲಂಕಾ ಮಾಜಿ ರಾಷ್ಟ್ರಪತಿ

    ಬೆಂಗಳೂರು: ಅತೃಪ್ತ ಶಾಸಕರು ಕಳೆದ ಮೂರು ಸಿಎಲ್‍ಪಿ ಸಭೆಗೂ ಹಾಜರಾಗಲಿಲ್ಲ. ಹೀಗಾಗಿ ಅವರು ಪಕ್ಷ ಬಿಡುತ್ತಾರೆ ಅಂತ ಅನಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.

    ಇಲ್ಲಿನ ಸದಾಶಿವನಗರದ ನಿವಾಸದಲ್ಲಿ ಶ್ರೀಲಂಕಾ ಮಾಜಿ ರಾಷ್ಟ್ರಪತಿ ಮಹಿಂದಾ ರಾಜಪಕ್ಸೆ ಅವರನ್ನು ಭೇಟಿಯಾಗಿ ಬಳಿಕ ಮಾತನಾಡಿದ ಅವರು, ಸಿಎಲ್‍ಪಿ ಸಭೆಗೆ ಗೈರಾದ ಶಾಸಕರ ಅನರ್ಹತೆ ಮಾಡುವ ಕುರಿತು ಈಗಾಗಲೇ ತೀರ್ಮಾನ ಮಾಡಲಾಗಿದೆ. ಅದರಲ್ಲಿ ಯಾವುದೇ ಗೊಂದಲಗಳಿಲ್ಲ. ಅವರನ್ನು ಹೊರತುಪಡಿಸಿ ಬೇರೆ ಶಾಸಕರು ಪಕ್ಷವನ್ನು ಬಿಡುವುದಿಲ್ಲ ಎಂದು ತಿಳಿಸಿದರು.

    ಅತೃಪ್ತ ಶಾಸಕರನ್ನು ಹೊರತಾಗಿ ನಮ್ಮ ಪಕ್ಷದ ಬೇರೆ ಶಾಸಕರ ಜೊತೆಗೆ ಬಿಜೆಪಿಯವರು ಮಾತನಾಡಿರಬಹುದು. ಆದರೆ ಅವರಲ್ಲಿ ಪಕ್ಷಬಿಡುವ ಲಕ್ಷಣಗಳು ಕಾಣಿಸುತ್ತಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದು, ಅತೃಪ್ತರ ಬಗ್ಗೆ ಚರ್ಚೆ ನಡೆಸಿದ್ದಾರೆ. ಅವರು ಬೆಂಗಳೂರಿಗೆ ವಾಪಸ್ ಬಂದು ಏನು ಕ್ರಮ ಕೈಗೊಳ್ಳಬೇಕು ಅಂತ ತಿಳಿಸಲಿದ್ದಾರೆ ಎಂದರು.

    ಶ್ರೀಲಂಕಾ ಮಾಜಿ ಅಧ್ಯಕ್ಷರ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ, ಮಹಿಂದಾ ರಾಜಪಕ್ಸೆ ಅವರು ಐಟಿ ಹಾಗೂ ಸ್ಟಾರ್ಟ್ ಅಪ್‍ಗಳ ಬಗ್ಗೆ ಮಾಹಿತಿ ಪಡೆದರು. ಇದನ್ನು ಬಿಟ್ಟು ಬೇರೆ ಯಾವುದೇ ರಾಜಕೀಯ ಅಥವಾ ಒಪ್ಪಂದಗಳ ಕುರಿತು ಚರ್ಚೆ ಮಾಡಲಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲಾದ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು. ಭಾರತದೊಂದಿಗೆ ಶ್ರೀಲಂಕಾ ಕೂಡ ವೇಗವಾಗಿ ಬೆಳವಣಿಗೆ ಹೊಂದಬೇಕು ಎನ್ನುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ ಎಂದರು.

    ನನ್ನ ಅಧಿಕಾರ ಅವಧಿಯಲ್ಲಿ ಹಲವು ಯೋಜನೆ ಜಾರಿಗೆ ತಂದಿದ್ದೆ. ಆದರೆ ಈಗ ದೇಶದ ಅಭಿವೃದ್ಧಿ ಕುಂಠಿತವಾಗಿದೆ ಅಂತ ಮಹಿಂದಾ ರಾಜಪಕ್ಸೆ ಬೇಸರ ವ್ಯಕ್ತಪಡಿಸಿದರು. ಅವರು ಮತ್ತೆ ಅಧಿಕಾರಕ್ಕೆ ಬರಬಹುದು ಎನ್ನುವ ವಿಶ್ವಾಸವಿದೆ ಎಂದು ಜಿ.ಪರಮೇಶ್ವರ್ ತಿಳಿಸಿದರು.

    ಹೆಬ್ಬಾಳ ಪ್ಲೈ ಓವರ್ ನಿರ್ಮಾಣ ಯೋಜನೆಯಲ್ಲಿ ಸ್ವಲ್ಪ ಬದಲಾವಣೆ ಮಾಡುತ್ತಿದ್ದೇವೆ. ಪ್ಲಾನ್ ಸಿದ್ಧವಾದ ಮೇಲೆ ಸಾರ್ವಜನಿಕರು ಹಾಗೂ ಆ ಭಾಗದ ಜನರ ಅಭಿಪ್ರಾಯ ಸಂಗ್ರಹಿಸುತ್ತೇವೆ. ಕೆಲವರು ವಿರೋಧ ಮಾಡುತ್ತಾರೆ ಅಂದ್ರೆ ಯೋಜನೆಯನ್ನು ಬಿಡುವುದಕ್ಕೆ ಆಗಲ್ಲ. ಯೋಜನೆಯಲ್ಲಿ ಲೋಪ ಇದ್ದರೆ ಹೇಳಲಿ ಸರಿಪಡಿಸುತ್ತೇವೆ. ಈ ಯೋಜನೆಯನ್ನು ಅನೇಕರು ಸ್ಟೀಲ್ ಬ್ರಿಡ್ಜ್ ಅಂತ ಕರೆಯುತ್ತಿದಾರೆ. ಆದರೆ ಅದು ಸ್ಟೀಲ್ ಬ್ರೀಡ್ಜ್ ಅಲ್ಲ. ಚಾಲುಕ್ಯ ಸರ್ಕಲ್‍ನಿಂದ ಹೆಬ್ಬಾಳ ಸಂಪರ್ಕಿಸುವ ಪ್ಲೈ ಓವರ್ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.

    ಬಜೆಟ್ ಬಗ್ಗೆ ಬಿಸಿ ಪಾಟೀಲ್ ಅಸಮಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜಿ.ಪರಮೇಶ್ವರ್ ಅವರು, ನಾವು ಬಜೆಟ್‍ನಲ್ಲಿ 224 ಕ್ಷೇತ್ರಕ್ಕೂ ಯೋಜನೆ ಹಂಚುವುದಿಲ್ಲ. ಕಾರ್ಯಕ್ರಮ ಘೋಷಿಸುತ್ತೇವೆ ಅವರ ಕ್ಷೇತ್ರಕ್ಕೆ ಅನ್ವಯವಾಗುತ್ತದೆ. ರಸ್ತೆ ಕೆರೆ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ಘೋಷಿಸಿದ್ದಾರೆ. ಅದು ಅವರ ಕ್ಷೇತ್ರಕ್ಕೂ ಅನ್ವಯವಾಗಲಿದೆ. ಎಲ್ಲನ್ನೂ ಬಜೆಟ್‍ನಲ್ಲೇ ಘೋಷಿಸಬೇಕಂತ ಏನು ಇಲ್ಲ. ಯಾವುದೇ ಶಾಸಕರಿಗೆ ಅಸಮಧಾನವಿದ್ದರೆ ನಮಗೆ ಹೇಳಲಿ. ಅವರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ಕೊಡುವುದಕ್ಕೆ ಸಂಪ್ಲಿಮೆಂಟರಿ ಬಜೆಟ್‍ನಲ್ಲಿ ಅವಕಾಶವಿದೆ ಎಂದು ತಿಳಿಸಿದರು.

    ಎನ್‍ಜಿಟಿ ಬಫರ್ ಜೋನ್ ವಿಚಾರವಾಗಿ ಮಾತನಾಡಿ ಅವರು, ಎನ್‍ಜಿಟಿ ಆದೇಶ ಪಾಲಿಸುವುದು ಕಷ್ಟ. ಕೆರೆ ಹಾಗೂ ರಾಜಕಾಲುವೆಯಿಂದ 75 ಮೀಟರ್ ಜಾಗ ಬಿಟ್ಟು ಮನೆ ಕಟ್ಟಿಕೋಬೇಕು. ಇಡೀ ದೇಶದಲ್ಲಿ ಬೆಂಗಳೂರಿಗೆ ಮಾತ್ರ ಎನ್‍ಜಿಟಿ ಆದೇಶ ನೀಡಲಾಗಿದ್ದು, ಇದರಿಂದಾಗಿ 36 ಸಾವಿರ ಮನೆಗಳನ್ನು ಒಡೆಯಬೇಕಾಗುತ್ತದೆ. ಆದೇಶ ಪಾಲನೆ ಮಾಡಿದರೆ ಜನರು ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.

    ಬಫರ್ ಜೋನ್ ನಿಯಮ ಬದಲಾಯಿಸುವ ಅಗತ್ಯವಿದೆ. ಕೆರೆಗಳಿಗೆ ಹಾಗೂ ರಾಜಕಾಲುವೆಗೆ ಬೇರೆ ಬೇರೆ ನಿಯಮ ಮಾಡುವ ಅಗತ್ಯವಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿರುವೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಣಬ್ ಭಾಷಣದ ಬಳಿಕ ಆರ್ ಎಸ್‍ಎಸ್ ಸೇರುವವರ ಸಂಖ್ಯೆ 4 ಪಟ್ಟು ಹೆಚ್ಚಳ

    ಪ್ರಣಬ್ ಭಾಷಣದ ಬಳಿಕ ಆರ್ ಎಸ್‍ಎಸ್ ಸೇರುವವರ ಸಂಖ್ಯೆ 4 ಪಟ್ಟು ಹೆಚ್ಚಳ

    ಕೋಲ್ಕತ್ತಾ: ಜೂನ್ 07 ರಂದು ನಾಗ್ಪುರದಲ್ಲಿ ನಡೆದ ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗವಹಿಸಿದ ಬಳಿಕ ಆರ್ ಎಸ್‍ಎಸ್ ಸೇರುವವರ ಸಂಖ್ಯೆ 4 ಹೆಚ್ಚಳವಾಗಿದೆ.

    ಈ ಕುರಿತು ಆರ್ ಎಸ್‍ಎಸ್ ಮಾಹಿತಿ ನೀಡಿದ್ದು, ಆರ್ ಎಸ್‍ಎಸ್ ಸೇರಲು ಜೂನ್ 1 ರಿಂದ 6 ಅವಧಿಯಲ್ಲಿ ಸಂಸ್ಥೆಯ ವೆಬ್ ಸೈಟ್‍ನಿಂದ ಸರಾಸರಿ 378 ಅರ್ಜಿಗಳು ಸಲ್ಲಿಕೆಯಾಗುತ್ತಿತ್ತು, ಆದರೆ ಜೂನ್ 7 ರಂದು 1,779 ಅರ್ಜಿಗಳು ಸಲ್ಲಿಕೆಯಾಗಿದೆ ಎಂದು ಬಂಗಾಳದ ಆರ್ ಎಸ್‍ಎಸ್ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ.

    ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಣಬ್ ಅವರಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದರೂ ಸಹ ಭಾಗಿಯಾಗಿದಕ್ಕಾಗಿ ಕೃತಜ್ಞತೆ ತಿಳಿಸಿ ಆರ್ ಎಸ್‍ಎಸ್ ಪತ್ರ ಬರೆದಿದೆ. ಸೋಮವಾರ ಈ ಕುರಿತು ಪತ್ರ ಬರೆದಿರುವ ಸಂಘದ ಮನಮೋಹನ್ ವೈದ್ಯ ಅವರು ಪ್ರಣಬ್ ಅವರ `ಒಂದು ಭಾರತ’ ಮತ್ತು `ಒಂದು ಸಂಸ್ಕೃತಿ’ ಅಭಿಪ್ರಾಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪ್ರಣಬ್ ಅವರಿಗೆ ಪತ್ರ ರವಾನಿಸುವ ಮುನ್ನ ವೈದ್ಯ ಅವರು ಬಂಗಾಳದ ಆರ್ ಎಸ್‍ಎಸ್ ಕಾರ್ಯಕರ್ತರನ್ನ ಕುರಿತು ಮಾತನಾಡಿ, ಪ್ರಣಬ್ ಅವರಿಗೆ ವಿರೋಧ ವ್ಯಕ್ತಪಡಿಸಿದ ಬಳಿಕ ದೇಶದ್ಯಾಂತ ಆರ್ ಎಸ್‍ಎಸ್ ಕಾರ್ಯಕ್ರಮ ಪ್ರಸಾರವಾಗಿದೆ ಎಂದು ಹೇಳಿದ್ದಾರೆ. ಪ್ರಮುಖವಾಗಿ ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾಂಗ್ರೆಸ್ ಪಕ್ಷದ ಹಲವು ಹಿರಿಯ ನಾಯಕರು ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಪ್ರಣಬ್ ಅವರ ಪುತ್ರಿ ಕಾಂಗ್ರೆಸ್ ನಾಯಕಿ ಶರ್ಮಿಷ್ಠ ಮುಖರ್ಜಿ ಸಹ ತಮ್ಮ ವಿರೋಧ ತಿಳಿಸಿ ಟ್ವೀಟ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು.

    ಸದ್ಯ ಆರ್ ಎಸ್‍ಎಸ್ ಪ್ರಣಬ್ ಅವರಿಗೆ ಬರೆದಿರುವ ಪತ್ರದ ಕುರಿತು ಪ್ರತಿಕ್ರಿಯೆ ನೀಡಲು ಶರ್ಮಿಷ್ಠ ಅವರು ನಿರಾಕರಿಸಿದ್ದಾರೆ. ಆರ್ ಎಸ್‍ಎಸ್ ಪ್ರಣಬ್ ಅವರಿಗೆ ಬರೆದಿರುವ ಪತ್ರದಲ್ಲಿ ಅವರನ್ನು ಪ್ರಣಬ್‍ಬಾಬು ಎಂದು ಸಂಬೋಧಿಸಲಾಗಿದೆ ಎನ್ನಲಾಗಿದ್ದು, ಕಾರ್ಯಕ್ರಮದಲ್ಲಿ ಪ್ರಣಬ್ ಅವರು ಭಾಗವಹಿಸುವ ಮೂಲಕ ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದಾರೆ. ಅವರ ಭಾಷಣ ಎಲ್ಲರ ಮನಸ್ಸು ತಟ್ಟಿದೆ ಎಂದಿದ್ದಾರೆ. ಅಲ್ಲದೇ ಮೋಹನ್ ಭಾಗವತ್ ಹಾಗೂ ಮುಖರ್ಜಿ ಅವರ ದೃಷ್ಟಿಕೋನ ಒಂದೇ ರೀತಿ ಇದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಪತ್ರದ ಕೊನೆಯಲ್ಲಿ ಆರ್ ಎಸ್‍ಎಸ್‍ಗೆ ವ್ಯಕ್ತವಾಗುತ್ತಿರುವ ಜನ ಬೆಂಬಲದ ಕುರಿತು ಕೂಡ ಉಲ್ಲೇಖಿಸಿದ್ದಾರೆ.

  • #PranabAtRSS: ರಾಷ್ಟ್ರ, ರಾಷ್ಟ್ರೀಯತೆ, ರಾಷ್ಟ್ರಭಕ್ತಿ ಬಗ್ಗೆ ಮಾತನಾಡಿದರು ಪ್ರಣಬ್ ದಾದಾ!

    #PranabAtRSS: ರಾಷ್ಟ್ರ, ರಾಷ್ಟ್ರೀಯತೆ, ರಾಷ್ಟ್ರಭಕ್ತಿ ಬಗ್ಗೆ ಮಾತನಾಡಿದರು ಪ್ರಣಬ್ ದಾದಾ!

    ನಾಗ್ಪುರ: ಕಾಂಗ್ರೆಸ್ ಹೈಕಮಾಂಡ್ ಹಾಗೂ ನಾಯಕರ ತೀವ್ರ ವಿರೋಧದ ನಡುವೆಯೇ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇಂದು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರ್.ಎಸ್.ಎಸ್ ಮುಖ್ಯ ಕಚೇರಿಗೆ ಭೇಟಿ ನೀಡಿದರು.

    ಆರ್ ಎಸ್‍ಎಸ್‍ನ ತೃತೀಯ ವರ್ಷದ ಸಂಘ ಶಿಕ್ಷಾ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಷ್ಟ್ರ, ರಾಷ್ಟ್ರೀಯತೆ ಮತ್ತು ರಾಷ್ಟ್ರಭಕ್ತಿಯ ಅಂಶಗಳನ್ನು ಉಲ್ಲೇಖಿಸಿದರು.

    ವಸುದೈವ ಕುಟುಂಬಕಂ ಎನ್ನುವುದರಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ರಾಷ್ಟ್ರೀಯತೆ ಮತ್ತು ದೇಶಭಕ್ತಿ ಎರಡೂ ಒಂದೇ. ಸರ್ವೇ ಜನೋ, ಸುಖಿನೋ ಭವಂತು. ಇಡೀ ವಿಶ್ವವೇ ಒಂದು ಕುಟುಂಬ ಎಂಬ ಆಶಯವನ್ನು ವ್ಯಕ್ತಪಡಿಸಿದರು.

    ಇದೇ ವೇಳೆ ದೇಶದ ಭವ್ಯ ಇತಿಹಾಸದ ಕುರಿತು ಹಲವು ಘಟನೆಗಳನ್ನು ಸ್ಮರಿಸಿದ ಅವರು, ಚಾಣಕ್ಯನ ಅರ್ಥ ಶಾಸ್ತ್ರ, ಅಶೋಕ, ಮೌರ್ಯರ ಆಡಳಿತ ಸೇರಿದಂತೆ ಬ್ರಿಟಿಷ್ ಆಳ್ವಿಕೆ, ದೇಶಭಕ್ತರು, ರಾಜಕಾರಣಿಗಳು, ಸ್ವಾತಂತ್ರ್ಯ ಹೋರಾಟದ ಅಂಶಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.

    ರಾಷ್ಟ್ರೀಯತೆ ಕುರಿತು ನೆಹರೂ ಅವರ `ಡಿಸ್ಕವರಿ ಆಫ್ ಇಂಡಿಯಾ’ ಪುಸ್ತಕವನ್ನು ಪ್ರಸ್ತಾಪಿಸಿದ ಅವರು, ರಾಷ್ಟ್ರೀಯ ಎಂಬುವುದು, ಹಿಂದೂ, ಮುಸ್ಲಿಂ, ಸಿಖ್ ಹಾಗೂ ಭಾರತದ ಇತರ ಧರ್ಮಗಳ ಸೈದ್ಧಾಂತಿಕ ಸಮ್ಮಿಲನದಿಂದ ಮಾತ್ರ ಹೊರಬರಲು ಸಾಧ್ಯ ಎನ್ನುವ ಮನವರಿಕೆಯಾಗಿದೆ ಎಂಬ ಅರ್ಥ ಸಾರುವ ಸಾಲುಗಳನ್ನು ಉಲ್ಲೇಖಿಸಿದರು.

    ಇದೇ ವೇಳೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ನಮ್ಮನ್ನು ನಡೆಸುತ್ತಿದೆ. ಇವುಗಳು ನಮ್ಮ ಮಾರ್ಗದರ್ಶಿಗಳಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುವುದು ಒಂದು ಮಾರ್ಗಸೂತ್ರ. ಒಂದೇ ಸಂವಿಧಾನದ ಅಡಿ, ಒಂದಾಗಿ ಹಲವು ಭಾಷೆ, ಧರ್ಮದವರು ಗುರುತಿಸಿಕೊಳ್ಳುತ್ತಿದ್ದಾರೆ ಎಂದರು.

    ಇದಕ್ಕೂ ಮೊದಲು ಅವರು ಆರ್.ಎಸ್.ಎಸ್ ಸಂಸ್ಥಾಪಕ ಕೆ.ಬಿ. ಹೆಡಗೇವಾರ್ ಜನ್ಮಸ್ಥಳಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಇಲ್ಲಿನ ಸಂದರ್ಶಕರ ಪುಸ್ತಕದಲ್ಲಿ, ಭಾರತಮಾತೆಯ ಶ್ರೇಷ್ಟ ಪುತ್ರ ಕೆಬಿ ಹೆಡಗೇವಾರ್ ಅವರಿಗೆ ಗೌರವ ಸಲ್ಲಿಸಲು ಆಗಮಿಸಿದ್ದೇನೆ ಎಂದು ಬರೆದು ತಮ್ಮ ಹಸ್ತಾಕ್ಷರ ಮಾಡಿದರು.

    ಇದಕ್ಕೂ ಮುನ್ನ ಇಂದು ಬೆಳಗ್ಗೆಯಿಂದಲೇ ಕಾಂಗ್ರೆಸ್ ನಾಯಕರು ಪ್ರಣಬ್ ಮುಖರ್ಜಿ ಭೇಟಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯ ಸಭಾ ಸದಸ್ಯ ಹಾಗೂ ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್ ಅವರು, ಪ್ರಣಬ್ ದಾ ಇದನ್ನು ನಾವು ನಿಮ್ಮಿಂದ ನಿರೀಕ್ಷಿಸಿರಲಿಲ್ಲ ಎಂದು ಟ್ವೀಟ್ ಮಾಡಿದ್ದರು.

    ಪ್ರಣಬ್ ಮುಖರ್ಜಿ ಅವರು ಭಾಷಣ ಆರಂಭಿಸುವುದಕ್ಕೂ ಕೆಲವೇ ಗಂಟೆಗಳ ಮೊದಲು ಕಾಂಗ್ರೆಸ್ ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಆರ್.ಎಸ್.ಎಸ್ ಕೆಲಸ ಕಾರ್ಯಗಳನ್ನು ಟೀಕಿಸಿ ಟ್ವೀಟ್ ಮಾಡಲಾಗಿತ್ತು. ಇಂದಿನ ಭೇಟಿ ವೇಳೆ ಪ್ರಣಬ್ ಮುಖರ್ಜಿ ಅವರು ಏನೆಲ್ಲಾ ಮಾತನಾಡುತ್ತಾರೋ ಎಂದು ಕಾಂಗ್ರೆಸ್ ನಾಯಕರು ಆತಂಕಗೊಳಗಾಗಿದ್ದಂತೂ ಸುಳ್ಳಲ್ಲ.

    ಕಾರ್ಯಕ್ರಮದಲ್ಲಿ ಮಾತನಾಡಿದ ಆರ್ ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಪ್ರತಿವರ್ಷದಂತೆ ಈ ಬಾರಿಯೂ ನಾಗ್ಪುರದಲ್ಲಿ ಸಂಘ ಶಿಕ್ಷಾ ವರ್ಗದ ಸಮಾರೋಪ ನಡೆಯುತ್ತಿದೆ. ಪ್ರತಿಬಾರಿಯೂ ನಾವು ಈ ದೇಶಕ್ಕೆ ಸೇವೆ ಸಲ್ಲಿಸಿದ ಪ್ರಮುಖ ವ್ಯಕ್ತಿಗಳನ್ನು ಆಹ್ವಾನಿಸುತ್ತೇವೆ. ಅದರಂತೆಯೇ ನಾವು ಈ ಬಾರಿ ಪ್ರಣಬ್ ಮುಖರ್ಜಿ ಅವರನ್ನು ಆಹ್ವಾನಿಸಿದ್ದೇವೆ. ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಕ್ಷಣ ಪ್ರಣಬ್ ಬದಲಾಗಲ್ಲ. ಪ್ರಣಬ್ ಅವರು ಪ್ರಣಬ್ ಅವರಾಗಿಯೇ ಉಳಿಯುತ್ತಾರೆ.  ಆರ್ ಎಸ್‍ಎಸ್  ಆರ್ ಎಸ್‍ಎಸ್ ಆಗಿಯೇ ಉಳಿಯುತ್ತದೆ ಎಂದು ಹೇಳಿದರು.

    ವಿವಿಧತೆಯಲ್ಲಿ ಏಕತೆಯನ್ನು ನಾವು ಬಹಳ ವರ್ಷಗಳಿಂದಲೂ ಅನುಸರಿಸುತ್ತಿದ್ದೇವೆ. ನಾವು ಭಾರತೀಯರು. ದೇಶವನ್ನು ಸಂಘಟಿಸುವುದೇ ನಮ್ಮ ಗುರಿ. ಹಾಗಾಗಿ ನಾವು ದೇಶಕ್ಕಾಗಿ ಬೇರೆ ಬೇರೆ ರೀತಿಯಲ್ಲಿ ಸೇವೆ ಸಲ್ಲಿಸಿದವರನ್ನು ನಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇವೆ ಎಂದು ಸ್ಪಷ್ಟೀಕರಣ ನೀಡಿದರು.

     

  • ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಭಾಗಿ – ಅಸಮಾಧಾನ ಹೊರಹಾಕಿದ ಪುತ್ರಿ

    ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಭಾಗಿ – ಅಸಮಾಧಾನ ಹೊರಹಾಕಿದ ಪುತ್ರಿ

    ನವದೆಹಲಿ: ಮಾಜಿ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ಪುತ್ರಿ ಶರ್ಮಿಷ್ಠ ಮುಖರ್ಜಿ ಟ್ವಿಟ್ಟರ್ ನಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಣಬ್ ಮುಖರ್ಜಿ ಅವರ ಭೇಟಿಯನ್ನು ಈಗಾಗಲೇ ತಮ್ಮ ಸಿದ್ದಾಂತಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಆರ್ ಎಸ್‍ಎಸ್ ಹಾಗೂ ಸಂಘ ಪರಿವಾರ ಬಿಂಬಿಸಿದೆ. ಸಮಾರಂಭದಲ್ಲಿನ ಭಾಷಣ ಬಹುಬೇಗ ಮರೆತು ಹೋಗುತ್ತದೆ. ಆದರೆ ಈ ದೃಶ್ಯಗಳು ಮಾಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

    ಮತ್ತೊಂದು ಟ್ವೀಟ್ ನಲ್ಲಿ ನಾಗಪುರದ ಈ ಭೇಟಿ ಹಲವು ಸುಳ್ಳು, ವದಂತಿಗಳನ್ನು ಹರಡುವುದಕ್ಕೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದೆ. ಈ ನಡೆ ಹೆಚ್ಚು ಕಾಲ ಪರಿಣಾಮ ಬೀರಲಿದ್ದು, ಇದು ಆರಂಭ ಮಾತ್ರ ಎಂದು ಟ್ವೀಟ್ ಮಾಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

    ಇಂದು ನಡೆಯಲಿರುವ ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಣಬ್ ಮುಖರ್ಜಿ ಅವರು ಈಗಾಗಲೇ ನಾಗಪುರಕ್ಕೆ ಆಗಮಿಸಿದ್ದಾರೆ. ಆದರೆ ಪ್ರಣಬ್ ಅವರ ಈ ನಿರ್ಧಾರಕ್ಕೆ ಹಲವು ಕಾಂಗ್ರೆಸ್ ನಾಯಕರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿದರು.

    ಪ್ರಣಬ್ ಅವರ ನಿರ್ಧಾರ ಕುರಿತು ಸೋನಿಯಾ ಅವರ ಆಪ್ತ ವಲಯದಲ್ಲಿ ಗುರುತಿಸಿ ಕೊಂಡಿದ್ದ ಕಾಂಗ್ರೆಸ್ ಮುಖಂಡ ಅಹಮದ್ ಪಟೇಲ್ ಸಹ ಟ್ವೀಟ್ ಮಾಡಿ ಪ್ರಣಬ್ ದಾ ಅವರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ. ಇವೆಲ್ಲವುಗಳ ನಡುವೆಯೂ ಮಾಜಿ ರಾಷ್ಟ್ರಪತಿಗಳು ಕಾರ್ಯಕ್ರಮದಲ್ಲಿ ಭಾವಹಿಸುತ್ತಿದ್ದು, ಸಮಾರಂಭದಲ್ಲಿ ಅವರು ಮಾಡುವ ಭಾಷಣ ಕುತೂಹಲಕ್ಕೆ ಕಾರಣವಾಗಿದೆ.

    ಕಥಕ್ ನೃತ್ಯಪಟು ಆಗಿರುವ ಶರ್ಮಿಷ್ಠಾ ಮುಖರ್ಜಿ 2014ರಲ್ಲಿ ಕಾಂಗ್ರೆಸ್ ಸೇರಿದ್ದು, 2015ರಲ್ಲಿ ದೆಹಲಿಯ ಗ್ರೇಟರ್ ಕೈಲಾಸ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಪ್ ಅಭ್ಯರ್ಥಿ ವಿರುದ್ಧ ಸೋತು ಮೂರನೇ ಸ್ಥಾನ ಪಡೆದಿದ್ದರು. ಪ್ರಸ್ತುತ ದೆಹಲಿಯ ಕಾಂಗ್ರೆಸ್ಸಿನ ವಕ್ತಾರೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಪ್ರಧಾನ ಕಚೇರಿ ನಾಗ್ಪುರದಲ್ಲಿ ಸ್ವಯಂಸೇವಕರಿಗೆ ನಡೆಸುವ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಪ್ರಣಬ್ ಮುಖರ್ಜಿ ಅವರನ್ನು ಆರ್ ಎಸ್‍ಎಸ್ ಆಹ್ವಾನಿಸಿದೆ. 25 ದಿನಗಳ ಶಿಕ್ಷಾ ವರ್ಗ ಜೂನ್ 7ರಂದು ಮುಕ್ತಾಯವಾಗಲಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಣಬ್ ಮುಖರ್ಜಿ ಒಪ್ಪಿಗೆ ನೀಡಿರುವುದು ಎಲ್ಲರ ಹುಬ್ಬೇರಿಸಿದೆ.