– ಗೋ ಮಾಂಸ ತಿಂದ್ರೆ ಹಿಡಿದು ಹೊಡಿರಿ
– ಪೊಲೀಸ್ ಎದುರೇ ಬೆಂಬಲಿಗರಿಗೆ ಮೇಯರ್ ಆದೇಶ
ಲಕ್ನೋ: ರಂಜಾನ್ ದಿನಗಳಲ್ಲಿ ಉಪವಾಸ ಇರುತ್ತಾರೆ. ಹೀಗಾಗಿ ಈ ಅವಧಿಯಲ್ಲಿ ಮಾತ್ರ ಮುಸ್ಲಿಮರು ಮಾಂಸವನ್ನು ತಿನ್ನಲಿ ಎಂದು ಉತ್ತರ ಪ್ರದೇಶದ ಬಿಜೆಪಿ ಮುಖಂಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಲಿಘಡ್‍ನ ಮಾಜಿ ಮೇಯರ್ ಶಕುಂತಲಾ ಭಾರತಿ ಅವರು ಪೊಲೀಸ್ ಅಧಿಕಾರಿಗೆ ಅವಾಜ್ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶಕುಂತಲಾ ಅವರ ಹೇಳಿಕೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷ (ಬಿಎಸ್‍ಪಿ) ಅಧಿಕಾರದಲ್ಲಿ ಇಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಗೋವುಗಳ ಹತ್ಯೆಯ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಗೋ ಹತ್ಯೆ ಮಾಡುವವರ ಮೇಲೆ ಜನರು ಹಲ್ಲೆ ಮಾಡಿದರೆ ನಾವು ಜವಾಬ್ದಾರರಲ್ಲ ಎಂದು ಶಕುಂತಲಾ ಭಾರತಿ, ಪೊಲೀಸ್ ಅಧಿಕಾರಿಗೆ ತಿಳಿಸಿದ್ದಾರೆ.
ಈ ವೇಳೆ ಮಧ್ಯ ಪ್ರವೇಶ ಮಾಡಿ ಬೆಂಬಲಿಗ, ಗೋವುಗಳ ಹತ್ಯೆ ತಡೆಯಲು ಮುಂದಾದರೆ ನಮ್ಮ ವಿರುದ್ಧ ಬಿಳುತ್ತಾರೆ ಎಂದು ಹೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಕುಂತಲಾ ಅವರು, ಅಂತವರನ್ನು ಹಿಡಿದು ಹೊಡೆಯಿರಿ. ಏನೇ ಬಂದರೂ ನಾನು ನೋಡಿಕೊಳ್ಳುತ್ತೇನೆ ಎಂದು ಪೊಲೀಸ್ ಅಧಿಕಾರಿಯ ಎದುರೇ ಹೇಳಿದ್ದಾರೆ.
ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಮೇ 22ರಂದು ಆಟೋದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂದು ಶಂಕಿಸಿ ಯುವಕರ ಗುಂಪೊಂದು ಮುಸ್ಲಿಂ ಯುವತಿ ಹಾಗೂ 4 ಮಂದಿ ಯುವಕರಿಗೆ ಮನಬಂದಂತೆ ಥಳಿಸಿದ್ದರು. ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಯುವಕರು ಹಲ್ಲೆ ಮಾಡುತ್ತಿರುವುದನ್ನು ಸ್ಥಳೀಯರು ವಿಡಿಯೋ ಮಾಡುತ್ತಿದ್ದರೆ ವಿನಾಃ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ವಿಡಿಯೋದಲ್ಲಿ ಕೆಲ ಯುವಕರ ಗುಂಪು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುತ್ತಾ ಯುವತಿಯ ತಲೆಗೆ ಚಪ್ಪಲಿಯಿಂದ ಹೊಡೆದಿದ್ದರು ಮತ್ತು ಕೆಲ ಯುವಕರನ್ನು ಮರಕ್ಕೆ ಕಟ್ಟಿ ಅವರಿಗೆ ದೊಣ್ಣೆಗಳಿಂದ ಹೊಡೆಸಿದ್ದರು.
ಮೇ 23 ರಂದು ಈ ವಿಡಿಯೋವನ್ನು ಶುಭಮ್ ಸಿಂಗ್ ಎಂಬ ಶ್ರೀ ರಾಮ ಸೇನಾ ಕಾರ್ಯಕರ್ತ ತನ್ನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡು ನಂತರ ತೆಗೆದು ಹಾಕಿದ್ದನು. ಈ ಆಧಾರದ ಮೇಲೆ ವಿಚಾರಣೆ ಮಾಡಿರುವ ಪೊಲೀಸರು ವಿಡಿಯೋದಲ್ಲಿ ಕಾಣುವ ಸಿಯೋನಿ ನಗರದ ಐದು ಜನ ಯುವಕರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.