ಬೆಂಗಳೂರು: ಮಣ್ಣಿನ ಮಗ ಏನು ಮಾಡಿದ್ದಾರೆ ಅಂತ ಪ್ರಶ್ನೆ ಮಾಡಿದ ಪ್ರಧಾನಿ ಮೋದಿ ಅವ್ರಿಗೆ ಉತ್ತರ ಕೊಡ್ತೀನಿ ಅಂತ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಗರಂ ಆಗಿದ್ದಾರೆ.
ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಮಣ್ಣಿನ ಮಗ ದೇಶಕ್ಕೆ ಏನು ಮಾಡಿದ್ದಾರೆ ಅಂತ ಮೋದಿ ಲಘುವಾಗಿ ಮಾತಾಡಿದ್ದಾರೆ. ನಾನು ದೆಹಲಿಗೆ ಹೋಗುತ್ತಾ ಇದ್ದೇನೆ. ಮಣ್ಣಿನ ಮಗ ಏನ್ ಮಾಡಿದ್ದಾರೆ ಅಂತ ಕೇಳಿದ್ದಾರೆ. ಇದಕ್ಕೆ ಉತ್ತರ ಕೊಡುತ್ತೇನೆ ಎಂದು ತಿಳಿಸಿದ್ದಾರೆ.
ಸಂಸತ್ ನಲ್ಲಿ ಸಮಯ ಸಿಕ್ಕರೆ ಈ ಬಗ್ಗೆ ನಾನು ಮಾತಾಡ್ತೀನಿ. 50 ವರ್ಷ ನಾನು ಏನ್ ಮಾಡಿದ್ದೀನಿ ಅಂತ ಸಂಸತ್ ನಲ್ಲಿ ಉತ್ತರ ಕೊಡ್ತೀನಿ ಅಂತ ಮೋದಿ ವಿರುದ್ಧ ಕಿಡಿಕಾರಿದ್ರು. ಅಧಿವೇಶನ ಮುಗಿದ ಮೇಲೆ ರಾಜ್ಯದಲ್ಲೆ ಇರುತ್ತೇನೆ ಅವರು ನುಡಿದ್ರು.
ಆಡಿಯೋ ಬಗ್ಗೆ ತಪ್ಪು ಒಪ್ಪಿಕೊಂಡ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಮಾಜಿ ಪ್ರಧಾನಿ ನಿರಾಕರಿಸಿದ್ದಾರೆ. ಆಡಿಯೋ ಬಗ್ಗೆ ನಾನು ಯಾವುದೇ ರಿಯಾಕ್ಷನ್ ಕೊಡೋದಿಲ್ಲ. ಆಡಿಯೋ ಮಾಡಿರೋರು ಯಾರು, ಅದಕ್ಕೆ ಯಾರು ಕಾರಣ ಇದೆಲ್ಲ ನನಗೆ ಸಂಬಂಧ ಇಲ್ಲ. ನಾನು ಪ್ರತಿಕ್ರಿಯೆ ಕೊಡೋದು ಯೋಗ್ಯ ಅಲ್ಲ. ಅದಕ್ಕೆ ನಾನು ರಿಯಾಕ್ಷನ್ ಕೊಡೊಲ್ಲ ಅಂತ ನಿರಾಕರಣೆ ಮಾಡಿದ್ರು.
ಬೆಂಗಳೂರು: ಕಾಂಗ್ರೆಸ್- ಜೆಡಿಎಸ್ ಮೈತ್ರಿಯ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರ ಇದೆ ಎಂದು ಅನಿಸುತ್ತಿಲ್ಲವೆಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಮೂರು ದಿನ ಸಿಎಂ ಆಗಿದ್ದರಿಂದ ಯಡಿಯೂರಪ್ಪನವರಿಗೆ ನೋವು ಆಗಿದೆ. ಅದೇ ನೋವಲ್ಲಿ ನಮ್ಮ ಸರ್ಕಾರವನ್ನು ಬೀಳಿಸಲು ಯತ್ನ ಮಾಡ್ತಿದ್ದಾರೆ. ಸರ್ಕಾರ ಉರುಳಿಸೋ ಯತ್ನದಲ್ಲಿ ಮೋದಿ ಪಾತ್ರ ಇದೆ ಅಂತ ಅನಿಸಲ್ಲ. ಆದ್ರೆ ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರಿಂದ ಯತ್ನಿಸುತ್ತಿದ್ದಾರೆ ಎಂದು ಅವರು ಗರಂ ಆಗಿದ್ದಾರೆ.
ಅಧಿವೇಶನದಲ್ಲೇ ಮೈತ್ರಿ ಸರ್ಕಾರವನ್ನ ಉರುಳಿಸಲು ಬಿಜೆಪಿ ತಂತ್ರಗಾರಿಕೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಜೊತೆಗೆ ಸಿಎಂ ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರೆ. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೇವೇಗೌಡರ ಮನೆಗೆ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಬಜೆಟ್ ಅಧಿವೇಶನ ವೇಳೆಯೇ ಅತೃಪ್ತ ಶಾಸಕರು ಗೈರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಒಂದು ವೇಳೆ ಶಾಸಕರು ಗೈರಾದ್ರೆ ಏನ್ ಮಾಡಬೇಕು ಅನ್ನೋದರ ಬಗ್ಗೆ ಚರ್ಚೆ ನಡೆಸಲಾಗಿದೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.
ಬಾಗೂರು ಮಂಜೇಗೌಡ ಆರೋಪ:
ಕಾಂಗ್ರೆಸ್ ನಾಯಕರ ಸಂಬಂಧಿಕರಿಗೆ ಸಚಿವ ಎಚ್‍ಡಿ ರೇವಣ್ಣ ಕಾಡುತ್ತಿದ್ದಾರೆ. ಕಾಂಗ್ರೆಸ್ ಮುಖಂಡರ ಸಂಬಂಧಿಕರಾಗಿರುವ ಸರ್ಕಾರಿ ಅಧಿಕಾರಿಗಳನ್ನು ಹುಡುಕಿ ಹುಡುಕಿ ತೊಂದರೆ ಕೊಡುತ್ತಿದ್ದಾರೆ. ನನ್ನ ಸಹೋದರರಾದ ಇಬ್ಬರು ಆರ್‍ಟಿಒ ಇನ್ಸ್‍ಪೆಕ್ಟರ್‍ಗಳನ್ನು ರೇವಣ್ಣ ವರ್ಗಾಯಿಸಿದ್ದಾರೆ. ಕಾಂಗ್ರೆಸ್ 80 ಸ್ಥಾನ ಗೆದ್ದಿರೋ ಕಾರಣ ಜೆಡಿಎಸ್ ಅಧಿಕಾರದಲ್ಲಿದೆ. ಜೆಡಿಎಸ್ 37 ಸ್ಥಾನ ಗೆದ್ದಿರೋ ಕಾರಣ ಅಧಿಕಾರದಲ್ಲಿಲ್ಲ, ನೆನಪಿರಲಿ ಎಂದು ಹೊಳೆನರಸೀಪುರದಲ್ಲಿ ರೇವಣ್ಣ ವಿರುದ್ಧ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ಆರೋಪಿಸಿದ್ದಾರೆ.
– ಸರ್ಕಾರಿ ಕಾರು ಬಳಸಿದ ಪ್ರಜ್ವಲ್ ರೇವಣ್ಣ ವಿರುದ್ಧ ಬಿಜೆಪಿ ಟ್ವೀಟ್
– ಪ್ರಜ್ವಲ್ ವಿರುದ್ಧ ಸಾರ್ವಜನಿಕರ ಆಕ್ರೋಶ
ಹಾಸನ: ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಅವರು ಇಂದು ಜಿಲ್ಲೆಯ ವಿವಿಧ ವಾರ್ಡ ಗಳಿಗೆ ಸರ್ಕಾರಿ ಕಾರಿನಲ್ಲಿ ಸುತ್ತಾಡಿದ್ದು, ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಜ್ವಲ್ ರೇವಣ್ಣ ಕಾರಿನಲ್ಲಿ ಸುತ್ತಾಡುತ್ತಿರುವ ವಿಡಿಯೋವನ್ನು ಕರ್ನಾಟಕ ಬಿಜೆಪಿ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿ, ಯಾರದೋ ಟ್ಯಾಕ್ಸ್ ದುಡ್ಡು, ದೇವೆಗೌಡ್ರ ಮೊಮ್ಮಕ್ಕಳ ಮೋಜು ಎಂದು ಬರೆದು ಟೀಕಿಸಿದೆ.
ವೈಯಕ್ತಿಕ ಜೀವನಕ್ಕೆ ಸರ್ಕಾರಿ ಕಾರನ್ನು ಹೇಗೆ ಬಳಕೆ ಮಾಡುತ್ತಿದ್ದಾರೆ ಎನ್ನುವುದನ್ನು ಇದೊಂದು ಉತ್ತಮ ಉದಾಹರಣೆ. ವಂಶಪಾರಂಪರ್ಯ ರಾಜಕಾರಣಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ. ಸಾರ್ವಜನಿಕರ ತೆರಿಗೆ ಹಣಕ್ಕೆ ದೇವೇಗೌಡರ ಕುಟುಂಬದವರಿಂದ ಅವಮಾನ ಎಂದು ಬಿಜೆಪಿ ತನ್ನ ಖಾತೆಯಲ್ಲಿ ಬರೆದುಕೊಂಡಿದೆ.
ಯಾರದೋ ಟ್ಯಾಕ್ಸ್ ದುಡ್ಡು, ದೇವೆಗೌಡ್ರ ಮೊಮ್ಮಕ್ಕಳ ಮೋಜು..
Super CM Sri. H D Revanna’s son uses govt cars for personal use.
A classic example of what dynasty rule can do to any state. These act by former PM Sri. Deve Gowda’s family members is an insult to the tax payers. pic.twitter.com/bG00H9x7Hc
ಏನಿದು ಘಟನೆ?
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಬೆನ್ನಲ್ಲೇ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಇಂದು ಸರ್ಕಾರಿ ಇನ್ನೋವಾ ಕಾರಿನಲ್ಲಿ ವಿವಿಧ ವಾರ್ಡ್‍ಗಳಿಗೆ ಸುತ್ತಾಡಿದ್ದಾರೆ. ಅಲ್ಲದೇ ಸರ್ಕಾರಿ ಕಾರಿನಲ್ಲಿಯೇ ಪಕ್ಷದ ಕಾರ್ಯಕರ್ತರ ಸಭೆಗೆ ಬಂದಿದ್ದಾರೆ. ಹೀಗಾಗಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಸರ್ಕಾರಿ ಕಾರು ದುರ್ಬಳಕೆ ಮಾಡಿದ್ದಕ್ಕೆ ಭಾರೀ ಟೀಕೆ ಕೇಳಿಬಂದಿದೆ.
ಕೆಎ 01 ಜಿಎ 8009 ನಂಬರಿನ ಸರ್ಕಾರಿ ಇನ್ನೋವಾ ಕಾರ್ ಬಳಸಿದ ಪ್ರಜ್ವಲ್ ರೇವಣ್ಣ, ತಮ್ಮ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರ ಜೊತೆ ನಗರದಾದ್ಯಂತ ಸಂಚಾರ ಮಾಡಿದ್ದಾರೆ. ಇದೀಗ ಪ್ರಜ್ವಲ್ ಸರ್ಕಾರಿ ಹುದ್ದೆಯಲ್ಲಿ ಇಲ್ಲ. ಹೀಗಿದ್ದರೂ ಹೇಗೆ ಸರ್ಕಾರಿ ಕಾರ್ ಬಳಸಿದ್ರು ಅನ್ನೋದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಬೆಂಗಳೂರು: ಕಾಂಗ್ರೆಸ್‍ಗೆ ಈಗ ಒಂದು ಕಡೆ ಆಪರೇಷನ್ ಕಮಲ ಭೀತಿ, ಮತ್ತೊಂದು ಕಡೆ ಮೈತ್ರಿಧರ್ಮದ ಆತಂಕ ಎದುರಾಗಿದೆ. ಮೈತ್ರಿ ಧರ್ಮ ಪಾಲನೆ ಪಾಲಿಸದಿದ್ದರೆ ಸರ್ಕಾರಕ್ಕೆ ಅಪಾಯ ಅಂತ ಕಾಂಗ್ರೆಸ್ ನಾಯಕರಿಗೆ ಮಾಜಿ ಪ್ರಧಾನಿ ದೇವೇಗೌಡರು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಸರ್ಕಾರದ ಮೇಲೆ ಹಿಡಿತಕ್ಕೆ ಯತ್ನಿಸುವುದು ಒಳ್ಳೆಯದಲ್ಲ. ಯಾರಾದರೂ ಪ್ರಯತ್ನಿಸಿದರೆ ಅದು ದುರಂತಕ್ಕೆ ಕಾರಣವಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಕೋಮುವಾದಿ ಶಕ್ತಿಗಳಿಗೆ ಪ್ರಯೋಜನ ಆಗಲು ಬಿಡಬೇಡಿ ಎಂದು ಹೇಳಿದ್ದಾರೆ.
ದೇವೇಗೌಡರು ಸಿದ್ದರಾಮಯ್ಯ ಅವರನ್ನ ಟೀಕಿಸಿದ್ದಾರಾ ಅಂತ ಚಿಂತಿಸೋ ಹೊತ್ತಲ್ಲೇ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ. ಮೈತ್ರಿ ಸರ್ಕಾರ ಉರುಳಿಸೋಕೆ ಸಿದ್ದರಾಮಯ್ಯ ಹೋಗಲ್ಲ. 5 ವರ್ಷದ ತಮ್ಮ ಯೋಜನೆಗಳ ಜಾರಿಗೆ ಸಿದ್ದರಾಮಯ್ಯ ಸಹಕಾರ ಕೊಡ್ತಿದ್ದಾರೆ ಅನ್ನೋ ಮೂಲಕ ಸಿದ್ದರಾಮಯ್ಯಗೆ ಮೈತ್ರಿ ಸರ್ಕಾರ ಇಷ್ಟ ಇಲ್ಲ ಅನ್ನೋ ಹೊರಟ್ಟಿ ಹೇಳಿಕೆಗೆ ಗೌಡರು ಸ್ಪಷ್ಟನೆ ನೀಡಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಉತ್ತಮ ಫಲಿತಾಂಶ ದಾಖಲಿಸಬಹುದು. ತೆಲಂಗಾಣದಲ್ಲಿ ಟಿಆರ್ ಚಂದ್ರಶೇಖರ್ ರಾವ್ ಉತ್ತಮ ಜನಪರ ಆಡಳಿತ ನೀಡಿದ ಪರಿಣಾಮ ಚುನಾವಣೆಯಲ್ಲಿ ಟಿಆರ್‍ಎಸ್ ಗೆದ್ದುಕೊಂಡಿದೆ. ಅದೇ ರೀತಿಯಾಗಿ ಕುಮಾರಸ್ವಾಮಿ ಅವರು ರೈತರಿಗೆ ನೆರವು ನೀಡಲು ಸಾಲಮನ್ನಾ ಮಾಡಿದ್ದಾರೆ. ಇದರಿಂದಾಗಿ ಕರ್ನಾಟಕದಲ್ಲೂ ಮೈತ್ರಿ ಮಾಡಿಕೊಂಡರೆ ಉತ್ತಮ ಫಲಿತಾಂಶ ದಾಖಲಿಸಬಹುದು ಎನ್ನುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ಬಸವರಾಜ್ ಹೊರಟ್ಟಿ ಹೇಳಿದ್ದೇನು?
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ನಡೆಯುತ್ತಿರುವ ಕನ್ನಡ ಸಮಾವೇಶದಲ್ಲಿ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅವರು ಪಾಲ್ಗೊಂಡಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು, ನನ್ನ ರಾಜಕೀಯ ಅನುಭವದ ಆಧಾರದ ಮೇಲೆ 20 ಜನ ಶಾಸಕರು ರಾಜೀನಾಮೆ ಕೊಡುವ ಸಾಧ್ಯತೆ ಇಲ್ಲ. ರಾಜಕೀಯದಿಂದ ನಿವೃತ್ತಿಯಾಗುವುದಿದ್ದರೆ ಮಾತ್ರ ರಾಜೀನಾಮೆ ನೀಡಬೇಕು. ಸರ್ಕಾರವನ್ನು ಅಭದ್ರಗೊಳಿಸುವ ನಿಟ್ಟಿನಲ್ಲಿ ರಾಜೀನಾಮೆ ಆಟ ಆಡುವುದು ಸರಿಯಲ್ಲ. ಸಿದ್ದರಾಮಯ್ಯ ಮಾಸ್ಟರ್ ಮೈಂಡ್ ಅಂತ ಹೇಳುವುದಿಲ್ಲ. ಬಹಳಷ್ಟು ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಅಂತಾರೆ. ಹಾಗಾದ್ರೆ ಕುಮಾರಸ್ವಾಮಿ ಅವರ ಪರಿಸ್ಥಿತಿ ಏನು? ಸಿದ್ದರಾಮಯ್ಯ ಸೂಪರ್ ಸಿಎಂ ಅಲ್ಲ, ಅವರನ್ನು ಸಿಎಂ ಎಂದು ಬಿಂಬಿಸುವುದು ಸರಿ ಅಲ್ಲ ಎಂದು ಕಿಡಿಕಾರಿದ್ದರು.
ಬೆಂಗಳೂರು: ಲೋಕಸಭೆ ಸೀಟು ಹಂಚಿಕೆಯಲ್ಲಿ ರಾಜ್ಯದ 28 ಸ್ಥಾನಗಳಲ್ಲಿ ಜೆಡಿಎಸ್ ಪಕ್ಷಕ್ಕೆ 12 ಸ್ಥಾನ ಸಿಗಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.
ನಗರದ ಜೆಪಿ ಭವನದಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಯಾವುದೇ ಸಮಸ್ಯೆ ಇಲ್ಲದಂತೆ ಈ ಸ್ಥಾನ ಹಂಚಿಕೆ ಮಾಡಿಕೊಳ್ಳುತ್ತೇವೆ. ಜನವರಿ 8 ರಂದು ಲೋಕಸಭೆ ಅಧಿವೇಶನ ಮುಗಿಯಲಿದೆ. ಜನವರಿ 15ರ ಒಳಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜತೆ ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಸಿ ಅಂತಿಮ ಮಾಡುತ್ತೇವೆ ಎಂದು ತಿಳಿಸಿದರು.
ಇದುವರೆಗೆ 8 ರಿಂದ 10 ಸ್ಥಾನಗಳಿಗೆ ಜೆಡಿಎಸ್ ಬೇಡಿಕೆ ಇಟ್ಟಿದೆ ಎನ್ನಲಾಗುತ್ತಿತ್ತು. ಆದರೆ ಈಗ ಜೆಡಿಎಸ್ ವರಿಷ್ಠರೆ 12 ಸ್ಥಾನ ಬೇಕು ಎಂಬ ನೇರ ಬೇಡಿಕೆ ಇಟ್ಟಿದ್ದು. ಇದರೊಂದಿಗೆ ದೋಸ್ತಿ ಪಕ್ಷ ಕಾಂಗ್ರೆಸ್‍ಗೆ ಹೊಸ ಧರ್ಮ ಸಂಕಟ ಎದುರಾಗಿದೆ.
ಈ ನಡುವೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಕೈತಪ್ಪಿದ್ದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿರೋ ಶಾಸಕ ಡಾ. ಸುಧಾಕರ್ ಗೆ ಮಾಜಿ ಪ್ರಧಾನಿ ದೇವೇಗೌಡರು ತಿಳಿ ಹೇಳಿದ್ದು, ಯಾರೂ ಕೂಡ ಇಲ್ಲಸಲ್ಲದ ಹೇಳಿಕೆ ನೀಡುವುದು ತರವಲ್ಲ ಎಂದಿದ್ದಾರೆ.
ಮೈಸೂರು: ಕೊಡಗಿನಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ವೇದಿಕೆಯಲ್ಲೇ ತಿರುಗೇಟು ನೀಡಿದ್ದ ಮೈಸೂರು ಸಂಸದ ಪ್ರತಾಪ ಸಿಂಹ ಇಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಫೇಸ್ ಬುಕ್ ನಲ್ಲಿ ಟಾಂಗ್ ಕೊಟ್ಟಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.
ಮಧ್ಯ ಪ್ರದೇಶದ ಮುಖ್ಯಮಂತ್ರಿ ಕಮಲ್‍ನಾಥ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಶಿವರಾಜ್ ಸಿಂಗ್ ಭಾಗಿಯಾಗಿರುವ ವಿಡಿಯೋ ಹಾಕಿ ಪರೋಕ್ಷವಾಗಿ ದೇವೇಗೌಡರಿಗೆ ಟಾಂಗ್ ಕೊಡುವಂತೆ ಸಾಲನ್ನು ಬರೆದಿದ್ದಾರೆ.
ಪೋಸ್ಟ್ ನಲ್ಲಿ ಏನಿದೆ?
ಕಮಲ್ನಾಥ್ ಮತ್ತು ಸಿಂಧಿಯಾ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್! ಮೋದಿ ಗೆದ್ದರೆ ನಾ ಅಲ್ಲಿಗೆ ಹೋಗ್ತೇನೆ, ಇಲ್ಲಿಗೆ ಹೋಗ್ತೇನೆ, ಹಾಗಾಗುತ್ತೆ, ಹೀಗಾಗುತ್ತೆ ಅನ್ನೋರಿಗೆ ಸಾರ್ವಜನಿಕ ಜೀವನದಲ್ಲಿ ಹೇಗೆ ಸೌಜನ್ಯದಿಂದ ನಡೆದುಕೊಳ್ಳಬಹುದು ಎಂಬುದಕ್ಕೊಂದು ಮೇಲ್ಪಂಕ್ತಿ ಎಂದು ಬರೆದುಕೊಂಡಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಮೋದಿ ಪ್ರಧಾನಿಯಾದರೆ ನಾನು ಕರ್ನಾಟಕವನ್ನು ತೊರೆಯುತ್ತೇನೆ ಎಂದು ಹೇಳಿಕೆ ನೀಡಿದ್ದು ಭಾರೀ ಚರ್ಚೆಯಾಗಿತ್ತು.
ಕೊಡಗಿನಲ್ಲೇನಾಗಿತ್ತು..?
ಕೊಡಗಿನ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಮನೆನಿರ್ಮಾಣಕ್ಕೆ ಗುದ್ದಲಿಪೂಜೆ ಕಾರ್ಯಕ್ರಮದ ಸಂದರ್ಭದಲ್ಲಿ ವೇದಿಕೆಯಲ್ಲಿಯೇ ಸಿಎಂ ಕುಮಾರಸ್ವಾಮಿ ಮತ್ತು ಸಂಸದ ಪ್ರತಾಪ್ ಸಿಂಹ ನಡುವೆ `ಅಪ್ಪ, ಅಮ್ಮ’ ವಿಚಾರಕ್ಕೆ ಸಂಬಂಧಿಸಿದಂತೆ ವಾರ್ ನಡೆದಿತ್ತು. ಜಂಬೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ ಮಾತನಾಡುವುದಕ್ಕೆ ಮೊದಲು ಸಚಿವ ಸಾರಾ ಮಹೇಶ್ ಹಾಗೂ ಡಿಸಿಎಂ ಪರಮೇಶ್ವರ್ ಅವರು ಕೊಡಗು ಪರಿಹಾರಕ್ಕೆ ರಾಜ್ಯ ಸರ್ಕಾರ ಎಷ್ಟು ಕೊಟ್ಟಿದೆ ಎಂಬುವುದನ್ನು ಪ್ರಸ್ತಾಪ ಮಾಡಿದ್ದರು. ಅಲ್ಲದೇ ಕೇರಳ ಮಾದರಿಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕ್ಕೆ ನೆರವು ನೀಡಬೇಕೆಂದು ಹೇಳಿದ್ದರು.
ನಂತರ ಮಾತನಾಡಿದ ಪ್ರತಾಪ್ ಸಿಂಹ್, ಕೇಂದ್ರ ಸರ್ಕಾರ ಕೂಡ ಜಿಲ್ಲೆಯ ಜನರಿಗೆ ಸ್ಪಂದಿಸಿದೆ. ಎನ್‍ಡಿಆರ್ ಎಫ್ ಪಡೆ ಬೇಕೆಂದು ನಾನು ನಿರ್ಮಲಾ ಸೀತಾರಾಮನ್ ಅವರನ್ನು ಕೇಳಿದಾಗ ನಮಗೆ ಯಾವುದೇ ಪ್ರಕ್ರಿಯೆ ಬಂದಿಲ್ಲ ಎಂದು ಹೇಳಿದರು. ಇದಕ್ಕೆ ನಾನು ಕೂಡಲೇ ನನ್ನದೇ ಲೇಟರ್ ಹೆಡ್ ಬಳಸಿ ಮನವಿ ಮಾಡಿದ್ದಕ್ಕೆ ಕೂಡಲೇ ಎನ್‍ಡಿಆರ್ ಎಫ್ ತುಕಡಿ ಕೊಡಗಿಗೆ ಬಂದಿದೆ. ಶುಂಠಿಕೊಪ್ಪದಿಂದ ಜೋಡುಪಾಲದವರೆಗೆ ರಸ್ತೆ ಹಾಳಾಗಿದ್ದು ಆ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ರಿಪೇರಿ ಮಾಡಿದೆ ಎಂದು ತಿಳಿಸಿದರು.
ಇದರ ಜೊತೆಯಲ್ಲಿ ಸಚಿವರಿಗೆ ಟಾಂಗ್ ಎನ್ನುವಂತೆ, ಶಾಲೆಗೆ ಮಕ್ಕಳನ್ನು ಸೇರಿಸುವಾಗ ಅಪ್ಪ, ಅಮ್ಮ ಯಾರು ಅಂತ ಕೇಳುತ್ತಾರೆ. ಅದಕ್ಕೆ ಕೇಂದ್ರ ಎಷ್ಟು ಕೊಟ್ಟಿದೆ ಎಂದು ಹೇಳಿದ್ದೇನೆ. ಕೇರಳಕ್ಕೆ ನೀಡಿದಂತೆ ಕರ್ನಾಟಕದ ಕೊಡಗು ಪ್ರವಾಹಕ್ಕೂ ಕೇಂದ್ರ 546 ಕೋಟಿ ರೂ. ಗಳನ್ನು ನೀಡಿದೆ. ಈ ಕುರಿತು ಡಿಸಿಎಂ ಪ್ರಸ್ತಾಪ ಮಾಡಿದ್ದಾರೆ. ಶಾಲೆಗೆ ಮಕ್ಕಳನ್ನು ಸೇರಿಸುವಾಗ ಅಪ್ಪ, ಅಮ್ಮ ಯಾರು ಅಂತ ಕೇಳುತ್ತಾರೆ ಅದ್ದರಿಂದಲೇ ನಾನು ಈ ಬಗ್ಗೆ ಮಾಹಿತಿ ನೀಡುತ್ತಿದ್ದೇನೆ ಎಂದರು.
ಪ್ರತಾಪ್ ಸಿಂಹ ಅವರು ಈ ವಿಚಾರವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡುತ್ತಿದಂತೆ ಕೆಂಡಾಮಂಡಲರಾದ ಸಿಎಂ ನೇರ ಸಂಸದರತ್ತ ಕೈ ಸನ್ನೆ ಮಾಡಿ ನಿಲ್ಲಿಸಿ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, ಆಯ್ತು ಆಯ್ತು ಎಂದರು. ಈ ವೇಳೆ ಸಿಎಂ ಪಕ್ಕದಲ್ಲೇ ಕುಳಿತಿದ್ದ ಸಚಿವ ಸಾ ರಾ ಮಹೇಶ್ ವಿರುದ್ಧ ರೇಗಿದ ಸಿಎಂ ಎಚ್‍ಡಿಕೆ, ಸಂಸದರಿಗೆ ಭಾಷಣ ನಿಲ್ಲಿಸುವಂತೆ ಹೋಗಿ ಹೇಳಿ ಎಂದು ಸೂಚನೆ ನೀಡಿದರು.
ಭಾಷಣ ಮುಗಿಸಿ ತಮ್ಮ ಕುರ್ಚಿಯ ಬಳಿ ಪ್ರತಾಪ್ ಸಿಂಹ ಬಂದ ಬಳಿಕವೂ ಸಿಎಂ ಎಚ್‍ಡಿಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ ಸೈಲೆಂಟ್ ಆಗಿ ಕುಳಿತ್ತಿದ್ದರು.
ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಇಂದು 58ನೇ ಜನ್ಮ ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಪುತ್ರನಿಗೆ ಶುಭಕೋರಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇ ಗೌಡ ಅವರು ಬಿಜೆಪಿಗೆ ಕುಟುಕಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಪ್ರಧಾನಿ, ದೇಶದಲ್ಲಿ ನಮ್ಮನ್ನು ಬಿಟ್ಟರೆ ಮತ್ತೊಬ್ಬರಿಲ್ಲ ಎನ್ನುವವರಿಗೆ ಸ್ಪಷ್ಟ ಸಂದೇಶ ಸಿಕ್ಕಿದೆ ಅಂತ ಹೇಳುವ ಮೂಲಕ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವೀಟ್‍ನಲ್ಲೇ ಕುಟುಕಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳಾದ @hd_kumaraswamy ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಜನಪರ ಹಾಗೂ ರೈತಪರವಾಗಿರುವ ಮೈತ್ರಿ ಸರ್ಕಾರವನ್ನು ಮುನ್ನಡೆಸುತ್ತಿರುವ @hd_kumaraswamy ಅವರಿಗೆ ದೇವರು ಆಯುಷ್ಯ , ಆರೋಗ್ಯ, ಶಕ್ತಿ ನೀಡುವ ಮೂಲಕ ಹೊಸ ಅಭಿವೃದ್ಧಿಯ ಪರ್ವ ಕರ್ನಾಟಕ ರಾಜ್ಯದಲ್ಲಿ ಆರಂಭವಾಗಲೆಂದು ಹಾರೈಸುತ್ತೇನೆ.
ಟ್ವೀಟ್ ನಲ್ಲೇನಿದೆ?
”ರಾಜ್ಯದ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಜನಪರ ಹಾಗೂ ರೈತಪರವಾಗಿರುವ ಮೈತ್ರಿ ಸರ್ಕಾರವನ್ನು ಮುನ್ನಡೆಸುತ್ತಿರುವ ಸಿಎಂ ಕುಮಾರಸ್ವಾಮಿ ಅವರಿಗೆ ದೇವರು ಆಯುಷ್ಯ, ಆರೋಗ್ಯ ಮತ್ತು ಶಕ್ತಿ ನೀಡುವ ಮೂಲಕ ಹೊಸ ಅಭಿವೃದ್ದಿಯ ಪರ್ವ ಕರ್ನಾಟಕ ರಾಜ್ಯದಲ್ಲಿ ಆರಂಭವಾಗಲೆಂದು ಹಾರೈಸುತ್ತೇನೆಂದು” ಬರೆದುಕೊಂಡಿದ್ದಾರೆ.
ಇದೇ ವೇಳೆ ಬಿಜೆಪಿಗೆ ಟಾಂಗ್ ನೀಡಿರುವ ಅವರು, ದೇಶದಲ್ಲಿ ನಮ್ಮನ್ನು ಬಿಟ್ಟರೆ ಮತ್ತೊಬ್ಬರಿಲ್ಲ ಎನ್ನುವವರಿಗೆ ಸ್ಪಷ್ಟ ಸಂದೇಶ ಸಿಕ್ಕಿದೆ. ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಸೋಮವಾರ ಪ್ರಮಾಣವಚನ ಸ್ವೀಕರಿಸಲಿರುವ ಅಶೋಕ್ ಗೆಹ್ಲೋಟ್, ಕಮಲ್ ನಾಥ್ ಹಾಗೂ ಯುವನಾಯಕ ಸಚಿನ್ ಪೈಲಟ್ ಅವರಿಗೆ ನನ್ನ ಶುಭಾಶಯಗಳು. ಮುಖ್ಯವಾಗಿ ಸೋಮವಾರ ನಡೆಯಲಿರುವ ಸಮಾರಂಭಗಳು ರಾಷ್ಟ್ರ ರಾಜಕಾರಣದಲ್ಲಿ ಮಹತ್ವದಾಗಿದ್ದು, ಮಹಾಮೈತ್ರಿಯ ಮತ್ತೊಂದು ಸಂಕೇತ ಎಂದು ಪೋಸ್ಟ್ ಮಾಡಿದ್ದಾರೆ.
ರಾಜಸ್ಥಾನ,ಮಧ್ಯಪ್ರದೇಶದಲ್ಲಿ ನಾಳೆ ಪ್ರಮಾಣವಚನ ಸ್ವೀಕರಿಸಲಿರುವ ಅಶೋಕ್ ಗೆಹ್ಲೋಟ್, ಕಮಲ್ ನಾಥ್,ಯುವ ನಾಯಕ ಸಚಿನ್ ಪೈಲಟ್ ಅವರಿಗೆ ನನ್ನ ಶುಭಾಶಯ. ಮುಖ್ಯವಾಗಿ ನಾಳೆ ನಡೆಯಲಿರುವ ಸಮಾರಂಭಗಳು ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ್ದು.ದೇಶದಲ್ಲಿ ನಮ್ಮನ್ನು ಬಿಟ್ಟರೆ ಮತ್ತೊಬ್ಬರಿಲ್ಲ ಎನ್ನುವವರಿಗೆ ಸ್ಪಷ್ಟ ಸಂದೇಶ. ಮಹಾಮೈತ್ರಿಯ ಮತ್ತೊಂದು ವೇದಿಕೆ.
ನವದೆಹಲಿ: ಬಿಜೆಪಿಯ ಕಾಂಗ್ರೆಸ್ ಮುಕ್ತ ಹೇಳಿಕೆಗೆ ಮತದಾರರು ಅವರ ಅಹಂ ಅನ್ನು ಮುಕ್ತ ಮಾಡಿದ್ದಾರೆಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದ್ದಾರೆ.
ಪಂಚರಾಜ್ಯ ಚುನಾವಣೆ ಫಲಿತಾಂಶಗಳು ಹೊರ ಬೀಳುತ್ತಿದ್ದಂತೆ, ಕೇಂದ್ರದ ಆಡಳಿತರೂಢ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಈ ಕುರಿತು ದೇವೇಗೌಡ ಅವರು ಟ್ವಿಟ್ಟರ್ ನಲ್ಲಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
The intentions of making India 'Congress-free','opposition-free' shows the arrogance of BJP. The people have made this nation 'arrogance-free' by voting out BJP.
Atleast now, the BJP should put some efforts to make this nation 'problem-free' and stop the unwanted 'travel-spree'.
“ಇದು ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜೆಗಳು ಹೇಳಿದಂತೆ ನಾವು ಕೇಳಬೇಕಷ್ಟೇ. ನಾವು ಹೇಳಿದ್ದೆಲ್ಲ ಇಲ್ಲಿ ನಡೆಯುವುದಿಲ್ಲ. ಕಾಂಗ್ರೆಸ್ ಮುಕ್ತ ಭಾರತ, ಪ್ರತಿಪಕ್ಷ ಮುಕ್ತ ಭಾರತ ಮಾಡುತ್ತೇವೆ ಎಂಬುದು ಕೇವಲ ಅಹಮಿಕೆ. ಜನ ಇಂದು ಅಹಂ ಮುಕ್ತ ಭಾರತ ಮಾಡಿದ್ದಾರೆ. ಸಮಸ್ಯೆ ಮುಕ್ತ ಭಾರತ ಮಾಡುವುದರತ್ತ ಅಧಿಕಾರರೂಢ ಬಿಜೆಪಿ ಮನಸ್ಸು ಮಾಡಲಿ” ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇಲ್ಲಿ ಪ್ರಜೆಗಳು ಹೇಳಿದಂತೆ ನಾವು ಕೇಳಬೇಕೇ ಹೊರತು, ನಾವು ಹೇಳಿದ್ದು ಇಲ್ಲಿ ನಡೆಯುವುದಿಲ್ಲ. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎನ್ನುತ್ತಿರುವ ಬಿಜೆಪಿಯವರಿಗೆ, ಮತದಾರರ ಅವರ ಅಹಂ ಮುಕ್ತ ಭಾರತವನ್ನಾಗಿ ಮಾಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಪಂಚ ಫಲಿತಾಂಶಗಳೇ ಮುನ್ಸೂಚನೆಯಾಗಿದೆ ಎಂದು ಹೇಳಿದ್ದಾರೆ.
ಇದು ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜೆಗಳು ಹೇಳಿದಂತೆ ನಾವು ಕೇಳಬೇಕಷ್ಟೇ. ನಾವು ಹೇಳಿದ್ದೆಲ್ಲ ಇಲ್ಲಿ ನಡೆಯುವುದಿಲ್ಲ. ಕಾಂಗ್ರೆಸ್ ಮುಕ್ತ ಭಾರತ, ಪ್ರತಿಪಕ್ಷ ಮುಕ್ತ ಭಾರತ ಮಾಡುತ್ತೇವೆಂಬುದೆಲ್ಲ ಕೇವಲ ಅಹಮಿಕೆ. ಜನ ಇಂದು ಅಹಂ ಮುಕ್ತ ಭಾರತ ಮಾಡಿದ್ದಾರೆ. ಸಮಸ್ಯೆ ಮುಕ್ತ ಭಾರತ ಮಾಡುವುದರತ್ತ ಅಧಿಕಾರರೂಢ ಬಿಜೆಪಿ ಮನಸ್ಸು ಮಾಡಲಿ.
ಹುಬ್ಬಳ್ಳಿ: ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ನಾವೇ ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟಿದ್ದೇವೆಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಬಗ್ಗೆ ಹಲವಾರು ಭಾವನೆಗಳು ಇವೆ. ಮೈತ್ರಿ ಸರ್ಕಾರದಲ್ಲಿ ಸಮಸ್ಯೆಗಳು ಬರುವುದು ಸಾಮಾನ್ಯ. ಈ ಸರ್ಕಾರವನ್ನು ಉಳಿಸಿಕೊಂಡು ಹೋಗಲು ಪ್ರಯತ್ನ ಮಾಡಲಾಗುವುದು. ಹೀಗಾಗಿ ಕಾಂಗ್ರೆಸ್ಸಿಗೆ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ನಾವೇ ಬಿಟ್ಟುಕೊಟ್ಟಿದ್ದೇವೆಂದು ತಿಳಿಸಿದ್ರು.
ಇದೇ ವೇಳೆ ಸಚಿವರ ಸಂಪುಟದ ಕುರಿತು ಪ್ರತಿಕ್ರಿಯಿಸಿ, ಸಚಿವ ಸ್ಥಾನ ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಈ ತಿಂಗಳ ಅಂತ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುತ್ತವೆ. ಜಾತ್ಯಾತೀತ ವಿರೋಧಿಗಳನ್ನು ದೂರ ಇಡಲು, ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ಕಾಂಗ್ರೆಸ್ಸಿನ ವೇಣುಗೋಪಾಲ್ ಅವರ ಸೂಚನೆ ಮೇರೆಗೆ ಸಿದ್ದರಾಮಯ್ಯ ಹಾಗೂ ನಾನು ಈ ಬಗ್ಗೆ ಚರ್ಚೆ ಮಾಡುತ್ತೇನೆ. ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯ ಬಗ್ಗೆ ಹಲವಾರು ಒಡಂಬಡಿಕೆಯನ್ನು ಮಾಡಲಿದ್ದೇವೆ. ಇನ್ನೂ ಎರಡು-ಮೂರು ದಿನಗಳಲ್ಲಿ ಸೀಟು ಹಂಚಿಕೆಯ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.
ರೈತರ ಆತ್ಮಹತ್ಯೆ ಕುರಿತು ಕೇಳಿದ ಪ್ರಶ್ನೆಗೆ ಕೆಂಡಾಮಂಡಲವಾಗಿ ಉತ್ತರಿಸಿದ ದೇವೇಗೌಡರು, ಈಗಾಗಲೇ ರಾಜ್ಯದಲ್ಲಿ ಸಾಲಮನ್ನಾ ಮಾಡಲಾಗಿದೆ. ನಾವೇನು ಬಿಜೆಪಿಯವರ ಹಾಗೇ ರೈತರ ಮೇಲೆ ಗೋಲಿಬಾರ್ ಮಾಡಿಸಿಲ್ಲ. ರೈತರ ಸಮಸ್ಯೆಗಳು ಆದಷ್ಟು ಬೇಗ ಬಗೆಹರಿಯಲಿವೆ. ಆತ್ಮಹತ್ಯೆ ಮಾಡಿಕೊಂಡ ರೈತರು, ಸಾಲದ ಹೊರೆಯಿಂದಲೇ ಮೃತಪಟ್ಟಿಲ್ಲ. ಕೆಲ ಮಾಧ್ಯಮಗಳಲ್ಲಿ ತಪ್ಪಾಗಿ ತೋರಿಸುತ್ತಿದ್ದಾರೆ. ಮಾಧ್ಯಮದವರಿಂದ ನಾನು ಕಲಿಯಬೇಕಾಗಿರುವುದು ಏನು ಇಲ್ಲ. ಮಾಧ್ಯಮದವರು ಸಮಾಧಾನದಿಂದ ಮಾತನಾಡಿ, ಪ್ರಚೋದನೆ ಮಾಡುವ ಕೆಲಸ ಮಾಡಬೇಡಿ ಎಂದು ಕಿಡಿಕಾರಿದರು.
ನಾನೂ ಸಹ ದೇಶದ ಪ್ರಧಾನಿಯಾಗಿ ಕೆಲಸ ಮಾಡಿದ್ದೇನೆ. ಈಗಲೂ ಸಹ ರೈತರ ಸಮಸ್ಯೆ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿಯವರ ಮನೆಗೆ ಹೋಗಿ ಬಂದಿದ್ದೇನೆ. ಅವರೇಕೆ ಸಮಸ್ಯೆ ಬಗೆಹರಿಸಿಲ್ಲ. ಅದನ್ನು ಏಕೆ ಮಾಧ್ಯಮಗಳು ಪ್ರಶ್ನಿಸುವುದಿಲ್ಲ. ಈಗಾಗಲೇ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆಯಲಾಗಿದೆ. ಸಮಸ್ಯೆಗಳು ಆದಷ್ಟು ಬೇಗ ಬಗೆ ಹರಿಯಲಿವೆ. ನಾವು ಕೆಲಸ ಮಾಡುತ್ತಿದ್ದೇವೆ. ಆದರೆ ಎಲೆಕ್ಟ್ರಾನಿಕ್ ವೇಗದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲವೆಂದು ಉತ್ತರಿಸಿದರು. ಇದನ್ನೂ ಓದಿ: ಮೈಸೂರು ಮೇಯರ್ ಸ್ಥಾನ ಕಾಂಗ್ರೆಸ್ಸಿಗೆ ಯಾಕೆ ನೀಡ್ಬೇಕು- ಸಿದ್ದರಾಮಯ್ಯ ಖಡಕ್ ಸ್ಪಷ್ಟನೆ
ಹಾಸನ: ರಾಜ್ಯದಲ್ಲಿ ಮಂಗಳೂರು, ಮೈಸೂರು ಬಳಿಕ ಇದೀಗ ಹಾಸನದಲ್ಲೂ ವಿಮಾನ ನಿಲ್ದಾಣ ತಲೆ ಎತ್ತಲಿದೆ. ಮಾಜಿ ಪ್ರಧಾನಿ ದೇವೇಗೌಡರ ಬಹುದಿನದ ಕನಸು ಕೆಲ ವರ್ಷಗಳಲ್ಲೇ ಸಾಕಾರಗೊಳ್ಳಲಿದೆ.
2007ರಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ರು. ಆಗ ಯೋಜನೆಗೆ ಬೇಕಾದ ಒಟ್ಟು ಜಮೀನು ಪೈಕಿ 536 ಎಕರೆಯನ್ನು ಸ್ವಾದೀನ ಮಾಡಲಾಗಿತ್ತು. ಅದೆಲ್ಲ ಈಗ ಪಾಳು ಬಿದ್ದಿದೆ. ಹೆಚ್ಚುವರಿಯಾಗಿ ಬೇಕಿದ್ದ 189 ಎಕರೆ ಜಮೀನು ಸ್ವಾದೀನ ವಿಚಾರದಲ್ಲಿ ಸರ್ಕಾರ ಮತ್ತು ರೈತರ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿತ್ತು.
ಸದ್ಯ ಸಂಧಾನ ಬಳಿಕ ಹಾಸನದ ಭೂವನಹಳ್ಳಿ, ಸಂಕೇನಹಳ್ಳಿ, ಲಕ್ಷ್ಮಿಸಾಗರ, ತೆಂಡಹಳ್ಳಿ, ಮೈನಹಳ್ಳಿ, ದ್ಯಾವಲಾಪುರ ಮತ್ತು ಚಟ್ನಹಳ್ಳಿಯ ಸುಮಾರು 300 ರೈತರು ಭೂಮಿ ನೀಡುವುದಾಗಿ ಜಿಲ್ಲಾಡಳಿತಕ್ಕೆ ಒಪ್ಪಿಗೆ ಪತ್ರ ನೀಡಿದ್ದಾರೆ. ಇದ್ರಿಂದ ಕಮರಿ ಹೋಗಿದ್ದ ವಿಮಾನ ನಿಲ್ದಾಣ ನಿರ್ಮಾಣದ ಕನಸು ಮತ್ತೆ ಚಿಗುರಿದೆ.
ರೈತರ ಈ ನಡೆಯಿಂದಾಗಿ ಏರ್ ಪೋರ್ಟ್ ಗೆ ಇದ್ದ ದೊಡ್ಡ ವಿಘ್ನ ನಿವಾರಣೆಯಾದಂತಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳಿಗೆ ಒಪ್ಪಿಗೆ ಪತ್ರ ನೀಡಿದ ನಂತರ ಮಾತನಾಡಿದ ರೈತರು, ಉದ್ದೇಶಿತ ವಿಮಾನ ನಿಲ್ದಾಣ ಎಂದೋ ಆಗಬೇಕಿತ್ತು. ಆದರೆ ಹಲವು ಕಾರಣದಿಂದ ವಿಳಂಬವಾಗಿತ್ತು. ಇದೀಗ ಹೆಚ್ಚುವರಿಯಾಗಿ 189 ಎಕರೆ ಭೂಮಿಯನ್ನು ಸಂತೋಷದಿಂದ ಸರ್ಕಾರಕ್ಕೆ ಬಿಟ್ಟುಕೊಡುವ ನಿರ್ಧಾರಕ್ಕೆ ಬಂದಿದ್ದೇವೆ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣವಾದ್ರೆ ಜಿಲ್ಲೆ ಅಭಿವೃದ್ಧಿಯಾಗಲಿದೆ ಎಂದು ಸ್ವಾದೀನಕ್ಕೆ ಒಪ್ಪಿದ್ದೇವೆ. ವಿಮಾನ ನಿಲ್ದಾಣ ಕಾಮಗಾರಿ ಶೀಘ್ರ ಆರಂಭವಾಗಿ ಮುಗಿಯುವ ನಿರೀಕ್ಷೆಯಿದೆ. ಸುಮಾರು 300 ಜನ ರೈತರು ಒಪ್ಪಿಗೆ ಪತ್ರ ಸಹಿ ಮಾಡಿದ್ದೇವೆ. ಇದಕ್ಕೆ ಯಾವೊಬ್ಬ ರೈತರದ್ದೂ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರೈತರ ಹಿತದೃಷ್ಟಿ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಉಸ್ತುವಾರಿ ಸಚಿವರ ಪೂರಕ ಭರವಸೆ ಮೇರೆಗೆ ಭೂಮಿ ಕೊಡುವ ನಿರ್ಧಾರಕ್ಕೆ ಬಂದಿದ್ದೇವೆ. ಭೂಮಿಗೆ ಉತ್ತಮ ದರ ಸಿಗುವ ವಿಶ್ವಾಸವಿದೆ. ಸಚಿವ ರೇವಣ್ಣ ಅವರು ಮಾತ್ರವಲ್ಲದೆ, ನನ್ನ ಕನಸಿನ ಆಸೆ ಈಡೇರಲು ನೀವೆಲ್ಲರೂ ಸಹಕಾರ ಕೊಡಿ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮನವಿ ಮಾಡಿದರು. ಅದಕ್ಕಾಗಿ ಭೂಮಿ ನೀಡಿದ್ದೇವೆ ಎಂದು ಭೂ ಮಾಲೀಕ ಬಿ.ಆರ್.ತುಳಸೀರಾಂ ಹೇಳಿದ್ದಾರೆ.
ಒಟ್ಟಿನಲ್ಲಿ ಹಾಸನ ಏರ್ ಪೋರ್ಟ್ ಗೆ ಇದ್ದ ಭೂಕಂಠಕ ಇದೀಗ ಇತ್ಯರ್ಥವಾಗಿದೆ. ಜಿಲ್ಲೆ ಬಹುನಿರೀಕ್ಷಿತ ಕಾಮಗಾರಿ ಯಾವಾಗ ಆರಂಭವಾಗುತ್ತೆ ಎಂದು ಎದುರು ನೋಡುತ್ತಿದ್ದಾರೆ. ಆದಷ್ಟು ಬೇಗ ಕಾಮಗಾರಿ ಆರಂಭವಾಗಿ ಹಾಸನದಲ್ಲಿ ವಿಮಾನ ಹಾರಾಡಲಿ, ಹಾಸನ, ಕೊಡಗು, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಬೆಳೆಯಲಿ ಅಂತ ರೈತರು ಹೇಳುತ್ತಿದ್ದಾರೆ.