Tag: ಮಾಜಿ ಪ್ರಧಾನಿ

  • ಇವರ ಅಪ್ರತಿಮ ಸಾಧನೆ ಪ್ರತಿಯೊಬ್ಬ ಕನ್ನಡಿಗನಿಗೂ ಸ್ಫೂರ್ತಿ- ತಾತನ ಸಾಧನೆ ಹೊಗಳಿದ ನಿಖಿಲ್

    ಇವರ ಅಪ್ರತಿಮ ಸಾಧನೆ ಪ್ರತಿಯೊಬ್ಬ ಕನ್ನಡಿಗನಿಗೂ ಸ್ಫೂರ್ತಿ- ತಾತನ ಸಾಧನೆ ಹೊಗಳಿದ ನಿಖಿಲ್

    ಬೆಂಗಳೂರು: ಮಣ್ಣಿನ ಮಗ, ಜಿಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ದೇಶದ ಪ್ರಧಾನಿಯಾಗಿ ಇಂದಿಗೆ 25 ವರ್ಷ ಕಳೆದಿದೆ. ಈ ಸಂಭ್ರಮದಲ್ಲಿ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾದಲ್ಲಿ ಪ್ರೀತಿಯಿಂದ ಶುಭಾಶಯ ಕೋರಿದ್ದಾರೆ.

    ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿ 25 ವರ್ಷ ತುಂಬಿದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಿಖಿಲ್ ತಮ್ಮ ತಾತ ದೇವೇಗೌಡರ ಸಾಧನೆಗಳ ಬಗ್ಗೆ ವಿವರಿಸಿದ್ದಾರೆ. ಅಲ್ಲದೇ ಇನ್‍ಸ್ಟಾಗ್ರಾಂನಲ್ಲಿ ಸುದೀರ್ಘ ಪೋಸ್ಟ್ ಮಾಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಕನ್ನಡನಾಡಿನ ಸಾಮಾನ್ಯ ರೈತಕುಲದಲ್ಲಿ ಜನಿಸಿದ ಹೆಚ್.ಡಿ ದೇವೇಗೌಡರು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಇಂದಿಗೆ 25 ವರ್ಷಗಳು ತುಂಬಿದೆ. ಇಡೀ ದೇಶದಲ್ಲಿ ಐಟಿ ಉದ್ಯಮಕ್ಕೆ ಹತ್ತು ವರ್ಷಗಳ ಕಾಲ ಟ್ಯಾಕ್ಸ್ ಹಾಲಿಡೇ ನೀಡಿದರು. ಬಾಂಗ್ಲಾದೇಶ ಹಾಗೂ ಭಾರತದ ನಡುವಿನ ಗಂಗಾನದಿ ವಿವಾದ ಬಗೆಹರಿಸಿದ್ದು, ಈಶಾನ್ಯದ ಏಳು ರಾಜ್ಯಗಳಿಗೆ ಭೇಟಿ ನೀಡಿ ಒಟ್ಟು 6 ಸಾವಿರ ಕೋಟಿಯ ಪ್ಯಾಕೇಜ್ ಘೋಷಣೆ, ವಿಮಾನ ನಿಲ್ದಾಣ, ರೈಲ್ವೇ ಯೋಜನೆ ರಾಷ್ಟ್ರೀಯ ಹೆದ್ದಾರಿಗಳು, ವಿಶ್ವವಿದ್ಯಾಲಯಗಳನ್ನು ನಿರ್ಮಿಸಲು ಈಶಾನ್ಯ ರಾಜ್ಯಗಳಿಗೆ ವಿಶೇಷ ಅನುದಾನ ಮಂಜೂರು ಮಾಡಿದರು ಎಂದು ನಿಖಿಲ್ ಹೇಳಿದ್ದಾರೆ.

    ಕಾಶ್ಮೀರಕ್ಕೆ ಐದು ಬಾರಿ ಭೇಟಿ ನೀಡಿ 3 ಸಾವಿರ ಕೋಟಿ ಪ್ಯಾಕೇಜ್ ನೀಡಿದ್ದು, ನೆನೆಗುದಿಗೆ ಬಿದ್ದಿದ್ದ ದೆಹಲಿ ಮೆಟ್ರೋಗೆ ಚಾಲನೆ ನೀಡಿದರು. ಅಲ್ಲದೇ ನಾಗಾ ಬಂಡುಕೋರರೊಂದಿಗೆ ಶಾಂತಿ ಮಾತುಕತೆ ನಡೆಸಿ ಯುದ್ದವಿರಾಮ ಘೋಷಿಸಿದರು. ಮುಂದಿನ ದಶಕಗಳಲ್ಲಿ ಬೆಂಗಳೂರಿಗೆ ನೀರಿನ ಅಭಾವವಾಗುವ ಸಾಧ್ಯತೆ ಮನಗಂಡು ಕಾವೇರಿಯಿಂದ 9 ಟಿಎಂಸಿ ನೀರು ಬಿಡುಗಡೆ ಮಾಡಿದ್ದಲ್ಲದೇ ರಾಜ್ಯದಲ್ಲಿ ಹಲವಾರು ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ನೀಡಿದ್ದರು ಎಂದು ದೇವೇಗೌಡರ ಸಾಧನೆಯನ್ನು ವಿವರಿಸಿದ್ದಾರೆ.

    ಅಲ್ಲದೇ ವಾಲೆಂಟರಿ ಡಿಸ್ಕೋಸರ್ ಸ್ಕೀಮ್ ಮೂಲಕ ಹತ್ತು ಸಾವಿರ ಕೋಟಿ ಕಪ್ಪು ಹಣವನ್ನು ದೇಶದ ಬೊಕ್ಕಸಕ್ಕೆ ಸೇರಿಸಿದರು. ದೇಶದ 36 ಕೋಟಿ ಜನತೆಗೆ ಬಿಪಿಎಲ್ ಕಾರ್ಡ್ ಮೂಲಕ ಮೂರು ರೂಪಾಯಿ ದರದಲ್ಲಿ ಹತ್ತು ಕೆಜಿ ಅಕ್ಕಿ, ಎರಡು ರೂಪಾಯಿ ದರದಲ್ಲಿ ಐದು ಕೆಜಿ ಗೋದಿ, ಮೂರು ರೂಪಾಯಿಗೆ ಸೀಮೆಎಣ್ಣೆ ದೊರೆಯುವಂತೆ ಮಾಡಿದರು.

    https://www.instagram.com/p/CA4SJgopyOg/?igshid=147tzepdfatj0

    ಕೇಂದ್ರ ಸರ್ಕಾರ ರಾಜ್ಯದ ನೀರಾವರಿ ಯೋಜನೆಗಳಿಗೆ ಅನುದಾನ ನೀಡದಿರುವ ನೀತಿಯನ್ನು ಬದಲಾಯಿಸಿ ಕೃಷ್ಣ ಮೇಲ್ದಂಡೆ ಯೋಜನೆಗೆ ಪ್ರಧಾನಿಯಾದ ತಕ್ಷಣ 1 ಸಾವಿರ ಕೋಟಿ ಬಿಡುಗಡೆ ಮಾಡಿದರು. ಹೀಗೆ ಪ್ರಧಾನ ಮಂತ್ರಿಯಾಗಿ ಕೆಲವೇ ಅವಧಿಯಲ್ಲಿ ಭಾರತದ ಹಾಗೂ ಈ ಮಣ್ಣಿನ ಇತಿಹಾಸ ಎಂದೂ ಮರೆಯದ ಸಾಧನೆ ಮಾಡಿರುವ ಮಣ್ಣಿನ ಮಗ ದೇವೇಗೌಡರು ದೆಹಲಿಯ ಗದ್ದುಗೆ ಏರಿ ಇಂದಿಗೆ 25 ವರ್ಷಗಳಾದವು. ಅವರ ಈ ಅಪ್ರತಿಮ ಸಾಧನೆ ಪ್ರತಿಯೊಬ್ಬ ಕನ್ನಡಿಗನಿಗೂ ಸ್ಪೂರ್ತಿಯಾಗಲಿ.

  • ಹುಟ್ಟುಹಬ್ಬ ಆಚರಿಸಿಕೊಳ್ಳದೇ ಇರಲು ಎಚ್‍ಡಿಡಿ ನಿರ್ಧಾರ

    ಹುಟ್ಟುಹಬ್ಬ ಆಚರಿಸಿಕೊಳ್ಳದೇ ಇರಲು ಎಚ್‍ಡಿಡಿ ನಿರ್ಧಾರ

    ಬೆಂಗಳೂರು: ಜಗತ್ತಿನಾದ್ಯಂತ ಹೆಮ್ಮಾರಿ ಕೊರೊನಾ ವೈರಸ್ ತಾಂಡವಾಡುತ್ತಿರುವ ಹಿನ್ನೆಲೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ.

    ಎಚ್.ಡಿ.ದೇವೇಗೌಡ ಅವರು ಮೇ 18ರಂದು 88ನೇ ವಸಂತಕ್ಕೆ ಕಾಲಿಡಲಿದ್ದಾರೆ. ಆದರೆ ಪ್ರತಿ ವರ್ಷದಂತೆ ಈ ವರ್ಷ ಆಚರಿಸಿಕೊಳ್ಳದೇ ಇರುಲು ಅವರು ನಿರ್ಧರಿಸಿದ್ದಾರೆ. ಹೀಗಾಗಿ ಮನೆಯ ಬಳಿ ಬಾರದಂತೆ ಅಭಿಮಾನಿಗಳು, ನಾಯಕರು, ಕಾರ್ಯಕರ್ತರಿಗೆ ಸಂದೇಶ ರವಾನೆ ಮಾಡಿದ್ದಾರೆ.

    ದೇಶದಲ್ಲಿ ಲಾಕ್‍ಡೌನ್ ನಿಯಮಗಳು ನಡೆಯುತ್ತಿವೆ. ನಿಯಮಗಳನ್ನು ಮೀರುವುದನ್ನ ನಾನು ಒಪ್ಪುವುದಿಲ್ಲ. ಒಂದು ವಾರದಿಂದ ಕೊರೊನಾ ಸೋಂಕು ಹೆಚ್ಚಾಗಿರುವುದು ನನ್ನನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ. ಹೀಗಾಗಿ ನೀವು ಇದ್ದ ಕಡೆಯಿಂದಲೇ ನನಗೆ ಶುಭಾಶಯ ತಿಳಿಸಿ. ಯಾರು ಮನೆಯ ಬಳಿ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸ್ಫೋಟ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1079ಕ್ಕೆ ಏರಿಕೆ

    ಈ ಕುರಿತು ಟ್ವೀಟ್ ಮಾಡಿರುವ ಅವರು, ಮಹಾಮಾರಿ ಕೊರೊನಾದಿಂದ ರಾಜ್ಯ ತತ್ತರಿಸಿದೆ. ಬಡವರು, ಕಾರ್ಮಿಕರು ತುತ್ತು ಅನ್ನಕ್ಕೂ ಪರಿತಪಿಸುವ ಸ್ಥಿತಿ ಬಂದೊದಗಿದೆ. ಇಂತಹ ವಿಷಮ ಸಂದರ್ಭದಲ್ಲಿ ನನ್ನ ಹುಟ್ಟುಹಬ್ಬವನ್ನು ಆಚರಿಸೋದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ.

    ಮೇ 18ರಂದು ಹೂಗುಚ್ಚಗಳೊಂದಿಗೆ ಬಂದು ಶುಭ ಹಾರೈಸುವ ಬದಲು ಕೊರೊನಾ ಸಂಕಷ್ಟ ಪೀಡಿತರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕೆಂದು ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ. ಎಲ್ಲರೂ ಸರ್ಕಾರದ ನಿರ್ದೇಶನದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತರಾಗಿರೋಣ ಎಂದು ಹೇಳಿದ್ದಾರೆ.

  • ಮನಮೋಹನ್ ಸಿಂಗ್ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಮನಮೋಹನ್ ಸಿಂಗ್ ಆಸ್ಪತ್ರೆಯಿಂದ ಡಿಸ್ಚಾರ್ಜ್

    ನವದೆಹಲಿ: ಎದೆನೋವಿನಿಂದಾಗಿ ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಹಿರಿಯ ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಅವರನ್ನು ಭಾನುವಾರ ರಾತ್ರಿ 8:45ಕ್ಕೆ ಆಸ್ಪತ್ರೆಯ ಕಾರ್ಡಿಯೋ-ಥೊರಾಸಿಕ್ ವಾರ್ಡಿಗೆ ಕರೆದೊಯ್ಯಲಾಯಿತು. ಅವರಿಗೆ ಎದೆನೋವು, ಜ್ವರ ಕಾಣಿಸಿಕೊಂಡಿದ್ದರಿಂದ ಭಾನುವಾರ ರಾತ್ರಿಯಿಂದ ಚಿಕಿತ್ಸೆ ನೀಡಿ, ವೈದ್ಯರು ನಿಗಾ ವಹಿಸಿದ್ದರು ಎಂದು ವರದಿಯಾಗಿದೆ.

    ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಅವರಿಗೆ ಕೋವಿಡ್-19 ಟೆಸ್ಟ್ ಮಾಡಲಾಗಿದ್ದು, ರಿಪೋರ್ಟ್ ನೆಗೆಟಿವ್ ಬಂದಿದೆ. ಹೀಗಾಗಿ ಎದೆನೋವು ಹಾಗೂ ಜ್ವರದಿಂದ ಗುಣಮುಖರಾದ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ವರದಿಯಾಗಿದೆ.

    ಪ್ರಸ್ತುತ ರಾಜ್ಯಸಭೆಯಲ್ಲಿ ರಾಜಸ್ಥಾನವನ್ನು ಪ್ರತಿನಿಧಿಸುತ್ತಿರುವ ಮನಮೋಹನ್ ಸಿಂಗ್ ಅವರು ಎರಡು ಬಾರಿ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮೊದಲ 1990ರಲ್ಲಿ ಮತ್ತು ಎರಡನೇ ಬಾರಿ 2009ರಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಅವರಿಗೆ ಮಧುಮೇಹ ಕೂಡ ಇದೆ.

  • ಮನಮೋಹನ್ ಸಿಂಗ್ ಆಸ್ಪತ್ರೆಗೆ ದಾಖಲು

    ಮನಮೋಹನ್ ಸಿಂಗ್ ಆಸ್ಪತ್ರೆಗೆ ದಾಖಲು

    ನವದೆಹಲಿ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    87 ವರ್ಷದ ಮನಮೋಹನ್ ಸಿಂಗ್ ಅವರು ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ವೈದ್ಯರು ಚಿಕಿತ್ಸೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.

    ಪಂಜಾಬ್ ವಿಶ್ವವಿದ್ಯಾಲಯ, ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದ ಮನಮೋಹನ್ ಸಿಂಗ್ ಪ್ರಧಾನಿಯಾಗುವ ಮೊದಲು ಅರ್ಥಶಾಸ್ತ್ರಜ್ಞರಾಗಿ ಕೆಲಸ ಮಾಡಿದ್ದರು. ಅವರು ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದರು. ಬಳಿಕ ಅಂದ್ರೆ 2004ರಿಂದ 2014ರವರೆಗೆ ಪ್ರಧಾನಿಯಾಗಿದ್ದರು.

  • ಕೊರೊನಾ ಭೀತಿ ನಡುವೆಯೇ ಅದ್ದೂರಿ ಮದ್ವೆಯಲ್ಲಿ ಎಚ್‍ಡಿಡಿ ಭಾಗಿ

    ಕೊರೊನಾ ಭೀತಿ ನಡುವೆಯೇ ಅದ್ದೂರಿ ಮದ್ವೆಯಲ್ಲಿ ಎಚ್‍ಡಿಡಿ ಭಾಗಿ

    – ಸಿಎಂ ಆದೇಶಕ್ಕೆ ಕ್ಯಾರೇ ಎನ್ನದ ಜೆಡಿಎಸ್ ಜಿಲ್ಲಾಧ್ಯಕ್ಷ

    ಚಿತ್ರದುರ್ಗ: ಸ್ವತಃ ತಾವೇ ಆದೇಶ ಹೊರಡಿಸಿ ಇಂದು ಬೆಳಗಾವಿಯಲ್ಲಿ ನಡೆದ ಅದ್ದೂರಿ ಮದುವೆಯಲ್ಲಿ ಸಿಎಂ ಯಡಿಯೂರಪ್ಪ ಪಾಲ್ಗೊಂಡರೆ, ಇತ್ತ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಕೂಡ ತಮ್ಮ ಪಕ್ಷದ ಜಿಲ್ಲಾಧ್ಯಕ್ಷನ ಮಗನ ಮದುವೆಯಲ್ಲಿ ಕಾಣಿಸಿಕೊಂಡಿದ್ದಾರೆ.

    ಕೊರೊನಾ ವೈರಸ್ ಹರಡುವ ಭೀತಿಯಿಂದಾಗಿ ರಾಜ್ಯಾದ್ಯಂತ ಹಬ್ಬ ಹರಿದಿನಗಳು ಹಾಗೂ ಮದುವೆ, ಸಮಾರಂಭಗಳು ಸೇರಿದಂತೆ ಜಾತ್ರೆಯನ್ನು ಸಹ ನಡೆಸದಂತೆ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಆದರೆ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಅದ್ದೂರಿಯಾಗಿ ಸಾವಿರಾರು ಜನರನ್ನು ಸೇರಿಸುವ ಮೂಲಕ ತಮ್ಮ ಮಗನ ವಿವಾಹವನ್ನು ಚಿತ್ರದುರ್ಗ ಜೆಡಿಎಸ್ ಜಿಲ್ಲಾಧ್ಯಕ್ಷ ಯಶೋಧರ ಹಿರಿಯೂರಿನ ಖಾಸಗಿ ಕಲ್ಯಾಣ ಮಂಟಪವೊಂದರಲ್ಲಿ ನೆರವೇರಿಸಿದ್ದಾರೆ.

    ಹಿರಿಯೂರಿನ ತಾಹ ಪ್ಯಾಲೇಸ್ ನಲ್ಲಿ ಯಶೋಧರ ಪುತ್ರ ವೈ.ಆರ್ ಗೌಡ ಜೊತೆ ಮೇಘನಾ ವಿವಾಹ ನಡೆಸಲಾಯಿತು. ಈ ಅದ್ದೂರಿ ಮದುವೆಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಸಹ ಆಗಮಿಸಿದ್ದರು. ಆಗ ಈ ಬಗ್ಗೆ ಪ್ರಶ್ನಿಸಲು ಮುಂದಾದ್ರೆ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಯಾವುದೇ ಚಕಾರ ಎತ್ತದೇ ಬೆಂಗಳೂರಿಗೆ ತೆರಳಿದರು. ಇದನ್ನೂ ಓದಿ: ಕೊರೊನಾ ಭೀತಿ- ಸ್ವತಃ ಆದೇಶ ಹೊರಡಿಸಿ ಅದ್ದೂರಿ ಮದ್ವೆಯಲ್ಲಿ ಸಿಎಂ ಭಾಗಿ

    ಈ ವೇಳೆ ವಿವಾಹ ಆಯೋಜಿಸಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಯಶೋಧರ ಪ್ರತಿಕ್ರಿಯಿಸಿ, ಮಗನ ಮದುವೆಗಾಗಿ ಈ ಮೊದಲೇ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಲ್ಲದೇ ಸರಳವಾಗಿ ವಿವಾಹ ಮಾಡಲು, ಕಲ್ಯಾಣ ಮಂಟಪ ಸೇರಿದಂತೆ ಸಂಬಂದಿಗಳು ಹಾಗೂ ಸಾವಿರಾರು ಜನ ಹಿತೈಷಿಗಳಿಗೆ ಅಹ್ವಾನ ನೀಡಲಾಗಿತ್ತು. ಹೀಗಾಗಿ ತಕ್ಕಮಟ್ಟಿಗೆ ಅದ್ದೂರಿ ವಿವಾಹ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಈ ಮೂಲಕ ಎಲ್ಲೋ ಒಂದು ಕಡೆ ಸರ್ಕಾರದ ಆದೇಶ ಕೇವಲ ಜನಸಾಮಾನ್ಯರಿಗೆ ಮಾತ್ರ ಸೀಮಿತವಾಯ್ತ ಎಂಬ ಪ್ರಶ್ನೆ ಜನರಲ್ಲಿ ಮೂಡಿದ್ದು, ರಾಜಕಾರಣಿಗಳು ಹಾಗೂ ಪ್ರಭಾವಿಗಳು ಮಾತ್ರ ಅವರ ಮನಸ್ಸೋ ಇಚ್ಛೆಯಂತೆ ಅದ್ದೂರಿ ವಿವಾಹ ಹಾಗೂ ಸಾವಿರಾರು ಜನರನ್ನು ಸೇರಿಸಿ ಸಂಭ್ರಮಾಚರಣೆ ಮಾಡುತ್ತಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ ಜಿಲ್ಲಾಡಳಿತ ಮಾತ್ರ ಇಷ್ಟೊಂದು ಅದ್ದೂರಿ ವಿವಾಹ ನಡೆದು, ಮಾಜಿ ಪ್ರಧಾನಿಗಳು ಬಂದು ಹೋದರೂ ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ ಮಾಡ್ತಿರೋದು ಮಾತ್ರ ವಿಪರ್ಯಾಸವೇ ಸರಿ.

  • ‘ಅಲ್ಪಸಂಖ್ಯಾತರಿಗೆ ಪೌರತ್ವ ನೀಡಿ’- 16 ವರ್ಷದ ಹಿಂದಿನ ಮನಮನೋಹನ್ ಸಿಂಗ್ ವಿಡಿಯೋ ವೈರಲ್

    ‘ಅಲ್ಪಸಂಖ್ಯಾತರಿಗೆ ಪೌರತ್ವ ನೀಡಿ’- 16 ವರ್ಷದ ಹಿಂದಿನ ಮನಮನೋಹನ್ ಸಿಂಗ್ ವಿಡಿಯೋ ವೈರಲ್

    ನವದೆಹಲಿ: ಪೌರತ್ವದ ಕಾಯ್ದೆ ಜಾರಿಗೆ ದೇಶಾದ್ಯಂತ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿದೆ. ಈ ಮಧ್ಯೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವಂತೆ ರಾಜ್ಯಸಭೆಯಲ್ಲಿ ಭಾಷಣ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಡಿಯೋವನ್ನು ಟ್ವೀಟ್ ಮಾಡಿರುವ ಬಿಜೆಪಿ, 2003ರ ಡಿಸೆಂಬರ್ 15 ರಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕರಾಗಿದ್ದ ಮನಮೋಹನ್ ಸಿಂಗ್ ಮಾತನಾಡುತ್ತಾ, ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಲ್ಲಿ ಕಿರುಕುಳವನ್ನು ಎದುರಿಸುತ್ತಿರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವಲ್ಲಿ ಉದಾರವಾದಿ ಮಾರ್ಗವನ್ನು ಅನುಸರಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಈಗ ಪೌರತ್ವ ಕಾಯ್ದೆ ಜಾರಿಗೆ ತರುವ ಮೂಲಕ ಅವರಿಗೆ ನೆರವಾಗುತ್ತಿದ್ದೇವೆ ಎಂದು ಬರೆದುಕೊಂಡಿದೆ.

    ಮಾಜಿ ಪ್ರಧಾನಿ ಹೇಳಿದ್ದೇನು?
    ಮೇಡಂ (ಅಂದಿನ ಸ್ಪೀಕರ್ ನಜ್ಮಾ ಹೆಪ್ತುಲ್ಲಾ), ನಾನು ಪೌರತ್ವ ಕಾಯ್ದೆ ವಿಷಯವಾಗಿ ಮಾತನಾಡಲು ಬಯಸುತ್ತೇನೆ. ನಮ್ಮ ದೇಶ ವಿಭಜನೆಯ ನಂತರ ಬಾಂಗ್ಲಾದೇಶದಂತಹ ದೇಶಗಳಲ್ಲಿನ ಅಲ್ಪಸಂಖ್ಯಾತರು ಕಿರುಕುಳವನ್ನು ಎದುರಿಸಿದ್ದಾರೆ. ಅವರು ನಮ್ಮ ದೇಶದಲ್ಲಿ ಆಶ್ರಯ ಪಡೆಯಲು ಮುಂದಾಗುತ್ತಿದ್ದಾರೆ. ಅಂತವರಿಗೆ ಪೌರತ್ವ ನೀಡುವಲ್ಲಿ ದೇಶವು ಉದಾರವಾಗಿರಬೇಕು ಎಂಬುದು ನಮ್ಮ ನೈತಿಕ ಬಾಧ್ಯತೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದರು.

    ಅಂದಿನ ಉಪ ಪ್ರಧಾನಿ ಮತ್ತು ಗೃಹ ಸಚಿವರಾಗಿದ್ದ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರನ್ನು ಉದ್ದೇಶಿಸಿ ಮಾತನಾಡಿದ್ದ ಮನಮೋಹನ್ ಸಿಂಗ್ ಅವರು, ಪೌರತ್ವ ಕಾಯ್ದೆಗೆ ಸಂಬಂಧಿಸಿದಂತೆ ಭವಿಷ್ಯದ ಕ್ರಮಗಳನ್ನು ರೂಪಿಸುವಲ್ಲಿ ಗೌರವಾನ್ವಿತ ಉಪ ಪ್ರಧಾನಿ ಅವರು ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದರು.

    ಪೌರತ್ವ ಕಾಯ್ದೆ ವಿರುದ್ಧ ಆಕ್ರಮಣಕಾರಿಯಾಗಿ ಪ್ರತಿಭಟಿಸುತ್ತಿರುವ ನಮ್ಮ ತಡೆಯಲು ಬಿಜೆಪಿ ಈ ವಿಡಿಯೋವನ್ನು ಬಳಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಪೌರತ್ವ ಕಾಯ್ದೆಯ ಸಾಂವಿಧಾನಿಕಾ ಮಾನ್ಯತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿವೆ.

    ಪೌರತ್ವ ಮಸೂದೆಯ ಚರ್ಚೆಯ ವೇಳೆ ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಶಾ ಈ ಹಿಂದೆ ಕಾಂಗ್ರೆಸ್ ನಾಯಕರೇ ಈ ಮೂರು ದೇಶಗಳ ಅಲ್ಪಸಂಖ್ಯಾತರ ರಕ್ಷಣೆ ಮಾಡಲು ಪೌರತ್ವ ಕಾಯ್ದೆ ತರಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ವೇಳೆ ಮನಮೋಹನ್ ಸಿಂಗ್ ಹೇಳಿಕೆಯನ್ನು ಉಲ್ಲೇಖಿಸಿ ಇಲ್ಲಿಯವರೆಗಿದ್ದ ಸರ್ಕಾರ ಪೌರತ್ವ ಕಾಯ್ದೆ ತರಲು ಧೈರ್ಯ ತೋರಲಿಲ್ಲ. ಆದರೆ ಈಗ ಮೋದಿ ಸರ್ಕಾರ ಧೈರ್ಯ ಮಾಡಿ ಪೌರತ್ವ ಕಾಯ್ದೆ ಜಾರಿಗೆ ತರುತ್ತಿದೆ. ಕಾಂಗ್ರೆಸ್ ನಾಯಕರ ಆಶಯದಂತೆ ನಾವು ನಡೆದುಕೊಂಡಿದ್ದೇವೆ. ಆದರೆ ಯಾಕೆ ನಮ್ಮನ್ನು ವಿರೋಧ ಮಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಕಾಂಗ್ರೆಸ್ಸಿನವರು ಏನೇ ಮಾಡಿದರೂ ಅದು ಜಾತ್ಯಾತೀತತೆ ಆಗುತ್ತದೆ. ಆದರೆ ನಾವು ಜಾರಿಗೆ ತಂದರೆ ಕೋಮುವಾದಿಗಳಾಗುತ್ತೇವೆ ಎಂದು ಹೇಳಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

  • ಆರ್ಥಿಕತೆ ಸರಿಪಡಿಸಲು ವಿಪಕ್ಷಗಳನ್ನ ದೂಷಿಸಿದ್ರೆ ಸಾಕಾಗಲ್ಲ: ಸೀತಾರಾಮನ್‍ಗೆ ಸಿಂಗ್ ತಿರುಗೇಟು

    ಆರ್ಥಿಕತೆ ಸರಿಪಡಿಸಲು ವಿಪಕ್ಷಗಳನ್ನ ದೂಷಿಸಿದ್ರೆ ಸಾಕಾಗಲ್ಲ: ಸೀತಾರಾಮನ್‍ಗೆ ಸಿಂಗ್ ತಿರುಗೇಟು

    ಮುಂಬೈ: ಭಾರತದ ಆರ್ಥಿಕತೆಯ ಶೋಚನೀಯ ಸ್ಥಿತಿಗೆ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾರಣ ಎಂಬ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಕ್ಕೆ ಮನಹೋನ್ ಸಿಂಗ್ ತೀಕ್ಷ್ಣ ತಿರುಗೇಟು ನೀಡಿದ್ದಾರೆ.

    ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗಳನ್ನು ನಾನು ನೋಡಿದ್ದೇನೆ. ಆ ವಿಚಾರವಾಗಿ ಟೀಕೆ ಮಾಡಲು ಇಷ್ಟಪಡುವುದಿಲ್ಲ. ಆದರೆ ಕೇಂದ್ರ ಸರ್ಕಾರ ಆರ್ಥಿಕ ಕುಸಿತದ ಸಮಸ್ಯೆಗೆ ಪರಿಹಾರ ಹುಡುಕುವುದರ ಬದಲು ವಿಪಕ್ಷಗಳ ವಿರುದ್ಧ ಆರೋಪ ಮಾಡುತ್ತಿವೆ. ಇದರಿಂದ ದೇಶದ ಆರ್ಥಿಕತೆಯ ಸುಧಾರಣೆ ಆಗುವುದಿಲ್ಲ ಎಂದು ಕುಟುಕಿದ್ದಾರೆ.

    ಪಿಎಂಸಿ ಬ್ಯಾಂಕ್ ಬಿಕ್ಕಟ್ಟಿನ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ, ಕೇಂದ್ರ ಸರ್ಕಾರ, ಮಹಾರಾಷ್ಟ್ರ ಸರ್ಕಾರ ಹಾಗೂ ಆರ್‌ಬಿಐ ಪಿಎಂಸಿ ಬ್ಯಾಂಕಿನ ಬಿಕ್ಕಟ್ಟಿಗೆ ಸೂಕ್ತ ಪರಿಹಾರವನ್ನು ನೀಡಬೇಕು. ಈ ಮೂಲಕ ಬ್ಯಾಂಕ್‍ನಲ್ಲಿ ಹೂಡಿಕೆ ಮಾಡಿರುವ 16 ಲಕ್ಷ ಜನರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕತೆ ಅಸಮರ್ಪಕ ನಿರ್ವಹಣೆಗೆ ಮಹಾರಾಷ್ಟ್ರ ಸಾಕ್ಷಿಯಾಗಿದೆ. ಈ ಹಿಂದೆ ಮಹಾರಾಷ್ಟ್ರ ಹೂಡಿಕೆದಾರರನ್ನು ಆಕರ್ಷಿಸುವ ನಂಬರ್ ಒನ್ ರಾಜ್ಯವಾಗಿತ್ತು. ಆದರೆ ಕಳೆದ ಐದು ವರ್ಷದಲ್ಲಿ ಇಲ್ಲಿನ ಅತಿದೊಡ್ಡ ಕಾರ್ಖಾನೆ ಮುಚ್ಚಿಹೋಗಿದೆ. ಪರಿಣಾಮ ಹೂಡಿಕೆದಾರರು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ರಾಜ್ಯವು ಭಾರೀ ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಹೇಳಿದರು.

    ಸೀತಾರಾಮನ್ ಹೇಳಿದ್ದೇನು?:
    ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಮತ್ತು ಸಾರ್ವಜನಿಕ ವ್ಯವಹಾರಗಳ ವಿಭಾಗ ಭಾರತದ ಆರ್ಥಿಕ ನೀತಿ ವಿಚಾರದ ಬಗ್ಗೆ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಉಪನ್ಯಾಸ ನೀಡಿದರು. ಈ ವೇಳೆ ಮಾತನಾಡಿ, ಮನಮೋಹನ್ ಸಿಂಗ್ ಮತ್ತು ರಘುರಾಮ್ ರಾಜನ್ ಅವಧಿಯಲ್ಲಿ ಬ್ಯಾಂಕ್‍ಗಳು ದುಸ್ಥಿತಿಗೆ ತಲುಪಿದ್ದವು. ಈಗ ನಮ್ಮ ಸರ್ಕಾರ ಬ್ಯಾಂಕ್‍ಗಳಿಗೆ ಜೀವ ನೀಡಿ ಹೊಸ ಚೈತನ್ಯ ನೀಡುತ್ತಿದೆ ಎಂದು ತಿಳಿಸಿದ್ದರು.

    ಆರ್ಥಿಕ ತಜ್ಞರಾಗಿರುವ ರಘುರಾಮ್ ರಾಜನ್ ಮೇಲೆ ನನಗೆ ನನಗೆ ಬಹಳ ಗೌರವವಿದೆ. ದೇಶದ ಆರ್ಥಿಕತೆ ಸದೃಢವಾಗಿದ್ದಾಗ ಅವರು ಆರ್‌ಬಿಐ ಗವರ್ನರ್ ಆಗಿದ್ದರು. ರಾಜನ್ ಗವರ್ನರ್ ಆಗಿದ್ದ ಸಂದರ್ಭದಲ್ಲಿ ಪ್ರಭಾವಿಶಾಲಿ ವ್ಯಕ್ತಿಗಳು ಒಂದು ಫೋನ್ ಕರೆ ಮಾಡಿದರೆ ಸಾಕು ಸಾಲ ಮಂಜೂರಾಗುತಿತ್ತು. ಇದರಿಂದ ಸೃಷ್ಟಿಯಾದ ಸಮಸ್ಯೆಯಿಂದ ಪಾರಾಗಲು ಸಾರ್ವಜನಿಕ ರಂಗದ ಬ್ಯಾಂಕುಗಳು ಸರ್ಕಾರದ ಷೇರುಗಳನ್ನು ಅವಲಂಬಿಸುವ ಅನಿವಾರ್ಯತೆಗೆ ಸಿಲುಕಿದೆ ಎಂದು ಮಾಹಿತಿ ನೀಡಿದ್ದರು.

    ನಾನು ಯಾರ ಬಗ್ಗೆಯೂ ಟೀಕೆ ಮಾಡಲು ಈ ವಿಚಾರ ಹೇಳುತ್ತಿಲ್ಲ. ಮನಮೋಹನ್ ಸಿಂಗ್ ಮತ್ತು ರಾಜನ್ ಅವರಿದ್ದ ಸಮಯದಲ್ಲಿ ಬ್ಯಾಂಕುಗಳು ಬಹಳ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದವು. ಆ ಸಂದರ್ಭದಲ್ಲಿ ನಮಗೆ ಈ ವಿಚಾರಗಳು ತಿಳಿಯುತ್ತಿರಲಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

    ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಹಿತಿ ಪ್ರಕಾರ 2012-13ರಲ್ಲಿ ಸಾರ್ವಜನಿಕ ರಂಗದ ಕೆಟ್ಟ ಸಾಲದ ಪ್ರಮಾಣ 9,190 ಕೋಟಿ ರೂ. ಇದ್ದರೆ, 2013-14ರ ವೇಳೆಗೆ ಇದು 2.16 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿತ್ತು.

  • 1ನೇ ವರ್ಷದ ಪುಣ್ಯತಿಥಿ- ಅಜಾತಶತ್ರುವನ್ನು ಸ್ಮರಿಸಿದ ಮೋದಿ, ಅಮಿತ್ ಶಾ

    1ನೇ ವರ್ಷದ ಪುಣ್ಯತಿಥಿ- ಅಜಾತಶತ್ರುವನ್ನು ಸ್ಮರಿಸಿದ ಮೋದಿ, ಅಮಿತ್ ಶಾ

    ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನಿಧನರಾಗಿ ಇಂದಿಗೆ ಒಂದು ವರ್ಷವಾಗಿದೆ. ಈ ವೇಳೆ ಮರೆಯಲಾಗದ ಅಜಾತಶತ್ರುವನ್ನು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸ್ಮರಿಸಿದ್ದಾರೆ.

    ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಯಪೇಯಿ ಅವರು ಆಗಸ್ಟ್ 16 2018ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಬಿಜೆಪಿ ಹಿರಿಯ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ನಿಧನರಾಗಿ ಇಂದಿಗೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ಇಂದು ಅವರ ಪುಣ್ಯತಿಥಿ ಆಚರಣೆ ಮಾಡಲಾಗುತ್ತಿದೆ.

    ಈ ಪುಣ್ಯತಿಥಿಗೆ ವಾಜಪೇಯಿ ಅವರ ಸ್ಮಾರಕ ‘ಸದೈವ್ ಅಟಲ್’ಗೆ ಪ್ರಧಾನಿ ಮೋದಿ, ಅಮಿತ್ ಶಾ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಕೇಂದ್ರ ಸಚಿವರೆಲ್ಲರು ಭೇಟಿ ನೀಡಿ ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ಗೌರವ ಸಲ್ಲಿಸಿದ್ದಾರೆ.

    ಮಧ್ಯಪ್ರದೇಶದ ಗ್ವಾಲಿಯರ್ ಸಮೀಪದ ಶಿಂದೆ ಕಿ ಚವ್ವಾಣಿ ಹಳ್ಳಿಯಲ್ಲಿ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಕೃಷ್ಣ ಬಿಹಾರಿ ಮತ್ತು ಕೃಷ್ಣಾ ದೇವಿ ದಂಪತಿಗೆ 1924ರ ಡಿಸೆಂಬರ್ 25ರಂದು ವಾಜಪೇಯಿ ಜನಿಸಿದ್ದರು. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷಾ ಪ್ರೌಢಿಮೆ ಬೆಳೆಸಿದ್ದ ವಾಜಪೇಯಿ ಕಾನ್ಪುರದ ಲಕ್ಷ್ಮೀಬಾಯಿ ಕಾಲೇಜಿನಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

    1942 `ಭಾರತ ಬಿಟ್ಟು ತೊಲಗಿ ಚಳುವಳಿ’ಯಲ್ಲಿ ರಾಜಕಾರಣಕ್ಕೆ ಪ್ರವೇಶಿಸಿದ್ದ ವಾಜಪೇಯಿ ಅವರು 1991, 1996, 1998, 1999 ಹಾಗೂ 2004ರಲ್ಲಿ ಲಕ್ನೋ ಲೋಕಸಭಾ ಕ್ಷೇತ್ರದಿಂದ ಸತತವಾಗಿ 5 ಬಾರಿ ಆಯ್ಕೆ ಆಗಿದ್ದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲ ವಿದೇಶಾಂಗ ವ್ಯವಹಾರಗಳ ಸಚಿವ ಎನ್ನುವ ಹೆಗ್ಗಳಿಕೆಗೂ ಕೂಡ ವಾಜಪೇಯಿ ಪಾತ್ರರಾಗಿದ್ದರು.

    ಅಟಲ್ ಬಿಹಾರಿ ವಾಜಪೇಯಿ ಅವರು ಭಾರತೀಯ ರಾಜಕಾರಣಿ ಮತ್ತು ಕವಿಯಾಗಿದ್ದರು. ಅವರು ಮೂರು ಬಾರಿ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಮೊದಲು 1996 ರಲ್ಲಿ 13 ದಿನಗಳ ಅವಧಿಗೆ. ನಂತರ 1998 ರಿಂದ 1999 ರವರೆಗೆ 13 ತಿಂಗಳ ಅವಧಿಗೆ ಮತ್ತು ಅಂತಿಮವಾಗಿ 1999 ರಿಂದ 2004 ರವರೆಗೆ ಪೂರ್ಣಾವಧಿಯಲ್ಲಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.

  • ರಾಜ್ಯಸಭಾ ಕಣಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ ಮನಮೋಹನ್ ಸಿಂಗ್

    ರಾಜ್ಯಸಭಾ ಕಣಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ ಮನಮೋಹನ್ ಸಿಂಗ್

    ಜೈಪುರ್: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ರಾಜ್ಯಸಭೆಗೆ ಮರಳಲಿದ್ದು, ರಾಜಸ್ಥಾನದಿಂದ ಅವರನ್ನು ಆಯ್ಕೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ.

    ರಾಜಸ್ಥಾನ ವಿಧಾನಸಭೆಯಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ಇದೇ ತಿಂಗಳ 26ರಂದು ಉಪಚುನಾವಣೆ ನಡೆಯಲಿದೆ. ಈ ಚುನಾವಣೆ ಮೂಲಕ ಸಂಸತ್ ಪ್ರವೇಶ ಮಾಡಲು ಮನನಮೋಹನ್ ಸಿಂಗ್ ಅವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜಸ್ಥಾನ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು, ಮನಮೋಹನ್ ಸಿಂಗ್ ಅವರನ್ನು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಲು ಪಕ್ಷ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

    ಬಿಜೆಪಿಯಿಂದ ಆಯ್ಕೆಯಾಗಿದ್ದ ಮದನ್ ಲಾಲ್ ಸೈನಿ ಅವರು ಜೂನ್‍ನಲ್ಲಿ ನಿಧನರಾಗಿದ್ದರು. ಅವರ ನಿಧನದಿಂದ ತೆರುವಾಗಿರುವ ಸ್ಥಾನಕ್ಕೆ ಆಗಸ್ಟ್ 26ರಂದು ಉಪಚುನಾವಣೆ ನಡೆಯಲಿದೆ.

  • ಕಾಶ್ಮೀರ ಸಮಸ್ಯೆ ಉಲ್ಭಣಿಸಲು ಬಿಜೆಪಿಯ ಸರ್ಕಾರದ ವೈಫಲ್ಯವೇ ಕಾರಣ : ಎಚ್‍ಡಿಡಿ

    ಕಾಶ್ಮೀರ ಸಮಸ್ಯೆ ಉಲ್ಭಣಿಸಲು ಬಿಜೆಪಿಯ ಸರ್ಕಾರದ ವೈಫಲ್ಯವೇ ಕಾರಣ : ಎಚ್‍ಡಿಡಿ

    ಹಾಸನ: ಕಾಶ್ಮೀರ ಸಮಸ್ಯೆ ಉಲ್ಭಣಿಸಲು ಬಿಜೆಪಿಯ ಸರ್ಕಾರದ ವೈಫಲ್ಯವೇ ಕಾರಣ ಎಂದು ಮಾಜಿ ಪ್ರಧಾನಿ ದೇವೇಗೌಡರು ಆರೋಪಿಸಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನೂ ಕೂಡ ದೇಶಕ್ಕೆ ಪ್ರಧಾನಿಯಾಗಿದ್ದೆ. ಆಗ ಕಾಶ್ಮೀರದ ಸಮಸ್ಯೆಗಳನ್ನು ನಿವಾರಣೆಗೆ ಬೇಕಾದ ಕ್ರಮಗಳನ್ನು ಸಾಕಷ್ಟು ಕೈಗೊಂಡಿದ್ದೆ. ಈಗಿನ ಸರ್ಕಾರಕ್ಕೆ ಹಿಂದೆಂದಿಗಿಂತಲೂ ಭಾರೀ ಬಹುಮತವನ್ನು ಈ ದೇಶದ ಜನತೆ ನೀಡಿದ್ದಾರೆ. ಯಾವ ಪ್ರಧಾನಿಗೂ ಈ ರೀತಿಯ ಬಲವನ್ನು ನೀಡಿರಲಿಲ್ಲ. ಆದರೆ ಅಧಿಕಾರಕ್ಕೆ ಬಂದ ಮೋದಿಯವರು ಕೇವಲ ವಿರೋಧ ಪಕ್ಷದವರನ್ನು ಟೀಕಿಸುವುದರಲ್ಲಿಯೇ ಕಳೆದರು ಎಂದರು.

    ಪ್ರಧಾನಿ ಮೋದಿ ಅವರು ಪ್ರಮುಖವಾಗಿ ಕಾಂಗ್ರೆಸ್ ಮತ್ತು ನೆಹರು ಅವರನ್ನು ಟೀಕಿಸುವುದಷ್ಟೆ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕಾಶ್ಮೀರದಲ್ಲಿ ಮೂರು ಸರ್ಕಾರಗಳನ್ನ ಬದಲಾಯಿಸಲಾಗಿದೆ. ಕೊನೆಗೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು, ಅನಂತರ ರಾಷ್ಟ್ರಪತಿ ಆಡಳಿತ ಹೇರಿದ್ದಾರೆ. ಅಲ್ಲಿಯ ಯುವಕರೆಲ್ಲ ಉದ್ಯೋಗ ಇಲ್ಲದೆ ಬೀದಿಗೆ ಇಳಿಯುವಂತೆ ಮಾಡಿದ್ದಾರೆ. ದೇಶದ ಇಂತಹ ಪರಿಸ್ಥಿತಿಯಲ್ಲಿ ಇರುವ ವೇಳೆ ಪ್ರಧಾನಿಯವರೆ ಇದು ವಿರೋಧ ಪಕ್ಷದವರನ್ನು ಟೀಕಿಸುವ ರೀತಿ ಉತ್ತಮ ಅಲ್ಲ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv