Tag: ಮಾಜಿ ಪ್ರಧಾನಿ ದೇವೇಗೌಡ

  • ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾದ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್

    ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾದ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್

    ಬೆಂಗಳೂರು: ವಿವಿಧ ರಾಜಕೀಯ ಪಕ್ಷಗಳನ್ನು ಭೇಟಿ ಮಾಡುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಮತ್ತು ಟಿಆರ್‌ಎಸ್ ಅಧ್ಯಕ್ಷ ಚಂದ್ರಶೇಖರ್ ರಾವ್ ಅವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಿದ್ದಾರೆ.

    ಗುರುವಾರ ಕರ್ನಾಟಕಕ್ಕೆ ಒಂದು ದಿನದ ಮಟ್ಟಿಗೆ ಪ್ರವಾಸ ಕೈಗೊಂಡಿರುವ ಚಂದ್ರಶೇಖರ್ ರಾವ್ ಅವರು, ಹೆಚ್.ಡಿ. ದೇವೇಗೌಡ, ಅವರ ಪುತ್ರ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಬೆಂಗಳೂರಿನ ಪದ್ಮನಾಭನಗರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಪ್ರಸಕ್ತ ರಾಜಕೀಯ ವಿದ್ಯಮಾನಗಳು ಮತ್ತು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತಂತೆ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಗುಲ್ಬರ್ಗಾ ವಿವಿ ಬಿಕಾಂ 5ನೇ ಸೆಮಿಸ್ಟರ್ ಪ್ರಶ್ನೆ ಪತ್ರಿಕೆ ಲೀಕ್ – ಪರೀಕ್ಷೆ ಮುಂದೂಡಿಕೆ

    ರಾಜ್ಯಗಳಲ್ಲಿ ಸಂಖ್ಯಾಬಲ ಇಲ್ಲದಿದ್ದರೂ ಇತರೆ ಪಕ್ಷಗಳ ಸದಸ್ಯರನ್ನು ಬಗ್ಗುಬಡಿಯುವ ಮೂಲಕ ಬಿಜೆಪಿ ಸರ್ಕಾರ ರಚಿಸಲು ಅನೈತಿಕ ಚಟುವಟಿಕೆಗಳನ್ನು ನಡೆಸುವ ಸಾಧ್ಯತೆ ಇದೆ ಎಂದು ತೆಲಂಗಾಣ ರಾಷ್ಟ್ರ ಸಮಿತಿ ಮೂಲಗಳು ತಿಳಿಸಿವೆ  ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಆರೋಪ – ಡಿಕೆಶಿ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಕೆ

    ಬೆಂಗಳೂರು ಪ್ರವಾಸದ ಹಿನ್ನೆಲೆ ದೇವೇಗೌಡರ ನಿವಾಸದ ಬಳಿ ಕೆಸಿಆರ್ ಅವರ ಅಭಿಮಾನಿಗಳು ಬೃಹತ್ ಕಟೌಟ್‍ಗಳನ್ನು ನಿರ್ಮಿಸಿದ್ದರು. ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ನಂತರ ಹೈದರಾಬಾದ್‍ಗೆ ಹಿಂದಿರುಗಿದ ಕೆಸಿಆರ್, ಗುರುವಾರ ಸಂಜೆ ಹೈದರಾಬಾದ್‍ನ ಇಂಟರ್‍ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಶ್ರೀನಿವಾಸ್ ಗೌಡ್ ಅವರ ಪುತ್ರಿಯ ವಿವಾಹದಲ್ಲಿ ಪಾಲ್ಗೊಳ್ಳಲಿದ್ದಾರೆ.

  • ಕರುಣಾನಿಧಿ ಕುಟುಂಬದ ಏಳು ಜನ ಗೆದ್ದಿದ್ರು – ನನ್ನ ಇಬ್ಬರು ಮೊಮ್ಮಕ್ಕಳು ಎಲೆಕ್ಷನ್‍ಗೆ ನಿಂತಿದ್ದು ತಪ್ಪಾ: ಎಚ್‍ಡಿಡಿ

    ಕರುಣಾನಿಧಿ ಕುಟುಂಬದ ಏಳು ಜನ ಗೆದ್ದಿದ್ರು – ನನ್ನ ಇಬ್ಬರು ಮೊಮ್ಮಕ್ಕಳು ಎಲೆಕ್ಷನ್‍ಗೆ ನಿಂತಿದ್ದು ತಪ್ಪಾ: ಎಚ್‍ಡಿಡಿ

    ಬೆಂಗಳೂರು: ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಪಕ್ಷ ಸಂಘಟನೆ ಮುಂದಾಗಿರುವ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಸಮಾವೇಶವನ್ನು ಇಂದು ನಡೆಸಿದರು. ಈ ವೇಳೆ ಮಾತನಾಡಿದ ಎಚ್‍ಡಿಡಿ ತಮಿಳುನಾಡಿನ ಕರುಣಾನಿಧಿ ಕುಟುಂಬದ ಏಳು ಜನ ಗೆದ್ದು ಬಂದಿದ್ದರು. ಆದರೆ ನನ್ನ ಇಬ್ಬರು ಮೊಮ್ಮಕ್ಕಳು ಚುನಾವಣೆಯಲ್ಲಿ ನಿಂತಿದ್ದರು ಎಂದು ಹೇಳಿದರು.

    ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ ಅವರು, ನನ್ನ ಜೀವನದ ಉದ್ದಕ್ಕೂ ರಾಜ್ಯದ ಅಭಿವೃದ್ಧಿಗಾಗಿ ಹೋರಾಟ ಮಾಡಿದ್ದು, ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಅಗತ್ಯ ಇದೆ. ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷ ಬಲಿಷ್ಟವಾಗಿದ್ದು. ರಾಜ್ಯದಲ್ಲೂ ಪಕ್ಷ ಸಂಘಟನೆಗೆ ನನ್ನ ಹೋರಾಟವೂ ಮುಂದುವರಿಯುತ್ತದೆ. ಆದರೆ ಕರ್ನಾಟಕದಲ್ಲಿ ಏನಾಗಿದೆ. ಕೃಷ್ಣ, ಕಾವೇರಿಗಾಗಿ ಹೋರಾಟ ಮಾಡಿದ್ದು, ರಾಜೀನಾಮೆ ನೀಡಿ ಹೊರ ಬಂದಿದ್ದೇನೆ. ಪ್ರಾದೇಶಿಕ ಪಕ್ಷದ ಜವಾಬ್ದಾರಿ ಎಲ್ಲರ ಮೇಲಿಯೂ ಇರುತ್ತೆ. ನಮ್ಮ ಮೇಲೆ ಯಾವುದೇ ಆಪಾದನೆ ಇದ್ದರೆ ತೋರಿಸಿ ಎಂದು ಇದೇ ವೇಳೆ ಮಾಧ್ಯಮಗಳಿಗೆ ಮನವಿ ಮಾಡಿದರು.

    ಈ ಹಿಂದೆ ಪಕ್ಷದಿಂದ ಗೆದ್ದವರಿಗೆ ಕರೆದು ಸನ್ಮಾನ ಮಾಡಿದ್ದೇ. ಆದರೆ ಈಗ ಸೋತವರನ್ನ ಕರೆಯಬೇಕು ಎಂದು ಎಲ್ಲರನ್ನು ಕರೆದಿದ್ದೇನೆ. ನಾನು ಸೋತ ಅಭ್ಯರ್ಥಿ. ಹಾಗಾಗಿ ಸೋತವರನ್ನ ಈ ಸಭೆಗೆ ಕರೆದಿದ್ದೇನೆ. ನನಗೆ ಕಾರ್ಯಕರ್ತರೇ ಸ್ಫೂರ್ತಿಯಾಗಿದ್ದು, ಆದರೆ ಪಕ್ಷ ಎಲ್ಲಿ ಬೆಳೆಯುತ್ತೆ ಎಂದು ಕೆಲವರಿಗೆ ಅನ್ನಿಸುತ್ತದೆ. ಆದರೆ ಪಕ್ಷ ಕಟ್ಟಿ ಬೆಳೆಸಿದ ದೇವೇಗೌಡ ಸುಮ್ಮನೆ ಕೂರಲು ಸಾಧ್ಯವಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯ ಗೆಲುವು ಸುಲಭ ಅಲ್ಲ. ಆದರೂ ಸ್ಥಳೀಯ ಸಂಸ್ಥೆಯಲ್ಲಿ ಸಾಕಷ್ಟು ಜನ ಗೆದ್ದಿದ್ದಾರೆ ಎಂದು ಕಾರ್ಯಕರ್ತರಿಗೆ ಸ್ಥೈರ್ಯ ತುಂಬಿದರು.

    ಮೈತ್ರಿ ಸರ್ಕಾರ ಮುಂದುವರಿದು, ಕಾಂಗ್ರೆಸ್ – ಜೆಡಿಎಸ್ ಸೋದರ ಸಮಾನದಲ್ಲಿ ನಡೆದುಕೊಳ್ಳುವುದು ಅವರಿಗೆ ಬಿಟ್ಟಿದ್ದು. ಮುಂದೆ ಸ್ಥಳೀಯ ಸಂಸ್ಥೆ ಚುನಾವಣೆಗಳು ಬರುತ್ತೆ. ಈ ಬಗ್ಗೆ ಕಾರ್ಯಕರ್ತರು ಹೆಚ್ಚಿನ ಆಸಕ್ತಿ ವಹಿಸಬೇಕು. ಮೈತ್ರಿ ಸರ್ಕಾರದಲ್ಲಿ ವ್ಯತ್ಯಾಸಗಳಿರಬಹುದು, ಆದರೆ ಯಾರು ಪಕ್ಷ ಬಿಟ್ಟು ಹೋಗಿಲ್ಲ. ಒಂದು ವರ್ಷದ ಸಾಧನೆ ಕೇವಲ ಕುಮಾರಸ್ವಾಮಿ ಮಾತ್ರ ಮಾಡಿದ್ದಾರೆ ಎಂದು ನಾನು ಹೇಳಲ್ಲ. ಈ ಸಾಧನೆ ಎರಡು ಪಕ್ಷದವರು ಸೇರಿ ಮಾಡಿದ್ದಾರೆ. ಸದ್ಯ ಜೆಡಿಎಸ್ ನಲ್ಲಿ ಏನು ಗೊಂದಲ ಇಲ್ಲ. ಮುಂದಿನ ಚುನಾವಣೆ ನಾಲ್ಕು ವರ್ಷಕ್ಕೆ ಬಂದರು ಕೂಡ ಅಲ್ಲಿಯವರೆಗೂ ಜನರ ನಡುವೆ ಹೋಗಬೇಕು ಎಂದರು.

    ಮುಖ್ಯಮಂತ್ರಿಯಾಗಿ ಎಲ್ಲರನ್ನೂ ಮೆಚ್ಚಿಸಿ ಕೆಲಸ ಮಾಡುವುದು ಕಷ್ಟ. 20-20 ಸರ್ಕಾರದಲ್ಲಿ ಕುಮಾರಸ್ವಾಮಿಗೆ ಒಂದು ಗುಂಪು ಸಹಕಾರ ಕೊಡಲಿಲ್ಲ. ಇದು ಎಲ್ಲರಿಗೂ ಗೊತ್ತಿರೋ ವಿಚಾರ. ಈ ಸರ್ಕಾರ ನಾಲ್ಕು ವರ್ಷ ಆನಂದವಾಗಿ ನಡೆಯಲಿ. ಇನ್ನು ನಾಲ್ಕು ವರ್ಷ ನಾನು ಕೆಲಸ ಮಾಡುತ್ತೇನೆ, ಸೋತೆ ಎಂದು ಮನೆಯಲ್ಲಿ ಕುಳಿತುಕೊಳ್ಳದೆ ಪಕ್ಷ ಕಟ್ಟುತ್ತೇನೆ. ಈ ಸೋಲು ಮುಂದಿನ ಗೆಲುವಿಗೆ ಸೋಪಾನ ಆಗುತ್ತೆ ಎಂದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಎಚ್‍ಡಿಡಿಗೆ ಗಂಗೆ ಶಾಪವಿದ್ದು, ತುಮಕೂರಿನಿಂದ ಸ್ಪರ್ಧೆ ಮಾಡಿದ್ರೆ ಸೋಲು ಗ್ಯಾರಂಟಿ: ಮಾಜಿ ಶಾಸಕ

    ಎಚ್‍ಡಿಡಿಗೆ ಗಂಗೆ ಶಾಪವಿದ್ದು, ತುಮಕೂರಿನಿಂದ ಸ್ಪರ್ಧೆ ಮಾಡಿದ್ರೆ ಸೋಲು ಗ್ಯಾರಂಟಿ: ಮಾಜಿ ಶಾಸಕ

    ತುಮಕೂರು: ಮಾಜಿ ಪ್ರಧಾನಿ ದೇವೇಗೌಡರಿಗೆ ಗಂಗೆ ಶಾಪ ಇದ್ದು ತುಮಕೂರಿನಿಂದ ಅವರು ಸ್ಪರ್ಧೆ ಮಾಡಿದರೆ ಅವರ ಸೋಲು ಗ್ಯಾರಂಟಿ ಎಂದು ತುಮಕೂರು ಬಿಜೆಪಿ ಸಂಭಾವ್ಯ ಅಭ್ಯರ್ಥಿ ಮಾಜಿ ಶಾಸಕ ಸುರೇಶ್ ಗೌಡ ಭವಿಷ್ಯ ನುಡಿದಿದ್ದಾರೆ.

    ತುಮಕೂರಿನಲ್ಲಿ ಮಾತನಾಡಿದ ಸುರೇಶ್ ಗೌಡರು, ದೇವೇಗೌಡರಿಗೆ ಗಂಗೆ ಶಾಪ ಇರೋದಾಗಿ ಈಗಾಗಲೇ ಜ್ಯೋತಿಷಿಗಳು ಹೇಳಿದ್ದಾರೆ. ಈ ವಿಚಾರ ಸ್ವತಃ ದೇವೇಗೌಡರಿಗೆ ಗೊತ್ತು. ಈ ಶಾಪ ಹೊತ್ತುಕೊಂಡು ದೇವೇಗೌಡರು ತುಮಕೂರಿನಿಂದ ಸ್ಪರ್ಧೆ ಮಾಡಿದರೆ ಅವರ ಸೋಲು ಕಟ್ಟಿಟ್ಟ ಬುತ್ತಿ ಎಂದು ಸುರೇಶ್ ಗೌಡ ಪ್ರತಿಕ್ರಿಯಿಸಿದ್ದಾರೆ.

    ತುಮಕೂರು ಜಿಲ್ಲೆಗೆ ಹೇಮಾವತಿ ನೀರು ನೀಡದೆ ದೇವೇಗೌಡರು ವಂಚಿಸಿದ್ದಾರೆ. ಲಕ್ಷಾಂತರ ರೈತರ ಕಣ್ಣೀರ ಶಾಪದಿಂದಾಗಿ ಮಾತೆ ಗಂಗೆ ದೇವೇಗೌಡರ ಮೇಲೆ ಶಾಪ ಕೊಟ್ಟಿದ್ದಾಳೆ. ಹಾಗಾಗಿ ತೂಮಕೂರಿನಿಂದ ಸ್ಪರ್ಧೆ ಮಾಡಿದರೆ ಶಾಪದಿಂದಾಗಿ ಅವರ ಸೋಲು ಗ್ಯಾರಂಟಿ ಎಂದು ಸುರೇಶ್ ಗೌಡ ಹೇಳಿದ್ದಾರೆ.

    ಅಲ್ಲದೆ ತುಮಕೂರು ಕ್ಷೇತ್ರದ ಬಿಜೆಪಿ ಟಿಕೆಟ್ ಸಂಭಾವ್ಯ ಅಭ್ಯರ್ಥಿ ಪಟ್ಟಿಯ ನನ್ನ ಹೆಸರೂ ಇದೆ. ಸಾಮಾಜಿಕ ಜಾಲತಾಣದಲ್ಲಿ ನಡೆದ ಸರ್ವೆಯಲ್ಲಿ ನನ್ನ ಪರ ಒಲವು ತೋರಿದ್ದಾರೆ. ಅದರ ಜೊತೆಗೆ ನಾನು ಯಡಿಯೂರಪ್ಪ ನವರ ಶಿಷ್ಯ ಎನ್ನುವುದು ಜನರಿಗೆ ಗೊತ್ತು. ಹಾಗಾಗಿ ಟಿಕೆಟ್ ತಮಗೇ ಅಂತಿಮವಾಗುತ್ತೆ ಎಂದು ಸುರೇಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಾವನ್ರೀ ಅವ್ನು  ಶ್ರೀನಿವಾಸ್ ಪ್ರಸಾದ್ – ಏಕವಚನದಲ್ಲೇ ರೇವಣ್ಣ ವಾಗ್ದಾಳಿ

    ಯಾವನ್ರೀ ಅವ್ನು ಶ್ರೀನಿವಾಸ್ ಪ್ರಸಾದ್ – ಏಕವಚನದಲ್ಲೇ ರೇವಣ್ಣ ವಾಗ್ದಾಳಿ

    ಹಾಸನ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ವಿರುದ್ಧ ಟೀಕೆ ಮಾಡಿ ಮಾತನಾಡಿದ್ದ ಬಿಜೆಪಿ ಮುಖಂಡ ಶ್ರೀನಿವಾಸ ಪ್ರಸಾದ್ ಅವರನ್ನು ಲೋಕೋಪಯೋಗಿ ಸಚಿವ ರೇವಣ್ಣ ಅವರು ಏಕವನದಲ್ಲೇ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಹೊಳೆನರಸೀಪುರ ತಾಲೂಕು ಕಳ್ಳಿಕೊಪ್ಪಲು ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಂದೆಯನ್ನ ಟೀಕಿಸಿದ್ದಕ್ಕೆ ಕೆಂಡಾಮಂಡಲವಾಗಿ ತಿರುಗೇಟು ನೀಡಿ, ಯಾವನ್ರೀ ಅವ್ನು ಶ್ರೀನಿವಾಸ್ ಪ್ರಸಾದ್? ಪ್ರಧಾನಿಯಾಗಿ ದೇವೇಗೌಡರು ದೆಹಲಿಗೆ ಓಡಾಡ್ಕೊಂಡು ಇರಲಿಲ್ಲ. ದೇವೇಗೌಡರು ಏನು ಕೆಲಸ ಮಾಡಿದ್ದಾರೆ ಎಂಬುವುದು ಚರ್ಚೆ ಆಗಲಿ ಎಂದು ಸವಾಲು ಎಸೆದರು.

    ರಾಜ್ಯದಲ್ಲಿ ಬಿಜೆಪಿಗೆ 18 ಮಂದಿ ಸಂಸದರನ್ನು ನೀಡಿದರೂ ಕೂಡ ಕಾವೇರಿ ಹಾಗೂ ಮಹದಾಯಿ ಬಗ್ಗೆ ಹೋರಾಟ ಮಾಡಿಲ್ಲ. ಆದರೆ ಈಗ ಟಿವಿ ಮುಂದೆ ಟೀಕೆ ಮಾಡುತ್ತಾರೆ. ಶಿವಮೊಗ್ಗವನ್ನು ಯಡಿಯೂರಪ್ಪ ಅವರ ಮಕ್ಕಳಿಗೆ ಬರೆದುಕೊಟ್ಟಿದ್ದಾರ? ಅಚನಾಕ್ ಆಗಿ ಶಾಸಕನಾದರೆ ಹೀಗೆ ಮಾತನಾಡುತ್ತಾರೆ. ಈ ಬಾರಿ ಬಿಜೆಪಿಗೆ ಜನ ಸರಿಯಾದ ಪಾಠ ಕಲಿಸುತ್ತಾರೆ ಎಂದು ಹೆಸರು ಹೇಳದೆಯೇ ಪ್ರೀತಂಗೌಡ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನು ಓದಿ: ಕರ್ನಾಟಕ ಗೌಡರ ಅಪ್ಪನ ಮನೆ ಆಸ್ತಿನಾ – ಬಿಜೆಪಿ ಶಾಸಕ ಪ್ರೀತಂಗೌಡ ಪ್ರಶ್ನೆ 

    ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಮುಂದುವರಿಯುತ್ತದೆ. ಯಾವುದೇ ಅಪಾಯ ಇಲ್ಲ, ಮಾಧ್ಯಮದವರು ಅಂತಹ ಹೇಳಿಕೆಗಳ ಬಗ್ಗೆ ಹೆಚ್ಚು ಮಹತ್ವ ನೀಡುವುದು ಬೇಡ. ದೇವೇಗೌಡ್ರು, ಸಿಎಂ ಕುಮಾರಸ್ವಾಮಿ ಏನು ಕೆಲಸ ಮಾಡಿದ್ದಾರೆ ಎನ್ನುವುದು ಜನರಿಗೆ ತಿಳಿದಿದೆ. ಜನರಿಗೆ ಕೂಲಿ ನೀಡುವಂತೆ ದಿನಕ್ಕೆ 17 ರೂ. ನೀಡುತ್ತಿದ್ದಾರೆ. ರೈತರ ಸಾಲಮನ್ನಾ ಮಾಡುವ ಕಾರ್ಯ ರಾಜ್ಯ ಸರ್ಕಾರ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಕೆಲ ದಿನಗಳಲ್ಲೇ ಮೂಲೆಗುಂಪಾಗುತ್ತದೆ. ಜನರಿಗೆ ಎಲ್ಲವೂ ಕೂಡ ತಿಳಿದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಲೋಕಸಭಾ ಚುನಾವಣೆಯಲ್ಲೂ ಕೂಡ ನಮ್ಮ ಮೈತ್ರಿ ಮುಂದುವರಿಯುತ್ತದೆ. ರಾಜ್ಯದಲ್ಲಿ ಜೆಡಿಎಸ್ ಎಷ್ಟು ಸ್ಥಾನ ಗೆಲ್ಲುವ ಶಕ್ತಿಯನ್ನು ಹೊಂದಿದೆಯೋ ಅಷ್ಟು ಸ್ಥಾನಗಳನ್ನು ದೇವೇಗೌಡರು ರಾಹುಲ್ ಗಾಂಧಿ ಅವರನ್ನು ಕೇಳಿದ್ದಾರೆ. ಶೀಘ್ರವೇ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇವೇಗೌಡರ ವಿಕೆಟ್ ಉರುಳುತ್ತೆ ಎಂದ ಪ್ರೀತಮ್ ಗೌಡ ವಿರುದ್ಧ ಪ್ರತಿಭಟನೆ

    ದೇವೇಗೌಡರ ವಿಕೆಟ್ ಉರುಳುತ್ತೆ ಎಂದ ಪ್ರೀತಮ್ ಗೌಡ ವಿರುದ್ಧ ಪ್ರತಿಭಟನೆ

    – ಮನೆಗೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ ಜೆಡಿಎಸ್ ಕಾರ್ಯಕರ್ತರು

    ಹಾಸನ: ಆಪರೇಷನ್ ಕಮಲದ ಆಡಿಯೋದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ವಿಕೆಟ್ ಉರುಳುತ್ತೆ ಎಂದು ಹೇಳಿದ್ದ ಬಿಜೆಪಿಯ ಹಾಸನ ಶಾಸಕ ಪ್ರೀತಮ್‍ಗೌಡ ಮನೆಗೆ ಕಲ್ಲು ಎಸೆದು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕ್ಷೇತ್ರದ ಅಭಿವೃದ್ಧಿಯನ್ನು ಬಿಟ್ಟು ಮಾಜಿ ಪ್ರಧಾನಿ ದೇವೇಗೌಡ ಅವರ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಿದ್ದಾರೆ. ಒಬ್ಬ ಹಿರಿಯ ನಾಯಕನ ಕುರಿತು ಅಸಭ್ಯವಾಗಿ ಮಾತನಾಡುವುದು ಸರಿಯಲ್ಲ. ಶಾಸಕ ಪ್ರೀತಮ್‍ಗೌಡ ಮನೆಯಿಂದ ಹೊರ ಬಂದು ಕ್ಷಮೆ ಕೇಳಬೇಕು ಎಂದು ಪ್ರತಿಭಟನಾ ನಿರತ ಜೆಡಿಎಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

    ಶಾಸಕ ಪ್ರೀತಮ್‍ಗೌಡ ವಿರುದ್ಧ ಘೋಷಣೆ ಕೂಗುತ್ತಿದ್ದಾಗ ಬಿಜೆಪಿ ಶಾಸಕರು ಅಲ್ಲಿಗೆ ಬಂದಿದ್ದಾರೆ. ಈ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರ ಮಧ್ಯೆ ಮಾತಿಗೆ ಮಾತು ಬೆಳೆದು ಗಲಾಟೆ ಮಾಡಿಕೊಂಡಿದ್ದಾರೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ. ಆದರೂ ಎರಡೂ ಪಕ್ಷಗಳು ಕಾರ್ಯಕರ್ತರು ಪರಸ್ಪರ ವಾಗ್ದಾಳಿ ನಡೆಸಿ ತಳ್ಳಾಡಿದ್ದಾರೆ.

    ಪ್ರೀತಮ್‍ಗೌಡ ಹೇಳಿದ್ದೇನು?:
    ಸೂರ್ಯ ಚಂದ್ರ ಇರುವವರೆಗೂ ರಾಷ್ಟ್ರೀಯ ಪಕ್ಷ ದೇಶದಲ್ಲಿ ಇರುತ್ತದೆ. ಮಾಜಿ ಪ್ರಧಾನಿ ದೇವೇಗೌಡರ ವಿಕೆಟ್ ಹೋಗುತ್ತೆ. ಸಿಎಂ ಕುಮಾರಸ್ವಾಮಿ ಆರೋಗ್ಯವೂ ಸರಿಯಿಲ್ಲ. ಇದರಿಂದಾಗಿ ಜೆಡಿಎಸ್ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತದೆ. ಮೈತ್ರಿ ಸರ್ಕಾರ ಈಗಂತೂ ಬಿದ್ದರೆ ಸಾಕು ಎನ್ನುವಂತಿದೆ. ನನಗೂ ಈಗ 35-36ನೇ ವಯಸ್ಸು, ಶಾಸಕನಾಗಿ ಇದ್ದೇನೆ. ನಿನಗೆ 30 ವರ್ಷವಾಗಿದೆ. ಇನ್ನೂ 40 ವರ್ಷ ರಾಜಕಾರಣ ಮಾಡಬೇಕು. ಎಲ್ಲಾ ಒಟ್ಟಿಗೆ ಇರೋಣ ಎಂದು ಅನಾಮಿಕ ವ್ಯಕ್ತಿಯ ಜೊತೆಗೆ ಫೋನಿನಲ್ಲಿ ಪ್ರೀತಮ್‍ಗೌಡ ಮಾತನಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಚ್‍ಡಿಡಿ ವಿರುದ್ಧ ಚುನಾವಣೆ ಸ್ಪರ್ಧಿಸಬೇಕೆಂಬ ಇಚ್ಛೆ ಇದೆ: ಡಿವಿ ಸದಾನಂದ ಗೌಡ

    ಎಚ್‍ಡಿಡಿ ವಿರುದ್ಧ ಚುನಾವಣೆ ಸ್ಪರ್ಧಿಸಬೇಕೆಂಬ ಇಚ್ಛೆ ಇದೆ: ಡಿವಿ ಸದಾನಂದ ಗೌಡ

    ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಸ್ಪರ್ಧೆ ಮಾಡುವ ವಿಚಾರ ಕೇಳಿದೆ. ನನಗೂ ಅವರು ವಿರುದ್ಧ ಸ್ಪರ್ಧಿಸಬೇಕು ಎಂಬ ಇಚ್ಛೆ ಇದೆ. ಆದ್ದರಿಂದ ದೇವೇಗೌಡರೇ ಕ್ಷೇತ್ರದಲ್ಲಿ ನಿಲ್ಲಬೇಕು ಎಂದು ಕ್ಷೇತ್ರದ ಹಾಲಿ ಸಂಸದ, ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡ್ರು ಸ್ಪರ್ಧಿಸ್ತಾರೆ ಎನ್ನುವ ಚರ್ಚೆ ಎದ್ದಿದೆ. ಸದ್ಯ ದೇವೇಗೌಡರೇ ಚುನಾವಣೆಗೆ ನಿಲ್ಲಬೇಕು. ಅವರ ವಿರುದ್ಧ ಸ್ಪರ್ಧೆಸಬೇಕು ಎಂಬುವುದು ನನ್ನ ಇಚ್ಛೆ ಎಂದು ತಿಳಿಸಿದರು. ಈ ಮೂಲಕ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಗೌಡರ ಗುದ್ದಾಟ ನಡೆಯುತ್ತಾ ಎಂಬ ಕುತೂಹಲಕ್ಕೆ ಕಾರಣರಾದರು.

    ಇತ್ತ ಈ ಕುರಿತು ಪ್ರತಿಕ್ರಿಯೆ ನೀಡಿದ ದೇವೇಗೌಡ ಅವರು, ಚುನಾವಣೆಯ ಸ್ಥಾನಗಳ ಹಂಚಿಕೆ, ಸ್ಪರ್ಧೆ ಬಗ್ಗೆ ಅಂತಿಮವಾಗಿಲ್ಲ. ಅದೆಲ್ಲಾ ಮುಂದೆ ನೋಡೋಣ ಎಂದು ತಿಳಿಸಿದರು. ಜೊತೆಗೆ, ಬಿಬಿಎಂಪಿ ಮಹಾನಗರ ಪಾಲಿಕೆಯಂತಹ ಚುನಾವಣೆಗಳಲ್ಲಿ ಹೊಂದಾಣಿಕೆ ಕಷ್ಟ. ಆ ಕಾರಣಕ್ಕಾಗಿ ಏಕಾಂಗಿ ಸ್ಪರ್ಧೆ ಬಗ್ಗೆ ನಿರ್ಧಾರ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

    ಶ್ರೀಗಳ ಭಾರತರತ್ನ ನಮ್ಮ ಜವಾಬ್ದಾರಿ: ಭಾರತ ರತ್ನಕ್ಕಾಗಿ ಶಕ್ತಿಮೀರಿ ಪ್ರಯತ್ನಿಸಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರೆ, ಮುಂದಿನ ದಿನಗಳಲ್ಲಿ ಈ ಗೌರವ ಕೊಡಿಸುವಂತಹ ಜವಾಬ್ದಾರಿ ನಮ್ಮದು ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ – ಎಚ್ ವಿಶ್ವನಾಥ್ ಹೇಳಿದ್ದು ಹೀಗೆ

    ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ – ಎಚ್ ವಿಶ್ವನಾಥ್ ಹೇಳಿದ್ದು ಹೀಗೆ

    ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರ ಚುಕ್ಕಾಣಿ ಪಡೆದಿದ್ದ ಎಚ್ ವಿಶ್ವನಾಥ್ ತಮ್ಮ ರಾಜೀನಾಮೆ ತೀರ್ಮಾನದಿಂದ ಹಿಂದೆ ಸರಿಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವೇಗೌಡರು ನನ್ನನ್ನ ನಂಬಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದರು. ಆದರೆ ನನ್ನ ಆರೋಗ್ಯ ಕ್ಷೀಣಿಸುತ್ತಿರುವ ಕಾರಣ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದೆ. ದೇವೇಗೌಡರು ನನ್ನ ಮನವಿ ತಿರಸ್ಕಾರ ಮಾಡಿದರು. ದೇವೇಗೌಡರ ವಿಶ್ವಾಸದ ಬೇಡಿಯ ಬಂಧನಕ್ಕೆ ಒಳಗಾದ ನಾನು, ನನ್ನ ನಿರ್ಧಾರ ವಾಪಸ್ ಪಡೆದಿದ್ದೇನೆ. ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ತಿಳಿಸಿದರು.

    ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿದ್ದು, ಪಕ್ಷಕ್ಕಾಗಿ ಮರ ಹತ್ತಿ ಬಾವುಟ ಕಟ್ಟಿರುವ ಕಾರ್ಯಕರ್ತರು ಇದ್ದಾರೆ. ಅಂತಹ ಕಾರ್ಯಕರ್ತರಿಗೆ ಪಕ್ಷದಲ್ಲಿ ಅಧಿಕಾರ ಕೊಡಬೇಕು. ಶೀಘ್ರದಲ್ಲೇ ಸಿಎಂ ಹಾಗೂ ಪಕ್ಷದ ವರಿಷ್ಠರು ಕಾರ್ಯಕರ್ತರಿಗೆ ಸ್ಥಾನಮಾನ ಕೊಡುತ್ತಾರೆ. ದೇಶ್ಯಾದ್ಯಂತ ಪ್ರಾದೇಶಿಕ ಪಕ್ಷಗಳು ಪ್ರಬಲವಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಿಶೇಷ ಸ್ಥಾನವನ್ನು ಗಳಿಸಲಿವೆ. ಇಂದು ಹಿಂದಿನ ಜನತಾ ಪರಿವಾರ ಒಂದುಗೂಡಿಸುವ ಅನಿವಾರ್ಯತೆ ಇದೆ. ದೇವೇಗೌಡರು ಕೂಡ ಸಮ್ಮಿಶ್ರ ಸರ್ಕಾರದಲ್ಲೇ ಪ್ರಧಾನಿಯಾಗಿ 10 ತಿಂಗಳು ಅದ್ಭುತ ಕೆಲಸ ಮಾಡಿದರು. ರಾಜ್ಯದಲ್ಲೂ ಸಮ್ಮಿಶ್ರ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

    ಅಂಬರೀಶ್ ಅಂತ್ಯ ಸಂಸ್ಕಾರದ ಕೆಲಸವನ್ನು ಸರ್ಕಾರ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೆರವೇರಿಸಿದೆ. ಮಂಡ್ಯ ಬಸ್ ದುರಂತ, ವಿಷ ಪ್ರಾಷಾಣ ದುರಂತ ಘಟನೆಗಳನ್ನು ಸಮರ್ಥವಾಗಿ ಸರ್ಕಾರ ನಿಭಾಯಿಸಿತು. ಹಿಂದಿನ ಸರ್ಕಾರಗಳು ಸಾಲ ಮಾಡಿ ಹೋಗಿದ್ದರು, ರಾಜ್ಯದ ಆರ್ಥಿಕ ಪರಿಸ್ಥಿತಿ ಕಂಡ ಸಿಎಂ ಕುಮಾರಸ್ವಾಮಿ ಅವರು 43 ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಮಾಡುವ ಧೈರ್ಯ ಮಾಡಿದ್ದಾರೆ. ಇದೆಲ್ಲವನ್ನ ಕಾರ್ಯಕರ್ತರು ಜನರಿಗೆ ತಿಳಿಸಬೇಕಿದ್ದು, ವಿಭಾಗದ ಮೂಲಕ ಪಕ್ಷ ಕಟ್ಟುವ ಕೆಲಸ ಮಾಡಬೇಕು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೋದಿ ಭಯಕ್ಕೆ ಹಾವು ಮುಂಗುಸಿಯಂತಿದ್ದವರು ಒಂದಾಗಿದ್ದಾರೆ: ಸಿಟಿ ರವಿ ವ್ಯಂಗ್ಯ

    ಮೋದಿ ಭಯಕ್ಕೆ ಹಾವು ಮುಂಗುಸಿಯಂತಿದ್ದವರು ಒಂದಾಗಿದ್ದಾರೆ: ಸಿಟಿ ರವಿ ವ್ಯಂಗ್ಯ

    ಬೆಂಗಳೂರು: ಹಾವು ಮುಂಗುಸಿಯಂತೆ ಸದಾ ಕಿತ್ತಾಡುತ್ತಿದ್ದವರು ಈಗ ಮೋದಿ ಭಯಕ್ಕಾಗಿ ಒಂದಾಗಿದ್ದಾರೆ. ಸ್ವಲ್ಪ ದಿನ ಅವರ ಗುಣದಂತೆ ಕಿತ್ತಾಡಿಕೊಂಡೇ ವಾಪಸ್ ಬರುತ್ತಾರೆ ಎಂದು ಶಾಸಕ ಸಿಟಿ ರವಿ ಹೇಳಿದ್ದಾರೆ.

    ನಗರದಲ್ಲಿ ಏರ್ಪಡಿಸಿದ್ದ ಮತ್ತೆ ಮೋದಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಟಿ ರವಿ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಸಿಎಂ ಕುಮಾರಸ್ವಾಮಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಬಗ್ಗೆ ವ್ಯಂಗ್ಯ ವಾಡಿದರು.

    ಹಿಂದೆ ದೇವೇಗೌಡರು ಇಂತ ನೀಚ ಮುಖ್ಯಮಂತ್ರಿಯನ್ನ ನೋಡಿಲ್ಲ ಎಂದಿದ್ದರು. ಅಲ್ಲದೇ ಇಂತವರನ್ನ ಬೆಳೆಸಿ ತಪ್ಪು ಮಾಡಿದೆ ಎಂದು ಆರೋಪಿಸಿದ್ದರು. ಆದರೆ ಈಗ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾವು ಮುಂಗುಸಿ ಗುಣ ಸದಾ ಕಿತ್ತಾಡೋದು. ಈಗ ಕಿತ್ತಾಡುವವರು ಮೋದಿ ಭಯಕ್ಕಾಗಿ ಒಂದಾಗಿದ್ದಾರೆ. ಸ್ವಲ್ಪ ದಿನ ಅವರ ಗುಣದಂತೆ ಕಿತ್ತಾಡಿಕೊಂಡೇ ವಾಪಸ್ ಬರ್ತಾರೆ ಎಂದರು. ಇದನ್ನೂ ಓದಿ:  ಒಂದೇ ವೇದಿಕೆಯಲ್ಲಿ ಮಾಧ್ಯಮಗಳ ವಿರುದ್ಧ ಗರಂ ಆದ ಗುರು ಶಿಷ್ಯರು!

    ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಮೋದಿ ಅವರ ಬೆಳೆದು ಬಂದ ಹಾದಿ ಕಂಡು ಈ ನಿರ್ಧಾರ ಮಾಡಿದ್ದೇವೆ. ಏಕೆಂದರೆ ಯಾವುದೇ ಕುಟುಂಬ, ಹಣ, ಜಾತಿ ಬೆಂಬಲವಿಲ್ಲದ ವ್ಯಕ್ತಿ ಉನ್ನತ ಉದ್ದೇಶದಿಂದ ಪ್ರಧಾನಿಯಾಗಿದ್ದಾರೆ. ಅದ್ದರಿಂದಲೇ ಕೆಲ ಮಂದಿಗೆ ಅವರ ಮೇಲೆ ಭಾರಿ ಕೋಪವಿದೆ. ಆದರೆ ತಮ್ಮ ಆಡಳಿತವನ್ನೇ ಮಾದರಿಯಾಗಿ ಮಾಡಿ ದೇಶಕ್ಕೂ ಮಾದರಿ ಆಡಳಿತ ನೀಡಿದ್ದಾರೆ. ಅವರು ದೇಶದ ಘಟನೆಯನ್ನು ಎತ್ತಿ ಹಿಡಿದಿದ್ದಾರೆ. ದೇಶದ ಹೆಮ್ಮೆಯ ನಾಯಕತ್ವವನ್ನು ಮುಂದುವರಿಸಬೇಕಿದೆ. ಅದ್ದರಿಂದ ಮತ್ತೊಮ್ಮೆ ಮೋದಿ ಅವರಿಗೆ ಅಧಿಕಾರ ನೀಡೋಣ ಎಂದು ಮನವಿ ಮಾಡಿದರು.

    ಬಳಿಕ ಮಾತನಾಡಿದ ರಂಗಕರ್ಮಿ ಪ್ರಕಾಶ್ ಬೆಳವಾಡಿ, ನೆರೆ ಬಂದಾಗ ಹಾವು ಮುಂಗುಸಿ ಒಂದಾಗುತ್ತವೆ. ಆದರೆ ಪರಸ್ಪರ ಒಬ್ಬರಿಗೊಬ್ಬರು ನೋಡಿಕೊಳ್ಳಲ್ಲ. ಅವರ ಮನೆಯವರನ್ನೇ ನೋಡಿಕೊಳ್ಳೋಕೆ ಅವರಿಗೆ ಸಮಯ ಇಲ್ಲ. ಇನ್ನೂ ರಾಜ್ಯದ ಜನರನ್ನ ಹೇಗೆ ನೋಡಿಕೊಳುತ್ತಾರೆ ಎಂದು ಕುಟುಕಿದರು.  ಇದನ್ನೂ ಓದಿ: 12 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಿದ್ದು, ಎಚ್‍ಡಿಡಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಂದೇ ವೇದಿಕೆಯಲ್ಲಿ ಮಾಧ್ಯಮಗಳ ವಿರುದ್ಧ ಗರಂ ಆದ ಗುರು ಶಿಷ್ಯರು!

    ಒಂದೇ ವೇದಿಕೆಯಲ್ಲಿ ಮಾಧ್ಯಮಗಳ ವಿರುದ್ಧ ಗರಂ ಆದ ಗುರು ಶಿಷ್ಯರು!

    ಬೆಂಗಳೂರು: ಉಪಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಸಿದ್ಧವಾಗಿರುವ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಆಯೋಜಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮಗಳ ವಿರುದ್ಧ ಗರಂ ಆಗಿದ್ದಾರೆ.

    ನಗರದ ಅಶೋಕ ಹೋಟೆಲ್‍ನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಎಚ್‍ಡಿಡಿ ಗರಂ ಆದರು. ಮಾಧ್ಯಮ ಮಿತ್ರರು ಹಳೆಯ ಹೇಳಿಕೆಗಳ ಬಗ್ಗೆ ಪ್ರಶ್ನೆ ಕೇಳಿ ನಮ್ಮ ಮನಸ್ಸನ್ನು ಕೆಡಸುವ ಪ್ರಯತ್ನ ಮಾಡಬೇಡಿ. ಪ್ರಚಲಿತ ವಿದ್ಯಮಾನ ಏನಿದೆಯೋ ಅದನ್ನು ಹಾಗೇ ನಡೆದುಕೊಂಡು ಹೋಗಲು ಬಿಟ್ಟು, ಹಳೆಯದನ್ನ ಕೆಣಕಬೇಡಿ ಎಂದು ಗರಂ ಆಗಿ ಹೇಳಿದರು.

    ಕೈ ಮುಗಿದು ಕೇಳುತ್ತೇನೆ ಹಿಂದಿನ ಹೇಳಿಕೆಗಳ ಬಗ್ಗೆ ಪ್ರಶ್ನೆ ಕೇಳಲೇಬೇಡಿ. ನನ್ನ ಬಗ್ಗೆ ನೀವು ಏನೆಲ್ಲಾ ಮಾಡಿದ್ದೀರಿ ಎನ್ನುವುದು ಗೊತ್ತಿದೆ. ನನಗೆ 86 ವರ್ಷ, ನಿಮ್ಮ ವಯಸ್ಸು ಎಷ್ಟು? ನನಗೆ ಪಾಠ ಮಾಡುತ್ತೀರಾ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು. ನಮ್ಮ ಅಜೆಂಡಾ ಕೋಮವಾದಿ ಪಕ್ಷ ಸೋಲಿಸುವುದು. ಎಲ್ಲಾ ಕಾರ್ಯಕರ್ತರಿಗೂ ಮನವಿ ಮಾಡಲಾಗಿದ್ದು, ಎಲ್ಲರೂ ಒಪ್ಪಿದ್ದಾರೆ. ನಮ್ಮ ಎರಡು ಪಕ್ಷದ ಕಾರ್ಯಕರ್ತರು ಒಟ್ಟಿಗೆ ಕೆಲಸ ಮಾಡುತ್ತಾರೆ ಎಂದರು.

    ಈ ವೇಳೆ ಮಧ್ಯಪ್ರವೇಶ ಮಾಡಿದ ಸಿದ್ದರಾಮಯ್ಯ ಅವರು, ದೇವೇಗೌಡರಿಗೆ 60 ವರ್ಷ ರಾಜಕೀಯ ಅನುಭವ ಇದೆ. ಹಿಂದೆ ಏನು? ಮಾತನಾಡಿದ್ದೇವೆ ಎಂಬುದು ಮುಖ್ಯ ಅಲ್ಲ. ಸದ್ಯದ ಸ್ಥಿತಿ ಬಗ್ಗೆ ಚರ್ಚೆ ನಡೆಯಲಿ ಎಂದು ಹೇಳಿ ವಾತಾವರಣವನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದರು.

    ಇತ್ತ ಸುದ್ದಿಗೋಷ್ಠಿ ಮುಗಿದ ಬಳಿಕ ಮಾಧ್ಯಮಗಳು ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಶಿವಕುಮಾರ್ ನೀಡಿದ್ದ ಹೇಳಿಕೆ ಕುರಿತು ಪ್ರಶ್ನೆ ಕೇಳಿದ್ದಕ್ಕೆ ಸಿದ್ದರಾಮಯ್ಯ, ಈ ವೇದಿಕೆಯಲ್ಲಿ ನಾನು ಲಿಂಗಾಯತ ಹೇಳಿಕೆ ಕುರಿತು ಮಾತನಾಡಲ್ಲ. ಅದನ್ನು ಮಾತನಾಡಲು ಬೇರೆ ವೇದಿಕೆಯಲ್ಲಿ ಸಿಗುತ್ತೇನೆ. ನೀವು ಏನೇ ಕೇಳಿದರೂ ಇಲ್ಲಿ ನಾನು ಮಾತನಾಡಲ್ಲರಿ ಎಂದು ಗರಂ ಆಗಿ ಪ್ರತಿಕ್ರಿಯಿಸಿದರು. ಇದನ್ನೂ ಓದಿ: 12 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಿದ್ದು, ಎಚ್‍ಡಿಡಿ 

    ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ. ಲಿಂಗಾಯತ ಧರ್ಮದ ಬಗ್ಗೆ ಶಿಫಾರಸ್ಸು ಮಾಡುವಾಗ ಕ್ಯಾಬಿನೆಟ್ ರಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡಿದ್ದೇವೆ. ಆಗ ಸಭೆಯಲ್ಲಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಕೂಡ ಇದ್ದರು. ಆದರೆ ಈಗ ಅವರು ಯಾವ ಅರ್ಥ ದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರ ಹೇಳಿಕೆಯಿಂದ ಪಕ್ಷ ಹಾಗೂ ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ನನ್ನನ್ನ ಯಾರು ಟಾರ್ಗೆಟ್ ಮಾಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 12 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಿದ್ದು, ಎಚ್‍ಡಿಡಿ

    12 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಿದ್ದು, ಎಚ್‍ಡಿಡಿ

    ಬೆಂಗಳೂರು: ಬರೋಬ್ಬರಿ 12 ವರ್ಷಗಳ ಬಳಿಕ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಮತ್ತು ಕಾಂಗ್ರೆಸ್ ಪಕ್ಷದ ಮಾಜಿ ಸಿಎಂ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು ನಗರದ ಅಶೋಕ ಹೋಟೆಲ್ ನಲ್ಲಿ ಉಪ ಚುನಾವಣೆಯ ಹಿನ್ನೆಲೆಯಲ್ಲಿ ನಡೆದ ಜೆಡಿಎಸ್, ಕಾಂಗ್ರೆಸ್ ಪಕ್ಷದ ಜಂಟಿ ಸುದ್ದಿಗೋಷ್ಠಿಯಲ್ಲಿ ಇಬ್ಬರು ನಾಯಕರು ಕಾಣಿಸಿಕೊಂಡರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್‍ಡಿಡಿ, ರಾಜ್ಯದಲ್ಲಿ ಎರಡು ಪಕ್ಷಗಳು ಜಂಟಿ ಸರ್ಕಾರ ರಚಿಸಿದ್ದೇವೆ. 12 ವರ್ಷದ ಮೇಲೆ ನಾನು ಮತ್ತು ಸಿದ್ದರಾಮಯ್ಯನವರು ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದೇವೆ. ಯಾವುದೇ ತಪ್ಪುಮಾಡಿದ್ದರು ಕ್ಷಮಿಸಿ ಎಂದು ರಾಜ್ಯದ ಜನರ ಮುಂದೆ ಹೋಗುತ್ತೇವೆ. ನಾನು ಸಿದ್ದರಾಮಯ್ಯ ಒಳ್ಳೆಯ ಸ್ನೇಹಿತರು. ಒಟ್ಟಿಗೆ ಪ್ರಚಾರ ಹೋಗಲು ಈ ಮೊದಲೇ ತೀರ್ಮಾನ ಮಾಡಿದ್ದೇವೆ. ಸದ್ಯ ನಡೆಯುತ್ತಿರುವ ಮೂರು ಲೋಕಸಭಾ ಹಾಗೂ 2 ವಿಧಾನಸಭಾ ಉಪ ಚುನಾವಣೆಯಲ್ಲಿ ಜಾತ್ಯಾತೀತ ಶಕ್ತಿಯನ್ನು ಎದುರಿಸಲು ಕರ್ನಾಟಕದಲ್ಲಿ ಒಟ್ಟಾಗಿ ಹೋಗುತ್ತೇವೆ. 5 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಒಟ್ಟಿಗೆ ಶಕ್ತಿ ಪ್ರದರ್ಶಿಸುತ್ತೇವೆ. ಯಾವುದೇ ಸನ್ನಿವೇಶದಲ್ಲಿ ಕಿಂಚಿತ್ತು ಅನುಮಾನಕ್ಕೆ ಎಡೆಮಾಡಿಕೊಡದೇ ಹೋರಾಟ ಮಾಡಿ ಉಪಚುನಾವಣೆ ಗೆಲ್ಲುತ್ತೇವೆ ಎಂದರು.

    ಚುನಾವಣೆಯಲ್ಲಿ 5 ಕ್ಷೇತ್ರಗಳಲ್ಲಿ ಒಟ್ಟಿಗೆ ಪ್ರಚಾರಕ್ಕೆ ಹೋಗುತ್ತೇವೆ. ಎರಡು ಪಕ್ಷದ ನಾಯಕರು ಒಟ್ಟಿಗೆ ಪ್ರಚಾರ ಮಾಡುತ್ತಾರೆ. ವೈಯಕ್ತಿಕ ಪ್ರತಿಷ್ಠೆ ಬಿಟ್ಟು ರಾಜ್ಯ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು. ಒಂದು ಕಾಲದಲ್ಲಿ ಎದುರಾಳಿಗಳಾಗಿ ಇದ್ದವರೇ ನಾವು ಒಂದಾಗಿದ್ದೇವೆ. ಆ ಮೂಲಕ ಜಾತ್ಯಾತೀತ ವ್ಯವಸ್ಥೆಯನ್ನು ಪ್ರಬಲಗೊಳಿಸುತ್ತೇವೆ. ಪಕ್ಷದ ತಳಮಟ್ಟದ ಕಾರ್ಯಕರ್ತರಲ್ಲಿ ಸ್ವಲ್ಪ ಬೇಸರವಿದೆ. ಆದರೆ ಅವರನ್ನು ನಾವು ಮನವೊಲಿಸಿದ್ದೇವೆ. ಹಳ್ಳಿಗಳಲ್ಲಿ ಎರಡು ಗುಂಪಾಗಿ ಪಕ್ಷದ ಪರ ಹೋರಾಟ ಮಾಡಿದವರು. ಆದರೆ ದೇಶದ ದೃಷ್ಟಿಯಿಂದ ಅದೆಲ್ಲವನ್ನು ಮರೆತು ಒಟ್ಟಿಗೆ ಹೋಗಬೇಕು. ಈ ಮೂಲಕ ನಾವು ಒಂದು ದೃಢವಾದ ನಿಲುವನ್ನು ತೆಗೆದುಕೊಂಡಿದ್ದೇವೆ. ಈ ಮಹತ್ವದ ಕಾರ್ಯಕ್ಕೆ ಎಲ್ಲರು ಸಹಕರಿಸಬೇಕು. ರಾಜ್ಯದ ಜನರ ಕೂಡ ಸಹಕಾರ ನೀಡಿ ಸಮ್ಮಿಶ್ರ ಸರ್ಕಾರಕ್ಕೆ ಈ ಉಪ ಚುನಾವಣೆಯಲ್ಲಿ ಆಶೀರ್ವಾದ ಮಾಡಬೇಕು. ಕೈ ಮುಗಿದು ಕೇಳಿಕೊಳ್ಳುತ್ತೇವೆ, ಹಿಂದೆ ನಾವು ವಿರುದ್ಧವಾಗಿ ನಿಂತು ಸಾಕಷ್ಟು ಮಾತನಾಡಿದ್ದೇವೆ. ಅದು ಯಾವುದನ್ನು ಜನರು ಮನಸಿನಲ್ಲಿಟ್ಟುಕೊಳ್ಳಬಾರದು. ಕಾರ್ಯಕರ್ತರು ಒಂದಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.

    ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ದೇವೇಗೌಡರು, ಕೇಂದ್ರ ಸರ್ಕಾರದಿಂದ ಹಲವು ಸಮಸ್ಯೆಗಳು ಹುಟ್ಟಿಕೊಂಡಿವೆ. ಇಡೀ ದೇಶದಲ್ಲಿ ರೈತರು ಸೇರಿದಂತೆ, ನಾನಾ ಸಮಸ್ಯೆ ಪ್ರಾರಂಭವಾಗಿವೆ. ಗುಜರಾತ್, ಕಾಶ್ಮೀರ, ಉತ್ತರ ಪ್ರದೇಶದಲ್ಲಿ ಸಮಸ್ಯೆಗಳು ಕಾಣುತ್ತಿವೆ. ಕಾಶ್ಮೀರದಲ್ಲಿ ನೆಮ್ಮದಿಯ ವಾತಾವರಣವಿಲ್ಲ. ನಾನು ಐದು ಬಾರಿ ಕಾಶ್ಮೀರಕ್ಕೆ ಭೇಟಿ ನೀಡಿದ್ದೆ. ಆದರೆ ನನ್ನ ಅವಧಿಯಲ್ಲಿ 13 ಪಕ್ಷಗಳ ಸರ್ಕಾರವಿದ್ದರೂ ಉತ್ತಮ ಆಡಳಿತ ನಡೆಸಿದ್ದೆ ಎಂದು ವಾಗ್ದಾಳಿ ನಡೆಸಿದರು.

    ಸಿದ್ದರಾಮಯ್ಯ ಮಾತನಾಡಿ, ಕೋಮವಾದಿ ಪಕ್ಷವನ್ನು ಸೋಲಿಸಲು ನಾವು ಜೊತೆಯಾಗಿರುವುದು ಅನಿವಾರ್ಯ. 2019ರ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಮೈತ್ರಿ ನಡೆಸಿದ್ದೇವೆ. ನಮ್ಮ ಉದ್ದೇಶ ಸ್ಪಷ್ಟವಾಗಿದೆ. ಕೋಮುವಾದಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬಾರದು ಅಂತ ಸರ್ಕಾರ ರಚಿಸಿದ್ದೇವೆ. ಅಂತೆಯೇ ಇಡೀ ದೇಶದಲ್ಲಿ ಜಾತ್ಯಾತೀತ ಶಕ್ತಿಗಳು ಒಟ್ಟಾಗಬೇಕು ಎಂದು ದೇವೇಗೌಡರು ಅವಿರತವಾಗಿ ಪ್ರಯತ್ನ ಪಡುತ್ತಿದ್ದಾರೆ. ಅದ್ದರಿಂದ ಈ ಚುನಾವಣೆಯಲ್ಲಿಯೂ ಒಂದಾಗಿ ಪ್ರಚಾರ ನಡೆಸುತ್ತೇವೆ. ರಾಮನಗರದಲ್ಲೂ ಪ್ರಚಾರ ನಡೆಸುತ್ತೇನೆ. ಅಕ್ಟೋಬರ್ 30 ರಂದು ಶಿವಮೊಗ್ಗದಲ್ಲಿ ಬೃಹತ್ ಜಂಟಿ ಸಭೆ ಮಾಡುತ್ತೇವೆ ಎಂದು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಎರಡು ಪಕ್ಷದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv