Tag: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ

  • ಯಾರ್ರೀ ಅವ್ನು ಪ್ರೀತಂ ಗೌಡ: ದೇವೇಗೌಡ ಕೆಂಡಾಮಂಡಲ

    ಯಾರ್ರೀ ಅವ್ನು ಪ್ರೀತಂ ಗೌಡ: ದೇವೇಗೌಡ ಕೆಂಡಾಮಂಡಲ

    ನವದೆಹಲಿ: ಯಾರ್ರೀ ಅವ್ನು ಪ್ರೀತಂಗೌಡ ಎಂದು ಪ್ರಶ್ನಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕಿಡಿಕಾರಿದ್ದಾರೆ.

    ಆಪರೇಷನ್ ಆಡಿಯೋ ಕಮಲದ ವಿಚಾರವಾಗಿ ಮಾಧ್ಯಮಗಳು ಪ್ರಶ್ನಿಸುತ್ತಿದ್ದಂತೆ ಶಾಸಕ ಪ್ರೀತಂಗೌಡ ವಿರುದ್ಧ ದೇವೇಗೌಡ ಗರಂ ಆದರು. ನನಗೆ ಯಾವ ಪ್ರೀತಂಗೌಡನೂ ಗೊತ್ತಿಲ್ಲ. ನಾನು ಪಾರ್ಲಿಮೆಂಟ್ ನಿಂದ ಈಗ ಬಂದಿದ್ದೇನೆ. ನನಗೇನು ಗೊತ್ತಿಲ್ಲ. ಯಾರೇ ಆದರೂ ಕಾನೂನು ಪ್ರಕಾರ ಕ್ರಮ ಕೈಗೊಳುತ್ತಾರೆ ಎಂದು ತಿಳಿಸಿದರು.

    ಇಂದು ಬಿಡುಗಡೆಯಾದ ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಲು ದೇವೇಗೌಡ ನಿರಾಕರಿಸಿದರು. ಈ ಕುರಿತು ಕೇಳುವುದಕ್ಕೆ ಪತ್ರಕರ್ತರಿಗೆ ನಾಚಿಕೆ ಆಗಲ್ವಾ ಎಂದು ಪ್ರಶ್ನಿಸಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದರು. ಆಪರೇಷನ್ ಕಮಲ ಆಡಿಯೋ ಪ್ರಕರಣದ ವಿಚಾರಣೆಗೆ ಸ್ಥಳೀಯ ಪೊಲೀಸರು ಇದ್ದಾರೆ. ನಾನು ಪ್ರತಿಕ್ರಿಯೆ ನೀಡಲ್ಲ ಎಂದು ತಿಳಿಸಿದರು. ಇದನ್ನು ಓದಿ: ಗೌಡರ ಕುಟುಂಬ ಗೂಂಡಾಗಿರಿ ಕುಟುಂಬವಲ್ಲ – ಕಲ್ಲು ತೂರಾಟ ಮಾಡಿದವ್ರನ್ನ ಕ್ಷಮಿಸಲ್ಲ: ಸಿಎಂ ಎಚ್‍ಡಿಕೆ

    ಪ್ರೀತಂ ಗೌಡ ಹೇಳಿದ್ದೇನು?:
    ಸೂರ್ಯ ಚಂದ್ರ ಇರುವವರೆಗೂ ರಾಷ್ಟ್ರೀಯ ಪಕ್ಷ ದೇಶದಲ್ಲಿ ಇರುತ್ತದೆ. ಮಾಜಿ ಪ್ರಧಾನಿ ದೇವೇಗೌಡರ ವಿಕೆಟ್ ಹೋಗುತ್ತೆ. ಸಿಎಂ ಕುಮಾರಸ್ವಾಮಿ ಆರೋಗ್ಯವೂ ಸರಿಯಿಲ್ಲ. ಇದರಿಂದಾಗಿ ಜೆಡಿಎಸ್ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತದೆ. ಮೈತ್ರಿ ಸರ್ಕಾರ ಈಗಂತೂ ಬಿದ್ದರೆ ಸಾಕು ಎನ್ನುವಂತಿದೆ. ನನಗೂ ಈಗ 35-36ನೇ ವಯಸ್ಸು, ಶಾಸಕನಾಗಿ ಇದ್ದೇನೆ. ನಿನಗೆ 30 ವರ್ಷವಾಗಿದೆ. ಇನ್ನೂ 40 ವರ್ಷ ರಾಜಕಾರಣ ಮಾಡಬೇಕು. ಎಲ್ಲಾ ಒಟ್ಟಿಗೆ ಇರೋಣ ಎಂದು ಅನಾಮಿಕ ವ್ಯಕ್ತಿಯ ಜೊತೆಗೆ ಫೋನಿನಲ್ಲಿ ಪ್ರೀತಂ ಗೌಡ ಮಾತನಾಡುತ್ತಿರುವ ಆಡಿಯೋ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಸಭೆಯಲ್ಲಿ ಇದು ನನ್ನ ಕೊನೆ ಭಾಷಣವೂ ಆಗಬಹುದು: ಎಚ್.ಡಿ.ದೇವೇಗೌಡ

    ಲೋಕಸಭೆಯಲ್ಲಿ ಇದು ನನ್ನ ಕೊನೆ ಭಾಷಣವೂ ಆಗಬಹುದು: ಎಚ್.ಡಿ.ದೇವೇಗೌಡ

    – ರಾಜಕೀಯ ನಿವೃತ್ತಿ ಸುಳಿವು ಬಿಚ್ಚಿಟ್ಟ ಮಾಜಿ ಪ್ರಧಾನಿ

    ನವದೆಹಲಿ: ಲೋಕಸಭೆ ಅಧಿವೇಶದಲ್ಲಿ ಇದು ನನ್ನ ಕೊನೆಯ ಭಾಷಣ ಆಗಬಹುದು ಎನ್ನುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರಾಜಕೀಯ ನಿವೃತ್ತಿಯ ಸುಳಿವು ಬಿಟ್ಟುಕೊಟ್ಟಿದ್ದಾರೆ.

    ಲೋಕಸಭೆ ಅಧಿವೇಶನದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನನ್ನ ಮನಸ್ಸಿನಲ್ಲಿ ತುಂಬಾ ನೋವಿದೆ. ರೈತನ ಮಗನಾಗಿ ಹುಟ್ಟಿದ್ದೇನೆ. ರೈತನಾಗಿ ಸಾಯುತ್ತೇನೆ ಎಂದ ಅವರು, ಬಜೆಟ್ ಮೇಲೆ ಮಾತನಾಡಲು ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಅವಕಾಶ ಕೇಳಿದ್ದೆ. ಏಕೆಂದರೆ ಇದು ನನ್ನ ಕೊನೆ ಭಾಷಣವೂ ಆಗಬಹುದು ಎಂದು ಹೇಳುವ ಮೂಲಕ ಲೋಕಸಭಾ ಚುನಾವಣೆ ಸ್ಪರ್ಧೆಯಿಂದ ದೂರ ಉಳಿಯುವ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ.

    ಇಷ್ಟು ದಿನ ನನಗೆ ಅವಮಾನ ಆಗಿದೆ. ಚಿಂತೆ ಇಲ್ಲ. ಭಾಷಣಕ್ಕೆ ಅವಕಾಶ ನೀಡುವುದಕ್ಕೆ ಸ್ಪಂದಿಸಿದ್ದ ಸ್ಪೀಕರ್, ಪ್ರಧಾನಿ ಮೋದಿ ಭಾಷಣ ಸಂಜೆ 5 ಗಂಟೆಗೆ ಆರಂಭವಾಗುತ್ತದೆ. ಹೀಗಾಗಿ ನಿಮಗೆ ನಾಲ್ಕು ಗಂಟೆಗೆ ಅವಕಾಶ ಕೊಡುತ್ತೇವೆ ಎಂದು ನಿನ್ನೆ ಹೇಳಿದ್ದರು. ಆದರೆ ಹೆಚ್ಚು ಮಾತನಾಡಲು ಅವಕಾಶ ನೀಡಲಿಲ್ಲ. ನಾನು ಯಾರನ್ನೂ ನಿಂದಿಸುವ ಕುರಿತು ಭಾಷಣ ಮಾಡಬೇಕಿರಲಿಲ್ಲ. ನಾನು 325 ದಿನ ದೇಶವನ್ನು ಮುನ್ನಡೆಸಿರುವೆ. ಆಗ ಯಾವ ಅಭಿವೃದ್ಧಿ ಕಾರ್ಯಗಳಾಗಿವೆ. ನನ್ನ ಕೊಡುಗೆ ಏನು ಎನ್ನುವುದು ರಾಷ್ಟ್ರದ ಜನತೆಗೆ ಗೊತ್ತಿಲ್ಲ. ಅವರಿಗೆ ಈ ಕುರಿತು ಮನವರಿಕೆ ಮಾಡುವುದಕ್ಕಾಗಿ ನಾನು ಭಾಷಣ ಮಾಡಬೇಕಿತ್ತು ಎಂದು ಅಸಮಾಧಾನ ಹೊರಹಾಕಿದರು.

    ನಾನು ನಿನ್ನೆ ಭಾಷಣ ಆರಂಭಿಸಿ 5 ನಿಮಿಷ ಕಳೆದಿತ್ತು. ಆಗ ಭಾಷಣ ನಿಲ್ಲಿಸುವಂತೆ ಸ್ಪೀಕರ್ ಸೂಚನೆ ಕೊಟ್ಟರು. ಆದರೂ ನಾನು ಮುಂದುವರಿದು ಕೆಲವು ವಿಷಯಗಳ ಕುರಿತು ಮಾತನಾಡಿದೆ. ಅದು ನನಗೆ ಸಮಾಧಾನವಿಲ್ಲ. ಪ್ರಧಾನಿ ಮೋದಿ ಅವರು ಅಧಿವೇಶನಕ್ಕೆ 6 ಗಂಟೆಗೆ ಆಗಮಿಸಿದರು. ಈ ಮಧ್ಯೆ ಅನೇಕ ಸಂಸದರು ಮಾತನಾಡಿದರು. ಇದು ಸ್ವಲ್ಪ ನೋವು ತಂದಿತ್ತು ಎಂದರು.

    ಜನರು ನನ್ನನ್ನ ಮಣ್ಣಿನ ಮಗ ಅಂತ ಕರೆದಿದ್ದಾರೆ. ನಾನು ಯಾವತ್ತೂ ನನ್ನ ಹೀಗೆ ಕರೆಯಬೇಕು ಅಂತ ಯಾರಿಗೂ ಕೇಳಿಲ್ಲ, ಹೇಳಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು, ಅಲ್ಲಿ ಜನರಿಂದ ಮಣ್ಣಿನ ಮಗ ಅಂತ ಕರೆಸಿಕೊಳ್ಳುವ ದೇವೇಗೌಡರು ಕುಳಿತಿದ್ದಾರೆ ಅಂತ ನಿನ್ನೆ ಹೇಳಿದರು. ಅವರ ಮಾತುಗಳು ನನಗೆ ಬೇಸರ ತಂದಿದೆ ಎಂದು ಪ್ರಧಾನಿ ವಿರುದ್ಧ ಅಸಮಾಧಾನ ಹೊರಹಾಕಿದರು.

    ಮೈತ್ರಿ ಸರ್ಕಾರದಲ್ಲಿ ಜೆಡಿಎಸ್ ಸಂಖ್ಯೆ ಕಡಿಮೆ ಇದೆ. ಹಾಗಿದ್ದರೂ ಹಿಂದಿನ ಸರ್ಕಾರದ ಕೆಲಸಗಳ ಜೊತೆ ಸಾಲಮನ್ನಾ ಮಾಡಲಾಗಿದೆ. ಈ ಕುರಿತು ಸಂಸತ್ತಿನಲ್ಲಿ ನಾನು ಹೇಳಬೇಕಿತ್ತು. ಕಲಾಪವು ಇಂದು ಗದ್ದಲದಿಂದ ಕೂಡಿತ್ತು. ಯಾವ ವಿಚಾರಗಳನ್ನು ಹೇಳಲು ಸಾಧ್ಯವಾಗಲಿಲ್ಲ. ಮುಂದೆ ಬಜೆಟ್ ಬಗ್ಗೆ ಮಾತನಾಡುವಾಗ ಮಾತನಾಡುತ್ತೇನೆ. ಏಕೆಂದರೆ ನನ್ನ ಸರ್ಕಾರದ ಸಾಧನೆಗಳನ್ನು ಸಂಸತ್ತಿನಲ್ಲಿ ಹೇಳಬೇಕಿದೆ ಎಂದರು.

    ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಕೈಗೊಂಡ ರೈತರ ಸಾಲಮನ್ನಾ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು ಬೇಸರ ತಂದಿದೆ. ಅಧಿವೇಶನಲ್ಲಿ ಮಾತನಾಡಲು ಅವಕಾಶ ನೀಡುವಂತೆ ಮತ್ತೆ ಕೇಳಿಕೊಂಡಿದ್ದೇನೆ. ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸೋಮವಾರ ಅವಕಾಶ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

    ಸಿಎಂ ಕುಮಾರಸ್ವಾಮಿ ಅವರು ಆಪರೇಷನ್ ಕಮಲದ ಆಡಿಯೋ ರಿಲೀಸ್ ಮಾಡಿದ್ದಾರೆ. ಆಪರೇಷನ್ ಕಮಲ ನಡೆಯುತ್ತಿದೆಯೇ ಎಂದು ಮಾಧ್ಯಮಗಳು ಪ್ರಶ್ನಿಸುತ್ತಿದ್ದಂತೆ, ನಾನು ಕರ್ನಾಟಕದಲ್ಲಿರುವ ಮೈತ್ರಿ ಸರ್ಕಾರದ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ದೇವೇಗೌಡರು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾನು ಅಡಿಗಲ್ಲು ಹಾಕಿದ ಸೇತುವೆ ಉದ್ಘಾಟನೆಗೆ ಆಹ್ವಾನವಿಲ್ಲ – ಎಚ್‍ಡಿಡಿ ಅಸಮಾಧಾನ

    ನಾನು ಅಡಿಗಲ್ಲು ಹಾಕಿದ ಸೇತುವೆ ಉದ್ಘಾಟನೆಗೆ ಆಹ್ವಾನವಿಲ್ಲ – ಎಚ್‍ಡಿಡಿ ಅಸಮಾಧಾನ

    ಬೆಂಗಳೂರು: ನಾನು ಅಡಿಗಲ್ಲು ಹಾಕಿದ್ದ ಸೇತುವೆ ಉದ್ಘಾಟನೆಗೆ ನನಗೆ ಆಹ್ವಾನ ನೀಡಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಅಸಮಾಧಾನ ಹೊರ ಹಾಕಿದ್ದಾರೆ.

    ಜೆಪಿ ಭವನದಲ್ಲಿ ಮಾತನಾಡಿದ ಅವರು ಬೋಗಿಬೀಲ್ ಸೇತುವೆ ಉದ್ಘಾಟನೆ ಕುರಿತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಯಾರೊಬ್ಬರೂ ಅಸ್ಸಾಂನಲ್ಲಿ ನಡೆಯುತ್ತಿರುವ ಬೋಗಿಬೀಲ್ ಸೇತುವೆ ಉದ್ಘಾಟನೆಗೆ ಆಹ್ವಾನಿಸಿಲ್ಲ. ನಾವು ಮಾಡಿದ ಕೆಲಸವನ್ನು ಯಾರು ನೆನಪು ಇಟ್ಟುಕೊಳ್ಳುತ್ತಾರೆ ಎಂದು ಪ್ರಶ್ನಿಸಿದ ಅವರು ಅದು ದೊಡ್ಡ ವಿಷಯವಲ್ಲ ಬಿಡಿ ಎಂದು ಕಿಡಿಕಾರಿದರು. ಇದನ್ನು ಓದಿ: ಬೋಗಿಬೀಲ್ ಸೇತುವೆ ವಿಶೇಷತೆ ಏನು?

    ಕಾಶ್ಮೀರ ರೈಲ್ವೇ, ದೆಹಲಿ ಮೆಟ್ರೋ ಯೋಜನೆಗಳನ್ನು ನಾನೇ ಮಂಜೂರು ಮಾಡಿದ್ದೆ. ನನ್ನ ಕಾಲದಲ್ಲಿಯೇ ಅದಕ್ಕೆ ಹಣ ಬಿಡುಗಡೆ ಮಾಡಿ, ಅಡಿಗಲ್ಲು ಹಾಕಿಸಿದ್ದೆ. ಈಗ ಅದೆಲ್ಲವನ್ನೂ ಮರೆತಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

    1997ರಲ್ಲಿ ಶಂಕುಸ್ಥಾಪನೆ ಮಾಡಿ ಸೇತುವೆ ನಿರ್ಮಾಣ ತಡವಾಗಿದ್ದು ಏಕೆ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಅದೆಲ್ಲ ಡಿಫರೆಂಟ್ ವಿಷಯ ಎಂದು ಉತ್ತರಿಸಿ, ನಾನು ಹಾಸನ-ಮೈಸೂರು ಯೋಜನೆಯನ್ನು 13 ತಿಂಗಳು ಮುಗಿಸಿದೆ. ನಿಗದಿತ ಸಮಯದಲ್ಲಿ ಅನೇಕ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇನೆ. ಅವುಗಳಲ್ಲಿ ಅನಗವಾಡಿ ಸೇತುವೆ ಕೂಡ ಒಂದು. ಪ್ರಧಾನಿ ನರೇಂದ್ರ ಮೋದಿ ಅವರು ಹೋಗಿ ಅನಗವಾಡಿ ಸೇತುವೆ ನೋಡಿಕೊಂಡು ಬರಲಿ ಎಂದು ವ್ಯಂಗ್ಯವಾಡಿದರು.

    ದೇವೇಗೌಡ ಮುಂಬೈ ಕರ್ನಾಟಕಕ್ಕೆ ಏನು ಮಾಡಿಲ್ಲ ಅಂತ ಅನೇಕರು ಮಾತನಾಡುತ್ತಾರೆ. ಅಂತವರು ಕೂಡ ಅನಗವಾಡಿ ಸೇತುವೆ ನೋಡಿಕೊಂಡು ಬರಲಿ. ಆಗ ನಾನು ಏನು ಮಾಡಿದ್ದೇನೆ ಅಂತ ಅವರಿಗೆ ಅರ್ಥವಾಗುತ್ತದೆ. ಅನಗವಾಡಿ ಸೇತುವೆ ಅಷ್ಟೇ ಅಲ್ಲದೆ ನನ್ನ ಆಡಳಿತದ ಅವಧಿಯಲ್ಲಿ ಮುಂಬೈ ಕರ್ನಾಟಕಕ್ಕೆ ಅನೇಕ ಕೊಡುಗೆ ಕೊಟ್ಟಿದ್ದೇನೆ. ಆದರೂ ನಾನು ಕೆಲಸ ಮಾಡಿಲ್ಲ, ಮಾಡಿಲ್ಲ ಅಂತ ಆರೋಪಿಸುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಎಚ್‍ಡಿಡಿ ಪ್ರತಿಕ್ರಿಯೆ

    ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಎಚ್‍ಡಿಡಿ ಪ್ರತಿಕ್ರಿಯೆ

    ರಾಯಚೂರು: ನನಗೆ ಲೋಕಸಭಾ ಚುನಾವಣೆಗೆ ನಿಲ್ಲುವ ಭ್ರಮೆಯಿಲ್ಲ. ಆದ್ರೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕಾರ್ಯಕರ್ತರ ಒತ್ತಡ ಇದೆ ಅಂತ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ತಿಳಿಸಿದ್ದಾರೆ.

    ಇಂದು ಮಂತ್ರಾಲಯಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯ ಕೊಡುವಂತೆ ರಾಯರಲ್ಲಿ ಬೇಡಿಕೊಳ್ಳುತ್ತೇನೆ. ರಾಜಕೀಯವಾಗಿ ಎಲ್ಲವನ್ನೂ ಅನುಭವಿಸಿದ್ದೇನೆ. ಮುಂದೆ ಲೊಕಸಭಾ ಚುನಾವಣೆಗೆ ಕೂಡ ಇದೇ ಶಕ್ತಿ ಬೇಕು ಅಂತ ಹೇಳಿದ್ರು.

    ನನಗೆ ಚುನಾವಣೆಗೆ ನಿಲ್ಲುವ ಭ್ರಮೆಯಿಲ್ಲ. ಆದ್ರೆ ನಿಲ್ಲುವಂತೆ ನಮ್ಮ ಕಾರ್ಯಕರ್ತರು ಒತ್ತಡ ಹಾಕುತ್ತಿದ್ದಾರೆ. ಚುನಾವಣೆಗೆ ಇನ್ನೂ 10 ತಿಂಗಳು ಬಾಕಿಯಿದೆ. ಗುರುಗಳ ಪ್ರೇರಣೆ, ದೇಹದ ಪ್ರಕೃತಿ ಆಧಾರದ ಮೇಲೆ ನಡೆಯುತ್ತೇನೆ. ಗುರುಗಳ ಆಶಿರ್ವಾದ ಪಡೆಯಲು ಬಂದಿದ್ದೇನೆ. ಹೀಗಾಗಿ ಇಲ್ಲಿ ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ. ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಾಗಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ. ಆದ್ರೆ ಇದುವರೆಗೂ ಆರ್ಥಿಕ ಭರವಸೆ ಸಿಕ್ಕಿಲ್ಲ ಅಂತ ಅವರು ವಿಷಾದ ವ್ಯಕ್ತಪಡಿಸಿದ್ರು.

    ಇಂದು ಮಂತ್ರಾಲಯದಲ್ಲೆ ತಂಗಿದ್ದು ರಾಯರ ದರ್ಶನ ಪಡೆಯಲಿರುವ ದೇವೆಗೌಡರು ನಾಳೆ ಮಂತ್ರಾಲಯದಿಂದ ತೆರಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುಟುಂಬ ರಾಜಕಾರಣ ಎಂದು ಟೀಕಿಸೋ ಮಂದಿಗೆ ಉದಾಹರಣೆ ಕೊಟ್ಟು ತಿರುಗೇಟು ಕೊಟ್ಟ ಪ್ರಜ್ವಲ್ ರೇವಣ್ಣ

    ಕುಟುಂಬ ರಾಜಕಾರಣ ಎಂದು ಟೀಕಿಸೋ ಮಂದಿಗೆ ಉದಾಹರಣೆ ಕೊಟ್ಟು ತಿರುಗೇಟು ಕೊಟ್ಟ ಪ್ರಜ್ವಲ್ ರೇವಣ್ಣ

    ಮಂಡ್ಯ: ರೈತರ ಸಂಕಷ್ಟ ಓಡಿಸಬೇಕು ಅಂದರೆ ಕುಮಾರಣ್ಣ ಅಧಿಕಾರಕ್ಕೆ ಬರಬೇಕು. ಕುಮಾರಣ್ಣ ಮತ್ತು ದೇವೇಗೌಡರು ಚುನಾವಣೆಗೆ ನಿಲ್ಲು ಅಂದರೆ ನಿಲ್ಲುತ್ತೇನೆ, ಇಲ್ಲದಿದ್ರೆ ನಿಲ್ಲೋದಿಲ್ಲ ಎಂದು ಪ್ರಜ್ವಲ್ ರೇವಣ್ಣ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.

    ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಮಾತನಾಡಿದ ಅವರು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಮಂದಿಗೆ ತಿರುಗೇಟು ನೀಡಿದರು. ಇವತ್ತು ನನ್ನ ಬಗ್ಗೆ ಮಾಧ್ಯಮಗಳು ಒತ್ತು ನೀಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಮಗ ಯತೀಂದ್ರ ಅವರನ್ನು ಚುನಾವಣೆಗೆ ನಿಲ್ಲಿಸುತ್ತಿದ್ದೇನೆ ಅಂತಿದ್ದಾರೆ. ಯಾರಾದರೂ ಈ ಕುರಿತು ಪ್ರಶ್ನಿಸಿದ್ದೀರ. ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ರಾಘವೇಂದ್ರ ಅವರನ್ನು ಚುನಾವಣೆಯಲ್ಲಿ ನಿಲ್ಲಿಸಿದ್ದರು. ಅದು ಕುಟುಂಬ ರಾಜಕಾರಣ ಅಲ್ಲವೇ? ಯಾರೂ ಅದರ ಬಗ್ಗೆ ಮಾತನಾಡದೇ ನನ್ನ ಬಗ್ಗೆ ಮಾತ್ರ ಮಾತನಾಡುವುದು ಎಷ್ಟು ಸರಿ ಎಂದು ಹೇಳಿ ಬೇಸರ ವ್ಯಕ್ತಪಡಿಸಿದರು.

    ಕಾರ್ಯಕರ್ತರಲ್ಲಿ ಎಲ್ಲ ಕಡೆ ಮನವಿ ಮಾಡುತ್ತಿದ್ದೇವೆ. ನಮ್ಮ ನಡುವೆ ಬೇಧ ಭಾವ ಏನೂ ಇಲ್ಲ. ನನಗೆ ಹುಷಾರಿರಲಿಲ್ಲ. ಆದರೂ ನಾನು ಹೋರಾಟ ಮಾಡಲು ಸಿದ್ಧವಾಗಿದ್ದೇನೆ. ಯುವಕರು ಎಲ್ಲರೂ ಕುಮಾರಣ್ಣನಿಗೆ ಶಕ್ತಿ ಕೊಡಬೇಕು. ಕುಮಾರಣ್ಣ ನನ್ನ ಸ್ವಂತ ಚಿಕ್ಕಪ್ಪ. ಯಾರಿಗೆ ನೋವು ಮಾಡಿ ಗೆದ್ದರೂ ಚೆನ್ನಾಗಿರಲ್ಲ. ಕುಮಾರಣ್ಣ ಮತ್ತು ದೇವೇಗೌಡರ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ಈ ಕುರಿತು ಸುಮ್ಮನೆ ಕೆಟ್ಟದಾಗಿ ಹಬ್ಬಿಸೋದು ಬೇಡ ಎಂದು ಮನವಿ ಮಾಡಿದರು.

    ನಾನು ಸಹ ಚುನಾವಣೆಯಲ್ಲಿ ಟಿಕೆಟ್ ಅಕಾಂಕ್ಷಿಯಾಗಿದ್ದೇನೆ. ಪಕ್ಷದ ಕಾರ್ಯಕರ್ತರು ಯಾರು ಬೇಕಾದರು ಚುನಾವಣಾ ಆಕಾಂಕ್ಷಿಯಾಗಬಹುದು. ಆದರೆ ಟಿಕೆಟ್ ನೀಡುವ ಅಂತಿಮ ನಿರ್ಧಾರ ಎಚ್.ಡಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಗೆ ಬಿಟ್ಟದ್ದು ಎಂದು ತಿಳಿಸಿದರು.