Tag: ಮಾಜಿ ಕೇಂದ್ರ ಸಚಿವ

  • ಅರುಣಾಸ್ತಮಾನ- ಪಂಚಭೂತಗಳಲ್ಲಿ ಅರುಣ್ ಜೇಟ್ಲಿ ಲೀನ

    ಅರುಣಾಸ್ತಮಾನ- ಪಂಚಭೂತಗಳಲ್ಲಿ ಅರುಣ್ ಜೇಟ್ಲಿ ಲೀನ

    ನವದೆಹಲಿ: ಬಿಜೆಪಿಯ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಅಂತ್ಯಕ್ರಿಯೆಯನ್ನು ಇಂದು ನಿಗಮ್ ಬೋಧ್ ಘಾಟ್ ನಲ್ಲಿ ನೆರವೇರಿಸಲಾಯ್ತು.

    ಬಿಜೆಪಿ ಕಚೇರಿಯಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಅರುಣ್ ಜೇಟ್ಲಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಿಡಲಾಗಿತ್ತು. ಅಲ್ಲಿಂದ ಮೆರವಣಿಗೆ ಮೂಲಕ ನಿಗಮ್ ಬೋಧ್ ಘಾಟ್‍ಗೆ ತಲುಪಿ, ಮಧ್ಯಾಹ್ನ 3.15 ಸುಮಾರಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

    ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಜೇಟ್ಲಿ ಅವರನ್ನು ಇದೇ ತಿಂಗಳ 9ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಸುದೀರ್ಘ 15 ದಿನಗಳ ಕಾಲ ವೆಂಟಿಲೇಟರ್, ಐಸಿಯುನಲ್ಲಿಟ್ಟರೂ ಚಿಕಿತ್ಸೆ ಫಲಿಸದೇ ಶನಿವಾರ ಮಧ್ಯಾಹ್ನ 12.07ಕ್ಕೆ ಕೊನೆಯುಸಿರೆಳೆದಿದ್ದರು.

    66 ವರ್ಷ ವಯಸ್ಸಿನ ಜೇಟ್ಲಿ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಶನಿವಾರ ಮಧ್ಯಾಹ್ನದಿಂದಲೇ ಕೈಲಾಶ್ ಕಾಲೋನಿಯ ನಿವಾಸದಲ್ಲಿ ಸಂಬಂಧಿಕರು, ಗಣ್ಯರು, ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು. ನಿಗಮ್ ಬೋಧ್ ಘಾಟ್ ನಲ್ಲಿ ಅಪಾರ ರಾಜಕೀಯ ಗಣ್ಯರು ಅರುಣ್ ಜೇಟ್ಲಿಯವರ ಅಂತಿಮ ದರ್ಶನ ಪಡೆದು ಭಾವುಕರಾದರು.

    ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ, ಹಿರಿಯ ನಾಯಕರಾದ ಅಡ್ವಾಣಿ, ಮುರಳಿ ಮನೋಹರ ಜೋಷಿ, ಒಡನಾಡಿಗಳಾಗಿದ್ದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರು, ಕಾಂಗ್ರೆಸ್‍ನ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡೆಲ್ಲಿ ಸಿಎಂ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಕಂಬನಿ ಮಿಡಿದಿದ್ದಾರೆ. ಕ್ರಿಕೆಟಿಗರಾದ ಸೆಹ್ವಾಗ್, ಗಂಭೀರ್ ಸಹ ಸಂತಾಪ ಸೂಚಿಸಿದ್ದಾರೆ. ಅಂದಹಾಗೆ, ಸುಷ್ಮಾ ಸ್ವರಾಜ್ ಬೆನ್ನಿಗೇ ಜೇಟ್ಲಿ ಅವರು ಅಗಲಿರೋದು ಬಿಜೆಪಿ ನಾಯಕರಿಗೆ ಸಹಿಸಲಾಗದ ನೋವು ತಂದಿದೆ. ಸಾಲು ಸಾಲು ದಿಗ್ಗಜರನ್ನು ಕಳೆದುಕೊಳ್ಳುತ್ತಿರುವ ಬಿಜೆಪಿ ಬಡವಾಗುತ್ತಿದೆ.

    ಇತ್ತ ಬಹ್ರೇನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಆಪ್ತ ಗೆಳೆಯ ಅರುಣ್ ಜೇಟ್ಲಿಯವರನ್ನು ನೆನೆದು ಭಾವುಕಾರದರು. ವಿದ್ಯಾರ್ಥಿ ಜೀವನದಿಂದಲೂ ನಾವಿಬ್ಬರೂ ಒಟ್ಟಿಗೆ ಬಂದಿದ್ದೇವೆ, ರಾಜಕೀಯದಲ್ಲೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರ ಸಾವನ್ನು ಊಹಿಸಿಕೊಳ್ಳಲೂ ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಸಂತಾಪ ಸೂಚಿಸಿದ್ದರು.

    ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರಧಾನಿಯವರು ಜೇಟ್ಲಿ ಪತ್ನಿಗೆ ಕರೆ ಮಾಡಿ ಸಾಂತ್ವಾನ ಹೇಳಿದ್ದಾರೆ. ಈ ವೇಳೆ ಯಾವುದೇ ಕಾರಣಕ್ಕೂ ವಿದೇಶ ಪ್ರವಾಸ ರದ್ದು ಮಾಡದಂತೆ ಜೇಟ್ಲಿ ಕುಟುಂಬ ಮನವಿ ಮಾಡಿಕೊಂಡಿದೆ. ವಿದೇಶ ಪ್ರವಾಸದ ಹಿನ್ನೆಲೆಯಲ್ಲಿ ಪ್ರಧಾನಿಗಳು ಜೇಟ್ಲಿಯವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ.

  • ಭಾನುವಾರ ನಿಗಮ್‍ಬೋಧ್ ಘಾಟ್‍ನಲ್ಲಿ ಅರುಣ್ ಜೇಟ್ಲಿ ಅಂತ್ಯಕ್ರಿಯೆ

    ಭಾನುವಾರ ನಿಗಮ್‍ಬೋಧ್ ಘಾಟ್‍ನಲ್ಲಿ ಅರುಣ್ ಜೇಟ್ಲಿ ಅಂತ್ಯಕ್ರಿಯೆ

    ನವದೆಹಲಿ: ಬಿಜೆಪಿಯ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 2 ಗಂಟೆಗೆ ನೆರವೇರಲಿದೆ.

    ಬಿಜೆಪಿ ಕಚೇರಿಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ ಅರುಣ್ ಜೇಟ್ಲಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಿಡಲಾಗುತ್ತದೆ. ಅಲ್ಲಿಂದ ಮೆರವಣಿಗೆ ಮೂಲಕ ನಿಗಮ್‍ಬೋಧ್ ಘಾಟ್‍ಗೆ ತಲುಪಿ, ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಜೇಟ್ಲಿ ಅವರನ್ನು ಇದೇ ತಿಂಗಳ 9ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಸುದೀರ್ಘ 15 ದಿನಗಳ ಕಾಲ ವೆಂಟಿಲೇಟರ್, ಐಸಿಯುನಲ್ಲಿಟ್ಟರೂ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ 12.07ಕ್ಕೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಮಕ್ಕಳನ್ನು ಜೇಟ್ಲಿ ಅಗಲಿದ್ದಾರೆ. ಇವತ್ತು ಮಧ್ಯಾಹ್ನದಿಂದಲೇ ಕೈಲಾಶ್ ಕಾಲೋನಿಯ ನಿವಾಸದಲ್ಲಿ ಸಂಬಂಧಿಕರು, ಗಣ್ಯರು, ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು.

    ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ, ಹಿರಿಯ ನಾಯಕರಾದ ಅಡ್ವಾಣಿ, ಮುರಳಿ ಮನೋಹರ ಜೋಷಿ, ಒಡನಾಡಿಗಳಾಗಿದ್ದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರು, ಕಾಂಗ್ರೆಸ್‍ನ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡೆಲ್ಲಿ ಸಿಎಂ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಕಂಬನಿ ಮಿಡಿದಿದ್ದಾರೆ. ಕ್ರಿಕೆಟಿಗರಾದ ಸೆಹ್ವಾಗ್, ಗಂಭೀರ್ ಸಹ ಸಂತಾಪ ಸೂಚಿಸಿದ್ದಾರೆ. ಅಂದಹಾಗೆ, ಸುಷ್ಮಾ ಸ್ವರಾಜ್ ಬೆನ್ನಿಗೇ ಜೇಟ್ಲಿ ಅವರು ಅಗಲಿರೋದು ಬಿಜೆಪಿ ನಾಯಕರಿಗೆ ಸಹಿಸಲಾಗದ ನೋವು ತಂದಿದೆ. ಸಾಲು ಸಾಲು ದಿಗ್ಗಜರನ್ನು ಕಳೆದುಕೊಳ್ಳುತ್ತಿರುವ ಬಿಜೆಪಿ ಬಡವಾಗುತ್ತಿದೆ.

  • ಚಿದಂಬರಂ ನಾಪತ್ತೆ : ಬಂಧಿಸಲು ಹೋಗಿದ್ದ ಸಿಬಿಐ ಅಧಿಕಾರಿಗಳು ಬರಿಗೈಯಲ್ಲಿ ವಾಪಸ್

    ಚಿದಂಬರಂ ನಾಪತ್ತೆ : ಬಂಧಿಸಲು ಹೋಗಿದ್ದ ಸಿಬಿಐ ಅಧಿಕಾರಿಗಳು ಬರಿಗೈಯಲ್ಲಿ ವಾಪಸ್

    ನವದೆಹಲಿ: ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಈ ಬೆನ್ನಲ್ಲೇ ಅವರನ್ನು ಬಂಧಿಸಲು ಮನೆಗೆ ಹೋಗಿದ್ದ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ತಂಡವು ಬರಿಗೈಲಿ ವಾಪಸ್ ಬಂದಿದ್ದಾರೆ.

    ಐಎನ್‍ಎಕ್ಸ್ ಮೀಡಿಯಾ ಅವ್ಯವಹಾರ ಹಗರಣ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಮಾಜಿ ಕೆಂದ್ರ ಸಚಿವ ಪಿ. ಚಿದಂಬರಂ ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಮೂರ್ತಿ ಸುನಿಲ್ ಗೌರ್ ಅವರು ಅರ್ಜಿಯನ್ನು ವಜಾಗೊಳಿಸಿದರು. ಇದರಿಂದಾಗಿ ಪಿ.ಚಿದಂಬರಂ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ಭೇಟಿಯಾಗಿ, ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

    ಪಿ ಚಿದಂಬರಂ ಅವರು ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಭಾರೀ ಪ್ರಮಾಣದಲ್ಲಿ ಆರ್ಥಿಕ ಅಪರಾಧವನ್ನು  ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅವರ ವಿರುದ್ಧ ಪ್ರಬಲ ಸಾಕ್ಷ್ಯಗಳಿರುವುದರಿಂದ ನಿರೀಕ್ಷಣಾ ಜಾಮೀನು ನೀಡುವುದು ಸಾಧ್ಯವಿಲ್ಲ ಎಂದು ಹೇಳಿ ದೆಹಲಿ ಹೈಕೋರ್ಟ್ ಮಂಗಳವಾರ ಮಹತ್ವದ ಆದೇಶ ಪ್ರಕಟಿಸಿತ್ತು.

    ದೆಹಲಿ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸುತ್ತಿದ್ದಂತೆ ಸಿಬಿಐ ಅಧಿಕಾರಿಗಳು ಮಾಜಿ ಸಚಿವರ ನಿವಾಸಕ್ಕೆ ತೆರಳಿದ್ದರು. ಬಳಿಕ ಇಡಿಯ ಇಬ್ಬರು ಅಧಿಕಾರಿಗಳು ಕೂಡ ಹೋಗಿದ್ದರು. ಆದರೆ ಚಿದಂಬರಂ ಅವರು ಮನೆಯಲ್ಲಿ ಇರಲಿಲ್ಲ. ಅಷ್ಟೇ ಅಲ್ಲದೆ ಅವರ ಮೊಬೈಲ್‍ಗೆ ಕರೆ ಮಾಡಿದರೆ ಸ್ವಿಚ್ ಆಫ್ ಆಗಿತ್ತು. ಅಧಿಕಾರಿಗಳು ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿ 2 ಗಂಟೆಯ ಒಳಗಡೆ ವಿಚಾರಣೆಗೆ ಹಾಜರಾಗಬೇಕೆಂದು ಆದೇಶಿಸಿದ್ದಾರೆ.  ಅಧಿಕಾರಿಗಳು ಬರಿಗೈಯಲ್ಲಿ ವಾಪಸ್ ಆಗಿದ್ದು, ಚಿದಂಬರಂ ಅವರ ಪತ್ತೆಗಾಗಿ ಕಾರ್ಯಾಚರಣೆ ಆರಂಭವಾಗಿದೆ.

    ಚಿದಂಬರಂ ಅವರು 2007ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ ವಿದೇಶ ಬಂಡವಾಳ ಹೂಡಿಕೆ ಪ್ರೋತ್ಸಾಹಕ ಮಂಡಳಿ (ಎಫ್‍ಐಪಿಬಿ)ಯ ಅನುಮೋದನೆ ಸಿಕ್ಕಿತ್ತು. ಈ ಮೂಲಕ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ 305 ಕೋಟಿ ರೂ. ಮೊತ್ತದಷ್ಟು ವಿದೇಶಿ ಬಂಡವಾಳ ಹೂಡಿಕೆ ಲಭ್ಯವಾಗಿತ್ತು. ಆದರೆ ಪುತ್ರ ಕಾರ್ತಿ ಚಿದಂಬರಂ ಶಿಫಾರಸಿನ ಮೇಲೆ ಈ ಅನುಮೋದನೆಯನ್ನು ಚಿದಂಬರಂ ದೊರಕಿಸಿಕೊಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸಿಬಿಐ, 2017ರಲ್ಲಿ ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಮತ್ತಿತರರ ವಿರುದ್ಧ ಎಫ್‍ಐಆರ್ ದಾಖಲಿಸಿತ್ತು.

    ಚಿದಂಬರಂ ಅವರು ವಿಚಾರಣೆಗೆ ಸರಿಯಾಗಿ ಸಹಕರಿಸುತ್ತಿಲ್ಲ. ಅವರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುವುದು ಅಗತ್ಯವಿದೆ. ಹೀಗಾಗಿ ಅವರಿಗೆ ಜಾಮೀನು ನೀಡಬೇಡಿ ಎಂದು ಸಿಬಿಐ ಮತ್ತು ಜಾರಿ ನಿರ್ದೇಶನಾಲಯವು ಕೋರ್ಟ್ ಗೆ ಮನವಿ ಮಾಡಿಕೊಂಡಿತ್ತು. ಇದರಿಂದಾಗಿ ಚಿದಂಬರಂ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

  • ಟ್ವೀಟ್‍ಗೆ ನನಗೂ ಯಾವುದೇ ಸಂಬಂಧವಿಲ್ಲ, ಕೈ ಗೆಲುವಿನ ವಾತಾವರಣವನ್ನು ಕೆಡಿಸಲು ವಿರೋಧಿಗಳ ಕೆಲ್ಸ: ಮಹದೇವಪ್ಪ

    ಟ್ವೀಟ್‍ಗೆ ನನಗೂ ಯಾವುದೇ ಸಂಬಂಧವಿಲ್ಲ, ಕೈ ಗೆಲುವಿನ ವಾತಾವರಣವನ್ನು ಕೆಡಿಸಲು ವಿರೋಧಿಗಳ ಕೆಲ್ಸ: ಮಹದೇವಪ್ಪ

    ಬೆಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಟ್ವೀಟ್ ಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಲೋಕೋಪಯೋಗಿ ಸಚಿವ ಮಹದೇವಪ್ಪ  ಹೇಳಿದ್ದಾರೆ.

    ಬಿಜೆಪಿ ವಿರುದ್ಧ ಪ್ರಕರಣ ತಿರುಗಿಸಲು ನೋಡಿದ ಸಚಿವರು, ಕಾಂಗ್ರೆಸ್ ಗೆ ಗೆಲುವಿನ ವಾತಾವಣ ಇದೆ. ಇದನ್ನು ಕೆಡಿಸಲು ವಿರೋಧಿಗಳ ಇಂತಹ ಕೆಲಸ ಮಾಡಿರಬಹುದು. ಬಿಜೆಪಿ ನಾಯಕರು ದಾಖಲೆ ಇಲ್ಲದೇ ಎಂದಿನಂತೆ ಹಳೇ ಆರೋಪ ಮಾಡುತ್ತಾರೆ. ನಾನು ಪಕ್ಷದ ಕೆಲಸ, ಸರ್ಕಾರದ ಕೆಲಸ ಮಾತ್ರ ಮಾಡುತ್ತೇನೆ ಅಷ್ಟೇ ಎಂದು ಹೇಳಿದರು.

    ಗಾಂಧಿ ಭವನ ರಸ್ತೆಯ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸೋಷಿಯಲ್ ಮೀಡಿಯಾ ಬಗ್ಗೆ ನನಗೆ ಗೊತ್ತಿಲ್ಲ. ಮೊಯ್ಲಿ ಅವರು ಟ್ವೀಟ್ ಮಾಡಿದ್ದು ಯಾಕೆ? ಡಿಲೀಟ್ ಮಾಡಿದ್ದು ಯಾಕೆ ಎನ್ನುವುದು ನನಗೆ ಗೊತ್ತಿಲ್ಲ. ಅವರೇನು ಚಿಕ್ಕ ಹುಡುಗ ಅಲ್ಲ. ನಾನು ಪಕ್ಷದ ಕಾರ್ಯಕರ್ತ. ಮೊಯ್ಲಿ ಅವರೇ ಟ್ವೀಟ್ ನನ್ನದಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ಮತ್ತೇನು ಹೇಳಲ್ಲ. ಬೇಕಿದ್ದರೆ ಮೊಯ್ಲಿ ಅವರನ್ನು ನೀವೇ ಕೇಳಿಕೊಳ್ಳಿ ಎಂದರು.

    ಕಾಂಟ್ರಾಕ್ಟ್ ಒಬ್ಬರಿಗೆ ಟಿಕೆಟ್ ಕೊಡಿಸುವ ವಿಚಾರ ಹಾಗೂ ಮೊಯ್ಲಿ ಮಗನಿಗೆ ಟಿಕೆಟ್ ತಪ್ಪಿಸುವ ವಿಚಾರವಾಗಿ ಟ್ವೀಟ್ ಮಾಡಿದ್ದಾರಾ ಎನ್ನುವ ಪ್ರಶ್ನೆಗೆ, ಯಾರಿಗೆ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಮೊಯ್ಲಿ ಅವರು ಹಿರಿಯ ನಾಯಕರಾಗಿದ್ದು, ಅವಶ್ಯಕತೆ ಬಿದ್ದರೆ ನಾನೇ ಅವರ ಜೊತೆ ಮಾತನಾಡುತ್ತೇನೆ. ವಿವಾದದಿಂದ ನನಗೇನು ಆಗಿಲ್ಲ. ನಾನು ಸಂತೋಷವಾಗಿಯೇ ಇದ್ದೇನೆ ಎಂದು ಉತ್ತರಿಸಿದರು. ಇದನ್ನೂ ಓದಿ: ವೀರಪ್ಪ ಮೊಯ್ಲಿ ಟ್ವೀಟ್ 10% ಕಮಿಷನ್ ಸರ್ಕಾರದ ಆರೋಪಕ್ಕೆ ಸಾಕ್ಷಿ : ಬಿಎಸ್‍ವೈ

    ಟಿಕೆಟ್ ನಿರ್ಧಾರ ಆಗಿಲ್ಲ: ಮುಂಬರುವ ಚುನಾವಣೆಯಲ್ಲಿ ನನ್ನನ್ನು ಸೇರಿದಂತೆ ಯಾರಿಗೂ ಇನ್ನು ಟಿಕೆಟ್ ನಿರ್ಧಾರ ಆಗಿಲ್ಲ. ಟಿಕೆಟ್ ಸಂಬಂಧ ಸಭೆಗಳು ನಡೆಯುತ್ತಿವೆ. ನನ್ನ ಮಗ ಕೂಡಾ ಟಿಕೆಟ್ ಆಕಾಂಕ್ಷಿ. ಯಾವ ಕ್ಷೇತ್ರ ಅಂತ ಇನ್ನು ನಿರ್ಧಾರ ಆಗಿಲ್ಲ. ನನ್ನ ಹಾಗೂ ನನ್ನ ಮಗನ ಸ್ಪರ್ಧೆಯ ಕ್ಷೇತ್ರದ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರೋದು ಸುಳ್ಳು. ನನ್ನ ಹಾಗೂ ಮಗನ ಸ್ಪರ್ಧೆಯನ್ನ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದರು.

  • ವೀರಪ್ಪ ಮೊಯ್ಲಿ ಟ್ವೀಟ್ 10% ಕಮಿಷನ್ ಸರ್ಕಾರದ ಆರೋಪಕ್ಕೆ ಸಾಕ್ಷಿ : ಬಿಎಸ್‍ವೈ

    ವೀರಪ್ಪ ಮೊಯ್ಲಿ ಟ್ವೀಟ್ 10% ಕಮಿಷನ್ ಸರ್ಕಾರದ ಆರೋಪಕ್ಕೆ ಸಾಕ್ಷಿ : ಬಿಎಸ್‍ವೈ

    ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ಅವರು ಪಕ್ಷದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿರುವ ಟ್ವೀಟ್ ಸಿದ್ದರಾಮಯ್ಯ ಅವರ ಸರ್ಕಾರ 10% ಸರ್ಕಾರ ಆಗಿದೆ ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂಪ್ಪ ಟ್ವೀಟ್ ಮಾಡಿದ್ದಾರೆ.

    ರಾಜ್ಯದ ಕಾಂಗ್ರೆಸ್ ಸರ್ಕಾರ 10% ಸರ್ಕಾರ ಎಂದು ಸಾಬೀತು ಪಡಿಸಲು ನಾವು ಈಗಾಗಲೇ ಹಲವು ದಾಖಲೆಗಳ ಹಾಗೂ ಪುರಾವೆಗಳನ್ನು ಒದಗಿಸಿದ್ದೇವು. ಆದರೆ ಸಿಎಂ ಅವುಗಳನ್ನು ಸುಳ್ಳು ಎಂದು ಪ್ರತಿಪಾದಿಸಿದ್ದರು. ಇಂದು ಕಾಂಗ್ರೆಸ್ ಹಿರಿಯ ನಾಯಕರೇ ಇದಕ್ಕೆ ಸಾಕ್ಷಿ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಯೋಜನೆ ನಡೆಯಬೇಕಾದರು ಕಮಿಷನ್ ನೀಡಬೇಕೆಂಬ ಸತ್ಯ ಹೊರಬಂದಿದೆ. ಪಿಡಬ್ಲೂಡಿ ಸಚಿವರು ಗುತ್ತಿಗೆದಾರರೊಂದಿಗೆ ಸೇರಿ ತಮ್ಮ ಬೊಕ್ಕಸವನ್ನು ತುಂಬಿಸಿಕೊಳ್ಳುತ್ತಿದ್ದಾರೆ ಎಂದು ಬಿಎಸ್‍ವೈ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    `ಕಾಂಟ್ರಾಕ್ಟರ್ ಗಳ ಕೈಲಿ ಕಾಂಗ್ರೆಸ್ ಟಿಕೆಟ್’ ಎಂದು ಬರೆದು ಕಾಂಗ್ರೆಸ್‍ನಲ್ಲಿ ಹಣದ ಹೊಂದಾಣಿಕೆಯಿಂದ ಅಭ್ಯರ್ಥಿಗಳನ್ನು ನಿರ್ಧರಿಸುವಂತಾಗಿದೆ ಅಂತ ಪಕ್ಷದ ವಿರುದ್ಧ ನೇರವಾಗಿ ಮೊಯ್ಲಿ ತಮ್ಮ ಟ್ವೀಟ್ ನಲ್ಲಿ ಆರೋಪ ಮಾಡಿದ್ದರು. ಈ ಟ್ವೀಟನ್ನು ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೆಪಿಸಿಸಿಯ ಅಧಿಕೃತ ಖಾತೆಗೆ ಟ್ಯಾಗ್ ಮಾಡಿದ್ದರು. ಅಲ್ಲದೇ ಮೊಹ್ಲಿ ಅವರ ಟ್ವೀಟ್ ಗೆ ಅವರ ಪುತ್ರ ಸಹ ಮರುಟ್ವೀಟ್ ಮಾಡಿದ್ದರು.

    ನವದೆಹಲಿಯಲ್ಲಿ ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಟ್ವೀಟ್ ಮಾಡಿರುವುದು ನಾನಲ್ಲ. ಇದು ನನ್ನ ಅನಧಿಕೃತ ಟ್ವೀಟ್ ಖಾತೆಯಾಗಿದೆ. ನನ್ನ ಮಗ ಕೂಡ ಇಂತಹ ಟ್ವೀಟ್ ಮಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

  • ಟ್ವೀಟ್ ಮಾಡಿದ್ದು ನಾನಲ್ಲ, ನಾನು ಏನೂ ಹೇಳಲ್ಲ: ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ

    ಟ್ವೀಟ್ ಮಾಡಿದ್ದು ನಾನಲ್ಲ, ನಾನು ಏನೂ ಹೇಳಲ್ಲ: ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ

    ನವದೆಹಲಿ: ಕಾಂಗ್ರೆಸ್ ವಿರುದ್ಧವೇ ಟ್ವೀಟ್ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.

    ನವದೆಹಲಿಯಲ್ಲಿ ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಟ್ವೀಟ್ ಮಾಡಿರುವುದು ನಾನಲ್ಲ. ಇದು ನನ್ನ ಅನಧಿಕೃತ ಟ್ವೀಟ್ ಖಾತೆಯಾಗಿದೆ. ನನ್ನ ಮಗ ಕೂಡ ಇಂತಹ ಟ್ವೀಟ್ ಮಾಡಿಲ್ಲ ಅಂತ ಹೇಳಿದ್ದಾರೆ.

    ಪಕ್ಷದ ಆಂತರಿಕ ವಿಚಾರಗಳನ್ನು ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ. ಯಾರು ಈ ರೀತಿಯ ಟ್ವೀಟ್ ಮಾಡಿದ್ದಾರೆ ಅಂತ ಗೊತ್ತಿಲ್ಲ. ಖಾತೆ ಹ್ಯಾಕ್ ಆಗಿದೆಯಾ ಅಂತಾನೂ ಹೇಳಲ್ಲ. ಒಟ್ಟಿನಲ್ಲಿ ಇದು ನನ್ನ ಅನಧಿಕೃತ ಟ್ವೀಟ್ ಆಗಿದೆ ಅಂದಿದ್ದಾರೆ.


    ಮಗ ರಿಟ್ವೀಟ್ ಮಾಡಿರುವ ಬಗ್ಗೆ ಮಾತನಾಡುತ್ತೇನೆ. ಪಕ್ಷದ ವಿಚಾರದಲ್ಲಿ ಈ ರೀತಿ ಇಲ್ಲ. ಮತ್ತೊಮ್ಮೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ ಅಂತ ಪ್ರತಿಕ್ರಿಯಿಸಿದ್ದಾರೆ.

    `ಕಾಂಟ್ರಾಕ್ಟರ್‍ಗಳ ಕೈಲಿ ಕಾಂಗ್ರೆಸ್ ಟಿಕೆಟ್’ ಅಂತ ಬರೆದು ಕಾಂಗ್ರೆಸ್‍ನಲ್ಲಿ ಹಣದ ಹೊಂದಾಣಿಕೆಯಿಂದ ಅಭ್ಯರ್ಥಿಗಳನ್ನು ನಿರ್ಧರಿಸುವಂತಾಗಿದೆ ಅಂತ ಪಕ್ಷದ ವಿರುದ್ಧ ನೇರವಾಗಿ ಮೊಯ್ಲಿ ತಮ್ಮ ಟ್ವೀಟ್ ನಲ್ಲಿ ಆರೋಪ ಮಾಡಿದ್ದರು. ಈ ಟ್ವೀಟನ್ನು ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೆಪಿಸಿಸಿಯ ಅಧಿಕೃತ ಖಾತೆಗೆ ಟ್ಯಾಗ್ ಮಾಡಿದ್ದರು.