Tag: ಮಾಂಗಲ್ಯ ದೋಷ

  • 13 ವರ್ಷದ ಬಾಲಕನನ್ನು ಮದುವೆಯಾದ ಟ್ಯೂಷನ್ ಟೀಚರ್!

    13 ವರ್ಷದ ಬಾಲಕನನ್ನು ಮದುವೆಯಾದ ಟ್ಯೂಷನ್ ಟೀಚರ್!

    ಚಂಡೀಗಢ: ವಿಜ್ಞಾನ ಹಾಗೂ ಆಧುನಿಕತೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಆದರೂ ಜನ ಕೆಲವು ಮೂಢನಂಬಿಕೆಗಳಿಂದ ಹೊರಗೆ ಬಂದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಮಾಂಗಲ್ಯ ದೋಷ ಹೊಂದಿದ್ದ ಟ್ಯೂಷನ್ ಟೀಚರ್ ತನ್ನ ಬಳಿ ಪಾಠ ಕಲಿಯಲು ಬರುತ್ತಿದ್ದ, 13 ವರ್ಷದ ಬಾಲಕನನ್ನು ವಿವಾಹವಾಗಿರುವ ಘಟನೆ ಪಂಜಾಬ್ ಜಲಂಧರ್‍ನ ಬಸ್ತಿ ಬಾವಾ ಖೇಲ್ ಪ್ರದೇಶದಲ್ಲಿ ನಡೆದಿದೆ. ಮಾಂಗಲ್ಯ ದೋಷ ಹೊಂದಿರುವುದರಿಂದ ಮಹಿಳೆಗೆ ಮದುವೆಯಾಗುತ್ತಿಲ್ಲ ಎಂದು ಆಕೆಯ ಪೋಷಕರು ಆತಂಕಗೊಂಡಿದ್ದರು.

    ಒಮ್ಮೆ ಕುಟುಂಬದ ಜ್ಯೋತಿಷಿಯೊಬ್ಬರು ಮಹಿಳೆ ಜಾತಕದಲ್ಲಿ ಮಾಂಗಲ್ಯ ದೋಷವಿರುವುದರಿಂದ ಅವಳು ಮೊದಲಿಗೆ ಅಪ್ರಾಪ್ತ ಹುಡುಗನೊಂದಿಗೆ ಸಾಂಕೇತಿಕವಾಗಿ ವಿವಾಹ ಮಾಡಬೇಕೆಂದು ಸಲಹೆ ನೀಡಿದ್ದರು. ಹೀಗಾಗಿ ಟ್ಯೂಷನ್ ಟೀಚರ್ ಬಾಲಕನ ಪೋಷಕರಿಗೆ ನಿಮ್ಮ ಮಗ ಒಂದು ವಾರ ಟ್ಯೂಷನ್‍ಗಾಗಿ ನಮ್ಮ ಮನೆಯಲ್ಲಿಯೇ ಇರಬೇಕಾಗುತ್ತದೆ ಎಂದು ಉಳಿಸಿಕೊಂಡಿದ್ದಾಳೆ. ಬಳಿಕ ಬಾಲಕನೊಂದಿಗೆ ಅಂತಿಮವಾಗಿ ವಿವಾಹವಾಗಿದ್ದಾಳೆ.

    ಬಳಿಕ ಮನೆಗೆ ಹಿಂದಿರುಗಿದ ಬಾಲಕ ತನ್ನ ಪೋಷಕರಿಗೆ ನಡೆದ ಘಟನೆಯನ್ನೆಲ್ಲಾ ವಿವರಿಸಿದ್ದಾನೆ. ಟೀಚರ್ ಮನೆಯವರು ಹಳದಿ- ಮೆಹಂದಿ ಕಾರ್ಯಕ್ರಮ ಮತ್ತು ‘ಸುಹಾಗ್ರಾತ್’ (ಮದುವೆಯ ರಾತ್ರಿ) ಹೀಗೆ ಮದುವೆಯ ಹಲವಾರು ವಿಧಿವಿಧಾನವನ್ನು ಬಲವಂತವಾಗಿ ಮಾಡಿದರು ಎಂದು ಆರೋಪಿಸಿದ್ದಾನೆ. ನಂತರ ಟೀಚರ್ ಕೈ ಬಳೆಗಳನ್ನು ಹೊಡೆದು ವಿಧವೆಯೆಂದು ಘೋಷಿಸಿ, ಸಂತಾಪ ಸಭೆಯನ್ನು ನಡೆಸಿದರು. ಜೊತೆಗೆ ಒಂದು ವಾರ ನನ್ನನ್ನು ಅವರ ಮನೆ ಕೆಲಸ ಮಾಡುವಂತೆ ಒತ್ತಾಯಿಸಿದರು ಎಂದು ಹೇಳಿದ್ದಾನೆ.

    ಇದರಿಂದ ಬಾಲಕನ ಪೋಷಕರು ಘಟನೆ ಬಗ್ಗೆ ವಿವರಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಸದ್ಯ ಈ ಕುರಿತಂತೆ ಬಸ್ತಿ ಬಾವಾ ಖೇಲ್ ಪೊಲೀಸ್ ಠಾಣೆಯ ಅಧಿಕಾರಿ ಗಗನ್‍ದೀಪ್ ಸಿಂಗ್, ಬಾಲಕನ ಪೋಷಕರು ಘಟನೆ ವಿಚಾರವಾಗಿ ದೂರು ದಾಖಲಿಸಿದ್ದು, ಎರಡು ಕಡೆಯವರು ಇದೀಗ ರಾಜಿಯಾಗಿ ದೂರು ಹಿಂಪಡೆದಿದ್ದಾರೆ ಎಂದು ತಿಳಿಸಿದರು.

  • ಮದುವೆ ಆಗುತ್ತಿಲ್ಲವೇ? ದಾಂಪತ್ಯ ಕಲಹವೇ? – ದೋಷ ನಿವಾರಣೆಗೆ ಸುಲಭ ಪರಿಹಾರ

    ಮದುವೆ ಆಗುತ್ತಿಲ್ಲವೇ? ದಾಂಪತ್ಯ ಕಲಹವೇ? – ದೋಷ ನಿವಾರಣೆಗೆ ಸುಲಭ ಪರಿಹಾರ

    ಕೆಲವರಿಗೆ ಮದುವೆ ಆಗುತ್ತಿಲ್ಲ ಎಂಬ ಚಿಂತೆಯಲ್ಲಿದ್ದರೇ, ಹಲವರಿಗೆ ದಾಂಪತ್ಯ ಜೀವನ ಕಲಹದಿಂದಲೇ ಕೂಡಿರುತ್ತದೆ. ದಾಂಪತ್ಯಗಳಲ್ಲಿ ಕಲಹಗಳಿದ್ದರೆ ಅದಕ್ಕೆ ದೋಷಗಳೇ ಕಾರಣ ಎಂದು ಹೇಳಲಾಗುತ್ತಿದೆ. ಜೋತಿಷ್ಯದಲ್ಲಿ ಇದನ್ನು ಮಾಂಗಲ್ಯ ದೋಷ ಎಂದು ಕರೆಯಲಾಗುತ್ತದೆ.

    ವಧು-ವರರಿಗೆ ವಿವಾಹ ಮಾಡುವ ಸಂದರ್ಭದಲ್ಲಿ ಮಾಂಗಲ್ಯ ದೋಷ ಇದೆಯಾ ಅಥವಾ ಇಲ್ಲವಾ ಎಂಬುದನ್ನು ತಿಳಿದುಕೊಳ್ಳಬೇಕು. ಮಾಂಗಲ್ಯಕ್ಕೆ ಅಧಿಪತಿ ಆಗಿದ್ದವನ ಬಲಗಳು ಸಂಪೂರ್ಣವಾಗಿರಬೇಕು. ತಾರಾ, ಲಗ್ನ ಮತ್ತು ಜಾತಕಕ್ಕೆ ಮೂರು ಬಲಗಳು ವ್ಯವಸ್ಥಿತವಾಗಿ ಕೂಡಿದಾಗ ಮಾತ್ರ ವಿವಾಹ ಸಂಪೂರ್ಣವಾಗುತ್ತದೆ. ಕೆಲವರಿಗೆ ಕುಜ, ರಾಹು ಸಮಯದಲ್ಲಿಯೂ ಮದುವೆ ಮಾಡುತ್ತಾರೆ. ಇನ್ನು ಕೆಲವರಿಗೆ ಗುರು ಬಲವಿಲ್ಲದಿದ್ದರೂ ಮದುವೆ ಮಾಡುವುದರಿಂದ ದಾಂಪತ್ಯದಲ್ಲಿ ಕಲಹ ಉಂಟಾಗುತ್ತದೆ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ.

    ಮದುವೆ (ಮಾಂಗಲ್ಯ ಧಾರಣೆ) ಸಮಯವನ್ನು ಕುಜನ ಬಲ ನೋಡಿಕೊಂಡು ನಿಗದಿ ಮಾಡಲಾಗುತ್ತದೆ. ವ್ಯಕ್ತಿಗೆ ಗುರು ಬಲ, ಕುಜ ಬಲ ಇಲ್ಲ ಅಂದ್ರೆ ಮದುವೆ ನಿಧಾನವಾಗುತ್ತದೆ. ಈ ಎರಡು ಬಲಗಳು ಕೂಡಿದಾಗ ಮದುವೆ ನಿಶ್ಚಯವಾಗುತ್ತದೆ. ಈ ಬಲಗಳು ಇಲ್ಲದಿದ್ದರೆ ನಾನಾ ಕಾರಣಗಳಿಂದ ಮದುವೆ ಮುಂದೆ ಹೋಗುತ್ತಾ ಹೋಗುತ್ತದೆ.

    ಪರಿಹಾರ: ಪ್ರಾಪ್ತ ವಯಸ್ಸಿನಲ್ಲಿ ಮದುವೆ ಆಗಿಲ್ಲ ಅಂದ್ರೆ ನಿಮಗೆ ಮಾಂಗಲ್ಯ ಬಲ ಬಂದಿಲ್ಲ ಎಂದರ್ಥ. ಮಾಂಗಲ್ಯ ಬಲ ಬರಬೇಕೆಂದ್ರೆ ಪ್ರತಿ ಮಂಗಳವಾರ ನಿಮ್ಮ ಶಕ್ತಿಗನುಸಾರವಾಗಿ ಅಡಕ ಧಾನ್ಯ (ತೊಗರಿ ಬೇಳೆ)ಯನ್ನು ಲಕ್ಷ್ಮಿ ನಾರಾಯಣನ ದೇಗುಲಕ್ಕೆ ನೀಡಿ ದೀರ್ಘ ದಂಡ ನಮಸ್ಕಾರ ಹಾಕಬೇಕು. ಬೆಟ್ಟದ ಮೇಲಿರುವ ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ತೆರಳಿ ಪಂಚಾಮೃತ ಅಭಿಷೇಕ ಸೇರಿದಂತೆ ಇನ್ನಿತರ ಸೇವೆಗಳನ್ನು ದೇವರಿಗೆ ಸಲ್ಲಿಸುವುದರಿಂದ ಮಾಂಗಲ್ಯ ಬಲ ನಿಮ್ಮದಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv