Tag: ಮಹೇಶ್

  • ನಟ ಸುದೀಪ್ ವಿರುದ್ಧದ ವಂಚನೆ ಆರೋಪಕ್ಕೆ ಟ್ವಿಸ್ಟ್

    ನಟ ಸುದೀಪ್ ವಿರುದ್ಧದ ವಂಚನೆ ಆರೋಪಕ್ಕೆ ಟ್ವಿಸ್ಟ್

    ಬೆಂಗಳೂರು: ನಟ ಸುದೀಪ್ ವಿರುದ್ಧದ ವಂಚನೆ ಆರೋಪಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕಾಫಿ ತೋಟದ ಮಾಲೀಕ ದೀಪಕ್ ಮಯೂರ್ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ವಾರಸ್ದಾರ ಧಾರಾವಾಹಿ ಕಾರ್ಯಕಾರಿ ನಿರ್ಮಾಪಕ ಮಹೇಶ್ ಪ್ರತ್ಯಾರೋಪ ಮಾಡಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಹೇಶ್, ಈ ಮೊದಲು ನನಗೆ ಅನ್ಯಾಯವಾಗಿದೆ ಎಂದು ದೀಪಕ್ ಚಿಕ್ಕಮಗಳೂರು ಎಸ್‍ಪಿ ಬಳಿ ಹೋಗಿದ್ದರು. ಅಲ್ಲಿ ನನಗೆ 88 ರಿಂದ 90 ಲಕ್ಷ ರೂ. ಆಗಿದೆ ಅಂತಾ ಆರೋಪಿಸಿದರು. ಆದರೆ ಎಸ್‍ಪಿ ತೋಟದ ಬೆಲೆಯೇ ಅಷ್ಟಿಲ್ಲ. ಹಾಗಾಗಿ ನೀವು ನ್ಯಾಯಾಲಯದ ಮೊರೆ ಹೋದರೆ ಒಳ್ಳೆಯದು ಎಂದು ಸಲಹೆ ನೀಡಿ ಕಳುಹಿಸಿದರು. ಎಸ್‍ಪಿ ಸಲಹೆಯಂತೆ ದೀಪಕ್ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಆರೋಪಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸುವಂತೆ ಆದೇಶಿಸಿತ್ತು. ನಾವು ಅಲ್ಲಿಯೂ ನ್ಯಾಯಾಲಯಕ್ಕೆ ನಮ್ಮ ಬಳಿಯ ದಾಖಲೆಗಳನ್ನು ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

    ಏನಿದು ವಿವಾದ?:
    ಕೆಲ ಸಮಯಗಳ ಹಿಂದೆ ಖಾಸಗಿ ವಾಹಿನಿಯಲ್ಲಿ ನಟ ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಷನ್ ನಿರ್ಮಾಣದ ಅಡಿಯಲ್ಲಿ ವಾರಸ್ದಾರ ಧಾರಾವಾಹಿ ಪ್ರಸಾರವಾಗುತ್ತಿತ್ತು. ಈಗ ಈ ಧಾರಾವಾಹಿ ಪ್ರಸಾರ ನಿಂತಿದ್ದು, ಇದರ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿನ ದೀಪಕ್ ಮಯೂರ್ ಪಟೇಲ್ ಎಂಬುವವರ ಮನೆ ಮತ್ತು ಕಾಫಿ ತೋಟವನ್ನು ಬಾಡಿಗೆಗೆ ತಂಡ ಪಡೆದಿತ್ತು.

    ಧಾರಾವಾಹಿ ಸಂದರ್ಭದಲ್ಲಿ ಕಾಫಿ ತೋಟಕ್ಕೆ ಸಾಕಷ್ಟು ಹಾನಿಯಾಗಿದೆ. ಹಾನಿಯಾದ ಹಿನ್ನೆಲೆಯಲ್ಲಿ ಒಟ್ಟು 1.50 ಕೋಟಿ ರೂ. ನಷ್ಟವಾಗಿದ್ದು ಈ ಹಣವನ್ನು ನೀಡಬೇಕೆಂದು ನಿರ್ಮಾಣ ತಂಡಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆಯನ್ನು ಸುದೀಪ್ ಕ್ರಿಯೇಶನ್ಸ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ದೀಪಕ್ ಮಯೂರ್ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ದೂರು ನೀಡಿದ್ದಾರೆ.

    ಮಹೇಶ್ ಹೇಳೋದು ಏನು?
    ವಾರಸ್ದಾರ ಧಾರಾವಾಹಿಯ ಚಿತ್ರೀಕರಣ ವೇಳೆ ನಮ್ಮೆಲ್ಲ ಕಲಾವಿದರಿಗೂ ಹೋಟೆಲ್‍ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಆದ್ರೆ ದೀಪಕ್, ನಿಮ್ಮ ತಂಡಕ್ಕೆ ವಸತಿ ವ್ಯವಸ್ಥೆಯನ್ನು ನಾನು ಕಲ್ಪಿಸಿಕೊಡುತ್ತೇನೆ. ಹೋಟೆಲ್‍ಗೆ ನೀಡುವ ಹಣವನ್ನೇ ನನಗೆ ನೀಡಿ ಅಂತಾ ಮನವಿ ಮಾಡಿಕೊಂಡಿದ್ದರು. ನಮ್ಮನ್ನು ನಂಬಿ ಹೋಮ್ ಸ್ಟೇ ಮಾಡಬೇಡಿ. ಇಲ್ಲಿ ನಾವು ಹೆಚ್ಚು ದಿನ ಇರಲ್ಲ ಎಂದು ಹೇಳಿದರೂ ನೀವು ಹೋದ ಮೇಲೆ ನಾನು ಅದನ್ನೇ ಹೋಮ್ ಸ್ಟೇ ಮಾಡಿಕೊಂಡು ಜೀವನ ಸಾಗಿಸುತ್ತೇನೆ ಎಂದು ತಿಳಿಸಿ ನಮ್ಮೆಲ್ಲರಿಗೂ ವಸತಿ ವ್ಯವಸ್ಥೆ ಮಾಡಿಕೊಟ್ಟಿದ್ದರು.

    ನಾವು ಮನೆಯಲ್ಲಿ ಮಾತ್ರ ಶೂಟಿಂಗ್ ಮಾಡಿದ್ದು, ಅದಕ್ಕೆ ಸಂಬಂಧಪಟ್ಟಂತೆ ಬಾಡಿಗೆಯನ್ನು ಕೊಟ್ಟಿದ್ದೇವೆ. 70 ಸಾವಿರ ಬಾಡಿಗೆ ಮಾತ್ರ ಬಾಕಿ ಉಳಿದುಕೊಂಡಿತ್ತು. ಬಾಡಿಗೆ ನೀಡಿಲ್ಲ ಎಂದು ಆರೋಪಿಸಿ ಚಿತ್ರೀಕರಣಕ್ಕಾಗಿ ತಂದಿದ್ದ ಉಪಕರಣಗಳನ್ನು ಅವರ ಬಳಿಯೇ ಇಟ್ಟುಕೊಂಡಿದ್ದಾರೆ. ನಾವು ಬಾಡಿಗೆ ಹಣ 70 ಸಾವಿರ ಕೊಡಲು ಸಿದ್ಧರಿದ್ದು, ನಮ್ಮ 7 ಲಕ್ಷ ಮೌಲ್ಯದ ಉಪಕರಣಗಳನ್ನು ಕೊಡಿ ಎಂದರು ಕೊಡುತ್ತಿಲ್ಲ

    ಸದ್ಯ ದೀಪಕ್ ಧಾರಾವಾಹಿ ತಂಡ ತೋಟದಲ್ಲಿ ಮನೆ ಕಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಸದ್ಯ ದೀಪಕ್ ಅವರಿಗೆ ಹಣ ಬೇಕಾಗಿದ್ದು, ಶೂಟಿಂಗ್ ಮುಗಿಸಿ ಬಂದಾಗಿನಿಂದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಾವು ತೋಟದಲ್ಲಿ ಯಾವುದೇ ಮನೆಯನ್ನು ಕಟ್ಟಿಲ್ಲ. ನಾವು ಬಾಡಿಗೆಯ 70 ಸಾವಿರ ಕೊಡಲು ಹೋದಾಗ ತೋಟ ಹಾಳು ಮಾಡಿದ್ದಕ್ಕೆ 1 ಕೋಟಿ 50 ಲಕ್ಷ ರೂ. ಡಿಮ್ಯಾಂಡ್ ಮಾಡುತ್ತಿದ್ದಾರೆ. ಈ ವಿಚಾರ ಸುದೀಪ್ ಅವರ ಗಮನಕ್ಕೆ ಬಂದಿತ್ತು. ಆದರೆ ದೀಪಕ್ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂಬುವುದು ಸುದೀಪ್ ಅವರಿಗೆ ಎಂದು ತಿಳಿದಿತ್ತು. ಈ ವಿಚಾರದಲ್ಲಿ ಸುದೀಪ್ ಅವರ ತಪ್ಪಿಲ್ಲ.

    ದೀಪಕ್ ವಿರುದ್ಧ ದೂರು ನೀಡಲು ನಮ್ಮ ಬಳಿಯೂ ದಾಖಲೆಗಳಿವೆ. ಚಿತ್ರೀಕರಣ ಆರಂಭಿಸಿದ ದಿನದಿಂದ ಕೊನೆಯ ದಿನವರೆಗೂ ಎಲ್ಲ ಹಣದ ವ್ಯವಹಾರಗಳನ್ನು ಬ್ಯಾಂಕ್ ಮುಖಾಂತರವೇ ನಡೆಸಲಾಗಿದೆ. ದೀಪಕ್ ಸಹೋದರ ಮತ್ತು ತಂದೆ ಯಾವುದೇ ಆರೋಪಗಳನ್ನು ಮಾಡುತ್ತಿಲ್ಲ. ನಾವು ಯಾವುದೇ ಮೋಸ ಮಾಡಿಲ್ಲ. ಫಿಲ್ಮ್ ಚೇಂಬರ್‍ಗೆ ದೂರು ನೀಡುವುದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಮಹೇಶ್ ಪ್ರತಿಕ್ರಿಯಿಸಿದ್ದಾರೆ.

  • ಹೆಚ್‍ಐವಿ ಬಾಧಿತ ಮಕ್ಕಳ ಪಾಲಿನ ಬೆಳಕು ಬೆಳಗಾವಿ ಮಹೇಶ್!

    ಹೆಚ್‍ಐವಿ ಬಾಧಿತ ಮಕ್ಕಳ ಪಾಲಿನ ಬೆಳಕು ಬೆಳಗಾವಿ ಮಹೇಶ್!

    ಬೆಳಗಾವಿ: ಹೆಚ್‍ಐವಿ ಎನ್ನುವ ಪದ ಕೇಳಿದರೆ ಸಾಕು ಜನ ದೂರ ಸರಿಯುತ್ತಾರೆ. ಇನ್ನು ಹೆಚ್‍ಐವಿ ಬಾಧಿತ ಮಕ್ಕಳು ಕಥೆ ಏನಾಗ್ಬೇಡಾ? ಆದರೆ, ಬೆಳಗಾವಿಯ ಪಬ್ಲಿಕ್ ಹೀರೋ ಒಬ್ಬರು ಇಂಥ ಮಕ್ಕಳ ಭವಿಷ್ಯಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.

    ಕಣಬರ್ಗಿ ನಿವಾಸಿ ಮಹೇಶ್ ಜಾಧವ್ ವೃತ್ತಿಯಲ್ಲಿ ಡಿಪ್ಲೊಮಾ ಎಂಜಿನಿಯರ್. ಆದರೆ ಇವರು ಸಮಾಜ ಸೇವೆ ಮಾತ್ರ ವಿಭಿನ್ನ. ಎಚ್‍ಐವಿ ಪೀಡಿತ ಅನಾಥ ಮಕ್ಕಳ ವಸತಿ ನಿಲಯಕ್ಕಾಗಿ ತಮ್ಮ ಸ್ವಂತ ಮನೆಯನ್ನು ಬಿಟ್ಟುಕೊಟ್ಟು ಮಕ್ಕಳ ಶಾಲಾ ಶಿಕ್ಷಣ, ಆರೈಕೆ ಸಹಿತ ಉನ್ನತ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಿದ್ದಾರೆ.

    ಪ್ರೇರಣೆ ಏನು?
    ಗೆಳೆಯನ ಹುಟ್ಟುಹಬ್ಬದ ನಿಮಿತ್ತವಾಗಿ ಬೆಳಗಾವಿ ಜಿಲಾಸ್ಪತ್ರೆಗೆ ಹಣ್ಣು ವಿತರಿಸಲು ಹೋದಾಗ ಅಪಘಾತವಾದ ಪಾಸಿಟವ್ ಮಗುವೊಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿತ್ತು. ವೈದ್ಯರು ನೋಡದೇ ನಿರಾಕರಿಸಿದಾಗ ಮಹೇಶ್ ಅವರು ಮನನೊಂದು ಇಂಥ ಮಕ್ಕಳ ಬೆಂಬಲಕ್ಕೆ ನಿಂತು ಇಂದಿಗೆ ದೊಡ್ಡದಾದ ಸಂಸ್ಥೆ ಕಟ್ಟಿ 2,200 ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಅದಲ್ಲದೆ ಸಂಸ್ಥೆಯಲ್ಲಿ 76 ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ಅದರಲ್ಲಿ 16 ಜನ ಅನಾಥ ಮಹಿಳೆಯರು ಸೊಂಕಿನಿಂದ ಬಳಲುತ್ತಿದ್ದು ಎಲ್ಲರೂ ಆರೋಗ್ಯವಾಗಿದ್ದಾರೆ.

    ಸಮಾಜದಲ್ಲಿ ತಿರಸ್ಕೃತಗೊಂಡ ಇಂಥ ಮಕ್ಕಳಿಗೆ ಸೂರು ಕಲ್ಪಿಸಿ ದಿನನಿತ್ಯ ಅವರ ಆರೋಗ್ಯ ಜೊತೆಗೆ ವಿದ್ಯಾಭ್ಯಾಸವನ್ನು ಕಲ್ಪಸುವುದು ದೊಡ್ಡ ಕೆಲಸ. ಚಿಕ್ಕ ವಯಸ್ಸಿನಲ್ಲಿಯೇ ಮಹೇಶ ಇಂಥ ದೊಡ್ಡ ಕೆಲಸಕ್ಕಾಗಿ ಕೈ ಹಾಕಿದ್ದನ್ನು ಕಂಡ ಪಾಲಕರು ತಮ್ಮ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮನೆಯನ್ನು ಮಹೇಶ ಸಂಸ್ಥೆಗೆ ನೀಡಿ ತಾವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

    2008 ರಲ್ಲಿ ಕೇವಲ 6 ಮಕ್ಕಳನ್ನು ಪಡೆದುಕೊಂಡು ಮಹೇಶ್ ಅವರು ಈ ಸಮಾಜ ಸೇವೆಯನ್ನು ಆರಂಭಿಸಿದರು. ತಮ್ಮ ಸಂತ ಮನೆಯನ್ನು ಕೆಡವಿ ಅಲ್ಲಿ ಈಗ ದೊಡ್ಡದಾದ ವಸತಿ ಶಾಲೆಯನ್ನು ಕಟ್ಟುತ್ತಿದ್ದಾರೆ. ಇವರ ಸಮಾಜ ಸೇವೆಯನ್ನು ಕಂಡು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಭೇಟಿ ನೀಡಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಮಕ್ಕಳ ಪೋಷಣೆಗಾಗಿ ಆಯಾಗಳು, ಅಂಗನವಾಡಿ, ಆಸ್ಪತ್ರೆಗೆ, ಶಾಲೆಗೆ ಕಳುಹಿಸಲು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಿ ಎಲ್ಲರನ್ನು ಒಂದೇ ಕುಟುಂಬದಂತೆ ಸಾಕುತ್ತಿರುವ ಮಹೇಶ್ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಯಾವುದೇ ಸಹಾಯಧನ ಪಡೆಯದೇ ಈ ಸೇವೆ ಮಾಡುತ್ತಿರುವುದು ವಿಶೇಷ.