Tag: ಮಹೇಶ್ ಕುಮುಟಳ್ಳಿ

  • ಸವದಿ ನಿಂದನೆಗೆ ಕಣ್ಣೀರಿಟ್ಟ ಅನರ್ಹ ಶಾಸಕ ಕುಮುಟಳ್ಳಿ

    ಸವದಿ ನಿಂದನೆಗೆ ಕಣ್ಣೀರಿಟ್ಟ ಅನರ್ಹ ಶಾಸಕ ಕುಮುಟಳ್ಳಿ

    ಬೆಳಗಾವಿ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಸಂಬಂಧ ಅಥಣಿ ಅನರ್ಹ ಶಾಸಕ ಮಹೇಶ್ ಕುಮುಟಳ್ಳಿ ಕಣ್ಣೀರು ಹಾಕಿದ್ದಾರೆ.

    ಡಿಸಿಎಂ ಹೇಳಿಕೆ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಕುಮುಟಳ್ಳಿ, ನನಗೆ ಯಾರೇ ವಿಷ ನೀಡಿದರೂ ಅಮೃತ ಆಗಲಿ. ಅವರು ಹಾಗೆ ಮಾತನಾಡಬಾರದಿತ್ತು, ಆದರೆ ಮಾತನಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಈ ವಿಚಾರ ತಡವಾಗಿ ನನ್ನ ಗಮನಕ್ಕೆ ಬಂದಿದೆ. ಅವರು ಆ ರೀತಿ ಮಾತಾಡಬಾರದಾಗಿತ್ತು. ನನಗೆ ಯಾರೇ ವಿಷ ನೀಡಿದರೂ ಅದು ಅಮೃತವಾಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಎಂದು ನನಗೆ ಅರ್ಥವಾಗಿಲ್ಲ. ಈಗಾಗಲೇ ವಿಡಿಯೋ ವೈರಲ್ ಆಗಿದೆ. ಹೀಗಾಗಿ ಈ ವಿಷಯವನ್ನ ಯಾರ ಗಮನಕ್ಕೂ ತರುವುದಿಲ್ಲ ಎಂದು ಹೇಳಿದ್ದಾರೆ.

    ಸವದಿ ಹೇಳಿದ್ದೇನು?:
    ಕೃಷ್ಣಾ ನದಿ ಪ್ರವಾಹ ಪೀಡಿತ ಗ್ರಾಮಕ್ಕೆ ಲಕ್ಷ್ಮಣ ಸವದಿ ಭೇಟಿ ನೀಡಿದ್ದರು. ಈ ವೇಳೆ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಕುರಿತು ಅಪನಿಂದನೆ ಮಾಡಿದ್ದರು. ಪ್ರವಾಹ ಪೀಡಿತ ಗ್ರಾಮಗಳಿಗೆ ಸಂತ್ರಸ್ತರ ಅಳಲು ಕೇಳಲು ಹೋಗುತ್ತಿದ್ದಾಗ ತಮ್ಮ ಬೆಂಬಲಿಗನ ಜೊತೆ ಮೊಬೈಲ್‍ನಲ್ಲಿ ಮಾತನಾಡುತ್ತಾ, ಮುಂಜಾನೆ ಕುಮಟಳ್ಳಿ ಅಂತಹ ದರಿದ್ರ ಮಕ್ಕಳ ಹೆಸರು ನೆನಪಿಸಬೆಡಿ. ಅವನ ಸುದ್ದಿ ತಗೊಂಡ್ ನಾನೇನು ಮಾಡಲಿ. ನನ್ನ ಮೂಡ್ ಹಾಳು ಮಾಡಬೇಡಿ ಎಂದು ಹೇಳುವ ಮೂಲಕ ನಿಂದಿಸಿದ್ದರು.

    ಸದ್ಯ ಸವದಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಬಿಎಸ್‍ವೈ ಅವರನ್ನು ಸಿಎಂ ಮಾಡಿದ್ದ ಅನರ್ಹ ಶಾಸಕನಿಗೆ ದರಿದ್ರ ಪಟ್ಟ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

  • ಅನರ್ಹಗೊಂಡ ಶಾಸಕರು ಮತ್ತೆ ಎಲೆಕ್ಷನ್‍ಗೆ ನಿಲ್ಲುವಂತಿಲ್ಲ- ಸ್ಪೀಕರ್ ಸ್ಪಷ್ಟನೆ

    ಅನರ್ಹಗೊಂಡ ಶಾಸಕರು ಮತ್ತೆ ಎಲೆಕ್ಷನ್‍ಗೆ ನಿಲ್ಲುವಂತಿಲ್ಲ- ಸ್ಪೀಕರ್ ಸ್ಪಷ್ಟನೆ

    ಬೆಂಗಳೂರು: ಈಗಾಗಲೇ ಅನರ್ಹಗೊಂಡ ಮೂವರು ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮುಟಳ್ಳಿ ಹಾಗೂ ಆರ್. ಶಂಕರ್ ಬೈ ಎಲೆಕ್ಷನ್ ಗೆ ನಿಲ್ಲುವಂತಿಲ್ಲ ಎಂದು ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಖಡಕ್ಕಾಗಿ ತಿಳಿಸಿದ್ದಾರೆ.

    ತಮಿಳು ಸುದ್ದಿವಾಹಿನಿಯೊಂದರ ಜೊತೆಗೆ ಮಾತನಾಡಿದ ಸ್ಪೀಕರ್, ಈ ಮೂವರು ಶಾಸಕರು ವಿಧಾನಸಭೆ ಅವಧಿ ಮುಗಿಯೋವರೆಗೆ ಅಂದರೆ 2023ರ ಮೇ ತಿಂಗಳವರೆಗೆ ಉಪಚುನಾವಣೆಗೆ ನಿಲ್ಲುವಂತಿಲ್ಲ. ಹೀಗಾಗಿ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಬಹುದು ಎಂಬ ಚುನಾವಣಾ ಆಯೋಗದ ಅಭಿಪ್ರಾಯ ತಪ್ಪು ಎಂದು ಹೇಳಿದ್ದಾರೆ.

    ತಪ್ಪು ಮಾಡಿ ರಾಜೀನಾಮೆ ಕೊಟ್ಟು ಬಚಾವ್ ಆಗಲು ಸಾಧ್ಯವಿಲ್ಲ. ನೀವು ತಪ್ಪು ಮಾಡಿದ್ದೀರಿ. ನಾನು ರಾಜೀನಾಮೆ ಅಂಗೀಕರಿಸಲ್ಲ. ಪ್ರತಿಯೊಂದು ರಾಜೀನಾಮೆಯೂ ಬೇರೆ ಬೇರೆ ಪ್ರಕರಣವಾಗಿದೆ. ಹೀಗಾಗಿ ಪ್ರತಿಯೊಬ್ಬ ಶಾಸಕರ ರಾಜೀನಾಮೆ ಬಗ್ಗೆಯೂ ಅಧ್ಯಯನ ಮಾಡುತ್ತಿದ್ದೇನೆ. ಇನ್ನು ನಾಲ್ಕೈದು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

    ಆದರೆ ಇದೀಗ ಅನರ್ಹಗೊಂಡ ಮೂವರು ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮುಟಳ್ಳಿ ಹಾಗೂ ಆರ್ ಶಂಕರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಜಯ ಸಿಗುತ್ತದೆ ಎಂದು ಅತೃಪ್ತ ಶಾಸಕರೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ವಿಶ್ವಾಸ ವ್ಯಕ್ತಪಡಿಸಿದ್ದರು. ಜೊತೆಗೆ ನಮ್ಮ ರಾಜೀನಾಮೆ ಅಂಗೀಕರಿಸದೆ, ನಮ್ಮನ್ನೂ ಅನರ್ಹಗೊಳಿಸಿದರೆ, ನಾವೂ ಕೋರ್ಟ್ ಮೊರೆ ಹೋಗುತ್ತೇವೆ ಎಂದು ಎಚ್ಚರಿಸಿದ್ದರು.

    ತಮಿಳುನಾಡಿನಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಅಲ್ಲಿ ಶಾಸಕರು ರಾಜೀನಾಮೆ ಕೊಟ್ಟ 6 ತಿಂಗಳೊಳಗೆ ಅಂದರೆ ಆ ಸಮಯದಲ್ಲಿ ವಿಧಾನಸಭಾ ಅವಧಿ ಕೂಡ ಮುಕ್ತಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಅನರ್ಹಗೊಂಡವರು ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಇಲ್ಲಿ ಈ ವಿಧಾನಸಭೆ ಅವಧಿ ಮುಗಿಯಲು ಇನ್ನೂ 3 ವರ್ಷ 10 ತಿಂಗಳು ಇರುವುದರಿಂದ ಚುನಾವಣೆಗೆ ನಿಲ್ಲುವಂತಿಲ್ಲ ಎಂದು ಸ್ಪೀಕರ್ ಹೇಳುತ್ತಿದ್ದಾರೆ.