Tag: ಮಹಿಳೆಯರು

  • ಋತುಚಕ್ರ ರಜೆ ನೀತಿಗೆ ಶೀಘ್ರವೇ ನಿಯಮ ರೂಪಿಸಿ ಜಾರಿ – ಸಂತೋಷ್‌ ಲಾಡ್

    ಋತುಚಕ್ರ ರಜೆ ನೀತಿಗೆ ಶೀಘ್ರವೇ ನಿಯಮ ರೂಪಿಸಿ ಜಾರಿ – ಸಂತೋಷ್‌ ಲಾಡ್

    – ಕಾನೂನು ಪಾಲನೆ ಮಾಡದವರ ವಿರುದ್ಧ ಕ್ರಮದ ಎಚ್ಚರಿಕೆ

    ಬೆಂಗಳೂರು: ಋತುಚಕ್ರ ರಜೆಯನ್ನು (Period Leave) ಸಂಬಂಧಿಸಿದ ಕಂಪನಿಗಳು ಮಹಿಳಾ ಉದ್ಯೋಗಿಗಳಿಗೆ ನೀಡಬೇಕು. ಈ ಸಂಬಂಧ ನಿಯಮ ರೂಪಿಸಲಾಗುವುದು. ಸರ್ಕಾರ ಕಾನೂನು ಮಾಡಿದ್ರೆ ಕಂಪನಿಗಳು ಪಾಲನೆ ಮಾಡಲೇಬೇಕು ಎಂದು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ (Santosh Lad) ಅವರು ಹೇಳಿದರು.

    ಋತುಚಕ್ರ ರಜೆ ನೀತಿ ಜಾರಿಗೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಅಧಿಕೃತ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ ಅವರು, ಸರ್ಕಾರದ ಕಾನೂನನ್ನು ಎಲ್ಲರೂ ಅನುಷ್ಠಾನ ಮಾಡಬೇಕು, ಪಾಲಿಸಲೇಬೇಕು. ಇದನ್ನು ಕೇವಲ ಒಂದು ಕಾನೂನು ಎಂಬ ದೃಷ್ಟಿಯಲ್ಲಿ ನೋಡದೇ ಮಾನವೀಯ ದೃಷ್ಟಿಯಿಂದಲೂ ಕಂಪನಿಗಳು ನೋಡಬೇಕು. ಈ ರಜೆ ನೀತಿ ಜಾರಿ ಸಂಬಂಧ ಸ್ವಲ್ವ ದಿನದಲ್ಲಿ ಇನ್ನಷ್ಟು ಚರ್ಚೆ ಮಾಡಲಾಗುವುದು. ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು.  ಇದನ್ನೂ ಓದಿ: ಹಿರಿಯ ನಟ ಉಮೇಶ್‌ಗೆ ಕ್ಯಾನ್ಸರ್; 4ನೇ ಸ್ಟೇಜ್‌ನಲ್ಲಿ ಕಾಯಿಲೆ

    ಋತುಚಕ್ರ ರಜೆ ಕೊಡಬೇಕು ಎಂಬ ಕಾರಣಕ್ಕೆ ಕಂಪನಿಗಳು ಮಹಿಳಾ ಉದ್ಯೋಗಿಗಳನ್ನು (Women Employee) ಕೆಲಸಕ್ಕೆ ಹೆಚ್ಚು ನೇಮಿಸಿಕೊಳ್ಳಲು ಹಿಂದೇಟು ಹಾಕಬಹುದಲ್ವ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಮ್ಮೆ ಜಾರಿ ಜಾರಿ ಮಾಡಿ ಅದರ ಸಾಧಕ ಬಾಧಕ ನೋಡೊಣ. ಹಾಗೆ ನೋಡಿದರೆ ಈ ರಜೆ ನೀತಿಯನ್ನು ಹಲವು ಕಂಪನಿಗಳು ಪಾಲಿಸುತ್ತೀವೆ ಎಂದು ಹೇಳಿದರು. ಇದನ್ನೂ ಓದಿ: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ‘ಕಾಂತಾರ’ಕ್ಕೆ ವಿಶೇಷ ಸ್ಥಾನ: ಸುಮಲತಾ ಬಣ್ಣನೆ

    ರಜೆ ನೀತಿ ಜಾರಿ ಸಂಬಂಧ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಲಾಗುವುದು. ಇಲ್ಲವೇ ಸುಗ್ರೀವಾಜ್ಞೆ ಮಾಡಲಾಗುವುದು. ಕಂಪನಿಗಳಿಗೆ ಮಹಿಳಾ ಉದ್ಯೋಗಿಗೆ ಋತುಚಕ್ರ ರಜೆ ಕೊಡಬೇಕು ಎಂಬ ಸಾಮಾನ್ಯಜ್ಞಾನ, ಸೂಕ್ಷ್ಮತೆ ಇರಬೇಕು. ಹೆಣ್ಣು ಮಕ್ಕಳ ಸಮಸ್ಯೆಯನ್ನು ಕಂಪನಿ ಅರ್ಥ ಮಾಡಿಕೊಳ್ಳಬೇಕು. ಹೆಚ್ಚು ರಜೆ ಕೊಟ್ಟರೆ ಸಮಸ್ಯೆಯಾಗುತ್ತದೆ ಎಂಬ ದೂರುಗಳು ಬರತೊಡಗಿದರೆ ಅದನ್ನು ಪರಿಗಣಿಸಿ ಏನು ಮಾಡಬೇಕು ಎಂಬ ಬಗ್ಗೆ ಪರಿಶೀಲಿಸಲಾಗುವುದು ಎಂದು ವಿವರಿಸಿದರು. ಇದನ್ನೂ ಓದಿ: ಕೇರಳ ನಟ ಜಯಕೃಷ್ಣನ್ ಮಂಗಳೂರಲ್ಲಿ ಬಂಧನ

    ಸಮಾಜದಲ್ಲಿ ಹಾಗೂ ಕುಟುಂಬದಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ. ಅವರು ಮನೆಗಳಲ್ಲಿ ದುಡಿಯುತ್ತಾರೆ, ಹೊರಗಡೆ ಕೆಲಸಕ್ಕೂ ಹೋಗುತ್ತಾರೆ. ಅವರ ಮೇಲೆ ಮಾನಸಿಕ ಒತ್ತಡ ಇರುತ್ತದೆ. ಮಧ್ಯಮ ವರ್ಗದ ದುಡಿಯುವ ಮಹಿಳೆಯರ ಸಮಸ್ಯೆ ಸಾಕಷ್ಟು ಇರುತ್ತವೆ. ಸಾಹುಕಾರರ ಮನೆಯಲ್ಲಿನ ಮಹಿಳೆಯರು ಕೆಲಸಕ್ಕೆ ಆಳುಗಳನ್ನು ಇಟ್ಟುಕೊಳ್ಳುತ್ತಾರೆ. ಒಂದು ದಿನ ರಜೆ ಸಿಕ್ಕರೆ ಅವರು ಮಾರನೇ ದಿನ ಇನ್ನಷ್ಟು ದಕ್ಷವಾಗಿ ಕೆಲಸ ಮಾಡಬಲ್ಲರು ಎಂದರು.

    ಋತುಚಕ್ರ ರಜೆ ನೀತಿ ಕುರಿತು ಅಧ್ಯಯನ ನಡೆಸಿದ್ದ ಸಮಿತಿಯ ಅಧ್ಯಕ್ಷೆ ಕ್ರೈಸ್ಟ್‌ ವಿಶ್ವವಿದ್ಯಾಲಯದ ಅಸೋಸಿಯೇಟ್‌ ಡೀನ್‌ ಮಾತನಾಡಿ, ಋತುಚಕ್ರ ರಜೆ ನೀತಿಗೆ ಶಿಫಾರಸು ಮಾಡಲು ಸಾಕಷ್ಟು ಅಧ್ಯಯನ ನಡೆಸಿದ್ದೆವು. ಎಲ್ಲಾ ಮಾನದಂಡಗಳನ್ನು ಅಧ್ಯಯನ ಮಾಡಿಯೇ ಶಿಫಾರಸು ಮಾಡಿದ್ದೆವು ಎಂದು ಹೇಳಿದರು.

  • ‌ʻಬೆತ್ತಲೆಯಾಗಿ ಬರ್ತಾರೆ, ಮಹಿಳೆಯರನ್ನ ಹೊತ್ತೊಯ್ತಾರೆʼ – ಮೀರತ್‌ನಲ್ಲಿ ನಡುಕ ಹುಟ್ಟಿಸಿದ ʻನಗ್ನ ಗ್ಯಾಂಗ್‌ʼ

    ‌ʻಬೆತ್ತಲೆಯಾಗಿ ಬರ್ತಾರೆ, ಮಹಿಳೆಯರನ್ನ ಹೊತ್ತೊಯ್ತಾರೆʼ – ಮೀರತ್‌ನಲ್ಲಿ ನಡುಕ ಹುಟ್ಟಿಸಿದ ʻನಗ್ನ ಗ್ಯಾಂಗ್‌ʼ

    – ರಕ್ಷಣೆಗೆ ಡ್ರೋನ್‌, ಸಿಸಿಟಿವಿ ಕಣ್ಗಾವಲು

    ಲಕ್ನೋ: ʻದಂಡುಪಾಳ್ಯʼ ಸಿನಿಮಾವನ್ನ ನೀವು ನೋಡಿರಬಹುದು, ಈ ಸಿನಿಮಾದಲ್ಲಿ (Cinema) ಒಂಟಿ ಮನೆಗಳನ್ನ ಟಾರ್ಗೆಟ್‌ ಮಾಡುವ ಗ್ಯಾಂಗ್‌ ಮಹಿಳೆಯರನ್ನ ಅತ್ಯಾಚಾರಗೈದು ಭೀಕರವಾಗಿ ಕೊಲೆ ಮಾಡಿ ಎಸ್ಕೇಪ್‌ ಆಗ್ತಿತ್ತು. ಇದೀಗ ಅದಕ್ಕಿಂತಲೂ ಭಯಾನಕವಾದ ಗ್ಯಾಂಗ್‌ವೊಂದು ಉತ್ತರ ಪ್ರದೇಶದ ಮೀರತ್‌ನಲ್ಲಿ (UP’s Meerut) ಹುಟ್ಟಿಕೊಂಡಿದೆ.

    ಹೌದು.. ಇದಕ್ಕೆ ʻನಗ್ನ ಗ್ಯಾಂಗ್‌ ಅಥವಾ ಬೆತ್ತಲೆ ಗ್ಯಾಂಗ್‌ʼ (Nude Gang) ಅಂತ ಕರೆಯಲಾಗ್ತಿದೆ. ಬೆತ್ತಲೆಯಾಗಿ ಬರುವ ಈ ಗ್ಯಾಂಗ್‌ ಸದಸ್ಯರು ಮಹಿಳೆಯರನ್ನ ಹೊತ್ತೊಯ್ಯುತ್ತಿದ್ದಾರೆ. ಮೀರತ್‌ನಲ್ಲಿ ಇತ್ತೀಚೆಗೆ ಇಂತಹ ನಾಲ್ಕು ಪ್ರಕರಣ ವರದಿಯಾಗಿದ್ದು, ದೌರಾಲಾ ಗ್ರಾಮದ ಮಹಿಳೆಯರಲ್ಲಿ ನಡುಕ ಹುಟ್ಟಿಸಿದೆ. ರಾತ್ರಿ ವೇಳೆ ಮಹಿಳೆಯರು ಮನೆಯಿಂದಾಚೆ ಬರೋದಕ್ಕೆ ಭಯ ಪಡುವಂತಾಗಿದೆ. ವಿಷಯದ ಗಂಭೀರತೆ ಪರಿಗಣಿಸಿರುವ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಗ್ಯಾಂಗ್‌ ಪತ್ತೆಹಚ್ಚಲು ಡ್ರೋನ್‌, ಸಿಸಿಟಿವಿಗಳನ್ನು (Drone And CCTV) ಕಣ್ಗಾವಲಿಗೆ ಇರಿಸಲಾಗಿದೆ.

    ಈ ಕುರಿತು ದೌರಾಲಾ ಗ್ರಾಮದ ಮುಖ್ಯಸ್ಥ ರಾಜೇಂದ್ರ ಕುಮಾರ್ ಮಾತನಾಡಿ, ಕಳೆದ ಕೆಲ ದಿನಗಳಲ್ಲಿ ಮಹಿಳೆಯರನ್ನು ಹೊತ್ತೊಯ್ದ ನಾಲ್ಕು ಘಟನೆಗಳು ವರದಿಯಾಗಿವೆ. ಇದಕ್ಕೂ ಹಿಂದಿನ ಕೆಲ ಘಟನೆಗಳು ಜನರ ಭಯದಿಂದ ಬೆಳಕಿಗೆ ಬಂದಿಲ್ಲ. ಈ ಮೊದಲು ಗ್ರಾಮಸ್ಥರು ಇಲ್ಲಿನ ಘಟನೆಯನ್ನ ಗಂಭೀರವಾಗಿ ಪರಿಗಣಿಸಲಿಲ್ಲ. ಆದ್ರೆ ಈಗ ಪರಿಸ್ಥಿತಿ ಕೈಮೀರಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಈ ಗ್ಯಾಂಗ್‌ ಮಹಿಳೆಯರನ್ನೇ ಟಾರ್ಗೆಟ್‌ ಮಾಡಿ ಹೊತ್ತೊಯ್ಯುತ್ತಿದ್ದಾರೆ. ಪೊಲೀಸರು ಕೂಡಲೇ ಗ್ಯಾಂಗ್‌ಅನ್ನು ಪತ್ತೆಹಚ್ಚಬೇಕೆಂದು ಆಗ್ರಹಿಸಿದ್ದಾರೆ.

    ಸಿಸಿಟಿವಿ, ಡ್ರೋನ್‌ ಕಣ್ಗಾವಲು
    ಪ್ರಕರಣದ ಗಂಭೀರತೆ ಪರಿಗಣಿಸಿದ ಬಳಿಕ ಪೊಲೀಸರು ತನಿಖೆಗಿಳಿದಿದ್ದಾರೆ. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಹಲವು ಗಂಟೆಗಳ ಕಾಲ ಡ್ರೋನ್‌ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ. ಜೊತೆಗೆ ಹತ್ತಿರದ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಲಾಗಿದ್ದು, ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

    ಇನ್ನೂ ಈ ಪ್ರದೇಶದಲ್ಲಿ ಮಹಿಳಾ ಪೊಲೀಸರನ್ನ ಭದ್ರತೆಗೆ ನಿಯೋಜಿಸಲಾಗಿದ್ದು, ಶಂಕಿತರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಸ್ಥಳ ಪರಿಶೀಲನೆ ನಡೆಸಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ಟಾಡಾ ತಿಳಿಸಿದ್ದಾರೆ.

  • ನಾರಿಯರ ಅಂದ ಹೆಚ್ಚಿಸುವ ಮಸಾಬ ಬ್ಲೌಸ್ ಡಿಸೈನ್

    ನಾರಿಯರ ಅಂದ ಹೆಚ್ಚಿಸುವ ಮಸಾಬ ಬ್ಲೌಸ್ ಡಿಸೈನ್

    ಹೆಣ್ಣಿಗೆ ಸೀರೆ ಯಾಕೆ ಅಂದಾ! ಸೌಂದರ್ಯ ಪ್ರಿಯೇ ಹೆಣ್ಣಿಗೆ ಸೀರೆ ಎಂದರೆ ಅಚ್ಚುಮೆಚ್ಚು. ಸೀರೆಯುಟ್ಟ ನವಿಲಿನಂತೆ ಕಂಗೊಳಿಸುವ ಹೆಣ್ಣುಮಕ್ಕಳು ವಿವಿಧ ಶೈಲಿಯ, ಬಣ್ಣಗಳ, ಚಿತ್ತಾರದ ಸೀರೆಯನ್ನು ತುಂಬಾ ಇಷ್ಟಪಡುತ್ತಾರೆ. ಸೀರೆಗಳಲ್ಲೇ ನಾವು ಹಲವಾರು ವಿಧಗಳನ್ನ ಕಾಣಬಹುದು. ಕಾಟನ್ ಸೀರೆ, ರೇಷ್ಮೆ ಸೀರೆ, ಬನಾರಸಿ ಸೀರೆ, ಜಾರ್ಜೆಟ್ ಸೀರೆ ಇನ್ನೂ ಹಲವಾರು ವಿಧದ ಸೀರೆಗಳು ನಾರಿಮಣಿಯರನ್ನು ಸುಂದರವಾಗಿ ಕಾಣಿಸುತ್ತದೆ.

    ಬರೀ ಸೀರೆ ಬಗ್ಗೆ ಹೇಳಿದ್ರೆ ಸಾಕಾ? ಇಲ್ಲ ಸೀರೆಯ ಲುಕ್ ಬದಲಿಸುವ ಇನ್ನೊಂದು ಬಹಳ ಮುಖ್ಯವಾದ ವಿಷಯ ಇದೆ. ಅದೇನಂದ್ರೆ ಬ್ಲೌಸ್ ಡಿಸೈನ್ಸ್. ಹೌದು, ಸೀರೆಯ ಲುಕ್ ಅನ್ನ ಗ್ರ್ಯಾಂಡ್ ಆಗಿ ಮತ್ತು ಬ್ಯೂಟಿಫುಲ್ ಆಗಿ ಕಾಣುವಂತೆ ಮಾಡುವುದೇ ಬ್ಲೌಸ್ ಡಿಸೈನ್. ಸೀರೆ ಸಿಂಪಲ್ ಆಗಿದ್ರೂ, ಬ್ಲೌಸ್ ಡಿಸೈನ್‌ಯಿಂದ ನಮ್ಮ ಬ್ಯೂಟಿ ಕ್ವೀನ್ಸ್‌ಗಳನ್ನು ಮತ್ತಷ್ಟು ಸೌಂದರ್ಯವತಿಯನ್ನಾಗಿಸುತ್ತದೆ. ಅಬ್ಬಬ್ಬಾ ಈಗಂತೂ ಬ್ಲೌಸ್ ಡಿಸೈನ್‌ಗಳನ್ನ ನೋಡೋಕೆ ಹೋದ್ರೆ ಅಲ್ಲೇ ಕನ್ಫ್ಯೂಸ್ ಆಗಿಬಿಡುತ್ತೇವೆ.

    ದಿನಕ್ಕೊಂದು ಸೀರೆಗಳ ಟ್ರೆಂಡ್ ಹೇಗೆ ಬದಲಾಗುತ್ತದೆಯೋ ಅದೇ ರೀತಿ ಡಿಸೈನರ್ಸ್‌ ಕೂಡ ತಾ ಮುಂದು ನಾ ಮುಂದು ಅಂತ ಹೊಸ ಹೊಸ ಡಿಸೈನ್ಸ್ ಗಳ ಮೂಲಕ ಅವರ ಕೈಚಳಕ ತೋರಿಸುತ್ತಿದ್ದಾರೆ. ದಿನೇ ದಿನೇ ಫ್ಯಾಶನ್ ವರ್ಲ್ಡ್‌ನಲ್ಲಿ ಟ್ರೆಂಡ್ ಚೇಂಜ್ ಆಗುತ್ತಿದ್ದು, ಇದೀಗ ಮಸಾಬ ಬ್ಲೌಸ್ ಡಿಸೈನ್ಸ್ ಸೆಲೆಬ್ರಿಟಿಗಳ ಮನ ಗೆದ್ದಿದೆ. ಮಾಡರ್ನ್ ಹಾಗೂ ಕಾಸಿಕ್ ವೇರ್‌ಗೂ ಮ್ಯಾಚ್ ಆಗುವ ಈ ಡಿಸೈನ್ ಈಗ ಸಖತ್ ಟ್ರೆಂಡ್ ನಲ್ಲಿದೆ.

    ಬಾಲಿವುಡ್ ನಿಂದ ಹಿಡಿದು ಸ್ಯಾಂಡಲ್‌ವುಡ್ ವರೆಗಿನ ತಾರೆಯರು ಈ ಡಿಸೈನ್‌ಗೆ ಮಾರುಹೋಗಿದ್ದಾರೆ. ಸಿಂಪಲ್ ಆಗಿದ್ರುನೂ ಸಖತ್ ಸ್ಟೈಲಿಶ್ ಹಾಗೂ ಬೋಲ್ಡ್ ಆಗಿ ಕಾಣಿಸುತ್ತದೆ. ಈಗ ಸೆಲೆಬ್ರಿಟಿಗಳಿಂದ ಹಿಡಿದು ಎಲ್ಲರೂ ಈ ಒಂದು ಪ್ಯಾಟ್ರನ್‌ ಬ್ಲೌಸ್‌ನಲ್ಲಿ ಮಿಂಚುತ್ತಿರುತ್ತಾರೆ. ಹುಡುಗಿರಂತೂ ಕಾಲೇಜ್ ಡೇ, ಮದುವೆ, ಫ್ರೆಶರ್ ಪಾರ್ಟಿ ಅಂತ ಸೀರೆ ತೆಗೆದುಕೊಳ್ಳುವಾಗ ಟ್ರೆಂಡಿಂಗ್ ಡಿಸೈನ್‌ಗಳತ್ತ ನೋಡ್ತಾ ಇರ್ತಾರೆ.

    ಮಸಾಬ ಬ್ಲೌಸ್‌ನ ವಿಶೇಷತೆಗಳು:

    ಸೀರೆ ಫ್ಯಾಬ್ರಿಕ್ ಆಗಿರಲಿ, ಕಾಟನ್ ಆಗಿರಲಿ, ರೇಷ್ಮೆ ಅಥವಾ ಜಾರ್ಜೆಟ್ ಆಗಿರಲಿ ಎಲ್ಲಾ ಬಗೆಯ ಸೀರೆಗೆ ಈ ಬ್ಲೌಸ್‌ ಡಿಸೈನ್‌ ಸೂಟ್‌ ಆಗುತ್ತೆ ಎಂಬುವುದೇ ಇದರ ಮತ್ತೊಂದು ವಿಶೇಷತೆ. ನೀವು ಇತ್ತೀಚೆಗೆ ಬಿಗ್‌ಬಾಸ್‌ನಲ್ಲಿ ಖ್ಯಾತಿಯ ಮೋಕ್ಷಿತ ಪೈ ಇತ್ತೀಚಿಗಷ್ಟೇ ಕೊಲ್ಲೂರು ಮೂಕಾಂಬಿಕೆ ದೇವಾಲಯಕ್ಕೆ ಭೇಟಿ ನೀಡಿದಾಗ ಇದೇ ಮಸಾಬ ಡಿಸೈನ್ ಬ್ಲೌಸ್ ನಲ್ಲಿ ಮಿಂಚಿದರು. ಅಲ್ಲದೆ ಗಿಣಿರಾಮ ಖ್ಯಾತಿಯ ಕಾವೇರಿ ಬಾಗಲಕೋಟೆ ಸಹ ಇದೆ ಬ್ಲೌಸ್ ಡಿಸೈನ್‌ನಲ್ಲಿ ಸಖತ್ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದರು.

    ನೀವು ಈ ಡಿಸೈನ್‌ ಬ್ಲೌಸ್ ಸ್ಟಿಚ್‌ ಮಾಡಿ ಗ್ರ್ಯಾಂಡ್‌ ಸೀರೆಗೆ ಹಾಕಬಹುದು. ಸಿಂಪಲ್‌ ಸೀರೆಗೂ ಬಳಸಬಹುದು. ಈ ಲುಕ್‌ ಸಖತ್ ಸ್ಟೈಲಿಷ್‌ ಲುಕ್‌ ನೀಡುತ್ತದೆ. ಅಲ್ಲದೆ ನಿಮಗೆ ಟ್ರೆಂಡಿ ಲುಕ್‌ ಕೂಡಾ ನೀಡುತ್ತದೆ. ಮಾಡ್ರನ್ ಲುಕ್ ಕೊಟ್ಟ ಮಸಾಬ ಬ್ಲೌಸ್ ಧರಿಸಿ ನ್ಯಾಷನಲ್ ಕ್ರಷ್ ರಶ್ಮಿಕ ಮಂದಣ್ಣ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹಾಟ್ ಆ್ಯಂಡ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.

    ಅಲ್ಲದೆ ಬಾಲಿವುಡ್‌ನ ನಟಿ ಶಾರ್ವರಿ ಸಹ ಹಳದಿ ಬಣ್ಣದ ಸೀರೆ ಉಟ್ಟು, ಮಸಾಬ ಬ್ಲೌಸ್ ಧರಿಸಿ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ್ದರು. ಟಾಲಿವುಡ್‌ನ ಸುಂದ್ರಿ, ಮಿಲ್ಕಿ ಬ್ಯೂಟಿ ಎಂದೇ ಹೆಸರುವಾಸಿಯಾಗಿರುವ ತಮನ್ನಾ ಭಾಟಿಯಾ ಮಾಡ್ರನ್ ಡ್ರೆಸ್ಸಿಗೆ ಹಸಿರು ಬಣ್ಣದ ಮಸಾಬ ಬ್ಲೌಸ್ ಧರಿಸಿದ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು.

    ಸ್ಲೀವ್‌ಲೆಸ್‌ ಅಥವಾ ಫುಲ್‌ಸ್ಲಿವ್ ರೀತಿಯಲ್ಲೂ ಇದನ್ನೂ ಧರಿಸಬಹುದು. ಹೀಗಾಗಿ ಸ್ಲೀವ್‌ಲೆಸ್‌ ಹಾಕುವುದೇ ಇಲ್ಲ ಎನ್ನುವವರು ಕೂಡ ಈ ಬ್ಲೌಸ್‌ ಡಿಸೈನ್‌ ಟ್ರೈ ಮಾಡಬಹುದು. ಟ್ರೆಡಿಷನಲ್ ಮತ್ತು ಮಾಡ್ರನ್ ಸೀರೆಗಳಿಗೆ ಮ್ಯಾಚ್ ಆಗುವ ಈ ಬ್ಲೌಸ್‌ನಲ್ಲಿ ನೀವೂ ಕೂಡಾ ಸೆಲೆಬ್ರಿಟಿಗಳ ರೀತಿಯಲ್ಲಿ ಪಾರ್ಟಿ, ಮದುವೆ ಇನ್ನಿತರ ಸಮಾರಂಭಗಳಲ್ಲಿ ಮಿಂಚಬಹುದು.

    ನೀವು ಧರಿಸುವ ಸೀರೆ, ಹೇರ್‌ ಸ್ಟೈಲ್, ಅಲಂಕಾರದ ಪ್ರಕಾರ ನಿಮ್ಮ ಲುಕ್ ಬದಲಾಗುವುದು. ಮಸಾಬ ಬ್ಲೌಸ್‌ನ ಬ್ಯಾಕ್‌ ಡಿಸೈನ್ ನಿಮಗೆ ಇಷ್ಟವಾಗುವಂತೆ ಸ್ಟಿಚ್‌ ಮಾಡಿಸಬಹುದು. ಅಲ್ಲದೆ ಇದು ಬ್ಯಾಕ್ ಬಟನ್ ಬ್ಲೌಸ್ ಆಗಿದೆ. ಇನ್ನು ಬೆನ್ನಿನ ಭಾಗಕ್ಕೆ ಥ್ರೆಡ್‌ ಅನ್ನು ಪ್ಲೈನ್ ಆಗಿ ಇಡಬಹುದು. ಇಲ್ಲದಿದ್ದರೆ ಆ ದಾರದ ಮೂಲಕವೇ ಮತ್ತಷ್ಟು ಟ್ರೆಂಡಿ ಆಗಿ ಕಾಣುವಂತೆ ವಿನ್ಯಾಸ ಮಾಡಬಹುದು.

    ಈ ವಿನ್ಯಾಸಕ್ಕೆ ಸೀರೆಯ ಸೆರಗು ಸಿಂಗಲ್‌ ಪಿನ್ ರೀತಿಯಲ್ಲಿ ಜೋತು ಬಿಟ್ಟರೆ ಇನ್ನಷ್ಟು ಚೆನ್ನಾಗಿ ಕಾಣುತ್ತದೆ. ಈ ಮಸಾಬ ಬ್ಲೌಸ್ ಡಿಸೈನ್ ಅನ್ನು ಕೇವಲ ಸೀರೆಗಳಿಗೆ ಮಾತ್ರ ಧರಿಸದೆ, ಲಂಗ ದಾವಣಿ ಅಥವಾ ಸ್ಕರ್ಟ್ ಆ್ಯಂಡ್ ಬ್ಲೌಸ್ ರೀತಿಯಲ್ಲಿ ಧರಿಸಿದರೆ ಟ್ರೆಂಡಿ ಹಾಗೂ ಬೋಲ್ಡ್ ಆಗಿ ಕಾಣಿಸುತ್ತೀರಾ. ಪಾರ್ಟಿ ಅಥವಾ ಮದುವೆ ಸಮಾರಂಭಗಳಲ್ಲಿ ಈ ವಿನ್ಯಾಸದ ಬ್ಲೌಸ್‌ಗಳನ್ನ ಧರಿಸಿ ಟ್ರೆಂಡಿ ಹಾಗೂ ಡಿಫ್ರೆಂಟ್ ಆಗಿ ಕಾಣಿಸಿಕೊಳ್ಳಿ.

  • ದಾವಣಗೆರೆ| ಬಟ್ಟೆ ತೊಳೆಯಲು ಹೋಗಿದ್ದ ಮೂವರು ಮಹಿಳೆಯರು ನೀರಿನಲ್ಲಿ ಮುಳುಗಿ ಸಾವು

    ದಾವಣಗೆರೆ| ಬಟ್ಟೆ ತೊಳೆಯಲು ಹೋಗಿದ್ದ ಮೂವರು ಮಹಿಳೆಯರು ನೀರಿನಲ್ಲಿ ಮುಳುಗಿ ಸಾವು

    ದಾವಣಗೆರೆ: ಬಟ್ಟೆ ತೊಳೆಯಲು (Cloth Wash) ಹೋಗಿದ್ದ ಮೂವರು ಮಹಿಳೆಯರು ಕಾಲು ಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ.

    ದೀಪಾ (28), ಚಂದನಾ (19), ದೀಪಾ (23) ಸಾವನ್ನಪ್ಪಿದ ಮಹಿಳೆಯರು. ಮಹಿಳೆಯರು ಲಕ್ಷ್ಮೀ ಸಾಗರ ಗ್ರಾಮದ ಹೊಸ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದರು. ಚನ್ನಗಿರಿ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಕೆರೆಯಿಂದ ಮೇಲೆತ್ತಿದ್ದಾರೆ. ಇದನ್ನೂ ಓದಿ: ಹಳೆ ವೈಷಮ್ಯಕ್ಕೆ ಚಾಕುವಿನಿಂದ 30 ಬಾರಿ ಇರಿದು ಹತ್ಯೆ – ಬಳಿಕ ಪೊಲೀಸರಿಗೆ ಶರಣಾದ ಆರೋಪಿಗಳು

    ಸ್ಥಳಕ್ಕೆ ತಹಶೀಲ್ದಾರ್ ನಾಗರಾಜ್ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಅಪ್ಪು ಮಾಮ ಎಲ್ಲೇ ಇದ್ರೂ ನಗು ನಗುತ್ತಾ ಚೆನ್ನಾಗಿರು: ಶ್ರೀಮುರಳಿ

  • 3ನೇ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ಬಂಪರ್‌ – ಹೆಣ್ಣು ಜನಿಸಿದ್ರೆ 50,000 ರೂ., ಗಂಡು ಜನಿಸಿದ್ರೆ ಹಸು ಗಿಫ್ಟ್‌!

    3ನೇ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ಬಂಪರ್‌ – ಹೆಣ್ಣು ಜನಿಸಿದ್ರೆ 50,000 ರೂ., ಗಂಡು ಜನಿಸಿದ್ರೆ ಹಸು ಗಿಫ್ಟ್‌!

    ಅಮರಾವತಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Womens Day) ಕಾರ್ಯಕ್ರಮದ ವೇಳೆ ತೆಲುಗು ದೇಶಂ ಪಕ್ಷ (TDP)ದ ಸಂಸದ ಕಾಳಿಸೆಟ್ಟಿ ಅಪ್ಪಲನಾಯ್ಡು ಅವರು, 3ನೇ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ಬಂಪರ್‌ ಕೊಡುಗೆ ಘೋಷಣೆ ಮಾಡಿದ್ದಾರೆ. ಇದು ಆಂಧ್ರಪ್ರದೇಶದಲ್ಲಿ (Andhra Pradesh) ಭಾರೀ ಸಂಚಲನ ಸೃಷ್ಟಿಸಿದೆ.

    ಪ್ರಕಾಶಂ ಜಿಲ್ಲೆಯ ಮಾರ್ಕಾಪುರದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ, ಮಹಿಳೆಯೊಬ್ಬರು 3ನೇ ಮಗುವಿಗೆ ಜನ್ಮ ನೀಡಿದ್ರೆ ವಿಶೇಷ ಉಡುಗೊರೆ ನೀಡಲಾಗುವುದು. ಹೆಣ್ಣು ಮಗುವಿಗೆ ಜನ್ಮ ನೀಡಿದ್ರೆ ನನ್ನ ಸ್ವಂತ ವೇತನದಲ್ಲಿ 50,000 ರೂ., ಗಂಡು ಮಗುವಿಗೆ ಜನ್ಮ ನೀಡಿದ್ರೆ 1 ಹಸುವನ್ನು ಉಡಗೊರೆಯಾಗಿ ಕೊಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಸಂಸದರು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: Champions Trophy Final: ಟೀಂ ಇಂಡಿಯಾ ಗೆಲುವಿಗಾಗಿ ಅಭಿಮಾನಿಗಳಿಂದ ದೇವರಿಗೆ ವಿಶೇಷ ಪೂಜೆ

    ಜನಸಂಖ್ಯೆ ಬೆಳವಣಿಗೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕರೆಗಳ ಮೇರೆಗೆ ಈ ವಿಶೇಷ ಉಡುಗೊರೆಗಳನ್ನು ಘೋಷಣೆ ಮಾಡಲಾಗಿದೆ. ಮಹಿಳೆಯರು ಹೆಚ್ಚು ಮಕ್ಕಳನ್ನು ಹೊಂದಬೇಕೆಂದು ಹೇಳುತ್ತಿದ್ದೇವೆ. ಹೀಗಾಗಿ 3ನೇ ಮಗು ಜನಿಸಿದ್ರೆ ಪ್ರೋತ್ಸಾಹ ಧನ ನೀಡಲು ಮುಂದಾಗಿದ್ದೇವೆ ಸಂಸದ ಅಪ್ಪಲನಾಯ್ಡು ತಿಳಿಸಿದ್ದಾರೆ.

    ಕೆಲ ದಿನಗಳ ಹಿಂದೆ ಚಂದ್ರಬಾಬು ನಾಯ್ಡು ಅವರು, ಮಹಿಳೆಯರು ಸಂಖ್ಯೆಯನ್ನು ಲೆಕ್ಕಿಸದೇ ಹೆಚ್ಚೆಚ್ಚು ಮಕ್ಕಳನ್ನು ಮಾಡಿಕೊಳ್ಳಿ. ಅದಕ್ಕಾಗಿ ಉದ್ಯೋಗಸ್ಥ ಮಹಿಳೆಯರಿಗೆ ವೇತನ ಸಹಿತ ಹೆರಿಗೆ ರಜೆ ನೀಡಲಾಗುವುದು ಎಂದು ಘೋಷಣೆ ಮಾಡಿದ್ದರು. ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌ ಅವರು ಸಹ 2026ರ ಒಳಗೆ ಮಹಿಳೆಯರು ಹೆಚ್ಚೆಚ್ಚು ಮಕ್ಕಳನ್ನು ಮಾಡಿಕೊಳ್ಳುವಂತೆ ಕರೆ ನೀಡಿದ್ದರು. ಇದನ್ನೂ ಓದಿ: ‘ಹುಡುಗರು’ ಚಿತ್ರದಲ್ಲಿ ಅಪ್ಪು ತಂಗಿ ಪಾತ್ರ ಮಾಡಿದ್ದ ಅಭಿನಯಗೆ ಮದುವೆ ಫಿಕ್ಸ್

  • Women’s Day | ಈ ಬಾರಿಯ ಥೀಮ್‌ – ಆಕ್ಸಲರೇಟ್‌ ಆಕ್ಷನ್‌ ಎಂದರೇನು?

    Women’s Day | ಈ ಬಾರಿಯ ಥೀಮ್‌ – ಆಕ್ಸಲರೇಟ್‌ ಆಕ್ಷನ್‌ ಎಂದರೇನು?

    ಹಿಂದಿನಕಾಲದಲ್ಲಿ ಹೆಣ್ಣು ಎಂದರೆ ಆಕೆ ಮನೆಗೆಲಸಕ್ಕೆ ಮಾತ್ರ ಸೀಮಿತ ಎಂದು ಹೇಳುತ್ತಿದ್ದವರಿಗೆ ಇಂದು ಮಹಿಳೆಯರು ಯಾರಿಗೂ, ಯಾವುದಕ್ಕೂ ಕಮ್ಮಿ ಇಲ್ಲ ಎಂದು ತೋರಿಸಿಕೊಡುತ್ತಿದ್ದಾರೆ. ಹೆಣ್ಣು ಅಬಲೆಯಲ್ಲ ಆಕೆ ಸಬಲೆ ಎಂಬ ಮಾತಿಗೆ ಉದಾಹರಣೆಯಂತೆ ಜಗತ್ತಿನ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡು ಮುಂದುವರೆಯುತ್ತಿದ್ದಾರೆ. ರಾಜಕೀಯವಾಗಲಿ, ಕ್ರೀಡೆಯಾಗಲಿ, ಶಿಕ್ಷಣವಾಗಲಿ ಪ್ರತಿಯೊಂದರಲ್ಲೂ ಮಹಿಳೆಯರು ತಮ್ಮ ಚಾಪನ್ನು ಮೂಡಿಸಿದ್ದಾರೆ.

    ಪತ್ರಿವರ್ಷ ಮಾರ್ಚ್‌ 8ನ್ನು ಮಹಿಳಾ ದಿನವಾಗಿ ಆಚರಿಸಲಾಗುತ್ತದೆ. ಅಂದು ಹೆಣ್ಣುಮಕ್ಕಳ ಸಾಧನೆಯನ್ನು ನೆನೆಯುವ ದಿನ. ಹಲವಾರು ಸಮಸ್ಯೆಗಳನ್ನು ಮೆಟ್ಟಿ ನಿಂತು ಮಹಿಳೆಯರು ಬಹುತೇಕ ರಂಗದಲ್ಲಿ ತಮ್ಮನ್ನು ತಾನು ಗುರುತಿಸಿಕೊಂಡಿದ್ದಾರೆ. ದೌರ್ಜನ್ಯ, ದಬ್ಬಾಳಿಕೆ, ಹಿಂಸೆಯಂತಹ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಹಲವಾರು ಕ್ಷೇತ್ರಗಳಲ್ಲಿ ಪುರುಷರಷ್ಟೇ ಸರಿಸಮಾನವಾಗಿ ಮುಂದುವರಿದಿದ್ದಾರೆ. ಕ್ರೀಡೆಯಲ್ಲಿ, ಸೈನ್ಯದಲ್ಲಿ, ಬಾಹ್ಯಾಕಾಶದಲ್ಲಿ, ಯುದ್ಧ ವಿಮಾನಗಳಲ್ಲಿ ಮಹಿಳೆಯರು ಮಹತ್ತರ ಸಾಧನೆ ಮಾಡಿ, ಯಾವ ಪುರುಷರಿಗೂ ತಾವು ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ.

    ಆಕ್ಸಲರೇಟ್‌ ಆಕ್ಷನ್‌ (Accelerate Action)
    ಈ ಬಾರಿಯ ಮಹಿಳೆಯರ ದಿನವನ್ನು ʻಆಕ್ಸಲರೇಟ್‌ ಆಕ್ಷನ್‌ʼಥೀಮ್‌ನಲ್ಲಿ ಆಚರಿಸಲಾಗುತ್ತದೆ. ಮನ್ನುಗ್ಗು, ಧೈರ್ಯದಿಂದ ಮಾತನಾಡು, ಸಮಾನತೆಗಾಗಿ ಹೋರಾಡು ಎಂದು ಮಹಿಳೆಯರಿಗೆ ಅವರ ನಿಲುವುಗಳನ್ನು ತೆಗೆದುಕೊಳ್ಳಲು ಹುರಿದುಂಬಿಸಲಾಗುತ್ತದೆ.

    ಮಹಿಳಾ ದಿನಾಚರಣೆಯನ್ನು ಕಳೆದ ಒಂದು ಶತಕದಿಂದಲೂ ಆಚರಿಸಲಾಗುತ್ತಿದೆ. 1911ರಲ್ಲಿ ಡೆನ್ಮಾರ್ಕ್‌, ಆಸ್ಷ್ರೇಲಿಯಾ, ಜಮರ್ನಿ, ಸ್ವಿಜರ್‌ಲ್ಯಾಂಡ್ ದೇಶಗಳಲ್ಲಿ ಜನರು ಒಂದು ಕಡೆ ಸೇರುವ ಮೂಲಕ ಮಹಿಳಾ ದಿನಾಚರಣೆಯನ್ನು ಆಚರಿಸಲು ಆರಂಭಿಸಿದರು. ನಂತರ ಅಮೆರಿಕ, ಬ್ರಿಟನ್‌ಗಳು ಸೇರಿದಂತೆ ಹಲವು ದೇಶಗಳಲ್ಲಿನ ಮಹಿಳೆಯರನ್ನು ಗೌರವಿಸುವ ಮೂಲಕ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿತ್ತು.

    ಅಂತರಾಷ್ಟ್ರೀಯ ಮಹಿಳೆಯರ ದಿನವನ್ನು ಪ್ರಥಮ ಬಾರಿಗೆ ಕಾರ್ಮಿಕ ಚಳುವಳಿಯ ಮೂಲಕ ಉತ್ತರ ಅಮೆರಿಕ ಮತ್ತು ಯೂರೋಪ್ ದೇಶಗಳಲ್ಲಿ ಪ್ರಾರಂಭಿಸಲಾಯಿತು. ಮಹಿಳಾ ದಿನಾಚರಣೆ ಮೂಲಕ ಲಿಂಗ ಸಮಾನತೆ ರೂಪಿಸುವಲ್ಲಿ ಪ್ರತಿಯೊಬ್ಬರ ಪಾತ್ರವಿದೆ ಎಂಬ ಅಂಶವನ್ನು ಸಾರಲು ಈ ದಿನವನ್ನು ಆಚರಿಸಲಾಯಿತು. ಅಲ್ಲದೇ ದೇಶಕ್ಕೆ, ಪ್ರಪಂಚಕ್ಕೆ ಮಹಿಳಾ ಸಾಧಕರ ಕೊಡುಗೆಗಳನ್ನು ನೆನೆದು ಸಾರುವ ದಿನವಾಗಿದೆ. 18 ಮತ್ತು 19 ನೇ ಶತಮಾನದಲ್ಲಿ ಹಲವು ಮಹಿಳೆಯರು ಲಿಂಗ ಸಮಾನತೆಗಾಗಿ ಹೋರಾಟ ನಡೆಸಿದ್ದಾರೆ. ಮತದಾನ, ಸಮಾನ ಕೆಲಸ, ಸಮಾನ ವೇತನಕ್ಕಾಗಿ ಹೋರಾಟವನ್ನು ನಡೆಸಿದ್ದರು.

    ಭಾರತದಲ್ಲೇ ಕಲ್ಪನಾ ಚಾವ್ಲಾ, ಕಿರಣ್‌ ಬೇಡಿ, ಮೇರಿ ಕೋಮ್‌, ಸಾಲುಮರದ ತಿಮ್ಮಕ್ಕ, ಇಂದಿರಾಗಾಂಧಿ, ಸೈನಾ ನೆಹ್ವಾಲ್‌, ಸುಧಾಮೂರ್ತಿ ಹಲವಾರು ಮಹಿಳೆಯರು ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ. ಈ ಸಾಧಕರ ಸಾಲಿಗೆ ಇನ್ನಷ್ಟು ಮಹಿಳೆಯರು ಸೇರಬೇಕು. ಹೆಣ್ಣು ಯಾವುದಕ್ಕೂ ಕಡಿಮೆಯಿಲ್ಲ ಎಂದು ಇಡೀ ಜಗತ್ತಿಗೆ ಒತ್ತಿ ಒತ್ತಿ ಹೇಳಬೇಕು.

    ಹೆಣ್ಣುಮಕ್ಕಳು ಯಾರಿಗೂ ಕಮ್ಮಿ ಇಲ್ಲ ಎಂದೆಲ್ಲಾ ಹೇಳಿದರೂ ಸಹ ಆಕೆಯ ಮೇಲೆ ದೌರ್ಜನ್ಯ, ಅತ್ಯಾಚಾರ, ಹೀಯಾಳಿಸುವುದು, ಕಿರುಕುಳ ಪ್ರಕರಣಗಳಂತೂ ದೇಶದಲ್ಲಿ ಕೇಳಿ ಬರುತ್ತಲೇ ಇದೆ. ಹೆಣ್ಣನ್ನೂ ದೇವತೆಯೆಂದು ಪೂಜಿಸುವ ನಮ್ಮ ದೇಶದಲ್ಲೇ ಆಕೆಯನ್ನು ಅಮಾನುಷವಾಗಿ ನಡೆಸಿಕೊಂಡಿರುವ ಹಲವಾರು ಘಟನೆಗಳಿವೆ. ಮಹಿಳಾ ದಿನಾಚರಣೆ ಕೇವಲ ಆಚರಣೆ ಮಾತ್ರ ಆಗಬಾರದು ಆಕೆಗೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ, ಗೌರವ, ಸಮಾನತೆ, ಸ್ವಾತಂತ್ರ್ಯ ಎಲ್ಲವು ಸಿಗುವಂತಾಗಬೇಕು.

    ಅಂತರರಾಷ್ಟ್ರೀಯ ಮಹಿಳಾ ದಿನದ ಹಿನ್ನಲೆ ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುತ್ತಿದ್ದು ಈ ಕಾರ್ಯಕ್ರಮದ ಭದ್ರತಾ ವ್ಯವಸ್ಥೆಯನ್ನು ಸಂಪೂರ್ಣ ಮಹಿಳಾ ಪೊಲೀಸ್ ಸಿಬ್ಬಂದಿಯೇ ನಿರ್ವಹಿಸುತ್ತಿರುವುದು ಈ ಬಾರಿಯ ಮಹಿಳಾ ದಿನಾಚರಣೆಯ ವಿಶೇಷವಾಗಿದೆ.

  • ಮರಳು ತುಂಬಿದ್ದ ಲಾರಿ ಪಲ್ಟಿ – ರಸ್ತೆಬದಿ ಕೆಲಸ ಮಾಡ್ತಿದ್ದ ಮೂವರು ಮಹಿಳೆಯರು, ಮಗು ದುರ್ಮರಣ

    ಮರಳು ತುಂಬಿದ್ದ ಲಾರಿ ಪಲ್ಟಿ – ರಸ್ತೆಬದಿ ಕೆಲಸ ಮಾಡ್ತಿದ್ದ ಮೂವರು ಮಹಿಳೆಯರು, ಮಗು ದುರ್ಮರಣ

    ಗಾಂಧಿನಗರ: ಮರಳು ತುಂಬಿದ್ದ ಲಾರಿ ಪಲ್ಟಿಯಾದ ಪರಿಣಾಮ ರಸ್ತೆಬದಿ ಕೆಲಸ ಮಾಡುತ್ತಿದ್ದ ಮೂವರು ಮಹಿಳೆಯರು ಹಾಗೂ ಒಂದು ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ಗುಜರಾತ್‌ನ (Gujarat) ಬನಸ್ಕಂತ (Banaskantha) ಜಿಲ್ಲೆಯ ಥರಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕಿರಿದಾದ ತಿರುವಿನಲ್ಲಿ ಲಾರಿ (Lorry) ಚಾಲಕ ವಾಹನ ಚಲಾಯಿಸಲು ಪ್ರಯತ್ನಿಸಿದ ವೇಳೆ ಲಾರಿ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಮೈದಾನದಲ್ಲಿ ಫೀಲ್ಡಿಂಗ್‌ ವೇಳೆ ಹಣೆಗೆ ಬಡಿದ ಚೆಂಡು – ರಕ್ತ ಸೋರುತ್ತಲೇ ಹೊರನಡೆದ ರಚಿನ್‌ ರವೀಂದ್ರ

    ಘಟನೆಯ ನಂತರ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಜೆಸಿಬಿ ಬಳಸಿ ಮೃತರ ಶವಗಳನ್ನು ಹೊರತೆಗೆಯಲಾಗಿದೆ. ಮೃತರು ದಾಹೋದ್ ಜಿಲ್ಲೆಯವರಾಗಿದ್ದು, ಕೆಲಸಕ್ಕಾಗಿ ಬಂದಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಕಾಶಿ | ನದಿಸ್ನಾನ ಮಾಡುವಾಗ ಮುಳುಗಿ ಬಾಗಲಕೋಟೆಯ ವ್ಯಕ್ತಿ ಸಾವು

  • ಮಹಿಳೆಯರಿಗೆ ಹಣ| ರಾಜ್ಯದ ಹಣಕಾಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತೆ: ಎಸ್‌ಬಿಐ ಎಚ್ಚರಿಕೆ

    ಮಹಿಳೆಯರಿಗೆ ಹಣ| ರಾಜ್ಯದ ಹಣಕಾಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತೆ: ಎಸ್‌ಬಿಐ ಎಚ್ಚರಿಕೆ

    – ಆಯ್ದ ರಾಜ್ಯಗಳ ಹಣಕಾಸು ಸ್ಥಿತಿ ಏರುಪೇರಾಗಬಹುದು

    ನವದೆಹಲಿ: ವಿವಿಧ ರಾಜ್ಯಗಳು ಘೋಷಿಸಿರುವ ಮಹಿಳಾ ಕೇಂದ್ರಿತ ನೇರ ಲಾಭ (DBT) ವರ್ಗಾವಣೆ ಯೋಜನೆಗಳು ರಾಜ್ಯದ ಹಣಕಾಸಿನ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವರದಿಯೊಂದು ಎಚ್ಚರಿಸಿದೆ.

    ಮಹಿಳೆಯರಿಗೆ ನೇರವಾಗಿ ಹಣವನ್ನು ವರ್ಗಾಯಿಸುವ ಗುರಿಯನ್ನು ಹೊಂದಿರುವ ಈ ಯೋಜನೆಗಳು ಇತ್ತೀಚಿನ ವರ್ಷಗಳಲ್ಲಿ ಚುನಾವಣೆ (Election) ಸಂದರ್ಭದಲ್ಲಿ ಘೋಷಣೆಯಾಗುತ್ತಿವೆ. ಅಂತಹ ಉಪಕ್ರಮಗಳು ರಾಜ್ಯ ಹಣಕಾಸಿನ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಬಹುದು ಎಂದು ವರದಿ ತಿಳಿಸಿದೆ.

    ಎಂಟು ರಾಜ್ಯಗಳಲ್ಲಿ ಈ ಯೋಜನೆಗಳ ಒಟ್ಟು ವೆಚ್ಚವು ಈಗ 1.5 ಲಕ್ಷ ಕೋಟಿ ರೂ.ಗಳನ್ನು ದಾಟಿದೆ. ಇದು ಈ ರಾಜ್ಯಗಳ ಆದಾಯದ 3-11 ಪ್ರತಿಶತದಷ್ಟಿದೆ ಎಂದು ವರದಿಯು ಹೈಲೈಟ್ ಮಾಡಿದೆ.

    ಒಡಿಶಾದಂತಹ ಕೆಲವು ರಾಜ್ಯಗಳು ಹೆಚ್ಚಿನ ತೆರಿಗೆಯೇತರ ಆದಾಯ ಮತ್ತು ಸಾಲದ ಅವಶ್ಯಕತೆಗಳಿಂದಾಗಿ ಈ ವೆಚ್ಚಗಳನ್ನು ಭರಿಸಲು ಉತ್ತಮ ಸ್ಥಿತಿಯಲ್ಲಿದ್ದರೂ ಇನ್ನೂ ಅನೇಕ ರಾಜ್ಯಗಳು ಹಣಕಾಸಿನ ಸವಾಲುಗಳನ್ನು ಎದುರಿಸಬಹುದು ಎಂದು ವರದಿ ಹೇಳಿದೆ. ಇದನ್ನೂ ಓದಿ: ಭಾರತಕ್ಕೆ ಜಯ – ಮುಂಬೈ ದಾಳಿಕೋರ ತಹಾವೂರ್ ರಾಣಾ ಹಸ್ತಾಂತರಕ್ಕೆ ಅಮೆರಿಕ ಸುಪ್ರೀಂ ಅನುಮತಿ

    ಯಾವ ರಾಜ್ಯದಲ್ಲಿ ಎಷ್ಟು ಹಣ ನಿಗದಿ?
    ಕುಟುಂಬದ ಓರ್ವ ಮಹಿಳೆಗೆ ತಿಂಗಳಿಗೆ 2,000 ರೂ. ಒದಗಿಸುವ ಕರ್ನಾಟಕದ (Karnataka) ಗೃಹ ಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇದು ರಾಜ್ಯದ ಆದಾಯದ 11% ರಷ್ಟಿದೆ.

    ಆರ್ಥಿಕವಾಗಿ ದುರ್ಬಲ ವರ್ಗಗಳ ಮಹಿಳೆಯರಿಗೆ 1,000 ರೂ. ಅನುದಾನವನ್ನು ನೀಡುವ ಪಶ್ಚಿಮ ಬಂಗಾಳದ ಲಕ್ಷ್ಮಿ ಭಂಡಾರ್ ಯೋಜನೆಗೆ 14,400 ಕೋಟಿ ರೂ. ಮೀಸಲಿಡಲಾಗಿದೆ. ಇದು ರಾಜ್ಯದ ಆದಾಯದ 6% ರಷ್ಟಿದೆ.

    ವಯಸ್ಕ ಮಹಿಳೆಯರಿಗೆ ತಿಂಗಳಿಗೆ ರೂ. 1,000 ರೂ. ಭರವಸೆ ನೀಡುವ ದೆಹಲಿಯ ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಗೆ 2,000 ಕೋಟಿ ರೂ. ಅಗತ್ಯವಿದೆ. ಇದು ರಾಜ್ಯದ ಆದಾಯದ 3% ರಷ್ಟಿದೆ.

    ಮಹಿಳೆಯರಿಗೆ ಹಣ ನೀಡುವ ಭರವಸೆಯ ಪ್ರವೃತ್ತಿ ಹೆಚ್ಚುತ್ತಿರುವ ಕಾರಣ ಕೇಂದ್ರ ಸರ್ಕಾರ ಇದೇ ರೀತಿಯ ನೀತಿಗಳನ್ನು ಅಳವಡಿಸಿಕೊಳ್ಳಲು ಒತ್ತಡಕ್ಕೊಳಗಾಗಬಹುದು ಎಂದು ಎಸ್‌ಬಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

    ಮಹಿಳೆಯರ ಸಬಲೀಕರಣ ಮತ್ತು ಚುನಾವಣಾ ಬೆಂಬಲ ಪಡೆಯಲು ಘೋಷಣೆಯಾಗುವ ಯೋಜನೆಗಳನ್ನು ಜಾರಿಗೆ ತರುವ ಮೊದಲು ರಾಜ್ಯಗಳು ತನ್ನ ಹಣಕಾಸಿನ ಸ್ಥಿತಿಗತಿ, ಸಾಲದ ಪ್ರಮಾಣ ಎಷ್ಟಿದೆ ಎಂದು ನೋಡಿಕೊಳ್ಳಬೇಕೆಂದು ವರದಿ ಒತ್ತಾಯಿಸಿದೆ.

     

  • ಬಳ್ಳಾರಿ ಬಳಿಕ ಬೆಳಗಾವಿಯಲ್ಲೂ ಬಾಣಂತಿಯರು, ಶಿಶುಗಳ ಸಾವು!

    ಬಳ್ಳಾರಿ ಬಳಿಕ ಬೆಳಗಾವಿಯಲ್ಲೂ ಬಾಣಂತಿಯರು, ಶಿಶುಗಳ ಸಾವು!

    ಬೆಳಗಾವಿ: ಜಿಲ್ಲೆಯಲ್ಲಿ ಆರೇ ತಿಂಗಳಲ್ಲಿ 322 ಶಿಶುಗಳ ಹಾಗೂ 29 ಬಾಣಂತಿಯರ ಸಾವು ಸಂಭವಿಸಿದ್ದು ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಇದೊಂದು ಆಘಾತಕಾರಿ ವಿಚಾರ ತಕ್ಷಣವೇ ತನಿಖೆಯಾಗಬೇಕು ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಆಗ್ರಹಿಸಿದರೆ ಸದನದಲ್ಲಿ ಈ ವಿಚಾರ ಪ್ರಸ್ಥಾಪಿಸುವದಾಗಿ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

    322 ಶಿಶುಗಳ ಹಾಗೂ 29 ಬಾಣಂತಿಯರ ಮರಣ, ಈ ಸಾವು ನ್ಯಾಯವೇ? ಬೆಳಗಾವಿಯ (Belagavi) ಸರ್ಕಾರಿ ಆಸ್ಪತ್ರೆಗಳಲ್ಲಿ ಆರು ತಿಂಗಳಲ್ಲಿ ಬರೊಬ್ಬರಿ 322 ಶಿಶುಗಳು ಹಾಗೂ 29 ಬಾಣಂತಿಯರು ಸಾವನ್ನಪ್ಪಿದ ಘಟನೆಯಿಂದ ಆರೋಗ್ಯ ಇಲಾಖೆ ಅಧಿಕಾರಿ ಹಾಗು ಸಿಬ್ಬಂದಿ ಹೈರಾಣಾಗಿದ್ದಾರೆ. ಸರಣಿ ಮಕ್ಕಳ ಸಾವುಗಳು ಸುದ್ದಿ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಶಿಶುಗಳ ಮರಣಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಕುರಿತು ಆಡಿಟ್ ಹಾಗೂ ತನಿಖೆ ನಡೆಸಲಾಗುತ್ತದೆ ಎಂದು ಬೆಳಗಾವಿ ಆರೋಗ್ಯ ಇಲಾಖೆಯ ಪ್ರಭಾರಿ ಡಿಹೆಚ್‌ಒ ಗಡೇದ ತಿಳಿಸಿದ್ದಾರೆ. ಇದನ್ನೂ ಓದಿ: ಸೋಮವಾರದಿಂದ ಬೆಳಗಾವಿಯಲ್ಲಿ ಅಧಿವೇಶನ – ವಿಪಕ್ಷಗಳ ಬತ್ತಳಿಕೆಯಲ್ಲಿ ಸಾಲು ಸಾಲು ಅಸ್ತ್ರ

    ನವಜಾತ ಶಿಶುಗಳ ಸಾವಿನ ಬಗ್ಗೆ ತನಿಖೆಯಾಗಬೇಕು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ತವರು ಜಿಲ್ಲೆಯಲ್ಲಿ ಇಂಥ ಘಟನೆಗಳು ನಡೆದಿವೆ. ಅಪೌಷ್ಟಿಕತೆಯಿಂದ ಸಾವುಗಳಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಸರಣಿ ಶಿಶುಗಳ ಮರಣವನ್ನು ನಾವು ಗಂಭೀರವಾಗಿ ಸ್ಚೀಕರಿಸಿದ್ದೇವೆ. ಈ ಕುರಿತು ಸದನದಲ್ಲಿ ಧ್ವನಿ ಎತ್ತುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಇದನ್ನೂ ಓದಿ: Upper Krishna Project | ಪರ್ಸಂಟೇಜ್‌ಗಾಗಿ ಡಿಕೆಶಿ ನೀರಾವರಿ ಮಂತ್ರಿಯಾಗಿದ್ದಾರೆ: ಯತ್ನಾಳ್‌

    ಒಂದೆಡೆ 322 ಶಿಶುಗಳ ಮರಣ ಇನ್ನೊಂದೆಡೆ 29 ಬಾಣಂತಿಯರ ಸಾವು ಇಲಾಖೆಯ ಕಾರ್ಯ ವೈಖರಿ ಮೇಲೆ ಸಂಶಯ ಹುಟ್ಟು ಹಾಕಿದೆ. ಕೆಲ ವೈದ್ಯರು ಈ ಅಂಕಿ – ಅಂಶ ಇನ್ನೂ ಹೆಚ್ಚು ಇದೆ ಎಂದು ಗುಸು ಗುಸು ಎನ್ನುತ್ತಿದ್ದಾರೆ. ಒಟ್ಟಾರೆ ಕಣ್ಣು ಬಿಟ್ಟು ಈ ಜಗತ್ತನ್ನು ನೋಡುವ ಮೊದಲೆ ಕಂದಮ್ಮಗಳು ಕಣ್ಣು ಮುಚ್ಚಿಕೊಳ್ಳುತ್ತಿರುವದು ವಿಷಾಧನಿಯ. ಇದನ್ನೂ ಓದಿ: ಬೆಳಗಾವಿಯಲ್ಲಿ ಬಾಣಂತಿಯರು, ಮಕ್ಕಳ ಸಾವು ಪ್ರಕರಣ – ‘ಪಬ್ಲಿಕ್ ಟಿವಿ’ ವರದಿ ಬೆನ್ನಲ್ಲೇ ತನಿಖೆಗೆ ಹೆಬ್ಬಾಳ್ಕರ್ ಆದೇಶ 

  • ಬೆಳಗಾವಿಯಲ್ಲಿ ಬಾಣಂತಿಯರು, ಮಕ್ಕಳ ಸಾವು ಪ್ರಕರಣ – ‘ಪಬ್ಲಿಕ್ ಟಿವಿ’ ವರದಿ ಬೆನ್ನಲ್ಲೇ ತನಿಖೆಗೆ ಹೆಬ್ಬಾಳ್ಕರ್ ಆದೇಶ

    ಬೆಳಗಾವಿಯಲ್ಲಿ ಬಾಣಂತಿಯರು, ಮಕ್ಕಳ ಸಾವು ಪ್ರಕರಣ – ‘ಪಬ್ಲಿಕ್ ಟಿವಿ’ ವರದಿ ಬೆನ್ನಲ್ಲೇ ತನಿಖೆಗೆ ಹೆಬ್ಬಾಳ್ಕರ್ ಆದೇಶ

    ಬೆಳಗಾವಿ: ಬಳ್ಳಾರಿ ಬಳಿಕ ಬೆಳಗಾವಿಯಲ್ಲೂ (Belagavi) ಬಾಣಂತಿಯರು, ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ‘ಪಬ್ಲಿಕ್ ಟಿವಿ’ ವರದಿ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ತನಿಖೆಗೆ ಆದೇಶಿಸಿದ್ದಾರೆ. ತನಿಖೆ ನಡೆಸಿ ವರದಿ ನೀಡಲು ಒಂದು ವಾರಗಳ ಡೆಡ್‌ಲೈನ್ ನೀಡಲಾಗಿದೆ.

    ಈ ಕುರಿತು ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಮೂರು ತಿಂಗಳಲ್ಲಿ ಬಾಣಂತಿಯರು, ಗರ್ಭಿಣಿಯರು, ಮಕ್ಕಳ ಸಾವು ಯಾವ ಕಾರಣಕ್ಕೆ ಆಗಿದೆ ಎಂದು ನೋಡುತ್ತಿದ್ದೇವೆ. ಬಳ್ಳಾರಿಯಲ್ಲಿ ನಡೆದ ಘಟನೆಯ ಸಮಗ್ರ ವರದಿಯನ್ನು ಕೇಳಿದ್ದೇವೆ. ಐವಿ ಫ್ಲೂಯಿಡ್‌ನಿಂದ (IV Fluid) ಆಗಿರಬಹುದು ಎಂದು ಕಂಪನಿ ಬಗ್ಗೆ ಕೂಡ ವಿಚಾರಣೆ ನಡೆಸುತ್ತಿದ್ದೇವೆ ಎಂದರು. ಇದನ್ನೂ ಓದಿ: ಕರ್ನಾಟಕ-ಲಕ್ಷದ್ವೀಪ ವ್ಯಾಪಾರ ಮಾರ್ಗ ಪುನರುಜ್ಜೀವನಗೊಳಿಸಲು ಕೆಎಂಬಿ ಪೂರ್ವ ಭಾವಿಯಾಗಿ ಕೆಲಸ ಮಾಡಲಿದೆ: ಸಚಿವ ವೈದ್ಯ

    ಪೌಷ್ಠಿಕಾಂಶದ ಕೊರತೆಯಿಂದ ಮಕ್ಕಳ ಸಾವಾಗಿದೆ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿ, ಪೌಷ್ಠಿಕಾಂಶದ ವಿಚಾರವಾಗಿ ನಮ್ಮ ಇಲಾಖೆ ಆರೋಗ್ಯ ಇಲಾಖೆ ಜಂಟಿಯಾಗಿ ಪ್ರೋಟಿನ್ ಸಂಬಂಧ ಮೂರು ತಿಂಗಳ ಗರ್ಭಿಣಿ ಇದ್ದಾಗಿನಿಂದ ನೋಡುತ್ತಿದ್ದೇವೆ. ಬರೀ ಪೌಷ್ಠಿಕಾಂಶದಿಂದ ಸಾವಾಗಿದೆ ಎಂದು ಹೇಳಲು ಆಗಲ್ಲ. ಬೇರೆ ಕಾರಣ ಇರಬಹುದು. ಒಂದು ವಾರದ ಗಡುವು ಕೊಟ್ಟು ತನಿಖೆ ನಡೆಸಿ ವರದಿ ಕೊಡುವಂತೆ ಹೇಳುತ್ತೇವೆ. ಬೆಳಗಾವಿಯಲ್ಲಿ ಸಾವಿನ ಕುರಿತು ಕೂಡ ವರದಿ ಕೊಡುವಂತೆ ಕೇಳುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: 24 ಗಂಟೆಯಲ್ಲಿ 1,000 ಪುರುಷರೊಂದಿಗೆ ಸೆಕ್ಸ್‌ ಮಾಡುವ ಗುರಿ – ಹೊಸ ವರ್ಷಕ್ಕೆ 23ರ ಯುವತಿ ತಯಾರಿ!

    ಪೌಷ್ಠಿಕ ಆಹಾರ ನೀಡುವಲ್ಲಿ ಯತ್ನಾಳ್ ಭ್ರಷ್ಟಾಚಾರ ಆರೋಪ ಹೊರಿಸಿದ ಕುರಿತು ಮಾತನಾಡಿ, ಸದನದಲ್ಲಿ ಹತ್ತು ಸಾರಿ ಚರ್ಚೆ ಆಗಿದೆ. ನಾವೇನು ಹೊಸದು ಮಾಡಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಮಾಡುತ್ತಿದ್ದೇವೆ. ಬಿಜೆಪಿ ಅವಧಿಯಲ್ಲಿ ಈ ರೀತಿ ಆಗಿದೆ. 70,000 ಅಂಗನವಾಡಿಯಲ್ಲಿ ಏನೂ ದುರ್ಘಟನೆ ಆಗಿಲ್ಲ. ದೇವರ ಆಶೀರ್ವಾದದಿಂದ ಯಾವ ಮಕ್ಕಳ ಆರೋಗ್ಯ ಸಮಸ್ಯೆ ಆಗಿಲ್ಲ. ಎಲ್ಲಿಯಾದರೂ ಘಟನೆ ಆದರೆ, ಕಳಪೆ ಆಹಾರ ಏನಾದರೂ ಬಂದರೆ ನಮ್ಮ ಗಮನಕ್ಕೆ ತನ್ನಿ, ಸರಿಪಡಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಬಾಲಕನ ಮೇಲೆ ಬೀದಿ ನಾಯಿ ದಾಳಿ – ಹರಿದು ಹೋಯ್ತು ತುಟಿ