Tag: ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್

  • ಅಸ್ವಸ್ಥ ಯುವಕನನ್ನು ಹೆಗಲ ಮೇಲೆ ಹೊತ್ತು ನಡೆದ ಮಹಿಳಾ ಇನ್ಸ್‌ಪೆಕ್ಟರ್‌!

    ಅಸ್ವಸ್ಥ ಯುವಕನನ್ನು ಹೆಗಲ ಮೇಲೆ ಹೊತ್ತು ನಡೆದ ಮಹಿಳಾ ಇನ್ಸ್‌ಪೆಕ್ಟರ್‌!

    ಚೆನ್ನೈ: ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್‌ ಒಬ್ಬರು ಅಸ್ವಸ್ಥ ಯುವಕನನ್ನು ಹೆಗಲ ಮೇಲೆ ಹೊತ್ತೊಯ್ದು ಸುದ್ದಿಯಾಗಿದ್ದಾರೆ.

    ಮಹಿಳಾ ಇನ್ಸ್ ಪೆಕ್ಟರ್ ಅವರನ್ನು ರಾಜೇಶ್ವರಿ ಎಂದು ಗುರುತಿಸಲಾಗಿದೆ. ಇವರು 28 ವರ್ಷದ ಯುವಕನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ನಡೆದಿದ್ದಾರೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ ಇನ್ಸ್ ಪೆಕ್ಟರ್ ಯುವಕನನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ನಂತರ ಆಟೋದಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಎಲ್ಲಾ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೆ ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿ ಶಹಬ್ಬಾಸ್ ಗಿರಿ ನೀಡಿದ್ದಾರೆ.

    ಸದ್ಯ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇನ್ಸ್ ಪೆಕ್ಟರ್ ಮಾನವೀಯ ಕಾರ್ಯಕ್ಕೆ ನೆಟ್ಟಿಗರು ಮಾರುಹೋಗಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಗುಡುಗು ಸಹಿತ ಭಾರೀ ಮಳೆ – 20 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

    ಚೆನ್ನೈ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಿಂದ ಪ್ರವಾಹ ಸೃಷ್ಟಿಯಾಗಿದೆ. ಈಗಾಗಲೇ 12 ಮಂದಿ ಮೃತಪಟ್ಟಿದ್ದಾರೆ. ತಮಿಳುನಾಡಿನ ತಿರುವಳ್ಳೂರು, ಚೆನ್ನೈ, ಚೆಂಗಲ್ಪಟ್ಟು ಮತ್ತು ಕಾಂಚೀಪುರಂ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ರಾಜ್ಯದಲ್ಲಿ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ನವೆಂಬರ್ 11 ರ ಸಂಜೆಯ ವೇಳೆಗೆ ಹವಾಮಾನ ವ್ಯವಸ್ಥೆಯು ಉತ್ತರ ತಮಿಳುನಾಡು ಮತ್ತು ಪಕ್ಕದ ದಕ್ಷಿಣ ಆಂಧ್ರಪ್ರದೇಶದ ಕರಾವಳಿಯ ಕಾರೈಕಲ್ ಮತ್ತು ಶ್ರೀಹರಿಕೋಟಾ ನಡುವಿನ ಪುದುಚೇರಿಯನ್ನು ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

  • ತುಂಬು ಗರ್ಭಿಣಿಯನ್ನು 3 ಕಿ.ಮೀ ನಡೆಯುವಂತೆ ಮಾಡಿದ ಮಹಿಳಾ ಇನ್ಸ್‌ಪೆಕ್ಟರ್ ಅಮಾನತು

    ತುಂಬು ಗರ್ಭಿಣಿಯನ್ನು 3 ಕಿ.ಮೀ ನಡೆಯುವಂತೆ ಮಾಡಿದ ಮಹಿಳಾ ಇನ್ಸ್‌ಪೆಕ್ಟರ್ ಅಮಾನತು

    ಭುವನೇಶ್ವರ: ತುಂಬು ಗರ್ಭಿಣಿಯನ್ನು ಉರಿಬಿಸಿಲಿನಲ್ಲಿ ಸುಮಾರು 3 ಕಿ.ಮೀ ನಡೆಸಿದ ಮಹಿಳಾ ಇನ್ಸ್ ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ.

    ಈ ಅಮಾನವೀಯ ಘಟನೆ ಭುವನೇಶ್ವರದ ಮಯೂರ್ ಭಂಜ್ ನಲ್ಲಿ ನಡೆದಿದೆ. ಮಹಿಳಾ ಇನ್ಸ್ ಪೆಕ್ಟರ್ ಅಮಾನವೀಯ ವರ್ತನೆಗೆ ಪೊಲೀಸ್ ಇಲಾಖೆ ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ರೀನಾ ಬಕ್ಸಲ್ ರನ್ನು ಕೆಲಸದಿಂದ ವಜಾ ಮಾಡಲಾಗಿದೆ.

    ಆಗಿದ್ದೇನು..?
    8 ತಿಂಗಳ ತುಂಬು ಗರ್ಭಿಣಿ ತನ್ನ ಪತಿ ವಿಕ್ರಮ್ ಜೊತೆ ಬೈಕ್ ನಲ್ಲಿ ಕುಳಿತು ಆಸ್ಪತ್ರೆಗೆ ತೆರಳುತ್ತಿದ್ದರು. ಹಿಂಬದಿ ಕುಳಿತಿದ್ದ ಗರ್ಭಿಣಿ ಹೆಲ್ಮೆಟ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ರೀನಾ, ಬೈಕ್ ತಡೆದು ನಿಲ್ಲಿಸಿದ್ದಾರೆ. ಇತ್ತ ದಂಡ ಪಾವತಿಸುವಂತೆ ಇನ್ಸ್ ಪೆಕ್ಟರ್ ರೀನಾ ತಿಳಿಸಿದ್ದಾರೆ. ಆಗ ವಿಕ್ರಮ್, ನನ್ನ ಬಳಿ ಹಣವಿಲ್ಲ. ಹೀಗಾಗಿ ಹಣವನ್ನು ಆನ್ ಲೈನ್ ಮೂಲಕ ಪಾವತಿಸುವುದಾಗಿ ಹೇಳಿದ್ದಾರೆ. ಆದರೆ ರೀನಾ ಇದಕ್ಕೊಪ್ಪಲಿಲ್ಲ. ಈ ವೇಳೆ ಇಬ್ಬರ ಮಧ್ಯೆ ಮಾತುಕತೆ ನಡೆದಿದೆ.

    ಕೊನೆಗೆ ಪೊಲೀಸ್ ಠಾಣೆಗೆ ಬಂದು ದಂಡ ಪಾವತಿಸುವಂತೆ ರೀನಾ, ವಿಕ್ರಮ್ ಗೆ ಸೂಚಿಸಿದ್ದಾರೆ. ಅಂತೆಯೇ ಠಾಣೆಗೆ ಪತ್ನಿಯನ್ನು ಕರೆದುಕೊಂಡು ಹೋಗುವುದಾಗಿ ವಿಕ್ರಮ್, ರೀನಾ ಬಳಿ ಮನವಿ ಮಾಡಿಕೊಂಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ರೀನಾ, ವಿಕ್ರಮ್ ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಜೈಲಿನೊಳಗೆ ಸುಮಾರು 3 ಗಂಟೆಗಳ ಕಾಲ ಕೂಡಿಹಾಕಿದ್ದಾರೆ. ಇತ್ತ ತುಂಬು ಗರ್ಭಿಣಿ ಪತಿಗಾಗಿ ಕೆಲವು ಗಂಟೆಗಳ ಕಾಲ ರಸ್ತೆ ಬದಿಯೇ ಕಾದು ನಿಂತಿದ್ದಾರೆ. ಸುಮಾರು ಹೊತ್ತಾದರೂ ಪತಿ ಬರದೇ ಇರುವುದರಿಂದ ಅವರು ಮೂರು ಕಿ.ಮೀ ನಡೆದುಕೊಂಡೇ ಠಾಣೆಗೆ ಬಂದಿದ್ದಾರೆ.

    ಬಳಿಕ ದಂಪತಿ ಪೊಲೀಸ್ ಅಧಿಕಾರಿ ಬಳಿ ನಡೆದ ಘಟನೆಯನ್ನು ವಿವಿರಿಸಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಎಸ್‍ಪಿ ಪಾರ್ಮರ್ ಸ್ಮಿತ್ ಪುರುಷೋತ್ತಮದಾಸ್ ರೀನಾ ಅವರನ್ನು ಕೆಲಸದಿಂದ ವಜಾ ಮಾಡಿದ್ದಾರೆ.