Tag: ಮಹಿಳಾ ಡಿಜಿಪಿ

  • ಭಾರತದ ಮೊದಲ ಮಹಿಳಾ ಡಿಜಿಪಿ ನಿಧನ

    ಭಾರತದ ಮೊದಲ ಮಹಿಳಾ ಡಿಜಿಪಿ ನಿಧನ

    ಡೆಹ್ರಾಡೂನ್: ಭಾರತದ ಮೊದಲ ಮಹಿಳಾ ಪೊಲೀಸ್ ಮಹಾ ನಿರ್ದೇಶಕಿ (ಡಿಜಿಪಿ) ಕಾಂಚನ್ ಚೌಧರಿ ಭಟ್ಟಾಚಾರ್ಯ(72) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.

    ಕಾಂಚನ್ ಚೌಧರಿ ಅವರು ಸುಮಾರು 5-6 ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸೋಮವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮುಂಬೈನಲ್ಲಿ ನಿಧನರಾಗಿದ್ದಾರೆ.

    ಹಿಮಾಚಲ ಪ್ರದೇಶದಲ್ಲಿ ಜನಿಸಿದ್ದ ಅವರು ಕಿರಣ್ ಬೇಡಿ ನಂತರ ದೇಶದ ಎರಡನೇ ಮಹಿಳಾ ಐಪಿಎಸ್ ಅಧಿಕಾರಿಯಾಗಿದ್ದರು. ಎಂ.ಎಸ್ ಭಟ್ಟಾಚಾರ್ಯ ಅವರು 1973 ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದು, 2004 ರಲ್ಲಿ ಉತ್ತರಾಖಂಡದ ಡಿಜಿಪಿಯಾಗಿ ನೇಮಕಗೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಬಳಿಕ ಅವರು 2007 ಅಕ್ಟೋಬರ್ 31 ರಂದು ನಿವೃತ್ತರಾಗಿದ್ದರು.

    ನಿವೃತ್ತಿಯ ನಂತರ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಹರಿದ್ವಾರ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಮೂಲಕ ರಾಜಕೀಯಕ್ಕೆ ಧುಮುಕಿದ್ದರು. ಆದರೆ ಚುನಾವಣೆಯಲ್ಲಿ ಸೋಲು ಕಂಡರು. ತಮ್ಮ 33 ವರ್ಷಗಳ ಸೇವೆಯ ಅವಧಿಯಲ್ಲಿ ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‍ಎಫ್)ನಲ್ಲಿ ಐಜಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ವೇಳೆ 1997ರಲ್ಲಿ ಅವರ ವಿಶೇಷ ಸೇವೆಗಾಗಿ ಪೊಲೀಸ್ ಪದಕವನ್ನು ನೀಡಲಾಗಿತ್ತು. ಅಷ್ಟೇ ಅಲ್ಲದೆ ಅವರಿಗೆ ರಾಜೀವ್ ಗಾಂಧಿ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿತ್ತು.

    ಎಂ.ಎಸ್ ಭಟ್ಟಾಚಾರ್ಯ ಅವರು ಇದೀಗ ಪತಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಉತ್ತರಾಖಂಡ ಪೊಲೀಸ್ ಕೂಡ ಟ್ವೀಟ್ ಮಾಡುವ ಮೂಲಕ ಎಂ.ಎಸ್ ಭಟ್ಟಾಚಾರ್ಯ ಅವರನ್ನು ನೆನಪಿಸಿಕೊಂಡು ಅವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದೆ.