Tag: ಮಹಿಳಾ ಟಿ20 ಏಷ್ಯಾಕಪ್‌

  • Women’s Asia Cup 2024: ಲಂಕಾ ಚಾಂಪಿಯನ್‌ – 20 ವರ್ಷಗಳ ಬಳಿಕ ಟ್ರೋಫಿ ಗೆದ್ದ ಸಿಂಹಳಿಯರು

    Women’s Asia Cup 2024: ಲಂಕಾ ಚಾಂಪಿಯನ್‌ – 20 ವರ್ಷಗಳ ಬಳಿಕ ಟ್ರೋಫಿ ಗೆದ್ದ ಸಿಂಹಳಿಯರು

    – ಭಾರತದ ವನಿತೆಯರಿಗೆ ವಿರೋಚಿತ ಸೋಲು

    ಡಂಬುಲ್ಲಾ: 2024ರ ಮಹಿಳಾ ಟಿ20 ಏಷ್ಯಾಕಪ್‌ (Women’s Asia Cup 2024) ಟೂರ್ನಿಯಲ್ಲಿ ಆಥಿತೇಯ ಶ್ರೀಲಂಕಾ ತಂಡ (SriLanka Womens Team) ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ 8 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಇದೇ ಮೊದಲ ಬಾರಿಗೆ ಏಷ್ಯಾಕಪ್‌ ಚಾಂಪಿಯನ್‌ (Asian champions) ಆಗಿ ಹೊರಹೊಮ್ಮಿದ್ದು, 20 ವರ್ಷಗಳ ಕನಸನ್ನು ನನಸು ಮಾಡಿಕೊಂಡಿದೆ. ಭಾರತ 2ನೇ ಬಾರಿಗೆ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತದ ಮಹಿಳಾ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 165 ರನ್‌ ಬಾರಿಸಿತ್ತು. ಈ ಗುರಿ ಬೆನ್ನಟ್ಟಿದ ಲಂಕಾ 18.4 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 167 ರನ್‌ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ಇದೇ ಮೊಟ್ಟ ಮೊದಲ ಬಾರಿಗೆ ಏಷ್ಯಾಕಪ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು. 2012, 2016, 2018, 2022ರಲ್ಲಿ ಫೈನಲ್‌ ತಲುಪಿದ್ದ ಭಾರತ ಮೂರು ಬಾರಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತ್ತು. ಇನ್ನೂ ಟಿ20 ಏಷ್ಯಾಕಪ್‌ ಟೂರ್ನಿಯಲ್ಲಿ 2022ರಲ್ಲಿ ಮೊದಲ ಬಾರಿಗೆ ಫೈನಲ್‌ ತಲುಪಿದ್ದ ಶ್ರೀಲಂಕಾ ಭಾರತದ ವಿರುದ್ಧವೇ 8 ವಿಕೆಟ್‌ಗಳ ಅಂತರದಿಂದ ಸೋತು ಚಾಂಪಿಯನ್‌ ಪಟ್ಟ ಕಳೆದುಕೊಂಡಿತ್ತು. ಇದೀಗ ಭಾರತದ ವಿರುದ್ಧವೇ ಗೆದ್ದು ಸೇಡು ತೀರಿಸಿಕೊಂಡಿದೆ.

    ಟರ್ನಿಂಗ್‌ ಪಾಯಿಂಟ್‌ ಸಿಕ್ಕಿದ್ದೆಲ್ಲಿ?
    13 ಓವರ್‌ಗಳ ವರೆಗೆ ಲಂಕಾ 2 ವಿಕೆಟ್‌ ಕಳೆದುಕೊಂಡಿದ್ದರೂ 99 ರನ್‌ ಗಳಿಸಿತ್ತು. ಆದ್ರೆ 14ನೇ ಓವರ್‌ನಲ್ಲಿ ಪೂಜಾ ವಸ್ತ್ರಕಾರ್‌ 14 ರನ್‌, 18ನೇ ಓವರ್‌ನಲ್ಲಿ ರಾಧಾ ಯಾದವ್‌ 17 ರನ್‌ ಬಿಟ್ಟುಕೊಟ್ಟರು. ಇದೂ ಲಂಕಾಗೆ ಬಹುದೊಡ್ಡ ಲಾಭವಾಯಿತು. ಅಲ್ಲದೇ ಕಳಪೆ ಫೀಲ್ಡಿಂಗ್‌, ಕ್ಯಾಚ್‌ಗಳನ್ನು ಕೈಚೆಲ್ಲಿದ ಪರಿಣಾಮ ಭಾರತ ತಂಡ ಸೋಲು ಕಂಡಿತು.

    166 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ್ದ ಲಂಕಾ 7 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡರೂ ನಂತರದಲ್ಲಿ ತಾಳ್ಮೆಯ ಆಟದೊಂದಿಗೆ ಗೆಲುವಿನ ಹಾದಿಯತ್ತ ಸಾಗಿತ್ತು. ನಾಯಕಿ ಚಾಮರಿ ಚಾಮರಿ ಅಥಾಪತ್ತು (Chamari Athapaththu) ಹಾಗೂ ಹರ್ಷಿತಾ ಸಮರವಿಕ್ರಮ (Harshitha Samarawickrama) ಅವರ ಆಕರ್ಷಕ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಭಾರತದ ವಿರುದ್ಧ ಸುಲಭವಾಗಿ ಗೆಲುವು ಸಾಧಿಸಿತು.

    ಲಂಕಾ ಪರ ನಾಯಕಿ ಚಾಮರಿ ಅಥಾಪತ್ತು 43 ಎಸೆತಗಳಲ್ಲಿ 61 ರನ್‌ ಗಳಿಸಿದ್ರೆ, ಹರ್ಷಿತಾ 51 ಎಸೆತಗಳಲ್ಲಿ 69 ರನ್‌ ಬಾರಿಸಿದರು. ಇದರೊಂದಿಗೆ ಕವಿಶಾ ದಿಲ್ಹಾರಿ 16 ಎಸೆತಗಳಲ್ಲಿ ಸ್ಫೋಟಕ 30 ರನ್‌ ಬಾರಿಸುವ ಮೂಲಕ ಗೆಲುವು ತಂದುಕೊಟ್ಟರು.

    ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ್ದ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ನಿಧಾನಗತಿಯ ಬ್ಯಾಟಿಂಗ್‌ ನಡೆಸಿದರು. ಅಲ್ಲದೇ ಸ್ಫೋಟಕ ಆಟಗಾರ್ತಿ ಶಫಾಲಿ ವರ್ಮಾ 19 ಎಸೆತಗಳಲ್ಲಿ 16 ರನ್‌ ಗಳಿಸಿ ಔಟಾದರು. ಈ ಬೆನ್ನಲ್ಲೇ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌, ಉಮಾ ಚೆಟ್ರಿ ಅಲ್ಪ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿ ಹೊರನಡೆದರು ಇದು ಟೀಂ ಇಂಡಿಯಾಕ್ಕೆ ದೊಡ್ಡ ಆಘಾತ ನೀಡಿತ್ತು.

    ಮಂಧಾನ ಬ್ಯಾಟಿಂಗ್‌ ಕಮಾಲ್‌:
    ಒಂದೆಡೆ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಟೀಂ ಇಂಡಿಯಾ ಪರ ಸ್ಮೃತಿ ಮಂಧಾನ ಅಮೋಘ ಅರ್ಧಶತಕ ಬಾರಿಸುವ ಮೂಲಕ ಆಧಾರವಾದರು. 47 ಎಸೆತಗಳಲ್ಲಿ 10 ಬೌಂಡರಿ ಸಹಿತ 60 ರನ್‌ ಬಾರಿಸುವ ಮೂಲಕ ತಂಡದ ಮೊತ್ತ 160 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಕೊನೆಯಲ್ಲಿ ರಿಚಾ ಘೋಷ್‌ 14 ಎಸೆತಗಳಲ್ಲಿ ಸ್ಫೋಟಕ 30 ರನ್‌, ಜೆಮಿಮಾ ರೊಡ್ರಿಗ್ಸ್‌ 16 ಎಸೆತಗಳಲ್ಲಿ 29 ರನ್‌ ಗಳ ಕೊಡುಗೆ ನೀಡಿದರು. ಪೂಜಾ ವಸ್ತ್ರಕಾರ್‌ 5 ರನ್‌, ರಾಧಾ ಯಾದವ್‌ 1 ರನ್‌, ಉಮಾ ಚೆಟ್ರಿ 9 ರನ್‌ ಹಾಗೂ ಕೌರ್‌ 11 ರನ್‌ ಗಳಿಸಿದರು.

  • Women’s Asia Cup: ನೇಪಾಳ ವಿರುದ್ಧ 82 ರನ್‌ಗಳ ಭರ್ಜರಿ ಗೆಲುವು – ಸೆಮಿಸ್‌ಗೆ ಲಗ್ಗೆಯಿಟ್ಟ ಭಾರತ

    Women’s Asia Cup: ನೇಪಾಳ ವಿರುದ್ಧ 82 ರನ್‌ಗಳ ಭರ್ಜರಿ ಗೆಲುವು – ಸೆಮಿಸ್‌ಗೆ ಲಗ್ಗೆಯಿಟ್ಟ ಭಾರತ

    ಡಂಬುಲ್ಲಾ: ಶಫಾಲಿ ವರ್ಮಾ (Shafali Verma) ಸ್ಫೋಟಕ ಬ್ಯಾಟಿಂಗ್‌, ಸಂಘಟಿತ ಬೌಲಿಂಗ್‌ ಪ್ರದರ್ಶನದಿಂದ ಭಾರತ ಮಹಿಳಾ ಕ್ರಿಕೆಟ್‌ ತಂಡವು ನೇಪಾಳ ತಂಡದ ವಿರುದ್ಧ 82 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 2024ರ ಮಹಿಳಾ ಟಿ20 ಏಷ್ಯಾಕಪ್‌ (Women’s Asia Cup 2024) ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದೆ. ಹಾಲಿ ಚಾಂಪಿಯನ್ಸ್‌ ಸಹ ಆಗಿರುವ ಭಾರತ 2024ರಲ್ಲಿ ಮಹಿಳಾ ಏಷ್ಯಾಕಪ್‌ ಟೂರ್ನಿಯ ಸೆಮಿಸ್‌ಗೆ ಎಂಟ್ರಿ ಕೊಟ್ಟ ಮೊದಲ ತಂಡವೂ ಆಗಿದೆ.

    ಇಲ್ಲಿನ ರಣಗಿರಿ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 178 ರನ್‌ ಬಾರಿಸಿತ್ತು. 179 ರನ್‌ಗಳ ಗುರಿ ಬೆನ್ನಟ್ಟಿದ ನೇಪಾಳ ತಂಡ (Nepal Womens Team) ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ ಕೇವಲ 96 ರನ್‌ಗಳಿಸಿ ಹೀನಾಯ ಸೋಲು ಕಂಡಿತು. ಇದನ್ನೂ ಓದಿ: ಭದ್ರತಾ ಕಾರಣಕ್ಕಾಗಿ ಭಾರತ ಸರ್ಕಾರ ಅನುಮತಿ ನಿರಾಕರಿಸಿದ್ರೆ ಬಿಸಿಸಿಐ ಬರೆದುಕೊಡಲಿ – ಪಾಕ್‌ ಪಟ್ಟು!

    ಸ್ಮೃತಿ ಮಂಧಾನ (Smriti Mandhana) ನಾಯಕತ್ವದಲ್ಲಿ ಕಣಕ್ಕಿಳಿದ ಟೀಂ ಇಂಡಿಯಾ ಪರ ಶಫಾಲಿ ವರ್ಮಾ ಎದುರಾಳಿ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ದಂಡಿಸಿದರು. 48 ಎಸೆತಗಳಲ್ಲಿ ಸ್ಫೋಟಕ 81 ರನ್‌ (12 ಬೌಂಡರಿ, 1 ಸಿಕ್ಸರ್)‌ ಚಚ್ಚಿದರು. ಇದರೊಂದಿಗೆ ದಯಾಳನ್‌ ಹೇಮಲತಾ 47 ರನ್‌ (42 ಎಸೆತ, 5 ಬೌಂಡರಿ, 1 ಸಿಕ್ಸರ್)‌, ಸಜೀವನ್‌ ಸಜನ 10 ರನ್‌, ಜೆಮಿಮಾ ರೊಡ್ರಿಗ್ಸ್‌ 28 ರನ್‌ ಹಾಗೂ ರಿಚಾ ಘೋಷ್‌ 6 ರನ್‌ ಗಳಿಸಿ ಮಿಂಚಿದರು. ಇದನ್ನೂ ಓದಿ: Paris Olympic 2024: ಭಾರತೀಯ ಕ್ರೀಡಾಪಟುಗಳಿಗೆ 8.5 ಕೋಟಿ ನೆರವು ಘೋಷಿಸಿದ ಬಿಸಿಸಿಐ

    ಸ್ಫರ್ಧಾತ್ಮಕ ಗುರಿ ಬೆನ್ನಟ್ಟಿದ ನೇಪಾಳ ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ತತ್ತರಿಸಿ, ಆರಂಭದಿಂದಲೇ ವಿಕೆಟ್‌ ಕಳೆದುಕೊಂಡಿತು. ನೇಪಾಳ ಪರ ನಾಯಕಿ ಇಂದು ಬರ್ಮಾ 14 ರನ್‌, ಸೀತಾ ರಾಣಾ ಮಗರ್ 18 ರನ್‌, ರುಬಿನಾ 15 ರನ್‌ ಹಾಗೂ ಬಿಂದು 17 ರನ್‌ ಗಳಿಸಿದ್ದು ಬಿಟ್ಟರೆ, ಉಳಿದ ಆಟಗಾರ್ತಿಯರು ಅಲ್ಪಮೊತ್ತಕ್ಕೆ ಪೆವಿಲಿಯನ್‌ನತ್ತ ಮುಖ ಮಾಡಿದರು. ಇದರಿಂದ ಗೆಲುವು ಸುಲಭವಾಗಿ ಭಾರತದ ವನಿತೆಯರ ಪಾಲಾಯಿತು.

    ಟೀಂ ಇಂಡಿಯಾ ಪರ ದೀಪ್ತಿ ಶರ್ಮಾ 3 ವಿಕೆಟ್‌ ಕಿತ್ತರೆ, ಅರುಂಧತಿ ರೆಡ್ಡಿ, ರಾಧಾ ಯಾದವ್‌ ತಲಾ 2 ವಿಕೆಟ್‌ ಹಾಗೂ ರೇಣಿಕಾ ಸಿಂಗ್‌ 1 ವಿಕೆಟ್‌ ಪಡೆದು ಮಿಂಚಿದರು. ಇದನ್ನೂ ಓದಿ: ಮುಂಬೈಗೆ ಗುಡ್‌ಬೈ ಹೇಳ್ತಾರಾ ರೋಹಿತ್‌, ಬುಮ್ರಾ, ಸೂರ್ಯ? – 2025ರ ಐಪಿಎಲ್‌ನ ಮಹತ್ವದ 5 ಬೆಳವಣಿಗೆಗಳು ಹೀಗಿವೆ