Tag: ಮಹಿಂದಾ ರಾಜಪಕ್ಸೆ

  • ಅನುಮತಿಯಿಲ್ಲದೇ ದೇಶ ಬಿಟ್ಟು ಹೋಗಬೇಡಿ: ರಾಜಪಕ್ಸೆ ಕುಟುಂಬಕ್ಕೆ ಸುಪ್ರೀಂ ಕೋರ್ಟ್‌ ಆದೇಶ

    ಅನುಮತಿಯಿಲ್ಲದೇ ದೇಶ ಬಿಟ್ಟು ಹೋಗಬೇಡಿ: ರಾಜಪಕ್ಸೆ ಕುಟುಂಬಕ್ಕೆ ಸುಪ್ರೀಂ ಕೋರ್ಟ್‌ ಆದೇಶ

    ಕೊಲಂಬೊ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ರಾಜಪಕ್ಸೆ ಆಡಳಿತದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದ್ದು, ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಅಂತೆಯೇ ಅವರ ಸಹೋದರರೂ ಪಲಾಯನಕ್ಕೆ ಮುಂದಾಗಿದ್ದಾರೆ. ಆದರೆ ಅದಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

    ಗೊಟಬಯ ರಾಜಪಕ್ಸೆ ಸಹೋದರರಾದ ಶ್ರೀಲಂಕಾ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಹಾಗೂ ಮಾಜಿ ಸಚಿವ ಬಸಿಲ್‌ ರಾಜಪಕ್ಸೆ ದೇಶ ತೊರೆಯುವುದನ್ನು ಕೋರ್ಟ್‌ ತಡೆದಿದೆ. ಇದನ್ನೂ ಓದಿ: ಲಂಕಾ ಹಂಗಾಮಿ ಅಧ್ಯಕ್ಷರಾಗಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅಧಿಕಾರಿ ಸ್ವೀಕಾರ

    ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಮತ್ತು ಮಾಜಿ ಸಚಿವ ಬಸಿಲ್ ರಾಜಪಕ್ಸೆ ಅವರು ನ್ಯಾಯಾಲಯದ ಅನುಮತಿಯಿಲ್ಲದೆ ಜುಲೈ 28 ರವರೆಗೆ ದೇಶವನ್ನು ತೊರೆಯದಂತೆ ಶ್ರೀಲಂಕಾದ ಸುಪ್ರೀಂ ಕೋರ್ಟ್ ಇಂದು ಮಧ್ಯಂತರ ಆದೇಶವನ್ನು ಹೊರಡಿಸಿದೆ.

    ದ್ವೀಪ ರಾಷ್ಟ್ರದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ರಾಜಪಕ್ಸೆ ಕುಟುಂಬ ಆಡಳಿತದಿಂದ ದೇಶ ದುಸ್ಥಿತಿಗೆ ತಲುಪಿದೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ಸಾವಿರಾರು ಮಂದಿ ಪ್ರತಿಭಟನಾಕಾರರು ಶ್ರೀಲಂಕಾ ಅಧ್ಯಕ್ಷರ ಅವರ ನಿವಾಸಕ್ಕೆ ಮುತ್ತಿಗೆ ಹಾಕಿದ್ದರು. ಇದರಿಂದ ಭಯಭೀತರಾದ ಗೊಟಬಯ ರಾಜಪಕ್ಸೆ ವಿದೇಶಕ್ಕೆ ಪಲಾಯನಗೈದರು. ನಂತರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದನ್ನೂ ಓದಿ: ಒಕ್ಕೂಟದ ಪತನದ ನಂತರ ರಾಜೀನಾಮೆ ನೀಡಲು ಮುಂದಾದ ಇಟಲಿ ಪಿಎಂ

    ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಶ್ರೀಲಂಕಾ ಹಂಗಾಮಿ ಅಧ್ಯಕ್ಷರಾಗಿರುವ ರನಿಲ್‌ ವಿಕ್ರಮಸಿಂಘೆ ಅವರು ಪ್ರತಿಭಟನೆ ತಿಳಿಗೊಳಿಸಲು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶ್ರೀಲಂಕಾದ ಪ್ರಧಾನಿ ರನೀಲ್ ವಿಕ್ರಮಸಿಂಘೆ ಮನೆಗೆ ಬೆಂಕಿ, ವಾಹನಗಳು ಜಖಂ – ಹೊಸ ಸರ್ಕಾರ ರಚನೆಗೆ ಅಸ್ತು

    ಶ್ರೀಲಂಕಾದ ಪ್ರಧಾನಿ ರನೀಲ್ ವಿಕ್ರಮಸಿಂಘೆ ಮನೆಗೆ ಬೆಂಕಿ, ವಾಹನಗಳು ಜಖಂ – ಹೊಸ ಸರ್ಕಾರ ರಚನೆಗೆ ಅಸ್ತು

    ಕೊಲಂಬೋ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ರೊಚ್ಚಿಗೆದ್ದ ಜನ ದಂಗೆ ಎದ್ದಿದ್ದು, ಉದ್ರಿಕ್ತ ಗುಂಪೊಂದು ಲಂಕಾದ ಪ್ರಧಾನಿ ರನೀಲ್ ವಿಕ್ರಮಸಿಂಘೆ ಮನೆಗೆ ಬೆಂಕಿ ಹಚ್ಚಿ ವಾಹನಗಳನ್ನು ಜಖಂಗೊಳಿಸಿದೆ. ಈ ನಡುವೆ ರನೀಲ್ ವಿಕ್ರಮಸಿಂಘೆ ಹೊಸ ಸರ್ಕಾರ ರಚನೆಯಾಗುವುದರವರೆಗೂ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ.

    ನಿನ್ನೆ ಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ರಾಜೀನಾಮೆಗೆ ಆಗ್ರಹಿಸಿ ಅಧ್ಯಕ್ಷರ ಭವನಕ್ಕೆ ನುಗ್ಗಿ ಜನ ದಾಂಧಲೆ ನಡೆಸಿದ್ದರು. ಇದರ ಬೆನ್ನಲ್ಲೇ ರನಿಲ್ ವಿಕ್ರಮಸಿಂಘೆ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಕೊಲಂಬೋದಲ್ಲಿರುವ ವಿಕ್ರಮಸಿಂಘೆ ಅವರ ಖಾಸಗಿ ನಿವಾಸಕ್ಕೆ ಪ್ರತಿಭಟನಾ ನಿರತರು ಬೆಂಕಿ ಹಚ್ಚಿದ್ದು, ಪ್ರಧಾನಿಗೆ ಸೇರಿದ ವಾಹನಗಳನ್ನು ಪುಡಿಮಾಡಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರ ಮನೆಗೆ ನುಗ್ಗಿದ ಸಾವಿರಾರು ಜನ – ಪೂಲ್‌ನಲ್ಲಿ ಪ್ರತಿಭಟನಾಕಾರರು, ರಾಜಪಕ್ಸೆ ಪರಾರಿ

    ಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವುದಕ್ಕಾಗಿ ಸರ್ವ ಪಕ್ಷ ಸರ್ಕಾರಕ್ಕೆ ಅವಕಾಶ ನೀಡುವುದಾಗಿ ಘೋಷಿಸಿದ ವಿಕ್ರಮಸಂಘೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಆದರೆ ಹೊಸ ಸರ್ಕಾರ ರಚನೆಯಾಗುವುದರವರೆಗೂ ವಿಕ್ರಮಸಿಂಘೆ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ. ಬುಧವಾರ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಜನಾಕ್ರೋಶ ಉಲ್ಬಣ – ಪ್ರಧಾನಿ ಸ್ಥಾನಕ್ಕೆ ರನಿಲ್‌ ವಿಕ್ರಮಸಿಂಘೆ ರಾಜೀನಾಮೆ

    https://twitter.com/SLukako/status/1545831647597166593

    ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾದಲ್ಲಿ ಜನತೆ ರೊಚ್ಚಿಗೆದ್ದು ಪ್ರತಿಭಟನೆ ನಡೆಸುತ್ತಿದ್ದು, ದೇಶದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ದ್ವೀಪ ರಾಷ್ಟ್ರ ಅಧ್ಯಕ್ಷ ಗೊಟಬಯ ರಾಜಪಕ್ಸೆ ರಾಜೀನಾಮೆಗೆ ಆಗ್ರಹಿಸಿ ಅಧ್ಯಕ್ಷರ ಭವನಕ್ಕೆ ನುಗ್ಗಿ ಸ್ವಿಮ್ಮಿಂಗ್ ಪೂಲ್‍ಗೆ ಇಳಿದು ಈಜಾಡಿ, ಸೋಫಾ, ಬೆಡ್‍ಗಳ ಮೇಲೆ ಕುಣಿದಾಡಿದ್ದರು. ಇದರ ಬೆನ್ನಲ್ಲೇ ರನಿಲ್ ವಿಕ್ರಮಸಿಂಘೆ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿ ಅಧಿಕೃತ ನಿವಾಸದಿಂದ ಸ್ಥಳಾಂತರಗೊಂಡಿದ್ದರು.

    ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾದಲ್ಲಿ ಅರಾಜಕತೆ ವಾತಾವರಣ ಸೃಷ್ಟಿಯಾಗಿದೆ. ದೇಶದ ಜನತೆ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದೆ. ಪರಿಣಾಮವಾಗಿ ಮಹಿಂದಾ ರಾಜಪಕ್ಸೆ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ನಂತರ ರನಿಲ್ ವಿಕ್ರಮಸಿಂಘೆ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆರ್ಥಿಕ ದುಸ್ಥಿತಿಯಿಂದ ಕಂಗೆಟ್ಟಿರುವ ದೇಶಕ್ಕೆ ಅನೇಕ ಕಡೆಯಿಂದ ಸಾಲ ಹಾಗೂ ಇನ್ನಿತರ ಸೌಲಭ್ಯಕ್ಕಾಗಿ ರನಿಲ್ ಪ್ರಯತ್ನಿಸಿದರು.

    Live Tv
    [brid partner=56869869 player=32851 video=960834 autoplay=true]

  • ರಾಜಪಕ್ಸೆ ಕುಟುಂಬ ಭಾರತಕ್ಕೆ ಪಲಾಯನ ಮಾಡಿದ ವಿಚಾರವನ್ನು ತಿರಸ್ಕರಿಸಿದ ರಾಯಭಾರಿ ಕಚೇರಿ

    ರಾಜಪಕ್ಸೆ ಕುಟುಂಬ ಭಾರತಕ್ಕೆ ಪಲಾಯನ ಮಾಡಿದ ವಿಚಾರವನ್ನು ತಿರಸ್ಕರಿಸಿದ ರಾಯಭಾರಿ ಕಚೇರಿ

    ನವದೆಹಲಿ: ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಮತ್ತು ಅವರ ಕುಟುಂಬ ಸದಸ್ಯರು ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂಬ ಊಹಾಪೋಹವನ್ನು ಭಾರತೀಯ ರಾಯಭಾರಿ ಕಚೇರಿ ಸಂಪೂರ್ಣವಾಗಿ ತಳ್ಳಿ ಹಾಕಿದೆ.

    ಈ ಬಗ್ಗೆ ಮಾತನಾಡಿ, ಶ್ರೀಲಂಕಾದ ಪ್ರಜಾಪ್ರಭುತ್ವ, ಸ್ಥಿರತೆ ಮತ್ತು ಆರ್ಥಿಕ ಚೇತರಿಕೆಗೆ ಭಾರತವು ಸಂಪೂರ್ಣ ಬೆಂಬಲವನ್ನು ಹೊಂದಿದೆ. ಆದರೆ ಸೈನ್ಯವನ್ನು ನವದೆಹಲಿಯಿಂದ ಕೊಲಂಬೊಗೆ ಕಳುಹಿಸಿಲ್ಲ. ಈ ಎಲ್ಲಾ ಊಹಾಪೋಹಗಳು ಸುಳ್ಳು ಮತ್ತು ನಕಲಿಯದ್ದಾಗಿದೆ ಎಂದರು.

    sri lanka

    ಸೋಮವಾರ ರಾಜೀನಾಮೆ ನೀಡಿದ ನಂತರ ಮಹಿಂದಾ ರಾಜಪಕ್ಸೆ ಎಲ್ಲಿದ್ದಾರೆ ಎಂದು ಪ್ರಶ್ನೆ ಕಾಡಿತ್ತು. ಮಹಿಂದ ಅವರು ತಮ್ಮ ಕಚೇರಿ ಹಾಗೂ ಅಧಿಕೃತ ನಿವಾಸವಾದ ಟೆಂಪಲ್ ಟ್ರೀಸ್ ತೊರೆದಿದ್ದಾರೆ ಎಂದು ವರದಿಯಾಗಿತ್ತು. ಇದನ್ನೂ ಓದಿ: ಧರೆಗುರುಳಿದ ಪಾರಂಪರಿಕ ವೃಕ್ಷ ದೊಡ್ಡಾಲದ ಮರ!

    ಈ ಹಿನ್ನೆಲೆಯಲ್ಲಿ ಭಾರತವು ತನ್ನ ಸೈನ್ಯವನ್ನು ಶ್ರೀಲಂಕಾಕ್ಕೆ ಕಳುಹಿಸುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಊಹಾಪೋಹದ ವರದಿಗಳು ಸ್ಪಷ್ಟವಾಗಿ ನಿರಾಕರಿಸುತ್ತೇವೆ. ಈ ವರದಿಗಳು ಮತ್ತು ಅಂತಹ ಅಭಿಪ್ರಾಯಗಳು ಭಾರತ ಸರ್ಕಾರದ ಸ್ಥಾನಕ್ಕೆ ಅನುಗುಣವಾಗಿಲ್ಲ ಭಾರತೀಯ ಮಿಷನ್ ಟ್ವೀಟ್‍ನಲ್ಲಿ ಹೇಳಿದೆ.

    ಶ್ರೀಲಂಕಾದ ಪ್ರಜಾಪ್ರಭುತ್ವ, ಸ್ಥಿರತೆ ಮತ್ತು ಆರ್ಥಿಕ ಚೇತರಿಕೆಗೆ ಭಾರತವು ಸಂಪೂರ್ಣ ಬೆಂಬಲವನ್ನು ಹೊಂದಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ನಿನ್ನೆ ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನೂ ಓದಿ: ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರನ್ನು ಗುಂಡಿಕ್ಕಿ ಕೊಲ್ಲಿ: ಶ್ರೀಲಂಕಾ ರಕ್ಷಣಾ ಸಚಿವಾಲಯ ಆದೇಶ

  • ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು – ಪ್ರಧಾನಿ ಹೊರತುಪಡಿಸಿ, ಎಲ್ಲಾ ಸಚಿವರು ರಾಜೀನಾಮೆ

    ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು – ಪ್ರಧಾನಿ ಹೊರತುಪಡಿಸಿ, ಎಲ್ಲಾ ಸಚಿವರು ರಾಜೀನಾಮೆ

    ಕೊಲಂಬೊ: ಆರ್ಥಿಕ ಬಿಕ್ಕಿನಲ್ಲಿ ಸಿಲುಕಿರುವ ಶ್ರೀಲಂಕಾ ರಾಜಕೀಯದಲ್ಲಿ ಪ್ರಮುಖ ಬೆಳವಣೆಗೆಯೊಂದು ನಡೆದಿದ್ದು, ಭಾನುವಾರ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರನ್ನು ಹೊರತುಪಡಿಸಿ ಉಳಿದ ಎಲ್ಲಾ ಸಂಸತ್ತಿನ ಸಚಿವರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.

    ದೇಶದ ಆರ್ಥಿಕ ಬಿಕ್ಕಟ್ಟಿನ ನಡುವೆ ಭಾನುವಾರ ಮಹಿಂದಾ ರಾಜಪಕ್ಸೆ ಅವರು ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರನ್ನು ಭೇಟಿ ಮಾಡಿದ್ದಾರೆ. ಈ ಸಭೆಯಿಂದಾಗಿ ಮಹಿಂದಾ ರಾಜಪಕ್ಸೆ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಊಹಾಪೆಪೋಹಗಳನ್ನು ಇದೀಗ ಹರಿದಾಡುತ್ತಿದೆ. ಅಲ್ಲದೇ ಈ ಸಭೆಯಲ್ಲಿ ಹಲವಾರು ಪ್ರಮುಖ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

    ಈ ಕುರಿತಂತೆ ಶ್ರೀಲಂಕಾದ ಶಿಕ್ಷಣ ಸಚಿವ ದಿನೇಶ್ ಗುಣವರ್ದನಾ ಅವರು, ಭಾನುವಾರ ತಡರಾತ್ರಿ ನಡೆದ ಸಭೆಯಲ್ಲಿ ಅಧ್ಯಕ್ಷ ಗೋಟಾಬಯ ಮತ್ತು ಮಹಿಂದಾ ರಾಜಪಕ್ಸೆ ಅವರನ್ನು ಹೊರತುಪಡಿಸಿ ಸಂಸ ತ್ತಿನ ಎಲ್ಲಾ ಸಚಿವರು ತಮ್ಮ ಸ್ಥಾನಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟಿನಿಂದ ರೊಚ್ಚಿಗೆದ್ದ ಶ್ರೀಲಂಕಾ ಜನತೆ- ಪ್ರತಿಭಟನೆಗೆ ಪ್ರಮುಖ ಕಾರಣಗಳೇನು?

    ಮತ್ತೊಂದೆಡೆ ಕ್ರೀಡಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಮಲ್ ರಾಜಪಕ್ಸೆ ಅವರು, ಎಲ್ಲ ಖಾತೆಗಳಿಗೆ ನನ್ನ ರಾಜೀನಾಮೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಅಧ್ಯಕ್ಷರಿಗೆ ತಿಳಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಶ್ರೀಲಂಕಾದ ಮಾಜಿ ಸಚಿವ ವಿಮಲ್ ವೀರವಾಂಸ ಅವರು ಅಧ್ಯಕ್ಷರನ್ನು ಭೇಟಿ ಮಾಡಿ, ದೇಶದಲ್ಲಿ ಪ್ರಸ್ತುತ ಬಿಕ್ಕಟ್ಟನ್ನು ಸುಧಾರಿಸಲು ಸರ್ವಪಕ್ಷಗಳೊಂದಿಗೆ ಮಧ್ಯಂತರ ಸರ್ಕಾರವನ್ನು ನೇಮಿಸುವುದರ ಬಗ್ಗೆ ಪ್ರಸ್ತಾಪಿಸಿದರು.  ಇದನ್ನೂ ಓದಿ: ಒಂದು ಮೊಟ್ಟೆಗೆ 30 ರೂಪಾಯಿ- ಶ್ರೀಲಂಕಾದಲ್ಲಿ ದಿನಸಿ ಬೆಲೆ ಏರಿಕೆ

    ಹಣದುಬ್ಬರದಿಂದಾಗಿ ಶ್ರೀಲಂಕಾದಲ್ಲಿ ಸರಕುಗಳ ಬೆಲೆಗಳನ್ನು ಗಗನಕ್ಕೇರಿದೆ. ಜನರು ಇಂಧನ, ಆಹಾರ ಮತ್ತು ಔಷಧಿಗಳನ್ನು ಖರೀದಿಸಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಶ್ರೀಲಂಕಾದಲ್ಲಿ ತರಕಾರಿಗಳ ಬೆಲೆಗಳು ದ್ವಿಗುಣಗೊಂಡಿವೆ.

    ದೇಶದಲ್ಲಿ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆ ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜಧಾನಿ ಸೇರಿದಂತೆ ದೇಶದ ಅನೇಕ ಪ್ರದೇಶಗಳಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದು, ಅಗತ್ಯ ವಸ್ತುಗಳ ಕೊರತೆ ಮತ್ತು ದೀರ್ಘಾವಧಿಯ ವಿದ್ಯುತ್ ಕಡಿತಕ್ಕೆ ಮಹಿಂದಾ ರಾಜಪಕ್ಸೆ ಆಡಳಿತವನ್ನು ನಾಗರಿಕರು ದೂಷಿಸುತ್ತಿದ್ದಾರೆ.

  • ಅತೃಪ್ತ ಶಾಸಕರು ಪಕ್ಷ ಬಿಡುತ್ತಾರೆ ಅನಿಸ್ತಿದೆ: ಜಿ.ಪರಮೇಶ್ವರ್

    ಅತೃಪ್ತ ಶಾಸಕರು ಪಕ್ಷ ಬಿಡುತ್ತಾರೆ ಅನಿಸ್ತಿದೆ: ಜಿ.ಪರಮೇಶ್ವರ್

    – ಜಿ.ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿದ ಶ್ರೀಲಂಕಾ ಮಾಜಿ ರಾಷ್ಟ್ರಪತಿ

    ಬೆಂಗಳೂರು: ಅತೃಪ್ತ ಶಾಸಕರು ಕಳೆದ ಮೂರು ಸಿಎಲ್‍ಪಿ ಸಭೆಗೂ ಹಾಜರಾಗಲಿಲ್ಲ. ಹೀಗಾಗಿ ಅವರು ಪಕ್ಷ ಬಿಡುತ್ತಾರೆ ಅಂತ ಅನಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.

    ಇಲ್ಲಿನ ಸದಾಶಿವನಗರದ ನಿವಾಸದಲ್ಲಿ ಶ್ರೀಲಂಕಾ ಮಾಜಿ ರಾಷ್ಟ್ರಪತಿ ಮಹಿಂದಾ ರಾಜಪಕ್ಸೆ ಅವರನ್ನು ಭೇಟಿಯಾಗಿ ಬಳಿಕ ಮಾತನಾಡಿದ ಅವರು, ಸಿಎಲ್‍ಪಿ ಸಭೆಗೆ ಗೈರಾದ ಶಾಸಕರ ಅನರ್ಹತೆ ಮಾಡುವ ಕುರಿತು ಈಗಾಗಲೇ ತೀರ್ಮಾನ ಮಾಡಲಾಗಿದೆ. ಅದರಲ್ಲಿ ಯಾವುದೇ ಗೊಂದಲಗಳಿಲ್ಲ. ಅವರನ್ನು ಹೊರತುಪಡಿಸಿ ಬೇರೆ ಶಾಸಕರು ಪಕ್ಷವನ್ನು ಬಿಡುವುದಿಲ್ಲ ಎಂದು ತಿಳಿಸಿದರು.

    ಅತೃಪ್ತ ಶಾಸಕರನ್ನು ಹೊರತಾಗಿ ನಮ್ಮ ಪಕ್ಷದ ಬೇರೆ ಶಾಸಕರ ಜೊತೆಗೆ ಬಿಜೆಪಿಯವರು ಮಾತನಾಡಿರಬಹುದು. ಆದರೆ ಅವರಲ್ಲಿ ಪಕ್ಷಬಿಡುವ ಲಕ್ಷಣಗಳು ಕಾಣಿಸುತ್ತಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದು, ಅತೃಪ್ತರ ಬಗ್ಗೆ ಚರ್ಚೆ ನಡೆಸಿದ್ದಾರೆ. ಅವರು ಬೆಂಗಳೂರಿಗೆ ವಾಪಸ್ ಬಂದು ಏನು ಕ್ರಮ ಕೈಗೊಳ್ಳಬೇಕು ಅಂತ ತಿಳಿಸಲಿದ್ದಾರೆ ಎಂದರು.

    ಶ್ರೀಲಂಕಾ ಮಾಜಿ ಅಧ್ಯಕ್ಷರ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ, ಮಹಿಂದಾ ರಾಜಪಕ್ಸೆ ಅವರು ಐಟಿ ಹಾಗೂ ಸ್ಟಾರ್ಟ್ ಅಪ್‍ಗಳ ಬಗ್ಗೆ ಮಾಹಿತಿ ಪಡೆದರು. ಇದನ್ನು ಬಿಟ್ಟು ಬೇರೆ ಯಾವುದೇ ರಾಜಕೀಯ ಅಥವಾ ಒಪ್ಪಂದಗಳ ಕುರಿತು ಚರ್ಚೆ ಮಾಡಲಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲಾದ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು. ಭಾರತದೊಂದಿಗೆ ಶ್ರೀಲಂಕಾ ಕೂಡ ವೇಗವಾಗಿ ಬೆಳವಣಿಗೆ ಹೊಂದಬೇಕು ಎನ್ನುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ ಎಂದರು.

    ನನ್ನ ಅಧಿಕಾರ ಅವಧಿಯಲ್ಲಿ ಹಲವು ಯೋಜನೆ ಜಾರಿಗೆ ತಂದಿದ್ದೆ. ಆದರೆ ಈಗ ದೇಶದ ಅಭಿವೃದ್ಧಿ ಕುಂಠಿತವಾಗಿದೆ ಅಂತ ಮಹಿಂದಾ ರಾಜಪಕ್ಸೆ ಬೇಸರ ವ್ಯಕ್ತಪಡಿಸಿದರು. ಅವರು ಮತ್ತೆ ಅಧಿಕಾರಕ್ಕೆ ಬರಬಹುದು ಎನ್ನುವ ವಿಶ್ವಾಸವಿದೆ ಎಂದು ಜಿ.ಪರಮೇಶ್ವರ್ ತಿಳಿಸಿದರು.

    ಹೆಬ್ಬಾಳ ಪ್ಲೈ ಓವರ್ ನಿರ್ಮಾಣ ಯೋಜನೆಯಲ್ಲಿ ಸ್ವಲ್ಪ ಬದಲಾವಣೆ ಮಾಡುತ್ತಿದ್ದೇವೆ. ಪ್ಲಾನ್ ಸಿದ್ಧವಾದ ಮೇಲೆ ಸಾರ್ವಜನಿಕರು ಹಾಗೂ ಆ ಭಾಗದ ಜನರ ಅಭಿಪ್ರಾಯ ಸಂಗ್ರಹಿಸುತ್ತೇವೆ. ಕೆಲವರು ವಿರೋಧ ಮಾಡುತ್ತಾರೆ ಅಂದ್ರೆ ಯೋಜನೆಯನ್ನು ಬಿಡುವುದಕ್ಕೆ ಆಗಲ್ಲ. ಯೋಜನೆಯಲ್ಲಿ ಲೋಪ ಇದ್ದರೆ ಹೇಳಲಿ ಸರಿಪಡಿಸುತ್ತೇವೆ. ಈ ಯೋಜನೆಯನ್ನು ಅನೇಕರು ಸ್ಟೀಲ್ ಬ್ರಿಡ್ಜ್ ಅಂತ ಕರೆಯುತ್ತಿದಾರೆ. ಆದರೆ ಅದು ಸ್ಟೀಲ್ ಬ್ರೀಡ್ಜ್ ಅಲ್ಲ. ಚಾಲುಕ್ಯ ಸರ್ಕಲ್‍ನಿಂದ ಹೆಬ್ಬಾಳ ಸಂಪರ್ಕಿಸುವ ಪ್ಲೈ ಓವರ್ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.

    ಬಜೆಟ್ ಬಗ್ಗೆ ಬಿಸಿ ಪಾಟೀಲ್ ಅಸಮಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜಿ.ಪರಮೇಶ್ವರ್ ಅವರು, ನಾವು ಬಜೆಟ್‍ನಲ್ಲಿ 224 ಕ್ಷೇತ್ರಕ್ಕೂ ಯೋಜನೆ ಹಂಚುವುದಿಲ್ಲ. ಕಾರ್ಯಕ್ರಮ ಘೋಷಿಸುತ್ತೇವೆ ಅವರ ಕ್ಷೇತ್ರಕ್ಕೆ ಅನ್ವಯವಾಗುತ್ತದೆ. ರಸ್ತೆ ಕೆರೆ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ಘೋಷಿಸಿದ್ದಾರೆ. ಅದು ಅವರ ಕ್ಷೇತ್ರಕ್ಕೂ ಅನ್ವಯವಾಗಲಿದೆ. ಎಲ್ಲನ್ನೂ ಬಜೆಟ್‍ನಲ್ಲೇ ಘೋಷಿಸಬೇಕಂತ ಏನು ಇಲ್ಲ. ಯಾವುದೇ ಶಾಸಕರಿಗೆ ಅಸಮಧಾನವಿದ್ದರೆ ನಮಗೆ ಹೇಳಲಿ. ಅವರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ಕೊಡುವುದಕ್ಕೆ ಸಂಪ್ಲಿಮೆಂಟರಿ ಬಜೆಟ್‍ನಲ್ಲಿ ಅವಕಾಶವಿದೆ ಎಂದು ತಿಳಿಸಿದರು.

    ಎನ್‍ಜಿಟಿ ಬಫರ್ ಜೋನ್ ವಿಚಾರವಾಗಿ ಮಾತನಾಡಿ ಅವರು, ಎನ್‍ಜಿಟಿ ಆದೇಶ ಪಾಲಿಸುವುದು ಕಷ್ಟ. ಕೆರೆ ಹಾಗೂ ರಾಜಕಾಲುವೆಯಿಂದ 75 ಮೀಟರ್ ಜಾಗ ಬಿಟ್ಟು ಮನೆ ಕಟ್ಟಿಕೋಬೇಕು. ಇಡೀ ದೇಶದಲ್ಲಿ ಬೆಂಗಳೂರಿಗೆ ಮಾತ್ರ ಎನ್‍ಜಿಟಿ ಆದೇಶ ನೀಡಲಾಗಿದ್ದು, ಇದರಿಂದಾಗಿ 36 ಸಾವಿರ ಮನೆಗಳನ್ನು ಒಡೆಯಬೇಕಾಗುತ್ತದೆ. ಆದೇಶ ಪಾಲನೆ ಮಾಡಿದರೆ ಜನರು ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.

    ಬಫರ್ ಜೋನ್ ನಿಯಮ ಬದಲಾಯಿಸುವ ಅಗತ್ಯವಿದೆ. ಕೆರೆಗಳಿಗೆ ಹಾಗೂ ರಾಜಕಾಲುವೆಗೆ ಬೇರೆ ಬೇರೆ ನಿಯಮ ಮಾಡುವ ಅಗತ್ಯವಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿರುವೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv