Tag: ಮಹಾಶಿವರಾತ್ರಿ

  • ಶಿವನ ದೇವಸ್ಥಾನ ತೆರವು ಮಾಡಲು ಮುಂದಾದ ಬಿಬಿಎಂಪಿ

    ಶಿವನ ದೇವಸ್ಥಾನ ತೆರವು ಮಾಡಲು ಮುಂದಾದ ಬಿಬಿಎಂಪಿ

    ಬೆಂಗಳೂರು: ಶುಕ್ರವಾರ ತಾನೇ ಶಿವರಾತ್ರಿ ಮುಗಿದಿದೆ. ಶಿವರಾತ್ರಿ ದಿನವೇ ಶಿವನ ಭಕ್ತರಿಗೆ ಬಿಬಿಎಂಪಿ ಶಾಕ್ ನೀಡಿದೆ. ಬೆಂಗಳೂರಿನಲ್ಲಿರುವ ಪ್ರಮುಖ ಶಿವನ ದೇವಸ್ಥಾನವನ್ನು ತೆರವು ಮಾಡಲು ಮುಂದಾಗಿದೆ.

    ಜಯನಗರದ 4ನೇ ಬಡಾವಣೆಯ ರಸ್ತೆ ಪಕ್ಕದಲ್ಲೆ ದೇವಸ್ಥಾನ ಇದ್ದು, ಅದನ್ನು ಕೆಡವಲು ಕೋರ್ಟ್ ಆದೇಶ ಮಾಡಿದೆ ಎಂದು ಸುಳ್ಳು ಆದೇಶ ಕಾಫಿಯನ್ನು ತೋರಿಸಿ ದೇವಸ್ಥಾನ ಕೆಡವಲು ಮುಂದಾಗಿದ್ದಾರೆ ಎಂದು ಭಕ್ತರು ಗರಂ ಆಗಿದ್ದಾರೆ.

    ದೇವಸ್ಥಾನದ ಪಕ್ಕದಲ್ಲಿರುವ ಸನಾತನ ಕಲಾ ಕೇತ್ರ ಸಂಸ್ಥೆಯ ರಂಗನಾಥ್ ಎಂಬವರು ದೇವಸ್ಥಾನ ತೆರವು ಮಾಡಲು ಹೈಕೋರ್ಟ್ ಅಲ್ಲಿ ಅರ್ಜಿ ಹಾಕಿದ್ದು, ದೇವಸ್ಥಾನವನ್ನು ತೆರವು ಮಾಡಿದ್ದೀರಾ? ಎಂದು ಮಾರ್ಚ್ 4ರಂದು ಬಿಬಿಎಂಪಿಗೆ ಮಾಹಿತಿ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಆದರೆ ಬಿಬಿಎಂಪಿ ಇಂಜಿನಿಯರ್ ಪ್ರಸನ್ನ ಎಂಬವರು ಕೋರ್ಟ್ ಆದೇಶ ಇದೆ ಎಂದು ತಪ್ಪು ಮಾಹಿತಿ ನೀಡಿ ಇದೇ ತಿಂಗಳ 28ರಂದು ದೇವಸ್ಥಾನ ಕೆಡವಲು ಮುಂದಾಗಿದ್ದಾರೆ ಅನ್ನೋ ಆರೋಪಗಳು ಕೇಳಿ ಬಂದಿವೆ.

    ಹೀಗಾಗಿ ಭಕ್ತರು ಸೋಮವಾರ ದೇವಸ್ಥಾನದ ಮುಂದೆ ಬೃಹತ್ ಪ್ತತಿಭಟನೆ ಕೈಗೊಂಡಿದ್ದು ಬಿಬಿಎಂಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. 175 ವರ್ಷಗಳಿಂದ ಈ ದೇವಸ್ಥಾನ ಇದ್ದು ಜಯನಗರ ನಿವಾಸಿಗಳು ಪೂಜೆ ಪುರಸ್ಕಾರ ಮಾಡುತ್ತಿದ್ದಾರೆ. ಈ ದೇವರಿಗೆ ಅಪಾರ ಭಕ್ತಗಣವೇ ಇದೇ. ಏಕಾಏಕಿ ದೇವಸ್ಥಾನ ಕೆಡವಲು ಮುಂದಾಗಿರುವುದಕ್ಕೆ ರೊಚ್ಚಿಗೆದ್ದಿದ್ದು, ದೇವಸ್ಥಾನವನ್ನು ಕೆಡವದೇ ಹಾಗೇ ಬಿಟ್ಟು ಅದನ್ನು ಅಭಿವೃದ್ಧಿ ಮಾಡಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.

  • ಕೆಜಿಎಫ್‍ನಲ್ಲಿ ಕೋಟಿ ಶಿವಲಿಂಗಗಳ ಶಿವರಾತ್ರಿ ವೈಭವ

    ಕೆಜಿಎಫ್‍ನಲ್ಲಿ ಕೋಟಿ ಶಿವಲಿಂಗಗಳ ಶಿವರಾತ್ರಿ ವೈಭವ

    ಕೋಲಾರ: ಏಕ ಕಾಲದಲ್ಲಿ ಕೋಟಿ ಶಿವಲಿಂಗಗಳ ದರ್ಶನ ನೀಡುವ ವಿಶ್ವದ ಏಕೈಕ ಸ್ಥಳವಾದ ಜಿಲ್ಲೆಯ ಕಮ್ಮಸಂದ್ರದ ಕೋಟಿಲಿಂಗೇಶ್ವರದಲ್ಲಿ ಶಿವರಾತ್ರಿ ವೈಬವ ಜೋರಾಗಿದ್ದು, ಇಂದು ಮುಂಜಾನೆಯಿಂದಲೇ ವಿವಿಧ ರಾಜ್ಯಗಳಿಂದ ಜನಸ್ತೋಮ ಈ ಪುಣ್ಯ ಕ್ಷೇತ್ರದತ್ತ ಹರಿದು ಬಂದಿದೆ.

    ಒಂದೆಡೆ ಎಲ್ಲಿ ನೋಡಿದರು ಶಿವಲಿಂಗಗಳು, ಮತ್ತೊಂದೆಡೆ ಶಿವಲಿಂಗಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿರುವ ಮಹಿಳೆಯರು ಭಕ್ತರು. ಇದೆಲ್ಲಾ ದೃಷ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಕಮ್ಮಸಂದ್ರದ ಕೋಟಿಲಿಂಗೇಶ್ವರ ಕ್ಷೇತ್ರದಲ್ಲಿ. ಹೌದು ಇಂದು ಮಹಾಶಿವರಾತ್ರಿ ಅಂಗವಾಗಿ ಕೋಟಿಲಿಂಗೇಶ್ವರದಲ್ಲಿ ವಿಶೇಷ ಪೂಜೆ, ಮುಂಜಾನೆಯಿಂದಲೇ ಅಲ್ಲಿನ 108 ಅಡಿಯ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಹಾಗೂ ಅಲಂಕಾರವನ್ನು ಮಾಡಲಾಗಿದೆ.

    ಜೊತೆಗೆ ಇಲ್ಲಿನ ಕೋಟಿ ಶಿವಲಿಂಗಗಳಿಗೂ ಅದ್ಧೂರಿ ಅಲಂಕಾರ ಮಾಡಲಾಗಿದೆ. ಮುಂಜಾನೆಯಿಂದಲೂ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಜೊತೆಗೆ ಈ ವಿಶೇಷ ದಿನದಂದು ಲಕ್ಷಾಂತರ ಜನರು ಬಂದು ಕೋಟಿ ಶಿವಲಿಂಗಗಳ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡದೆ ಪೂಜೆಗಳಲ್ಲಿ ಹಲವೆಡೆಗಳಿಂದ ಬಂದಿದ್ದ ಭಕ್ತಾದಿಗಳು ಭಾಗಿಯಾಗುತ್ತಿದ್ದಾರೆ.

    ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಹಾಗೂ ಆಂಧ್ರ ಪ್ರದೇಶ, ತಮಿಳುನಾಡು, ಕೇರಳದಿಂದಲೂ ಸಾವಿರಾರು ಜನ ಭಕ್ತರು ಸಾಗರೋಪಾದಿಯಲ್ಲಿ ಕೋಟಿ ಲಿಂಗ ದರ್ಶನಕ್ಕೆ ಬರುತ್ತಿದ್ದಾರೆ. ಶಿವರಾತ್ರಿಯ ಈ ವಿಶೇಷ ದಿನದಂದು ಇಚ್ಚೆಯುಳ್ಳವರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಇಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡಿದರು. ವಿಶೇಷವಾಗಿ ಕೋಟಿಲಿಂಗೇಶ್ವರ ಕ್ಷೇತ್ರದಲ್ಲಿ ಹಲವಾರು ಜನ ಶಿವಲಿಂಗ ಪ್ರತಿಷ್ಠಾಪನೆ ಮಾಡಿ, ಸ್ವತಃ ತಾವೆ ಪೂಜೆ ಸಲ್ಲಿಸಿದರು.

    ಅಲ್ಲದೆ ಕೋಟಿಲಿಂಗೇಶ್ವರದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಭ್ರಹ್ಮರಥೋತ್ಸವ ಕೂಡಾ ನಡೆಯಿತು. ಇಷ್ಟೆಲ್ಲಾ ಕಾರ್ಯಕ್ರಮಗಳ ನಡುವೆ ಏಕ ಕಾಲದಲ್ಲಿ ಶಿವಲಿಂಗ ದರ್ಶನ ಮಾಡುವ ಜನರಿಗಂತೂ ಕೈಲಾಸವೇ ಧರೆಗಿಳಿದ ಅನುಭವವಾಗಿದೆ. ಹಾಗೆಯೇ ದರ್ಶನಕ್ಕೆ ಬರುತ್ತಿರುವ ಭಕ್ತರಿಗೆ ದೇವಾಲಯದಿಂದ ಸಾಕಷ್ಟು ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

    ಇಂದು ಮಹಾಶಿವರಾತ್ರಿಯ ಪ್ರಯುಕ್ತ ಮುಂಜಾನೆಯಿಂದಲೇ ಸಾವಿರಾರು ಭಕ್ತರು ಕೋಟಿ ಶಿವಲಿಂಗಗಳ ದರ್ಶನ ಪಡೆಯಲು ಸಾಗರೋಪಾದಿಯಲ್ಲಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಶಿವಲಿಂಗಗಳ ದರ್ಶನ ಪಡೆದು ಶಿವನ ಕೃಪೆಗೆ ಪಾತ್ರರಾಗುತ್ತಿದ್ದಾರೆ.

  • ರಾಜ್ಯಾದ್ಯಂತ ಶಿವರಾತ್ರಿ ಸಂಭ್ರಮ- ಪರಮಶಿವನ ದೇಗುಲಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ

    ರಾಜ್ಯಾದ್ಯಂತ ಶಿವರಾತ್ರಿ ಸಂಭ್ರಮ- ಪರಮಶಿವನ ದೇಗುಲಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ

    – ಶಿವ ಕೃಪೆಗೆ ಪಾತ್ರರಾಗಲು ಭಕ್ತರ ದಾಂಗುಡಿ

    ಬೆಂಗಳೂರು: ಇಂದು ನಾಡಿನೆಲ್ಲೆಡೆ ಮಹಾಶಿವರಾತ್ರಿಯ ಸಂಭ್ರಮ ಸಡಗರ ಮನೆ ಮಾಡಿದೆ. ಅದರಲ್ಲೂ ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ಪರಶಿವನ ಸ್ಮರಣೆ ಮುಗಿಲು ಮುಟ್ಟಿದೆ.

    ಮಹಾ ಶಿವರಾತ್ರಿ ಪರಮ ಶಿವನ ಭಕ್ತರಿಗೆ ಅತ್ಯಂತ ಪ್ರಿಯವಾದ ದಿನ. ಪ್ರತಿವರ್ಷದಂತೆ ಮಾಸಗಳಲ್ಲೇ ಶ್ರೇಷ್ಠವಾದ ಮಾಘ ಮಾಸ, ಕೃಷ್ಣ ಪಕ್ಷದ ತ್ರಯೋದಶಿಯಂದು ಶಿವರಾತ್ರಿ ಬಂದಿದೆ. ಹೀಗಾಗಿ ನಗರದ ಪ್ರಮುಖ ಶಿವನ ದೇವಸ್ಥಾನಗಳಲ್ಲಿ ವಿಶೇಷ ಸಿದ್ಧತೆ ನಡೆಸಲಾಗುತ್ತಿದೆ. ಅದರಂತೆ ಗವಿಪುರದ ಗಂಗಾಧರ ದೇಗುಲದಲ್ಲಿ ವಿಶೇಷವಾಗಿ ರುದ್ರಾಭಿಷೇಕ, ವಿಶೇಷ ಅಭಿಷೇಕ ಪುನಸ್ಕಾರಗಳು ಶಿವನಿಗೆ ನೆರವೇರಲಿದೆ.

    ನೀಲಕಂಠೇಶ್ವರನ ಇಂದಿನ ಆಚರಣೆಗಳೇನು..?
    ಸೂರ್ಯೋದಯದ ನಂತ್ರ ಮಾಘಸ್ನಾನ ಮಾಡಬೇಕು. ಶಿವನಿಗೆ ಮಾಡುವ ಹಾಲು, ಮೊಸರು ಅಭಿಷೇಕ ನೋಡಬೇಕು. ಸ್ವಾಮಿಯ ಅಲಂಕಾರಗಳನ್ನು ನೋಡಬೇಕು. ದೇವಾಲಯದಲ್ಲಿ ಓಂ ನಮಃ ಶಿವಾಯ ಎಂದು ಪಠಿಸಬೇಕು. ಜಾಗರಣೆ ಮಾಡುವಾಗ ಶಿವನ ಪರಿಸರ ಇರಬೇಕು. ಶಿವನ ಭಜನೆ ಅಥವಾ ಪಂಚಾಕ್ಷರಿ ಮಂತ್ರ ಪಠಿಸಬೇಕು. ಶಿವನಿಗೆ ಪ್ರಿಯವಾದ ಬಿಲ್ವಪತ್ರೆ, ರುದ್ರಾಕ್ಷಿ,ಎಕ್ಕೆ ಮುಂತಾದವುಗಳನ್ನು ಅರ್ಪಿಸಬೇಕು.

    ಇಂದು ಬೆಳಗ್ಗಿನಿಂದಲೇ ಗವಿಗಂಗಾಧರೇಶ್ವನಿಗೆ ಪೂಜೆ ಆರಂಭವಾಗುತ್ತದೆ. ಭಕ್ತಾದಿಗಳಿಗೆ ಪೆಂಡಾಲ್ ವ್ಯವಸ್ಥೆ ಮಾಡಲಾಗಿದೆ. ಈ ಶಿವರಾತ್ರಿಯಿಂದ ಯಾವುದೇ ರಾಶಿ, ರಾಜಕಾರಣಿಗಳಿಗೂ ಕೆಡಕು ಇಲ್ಲ ಎಂದು ಗವಿಗಂಗಾಧರೇಶ್ವರ ದೇವಾಲಯದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ತಿಳಿಸಿದ್ದಾರೆ.

  • 182 ವರ್ಷಗಳ ಬಳಿಕ ಅಪರೂಪದ ಶಿವರಾತ್ರಿ- ಮಹಾ ಪೂಜೆಯಿಂದ ಬಾಳು ಬಂಗಾರ

    182 ವರ್ಷಗಳ ಬಳಿಕ ಅಪರೂಪದ ಶಿವರಾತ್ರಿ- ಮಹಾ ಪೂಜೆಯಿಂದ ಬಾಳು ಬಂಗಾರ

    ಬೆಂಗಳೂರು: ನಾಳೆ(ಶುಕ್ರವಾರ) ಮಹಾ ಶಿವರಾತ್ರಿ ಸಂಭ್ರಮ, ಜಗವೆಲ್ಲ ಶಿವಮಯವಾಗುವ ಸಮಯ. ಈ ಬಾರಿ ಗಂಗಾಧರನ ಶಿವರಾತ್ರಿ ಆಚರಣೆ ಬಲು ವಿಶೇಷವಾಗಿದೆ. ಯಾಕೆಂದರೆ 182 ವರ್ಷಗಳ ಬಳಿಕ ಅಪರೂಪದ ಶ್ರೇಷ್ಠ ದಿನದಲ್ಲಿ ಶಿವರಾತ್ರಿ ಹಬ್ಬ ಬಂದಿದೆ.

    ಹೌದು. 182 ವರ್ಷಗಳ ಬಳಿಕ ಅಪರೂಪದ ದಿನದಲ್ಲಿ ಶಿವರಾತ್ರಿ ಹಬ್ಬ ಬಂದಿದೆ. ಮಾಘ ಮಾಸ ಶುಕ್ಲ ಪಕ್ಷದ ಶನೇಶ್ವರ ಜಯಂತಿಯ ದಿನ ಶಿವರಾತ್ರಿ ಬಂದಿದೆ. ಇದು ಬಲು ಅಪರೂಪ ದಿನವಾಗಿದ್ದು, ಶನೇಶ್ವರ ಜಯಂತಿ ಹಾಗೂ ಶಿವರಾತ್ರಿ ಒಟ್ಟಿಗೆ ಬರುವುದು 182 ವರ್ಷಗಳ ಬಳಿಕವಂತೆ. ಹೀಗಾಗಿ ಶ್ರೇಷ್ಠ ದಿನದಲ್ಲಿ ಶಿವರಾತ್ರಿ ಸಂಭ್ರಮ ಭಕ್ತರ ಪಾಲಿಗೆ ವರದಾನವಾಗಲಿದೆ ಎಂದು ಖ್ಯಾತ ಜ್ಯೋತೀಷಿ ಆನಂದ ಗುರೂಜಿ ಅಭಿಪ್ರಾಯ ಪಟ್ಟಿದ್ದಾರೆ.

    ಶಿವರಾತ್ರಿ ಅಂದ್ರೆ ಜಾಗರಣೆ, ಉಪವಾಸವಿದ್ದು ಶಿವನ ಆರಾಧನೆ ಮಾಡ್ತಾರೆ. ಈ ಬಾರಿ ಶಿವರಾತ್ರಿಯ ಆಚರಣೆ ಫಲಾಫಲ ಹೆಚ್ಚಿರುತ್ತೆ. ಈ ಬಾರಿಯ ಶಿವರಾತ್ರಿಯ ಅನುಷ್ಠಾನ ಅಷ್ಟೇ ಸಂಪ್ರದಾಯ ಬದ್ಧವಾಗಿರಬೇಕು. ಯಾಕೆಂದರೆ ಛಾಯಾಪುತ್ರನ ಜೊತೆ ಶಿವನ ಆರಾಧನೆಯ ಪುಣ್ಯ ದಿನವಾಗಿರೋದ್ರಿಂದ ನಾಳೆಯ ಆಚರಣೆ ವಿಶೇಷವಾಗಿರಲಿದೆ.

    ಶಿವರಾತ್ರಿ ಆಚರಣೆ ಹೇಗೆ?
    ಶಿವನ ಆರಾಧನೆಗೂ ಮುನ್ನ ಶುದ್ಧಜಲದಲ್ಲಿ ಸ್ನಾನ ಮಾಡಿ. ಶಿವನ ದೇಗುಲದಲ್ಲಿ ಪೂಜೆಯನ್ನು ನಿಷ್ಠೆಯಿಂದ ಮಾಡಿ. ಗಂಗಾಜಲದಿಂದ ಶುದ್ಧಜಲದಿಂದ ಶಿವನಿಗೆ ಅಭಿಷೇಕ ಮಾಡಿ. ನೀವೇ ಸ್ವತಃ ಅಭಿಷೇಕವನ್ನು ಮಾಡಿದ್ರೆ ಪುಣ್ಯ ಹೆಚ್ಚಿರುತ್ತೆ. ಶಿವನಿಗೆ ಆಢಂಬರದ ಪೂಜೆ ಬೇಕಾಗಿಲ್ಲ. ಶಿವ ಅಭಿಷೇಕ ಪ್ರಿಯನಾಗಿದ್ದು, ಅಭಿಷೇಕವನ್ನು ಮಾಡಿ. ಬಿಲ್ವಪತ್ರೆಯನ್ನು ಶಿವಲಿಂಗದ ಮೇಲಿಟ್ಟು ಪೂಜೆ ಮಾಡಬೇಕು. ಶಿವ ಶಿವರಾತ್ರಿ ದಿನ ಪಾರ್ವತಿ ಸಮೇತರಾಗಿ ಭೂಲೋಕದಲ್ಲಿ ಸಂಚರಿಸುತ್ತಾನೆ ಎನ್ನುವ ನಂಬಿಕೆ ಇದೆ. ಹಾಗಾಗಿ ಶಿವನ ಮಂತ್ರ ಪಠಣೆ ಮಾಡಬೇಕು. ಶಿವರಾತ್ರಿಯಂದು ರಾತ್ರಿಯಿಡಿ ಜಾಗರಣೆ ಮಾಡಿ ಉಪವಾಸವಿದ್ದರೆ ಪಾಪಕರ್ಮ ನಿವಾರಣೆಯಾಗುತ್ತೆ ಎನ್ನುವ ನಂಬಿಕೆಯಿದೆ.

    ಶಿವನಿಗೆ ಅತ್ಯಂತ ಪ್ರಿಯವಾದ ದಿನ, ಜಗತ್ತಿಗೆಲ್ಲ ಲೋಕಕಲ್ಯಾಣವಾಗುವ ದಿನ ಶಿವರಾತ್ರಿಯ ದಿನ ಎನ್ನುವ ನಂಬಿಕೆ ಇದೆ. ಅದರಲ್ಲೂ 182 ವರ್ಷಗಳ ಬಳಿಕ ಅಪರೂಪದ ದಿನದಲ್ಲಿ ಶಿವರಾತ್ರಿ ಬಂದಿರೋದ್ರಿಂದ ಶಿವಭಕ್ತರ ಖುಷಿಗೆ ಪಾರವೇ ಇಲ್ಲ.

  • ಅಧಿಕಾರಿಯ ನಿದ್ರೆಗೆ ಭಂಗ-ಯಕ್ಷಗಾನ, ಭಜನೆ ನಿಲ್ಲಿಸುವಂತೆ ಪೊಲೀಸರಿಂದ ಒತ್ತಡ!

    ಅಧಿಕಾರಿಯ ನಿದ್ರೆಗೆ ಭಂಗ-ಯಕ್ಷಗಾನ, ಭಜನೆ ನಿಲ್ಲಿಸುವಂತೆ ಪೊಲೀಸರಿಂದ ಒತ್ತಡ!

    ಮಂಗಳೂರು: ಮಹಾಶಿವರಾತ್ರಿ ಜಾಗರಣೆಯ ಪ್ರಯುಕ್ತ ನಡೆಯುತ್ತಿದ್ದ ಭಜನೆ ಹಾಗೂ ಯಕ್ಷಗಾನವನ್ನು ನಿಲ್ಲಿಸಲು ಒತ್ತಡ ಹೇರಿದ್ದಾರೆ ಅನ್ನೋ ಆರೋಪವೊಂದು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ವಿರುದ್ಧ ಕೇಳಿಬಂದಿದೆ.

    ಹೌದು, ಮಂಗಳೂರಿನ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಜಾಗರಣೆಯ ಅಂಗವಾಗಿ ಭಜನೆಗಳು ಹಾಗೂ ಯಕ್ಷಗಾನ ನಡೆಯುತ್ತಿತ್ತು. ಈ ದೇವಸ್ಥಾನದ ಹತ್ತಿರದಲ್ಲೇ ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಬಂಗಲೆ ಇದೆ. ಹೀಗಾಗಿ ಕಾರ್ಯಕ್ರಮದಿಂದ ಪೊಲೀಸ್ ಅಧಿಕಾರಿಯ ನಿದ್ದೆಗೆ ಭಂಗವಾಗಿದ್ದು, ಕಾರ್ಯಕ್ರಮ ನಿಲ್ಲಿಸಲು ಒತ್ತಡ ಹೇರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಕಾರ್ಯಕ್ರಮದಿಂದ ಕಿರಿಕಿರಿಯಾಗುತ್ತದೆ ಎಂದು ಪೊಲೀಸರು ಒತ್ತಡ ಹಾಕಿದ್ದಾರೆ. ಅಲ್ಲದೆ ಧ್ವನಿವರ್ಧಕ ಸ್ಥಗಿತಗೊಳಿಸಿ ಕಾರ್ಯಕ್ರಮ ನಡೆಸಲು ಸೂಚನೆ ನೀಡಿದ್ದಾರೆ. ನಾಗರಿಕರ ದೂರು ನೆಪದಲ್ಲಿ ಕಾರ್ಯಕ್ರಮ ರದ್ದುಪಡಿಸಲು ಒತ್ತಾಯ ಮಾಡಿದ್ದಾರೆ. ಈ ವೇಳೆ ಪೊಲೀಸರು ಮತ್ತು ದೇವಸ್ಥಾನದ ಭಕ್ತರ ನಡುವೆ ಜಟಾಪಟಿ ನಡೆದಿದೆ.

    ಮಾಹಿತಿ ಪಡೆದ ಉಸ್ತುವಾರಿ ಸಚಿವ ಯು.ಟಿ.ಖಾದರ್, ಶಾಸಕ ಡಾ.ಭರತ್ ಶೆಟ್ಟಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಸಿಗೊಳಿಸಿದ್ದಾರೆ. ಜನಪ್ರತಿನಿಧಿಗಳ ಪ್ರವೇಶದಿಂದ ಜಟಾಪಟಿ ನಿಂತು ಕಾರ್ಯಕ್ರಮ ಮುಂದುವರಿದಿದೆ.


    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಿವರಾತ್ರಿಯಂದೇ ಮನೆಗೆ ಬಂತು 6 ಅಡಿ ಉದ್ದದ ನಾಗರಹಾವು

    ಶಿವರಾತ್ರಿಯಂದೇ ಮನೆಗೆ ಬಂತು 6 ಅಡಿ ಉದ್ದದ ನಾಗರಹಾವು

    ಬೆಂಗಳೂರು: ಮಹಾ ಶಿವಾರಾತ್ರಿ ಹಬ್ಬದ ದಿನದಂದೇ ಆರು ಅಡಿ ಉದ್ದದ ನಾಗರಹಾವು ಮನೆಯೊಂದರಲ್ಲಿ ಪ್ರತ್ಯಕ್ಷವಾಗಿ ಅಲ್ಲಿನ ನಿವಾಸಿಗಳು ಗಾಬರಿಗೊಂಡಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬನಹಳ್ಳಿಯಲ್ಲಿ ನಡೆದಿದೆ.

    ಸೋಮವಾರ ಸಂಜೆ ಐದು ಗಂಟೆಯ ಸುಮಾರಿಗೆ ಬನಹಳ್ಳಿ ಗ್ರಾಮದ ಮನೆಯೊಂದರಲ್ಲಿ ಆರು ಅಡಿ ಉದ್ದದ ನಾಗರಹಾವು ಕಾಣಿಸಿಕೊಂಡಿದ್ದು ಮನೆಯವರು ಹಾವನ್ನು ಕಂಡು ಗಾಬರಿಯಿಂದ ಹೊರಗೆ ಓಡಿ ಬಂದಿದ್ದಾರೆ. ನಂತರ ಕೆಲ ಸಮಯ ಮನೆಯಲ್ಲಿದ್ದ ನಾಗರಹಾವು ಮನೆಯ ಹೊರಗೆ ಬಂದು ಬಿಲ ಸೇರಿಕೊಂಡು ಅಲ್ಲಿನ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಸೃಷ್ಟಿಮಾಡಿತ್ತು.

    ನಂತರ ಸ್ನೇಕ್ ಕಾರ್ತಿಕ್ ಗೆ ಕರೆ ಮಾಡಿದ ಗ್ರಾಮಸ್ಥರು ಸ್ಥಳಕ್ಕೆ ಬಂದ ಉರಗ ತಜ್ಞ ಕಾರ್ತಿಕ್ ನಾಗರ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಇನ್ನು ಅಲ್ಲಿನ ಜನ ಹಬ್ಬದ ದಿನವೇ ಹಾವನ್ನು ಕಂಡು ಗಾಬರಿಯಾಗಿದ್ದು, ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿರುವುದರಿಂದ ನಿಟ್ಟುಸಿರು ಬಿಟ್ಟಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇಶದಲ್ಲಿರುವ ಪ್ರಸಿದ್ಧ ಶಿವಲಿಂಗ ದೇವಾಲಯಗಳು

    ದೇಶದಲ್ಲಿರುವ ಪ್ರಸಿದ್ಧ ಶಿವಲಿಂಗ ದೇವಾಲಯಗಳು

    ಹಿಂದೂಗಳ ಪವಿತ್ರ ಹಬ್ಬಗಳಲ್ಲೊಂದಾದ ಶಿವರಾತ್ರಿಯನ್ನು ನಾಡಿನೆಲ್ಲಡೆ ಭಕ್ತರು ಭಕ್ತಿ ಭಾವದಿಂದ ಆಚರಿಸುತ್ತಿದ್ದಾರೆ. ಈ ಹಬ್ಬಕ್ಕೆ ಶಿವನ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಪರಮೇಶ್ವರ ಮೆಚ್ಚುಗೆಗೆ ಭಕ್ತರು ಪಾತ್ರರಾಗುತ್ತಾರೆ. ಅದರಲ್ಲಿಯೂ ಈ ಬಾರಿ ಸೋಮವಾರದಂದು ಶಿವರಾತ್ರಿ ಬಂದ ಹಿನ್ನೆಲೆಯಲ್ಲಿ ಭಕ್ತಾದಿಗಳು ಲಿಂಗಸ್ಪರ್ಶಕ್ಕೆ ಮುಂದಾಗುತ್ತಾರೆ. ಕ್ರಮಬದ್ಧವಾಗಿಪ ಜಾಗರಣೆ ಮಾಡಿ ಲಿಂಗ ಸ್ಪರ್ಶ ಮಾಡುವದರಿಂದ ಭಗವಂತನ ಕೃಪೆಗೆ ಪಾತ್ರರಾಗುವದರಿಂದ ಪಾಪಗಳು ಪರಿಹಾರ ಆಗುತ್ತೆ ಎಂಬ ನಂಬಿಕೆ ಇದೆ.

    ದೇಶದಲ್ಲಿರುವ ಪ್ರಸಿದ್ಧ ಶಿವಲಿಂಗಗಳ ಮಾಹಿತಿ ಈ ಕೆಳಗಿನಂತಿದೆ.


    1.
    ಸ್ಥಳ – ಕೋಲಾರ, ಕರ್ನಾಟಕ
    ಎತ್ತರ – 108 ಅಡಿ
    ಜಗತ್ತಿನ ಎತ್ತರದಲ್ಲಿ 1ನೇ ಸ್ಥಾನ

    ಕೋಲಾರ ಜಿಲ್ಲೆಯ ಕಮ್ಮಸಂದ್ರ ಹಳ್ಳಿ ಸಮೀಪದಲ್ಲಿ ಕೋಟಿ ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ತ್ರೇತಾಯುಗದ ಇತಿಹಾಸಹೊಂದಿರುವ ಕೋಟಿಲಿಂಗೇಶ್ವರದಲ್ಲಿ ಮೊದಲು ಶಿವಲಿಂಗವನ್ನು ಪ್ರತಿಷ್ಠಾಪಿಸಿ ಸಾಕ್ಷಾತ್ ಶ್ರೀರಾಮ ಪೂಜಿಸಿದ್ದನಂತೆ. ಇನ್ನು ಇಲ್ಲಿರುವ ಕೋಟಿ ಲಿಂಗಗಳಲ್ಲಿ ಒಂದು ಬೃಹದಾಕಾರವಾದ ಶಿವಲಿಂಗವಿದೆ. 108 ಅಡಿಗಳಷ್ಟು ಎತ್ತರವಿರುವ ಈ ಶಿವಲಿಂಗ ಜಗತ್ತಿನ ಅತಿ ಎತ್ತರದ ಶಿವಲಿಂಗವಾಗಿದೆ.

    ಜಗತ್ತಿನ ಅತಿ ಎತ್ತರದ ಶಿವಲಿಂಗದ ದರ್ಶನಕ್ಕೆ, ಸಾಗರೋಪಾದಿಯಲ್ಲಿ ಭಕ್ತರು ಬರುತ್ತಾರೆ. ಕರ್ನಾಟಕ ಮಾತ್ರವಲ್ಲ ದೇಶ ವಿದೇಶಗಳಿಂದಲೂ ಭಕ್ತರು ಇಲ್ಲಿಗೆ ಬಂದು ಕೋಟಿ ಲಿಂಗಗಳ ರೂಪದಲ್ಲಿರುವ ಶಿವನ ದರ್ಶನ ಪಡೆಯುತ್ತಾರೆ.

    2.
    ಸ್ಥಳ – ಹೈದರಾಬಾದ್
    ಎತ್ತರ – 108 ಅಡಿ
    ನಿರ್ಮಾಣ – 2010
    ಜಗತ್ತಿನ ಎತ್ತರದಲ್ಲಿ 2ನೇ ಸ್ಥಾನ

    ಜಗತ್ತಿನ ಅತಿ ಎತ್ತರದ ಎರಡನೇ ಶಿವಲಿಂಗ ಭಾರತದ ಮುತ್ತಿನ ನಗರಿ ಹೈದರಾಬಾದ್ ನಲ್ಲಿ ಇದೆ. ಸಿದ್ದೇಶ್ವರ ಪೀಠದ ವತಿಯಿಂದ ಈ ಬೃಹತ್ ಶಿವಲಿಂವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. 2010ರಲ್ಲಿ ಧರ್ಮ ರಕ್ಷಾ ಮಹಾಯಾಗ ಮಾಡುವ ಮೂಲಕ ಈ ಶಿವಲಿಂಗವನ್ನು ಲೋಕಾರ್ಪಣೆ ಮಾಡಲಾಗಿದೆ. ಈ ಶಿವಲಿಂಗ ಬರೋಬ್ಬರಿ 108 ಅಡಿಗಳಷ್ಟಿದೆ.

    3.
    ಸ್ಥಳ – ತಮಿಳುನಾಡು
    ಎತ್ತರ – 90 ಅಡಿ
    ನಿರ್ಮಾಣ – ಅಕ್ಟೋಬರ್ 15, 1989
    ಜಗತ್ತಿನ ಎತ್ತರದಲ್ಲಿ 3ನೇ ಸ್ಥಾನ

    ತಮಿಳುನಾಡಿನ ತಾಮರೈಪಾಕಮ್ ಪ್ರದೇಶದಲ್ಲಿರುವ ಈ ಶಿವಲಿಂಗವನ್ನು ಅಕ್ಟೋಬರ್ 15 1989 ರಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಶಿವಲಿಂಗವು ಭೂಮಿಯಿಂದ ಸುಮಾರು 90 ಅಡಿ ಎತ್ತರವಿದೆ. ಹೀಗಾಗಿ ಇದು ಜಗತ್ತಿನ ಅತಿ ಎತ್ತರದ ಶಿವಲಿಂಗಗಳಲ್ಲಿ 3ನೇ ಸ್ಥಾನ ಪಡೆದಿದೆ.

    4.
    ಸ್ಥಳ – ಜಾರ್ಖಂಡ್
    ಎತ್ತರ – 65 ಅಡಿ
    ನಿರ್ಮಾಣ – 30 ವರ್ಷಗಳ ಹಿಂದೆ
    ಜಗತ್ತಿನ ಎತ್ತರದಲ್ಲಿ 4ನೇ ಸ್ಥಾನ

    ಇದು ಜಾರ್ಖಂಡ್‍ನ ಛೋಟಾನಾಗ್‍ಪುರದಲ್ಲಿರುವ ಎತ್ತರದ ಶಿವಲಿಂಗ. ಗಿರಿದಿ ಜಿಲ್ಲೆಯ ಹರಿಹರ ಧಾಮದಲ್ಲಿರುವ ಈ ಶಿವಲಿಂಗ ಇಡೀ ದೇಶ ಮಾತ್ರವಲ್ಲ ಜಗತ್ತಿನಲ್ಲೇ ಪ್ರಖ್ಯಾತಿಯಾಗಿದೆ. ನದಿ ನೀರಿನಿಂದ ಸುತ್ತುವರಿದ 25 ಎಕರೆ ಪ್ರದೇಶದಲ್ಲಿ ಶಿವಲಿಂಗದ ರೂಪದಲ್ಲಿ ವಿರಾಜಮಾನವಾಗಿ ನೆಲೆಯೂರಿದ್ದಾನೆ. ಈ ಶಿವಲಿಂಗ ಸುಮಾರು 65 ಅಡಿ ಎತ್ತರವಿದೆ. 30 ವರ್ಷಗಳ ಹಿಂದೆ ಈ ಶಿವಲಿಂಗ ನಿರ್ಮಾಣ ಮಾಡಲಾಗಿದೆ. ಜಗತ್ತಿನ ಶಿವಲಿಂಗಗಳಲ್ಲಿ ಇದು ನಾಲ್ಕನೇ ಅತಿ ಎತ್ತರವಾದ ಶಿವಲಿಂಗವಾಗಿದೆ. ಶ್ರಾವಣ ಪೌರ್ಣಮಿಯಂದು ಇಲ್ಲಿಗೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv