Tag: ಮಹಾರುದ್ರಯಾಗ

  • ಲಾಕ್‍ಡೌನ್ ಮಧ್ಯೆಯೂ ಮಹಾರುದ್ರಯಾಗದಲ್ಲಿ ಭಾಗಿಯಾದ ಮಾಜಿ ಶಾಸಕ

    ಲಾಕ್‍ಡೌನ್ ಮಧ್ಯೆಯೂ ಮಹಾರುದ್ರಯಾಗದಲ್ಲಿ ಭಾಗಿಯಾದ ಮಾಜಿ ಶಾಸಕ

    ರಾಯಚೂರು: ಲಾಕ್‍ಡೌನ್ ಮಧ್ಯೆಯೂ ದೇವಾಲಯಗಳಲ್ಲಿ ಜನ ಪೂಜೆ, ಸಾಮೂಹಿಕ ಪ್ರಾರ್ಥನೆ ಮಾಡುವುದನ್ನ ನಿಲ್ಲಿಸಿಲ್ಲ. ಜಿಲ್ಲೆಯ ಮಸ್ಕಿ ಪಟ್ಟಣದ ಬೆಟ್ಟದ ಮೇಲಿನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕೊರೊನಾ ನಿಗ್ರಹಕ್ಕಾಗಿ ಮಹಾರುದ್ರಯಾಗ ಮಾಡಲಾಗಿದೆ.

    ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಯಾಗ ನಡೆದಿದೆ. ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹಾಗೂ ಅವರ ಬೆಂಬಲಿಗರು ಈ ಯಾಗದಲ್ಲಿ ಭಾಗವಹಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ದೇವಸ್ಥಾನದ ಮುಂಭಾಗದ ಆವರಣದಲ್ಲಿ ನಡೆದ ಮಹಾರುದ್ರಯಾಗದಲ್ಲಿ ಪ್ರತಾಪ್ ಗೌಡರು ಸೇರಿದಂತೆ 30ಕ್ಕೂ ಹೆಚ್ಚು ಜನ ಭಾಗವಹಿಸಿದ್ದಾರೆ.

    ಅಷ್ಟೇ ಅಲ್ಲದೇ ಮಾಜಿ ಶಾಸಕರ ಬೆಂಬಲಿಗರು ಮಾಸ್ಕ್ ಹಾಕಿಕೊಳ್ಳದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ದೇವಾಲಯಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲು ಅವಕಾಶವಿಲ್ಲದಿದ್ದರೂ ಲಾಕ್‍ಡೌನ್ ನಿಯಮ ಮೀರಿ ಮಾಜಿ ಶಾಸಕ ಯಾಗದಲ್ಲಿ ಭಾಗಿಯಾಗಿದ್ದಾರೆ.

  • ಅಧಿಕಾರ ಸಿದ್ಧಿಗಾಗಿ ಮಹಾರುದ್ರಯಾಗ ನಡೆಸಲಿರುವ ಬಿಎಸ್‍ವೈ

    ಅಧಿಕಾರ ಸಿದ್ಧಿಗಾಗಿ ಮಹಾರುದ್ರಯಾಗ ನಡೆಸಲಿರುವ ಬಿಎಸ್‍ವೈ

    ಬೆಂಗಳೂರು: ಒಂದೆಡೆ ಸರ್ಕಾರ ಪತನವಾಗದೆ, ಅಧಿಕಾರ ಉಳಿಯಲಿ ಎಂದು ಗೌಡರ ಕುಟುಂಬ ದೇವರ ಮೊರೆ ಹೋಗಿದ್ದಾರೆ. ಇನ್ನೊಂದೆಡೆ ಅಧಿಕಾರದ ಸಿದ್ಧಿಗಾಗಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಮಹಾರುದ್ರಯಾಗ ನಡೆಸಲಿದ್ದಾರೆ.

    ಹೌದು. ಚಂದ್ರಗ್ರಹಣ ಹಿನ್ನೆಲೆ ಸಿಎಂ ಹಾಗೂ ದೇವೇಗೌಡರ ಮನೆಯಲ್ಲಿ ವಿಶೇಷ ಪೂಜೆ ನಡೆಯಲಿದೆ ಎನ್ನಲಾಗಿದೆ. ಹಾಗೆಯೇ ಇತ್ತ ಯಡಿಯೂರಪ್ಪ ಅವರು ಕೂಡ ಅಧಿಕಾರ ಸಿದ್ಧಿಗಾಗಿ ಮೂರು ಗಂಟೆಗಳ ಕಾಲ ಮಹಾಯಜ್ಞ ಮಾಡಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತ ಗುರುವಾರ ಸಿಎಂ ವಿಶ್ವಾಸ ಮತಯಾಚನೆಗೆ ದಿನ ನಿಗದಿಯಾಗುತ್ತಲೇ ಅತ್ತ ಸರ್ಕಾರ ರಚಿಸಿ ಸಿಎಂ ಗದ್ದುಗೆ ಏರುವ ಕನಸು ಕಾಣುತ್ತಿರುವ ಯಡಿಯೂರಪ್ಪನವರು ಬುಧವಾರ ಮಹಾ ರುದ್ರಯಾಗವನ್ನು ನಡೆಸಲಿದ್ದಾರೆ.

    ಬೆಂಗಳೂರಿನ ಗವಿಗಂಗಾಧರ ದೇಗುಲದಲ್ಲಿ ಈಗಾಗಲೇ ಮಹಾರುದ್ರಯಾಗಕ್ಕೆ ಸಿದ್ಧತೆ ನಡೆಸುವಂತೆ ಬಿಎಸ್‍ವೈ ಸೂಚಿಸಿದ್ದು, ದೇಗುಲದಲ್ಲಿ ಅಧಿಕಾರ ಸಿದ್ಧಿಯ ಮಹಾ ಯಜ್ಞಕ್ಕೆ ಸಜ್ಜಾಗಿದೆ. ಇನ್ನು ಬುಧವಾರ ಬಿಎಸ್‍ವೈ ಮಹಾರುದ್ರ ಯಾಗ ನಡೆಸಲು ಕಾರಣ ಗ್ರಹಣ ದೋಷ ನಿವಾರಣೆ ಅಂತಾನೂ ಹೇಳಲಾಗುತ್ತಿದೆ.

    ಮಂಗಳವಾರ ಗ್ರಹಣವಿರೋದ್ರಿಂದ ಯಡಿಯೂರಪ್ಪನವರಿಗೆ ಸಾಡೇಸಾತ್ ಮುಗಿಯುತ್ತೆ, ಹೀಗಾಗಿ ಗುರುವಾರ ದೋಸ್ತಿ ಮುರಿದು ಸರ್ಕಾರ ಪತನವಾಗಲು ಬಿಎಸ್‍ವೈ ಶಿವನ ಮೊರೆ ಹೋಗಿದ್ದಾರೆ. ಅತ್ಯಂತ ಪವರ್ ಫುಲ್ ಮಹಾರುದ್ರಯಾಗವನ್ನು ಬಿಎಸ್‍ವೈ ಮಾಡಲಿದ್ದಾರೆ.

    ಇತ್ತ ಸರ್ಕಾರ ಅಳಿವಿನಂಚಿನಲ್ಲಿ ಇದ್ದರೂ ಕೊನೆಯ ಆಶಾಕಿರಣ ಸಿಎಂರಲ್ಲಿ ಮೂಡಿದೆ. ಚಂದ್ರಗ್ರಹಣದ ಹೊತ್ತಲ್ಲಿ ಏನಾದರೂ ಪವಾಡ ನಡೆಯಬಹುದು ಅನ್ನೋ ಆಸೆಯಲ್ಲಿ ಸಿಎಂ ಇದ್ದಾರೆ. ಇಂದಿನ ಸುಪ್ರೀಂಕೋರ್ಟ್ ತೀರ್ಪು ಸರ್ಕಾರಕ್ಕೆ ಸಂಜೀವಿನಿ ಆಗುತ್ತಾ ಅಥವಾ ಸರ್ಕಾರದ ಕೊನೆಗೆ ಕಾರಣವಾಗುತ್ತಾ ಅನ್ನೋ ಲೆಕ್ಕಚಾರ ಶುರುವಾಗಿದೆ. ಈ ಮಧ್ಯೆ ಸದಾ ದೇವತಾರಾಧನೆ ಮಾಡೋ ಸಿಎಂ ಕುಟುಂಬ ಚಂದ್ರ ಗ್ರಹಣದಲ್ಲೂ ದೇವರ ಮೊರೆ ಹೋಗಿದ್ದಾರೆ.

    ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಸಿಎಂ ಅವರ ಜೆಪಿ ನಗರ ನಿವಾಸ ಹಾಗೂ ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಪ್ರತಿ ಅಮಾವಾಸ್ಯೆ, ಪೌರ್ಣಮೆ, ಶುಭ ದಿನದಲ್ಲಿ ಗೌಡರ ಕುಟುಂಬ ದೇವರ ಮೊರೆ ಹೋಗುತ್ತಾರೆ. ಆದರೆ ಈ ಬಾರಿ ಚಂದ್ರ ಗ್ರಹಣದಲ್ಲಿ ಸರ್ಕಾರದ ಮೇಲೆ ಕೆಟ್ಟ ದೃಷ್ಟಿ ಬೀಳದಂತೆ ತಡೆಯಲು ದೇವರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.