Tag: ಮಹಾರಾಷ್ಟ್ರ ಸಿಎಂ

  • ಮಹಾರಾಷ್ಟ್ರ ಸಿಎಂ ಆಗಿ ಎಂದ ಅಭಿಮಾನಿಯ ಮನವಿಗೆ ನಟ ಅನಿಲ್ ಪ್ರತಿಕ್ರಿಯೆ

    ಮಹಾರಾಷ್ಟ್ರ ಸಿಎಂ ಆಗಿ ಎಂದ ಅಭಿಮಾನಿಯ ಮನವಿಗೆ ನಟ ಅನಿಲ್ ಪ್ರತಿಕ್ರಿಯೆ

    ಮುಂಬೈ: ವಿಧಾನಸಭಾ ಚುನಾವಣೆ ಮುಗಿದ ನಂತರ ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಬಿಜೆಪಿ ಪಕ್ಷದ ನಡುವೆ ಸಿಎಂ ಖುರ್ಚಿಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ. ಈ ನಡುವೆ ಅಭಿಮಾನಿಯೊಬ್ಬರು ನಟ ಅನಿಲ್ ಕಪೂರ್ ಅವರಿಗೆ ಸಿಎಂ ಆಗುವಂತೆ ಮನವಿ ಮಾಡಿದ್ದಾರೆ. ಅಭಿಮಾನಿಯ ಮನವಿಗೆ ಅನಿಲ್ ಪ್ರತಿಕ್ರಿಯೆ ನೀಡಿದ್ದಾರೆ.

    ವಿಜಯ್ ಗುಪ್ತಾ ಎಂಬವರು ತಮ್ಮ ಟ್ವಿಟ್ಟರಿನಲ್ಲಿ, ಮಹಾರಾಷ್ಟ್ರದಲ್ಲಿ ಎಲ್ಲಿಯವರೆಗೂ ಪೈಪೋಟಿ ನಿಲುವುದಿಲ್ಲವೋ ಅಲ್ಲಿಯವರೆಗೂ ಅನಿಲ್ ಕಪೂರ್ ಸಿಎಂ ಆಗಿರಲಿ. ಚಿತ್ರದಲ್ಲಿ ಅವರು ಒಂದು ದಿನದ ಸಿಎಂ ಆಗಿ ಮಾಡಿರುವ ಕೆಲಸವನ್ನು ಇಡೀ ದೇಶ ನೋಡಿದೆ. ದೇವೇಂದ್ರ ಫಡ್ನವಿಸ್ ಹಾಗೂ ಆದಿತ್ಯ ಠಾಕ್ರೆ ಏನು ಯೋಚಿಸ್ತಿದ್ದೀರಾ? ಎಂದು ಟ್ವೀಟ್ ಮಾಡಿದ್ದಾರೆ.

    ಇದನ್ನು ವಿಜಯ್ ತನ್ನ ಟ್ವಿಟ್ಟರಿನಲ್ಲಿ ಬರೆದುಕೊಂಡ ಕೆಲವೇ ನಿಮಿಷಗಳಲ್ಲಿ ಈ ಟ್ವೀಟ್ ಸಾಕಷ್ಟು ವೈರಲ್ ಆಗಿದೆ. ಅಲ್ಲದೆ ಸ್ವತಃ ನಟ ಅನಿಲ್ ಕಪೂರ್ ಅವರೇ ಅಭಿಮಾನಿಯ ಟ್ವೀಟ್‍ಗೆ ರೀ-ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. “ನಾನು ನಾಯಕನಾಗಿರುವುದೇ ಉತ್ತಮ” ಎಂದು ಅನಿಲ್ ರೀ-ಟ್ವೀಟ್ ಮಾಡಿದ್ದಾರೆ.

    ಅನಿಲ್ ಕಪೂರ್ ಅವರ ಸೆನ್ಸ್ ಆಫ್ ಹ್ಯೂಮರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅನಿಲ್ ಕಪೂರ್ ಟ್ವೀಟ್‍ಗೆ ಕೆಲವರು, ಇವರು ಮೊದಲು ನಿರಾಕರಿಸುತ್ತಾರೆ, ಬಳಿಕ ಶಪಥ ಮಾಡುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, “ಇದು ಅತ್ಯುತ್ತಮ ಸಲಹೆ” ಎಂದು ಪ್ರತಿಕ್ರಿಯಿಸಿದ್ದಾರೆ.

    2001ರಲ್ಲಿ ಅನಿಲ್ ಕಪೂರ್ ನಟನೆಯ ‘ನಾಯಕ್’ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಅನಿಲ್ ಕಪೂರ್ ಒಂದು ದಿನದ ಮುಖ್ಯಮಂತ್ರಿ ಆಗಿದ್ದರು. ಚಿತ್ರದಲ್ಲಿ ರಾಜ್ಯವನ್ನು ಅಭಿವೃದ್ಧಿಗೊಳಿಸಲು ಅನಿಲ್ ಫುಲ್ ಜೋಶ್‍ನಲ್ಲಿ ಕೆಲಸ ಮಾಡಿದ್ದರು. ಈ ಚಿತ್ರವನ್ನು ಎಸ್. ಶಂಕರ್ ನಿರ್ದೇಶಿಸಿದ್ದು, ಅನಿಲ್‍ಗೆ ನಾಯಕಿಯಾಗಿ ರಾಣಿ ಮುಖರ್ಜಿ ನಟಿಸಿದ್ದರು.

  • 5 ವರ್ಷದಲ್ಲಿ ಮಹಾರಾಷ್ಟ್ರ ಸಿಎಂ ಆಸ್ತಿ ಶೇ.100ರಷ್ಟು ಏರಿಕೆ

    5 ವರ್ಷದಲ್ಲಿ ಮಹಾರಾಷ್ಟ್ರ ಸಿಎಂ ಆಸ್ತಿ ಶೇ.100ರಷ್ಟು ಏರಿಕೆ

    ಮುಂಬೈ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಆಸ್ತಿ ಐದು ವರ್ಷದಲ್ಲಿ ಶೇ.100ರಷ್ಟು ಏರಿಕೆ ಆಗಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದಾಖಲಾತಿಗಳಿಂದ ಮಾಹಿತಿ ಲಭ್ಯವಾಗಿದೆ. ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಸ್ಥಿರ ಮತ್ತು ಚರ ಆಸ್ತಿಯ ಮೌಲ್ಯವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು.

    ನಾಗಪುರ ನೈಋತ್ಯ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದಿರುವ ಫಡ್ನವೀಸ್ ನಾಮಪತ್ರ ಸಲ್ಲಿಸಿದ್ದಾರೆ. 2014ರ ಚುನಾವಣೆ ಸಂದರ್ಭದಲ್ಲಿ ಆಸ್ತಿಯ ಮೌಲ್ಯವನ್ನು ತುಲನೆ ಮಾಡಿದಾಗ ಸದ್ಯದ ಆಸ್ತಿ ಐದು ವರ್ಷದ ಅಂತರದಲ್ಲಿ ಶೇ.100ರಷ್ಟು ಏರಿಕೆಯಾಗಿದೆ.

    ಮಾರುಕಟ್ಟೆಯಲ್ಲಿಯ ಬೆಲೆ ಏರಿಕೆಯಿಂದಾಗಿ ಸಹಜವಾಗಿ ಮುಖ್ಯಮಂತ್ರಿಗಳ ಆಸ್ತಿ ಮೌಲ್ಯ ಹೆಚ್ಚಳವಾಗಿದೆ. ಮುಂಬೈ ನಗರದ ಆಸ್ತಿಯ ಮೌಲ್ಯದಲ್ಲಾದ ಏರಿಕೆ ಕಾರಣದಿಂದ ಈ ಬೆಳವಣಿಗೆಯಾಗಿದೆ. 2014ರಲ್ಲಿಯ 1.18 ಕೋಟಿ ರೂ. ಮೌಲ್ಯದ ಆಸ್ತಿಯ ಮೌಲ್ಯ ಇಂದು 3.78 ಕೋಟಿ ರೂ.ಆಗಿದೆ. ಇದೇ ರೀತಿ ಸಿಎಂ ಪತ್ನಿ ಅಮೃತಾರ ಆಸ್ತಿ 2014ರಲ್ಲಿದ್ದ 42.60 ಲಕ್ಷ ಏರಿಕೆ ಕಂಡು 99.3 ಲಕ್ಷದಷ್ಟು ಆಗಿದೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯ ಸ್ಪಷ್ಟಪಡಿಸಿದೆ.

    ಕ್ಯಾಶ್ ಇನ್ ಹ್ಯಾಂಡ್:
    2014ರಲ್ಲಿ ಫಡ್ನವೀಸ್ ಅವರ ಕೈಯಲ್ಲಿ 50 ಸಾವಿರ ರೂ. ನಗದು ಹೊಂದಿದ್ದರು. 2019ರಲ್ಲಿ 17,500 ರೂ. ನಗದು ಹೊಂದಿದ್ದಾರೆ. ಪತ್ನಿ ಅಮೃತಾರ ಬಳಿ 2014ರಲ್ಲಿ 12,500 ನಗದು ಇತ್ತು. 2019ರಲ್ಲಿ ನಗದು 20 ಸಾವಿರ ರೂ.ಗಳಿವೆ. ಫಡ್ನವಿಸ್ ಬ್ಯಾಂಕ್ ಖಾತೆಯಲ್ಲಿದ್ದ 1,19,630 ರೂ. 2019ರ ವೇಳೆಗೆ 8,29,665 ರೂ.ಗೆ ಏರಿಕೆ ಕಂಡಿದೆ. ಸಿಎಂ ಆದ ಬಳಿಕ ಫಡ್ನವೀಸ್ ಸಂಬಳ ಮತ್ತು ಭತ್ಯೆಯಿಂದಾಗಿ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

    ಇದೇ ರೀತಿ ಫಡ್ನವೀಸ್ ಅವರ ಪತ್ನಿ ಅಮೃತಾರ ಖಾತೆಯಲ್ಲಿದ್ದ ಮೊತ್ತ 1,00,881 ರೂ.ನಿಂದ 3,37,025 ರೂ.ಗಳಿಗೆ ಏರಿಕೆ ಆಗಿದೆ. ಇದಲ್ಲದೇ ಅಮೃತಾ ವೈಯಕ್ತಿಕವಾಗಿ ಶೇರು ಮಾರುಕಟ್ಟೆಯಲ್ಲಿ ವ್ಯವಹರಿಸುತ್ತಿದ್ದು, ಆ ಆಸ್ತಿಯ ಮೌಲ್ಯ 1.66 ಕೋಟಿ ಯಿಂದ 2.33 ಕೋಟಿ ರೂ. ಏರಿಕೆಯಾಗಿದೆ. ಅಮೃತಾ ಮುಂಬೈನ ಎಕ್ಸಿಸ್ ಬ್ಯಾಂಕ್ ಉಪಾಧ್ಯಕ್ಷೆ ಮತ್ತು ಪಶ್ಚಿಮ ಭಾರತದ ಕಾರ್ಪೋರೇಟ್ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

  • ಅಸ್ಸಾಂ ನಂತ್ರ, ಮಹಾರಾಷ್ಟ್ರ ಪ್ರವಾಹಕ್ಕೆ 51 ಲಕ್ಷ ರೂ. ದೇಣಿಗೆ ನೀಡಿದ ಬಿಗ್-ಬಿ

    ಅಸ್ಸಾಂ ನಂತ್ರ, ಮಹಾರಾಷ್ಟ್ರ ಪ್ರವಾಹಕ್ಕೆ 51 ಲಕ್ಷ ರೂ. ದೇಣಿಗೆ ನೀಡಿದ ಬಿಗ್-ಬಿ

    ಮುಂಬೈ: ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಅವರು ಮಹಾರಾಷ್ಟ್ರ ಪ್ರವಾಹಕ್ಕೆ 51 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

    ಅಮಿತಾಬ್ ಬಚ್ಚನ್ ತಾವು ದೇಣಿಗೆ ನೀಡಿದ ವಿಷಯವನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ಈ ವಿಷಯವನ್ನು ಟ್ವೀಟ್ ಮಾಡುವ ಮೂಲಕ ದೇಶದ ಜನತೆಗೆ ತಿಳಿಸಿದ್ದಾರೆ.

    ದೇವೇಂದ್ರ ಫಡ್ನವಿಸ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ಮಹಾರಾಷ್ಟ್ರ ಪ್ರವಾಹಕ್ಕೆ 51 ಲಕ್ಷ ರೂ. ಸಹಾಯಧನ ನೀಡಿದ್ದಕ್ಕೆ ಬಿಗ್ – ಬಿ ಅಮಿತಾಬ್ ಬಚ್ಚನ್ ಅವರಿಗೆ ಧನ್ಯವಾದಗಳು. ಕೊಲ್ಹಾಪುರ, ಸಾಂಗ್ಲಿ ಹಾಗೂ ಸತಾರಾದಂತಹ ಪ್ರವಾಹ ಪೀಡಿತ ಪ್ರದೇಶಗಳಿಗೆ ನಮ್ಮ ಪುರ್ನವಸತಿ ಪ್ರಯತ್ನಗಳಿಗೆ ಸಹಾಯ ಮಾಡಲು ಮತ್ತು ಕೊಡುಗೆ ನೀಡಲು ಇದು ಅನೇಕರಿಗೆ ಪ್ರೇರಣೆ ನೀಡುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.

    ಕಳೆದ ತಿಂಗಳು ಅಮಿತಾಬ್ ಬಚ್ಚನ್ ಅವರು ಅಸ್ಸಾಂನ ಪ್ರವಾಹ ಸಂತ್ರಸ್ತರಿಗೆ 51 ಲಕ್ಷ ರೂ. ದಾನ ಮಾಡಿದ್ದರು. ಈ ಬಗ್ಗೆ ಅಸ್ಸಾಂ ಸಿಎಂ ಸರ್ಬಾನಂದ ಸೋನೊವಾಲ್ ಅವರು ಟ್ವಿಟ್ಟರಿನಲ್ಲಿ, “ಮುಖ್ಯಮಂತ್ರಿ ಪರಿಹಾರ ನಿಧಿಗೆ 51 ಲಕ್ಷ ರೂ. ಕೊಡುಗೆ ನೀಡಿದ್ದಕ್ಕಾಗಿ ಅಮಿತಾಬ್ ಅವರನ್ನು ಪ್ರಶಂಸಿಸುತ್ತೇವೆ. ಜನರ ಪರ ನಿಮಗಿರುವ ಕಾಳಜಿ ಗೊತ್ತಾಗುತ್ತದೆ. ನಿಮ್ಮ ಬೆಂಬಲಕ್ಕೆ ಅಸ್ಸಾಂ ಜನತೆಯ ಪರವಾಗಿ ನಾನು ಧನ್ಯವಾದ ಹೇಳಲು ಇಷ್ಟಪಡುತ್ತೇನೆ” ಎಂದು ಟ್ವೀಟ್ ಮಾಡಿದ್ದರು.

    ಅಮಿತಾಬ್ ಅಲ್ಲದೆ ನಟ ನಾನಾ ಪಾಟೇಕರ್ ಅವರು ಕೂಡ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ 500 ನಿವಾಸಗಳನ್ನು ಕಟ್ಟಿಕೊಡುವ ಭರವಸೆಯನ್ನು ನೀಡಿದ್ದಾರೆ. ಇತ್ತೀಚೆಗೆ ನಟ ರಿತೇಶ್ ದೇಶ್‍ಮುಖ್ ಹಾಗೂ ಜೆನಿಲಿಯಾ ಡಿಸೋಜಾ ಮಹಾರಾಷ್ಟ್ರ ಪ್ರವಾಹ ಸಂತ್ರಸ್ತರಿಗೆ 25 ಲಕ್ಷ ರೂ. ದೇಣಿಗೆ ನೀಡಿದ್ದರು. ಸಿಎಂ ದೇವೇಂದ್ರ ಅವರು ತಮ್ಮ ಟ್ವಿಟ್ಟರಿನಲ್ಲಿ, “ಮಹಾರಾಷ್ಟ್ರ ಪ್ರವಾಹಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂ. ನೀಡಿದ ಜೆನಿಲಿಯಾ ಹಾಗೂ ರಿತೇಶ್‍ಗೆ ಧನ್ಯವಾದಗಳು” ಎಂದು ಟ್ವೀಟ್ ಮಾಡಿಕೊಂಡಿದ್ದರು.