Tag: ಮಹಾರಾಷ್ಟ್ರ ರಾಜಕೀಯ

  • ಬಾಳಾಸಾಹೇಬ್‌ ಮೇಲಿನ ಗೌರವಕ್ಕೆ ಆದಿತ್ಯ ಠಾಕ್ರೆ ವಿರುದ್ಧ ಕೈಮಕೈಗೊಂಡಿಲ್ಲ: ಶಿಂಧೆ ಬಣ

    ಬಾಳಾಸಾಹೇಬ್‌ ಮೇಲಿನ ಗೌರವಕ್ಕೆ ಆದಿತ್ಯ ಠಾಕ್ರೆ ವಿರುದ್ಧ ಕೈಮಕೈಗೊಂಡಿಲ್ಲ: ಶಿಂಧೆ ಬಣ

    ಮುಂಬೈ: ಶಿವಸೇನಾ ಸ್ಥಾಪಕ ಬಾಳಾಸಾಹೇಬ್‌ ಅವರ ಮೇಲಿನ ಗೌರವದಿಂದಾಗಿ ಆದಿತ್ಯ ಠಾಕ್ರೆ ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಶಿವಸೇನಾದ ಏಕನಾಥ್‌ ಶಿಂಧೆ ಬಣ ತಿಳಿಸಿದೆ.

    ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತ ಪರೀಕ್ಷೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣ ಗೆಲುವು ಸಾಧಿಸಿದ್ದು, ಸರ್ಕಾರವನ್ನು ಬೆಂಬಲಿಸಲು ವಿಪ್ ಧಿಕ್ಕರಿಸಿದ ಉದ್ಧವ್ ಠಾಕ್ರೆ ಬಣದ 16 ಶಾಸಕರನ್ನು ಅಮಾನತುಗೊಳಿಸುವಂತೆ ನೂತನವಾಗಿ ಆಯ್ಕೆಯಾದ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಮನವಿ ಸಲ್ಲಿಸಿದೆ. ಇದನ್ನೂ ಓದಿ: ಮಹಾ ಹೈಡ್ರಾಮಾ ಅಂತ್ಯ – ವಿಶ್ವಾಸ ಪರೀಕ್ಷೆ ಗೆದ್ದ ಏಕನಾಥ್‌ ಶಿಂಧೆ

    ಆದಿತ್ಯ ಠಾಕ್ರೆ ಹೊರತುಪಡಿಸಿ ನಮ್ಮ ವಿಪ್ ಧಿಕ್ಕರಿಸಿದಸಿದವರನ್ನು ಅನರ್ಹಗೊಳಿಸುವಂತೆ ನಾವು ನೋಟಿಸ್ ನೀಡಿದ್ದೇವೆ. ಬಾಳಾಸಾಹೇಬ್ ಠಾಕ್ರೆ ಅವರ ಮೇಲಿನ ಗೌರವದ ಕಾರಣದಿಂದ ನಾವು ಆದಿತ್ಯ ಠಾಕ್ರೆ ಹೆಸರನ್ನು ನೀಡಿಲ್ಲ ಎಂದು ಶಿಂಧೆ ಬಣದ ಶಾಸಕ ಭರತ್‌ ಗೊಗವಾಲೆ ತಿಳಿಸಿದ್ದಾರೆ.

    ಪಕ್ಷದ ಮೂರನೇ ಎರಡರಷ್ಟು ಶಾಸಕರ ಬೆಂಬಲದ ಆಧಾರದ ಮೇಲೆ ಶಿಂಧೆ ಬಣ ನಮ್ಮದು ನಿಜವಾದ ಶಿವಸೇನಾ ಎಂದು ಹೇಳಿಕೊಂಡಿದೆ. ಶಿವಸೇನಾದ 40 ಶಾಸಕರು ಬಂಡಾಯವೆದ್ದಿದ್ದ ಶಿಂಧೆ ಬಣವನ್ನು ಸೇರಿದ್ದಾರೆ. ಸೇನಾ ಬಂಡಾಯ ಶಾಸಕರೂ ಸೇರಿ ಶಿಂಧೆ ಬಣವನ್ನು ಒಟ್ಟು 55 ಶಾಸಕರು ಸೇರಿದ್ದರು. ಇದನ್ನೂ ಓದಿ: ಪಾಪುವಿನಂತೆ ರಾಹುಲ್ ಗಾಂಧಿಯನ್ನು ಮುದ್ದು ಮಾಡಿದ ಅಜ್ಜಿ

    ನಮ್ಮ ನಿಲುವು ಬಾಳಾಸಾಹೇಬ್ ಠಾಕ್ರೆಯವರ ಪರಂಪರೆಗೆ ಗೌರವ ಸಲ್ಲಿಸಿದೆ. ಉದ್ಧವ್ ಠಾಕ್ರೆ ಅವರು ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ಎನ್‌ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಪಕ್ಷವನ್ನು ದುರ್ಬಲಗೊಳಿಸಿದ್ದಾರೆ ಎಂದು ಶಿಂಧೆ ಬಣದವರು ವಾದಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಹಾರಾಷ್ಟ್ರ ಜನತೆ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆಂಬ ಭರವಸೆ ನನಗಿದೆ: ಠಾಕ್ರೆ ಪರ ಪ್ರಕಾಶ್‌ ರಾಜ್‌ ಬ್ಯಾಟ್

    ಮಹಾರಾಷ್ಟ್ರ ಜನತೆ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆಂಬ ಭರವಸೆ ನನಗಿದೆ: ಠಾಕ್ರೆ ಪರ ಪ್ರಕಾಶ್‌ ರಾಜ್‌ ಬ್ಯಾಟ್

    ಬೆಂಗಳೂರು: ಮಹಾರಾಷ್ಟ್ರ ಮೈತ್ರಿಕೂಟ ಸರ್ಕಾರದ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್‌ ಠಾಕ್ರೆ ರಾಜೀನಾಮೆ ನೀಡಿದ್ದನ್ನು ನಟ ಪ್ರಕಾಶ್‌ ರಾಜ್‌ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಟ್ವೀಟ್‌ ಮಾಡಿರುವ ಪ್ರಕಾಶ್‌ ರಾಜ್‌, ನೀವು ಒಳ್ಳೆಯ ಕೆಲಸ ಮಾಡಿದ್ದೀರಿ ಉದ್ಧವ್‌ ಠಾಕ್ರೆ ಸರ್.‌ ನೀವು ರಾಜ್ಯವನ್ನು ನಿಭಾಯಿಸಿದ ರೀತಿಗೆ ಮಹಾರಾಷ್ಟ್ರದ ಜನರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ಭರವಸೆ ನನಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಉದ್ಧವ್‌ ಠಾಕ್ರೆ ರಾಜೀನಾಮೆ ನಮಗೆ ಬೇಸರ ತರಿಸಿದೆ: ಶಿವಸೇನಾ ಬಂಡಾಯ ಶಾಸಕ

    ಚಾಣಕ್ಯರು (ಅಮಿತ್‌ ಶಾ) ಇಂದು ಲಡ್ಡುಗಳನ್ನು ತಿನ್ನಬಹುದು. ಆದರೆ ನಿಮ್ಮ ಪ್ರಾಮಾಣಿಕತೆ ಹೆಚ್ಚು ಕಾಲ ಉಳಿಯುತ್ತದೆ. ನಿಮಗೆ ಹೆಚ್ಚು ಶಕ್ತಿಯನ್ನೂ ನೀಡಲಿದೆ ಎಂದು ಠಾಕ್ರೆ ನಿಲುವನ್ನು ಸ್ವಾಗತಿಸಿದ್ದಾರೆ.

    ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಜೊತೆಗಿನ ಮೈತ್ರಿ ವಿರುದ್ಧ ಏಕನಾಥ್‌ ಶಿಂಧೆ ನೇತೃತ್ವದಲ್ಲಿ ಶಿವಸೇನಾ ಶಾಸಕರು ಬಂಡಾಯ ಎದ್ದಿದ್ದಾರೆ. ಶಿಂಧೆ ಬಣದಲ್ಲಿ ಶಿವಸೇನಾ ಬಂಡಾಯ ಶಾಸಕರು 40 ಮಂದಿ ಇದ್ದಾರೆ ಎನ್ನಲಾಗಿದೆ. ಪಕ್ಷೇತರರು ಸೇರಿ 50 ಬಂಡಾಯ ಶಾಸಕರಿದ್ದಾರೆ. ಇದನ್ನೂ ಓದಿ: ಶಿಂಧೆ ಬಣದ ಹೊಡೆತಕ್ಕೆ ಅಘಾಡಿ ಸರ್ಕಾರ ಪತನ – ಉದ್ಧವ್‌ ಠಾಕ್ರೆ ರಾಜೀನಾಮೆ

    ಮಹಾರಾಷ್ಟ್ರ ಸರ್ಕಾರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಉದ್ಧವ್‌ ಠಾಕ್ರೆಗೆ ರಾಜ್ಯಪಾಲರು ನಿನ್ನೆ ಸೂಚನೆ ನೀಡಿದ್ದರು. ರಾಜ್ಯಪಾಲರ ಸೂಚನೆ ವಿರುದ್ಧ ಠಾಕ್ರೆ ಸುಪ್ರೀಂ ಮೊರೆ ಹೋಗಿದ್ದರು. ಆದರೆ ಬಹುಮತ ಸಾಬೀತು ಸೂಚನೆಯನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿಯಿತು. ಬೇರೆ ದಾರಿಯಿಲ್ಲದೇ ಠಾಕ್ರೆ ಅವರು ನಿನ್ನೆ ರಾತ್ರಿ ರಾಜೀನಾಮೆ ನೀಡಿದ್ದಾರೆ.‌

    Live Tv

  • ಉದ್ಧವ್‌ ಠಾಕ್ರೆ ರಾಜೀನಾಮೆ ನಮಗೆ ಬೇಸರ ತರಿಸಿದೆ: ಶಿವಸೇನಾ ಬಂಡಾಯ ಶಾಸಕ

    ಉದ್ಧವ್‌ ಠಾಕ್ರೆ ರಾಜೀನಾಮೆ ನಮಗೆ ಬೇಸರ ತರಿಸಿದೆ: ಶಿವಸೇನಾ ಬಂಡಾಯ ಶಾಸಕ

    ಮುಂಬೈ: ಮಹಾರಾಷ್ಟ್ರ ಮೈತ್ರಿಕೂಟದ ಸರ್ಕಾರಕ್ಕೆ ಉದ್ಧವ್‌ ಠಾಕ್ರೆ ರಾಜೀನಾಮೆ ನೀಡಿರುವುದಕ್ಕೆ ಶಿವಸೇನಾ ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಏಕನಾಥ್‌ ಶಿಂಧೆ ಬಣದ ಶಾಸಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

    ಉದ್ಧವ್‌ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ನಮಗೆ ಸಂತೋಷದ ವಿಷಯವಲ್ಲ ಎಂದು ಶಿವಸೇನಾ ಬಂಡಾಯ ಶಾಸಕ ಅಭಿಪ್ರಾಯಪಟ್ಟಿದ್ದಾರೆ. ಆದರೆ ಶಾಸಕನ ಹೆಸರು ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ನಾಳೆ ಬಿಜೆಪಿ-ಶಿಂಧೆ ಸರ್ಕಾರ ರಚನೆ ಸಾಧ್ಯತೆ- ಹೊಸ ಸರ್ಕಾರ ರಚನೆ ಉಸ್ತುವಾರಿ ಹೊತ್ತ ಸಿ.ಟಿ ರವಿ

    ನಾವು ಸೂಚಿಸಿದ ವಿಷಯಗಳನ್ನು ಉದ್ಧವ್ ಠಾಕ್ರೆ ಗಮನಿಸಲಿಲ್ಲ ಎಂದು ಬಂಡಾಯ ಶಾಸಕರ ಬಣದ ವಕ್ತಾರ ದೀಪಕ್ ಕೇಸರ್ಕರ್ ಹೇಳಿದ್ದಾರೆ. ಎನ್‌ಸಿಪಿ ಮತ್ತು ಕಾಂಗ್ರೆಸ್‌ ಜೊತೆಗಿನ ಮೈತ್ರಿ ವಿರುದ್ಧ ಹೋರಾಡುವಾಗ ನಮ್ಮ ನಾಯಕನ (ಉದ್ಧವ್‌ ಠಾಕ್ರೆ) ನಡೆಯ ಬಗ್ಗೆಯೂ ಬೇಸರವಾಯಿತು ಎಂದು ಅವರು ತಿಳಿಸಿದ್ದಾರೆ.

    ಇದಕ್ಕೆಲ್ಲ ಕಾರಣ ಎನ್‌ಸಿಪಿ ಮತ್ತು ಸಂಜಯ್‌ ರಾವತ್‌. ಕೇಂದ್ರ ಸರ್ಕಾರದ ವಿರುದ್ಧ ನಿತ್ಯ ಹೇಳಿಕೆಗಳನ್ನು ನೀಡುವುದು, ಕೇಂದ್ರ ಮತ್ತು ರಾಜ್ಯದ ನಡುವೆ ನಕಾರಾತ್ಮಕ ಅಭಿಪ್ರಾಯ ಮೂಡಿಸುವುದು ಅವರ ಕೆಲಸವಾಗಿತ್ತು ಎಂದಿದ್ದಾರೆ. ಇದನ್ನೂ ಓದಿ: ಶಿಂಧೆ ಬಣದ ಹೊಡೆತಕ್ಕೆ ಅಘಾಡಿ ಸರ್ಕಾರ ಪತನ – ಉದ್ಧವ್‌ ಠಾಕ್ರೆ ರಾಜೀನಾಮೆ

    ಮಹಾರಾಷ್ಟ್ರದ ಮೈತ್ರಿಕೂಟ ಸರ್ಕಾರದ ವಿರುದ್ಧ 50 ಶಾಸಕರು ಬಂಡಾಯ ಎದ್ದಿದ್ದಾರೆ. ಅವರಲ್ಲಿ 40 ಶಾಸಕರು ಶಿವಸೇನಾದವರಾಗಿದ್ದಾರೆ. ಬಂಡಾಯ ಶಾಸಕರ ಬಣದ ನೇತೃತ್ವವನ್ನು ಏಕನಾಥ್‌ ಶಿಂಧೆ ವಹಿಸಿದ್ದಾರೆ.

    Live Tv

  • ಅಸ್ಸಾಂ ಪ್ರವಾಹಕ್ಕೆ ಮರುಗಿದ ಮಹಾರಾಷ್ಟ್ರ ರೆಬೆಲ್‌ ಶಾಸಕರು – ಪರಿಹಾರ ನಿಧಿಗೆ 51 ಲಕ್ಷ ರೂ. ಸಹಾಯ

    ಅಸ್ಸಾಂ ಪ್ರವಾಹಕ್ಕೆ ಮರುಗಿದ ಮಹಾರಾಷ್ಟ್ರ ರೆಬೆಲ್‌ ಶಾಸಕರು – ಪರಿಹಾರ ನಿಧಿಗೆ 51 ಲಕ್ಷ ರೂ. ಸಹಾಯ

    ಮುಂಬೈ: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಶಿವಸೇನಾ ಶಾಸಕರು, ಅಸ್ಸಾಂನ ಪ್ರವಾಹ ಪರಿಹಾರ ನಿಧಿಗೆ 51 ಲಕ್ಷ ರೂ. ನೀಡಿದ್ದಾರೆ.

    ಸಚಿವ ಏಕನಾಥ್‌ ಶಿಂಧೆ ನೇತೃತ್ವದಲ್ಲಿ ಶಿವಸೇನಾ ಶಾಸಕರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯವೆದ್ದು ಗುಜರಾತ್‌ನ ಸೂರತ್‌ನ ಹೋಟೆಲ್‌ನಲ್ಲಿದ್ದರು. ನಂತರ ಅಸ್ಸಾಂನ ಗುವಾಹಟಿಯ ಹೋಟೆಲ್‌ಗೆ ಶಿಫ್ಟ್‌ ಆಗಿ ಕಳೆದ ಒಂದು ವಾರದಿಂದ ಅಲ್ಲಿ ಇದ್ದರು. ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು – ಸಂಜೆ 5 ಗಂಟೆಗೆ ಸುಪ್ರೀಂನಲ್ಲಿ ಮಹತ್ವದ ಅರ್ಜಿ ವಿಚಾರಣೆ

    ಅಸ್ಸಾಂನ ಕೆಲವು ಭಾಗಗಳು ಭೀಕರ ಪ್ರವಾಹದಿಂದ ತತ್ತರಿಸಿರುವ ಸಂದರ್ಭದಲ್ಲೂ ಶಿವಸೇನಾ ಭಿನ್ನಮತೀಯರು ಗುವಾಹಟಿಯ ಐಷಾರಾಮಿ ಹೋಟೆಲ್‌ನಲ್ಲಿ ತಂಗಿದ್ದಾರೆ ಎಂಬ ಟೀಕೆಗಳು ಕೇಳಿಬಂದಿದ್ದವು. ಈ ನಡುವೆ ಶಿಂಧೆ ಅವರು ಅಸ್ಸಾಂ ಮುಖ್ಯಮಂತ್ರಿ ಪರಿಹಾರ ನಿಧಿಗೆ 51 ಲಕ್ಷ ರೂ. ನೀಡಿದ್ದಾರೆ.

    ಸರ್ಕಾರದ ನಿರಂತರ ರಕ್ಷಣಾ ಕಾರ್ಯಕ್ಕೆ ಶಿಂಧೆ ಅವರು ಪರಿಹಾರ ನಿಧಿಗೆ ಧನ ಸಹಾಯ ಮಾಡಿದ್ದಾರೆ. ಇಲ್ಲಿನ ಜನರ ಕಷ್ಟವನ್ನು ನಾವು ನಿರ್ಲಕ್ಷಿಸುವಂತಿಲ್ಲ ಎಂದು ಬಂಡಾಯ ಶಾಸಕರ ತಂಡ ವಕ್ತಾರ ದೀಪಕ್‌ ಕೇಸಾರ್ಕರ್‌ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ರೆಬೆಲ್ ಶಾಸಕರು ನಾಳೆ ಮುಂಬೈಗೆ ಎಂಟ್ರಿ

    ಅಸ್ಸಾಂನಲ್ಲಿ ಭೀಕರ ಪ್ರವಾಹ ಬಂದು ಸಂಕಷ್ಟ ಎದುರಾದ ಸಂದರ್ಭದಲ್ಲೇ ಶಿವಸೇನಾ ಬಂಡಾಯ ಶಾಸಕರು ಇಲ್ಲಿನ ಗುವಾಹಟಿಯ ಐಷರಾಮಿ ಹೋಟೆಲ್‌ಗೆ ಬಂದು ಬೀಡುಬಿಟ್ಟಿದ್ದರು. ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ ಇವರ ವರ್ತನೆಗೆ ಭಾರಿ ಟೀಕೆ ವ್ಯಕ್ತವಾಗಿತ್ತು. ಇಲ್ಲಿಂದ ಹೊರಡಿ ಎಂದು ಹೋಟೆಲ್‌ ಬಳಿ ಪ್ರತಿಭಟನೆ ಕೂಡ ನಡೆಸಲಾಗಿತ್ತು.

    ನಾಳೆಯೇ ಬಹುಮತ ಸಾಬೀತುಪಡಿಸುವಂತೆ ಉದ್ಧವ್‌ ಠಾಕ್ರೆ ಅವರಿಗೆ ಮಹಾರಾಷ್ಟ್ರ ರಾಜ್ಯಪಾಲರು ಸೂಚನೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಡಾಯ ಶಾಸಕರು ಗುವಾಹಟಿಯಿಂದ ಮುಂಬೈಗೆ ಬರಲು ಸಿದ್ಧತೆ ನಡೆಸಿದ್ದಾರೆ.

    Live Tv

  • ಇಂದು ಬಂಡಾಯ ಶಾಸಕರು ಗೋವಾಗೆ ಶಿಫ್ಟ್‌ – ಹೋಟೆಲ್‌ನಲ್ಲಿ 70 ರೂಮ್‌ ಬುಕ್‌

    ಇಂದು ಬಂಡಾಯ ಶಾಸಕರು ಗೋವಾಗೆ ಶಿಫ್ಟ್‌ – ಹೋಟೆಲ್‌ನಲ್ಲಿ 70 ರೂಮ್‌ ಬುಕ್‌

    ಮುಂಬೈ: ಮಹಾರಾಷ್ಟ್ರ ಸರ್ಕಾರದ ಬಿಕ್ಕಟ್ಟು ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ನಾಳೆಯೇ ಬಹುಮತ ಸಾಬೀತುಪಡಿಸಬೇಕು ಎಂದು ಉದ್ಧವ್‌ ಠಾಕ್ರೆಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಏಕನಾಥ್‌ ಶಿಂಧೆ ನೇತೃತ್ವದ ಬಂಡಾಯ ಶಾಸಕರು ಮುಂಬೈಗೆ ಆಗಮಿಸಲು ಸಿದ್ಧತೆ ನಡೆಸಿದ್ದಾರೆ.

    ಶಿವಸೇನಾ ಬಂಡಾಯ ಶಾಸಕರು ಇಂದು ಸಾಯಂಕಾಲ ಗೋವಾಗೆ ಆಗಮಿಸಲಿದ್ದಾರೆ. ಗೋವಾದ ತಾಜ್‌ ಕನ್ವೆನ್ಷನ್‌ ಹೋಟೆಲ್‌ನಲ್ಲಿ ಶಾಸಕರಿಗಾಗಿ 70 ಕೊಠಡಿಗಳನ್ನು ಬುಕ್‌ ಮಾಡಲಾಗಿದೆ. ಇದನ್ನೂ ಓದಿ: ರೆಬೆಲ್ ಶಾಸಕರು ನಾಳೆ ಮುಂಬೈಗೆ ಎಂಟ್ರಿ

    ಇಂದು ಎಲ್ಲಾ ಬಂಡಾಯ ಶಾಸಕರನ್ನು ಗೋವಾಕ್ಕೆ ಕರೆದೊಯ್ಯಲು ಸ್ಪೈಸ್‌ಜೆಟ್ ವಿಮಾನವು ಗುವಾಹಟಿಗೆ ತೆರಳಲಿದೆ. ಗೋವಾಗೆ ತೆರಳಲು ಬಂಡಾಯ ಶಾಸಕರಿಗೆ ಹೆಚ್ಚಿನ ಭದ್ರತೆ ಕೂಡ ಒದಗಿಸಲಾಗಿದೆ. ಏತನ್ಮಧ್ಯೆ ಇಂದು ಸಂಜೆ ಮುಂಬೈನ ತಾಜ್ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಸಮಾವೇಶಗೊಳ್ಳುವಂತೆ ಬಿಜೆಪಿ ತನ್ನ ಶಾಸಕರಿಗೆ ಸೂಚಿಸಿದೆ.

    ಮಹಾರಾಷ್ಟ್ರ ರಾಜ್ಯಪಾಲರು ಗುರುವಾರ ಬೆಳಗ್ಗೆ 11 ಗಂಟೆಗೆ ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನ ಕರೆದಿದ್ದಾರೆ. ಆ ಮೂಲಕ ಮಹತ್ತರ ಪರೀಕ್ಷೆಯನ್ನು ಎದುರಿಸಲು ಮತ್ತು ಶಿವಸೇನಾ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಬಹುಮತ ಸಾಬೀತುಪಡಿಸುವಂತೆ ಠಾಕ್ರೆಗೆ ತಿಳಿಸಿದ್ದಾರೆ. ಗುರುವಾರ ಸಂಜೆ 5 ಗಂಟೆಯೊಳಗೆ ಕಲಾಪ ಪೂರ್ಣಗೊಳಿಸುವಂತೆ ರಾಜ್ಯ ಶಾಸಕಾಂಗ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ರಾಜ್ಯಪಾಲರು ಸೂಚಿಸಿದ್ದಾರೆ. ಇದನ್ನೂ ಓದಿ: ಟೈಲರ್ ಹತ್ಯೆ ಬೆನ್ನಲ್ಲೆ ನವೀನ್ ಕುಮಾರ್ ಜಿಂದಾಲ್‌ಗೆ ಕೊಲೆ ಬೆದರಿಕೆ

    ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚಿರುವುದನ್ನು ವಿರೋಧಿಸಿ ಉದ್ಧವ್‌ ಠಾಕ್ರೆ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗಳ ಬಗ್ಗೆ ಇಂದು ಸಂಜೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ.

    Live Tv

  • ಮುಂದುವರಿದ ‘ಮಹಾ’ ನಾಟಕ- ಫೈವ್ ಸ್ಟಾರ್ ಹೋಟೆಲಿನಲ್ಲಿ ಮೂರು ಪಕ್ಷಗಳ ಶಕ್ತಿ ಪ್ರದರ್ಶನ

    ಮುಂದುವರಿದ ‘ಮಹಾ’ ನಾಟಕ- ಫೈವ್ ಸ್ಟಾರ್ ಹೋಟೆಲಿನಲ್ಲಿ ಮೂರು ಪಕ್ಷಗಳ ಶಕ್ತಿ ಪ್ರದರ್ಶನ

    -ಕರ್ನಾಟಕದಲ್ಲಿ ನಡೆದಂತೆ ಇಲ್ಲಿ ನಡೆಯಲ್ಲ
    -ಗೆಳೆಯರ ಸಂಖ್ಯೆ ಹೆಚ್ಚಾಗಿದೆ ಎಂದ ಠಾಕ್ರೆ
    -ಎಲ್ಲ ಶಾಸಕರ ಶಪಥ

    ಮುಂಬೈ: ಕಾಂಗ್ರೆಸ್, ಶಿವಸೇನೆ ಮತ್ತು ಎನ್‍ಸಿಪಿ ಮೂರು ಪಕ್ಷಗಳು ಇಂದು ನಗರದ ಖಾಸಗಿ ಹೋಟೆಲಿನಲ್ಲಿ 162 ಶಾಸಕರೊಂದಿಗೆ ಶಕ್ತಿ ಪ್ರದರ್ಶನ ಮಾಡಿವೆ.

    ಈ ವೇಳೆ ಮಾತನಾಡಿದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಕರ್ನಾಟಕದಲ್ಲಿ ನಡೆದಂತೆ ಇಲ್ಲಿ ನಡೆಯಲ್ಲ. ಇದು ಮಣಿಪುರ ಮತ್ತು ಗೋವಾ ಅಲ್ಲ ಎಂದು ಬಿಜೆಪಿ ತಿಳಿದುಕೊಳ್ಳಬೇಕು. ಬಹುಮತ ಇಲ್ಲದಿದ್ದರೂ ಬಿಜೆಪಿ ಕೆಲವು ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಿದೆ. ಬಿಜೆಪಿ ಅನೈತಿಕವಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಇತಿಹಾಸ ಸೃಷ್ಟಿ – ಒಂದೇ ವರ್ಷ ಮೂರು ಬಾರಿ ರಜಾದಿನದಲ್ಲಿ ಸುಪ್ರೀಂ ಕಲಾಪ

    ಗೆಳೆಯರ ಸಂಖ್ಯೆ ಹೆಚ್ಚಾಗಿದ್ದು, ಒಂದೇ ಫೋಟೋದಲ್ಲಿ ಎಲ್ಲರನ್ನು ಸೆರೆ ಹಿಡಿಯಲು ಆಗುತ್ತಿಲ್ಲ. ಸುಪ್ರೀಂಕೋರ್ಟ್ ಆದೇಶ ಬಂದ ಕೂಡಲೇ ನಾವೆಲ್ಲರೂ ವಿಶ್ವಾಸಮತ ಸಾಬೀತುಪಡಿಸಲು ಸಿದ್ಧರಿದ್ದೇವೆ. ಆ ದಿನದಂದು ನೀವೆಲ್ಲರೂ ತಯಾರಾಗಿರಬೇಕು. ಆಯ್ಕೆಯಾಗಿರುವ ಶಾಸಕರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದ್ದು, ನೀವೆಲ್ಲರೂ ಎಚ್ಚರದಿಂದಿರಬೇಕೆಂದು ಎಲ್ಲ ಶಾಸಕರಿಗೆ ಉದ್ಧವ್ ಠಾಕ್ರೆ ಸಲಹೆ ನೀಡಿದರು. ಇದನ್ನೂ ಓದಿ: ಮಹಾರಾಷ್ಟ್ರದಿಂದಲೇ ಬಿಜೆಪಿಯ ಅಂತ್ಯ ಆರಂಭ: ಶಿವಸೇನೆ

    ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್, ಯಾರು ಪಕ್ಷದ ವಿರುದ್ಧ ಹೋಗುವಂತಿಲ್ಲ. ಯಾರ ಪ್ರಲೋಭನೆಗೆ ಒಳಗಾಗದೇ ಪಕ್ಷಕ್ಕೆ ನಿಷ್ಠೆರಾಗಿರಬೇಕು. ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಪಕ್ಷ ವಿರೋಧಿ ಕೆಲಸಗಳಲ್ಲಿ ಭಾಗಿಯಾದ್ರೆ ಮೂರು ಪಕ್ಷಗಳು ಕ್ರಮ ಜರುಗಿಸುತ್ತೇವೆ. ಅಜಿತ್ ಪವಾರ್ ತಮ್ಮ ತೀರ್ಮಾನದ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಅನುಭವಿಸಲಿದ್ದಾರೆ. ಈಗ ಶಿವಸೇನೆ ನಮ್ಮ ಜೊತೆಯಲ್ಲಿದ್ದು, ತಪ್ಪು ಮಾಡಿದವರಿಗೆ ಪಾಠ ಕಲಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಸುಪ್ರೀಂನಲ್ಲಿ ‘ಮಹಾ’ ಬಿಕ್ಕಟ್ಟು- ಕ್ಷಣ ಕ್ಷಣಕ್ಕೂ ರೋಚಕತೆ ಸೃಷ್ಟಿಸಿದ ವಾದ-ಪ್ರತಿವಾದ

    ಕೊನೆಗೆ ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ಶಾಸಕರು ಮೈತ್ರಿಯ ಶಪಥ ಸ್ವೀಕರಿಸಿದರು. ಸೋನಿಯಾ ಗಾಂಧಿ, ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರಕ್ಕೆ ನಾವು ಬೆಂಬಲ ನೀಡುತ್ತೇವೆ ಎಂಬ ಶಪಥವನ್ನು ಮೂರು ಪಕ್ಷಗಳ ಶಾಸಕರಿಗೆ ಬೋಧಿಸಲಾಯ್ತು. ಇದನ್ನೂ ಓದಿ: 1978ರ ಇತಿಹಾಸ ಮರುಕಳಿಸಿದ ಅಜಿತ್ ಪವಾರ್

    ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್, ಎನ್‍ಸಿಪಿ ಮತ್ತು ಶಿವಸೇನೆ ಎಲ್ಲ ಹಿರಿಯ ನಾಯಕರು ಶಕ್ತಿ ಪ್ರದರ್ಶನದಲ್ಲಿ ಉಪಸ್ಥಿತರಿದ್ದರು.

  • ಸುಪ್ರೀಂನಲ್ಲಿ ‘ಮಹಾ’ ಬಿಕ್ಕಟ್ಟು- ಕ್ಷಣ ಕ್ಷಣಕ್ಕೂ ರೋಚಕತೆ ಸೃಷ್ಟಿಸಿದ ವಾದ-ಪ್ರತಿವಾದ

    ಸುಪ್ರೀಂನಲ್ಲಿ ‘ಮಹಾ’ ಬಿಕ್ಕಟ್ಟು- ಕ್ಷಣ ಕ್ಷಣಕ್ಕೂ ರೋಚಕತೆ ಸೃಷ್ಟಿಸಿದ ವಾದ-ಪ್ರತಿವಾದ

    -ಇಂದು ಸುಪ್ರೀಂಕೋರ್ಟಿನಲ್ಲಿ ಏನೇನಾಯ್ತು ಇಲ್ಲಿದೆ ಮಾಹಿತಿ

    ನವದೆಹಲಿ: ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಸುಪ್ರೀಂ ಅಂಗಳ ಪ್ರವೇಶಿಸಿದ್ದು, ಇಂದು ನಡೆದ ವಾದ-ಪ್ರತಿವಾದಗಳು ಕ್ಷಣ ಕ್ಷಣಕ್ಕೂ ಕುತೂಹಲವನ್ನುಂಟು ಮಾಡಿತ್ತು. ರಾಜ್ಯಪಾಲರ ಪರ ತುಷಾರ್ ಮೆಹ್ತಾ, ಬಿಜೆಪಿ ಪರ ಮುಕುಲ್ ರೋಹ್ಟಗಿ, ಅಜಿತ್ ಪವಾರ್ ಪರ ಮಣಿಂದರ್ ಸಿಂಗ್ ಮತ್ತು ಶಿವಸೇನೆ, ಎನ್‍ಸಿಪಿ, ಕಾಂಗ್ರೆಸ್ ಪರ ಕಪಿಲ್ ಸಿಬಲ್ ಹಾಗೂ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ತ್ರಿ ಸದಸ್ಯ ಪೀಠ ತೀರ್ಪನ್ನು ನಾಳೆ ಬೆಳಗ್ಗೆ 10.30ಕ್ಕೆ ಕಾಯ್ದಿರಿಸಿದೆ.

    ತುಷಾರ್ ಮೆಹ್ತಾ ವಾದ (ರಾಜ್ಯಪಾಲರ ಪರ):
    ರಾಜ್ಯಪಾಲರ ಬಹುಮತದ ಪತ್ರವನ್ನು ಇಂದು ಸುಪ್ರೀಂಕೋರ್ಟಿಗೆ ಸಲ್ಲಿಕೆ ಮಾಡಲಾಗಿದೆ. ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಚುನಾವಣಾ ಪೂರ್ವ ಮೈತ್ರಿಯಾಗಿ ಕ್ಷೇತ್ರಗಳ ಹೊಂದಾಣಿಕೆ ಆಗಿತ್ತು. ಶಿವಸೇನೆಯ ನಿರ್ಧಾರದಿಂದಾಗಿ ಸ್ಥಿರ ಸರ್ಕಾರ ರಚನೆ ಮಾಡಲು ಸಾಧ್ಯವಾಗಲಿಲ್ಲ. ಫಲಿತಾಂಶ ಬಂದ 22 ದಿನ ಕಳೆದರೂ ಸರ್ಕಾರ ರಚನೆಯಾಗಲಿಲ್ಲ. ಹಾಗಾಗಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಿದರು ಎಂದು ರಾಜ್ಯಪಾಲರ ಪರ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಇದನ್ನೂ ಓದಿ: ಚಿಂತೆ ಬೇಡ, ಆಲ್ ಈಸ್ ವೆಲ್: ಅಜಿತ್ ಪವಾರ್

    ಇದೇ ವೇಳೆ ತುಷಾರ್ ಮೆಹ್ತಾ, ಎನ್‍ಸಿಪಿಯ 54 ಶಾಸಕರ ಬೆಂಬಲ ಪತ್ರ ನೀಡಿದರು. ಎಲ್ಲ ಶಾಸಕರು ದೇವೇಂದ್ರ ಫಡ್ನವೀಸ್ ಅವರಿಗೆ ಬೆಂಬಲವಿದೆ ಎಂದು ಹೇಳಿದ್ದಾರೆ. ಎನ್‍ಸಿಪಿ ಶಾಸಕಾಂಗದ ಪಕ್ಷದ ನಾಯಕರಾಗಿ ಅಜಿತ್ ಪವಾರ್ ಆಯ್ಕೆಯಾಗಿದ್ದರು. ನವೆಂಬರ್ 22ರಂದು ಅಜಿತ್ ಪವಾರ್ ನೀಡಿದ ಪತ್ರದಲ್ಲಿ 54 ಶಾಸಕರ ಸಹಿ ಇತ್ತು. ಆ ಪತ್ರವನ್ನು ಸ್ವೀಕರಿಸಿ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ. ಪತ್ರದಲ್ಲಿಯ ಸಹಿ ಅಸಲಿಯೋ ಅಥವಾ ನಕಲಿಯೋ ಎಂಬುದರ ತನಿಖೆ ಮಾಡೋದು ರಾಜ್ಯಪಾಲರ ಕೆಲಸವಲ್ಲ. ಸ್ಥಿರ ಸರ್ಕಾರಕ್ಕಾಗಿ ಫಡ್ನವೀಸ್ ಅವರಿಗೆ ಬೆಂಬಲ ನೀಡಿದ್ದೇವೆ ಎಂದು ಅಜಿತ್ ಪವಾರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ರಾಜ್ಯಪಾಲರ ನಡೆಯನ್ನು ತುಷಾರ್ ಮೆಹ್ತಾ ಸಮರ್ಥಿಸಿಕೊಂಡರು. ಇದನ್ನೂ ಓದಿ: ಮಹಾರಾಷ್ಟ್ರದಿಂದಲೇ ಬಿಜೆಪಿಯ ಅಂತ್ಯ ಆರಂಭ: ಶಿವಸೇನೆ

    ಮುಕುಲ್ ರೋಹ್ಟಗಿ ವಾದ(ಬಿಜೆಪಿ ಪರ):
    ಸರ್ಕಾರ ರಚನೆ ಮಾಡಿದ ಬಿಜೆಪಿಗೆ 170 ಶಾಸಕರ ಬೆಂಬಲವಿದೆ. ಚುನಾವಣೆಯ ಮಿತ್ರ ನಮಗೆ ಶತ್ರುವಾದರು. ಬೆಂಬಲ ಪತ್ರದಲ್ಲಿರುವ ಎಲ್ಲ ಸಹಿಗಳು ಅಸಲಿ. ಎನ್‍ಸಿಪಿ ಶಾಸಕಾಂಗ ಪಕ್ಷದ ನಾಯಕರು ನೀಡಿದ್ದ ಪತ್ರದ ಮೇಲೆ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡಿದರು. ಇದೇ ವೇಳೆ ಮುಕುಲ್ ರೋಹ್ಟಗಿ ಕರ್ನಾಟಕದ ಪ್ರಕರಣವನ್ನು ಉಲ್ಲೇಖಿಸಿದರು. ವಿಶ್ವಾಸಮತ ಯಾಚನೆ ಮಾಡಲು ನಮಗೆ 10 ದಿನಗಳ ಕಾಲಾವಕಾಶ ನೀಡಬೇಕಿತ್ತು. ರಾಜ್ಯಪಾಲರು ಐದು ಮಾತ್ರ ಟೈಮ್ ಕೊಟ್ಟಿದ್ದಾರೆ. ಆದರೂ ಬಹುಮತ ಯಾಚನೆಗೆ ನಾವು ಸಿದ್ಧವಿದೆ. ರಾಜ್ಯಪಾಲರ ನಿರ್ಧಾರ ಸರಿಯೇ ಅಥವಾ ತಪ್ಪೇ ಎಂಬುದನ್ನು ನೀವು ತೀರ್ಮಾನಿಸಬೇಕು. ನೀವು (ಸುಪ್ರೀಂಕೋರ್ಟ್) ವಿಶ್ವಾಸಮತ ಯಾಚನೆಗೆ ಸಮಯ ನಿಗದಿ ಮಾಡುವಂತಿಲ್ಲ.

    ಶಿವಸೇನೆ, ಕಾಂಗ್ರೆಸ್ ಮತ್ತು ಎನ್‍ಸಿಪಿ ಮೈತ್ರಿ ಕೂಟ ವಿಚಾರಣೆಗೂ ಮೊದಲೇ ರಾಜ್ಯಪಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿತ್ತು. ಈ ಮಧ್ಯೆ ಎನ್‍ಸಿಪಿ ತನ್ನ ಶಾಸಕರನ್ನು ಹಿಡಿದಿಡ್ಡುಕೊಳ್ಳುವ ಸಲುವಾಗಿ ಕೇರಳಕ್ಕೆ ಶಿಫ್ಟ್ ಮಾಡಲು ತಯಾರಿ ನಡೆಸಿದೆ. ವಿಶ್ವಾಸಮತಯಾಚನೆ ಯಾವಾಗ ಮಾಡಬೇಕು ಎಂಬುದನ್ನು ವಿಧಾನಸಭೆಯಲ್ಲಿ ಸ್ಪೀಕರ್ ತೀರ್ಮಾನ ಮಾಡುತ್ತಾರೆ. ಈ ಮೊದಲು ಹಂಗಾಮಿ ಸ್ಪೀಕರ್ ನೇಮಕವಾದ ನಂತರವೇ ವಿಶ್ವಾಸಮತ ಆಗಬೇಕು. ವಿಧಾನಸಭಾ ಕಲಾಪ ಮತ್ತು ಹಂಗಾಮಿ ಸ್ಪೀಕರ್ ನೇಮಕ ಪ್ರಕ್ರಿಯೆ ಸುಪ್ರೀಂ ವ್ಯಾಪ್ತಿಗೆ ಬರಲ್ಲ. ಹಾಗಾಗಿ ಮಧ್ಯಂತರ ಆದೇಶ ನೀಡಬೇಡಿ. ಶಿವಸೇನೆಗಿಂತ ನಮಗೆ ಎರಡು ಪಟ್ಟ ಬೆಂಬಲವಿದೆ ಎಂದು ವಾದ ಮಂಡಿಸಿದರು. ಇದನ್ನೂ ಓದಿ: ಇತಿಹಾಸ ಸೃಷ್ಟಿ – ಒಂದೇ ವರ್ಷ ಮೂರು ಬಾರಿ ರಜಾದಿನದಲ್ಲಿ ಸುಪ್ರೀಂ ಕಲಾಪ

    ಹೊಸದಾಗಿ ಆಯ್ಕೆಯಾದ ಶಾಸಕರ ಪ್ರಮಾಣ ವಚನ ಸ್ವೀಕರಿಸಬೇಕು. ಎಲ್ಲವೂ ವಿಧಾನಸಭಾ ನಿಯಮಾವಾಳಿಗಳ ಪ್ರಕಾರ ನಡೆಯಲಿ. ಅವಸರೇ ಮಾಡದೇ ನಿಧಾನವಾಗಿ ನಡೆಯಲಿ. ಸುಪ್ರೀಂಕೋರ್ಟ್ ವಿಧಾನಸಭಾ ಕಲಾಪದಲ್ಲಿ ಮಧ್ಯ ಪ್ರವೇಶಿಸುವಂತಿಲ್ಲ. ಹಂಗಾಮಿ ಸ್ಪೀಕರ್ ನೇಮಕ ಮಾಡುವಂತೆ ಆದೇಶಿಸುವಂತಿಲ್ಲ. ವಿಶ್ವಾಸಮತಯಾಚನೆಗೆ ನಮಗೆ 14 ದಿನಗಳ ಅವಕಾಶ ನೀಡಿ. 14 ದಿನ ಆಗಲ್ಲ ಅಂದ್ರೆ ಕನಿಷ್ಠ ಏಳು ದಿನಗಳನ್ನಾದರು ನೀಡಬೇಕು. ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯ ಡ್ರಾಮಾ ನೋಡಿ ಅನಾರೋಗ್ಯಕ್ಕೀಡಾದ ಪ್ರೊಫೆಸರ್ – ರಜಾ ಅರ್ಜಿ ವೈರಲ್

    ಮಣಿಂದರ್ ಸಿಂಗ್ (ಅಜಿತ್ ಪವಾರ್ ಪರ ವಕೀಲ): ನವೆಂಬರ್ 22ರಂದು ಎನ್‍ಸಿಪಿ ಪಕ್ಷದ ಶಾಸಕಾಂಗ ನಾಯಕನಾಗಿ ಅಜಿತ್ ಪವಾರ್ ಬೆಂಬಲ ಪತ್ರ ನೀಡಿದ್ದಾರೆ. ರಾಜ್ಯಪಾಲರು ತಮ್ಮ ವಿವೇಚನಾಧಿಕಾರ ಬಳಸಿ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ. ಇದರಲ್ಲಿ ಅಜಿತ್ ಪವಾರ್ ನಡೆದುಕೊಂಡಿದ್ದು ಸರಿ ಇದೆ. ಇದರಲ್ಲಿ ಅಜಿತ್ ಪವಾರ್ ಅವರದ್ದು ತಪ್ಪಿಲ್ಲ. ಅಜಿತ್ ಪವಾರ್ ಎನ್‍ಸಿಪಿ ನಾಯಕ ಎಂದಾಗ ನ್ಯಾಯಾಧೀಶ ಖನ್ನಾ ಒಂದು ಕ್ಷಣ ನಸು ನಕ್ಕರು. ನಾವು ಕೊಟ್ಟ ಪತ್ರ ಅಸಲಿಯಾಗಿದ್ದು, ಎಲ್ಲ ಸಮಸ್ಯೆಗಳನ್ನು ಪಕ್ಷದೊಳಗೆಯೇ ಬಗೆಹರಿಸಿಕೊಳ್ಳುತ್ತೇವೆ. ನಾನೇ ಎನ್‍ಸಿಪಿ ಆಗಿದ್ದರಿಂದ ಬೇರೆಯವರ ಅರ್ಜಿಯನ್ನು ಸ್ವೀಕಾರ ಮಾಡಬಾರದು. ಎನ್‍ಸಿಪಿಯ ಎಲ್ಲ ಶಾಸಕರು ಬೆಂಬಲ ನೀಡಿದ್ದಾರೆ. ನಾವು ನೀಡಿರುವ ಬೆಂಬಲ ಪತ್ರ ಕಾನೂನು ಮತ್ತು ಸಂವಿಧಾನ ಬದ್ಧವಾಗಿದೆ ಎಂದು ಅಜಿತ್ ಪವಾರ್ ನಡೆಯನ್ನು ಮಣಿಂದರ್ ಸಿಂಗ್ ಸಮರ್ಥಿಸಿಕೊಂಡರು. ಇದನ್ನೂ ಓದಿ: 1978ರ ಇತಿಹಾಸ ಮರುಕಳಿಸಿದ ಅಜಿತ್ ಪವಾರ್

    ಕಪಿಲ್ ಸಿಬಲ್ (ಎನ್‍ಸಿಪಿ, ಶಿವಸೇನೆ, ಕಾಂಗ್ರೆಸ್ ಪರ): ನವೆಂಬರ್ 23ಕ್ಕೆ ನಾವು ಹಕ್ಕು ಮಂಡನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ರಾಜ್ಯಪಾಲರು ನಮಗೆ ಅವಕಾಶ ನೀಡಲಿಲ್ಲ. ನವೆಂಬರ್ 22 ರಾತ್ರಿ 7ರಿಂದ ಬೆಳಗ್ಗೆ 5.47ರ ನಡುವೆ ಏನಾಯ್ತು ಎಂಬುದರ ಬಗ್ಗೆ ಮಾಹಿತಿ ನೀಡಬೇಕು. ಅಕ್ಟೋಬರ್ 24ರಿಂದ ನವೆಂಬರ್ 22ರವರೆಗೆ ರಾಜ್ಯಪಾಲರು ಕಾಯುತ್ತಿದ್ದರು. ಇಷ್ಟು ದಿನ ಕಾದಿದ್ದ ರಾಜ್ಯಪಾಲರಿಗೆ ಒಂದು ಕಾಯಲು ಆಗಲಿಲ್ಲ. ಒಂದು ದಿನ ಮೊದಲೇ ಸುದ್ದಿಗೋಷ್ಠಿ ನಡೆಸಿ ಉದ್ಧವ್ ಠಾಕ್ರೆ ನಮ್ಮ ಸಿಎಂ ಎಂದು ಘೋಷಣೆ ಮಾಡಲಾಗಿತ್ತು. ಎನ್‍ಸಿಪಿ ನಿರ್ಣಯ ಪತ್ರವನ್ನು ತೋರಿಸಿಲ್ಲ. ಈ ಕ್ಷಣಕ್ಕೂ 54 ಶಾಸಕರು ನಮ್ಮ ಜೊತೆಯಲ್ಲಿಯೇ ಇದ್ದಾರೆ. ಅವಶ್ಯವಿದ್ದರೆ ನಾವು ಅಫಡವಿಟ್ ಸಲ್ಲಿಸಲು ಸಿದ್ಧರಿದ್ದೇವೆ. ಬಿಜೆಪಿಗೆ ಬೆಂಬಲ ನೀಡಬೇಕು ಎಂಬುದರ ಬಗ್ಗೆ ಎನ್‍ಸಿಪಿ ತೀರ್ಮಾನ ತೆಗೆದುಕೊಂಡಿರಲಿಲ್ಲ. ರಾಜ್ಯಪಾಲರು ಬಿಜೆಪಿಗೆ ಅನಕೂಲವಾಗುವಂತೆ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಜ್ಯಪಾಲರು ವಿವೇಚನೆ ಮೀರಿ ವರ್ತಿಸಿದ್ದಾರೆ. ಹಾಗಾಗಿ ಬೇಗ ಬಹುಮತ ಸಾಬೀತಿಗೆ ಸೂಚಿಸಬೇಕೆಂದು ಕಪಿಲ್ ಸಿಬಲ್ ಮನವಿ ಮಾಡಿಕೊಂಡರು. ಇದನ್ನೂ ಓದಿ: ಬಿಜೆಪಿಗೆ ಅಧಿಕಾರದ ಕುರ್ಚಿ ನೀಡಿದ ಅಜಿತ್ ಪವಾರ್ ಯಾರು? ಇಲ್ಲಿದೆ ಮಾಹಿತಿ

    ರಾತ್ರಿಯವರೆಗೂ ಕಾಯೋದು ಬೇಡ, ಇವತ್ತೆ ಅಂದ್ರೆ ಹಗಲಲ್ಲೇ ಬಹುಮತ ಪ್ರಕ್ರಿಯೆ ನಡೆಯಲಿ. ಅಜಿತ್ ಪವಾರ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಅಜಿತ್ ಪವಾರ್ ನೀಡಿದ ಪತ್ರಕ್ಕೆ ಯಾವುದೇ ಬೆಲೆ ನೀಡುವುದು ಬೇಡ. ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಎನ್‍ಸಿಪಿ ಶಾಸಕರರನ್ನು ಯಾರು ಹೈಜಾಕ್ ಮಾಡಿಲ್ಲ. ಎಲ್ಲರೂ ಶರದ್ ಪವಾರ್ ಜೊತೆಯಲ್ಲಿದ್ದಾರೆ. ಹಿರಿಯ ಶಾಸಕರೊಬ್ಬರು ಸ್ಪೀಕರ್ ಆಗಲಿ, ಅವರೇ ಕಲಾಪ ನಡೆಸಿಕೊಡಲಿ. ಇದನ್ನೂ ಓದಿ: ಕದ್ದುಮುಚ್ಚಿ ಮಾಡೋದು ನಮಗೆ ಗೊತ್ತಿಲ್ಲ: ಬಿಜೆಪಿ ವಿರುದ್ಧ ಠಾಕ್ರೆ ಕೆಂಡ

    ಶಾಸಕರು ನೀಡಿದ ಸಹಿ ಪತ್ರಕ್ಕೆ ಯಾವುದೇ ಕವರಿಂಗ್ ಲೆಟರ್ ಇರಲಿಲ್ಲ. ಆದರೆ ರಾಜ್ಯಪಾಲರು ಆ ಪತ್ರವನ್ನು ಹೇಗೆ ಒಪ್ಪಿದ್ರೆ ಎಂಬುವುದು ಗೊತ್ತಾಗಿಲ್ಲ. ನಾವು ನಮ್ಮ ಮೈತ್ರಿಗಾಗಿ ಮತ್ತು ಅಜಿತ್ ಪವಾರ್ ಶಾಸಕಾಂಗ ನಾಯಕರಾಗಿ ಮಾಡಲು ಶಾಸಕರು ಸಹಿ ಮಾಡಿದ್ದರು. ಅದೇ ಪತ್ರವನ್ನು ಅಜಿತ್ ಪವಾರ್ ರಾಜ್ಯಪಾಲರಿಗೆ ನೀಡಿದ್ದಾರೆ. 154 ಶಾಸಕರ ಬೆಂಬಲ ಪತ್ರವನ್ನು ನೀಡಿದರು. ಆದ್ರೆ ಎನ್‍ಸಿಪಿಯ ಅಫಿಡವಿಟ್ ಮಾನ್ಯ ಮಾಡಲಿಲ್ಲ. ಇದನ್ನೂ ಓದಿ: ಅಜಿತ್ ಪವಾರ್ ನಿರ್ಧಾರದೊಂದಿಗೆ ಎನ್‍ಸಿಪಿ ಇಲ್ಲ: ಶರದ್ ಪವಾರ್

    ಅಭಿಷೇಕ್ ಮನುಸಿಂಘ್ವಿ (ಎನ್‍ಸಿಪಿ, ಶಿವಸೇನೆ, ಕಾಂಗ್ರೆಸ್ ಪರ): ಕರ್ನಾಟಕದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾದಾಗ ತೆಗೆದುಕೊಂಡ ತೀರ್ಮಾನವನ್ನು ಇಲ್ಲಿಯೂ ತೆಗೆದುಕೊಳ್ಳಬೇಕು. ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವಕ್ಕೆ ಮೋಸ ಮಾಡಲಾಗುತ್ತಿದೆ. ಹಾಗಾಗಿ ಇಂದೇ ಬಹುಮತ ಸಾಬೀತು ಮಾಡಲು ಸೂಚಿಸಬೇಕು. ಬಿಜೆಪಿಯವರದ್ದು ಅರ್ಧ ಬುದ್ಧಿಯಾಗಿದ್ದು, ಕೆಲ ಶಾಸಕರ ಸಹಿಯನ್ನು ನಕಲು ಮಾಡಿದ್ದಾರೆ. ನಮಗೆ ಏಳು ಪಕ್ಷೇತರರ ಜೊತೆ 161 ಶಾಸಕರ ಬೆಂಬಲ ನಮ್ಮ ಮೈತ್ರಿಗಿದೆ. ಇಂದು ವಿಶ್ವಾಸಮತಯಾಚನೆ ಆದೇಶ ನೀಡಬೇಕು. ತಕ್ಷಣವೇ ವಿಶ್ವಾಸಮತಯಾಚನೆಗೆ ಆದೇಶ ನೀಡಬೇಕು, ಇಲ್ಲವಾದ್ರೆ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತದೆ. ಅಜಿತ್ ಪವಾರ್ ನೀಡಿರುವ ಪತ್ರಕ್ಕೆ ಯಾವುದೇ ಬೆಲೆ ಇಲ್ಲ. ವಿಶ್ವಾಸಮತಯಾಚನೆ ವೇಳೆ ಬಿಜೆಪಿ ನಮ್ಮನ್ನು ಸೋಲಿಸಿದ್ರೆ, ನಾವು ಒಪ್ಪಿಕೊಳ್ಳುತ್ತೇವೆ. ಶಾಸಕಾಂಗ ನಾಯಕರಾಗಿ ಆಯ್ಕೆ ಮಾಡುವಾಗ ಶಾಸಕರು ಹಾಕಿದ ಸಹಿಯುಳ್ಳ ಪತ್ರವನ್ನೇ ಅಜಿತ್ ಪವಾರ್ ನೀಡಿದ್ದಾರೆ. ಅದೇ ಪತ್ರವನ್ನು ರಾಜ್ಯಪಾಲರು ಒಪ್ಪಿಕೊಂಡಿದ್ದು ತಪ್ಪು. ತಮಗೆ ಬೆಂಬಲವಿದೆ ಎಂದು ಹೇಳುವ ಬಿಜೆಪಿ 24 ಗಂಟೆಯೊಳಗೆ ಬಹುಮತ ಸಾಬೀತು ಮಾಡಲಿ ಎಂದು ಸಿಂಘ್ವಿ ಸವಾಲು ಎಸೆದರು.

  • ನಾಳೆಗೆ ‘ಮಹಾ’ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

    ನಾಳೆಗೆ ‘ಮಹಾ’ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

    ನವದೆಹಲಿ: ಇಂದು ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ, ಮಹಾರಾಷ್ಟ್ರ ಸರ್ಕಾರಕ್ಕೆ ಸಂಬಂಧಿಸಿದ ತೀರ್ಪನ್ನು ನಾಳೆ ಬೆಳಗ್ಗೆ 10.30ಕ್ಕೆ ಕಾಯ್ದಿರಿಸಿದೆ. ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಮತ್ತೊಂದು ದಿನದ ಜೀವದಾನ ಸಿಕ್ಕಂತಾಗಿದೆ.

    ನಿನ್ನೆ ಸುಪ್ರೀಂನಲ್ಲಿ ಏನಾಗಿತ್ತು?
    ಬಹುಮತ ಇಲ್ಲದಿದ್ದರೂ ಫಡ್ನವಿಸ್ ಸರ್ಕಾರ ರಚನೆಗೆ ಅವಕಾಶ ಕೊಟ್ಟ ರಾಜ್ಯಪಾಲರ ವಿರುದ್ಧ ಶಿವಸೇನೆ, ಕಾಂಗ್ರೆಸ್, ಎನ್‍ಸಿಪಿ ಪ್ರತ್ಯೇಕವಾಗಿ ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿದ್ದ ತುರ್ತು ಅರ್ಜಿಯ ವಿಚಾರಣೆ ಸೋಮವಾರ ನ್ಯಾ.ಎನ್‍ವಿ ರಮಣ, ಅಶೋಕ್ ಭೂಷಣ್, ಸಂಜೀವ್ ಖನ್ನಾ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆದಿತ್ತು. ವಿಚಾರಣೆಯಲ್ಲಿ ರಾಜ್ಯಪಾಲರು ಬಿಜೆಪಿಯನ್ನು ಸರ್ಕಾರ ರಚನೆ ಮಾಡುವಂತೆ ಆಹ್ವಾನಿಸಿದ ಪತ್ರ ಮತ್ತು ಸರ್ಕಾರ ರಚನೆ ಮಾಡಲು ದೇವೇಂದ್ರ ಫಡ್ನವಿಸ್ ಅವರಿಗೆ ಇರುವ ಅಗತ್ಯ ಸಂಖ್ಯೆಯ ಶಾಸಕರ ಸಹಿಯುಳ್ಳ ಪತ್ರವನ್ನು ಪೀಠದ ಮುಂದೆ ಹಾಜರುಪಡಿಸುವಂತೆ ಪೀಠ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತು.

    ಈ ಅರ್ಜಿಯ ವಿಚಾರಣೆ ವೇಳೆ ಅವಕಾಶ ನೀಡಿದರೆ ನಾವೇ ಬಹುಮತ ಸಾಬೀತು ಮಾಡ್ತೇವೆ ಯಾಕೆ ಎಲ್ಲರೂ ತೊಂದರೆ ತೆಗೆದುಕೊಳ್ಳುತ್ತೀರಿ ಎಂದು ಮಹಾರಾಷ್ಟ್ರ ಸರ್ಕಾರದ ಪರವಾಗಿ ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದರು. ಅಷ್ಟೇ ಅಲ್ಲದೇ ಈ ಪ್ರಕರಣ ವಿಚಾರಣೆಗೆ ಅರ್ಹವಲ್ಲ. ಭಾನುವಾರ ರಜೆ ಇದೆ. ಹೀಗಾಗಿ ತುರ್ತು ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಮನವಿ ಮಾಡಿದ್ದರು. ಈ ವೇಳೆ ನ್ಯಾ.ಎನ್‍ವಿ ರಮಣ ಅವರು, ಭಾನುವಾರ ನಮಗೂ ರಜೆ. ಆದರೆ ಮುಖ್ಯ ನ್ಯಾಯಾಧೀಶರು ತುರ್ತು ಅರ್ಜಿ ವಿಚಾರಣೆ ನಡೆಸಬೇಕು ಎಂದು ನಮಗೆ ಸೂಚಿಸಿದ್ದಾರೆ. ಹೀಗಾಗಿ ನಾವು ವಿಚಾರಣೆ ನಡೆಸುತ್ತೇವೆ ಎಂದು ಹೇಳಿದ್ದರು.

    ಶಿವಸೇನೆ, ಕಾಂಗ್ರೆಸ್, ಎನ್‍ಸಿಪಿ ಪರವಾಗಿ ವಾದ ಮಂಡಿಸಿದ ಕಪಿಲ್ ಸಿಬಲ್, ಕಳೆದ ವರ್ಷ ಯಡಿಯೂರಪ್ಪ ಅವರಿಗೆ ಸುಪ್ರೀಂ ಕೋರ್ಟ್ ಒಂದು ದಿನದ ಒಳಗಡೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದ್ದನ್ನು ಉಲ್ಲೇಖಿಸಿ, ರಾಜ್ಯಪಾಲರ ನಿರ್ಧಾರ ಸರಿಯಲ್ಲ. ಯಾವ ದಾಖಲೆಗಳು ಇಲ್ಲದೇ ಪ್ರಕ್ರಿಯೆ ಅನುಸರಿಸದೇ ಸರ್ಕಾರ ರಚನೆ ಆಗಿದೆ. ರಾಷ್ಟ್ರಪತಿ ಆಡಳಿತ ತೆರವಿನ ಕೆಲವೇ ಕ್ಷಣಗಳಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆದಿದೆ. ಅವರಿಗೆ ಬಹುಮತ ಇದ್ದರೇ ಸಾಬೀತು ಮಾಡಲಿ. ಅವಸರವಾಗಿ ಯಾಕೆ ಪ್ರಮಾಣ ವಚನ ಸ್ವೀಕರಿಸಬೇಕು ಕೂಡಲೇ ಸುಪ್ರೀಂ ಬಹುಮತ ಸಾಬೀತಿಗೆ ಆದೇಶ ನೀಡಬೇಕೆಂದು ಮನವಿ ಮಾಡಿದ್ದರು.

  • ಇತಿಹಾಸ ಸೃಷ್ಟಿ – ಒಂದೇ ವರ್ಷ ಮೂರು ಬಾರಿ ರಜಾದಿನದಲ್ಲಿ ಸುಪ್ರೀಂ ಕಲಾಪ

    ಇತಿಹಾಸ ಸೃಷ್ಟಿ – ಒಂದೇ ವರ್ಷ ಮೂರು ಬಾರಿ ರಜಾದಿನದಲ್ಲಿ ಸುಪ್ರೀಂ ಕಲಾಪ

    ನವದೆಹಲಿ: ಈ ವರ್ಷ ಮೂರನೇ ಬಾರಿಗೆ ಸುಪ್ರೀಂ ಕೋರ್ಟಿನಲ್ಲಿ  ರಜಾ ದಿನದಂದು ಕಲಾಪ ನಡೆದಿದೆ.

    ಹೌದು. ಭಾನುವಾರ ನ್ಯಾಯಾಲಯಕ್ಕೆ ರಜಾದಿನ. ಆದರೆ ಇಂದು ಮಹಾರಾಷ್ಟ್ರದಲ್ಲಿ ಬಹುಮತ ಇಲ್ಲದಿದ್ದರೂ ಫಡ್ನಾವಿಸ್ ಅವರಿಗೆ ಸರ್ಕಾರ ರಚನೆಗೆ ಅವಕಾಶ ಕೊಟ್ಟ ರಾಜ್ಯಪಾಲರ ವಿರುದ್ಧ ಶಿವಸೇನೆ, ಕಾಂಗ್ರೆಸ್, ಎನ್‍ಸಿಪಿ ಸುಪ್ರೀಂನಲ್ಲಿ ಸಲ್ಲಿಸಿದ್ದ ತುರ್ತು ಅರ್ಜಿಯ ವಿಚಾರಣೆ ಇಂದು ನ್ಯಾ.ಎನ್‍ವಿ ರಮಣ, ಅಶೋಕ್ ಭೂಷಣ್, ಸಂಜೀವ್ ಖನ್ನಾ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯಿತು. ಈ ಮೂಲಕ ಒಂದೇ ವರ್ಷ ಮೂರು ಬಾರಿ ರಜಾದಿನದಲ್ಲಿ ಕಲಾಪ ನಡೆದು ಸುಪ್ರೀಂ ಕೋರ್ಟ್ ಇತಿಹಾಸ ಸೃಷ್ಟಿಸಿದೆ.

    ಸುಪ್ರೀಂ ಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಾಗ ಏಪ್ರಿಲ್ 20ರ ಶನಿವಾರ ತುರ್ತು ವಿಚಾರಣೆ ನಡೆದಿತ್ತು.

    ಅಯೋಧ್ಯೆ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದದ ತೀರ್ಪನ್ನು ರಂಜನ್ ಗೊಗೊಯ್ ನೇತೃತ್ವದ ಸಂವಿಧಾನ ಪೀಠ ನ.9 ರಂದು ಪ್ರಕಟಿಸಿತ್ತು. ವಿಶೇಷ ಏನೆಂದರೆ ಸಾಧಾರಣವಾಗಿ ಕೋರ್ಟ್ ತೀರ್ಪುಗಳು ಪ್ರಕಟವಾಗುವ ದಿನಾಂಕವನ್ನು ಒಂದು, ಎರಡು ದಿನದ ಮೊದಲೇ ಪ್ರಕಟಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಶುಕ್ರವಾರ ರಾತ್ರಿ 8:45ಕ್ಕೆ ಶನಿವಾರ ತೀರ್ಪು ಪ್ರಕಟವಾಗಲಿದೆ ಎಂದು ಪ್ರಕಟಿಸಲಾಗಿತ್ತು.

    ಶನಿವಾರ ಬೆಳಗ್ಗೆ ರಾಷ್ಟ್ರಪತಿ ಆಡಳಿತವನ್ನು ರದ್ದು ಮಾಡಿ ಬೆಳಗ್ಗೆ ಮಹಾರಾಷ್ಟ್ರ ರಾಜ್ಯಪಾಲರು ದೇವೇಂದ್ರ ಫಡ್ನಾವಿಸ್ ಅವರಿಗೆ ಪ್ರಮಾಣವಚನ ಬೋಧಿಸಿದ್ದರು. ಬಹುಮತ ಇಲ್ಲದೇ ಇದ್ದರೂ ರಾಜ್ಯಪಾಲರು ಸರ್ಕಾರ ರಚಿಸಲು ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಶಿವಸೇನೆ, ಕಾಂಗ್ರೆಸ್, ಎನ್‍ಸಿಪಿ ತುರ್ತು ವಿಚಾರಣೆ ನಡೆಸಬೇಕೆಂದು ಶನಿವಾರ ಅರ್ಜಿ ಸಲ್ಲಿಸಿದ್ದು ರಾತ್ರಿ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ನಿಗದಿಯಾಗಿತ್ತು.

    ಕಳೆದ ವರ್ಷ ಕರ್ನಾಟಕದಲ್ಲಿ ರಾಜ್ಯಪಾಲರು ಪ್ರಮಾಣವಚನ ಸ್ವೀಕರಿಸಿ ಬಹುಮತ ಸಾಬೀತು ಪಡಿಸಲು ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಪ್ರಶ್ನಿಸಿದಾಗಲೂ ಮಧ್ಯರಾತ್ರಿಯಲ್ಲಿ ವಿಚಾರಣೆ ನಡೆದಿತ್ತು.

    1993ರ ಮುಂಬೈ ಬಾಂಬ್ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ಗಲ್ಲು ಶಿಕ್ಷೆಗೆ ತಡೆ ನೀಡಬೇಕೆಂದು ಸಲ್ಲಿಸಲಾಗಿದ್ದ ತುರ್ತು ಅರ್ಜಿ ವಿಚಾರಣೆ 2015ರ ಜುಲೈ 29ರ ರಾತ್ರಿ ನಡೆದಿತ್ತು. ಸುಪ್ರೀಂ ಕೋರ್ಟ್ ತಡೆ ನೀಡದ ಹಿನ್ನೆಲೆಯಲ್ಲಿ ಜುಲೈ 30ರಂದು ಮೆಮನ್‍ನ್ನು ಗಲ್ಲಿಗೇರಿಸಲಾಗಿತ್ತು.

    ರಿಸರ್ವ್ ಬ್ಯಾಂಕ್ ದೂರಿನ ಆಧಾರದಲ್ಲಿ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ(ಎಫ್‌ಇಆರ್‌ಎ) ಉಲ್ಲಂಘಿಸಿದ ಆರೋಪದ ಅಡಿ 1985 ರಲ್ಲಿ ಉದ್ಯಮಿ ಎಲ್ ಎಂ ಥಾಪರ್ ಬಂಧನವಾಗಿತ್ತು. ಈ ವೇಳೆ ಅಂದಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಇಎಸ್ ವೆಂಕಟರಾಮಣಯ್ಯ ಅವರು ಮಧ್ಯರಾತ್ರಿ ಎದ್ದು ವಿಚಾರಣೆ ನಡೆಸಿ ಥಾಪರ್ ಅವರಿಗೆ ಜಾಮೀನು ಮಂಜೂರು ಮಾಡಿದ್ದರು. ಮಧ್ಯರಾತ್ರಿ ತುರ್ತು ವಿಚಾರಣೆಗೆ ಒಪ್ಪಿ ಜಾಮೀನು ಮಂಜೂರು ಮಾಡಿದ್ದು ಬಹಳ ಚರ್ಚೆಗೆ ಗ್ರಾಸವಾಗಿತ್ತು.

    1992ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡ ಬಳಿಕ ಡಿ.6 ಮತ್ತು 7ರ ಮಧ್ಯರಾತ್ರಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮನೆಯಲ್ಲಿ ನಿರಂತರ ವಿಚಾರಣೆ ನಡೆದಿತ್ತು.

  • ಕದ್ದುಮುಚ್ಚಿ ಮಾಡೋದು ನಮಗೆ ಗೊತ್ತಿಲ್ಲ: ಬಿಜೆಪಿ ವಿರುದ್ಧ ಠಾಕ್ರೆ ಕೆಂಡ

    ಕದ್ದುಮುಚ್ಚಿ ಮಾಡೋದು ನಮಗೆ ಗೊತ್ತಿಲ್ಲ: ಬಿಜೆಪಿ ವಿರುದ್ಧ ಠಾಕ್ರೆ ಕೆಂಡ

    -ಛತ್ರಪತಿ ಶಿವಾಜಿ ಮಹಾರಾಜರ ಭಾವನೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್
    -ಬಿಜೆಪಿಯವರದ್ದು ಸ್ವಾರ್ಥ ರಾಜಕಾರಣ

    ಮುಂಬೈ: ನಾವು ಏನೇ ಮಾಡಿದರು ಬಹಿರಂಗವಾಗಿ ಮಾಡುತ್ತೇವೆಯೇ ಹೊರತು ಕದ್ದುಮುಚ್ಚಿ ಮಾಡಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

    ಮಹಾರಾಷ್ಟ್ರದಲ್ಲಿ ಇಂದು ಬೆಳ್ಳಂಬೆಳಗ್ಗೆ ಸರ್ಕಾರ ರಚಿಸುವ ಮೂಲಕ ಶಿವಸೇನೆ ಮತ್ತು ಕಾಂಗ್ರೆಸ್‍ಗೆ ಬಿಜೆಪಿ ಶಾಕ್ ನೀಡಿತ್ತು. ರಾಜಭವನದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಿಎಂ ಆಗಿ ದೇವೇಂದ್ರ ಫಡ್ನವೀಸ್ ಮತ್ತು ಡಿಸಿಎಂ ಆಗಿ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂಬಂಧ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನೆ ಮತ್ತು ಎನ್‍ಸಿಪಿ ಜಂಟಿ ಸುದ್ದಿಗೋಷ್ಠಿಯನ್ನು ಕರೆದಿತ್ತು.

    ಈ ವೇಳೆ ಮಾತನಾಡಿದ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ, ನಾವು ಜನಾದೇಶವನ್ನು ಗೌರವಿಸುತ್ತೇವೆ. ರಾಜಕೀಯವಾಗಿ ಏನೇ ಮಾಡಿದರೂ ಬಹಿರಂಗವಾಗಿ ಎಲ್ಲರ ಸಮ್ಮುಖದಲ್ಲಿ ಮಾಡುತ್ತೇವೆ. ರಾಜ್ಯದಲ್ಲಿ ಜಾರಿಯಾಗಿದ್ದ ರಾಷ್ಟ್ರಪತಿ ಆಳ್ವಿಕೆ ಹಿಂಪಡೆಯಲು ಬೆಳಗಿನ ಜಾವ ಕೇಂದ್ರದ ಸಂಪುಟ ಸಭೆ ಕರೆಯಲಾಗಿತ್ತು ಎಂಬುದರ ಮಾಹಿತಿ ಲಭ್ಯವಾಗಿದೆ. ಸಂವಿಧಾನದ ಅನುಸಾರವಾಗಿ ಕೆಲಸಗಳು ನಡೆಯಬೇಕಿತ್ತು ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಅಜಿತ್ ಪವಾರ್ ನಿರ್ಧಾರದೊಂದಿಗೆ ಎನ್‍ಸಿಪಿ ಇಲ್ಲ: ಶರದ್ ಪವಾರ್

    ರಾಜ್ಯ ಮತ್ತು ದೇಶದ ಜನತೆ ಎಲ್ಲ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಬಿಜೆಪಿ ನಮ್ಮ ಮೇಲೆ ಹಲವು ಆರೋಪಗಳನ್ನು ಮಾಡುತ್ತಿದೆ. ಆದರೆ ಶಿವಸೇನೆ ಏನೇ ಮಾಡಿದರೂ ನಿರ್ಧರಿಸಿ ಮಾಡುತ್ತದೆ. ಅವರು (ಬಿಜೆಪಿ) ಒಡೆಯುವ ಕೆಲಸ ಮಾಡ್ತಾರೆ, ನಾವು ಏನೇ ಮಾಡಿದರೂ ಜನರನ್ನು ಜೊತೆಯಾಗಿಸುವ ಕೆಲಸ ಮಾಡುತ್ತೇವೆ. ಅವರ ಯೋಚನೆಯಲ್ಲಿ ‘ನಾನು ಕೇವಲ ನಾನು’ ಎಂಬ ಸ್ವಾರ್ಥವಿದ್ದು, ಮೈತ್ರಿಯ ನೈತಿಕ ಮೌಲ್ಯಗಳಿಲ್ಲ. ಇದು ಛತ್ರಪತಿ ಶಿವಾಜಿ ಮಹಾರಾಜರ ಭಾವನೆಗಳ ಮೇಲೆ ಬಿಜೆಪಿ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂದು ಉದ್ಧವ್ ಠಾಕ್ರೆ ಕಿಡಿಕಾರಿದರು. ಇದನ್ನೂ ಓದಿ: ಒಡೆದ ಕುಟುಂಬ, ಪಕ್ಷ- ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಲೆ

    ಇನ್ನು ಶರದ್ ಪವಾರ್ ಮಾತನಾಡಿ, ಪ್ರಮಾಣವಚನ ಕಾರ್ಯಕ್ರಮದಲ್ಲಿ ಹಾಜರಿದ್ದ 11 ಎನ್‍ಸಿಪಿ ಶಾಸಕರ ಪೈಕಿ ಮೂವರು ನಮ್ಮೊಂದಿಗೆ ಸುದ್ದಿಗೋಷ್ಠಿಯಲ್ಲಿದ್ದಾರೆ. ಸರ್ಕಾರ ರಚನೆ ಮಾಡಿದವರು ಬಹುಮತ ಹೇಗೆ ಸಾಬೀತು ಮಾಡ್ತಾರೆ ಎಂಬುವುದು ಗೊತ್ತಿಲ್ಲ. ನಮ್ಮ ಮೈತ್ರಿ (ಶಿವಸೇನೆ+ಕಾಂಗ್ರೆಸ್+ಎನ್‍ಸಿಪಿ) ಬಳಿ ಬಹುಮತವಿದ್ದು, ಸರ್ಕಾರ ರಚನೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ