Tag: ಮಹಾರಾಷ್ಟ್ರ ರಾಜಕಾರಣ

  • ಮಹಾರಾಷ್ಟ್ರದಲ್ಲಿ ಇಂದು ಉದ್ಧವ್ ಸರ್ಕಾರ ರಚನೆ – ಎನ್‍ಸಿಪಿಗೆ ಡಿಸಿಎಂ, ಕಾಂಗ್ರೆಸ್‍ಗೆ ಸ್ಪೀಕರ್ ಸ್ಥಾನ

    ಮಹಾರಾಷ್ಟ್ರದಲ್ಲಿ ಇಂದು ಉದ್ಧವ್ ಸರ್ಕಾರ ರಚನೆ – ಎನ್‍ಸಿಪಿಗೆ ಡಿಸಿಎಂ, ಕಾಂಗ್ರೆಸ್‍ಗೆ ಸ್ಪೀಕರ್ ಸ್ಥಾನ

    ಮುಂಬೈ: ಮಹಾರಾಷ್ಟ್ರದಲ್ಲಿಂದು ಉದ್ಧವ್ ಠಾಕ್ರೆ ನೇತೃತ್ವದ ‘ಮಹಾವಿಕಾಸ್ ಅಘಡಿ’ ಸರ್ಕಾರ ರಚನೆಯಾಗಲಿದೆ. ಸಂಜೆ 6.40ಕ್ಕೆ ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ನಡೆಯಯುವ ಕಾರ್ಯಕ್ರಮದಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಉದ್ಧವ್ ಠಾಕ್ರೆ ಜೊತೆಗೆ ಎನ್‍ಸಿಪಿಯ ಒಬ್ಬರು ಡಿಸಿಎಂ ಆಗಿ, ಕಾಂಗ್ರೆಸ್‍ನ ಇಬ್ಬರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎನ್‍ಸಿಪಿಯ ಅಜಿತ್ ಪವಾರ್ ಬದಲು ಜಯಂತ್ ಪಾಟೀಲ್‍ಗೆ ಡಿಸಿಎಂ ಹುದ್ದೆ ಒಲಿಯುವ ಸಂಭವ ಇದೆ ಎನ್ನಲಾಗುತ್ತಿದೆ.

    ಉದ್ಧವ್ ಠಾಕ್ರೆ ಪ್ರಮಾಣ ವಚನ ಸಮಾರಂಭಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪ್ರಧಾನಿ ಮೋದಿ, ಗೃಹ ಮಂತ್ರಿ ಅಮಿತ್ ಶಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಎಂಕೆಯ ಸ್ಟಾಲಿನ್ ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ. ಜೊತೆಗೆ ಮಹಾರಾಷ್ಟ್ರದ 400 ರೈತರನ್ನು ಪದಗ್ರಹಣ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

    ಬುಧವಾರ ಸಂಜೆ ಸುಧೀರ್ಘ ಆರು ಗಂಟೆಗಳ ಕಾಲ ನಡೆದ ಮಹಾ ವಿಕಾಸ್ ಅಘಡಿ ಸಭೆಯಲ್ಲಿ ಅಧಿಕಾರ ಹಂಚಿಕೆಯ ಸೂತ್ರವನ್ನು ಫೈನಲ್ ಮಾಡಲಾಯ್ತು. ಇದರ ಅನ್ವಯ ಉದ್ಧವ್ ಠಾಕ್ರೆ ಐದು ವರ್ಷ ಸಿಎಂ ಆಗಲಿದ್ದಾರೆ. ಇಬ್ಬರು ಡಿಸಿಎಂಗಳ ಬದಲು ಎನ್‍ಸಿಪಿಯ ಒಬ್ಬರನ್ನು ಡಿಸಿಎಂ ಮಾಡಲು ತೀರ್ಮಾನಿಸಲಾಗಿದೆ. ಜೊತೆಗೆ ಕಾಂಗ್ರೆಸ್‍ಗೆ ಡಿಸಿಎಂ ಬದಲು ಸ್ಪೀಕರ್ ಹುದ್ದೆ ಕೊಡಲು ಸಭೆ ತೀರ್ಮಾನಿಸಿದೆ. ಡಿಸೆಂಬರ್ 3ರಂದು ಪೂರ್ಣ ಪ್ರಮಾಣದ ಸಂಪುಟ ಅಸ್ತಿತ್ವಕ್ಕೆ ಬರಲಿದೆ. ಇನ್ನು ಆದಿತ್ಯ ಠಾಕ್ರೆಗೆ ಮಂತ್ರಿ ಸ್ಥಾನ ಕೊಡದೇ, ಅವರನ್ನು ಶಾಡೋ ಸಿಎಂ ರೀತಿ ಬಿಂಬಿಸಲು ಶಿವಸೇನೆ ತೀರ್ಮಾನಿಸಿದೆ ಎಂದು ವರದಿಯಾಗಿದೆ.

    ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಬುಲೆಟ್ ರೈಲು ಯೋಜನೆಗೆ ಕೊಕ್ಕೆ ಹಾಕೋದು ಬಹುತೇಕ ಖಚಿತವಾಗಿದೆ. ನಮಗೆ ಬುಲೆಟ್ ರೈಲಿಗಿಂತ ರೈತರ ಹಿತ ಮುಖ್ಯ ಎಂದು ಸ್ಪಷ್ಟಪಡಿಸಿದೆ. ಸಭೆ ಬಳಿಕ ಮಾತನಾಡಿದ ಶಿವಸೇನೆಯ ದೀಪಕ್ ಕೆಸಾರ್ಕರ್, ನಮಗೆ ರೈತರ ಹಿತವೇ ಪ್ರಥಮ ಆದ್ಯತೆ. ಹಾಗಂತಾ ನಾವು ಬುಲೆಟ್ ರೈಲು ಯೋಜನೆಯನ್ನು ವಿರೋಧಿಸುತ್ತಿಲ್ಲ. ಮುಂಬೈ-ಅಹಮದಾಬಾದ್ ಸಂಪರ್ಕಿಸುವ ಈ ಯೋಜನೆ ಒಳ್ಳೆಯದು. ಆದ್ರೆ ಮೂರೂವರೆ ಸಾವಿರ ಖರ್ಚು ಮಾಡಿ ರೈಲಿನಲ್ಲಿ ಹೋಗುವ ಬದಲು ವಿಮಾನದಲ್ಲೇ ಪ್ರಯಾಣ ಮಾಡಬಹುದು. ಸದ್ಯಕ್ಕೆ ಬುಲೆಟ್ ರೈಲು ಯೋಜನೆ ಅಗತ್ಯವಿಲ್ಲ. ನಮ್ಮ ಸರ್ಕಾರಕ್ಕೆ ರೈತರು, ಮಹಿಳೆಯರು, ಕಾರ್ಮಿಕರ ಹಿತ ಮುಖ್ಯ. ನಿರುದ್ಯೋಗ ಹೋಗಲಾಡಿಸುವುದು ನಮ್ಮ ಆದ್ಯತೆ ಎಂದು ತಿಳಿಸಿದ್ದಾರೆ.

  • ಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ

    ಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ

    ಮುಂಬೈ: ವಿಶ್ವಾಸಮತಯಾಚನೆಗೂ ಮುನ್ನವೇ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಿದ್ದಾರೆ.

    ಇಂದು ಬೆಳಗ್ಗೆ ಸುಪ್ರೀಂ ಕೋರ್ಟ್ ಬುಧವಾರ ಸಂಜೆ 5 ಗಂಟೆಯ ಒಳಗಡೆ ಬಹುಮತ ಸಾಬೀತು ಪಡಿಸುವಂತೆ ಬಿಜೆಪಿ ಸರ್ಕಾರಕ್ಕೆ ಸೂಚಿಸಿತ್ತು. ಈ ಆದೇಶದ ಬಳಿಕ ಸಂಖ್ಯಾಬಲ ಇಲ್ಲದ ಹಿನ್ನೆಲೆಯಲ್ಲಿ ಅಜಿತ್ ಪವಾರ್ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನೀಡುವುದಾಗಿ ಫಡ್ನವೀಸ್ ಪ್ರಕಟಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಂದ್ರ ಫಡ್ನವೀಸ್, ಚುನಾವಣೆಯಲ್ಲಿ 105 ಸ್ಥಾನ ಗೆದ್ದು ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಚುನಾವಣೆಯಲ್ಲಿ ಜೊತೆಯಾಗಿದ್ದ ಶಿವಸೇನೆ ಜನಾದೇಶವನ್ನು ಧಿಕ್ಕರಿಸಿತು. ಶಿವಸೇನೆ ನಂಬರ್ ಆಟಕ್ಕೆ ಮುಂದಾಗಿ ಚೌಕಾಸಿಗೆ ಮುಂದಾಯಿತು. ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ ಎಂದು ತೀರ್ಮಾನವಾಗಿರಲಿಲ್ಲ. ಫಲಿತಾಂಶದ ಬಳಿಕ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಆಗ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಘೋಷಣೆ ಮಾಡಿದ್ದರು. ಖಾಸಗಿ ವಾಹಿನಿ ನೀಡಿದ ಸಂದರ್ಶನದಲ್ಲಿಯೂ ಅಮಿತ್ ಈ ಬಗ್ಗೆ ಹಲವು ಬಾರಿ ಸ್ಪಷ್ಟಪಡಿಸಿದ್ದರು ಎಂದು ಹೇಳಿದರು.

    ಮೊದಲ ಬಾರಿಗೆ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನಿಸಿದಾಗ ನಮ್ಮ ಜೊತೆಗೆ ಶಿವಸೇನೆ ಇಲ್ಲ. ಹಾಗಾಗಿ ನಾವು ಸರ್ಕಾರ ರಚನೆ ಮಾಡಲ್ಲ ಎಂದು ಹೇಳಿದ್ದೇವೆ. ಹೀಗೆ ರಾಜ್ಯಪಾಲರು ಪ್ರತಿಯೊಂದು ಪಕ್ಷಕ್ಕೂ ಸರ್ಕಾರ ರಚನೆಗೆ ಆಹ್ವಾನಿಸಿದ್ದರು. ಯಾರು ಸರ್ಕಾರ ರಚನೆಗೆ ಮುಂದಾಗದೇ ಇದ್ದಾಗ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಲಾಗಿತ್ತು. ತದನಂತರ ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ಸರ್ಕಾರ ರಚನೆಯ ಕಸರತ್ತು ಮುಂದುವರಿಸಿದ್ದವು ಎಂದು ತಿಳಿಸಿದರು.

    ಅಜಿತ್ ಪವಾರ್ ಬೆಂಬಲ ನೀಡಿದಾಗ ಸರ್ಕಾರ ರಚಿಸುವ ಪ್ರಸ್ತಾಪವನ್ನು ಸಲ್ಲಿಸಿ ಪ್ರಮಾಣ ವಚನ ಸ್ವೀಕರಿಸಲಾಯ್ತು. ಸದ್ಯ ನಮ್ಮ ಬಳಿ ಬಹುಮತ ಇಲ್ಲ. ಹಾಗಾಗಿ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಮುಂದಿನ ದಿನಗಳಲ್ಲಿ ಬಿಜೆಪಿ ವಿಪಕ್ಷ ಸ್ಥಾನದಲ್ಲಿ ಕುಳಿತು ಸಮರ್ಥವಾಗಿ ಕೆಲಸ ಮಾಡುತ್ತದೆ. ಬೇರೆ ಬೇರೆ ಮನಸ್ಸಿನ ಜನರು ಹೇಗೆ ಸರ್ಕಾರ ನಡೆಸುತ್ತಾರೆ ಎಂಬುವುದು ಗೊತ್ತಾಗುತ್ತಿಲ್ಲ ಎಂದರು.

  • ಡಿಸಿಎಂ ಸ್ಥಾನಕ್ಕೆ ಅಜಿತ್ ಪವಾರ್ ರಾಜೀನಾಮೆ

    ಡಿಸಿಎಂ ಸ್ಥಾನಕ್ಕೆ ಅಜಿತ್ ಪವಾರ್ ರಾಜೀನಾಮೆ

    ಮುಂಬೈ: ವಿಶ್ವಾಸಮತ ಯಾಚನೆಗೂ ಮುನ್ನವೇ ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಬಿಜೆಪಿಗೆ ಬೆಂಬಲ ಘೋಷಿಸಿ ದೇವೇಂದ್ರ ಫಡ್ನವೀಸ್ ಜೊತೆಯಲ್ಲಿ ಅಜಿತ್ ಪವಾರ್ ಭಾನುವಾರ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅಜಿತ್ ಪವಾರ್ ಗೆ ಬೆಂಬಲ ನೀಡಿದ್ದ ಶಾಸಕರು ಮಾತೃಪಕ್ಷಕ್ಕೆ ಹಿಂದಿರುಗಿದ್ದರು. ಇಂದು ಸುಪ್ರೀಂಕೋರ್ಟ್ ನಾಳೆ ಸಂಜೆ 5 ಗಂಟೆಯೊಳಗೆ ವಿಶ್ವಾಸಮತ ಸಾಬೀತು ಮಾಡುವಂತೆ ಮಧ್ಯಂತರ ಆದೇಶ ನೀಡಿದೆ. ಈ ಬೆನ್ನಲ್ಲೇ ಅಜಿತ್ ಪವಾರ್ ದಿಢೀರ್ ರಾಜೀನಾಮೆ ಸಲ್ಲಿಸಿದ್ದಾರೆ. ಇತ್ತ ಸಿಎಂ ದೇವೇಂದ್ರ ಫಡ್ನವೀಸ್ ಮಧ್ಯಾಹ್ನ 3.30ಕ್ಕೆ ಸುದ್ದಿಗೋಷ್ಠಿ ಕರೆದಿದ್ದಾರೆ.

    ಇತ್ತ ಸಂಜೆ 5 ಗಂಟೆಗೆ ಎನ್‍ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಜಂಟಿ ಸುದ್ದಿಗೋಷ್ಠಿಯನ್ನು ಕರೆದಿವೆ. ಈಗಾಗಲೇ ಅಜಿತ್ ಪವಾರ್ ಅವರನ್ನು ಎನ್‍ಸಿಪಿ ಶಾಸಕಾಂಗ ನಾಯಕ ಸ್ಥಾನದಿಂದ ಉಚ್ಛಾಟಿಸಿ ಜಯಂತ್ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ. ಅಜಿತ್ ಪವಾರ್ ಅವರನ್ನು ಎನ್‍ಸಿಪಿಗೆ ಸೆಳೆಯಲು ಶರದ್ ಪವಾರ್ ಕುಟುಂಬಸ್ಥರು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಮಹಾ ಅಂಗಳದಲ್ಲಿ ಕೇಳಿ ಬರುತ್ತಿವೆ. ಇದನ್ನೂ ಓದಿ: ಬಿಜೆಪಿಗೆ ಅಧಿಕಾರದ ಕುರ್ಚಿ ನೀಡಿದ ಅಜಿತ್ ಪವಾರ್ ಯಾರು? ಇಲ್ಲಿದೆ ಮಾಹಿತಿ

    ಸುಪ್ರಿಂಕೋರ್ಟ್ ಆದೇಶವೇನು?
    ಚುನಾವಣೆ ನಡೆಸದೇ ಹಿರಿಯ ಶಾಸಕರೊಬ್ಬರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಬೇಕು. ಬುಧವಾರ ಸಂಜೆ 5 ಗಂಟೆಯೊಳಗೆ ವಿಶ್ವಾಸಮತ ಸಾಬೀತು ಪಡಿಸಬೇಕು. ಬಹುಮತ ಸಾಬೀತು ಸಂಪೂರ್ಣ ಪ್ರಕ್ರಿಯೆ ನೇರ ಪ್ರಸಾರವಾಗಬೇಕು. ವಿಶ್ವಾಸಮತ ಯಾಚನೆಗೂ ಮುನ್ನ ಎಲ್ಲ ಶಾಸಕರ ಪ್ರಮಾಣವಚನ ತೆಗೆದುಕೊಳ್ಳಬೇಕು. ಗುಪ್ತ ಮತದಾನ ಮಾಡುವಂತಿಲ್ಲ, ಎಲ್ಲ ಪ್ರಕ್ರಿಯೆಗಳು ಪಾರದರ್ಶಕವಾಗಿರಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಇದನ್ನೂ ಓದಿ: 1978ರ ಇತಿಹಾಸ ಮರುಕಳಿಸಿದ ಅಜಿತ್ ಪವಾರ್

    ನಾವು 162: ಸೋಮವಾರ ರಾತ್ರಿ ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಖಾಸಗಿ ಹೋಟೆಲಿನಲ್ಲಿ ತಮ್ಮ ಶಾಸಕರೊಂದಿಗೆ ಶಕ್ತಿ ಪ್ರದರ್ಶನ ಮಾಡಿದ್ದವು. ಮೂರು ಪಕ್ಷಗಳ ಹಿರಿಯ ನಾಯಕರು ಸಭೆಯಲ್ಲಿ ಭಾಗಿಯಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಶಾಸಕರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಪಕ್ಷಕ್ಕೆ ನಿಷ್ಠರಾಗಿರಬೇಕು. ಸಭೆಯ ಅಂತ್ಯಕ್ಕೆ ಎಲ್ಲ ಶಾಸಕರಿಗೆ ಶಪಥವನ್ನು ಬೋಧಿಸಲಾಗಿತ್ತು.

  • ಬಿಜೆಪಿಯ ಆಟ ಮುಗಿತು: ಎನ್‍ಸಿಪಿ

    ಬಿಜೆಪಿಯ ಆಟ ಮುಗಿತು: ಎನ್‍ಸಿಪಿ

    ಮುಂಬೈ: ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಭಾರತದ ಪ್ರಜಾಪ್ರಭುತ್ವದಲ್ಲಿ ಮೈಲಿಗಲ್ಲಾಗಲಿದೆ. ಸರ್ಕಾರ ರಚಿಸಿರುವ ಬಿಜೆಪಿ ಬುಧವಾರ ಸಂಜೆ 5ಗಂಟೆಯೊಳಗೆ ಬಹುಮತ ಸಾಬೀತು ಮಾಡಬೇಕು. ಬಿಜೆಪಿಯ ಆಟ ಇಲ್ಲಿಗೆ ಮುಗಿತು ಅನ್ನೋದು ಸ್ಪಷ್ಟವಾಗುತ್ತದೆ. ಕೆಲವೇ ದಿನಗಳಲ್ಲಿ ಶಿವಸೇನ-ಎನ್‍ಸಿಪಿ-ಕಾಂಗ್ರೆಸ್ ಮೈತ್ರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಲಿದೆ ಎಂದು ಎನ್‍ಸಿಪಿ ನಾಯಕ ನವಾಬ್ ಮಲಿಕ್ ಹೇಳಿದ್ದಾರೆ.

    ಸುಪ್ರೀಂಕೋರ್ಟ್ ಮಧ್ಯಂತರ ಆದೇಶಕ್ಕೆ ಪ್ರತಿಕ್ರಿಯಿಸಿರುವ ಶಿವಸೇನೆ ನಾಯಕ ಸಂಜಯ್ ರಾವತ್, ಕೆಲವೊಮ್ಮೆ ಸತ್ಯ ತೊಂದರೆಗೆ ಒಳಗಾಗಬಹುದು. ಆದ್ರೆ ಕೊನೆಗೆ ಸತ್ಯಕ್ಕೆ ಜಯ ಸಿಗುತ್ತದೆ. ಸತ್ಯಮೇವ ಜಯತೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಿಂದಲೇ ಬಿಜೆಪಿಯ ಅಂತ್ಯ ಆರಂಭ: ಶಿವಸೇನೆ

    ಸುಪ್ರಿಂಕೋರ್ಟ್ ಆದೇಶವೇನು?
    ಚುನಾವಣೆ ನಡೆಸದೇ ಹಿರಿಯ ಶಾಸಕರೊಬ್ಬರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಬೇಕು. ಬುಧವಾರ ಸಂಜೆ 5 ಗಂಟೆಯೊಳಗೆ ವಿಶ್ವಾಸಮತ ಸಾಬೀತು ಪಡಿಸಬೇಕು. ಬಹುಮತ ಸಾಬೀತು ಸಂಪೂರ್ಣ ಪ್ರಕ್ರಿಯೆ ನೇರ ಪ್ರಸಾರವಾಗಬೇಕು. ವಿಶ್ವಾಸಮತ ಯಾಚನೆಗೂ ಮುನ್ನ ಎಲ್ಲ ಶಾಸಕರ ಪ್ರಮಾಣವಚನ ತೆಗೆದುಕೊಳ್ಳಬೇಕು. ಗುಪ್ತ ಮತದಾನ ಮಾಡುವಂತಿಲ್ಲ, ಎಲ್ಲ ಪ್ರಕ್ರಿಯೆಗಳು ಪಾರದರ್ಶಕವಾಗಿರಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

    ನಾವು 162: ಸೋಮವಾರ ರಾತ್ರಿ ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಖಾಸಗಿ ಹೋಟೆಲಿನಲ್ಲಿ ತಮ್ಮ ಶಾಸಕರೊಂದಿಗೆ ಶಕ್ತಿ ಪ್ರದರ್ಶನ ಮಾಡಿದ್ದವು. ಮೂರು ಪಕ್ಷಗಳ ಹಿರಿಯ ನಾಯಕರು ಸಭೆಯಲ್ಲಿ ಭಾಗಿಯಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಶಾಸಕರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಪಕ್ಷಕ್ಕೆ ನಿಷ್ಠರಾಗಿರಬೇಕು. ಸಭೆಯ ಅಂತ್ಯಕ್ಕೆ ಎಲ್ಲ ಶಾಸಕರಿಗೆ ಶಪಥವನ್ನು ಬೋಧಿಸಲಾಗಿತ್ತು. ಇದನ್ನೂ ಓದಿ: ಸುಪ್ರೀಂನಲ್ಲಿ ‘ಮಹಾ’ ಬಿಕ್ಕಟ್ಟು- ಕ್ಷಣ ಕ್ಷಣಕ್ಕೂ ರೋಚಕತೆ ಸೃಷ್ಟಿಸಿದ ವಾದ-ಪ್ರತಿವಾದ

  • ಚಿಂತೆ ಬೇಡ, ಆಲ್ ಈಸ್ ವೆಲ್: ಅಜಿತ್ ಪವಾರ್

    ಚಿಂತೆ ಬೇಡ, ಆಲ್ ಈಸ್ ವೆಲ್: ಅಜಿತ್ ಪವಾರ್

    ಮುಂಬೈ: ಯಾರು ಚಿಂತೆ ಮಾಡುವ ಅಗತ್ಯವಿಲ್ಲ, ಎಲ್ಲವೂ ಚೆನ್ನಾಗಿದೆ. ಸ್ವಲ್ಪ ತಾಳ್ಮೆಯ ಅವಶ್ಯಕತೆಯಿದೆ. ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಎಂದು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಟ್ವಿಟ್ಟರ್ ಮೂಲಕ ಬೆಂಬಲಿಗರಿಗೆ ಧನ್ಯವಾದ ತಿಳಿಸಿದ್ದಾರೆ.

    ಈ ಮೊದಲು ಟ್ವೀಟ್ ಮಾಡಿದ್ದ ಅಜಿತ್ ಪವಾರ್, ನಾನು ಎನ್‍ಸಿಪಿಯಲ್ಲಿದ್ದೇನೆ. ಯಾವಾಗಲೂ ಇದೇ ಪಕ್ಷದಲ್ಲಿಯೇ ಇರುತ್ತೇನೆ ಮತ್ತು ಶರದ್ ಪವಾರ್ ನಮ್ಮ ನಾಯಕರು. ನಮ್ಮ ಬಿಜೆಪಿ-ಎನ್‍ಸಿಪಿ ಮೈತ್ರಿ ಮಹಾರಾಷ್ಟ್ರದಲ್ಲಿ ಮುಂದಿನ ಐದು ವರ್ಷ ಸ್ಥಿರ ಸರ್ಕಾರ ನೀಡಲಿದೆ. ರಾಜ್ಯದ ಅಭಿವೃದ್ಧಿ ಮತ್ತು ಜನಹಿತಕ್ಕಾಗಿ ಸರ್ಕಾರ ಕೆಲಸ ಮಾಡಲಿದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಮಹಾರಾಷ್ಟ್ರದಿಂದಲೇ ಬಿಜೆಪಿಯ ಅಂತ್ಯ ಆರಂಭ: ಶಿವಸೇನೆ

    ಇತ್ತ ಅಜಿತ್ ಪವಾರ್ ನಡೆಯನ್ನು ಖಂಡಿಸಿರುವ ಶರದ್ ಪವಾರ್, ಬಿಜೆಪಿಯೊಂದಿಗೆ ನಮ್ಮ ಮೈತ್ರಿ ಸಾಧ್ಯವಿಲ್ಲ. ನಮ್ಮ ಶಾಸಕರೆಲ್ಲರೂ ಒಗ್ಗಾಟ್ಟಿದ್ದು, ಬಿಜೆಪಿ ಹೇಗೆ ಬಹುಮತ ಸಾಬೀತು ಮಾಡುತ್ತೇವೆ ಎಂದು ಕಾದು ನೋಡುತ್ತೇವೆ. ಕೊನೆಗೆ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‍ಸಿಪಿ ಮೈತ್ರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಇತಿಹಾಸ ಸೃಷ್ಟಿ – ಒಂದೇ ವರ್ಷ ಮೂರು ಬಾರಿ ರಜಾದಿನದಲ್ಲಿ ಸುಪ್ರೀಂ ಕಲಾಪ

  • 1978ರ ಇತಿಹಾಸ ಮರುಕಳಿಸಿದ ಅಜಿತ್ ಪವಾರ್

    1978ರ ಇತಿಹಾಸ ಮರುಕಳಿಸಿದ ಅಜಿತ್ ಪವಾರ್

    -ಅಂದು ಸಿಎಂ ಸ್ಥಾನಕ್ಕಾಗಿ ಪಕ್ಷ ತೊರೆದಿದ್ದ ಶರದ್ ಪವಾರ್
    -ಇಂದು ಅಣ್ಣನ ಮಗನಿಂದ ಹಿಸ್ಟರಿ ರಿಪೀಟ್

    ಮುಂಬೈ: ಮಹಾರಾಷ್ಟ್ರದ ರಾಜಕಾರಣದಲ್ಲಿ 1978ರ ಇತಿಹಾಸ ಮರುಕಳಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಂದು ಅಧಿಕಾರಕ್ಕಾಗಿ ಪಕ್ಷ ತೊರೆದಿದ್ದ ಶರದ್ ಪವಾರ್ ಅವರ ನಡೆಯನ್ನ ಸೋದರನ ಮಗ ಅಜಿತ್ ಪವಾರ್ ಅನುಸರಿಸಿದ್ರಾ ಎಂಬ ಚರ್ಚೆಗಳು ಮಹಾ ಅಂಗಳದಲ್ಲಿ ಆರಂಭಗೊಂಡಿವೆ. ಅಜಿತ್ ಪವಾರ್ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡಿದ್ದು, ದೇವೇಂದ್ರ ಫಡ್ನವೀಸ್ ಎರಡನೇ ಬಾರಿ ಸಿಎಂ ಆಗಿದ್ದಾರೆ. ಇತ್ತ ಸುದ್ದಿಗೋಷ್ಠಿ ನಡೆಸಿದ ಅಜಿತ್ ಪವಾರ್ ನಿರ್ಧಾರಕ್ಕೂ ಎನ್‍ಸಿಪಿಗೂ ಯಾವುದೇ ಸಂಬಂಧವಿಲ್ಲ. ಅದು ಹೇಗೆ ಬಹುಮತ ಸಾಬೀತು ಮಾಡ್ತಾರೆ ಎಂದು ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಸವಾಲ್ ಹಾಕಿದ್ದಾರೆ.

    1977ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ಸೇರಿದಂತೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸಹ ಸೋತ ಪರಿಣಾಮ ಜನತಾ ಪಾರ್ಟಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಮಹಾರಾಷ್ಟ್ರದಲ್ಲಿ ಸಹ ಕಾಂಗ್ರೆಸ್ ಹಿರಿಯ ನಾಯಕರು ಸೋಲು ಕಂಡಿದ್ದರು. ಸೋಲಿನ ನೈತಿಕ ಹೊಣೆ ಹೊತ್ತು ಅಂದಿನ ಮಹಾರಾಷ್ಟ್ರ ಸಿಎಂ ಶಂಕರ್ ರಾವ್ ಚವಾಣ್ ತಮ್ಮ ಪದವಿಗೆ ರಾಜೀನಾಮೆ ನೀಡಿದ್ದರು. ವಸಂತ್ ದಾದಾ ಪಾಟೀಲ್ ಸಿಎಂ ಆಗಿ ಆಯ್ಕೆಯಾದರು. ನಂತರದ ಬೆಳವಣಿಗೆಯಲ್ಲಿ ಕೈ ಪಕ್ಷ ಇಬ್ಭಾಗವಾಯ್ತು. ಕಾಂಗ್ರೆಸ್ (ಯು) ಮತ್ತು ಕಾಂಗ್ರೆಸ್ (ಐ) ಎಂದು ವಿಗಂಡನೆ ಆಯ್ತು. ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ

    ಕಾಂಗ್ರೆಸ್(ಯು)ಗೆ ಶರದ್ ಪವಾರ್ ಸೇರ್ಪಡೆ:
    ಗುರು ಯಶವಂತ್ ರಾವ್ ಪಾಟೀಲ್ ಜೊತೆಯಲ್ಲಿ ಶರದ್ ಪವಾರ್ ಕಾಂಗ್ರೆಸ್ (ಯು) ಸೇರಿದರು. 1978ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್(ಯು) ಮತ್ತು ಕಾಂಗ್ರೆಸ್(ಐ) ಪ್ರತ್ಯೇಕವಾಗಿ ಚುನಾವಣೆಗೆ ಸ್ಪರ್ಧೆ ಮಾಡಿದವು. ಫಲಿತಾಂಶದ ಬಳಿಕ ಜನತಾ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಎರಡು ಪಾರ್ಟಿಗಳು ಮೈತ್ರಿ ರಚಿಸಿಕೊಂಡು ಸರ್ಕಾರ ರಚಿಸಿದ್ದರಿಂದ ವಸಂತ್ ದಾದಾ ಪಾಟೀಲ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೈತ್ರಿ ಸರ್ಕಾರದಲ್ಲಿ ಶರದ್ ಪವಾದ್ ಉದ್ಯೋಗ ಮತ್ತು ಕಾರ್ಮಿಕ ಸಚಿವರಾಗಿದ್ದರು. ಇದನ್ನೂ ಓದಿ: ಅಜಿತ್ ಪವಾರ್ ನಿರ್ಧಾರದೊಂದಿಗೆ ಎನ್‍ಸಿಪಿ ಇಲ್ಲ: ಶರದ್ ಪವಾರ್

    ಜುಲೈ 1978ರಲ್ಲಿ ಶರದ್ ಪವಾರ್ ತಮ್ಮ ಗುರು ಯಶವಂತ್ ರಾವ್ ಪಾಟೀಲ್ ಸಲಹೆ ಮೇರೆಗೆ ಬೆಂಬಲಿಗರೊಂದಿಗೆ ಕಾಂಗ್ರೆಸ್(ಯು)ನಿಂದ ಹೊರಬಂದು ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರು. ಮೈತ್ರಿ ಬಳಿಕ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ಮಾಡಿ 38ನೇ ವಯಸ್ಸಿನಲ್ಲಿಯೇ ಶರದ್ ಪವಾರ್ ಸಿಎಂ ಆದರು. ನಂತರ ಯಶವಂತ್ ಪಾಟೀಲ್ ಸಹ ಶರದ್ ಪವಾರ್ ಪಕ್ಷ ಸೇರ್ಪಡೆಗೊಂಡರು. 1980ರಲ್ಲಿ ಇಂದಿರಾ ಗಾಂಧಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಶರದ್ ಪವಾರ್ ನೇತೃತ್ವದ ಪ್ರೊಗ್ರೆಸಿವ್ ಫ್ರಂಟ್ ಸರ್ಕಾರ ಬಿತ್ತು. ಇದನ್ನೂ ಓದಿ: ಬಿಜೆಪಿಗೆ ಅಧಿಕಾರದ ಕುರ್ಚಿ ನೀಡಿದ ಅಜಿತ್ ಪವಾರ್ ಯಾರು? ಇಲ್ಲಿದೆ ಮಾಹಿತಿ

    1987ರಲ್ಲಿ ಕಾಂಗ್ರೆಸ್(ಯು) ಕಾಂಗ್ರೆಸ್ ನಲ್ಲಿ ವಿಲೀನವಾಯ್ತು. 1988, 1990ರಲ್ಲಿ ಮತ್ತೆ ಶರದ್ ಪವಾರ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರು. 1999ರಲ್ಲಿ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದನ್ನು ಪ್ರಶ್ನಿಸಿ ಶರದ್ ಪವಾರ್ ಪಕ್ಷದಿಂದ ಹೊರ ಬಂದಿದ್ದರು. ಪಿಎ ಸಂಗ್ಮಾ, ತರೀಖ್ ಅನ್ವರ್ ಸೇರಿ ಎನ್‍ಸಿಪಿ ರಚನೆ ಮಾಡಿ, ಪಕ್ಷದ ಅಧ್ಯಕ್ಷರಾದರು. ಇದನ್ನೂ ಓದಿ: ಕದ್ದುಮುಚ್ಚಿ ಮಾಡೋದು ನಮಗೆ ಗೊತ್ತಿಲ್ಲ: ಬಿಜೆಪಿ ವಿರುದ್ಧ ಠಾಕ್ರೆ ಕೆಂಡ

    ಹಿಸ್ಟರಿ ರಿಪೀಟ್: ಚಿಕ್ಕಪ್ಪನ ಪಕ್ಷದಿಂದ ಹೊರಬಂದಿರುವ ಅಜಿತ್ ಪವಾರ್ ಬಿಜೆಪಿಗೆ ಬೆಂಬಲ ಸೂಚಿಸಿ ಡಿಸಿಎಂ ಆಗಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಜನರು ನಿದ್ದೆಗಣ್ಣಿನಲ್ಲಿರುವಾಗಲೇ ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದ ಮರುಕ್ಷಣದಲ್ಲಿಯೇ ಪ್ರಧಾನಿ ಮೋದಿ ಟ್ವಿಟ್ಟರ್ ಮೂಲಕ ಶುಭಾಶಯ ತಿಳಿಸಿದ್ದರು.

  • ಬಿಜೆಪಿಗೆ ಅಧಿಕಾರದ ಕುರ್ಚಿ ನೀಡಿದ ಅಜಿತ್ ಪವಾರ್ ಯಾರು? ಇಲ್ಲಿದೆ ಮಾಹಿತಿ

    ಬಿಜೆಪಿಗೆ ಅಧಿಕಾರದ ಕುರ್ಚಿ ನೀಡಿದ ಅಜಿತ್ ಪವಾರ್ ಯಾರು? ಇಲ್ಲಿದೆ ಮಾಹಿತಿ

    – ಮುದುಡಿದ್ದ ಕಮಲಕ್ಕೆ ‘ಪವರ್’ ನೀಡಿದ ‘ಪವಾರ್’

    ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‍ಸಿಪಿ)ಯ ಶಾಸಕಾಂಗ ನಾಯಕ ಅಜಿತ್ ಪವಾರ್ ನೀಡಿದ ಪವರ್ ನಿಂದ ಬಿಜೆಪಿ ಇಂದು ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಿದೆ. ಬಿಜೆಪಿಯನ್ನು ಅಧಿಕಾರದ ಕುರ್ಚಿ ಬಳಿ ಕರೆತಂದ ಅಜಿತ್ ಪವಾರ್ ಯಾರು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

    ಇಂದು ಅಜಿತ್ ಪವಾರ್ ಬೆಂಬಲದಿಂದಲೇ ದೇವೇಂದ್ರ ಫಡ್ನವಿಸ್ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಜಿತ್ ನೀಡಿದ ಪವರ್ ನಿಂದಲೇ ಮಹಾರಾಷ್ಟ್ರದಲ್ಲಿ ಎರಡನೇ ಬಾರಿ ಕಮಲ ಅರಳಿದೆ. ಫಡ್ನವಿಸ್ ಜೊತೆ ಅಜಿತ್ ಪವಾರ್ ಸಹ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಚಿಕ್ಕಪ್ಪ ಶರದ್ ಪವಾರ್ ಮತ್ತು ಎನ್‍ಸಿಪಿಗೆ ಶಾಕ್ ನೀಡಿದರು.

    ಯಾರು ಈ ಅಜಿತ್ ಪವಾರ್?: ಎನ್‍ಸಿಪಿ ಮುಖ್ಯಸ್ಥರಾಗಿರುವ ಶರದ್ ಪವಾರ್ ಅವರ ಹಿರಿಯ ಸೋದರ ಅನಂತರಾವ್ ಪವಾರ್ ಅವರ ಪುತ್ರ ಅಜಿತ್ ಪವಾರ್. ಚಿಕ್ಕಪ್ಪನ ಮಾರ್ಗದರ್ಶನದಲ್ಲಿ ರಾಜಕೀಯ ಪ್ರವೇಶಿಸಿದ ಅಜಿತ್ ಪವಾರ್, 1990ರಿಂದ ಇದುವರೆಗೂ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 22 ಜುಲೈ 1959 ಅಹಮದ್ ನಗರದಲ್ಲಿ ಜನಿಸಿದ ಅಜಿತ್ ಪವಾರ್ ಗೆ ಚಿಕ್ಕಪ್ಪನೇ ಒಂದು ರೀತಿಯ ರಾಜಕೀಯ ಗುರುಗಳು. ಇದನ್ನೂ ಓದಿ: ಅಜಿತ್ ಪವಾರ್ ನಿರ್ಧಾರದೊಂದಿಗೆ ಎನ್‍ಸಿಪಿ ಇಲ್ಲ: ಶರದ್ ಪವಾರ್

    1982ರಲ್ಲಿ ರಾಜಕೀಯ ಪ್ರವೇಶಿಸಿದ ಅಜಿತ್ ಪವಾರ್, ಸಹಕಾರಿ ಸಕ್ಕರೆ ಕಾರ್ಖಾನೆಯ ಬೋರ್ಡ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಪುಣೆ ಜಿಲ್ಲೆಯ ಸಹಕಾರಿ ಬ್ಯಾಂಕಿನ ಚೇರ್‍ಮನ್ ಆಗಿ 16 ವರ್ಷ ಕಾರ್ಯನಿರ್ವಹಿಸಿದ್ದಾರೆ. ನಂತರ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ಆದರೆ ಶರದ್ ಪವಾರ್ ಅವರಿಗಾಗಿ ಅಜಿತ್ ತಮ್ಮ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಇದನ್ನೂ ಓದಿ:  ಕದ್ದುಮುಚ್ಚಿ ಮಾಡೋದು ನಮಗೆ ಗೊತ್ತಿಲ್ಲ: ಬಿಜೆಪಿ ವಿರುದ್ಧ ಠಾಕ್ರೆ ಕೆಂಡ

    ಶರದ್ ಪವಾರ್ ಅವರಿಗಾಗಿ ಲೋಕಸಭಾ ಕ್ಷೇತ್ರ ಬಿಟ್ಟುಕೊಟ್ಟ ಅಜಿತ್ ಪವಾರ್ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರು. 1967 ರಿಂದ 1990ರವರೆಗೆ ಶರದ್ ಪವಾರ್ ಬಾರಾಮತಿಯಿಂದಲೇ ಶಾಸಕರಾಗಿ ಆಯ್ಕೆಯಾಗುತ್ತಿದ್ದರಿಂದ ಅಜಿತ್ ಪವಾರ್ ಚುನಾವಣೆಯಲ್ಲಿ ಜಯದ ಮಾಲೆ ಸರಳವಾಗಿ ಸಿಕ್ಕಿತ್ತು. ಇದೇ ಕ್ಷೇತ್ರದಿಂದ ಅಜಿತ್ ಪವಾರ್ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಶರದ್ ಪವಾರ್ ಮತ್ತು ಅಜಿತ್ ಪವಾರ್ ಒಟ್ಟು 12 ಬಾರಿ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಗೆಲುವು ದಾಖಲಿಸಿದ್ದಾರೆ.

    ಈ ಮೊದಲು ಡಿಸಿಎಂ ಆಗಿದ್ರು: 2010ರಲ್ಲಿ ಕಾಂಗ್ರೆಸ್-ಎನ್‍ಸಿಪಿ ಜೊತೆಯಾಗಿ ಸರ್ಕಾರ ರಚನೆ ಮಾಡಿದ್ದಾಗ ಅಜಿತ್ ಪವಾರ್ ಮುಖ್ಯಮಂತ್ರಿಯಾಗಿದ್ದರು. ಜನತಾ ಪಕ್ಷ ಮತ್ತ ಆಪ್ತ ವಲಯದಲ್ಲಿ ಅಜಿತ್ ಪವಾರ್ ಅವರನ್ನು ಬಾಬಾ ಎಂದೇ ಕರೆಯಲಾಗುತ್ತದೆ. ಸೆಪ್ಟೆಂಬರ್ 2012ರಲ್ಲಿ ಹಗರಣದಲ್ಲಿ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಅಜಿತ್ ಪವಾರ್ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸಂಬಂಧ ಶ್ವೇತಪತ್ರ ಹೊರಡಿಸಿದ್ದ ಎನ್‍ಸಿಪಿ, ಅಜಿತ್ ಪವಾರ್ ಗೆ ಕ್ಲೀನ್ ಚಿಟ್ ನೀಡಿತ್ತು. 1500 ಕೋಟಿ ರೂ. ನೀರಾವರಿ ಹಗರಣದಲ್ಲಿ ಅಜಿತ್ ಪವಾರ್ ಆರೋಪಿಯಾಗಿದ್ದಾರೆ. ಇದನ್ನೂ ಓದಿ: ಒಡೆದ ಕುಟುಂಬ, ಪಕ್ಷ- ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಲೆ

    ವಿವಾದಾತ್ಮಕ ಹೇಳಿಕೆಯಿಂದಲೇ ಪ್ರಸಿದ್ಧಿ: ಹಲವು ಬಾರಿ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಅಜಿತ್ ಪವಾರ್ ಸುದ್ದಿಯಾಗಿದ್ದಾರೆ. 7 ಏಪ್ರಿಲ್ 2013ರಲ್ಲಿ ಬರ ಪರಿಹಾರ ಆಗ್ರಹಿಸಿ 55 ದಿನ ಉಪವಾಸ ಪ್ರತಿಭಟನೆ ನಡೆಸಿದ್ದ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಣೆಕಟ್ಟೆಯಲ್ಲಿ ನೀರು ಇಲ್ಲದಿದ್ರೆ ನಾವು ಅಲ್ಲಿ ಮೂತ್ರ ಮಾಡಬೇಕಾ ಎಂಬ ಹೇಳಿಕೆ ಮಾಹಾರಾಷ್ಟ್ರದಲ್ಲಿ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿತ್ತು. ಕೊನೆಗೆ ಸಾರ್ವಜನಿಕವಾಗಿ ಕ್ಷಮೆ ಕೇಳಿ, ಇದು ನನ್ನ ಜೀವನದ ದೊಡ್ಡ ತಪ್ಪು ಎಂದು ಹೇಳಿದ್ದರು.

    ಪ್ರಚಾರದ ವೇಳೆ ಬೆದರಿಕೆ: 16 ಏಪ್ರಿಲ್ 2014ರ ಲೋಕಸಭಾ ಚುನಾವಣೆ ಸಮಯದಲ್ಲಿ ಸೋದರಿ ಸುಪ್ರಿಯಾ ಸುಲೆ ಪರ ಪ್ರಚಾರ ಮಾಡುತ್ತಿದ್ದರು. ಪ್ರಚಾರದ ವೇಳೆ ಚುನಾವಣೆಯಲ್ಲಿ ಸೋದರಿ ಸುಪ್ರಿಯಾ ಸುಲೆಗೆ ಮತ ನೀಡದಿದ್ದರೆ ನಿಮ್ಮ ಗ್ರಾಮದ ನೀರಿನ ಸಂಪರ್ಕ ಕಡಿತಗೊಳಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು. ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ 48 ಗಂಟೆ ಪ್ರಚಾರ ನಡೆಸದಂತೆ ಅಜಿತ್ ಪವಾರ್ ಗೆ ಚುನಾವಣೆ ಆಯೋಗ ನಿಷೇಧ ಹೇರಿತ್ತು.

  • ‘ಮಹಾ’ ಬಿಕ್ಕಟ್ಟು- ಕೊನೆಗೂ ಮೌನ ಮುರಿದ ಅಮಿತ್ ಶಾ

    ‘ಮಹಾ’ ಬಿಕ್ಕಟ್ಟು- ಕೊನೆಗೂ ಮೌನ ಮುರಿದ ಅಮಿತ್ ಶಾ

    -ಬಹುಮತ ತೋರಿಸಿ ಸರ್ಕಾರ ರಚಿಸಿ: ಶಿವಸೇನೆಗೆ ‘ಶಾ’ ಸವಾಲ್
    -ಯಾರು ಯಾರ ಅವಕಾಶವನ್ನು ಕಿತ್ತುಕೊಂಡಿಲ್ಲ

    ನವದೆಹಲಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಂಬಂಧ ಉಂಟಾದ ಬಿಕ್ಕಟ್ಟಿನ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊನೆಗೂ ಮೌನ ಮುರಿದಿದ್ದಾರೆ. ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಹಾರಾಷ್ಟ್ರ ರಾಜಕಾರಣದ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

    ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜ್ಯಪಾಲರು ಎಲ್ಲ ಪಕ್ಷಗಳಿಗೂ 18 ದಿನದ ಅವಕಾಶ ನೀಡಿದ್ದರು. ಆದ್ರೆ ಯಾವ ಪಕ್ಷವೂ ಸರ್ಕಾರ ರಚನೆಗೆ ಮುಂದಾಗಲಿಲ್ಲ. ವಿಧಾನಸಭಾ ಅವಧಿ ಅಂತ್ಯವಾಗಲು ಬಂದಾಗ ರಾಜ್ಯಪಾಲರು ಪಕ್ಷಗಳಿಗೆ ಸರ್ಕಾರ ರಚಿಸುವಂತೆ ಪ್ರತಿ ಪಕ್ಷಗಳಿಗೆ ಪತ್ರ ಬರೆದು ಆಹ್ವಾನಿಸಿದರು. ಬಿಜೆಪಿ, ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ಯಾರು ಸರ್ಕಾರ ರಚನೆ ಮಾಡದಿದ್ದಾಗ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆ ಶಿಫಾರಸ್ಸು ಮಾಡಿದ್ದಾರೆ. ಇವಾಗಲೂ ಸಹ ಯಾರ ಬಳಿ ಬಹುಮತವಿದ್ದರೆ ರಾಜ್ಯಪಾಲರನ್ನು ಸಂಪರ್ಕಿಸಿ ಸರ್ಕಾರ ರಚಿಸುವ ಅವಕಾಶಗಳಿವೆ ಎಂದು ಅಮಿತ್ ಶಾ ತಿಳಿಸಿದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ – 3 ಕಾರಣಗಳಿಂದಾಗಿ ರಾಜ್ಯಪಾಲರಿಂದ ಶಿಫಾರಸು

    ರಾಜ್ಯಪಾಲರು ಎಲ್ಲರಿಗೂ ಸಮಾನ ಅವಕಾಶ ನೀಡಿದ್ದಾರೆ. ವಿಪಕ್ಷಗಳು ಸರ್ಕಾರ ರಚಿಸುವದರಲ್ಲಿ ರಾಜಕೀಯ ಮಾಡುತ್ತಿದ್ದು, ಜನರಿಗೆ ತಪ್ಪು ಸಂದೇಶವನ್ನ ರವಾನಿಸುವ ಕೆಲಸ ಮಾಡುತ್ತಿವೆ. ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರುವ ಮೂಲಕ ರಾಜ್ಯಪಾಲರು ಸರ್ಕಾರ ರಚನೆ ಮಾಡುವವರಿಗೆ ಆರು ತಿಂಗಳ ಅವಕಾಶ ನೀಡಿದ್ದಾರೆ. ಸಂಖ್ಯೆ ತೋರಿಸಲು ಇವತ್ತು ಸಹ ಅವಕಾಶಗಳು ನಮ್ಮೆಲ್ಲರ ಮುಂದಿವೆ. ರಾಜ್ಯಪಾಲರು ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿಲ್ಲ ಎಂದು ಶಿವಸೇನೆ ಆರೋಪಕ್ಕೆ ತಿರುಗೇಟು ನೀಡಿದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಿದ್ಧ – ಶಿವಸೇನೆ ಹೇಳಿಕೆ ಹಿಂದಿದೆ ಮಹಾ ಪ್ಲ್ಯಾನ್

    ವಿಪಕ್ಷಗಳಿಗೆ ಸವಾಲು: ಸರ್ಕಾರ ರಚನೆಯ ಅವಕಾಶ ಕಿತ್ತುಕೊಂಡರು ಎಂದು ಹಿರಿಯ ವಕೀಲರಾಗಿರುವ ಕಪಿಲ್ ಸಿಬಲ್ ಮಕ್ಕಳ ರೀತಿಯಲ್ಲಿ ನ್ಯಾಯಾಲಯದ ಮುಂದೆ ವಾದ ಮಂಡಿಸುತ್ತಿದ್ದಾರೆ. ಇಲ್ಲಿ ಯಾರು ಯಾರ ಅವಕಾಶವನ್ನು ಕಿತ್ತುಕೊಂಡಿಲ್ಲ. ಎಲ್ಲರ ಬಳಿಯೂ ಸಮಯವಿದೆ, ಸಂಖ್ಯಾಬಲ ತೋರಿಸಿ ಸರ್ಕಾರ ರಚನೆ ಮಾಡಿ ಎಂದು ಸವಾಲು ಎಸೆದರು.  ಇದನ್ನೂ ಓದಿ: ನಾನು ಮಹಾರಾಷ್ಟ್ರ ಸಿಎಂ ಆಗುತ್ತೇನೆ – ರಾಜ್ಯಪಾಲರಿಗೆ ಪತ್ರ ಬರೆದ ರೈತ

    ಚುನಾವಣೆಯಲ್ಲಿ ನಾವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ನಮ್ಮ ಬಳಿ ಬಹುಮತವಿಲ್ಲ. ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡ ಪರಿಣಾಮ ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಬಿಜೆಪಿಯಿಂದ ಸ್ಪರ್ಧೆ ಮಾಡಿರಲಿಲ್ಲ. ಮೈತ್ರಿ ಪಕ್ಷವಾದ ಶಿವಸೇನೆ ಸ್ಪರ್ಧೆ ಮಾಡಿತ್ತು. ಸರ್ಕಾರ ರಚನೆಗೆ ಶಿವಸೇನೆ ಮುಂದಾಗಲಿಲ್ಲ ಎಂದು ಅಸಮಾಧಾನ ಹೊರ ಹಾಕಿದರು. ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ಆಗಿ ಎಂದ ಅಭಿಮಾನಿಯ ಮನವಿಗೆ ನಟ ಅನಿಲ್ ಪ್ರತಿಕ್ರಿಯೆ

    ಸಿಂಪಥಿಗಾಗಿ ಗಿಮಿಕ್: ನಾಲ್ಕು ಕೋಣೆಗಳ ಮಧ್ಯೆ ನಡೆದ ಪಕ್ಷದ ವಿಷಯಗಳನ್ನು ಬಹಿರಂಗವಾಗಿ ಹೇಳುವುದು ತಪ್ಪು. ಸರ್ಕಾರ ರಚನೆ ಮಾಡದೇ ಇದ್ದಿದರಿಂದ ಬಿಜೆಪಿಗೆ ನಷ್ಟವಾಗಿದೆಯೇ ಹೊರತು ಬೇರೆ ಯಾರಿಗೂ ಅಲ್ಲ. ಸರ್ಕಾರ ರಚಿಸಿದ್ದರೆ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರ ಮುಂದುವರಿಯುತ್ತಿತ್ತು. ಈ ರೀತಿ ಸರ್ಕಾರ ರಚನೆಯಿಂದ ದೂರ ಸರಿದು ಜನರ ಸಿಂಪಥಿಯನ್ನು ಪಡೆಯಲು ಪ್ಲಾನ್ ಮಾಡಲಾಗುತ್ತಿದೆ. ರಾಜ್ಯದ ಜನತೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ ಸರಿಯಾದ ಉತ್ತರ ನೀಡಲಿದ್ದಾರೆ ಎಂದರು. ಇದನ್ನೂ ಓದಿ: ರಾಷ್ಟ್ರಪತಿ ಆಡಳಿತಕ್ಕೆ ವಿರೋಧ – ಮೈತ್ರಿ ಬಗ್ಗೆ ತುಟಿ ಬಿಚ್ಚದ ಎನ್‍ಸಿಪಿ, ಕಾಂಗ್ರೆಸ್

    ಮೋಸ ಮಾಡಿಲ್ಲ: ಫಲಿತಾಂಶ ಬಂದ ಕೂಡಲೇ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿತ್ತು. ಆದರೆ ಮಿತ್ರಪಕ್ಷವಾದ ಶಿವಸೇನೆ ಹಾಕಿದ ಷರತ್ತುಗಳನ್ನು ಪಕ್ಷ ಒಪ್ಪಿಕೊಳ್ಳುವಂತಿರಲಿಲ್ಲ. ಚುನಾವಣೆ ಪ್ರಚಾರದ ಸಮಯದಲ್ಲಿ ನಾನು, ಪ್ರಧಾನ ಮಂತ್ರಿಗಳು ಸಹ ಮೈತ್ರಿಗೆ ಬಹುಮತ ಸಿಕ್ಕರೆ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಎಂದು ಹಲವು ಬಾರಿ ಹೇಳಿದ್ದೇವೆ. ಅಂದು ಯಾರು ಏನು ಹೇಳಲಿಲ್ಲ. ಫಲಿತಾಂಶ ಬಂದ ಬಳಿಕ ಹೊಸ ಷರತ್ತುಗಳು ಹಾಕಿದಾಗ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು. ಇದನ್ನೂ ಓದಿ:  ಶಿವಸೇನೆಗೆ ಸಂಕಷ್ಟ: 50-50 ಸರ್ಕಾರಕ್ಕೆ ಎನ್‍ಸಿಪಿ ಪಟ್ಟು, ಕಾಂಗ್ರೆಸ್‍ನಿಂದ ಭಾರೀ ಬೇಡಿಕೆ

    ರಾಜ್ಯಪಾಲರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ರಾಷ್ಟ್ರಪತಿ ಆಡಳಿತ ತಂದಿದ್ದಾರೆ ಎಂದು ಹೇಳುವ ಮೂಲಕ ವಿಪಕ್ಷಗಳು ಸಿಂಪಥಿ ಪಡೆಯಲು ಯತ್ನಿಸುತ್ತಿವೆ. ರಾಷ್ಟ್ರಪತಿ ಆಡಳಿತದ ಬಳಿಕ ಅಂದರೆ ಆರು ತಿಂಗಳ ನಂತರ ಮಧ್ಯಂತರ ಚುನಾವಣೆ ನಡೆಯಲಿ ಎಂಬುವುದು ನನ್ನ ಆಶಯವಲ್ಲ. ಈ ನಡುವೆ ಯಾರಾದರೂ ಮ್ಯಾಜಿಕ್ ನಂಬರ್ ತೋರಿಸಿ ಸರ್ಕಾರ ರಚನೆ ಮಾಡಲಿ. ಆರು ತಿಂಗಳ ನಂತರ ರಾಜ್ಯಪಾಲರು ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಸೋನಿಯಾ-ಪವಾರ್ ನಡುವಿನ ಒಂದು ಕಾಲ್‍ನಿಂದ ಶಿವಸೇನೆಗೆ ತಪ್ಪಿತು ಅಧಿಕಾರದ ಪಟ್ಟ