ನವದೆಹಲಿ: ನಷ್ಟದ ಸುಳಿಯಲ್ಲಿ ಸಿಲುಕಿರುವ ʼಮಹಾರಾಜʼನನ್ನು ಟಾಟಾ ಸನ್ಸ್ ಖರೀದಿಸಿದೆ. ʼಮಹಾರಾಜ’ ಲಾಂಛನದಿಂದ ಗುರುತಿಸಿಕೊಂಡಿರುವ ಏರ್ ಇಂಡಿಯಾ ಖಾಸಗೀಕರಣಗೊಳಿಸುವ ಬಿಡ್ ಅನ್ನು ಟಾಟಾ ಸನ್ಸ್ ಗೆದ್ದುಕೊಂಡಿದೆ.
ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತಾ, ಟಾಟಾ ಸಮೂಹ ಒಟ್ಟು 18 ಸಾವಿರ ಕೋಟಿ ರೂ. ಬಿಡ್ ಮಾಡಿತ್ತು. ಡಿ.10ರ ವೇಳೆ ಸಂಪೂರ್ಣವಾಗಿ ಏರ್ ಇಂಡಿಯಾವನ್ನು ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮೊದಲ ವರ್ಷ ಎಲ್ಲ ಉದ್ಯೋಗಿಗಳು ಏರ್ ಇಂಡಿಯಾದಲ್ಲಿ ಇರಲಿದ್ದಾರೆ. ಅವರನ್ನು ಯಾವುದೇ ಕಾರಣಕ್ಕೂ ತೆಗೆಯುವುದಿಲ್ಲ. ಒಂದು ವರ್ಷದ ನಂತರ ಟಾಟಾ ಸಮೂಹವು ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು ನೀಡಲು ಅವಕಾಶವನ್ನು ಹೊಂದಿರುತ್ತದೆ.
ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ತಿಳಿಸುತ್ತಿದ್ದಂತೆ ಟಾಟಾ ಕಂಪನಿಯ ಮುಖ್ಯಸ್ಥ ರತನ್ ಟಾಟಾ Welcome back ಏರ್ ಇಂಡಿಯಾ ಎಂದು ಬರೆದು ವಿಮಾನ ಮತ್ತು ಮನೆಯ ಇಮೋಜಿ ಹಾಕಿ ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಏರ್ ಇಂಡಿಯಾ ಖಾಸಗೀಕರಣಗೊಳಿಸುವ ಪ್ರಕ್ರಿಯೆಯ ಬಿಡ್‍ನಲ್ಲಿ ಕೊನೆಯಲ್ಲಿ ಅಜಯ್ ಸಿಂಗ್ ಅವರ ಸ್ಪೈಸ್ ಜೆಟ್ ಕಂಪನಿ ಮತ್ತು ಟಾಟಾ ಸನ್ಸ್ ಇತ್ತು. ಕೇಂದ್ರ ಸರ್ಕಾರ ಬಿಡ್‍ಗೆ 15-20 ಸಾವಿರ ಕೋಟಿ ರೂ. ಹಣವನ್ನು ಮೂಲ ಬೆಲೆಯಾಗಿ ಇಟ್ಟಿತ್ತು ಎಂದು ವರದಿಯಾಗಿತ್ತು. ಟಾಟಾ ಕಂಪನಿ ಸ್ಪೈಸ್ ಜೆಟ್‍ಗಿಂತಲೂ 5 ಸಾವಿರ ಕೋಟಿ ಹೆಚ್ಚು ಬಿಡ್ ಮಾಡಿತ್ತು ಎಂದು ವರದಿಯಾಗಿತ್ತು.
2007ರಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಲೀನದ ಬಳಿಕ ಏರ್ ಇಂಡಿಯಾ ನಷ್ಟವನ್ನು ಅನುಭವಿಸುತ್ತಿದ್ದು ಆಗಸ್ಟ್ 2021ರ ವೇಳೆಗೆ 61,562 ಕೋಟಿ ರೂ. ನಷ್ಟದಲ್ಲಿತ್ತು. ಏರ್ ಇಂಡಿಯಾ ಸೇವೆಯಿಂದ ಪ್ರತಿದಿನ ಕೇಂದ್ರ ಸರ್ಕಾರಕ್ಕೆ 20 ಕೋಟಿ ರೂ. ನಷ್ಟವಾಗುತ್ತಿದೆ. ಖರೀದಿಯ ಬಳಿಕ ಟಾಟಾಗೆ 4,400 ದೇಶೀಯ ಮತ್ತು 1,800 ಅಂತರಾಷ್ಟ್ರೀಯ ಲ್ಯಾಂಡಿಂಗ್ ಸಿಗಲಿದೆ.
2019ರ ಲೋಕಸಭಾ ಚುನಾವಣೆಗೂ ಮೊದಲೇ ಏರ್ ಇಂಡಿಯಾವನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿತ್ತು. ಆದರೆ ಏರ್ ಇಂಡಿಯಾ ಮಾರಾಟ ಮಾಡುವ ಕೇಂದ್ರ ಸರ್ಕಾರದ ಮೊದಲ ಪ್ರಯತ್ನ ವಿಫಲವಾಗಿತ್ತು. 2018ರಲ್ಲಿ ಕೇಂದ್ರ ಸರ್ಕಾರ ಬಿಡ್ ಆಹ್ವಾನಿಸಿತ್ತು. ಆದರೆ ಯಾರೂ ಖರೀದಿಗೆ ಆಸಕ್ತಿ ತೋರಿಸಲಿಲ್ಲ. ಈ ಸಂದರ್ಭದಲ್ಲಿ ಶೇ.76 ರಷ್ಟು ಪಾಲು ಮಾರಾಟ ಮಾಡುವುದರ ಜೊತೆಗೆ ಸಾಲವನ್ನು ಪಾವತಿಸಬೇಕೆಂಬ ಷರತ್ತು ವಿಧಿಸಲಾಗಿತ್ತು. ಇದನ್ನೂ ಓದಿ: ಕೆಜಿಎಫ್ 2 ಚಿತ್ರೀಕರಣದ ಫೋಟೋ ವೈರಲ್
ಎರಡನೇ ಬಾರಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ ಪ್ರೆಸ್ ಶೇ.100 ರಷ್ಟು ಖಾಸಗೀಕರಣಕ್ಕೆ ಮುಂದಾಗಿತ್ತು. ಈ ಮಧ್ಯೆ ಕೋವಿಡ್ ಕಾರಣದಿಂದ ಬಿಡ್ ಪ್ರಕ್ರಿಯೆ ವಿಳಂಬವಾಗಿತ್ತು. 2018ರ ಬಿಡ್ಡಿಂಗ್ ಪ್ರಕ್ರಿಯೆ ಸಮಯದಲ್ಲಿ ನಷ್ಟದಲ್ಲಿರುವ ಏರ್ ಇಂಡಿಯಾವನ್ನು ಖರೀದಿಸಿ ಲಾಭ ಆಗುತ್ತದೆ ಎಂಬ ನಿರೀಕ್ಷೆ ಇಲ್ಲ ಎಂದು ಇಂಡಿಗೋ ಹೇಳಿತ್ತು.
ವಿಶೇಷ ಏನೆಂದರೆ 89 ವರ್ಷದ ಹಿಂದೆ ಟಾಟಾ ಕಂಪನಿಯೇ ಏರ್ ಇಂಡಿಯಾ ಕಂಪನಿಯನ್ನು ಆರಂಭಿಸಿತ್ತು. 1932ರಲ್ಲಿ ಜೆ.ಆರ್.ಡಿ ಟಾಟಾ ಏರ್ ಇಂಡಿಯಾವನ್ನು ಸ್ಥಾಪಿಸಿದ್ದರು. 1932ರಲ್ಲಿ ಟಾಟಾ ಏರ್‌ಲೈನ್ಸ್ ಹೆಸರಿನಲ್ಲಿ ಆರಂಭಗೊಂಡ ಕಂಪನಿ ಬಳಿಕ 1946ರಲ್ಲಿ ಏರ್ ಇಂಡಿಯಾ ಕಂಪನಿಯಾಗಿ ಬದಲಾಗಿತ್ತು. ಸ್ವಾತಂತ್ರ್ಯ ಸಿಕ್ಕಿದ ಬಳಿಕ 1953ರಲ್ಲಿ ಏರ್ ಇಂಡಿಯಾವನ್ನು ರಾಷ್ಟ್ರೀಕರಣಗೊಳಿಸಲಾಗಿತ್ತು. ಈಗಾಗಲೇ ಭಾರತದಲ್ಲಿ ಟಾಟಾ ಸನ್ಸ್ ಮತ್ತು ಸಿಂಗಾಪುರ ಏರ್‌ಲೈನ್ಸ್ ಜೊತೆಯಾಗಿ ವಿಸ್ತಾರಾ ಏರ್ ಲೈನ್ಸ್ ಸೇವೆ ನೀಡುತ್ತಿದೆ.
ಬ್ಯಾಂಕಾಕ್: ಥೈಲ್ಯಾಂಡ್ ಮಹಾರಾಜ ವಜಿರಲೊಂಗ್ ಕಾರ್ನ್ ತಮ್ಮ ಅಂಗರಕ್ಷಕಿ ಯನ್ನೇ ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ.
66 ವರ್ಷದ ವಜಿರಲೊಂಗ್ ಕಾರ್ನ್ 40 ವರ್ಷದ ಸುಥಿದಾ ತಿಜಯ್‍ರನ್ನು ಮದುವೆಯಾಗಿದ್ದಾರೆ. ಈ ಬಗ್ಗೆ ರಾಜಭವನ ಅಧಿಕೃತವಾಗಿ ಮಾಹಿತಿಯನ್ನು ನೀಡಿದೆ. ಅಲ್ಲದೇ ಮದುವೆ ಸಂಬಂಧದ ವಿಡಿಯೋವನ್ನು ಬಿಡುಗಡೆ ಮಾಡಿದೆ.
ಥೈಲ್ಯಾಂಡ್ ರಾಜರಾಗಿ 70 ವರ್ಷ ಆಳ್ವಿಕೆ ನಡೆಸಿದ್ದ ವಜಿರಲೊಂಗ್ ಕಾರ್ನ್ ಅವರ ತಂದೆ 2016ರಲ್ಲಿ ಸಾವನ್ನಪ್ಪಿದ್ದರು. ಆ ಬಳಿಕ ಇವರನ್ನು ರಾಜರನ್ನಾಗಿ ಘೋಷಣೆ ಮಾಡಲಾಗಿತ್ತು. ಸದ್ಯ ಅಧಿಕೃತವಾಗಿ ವಜಿರಲೊಂಗ್ ಕಾರ್ನ್ ಅಧಿಕಾರ ವಹಿಸಿಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಮದುವೆಯಾಗಿದ್ದಾರೆ ಎನ್ನಲಾಗಿದೆ.
ವಜಿರಲೊಂಗ್ ಕಾರ್ನ್ ಅವರಿಗೆ ಈಗಾಗಲೇ 3 ಮದುವೆಯಾಗಿದ್ದು, 7 ಜನ ಮಕ್ಕಳಿದ್ದಾರೆ. ಆದರೆ ಮೂವರು ಪತ್ನಿಯರಿಗೂ ವಜಿರಲೊಂಗ್ ಕಾರ್ನ್ ಅವರಿಗೆ ವಿಚ್ಛೇದನ ನೀಡಿದ್ದು, 4ನೇ ಪತ್ನಿಯಾಗಿ ಅಂಗರಕ್ಷಕಿಯನ್ನು ಮದುವೆಯಾಗಿದ್ದಾರೆ.
2014 ರಲ್ಲಿ ಸುಥಿದಾ ಅವರು ರಾಜರ ಭದ್ರತಾ ಕಾರ್ಯಕ್ಕೆ ಅಧಿಕಾರಿಯಾಗಿ ಆಯ್ಕೆ ಆಗಿದ್ದರು. ಆ ಬಳಿಕ ಹಲವು ಭಾರೀ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರೂ ಈ ಬಗ್ಗೆ ಎಲ್ಲಿಯೂ ಮಾಹಿತಿ ಬಹಿರಂಗವಾಗಿರಲಿಲ್ಲ. ಉಳಿದಂತೆ ಶನಿವಾರ ಬ್ಯಾಂಕಾಕ್ ನಲ್ಲಿ ಬೌದ್ಧ, ಬ್ರಾಹ್ಮಣ ಸಂಪ್ರದಾಯದ ಅನ್ವಯ ವಜಿರಲೊಂಗ್ ಕಾರ್ನ್ ಕಿಂಗ್ ರಾಮಘಿ ಹೆಸರಿನಲ್ಲಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಬಳಿಕ ಅವರನ್ನು ರಾಜನಾಗಿ ಬೃಹತ್ ಮೆರವಣಿಗೆ ಮಾಡಲಾಗುತ್ತದೆ.
ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಕಳೆದ 5 ದಿನಗಳಿಂದ ಕಾಡ್ಗಿಚ್ಚು ಸಂಭಿಸಿದ್ದು, ಈ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನಟರಾದ ದರ್ಶನ್ , ಪುನೀತ್ ಮನವಿಯ ಬೆನ್ನಲ್ಲೇ ಇದೀಗ ಮೈಸೂರು ಮಹಾರಾಜ ಯದುವೀರ್ ಒಡೆಯರ್ ಕೂಡ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಯದುವೀರ್, ದಯವಿಟ್ಟು ಈ ಬಗ್ಗೆ ಸುದ್ದಿ ಹರಡಿ ನಮ್ಮ ಕಾಡನ್ನು ರಕ್ಷಿಸಲು ಅರಣ್ಯ ಇಲಾಖೆಗೆ ಸಹಾಯ ಮಾಡೋಣ ಎಂದು ಜನರಲ್ಲಿ ಕೇಳಿಕೊಂಡಿದ್ದಾರೆ.
ಮನವಿಯೇನು..?
ಸ್ನೇಹಿತರೇ, ಬಂಡೀಪುರ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಸಂಭವಿಸಿರುವ ಕಾಡ್ಗಿಚ್ಚಿನ ಸುದ್ದಿ ತಿಳಿಯಲು ಬಹಳ ನೋವಾಗಿದೆ. ಅಂದಾಜು ಸುಮಾರು 20,000 ಎಕರೆ ಅರಣ್ಯಪ್ರದೇಶದ ಪ್ರಾಣಿಸಂಕುಲ ಹಾಗು ಸಸ್ಯಸಂಕುಲಕ್ಕೆ ಅಪಾರ ಹಾನಿ ಉಂಟಾಗಿದೆ. ನಮ್ಮ ಪರಿಸರ ಪರಂಪರೆಗೆ ಸಂಭವಿಸಿರುವ ಈ ನಷ್ಟವು ಬಹಳ ದುಃಖಕರ ಸಂಗತಿಯಾಗಿದೆ. ಇದನ್ನೂ ಓದಿ: ದರ್ಶನ್ ನಂತ್ರ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಲ್ಲಿ ಮನವಿ
ಅರಣ್ಯ ಇಲಾಖೆಯವರಿಗೆ ಸ್ವಯಂಸೇವಕರು ಬೇಕಾಗಿದ್ದಾರೆ ಹಾಗು ಸಾರ್ವಜನಿಕರಿಂದ ಸಹಾಯ ಕೋರಿದ್ದಾರೆ. ಬಂಡೀಪುರ ಪ್ರವೇಶದ ಚೆಕ್ ಪೋಸ್ಟ್ ಕಚೇರಿಯಲ್ಲಿ ನೀವು ನೀರಿನ ಬಾಟಲಿಗಳು, ಗ್ಲುಕೋಸ್, ಔಷಧ, (ವಿಶೇಷವಾಗಿ ಸುಟ್ಟ ಗಾಯಗಳ ಔಷಧ), ಇತರೆ ಅಗ್ನಿಶಾಮಕ ಅಗತ್ಯತೆಗಳು, ಆಹಾರ ಮತ್ತು ಇತರೆ ಸರಬರಾಜುಗಳನ್ನು ನೀಡಬಹುದಾಗಿದೆ.
ಕಳೆದ 5 ದಿನಗಳಿಂದ ಬಂಡೀಪುರ ಅಭಯಾರಣ್ಯದಲ್ಲಿ ಪದೇ ಪದೇ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು, ಅಗ್ನಿಶಾಮಕ ಇಲಾಖೆ ಸೇರಿದಂತೆ ಹಲವು ಸ್ವಯಂ ಸೇವಕರು ಈಗಾಗಲೇ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಸತತ ಪ್ರಯತ್ನ ನಡುವೆಯೂ ಬೆಂಕಿ ನರ್ತನ ಮುಂದುವರಿದಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೊಲ, ಕೋತಿ, ಜಿಂಕೆ, ಹಾವು ಸೇರಿದಂತೆ ಇತರೆ ಪ್ರಾಣಿಗಳು ಸಜೀವ ದಹನವಾಗಿವೆ. ಬೆಳಗ್ಗಿನ ಜಾವ ಬೆಂಕಿ ನಿಯಂತ್ರಣಕ್ಕೆ ಬರುತ್ತಿದ್ದು, ಮಧ್ಯಾಹ್ನದ ವೇಳೆ ಭೀಕರತೆಗೆ ತಿರುಗುತ್ತದೆ.
ಬೆಳಗ್ಗಿನ ಜಾವ ಮಂಜು ಬೀಳುತ್ತಿರುವ ಕಾರಣ ಬೆಂಕಿ ಹತೋಟಿಗೆ ಬರುತ್ತದೆ. ಸದ್ಯ ಬೆಂಕಿ ಹತೋಟಿಗೆ ಬಂದು ನಿಯಂತ್ರಣ ಕಾಣುತ್ತಿರುವ ಬಂಡಿಪುರದಲ್ಲಿ ಬಿಸಿಲು ಮತ್ತು ಗಾಳಿ ಹೆಚ್ಚಾದ್ರೆ ಮತ್ತೆ ಬೆಂಕಿ ಹರಡುವ ಸಾಧ್ಯತೆಗಳಿವೆ. ನಿನ್ನೆಯೂ ಕೂಡ ಬೆಳಗಿನ ಜಾವ ಬೆಂಕಿ ಸಂಪೂರ್ಣ ಹತೋಟಿಗೆ ಬಂದಿತ್ತು. ಆದ್ರೆ ಮಧ್ಯಾಹ್ನ ವೇಳೆ ಮತ್ತೆ ರೌದ್ರವಾತಾರ ತಾಳಿತ್ತು. ಇದು ಹೀಗೆ ಮುಂದುವರಿದ್ರೆ ಕೇರಳ ಗಡಿ ವ್ಯಾಪಿಸುವ ಸಾಧ್ಯತೆಗಳಿವೆ.
ದಾವಣಗೆರೆ: ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಒಡೆಯರ್ ಅವರು ಗುರುವಾರ ದಾವಣಗೆರೆ ಬೆಣ್ಣೆ ರುಚಿ ಸವಿದಿದ್ದಾರೆ.
ದಾವಣಗೆರೆ ಎಂದಾಕ್ಷಣ ಮೊದಲು ನೆನಪಿಗೆ ಬರೋದು ಬೆಣ್ಣೆದೋಸೆ. ಹೀಗಾಗಿ ನಗರಕ್ಕೆ ಭೇಟಿ ನೀಡಿದ ಮಹಾರಾಜರು ವಿದ್ಯಾನಗರ ರಸ್ತೆಯ ಡೆಂಟಲ್ ಕಾಲೇಜ್ ಮುಂಭಾಗದ ಗುರುಕೊಟ್ಟುರೇಶ್ವರ ಹೋಟೆಲ್‍ನಲ್ಲಿ ಆಪ್ತರೊಂದಿಗೆ ಬೆಣ್ಣೆ ದೋಸೆ ಸೇವಿಸಿದರು. ಬಳಿಕ ಮಹಾರಾಜರ ಜೊತೆ ಸಾರ್ವಜನಿಕರು, ಪೊಲೀಸರು ಫೋಟೋ ಕ್ಲಿಕ್ಕಿಸಿಕೊಂಡರು.
ಯದುವೀರ್ ಅವರು ಭಾನುವಾರ ಐತಿಹಾಸಿಕ ಹಂಪಿಗೆ ಭೇಟಿ ನೀಡಿ ಪ್ರಸಿದ್ಧ ಸ್ಮಾರಕಗಳನ್ನು ವೀಕ್ಷಣೆ ಮಾಡಿದ್ದರು. ಕಮಲಾಪುರ ಹಾಗೂ ತಳವಾರಘಟ್ಟ ರಸ್ತೆ ಮೂಲಕ ಆಗಮಿಸಿದ ಯದುವೀರ್ ಗೆಜ್ಜಲ ಮಂಟಪ, ಕುದುರೆ ಗೊಂಬೆ ಮಂಟಪ, ವಿಠಲ ಬಜಾರ್, ಪುಷ್ಕರಣಿ, ಪ್ರಸಿದ್ಧ ವಿಜಯವಿಠಲ ದೇವಸ್ಥಾನದಲ್ಲಿ ಕಲ್ಲಿನ ರಥ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಒಡೆಯರ್ ಅವರನ್ನು ನೋಡಿ ಪ್ರವಾಸಿಗರು ಅವರ ಜೊತೆ ಫೋಟೋ, ಸೆಲ್ಫಿ ತಗೆದುಕೊಂಡಿದ್ದರು.
ಹಂಪಿ ಪ್ರವಾಸದ ಬಳಿಕ ಯದುವೀರ್ ಒಡೆಯರ್ ಅವರು ಇಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪೌರಾಣಿಕ ಹಾಗೂ ಐತಿಹಾಸಿಕ ಅಂಜನಾದ್ರಿಯ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಆಂಜನೇಯ ಸ್ವಾಮಿ ದರ್ಶನ ಪಡೆದು, ಪೂಜೆ ಸಲ್ಲಿಸಿದ್ದರು. ಕೊಪ್ಪಳದಿಂದ ಮೈಸೂರಿಗೆ ಹಿಂತಿರುಗುವ ಮಾರ್ಗಮಧ್ಯೆ ದಾವಣಗೆರೆಗೆ ಆಗಮಿಸಿದ್ದರು.
ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿಯ ಸ್ಮಾರಕಗಳನ್ನು ಧ್ವಂಸಗೊಳಿಸಿರುವುದನ್ನು ಖಂಡಿಸಿ ಹಂಪಿಯಲ್ಲಿಂದು ವಿಜಯನಗರ ಹಾಗೂ ಮೈಸೂರು ಮಹಾರಾಜರು ಪ್ರತಿಭಟನೆ ನಡೆಸಿದ್ದಾರೆ.
ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ ಮೈಸೂರಿನ ಯುವರಾಜ ಯದುವೀರ್ ಹಾಗೂ ವಿಜಯನಗರದ ಕೃಷ್ಣದೇವರಾಜರು ಪ್ರತಿಭಟನೆಯಲ್ಲಿ ಭಾಗವಹಿಸಿ ಸ್ಮಾರಕ ಧ್ವಂಸಗೊಳಿಸಿರುವುದನ್ನು ಖಂಡಿಸಿದ್ದಾರೆ. ಕಮಲಾಪುರದ ಪುರಾತತ್ವ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಮಹಾರಾಜರು ಹಾಗೂ ನೂರಾರು ಸ್ಥಳೀಯರು, ಹಂಪಿಯಲ್ಲಿ ಸ್ಮಾರಕಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಮೈಸೂರಿನ ಯುವರಾಜ ಯದುವೀರ್ ಅವರು ಹಂಪಿಯನ್ನು ಉಳಿಸುವ ಕೆಲಸವನ್ನು ನಾವೆಲ್ಲ ಮಾಡಬೇಕಾಗಿದೆ. ಪುರಾತತ್ವ ಇಲಾಖೆ ಈ ಬಗ್ಗೆ ಇನ್ನಷ್ಟು ಕಾರ್ಯಪ್ರವೃತ್ತರಾಗಬೇಕು, ನಮ್ಮ ಮೈಸೂರಿನಲ್ಲಿಯೂ ಸ್ಮಾರಕಗಳಿಗೆ ಧಕ್ಕೆಯಾಗುತ್ತಿವೆ. ಸ್ಮಾರಕಗಳನ್ನು ಉಳಿಸಲು ಜನರ ಸಹಭಾಗಿತ್ವ ಪ್ರಮುಖವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕಿಡಿಗೇಡಿಗಳ ಅಟ್ಟಹಾಸ – ಹಂಪಿಯ ಐತಿಹಾಸಿಕ ಸ್ಮಾರಕಗಳನ್ನ ಕೆಡವಿದ ವಿಡಿಯೋ ವೈರಲ್..!
ಯದುವೀರ್ ಅವರು ಭಾನುವಾರ ಐತಿಹಾಸಿಕ ಹಂಪಿಗೆ ಭೇಟಿ ನೀಡಿ ಪ್ರಸಿದ್ಧ ಸ್ಮಾರಕಗಳನ್ನು ವೀಕ್ಷಣೆ ಮಾಡಿದ್ದರು. ಕಮಲಾಪುರ ಹಾಗೂ ತಳವಾರಘಟ್ಟ ರಸ್ತೆ ಮೂಲಕ ಆಗಮಿಸಿದ ಯದುವೀರ್ ಗೆಜ್ಜಲ ಮಂಟಪ, ಕುದುರೆ ಗೊಂಬೆ ಮಂಟಪ, ವಿಠಲ ಬಜಾರ್, ಪುಷ್ಕರಣಿ, ಪ್ರಸಿದ್ಧ ವಿಜಯವಿಠಲ ದೇವಸ್ಥಾನದಲ್ಲಿ ಕಲ್ಲಿನ ರಥ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಒಡೆಯರ್ ನೋಡಿ ಪ್ರವಾಸಿಗರು ಅವರ ಜೊತೆ ಫೋಟೋ, ಸೆಲ್ಫಿ ತಗೆದುಕೊಂಡಿದ್ದಾರೆ. ಇದನ್ನೂ ಓದಿ:ಕಿಡಿಗೇಡಿಗಳಿಂದ ಸ್ಮಾರಕ ಧ್ವಂಸ – ಎಸ್‍ಪಿಯಿಂದ ಸ್ಥಳ ಪರಿಶೀಲನೆ
ಇದಾದ ಬಳಿಕ ಯದುವೀರ್ ಅವರು ಸಂಗೀತ ಮಂಟಪಕ್ಕೆ ತೆರಳಿ, ಸಪ್ತಸ್ವರ ಕಂಬಗಳಿಂದ ನಾದ ಆಲಿಸಿ ಖುಷಿಪಟ್ಟರು. ನಂತರ ತುಂಗಭದ್ರಾ ನದಿ ತೀರದಲ್ಲಿರುವ ಪುರಂದರ ಮಂಟಪ ವೀಕ್ಷಣೆ ಮಾಡಿದ್ದಾರೆ. ಯದುವೀರ್ ಅವರ ಜೊತೆ ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಸಿ.ಎಸ್.ವಾಸುದೇವನ್ ಮತ್ತಿತರರು ಇದ್ದರು. ಯದುವೀರ್ ಅವರು ಹಂಪಿಗೆ ಆಗಾಗ ಭೇಟಿ ನೀಡುತ್ತಾರೆ. ಈ ಬಾರಿಯೂ ಹಂಪಿ ಪ್ರಸಿದ್ಧ ಸ್ಮಾರಕ ಸೇರಿದಂತೆ ಪ್ರಕೃತಿ ಸೊಬಗನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಮೈಸೂರು: ತಮ್ಮ ಮನಸಿನ ಮಾತನ್ನು ಹಂಚಿಕೊಂಡು ಜನರ ಜೊತೆ ಬೆರೆಯಲು ಮೈಸೂರಿನ ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ‘ಭೇರುಂಡ’ ಎಂಬ ಹೆಸರಿನ ಬ್ಲಾಗ್ ಆರಂಭಿಸಿದ್ದಾರೆ.
ಇಷ್ಟು ದಿನ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಫೋಟೋಗಳನ್ನು ಅಪ್ಲೋಡ್ ಮಾಡಿ ಜನರ ಜೊತೆ ಸಂಪರ್ಕದಲ್ಲಿದ್ದ ಮಹಾರಾಜರು ಈಗ ತಮ್ಮ ಬರವಣಿಗೆಯ ಮೂಲಕ ಜನರ ಜೊತೆ ಬೆರೆಯಲು ಮುಂದಾಗಿದ್ದು ವೆಬ್‍ಸೈಟ್‍ನಲ್ಲಿ ಬ್ಲಾಗ್ ಆರಂಭಿಸಿ ಇವತ್ತು ಮೊದಲ ಸುದ್ದಿಪತ್ರವನ್ನು ಪ್ರಕಟಿಸಿದ್ದಾರೆ.
ದಸರಾ ವಿಶೇಷಾಂಕದ ಸುದ್ದಿಪತ್ರ ಬಿಡುಗಡೆ ಮಾಡಿದ ಮಹಾರಾಜರು, ಇದು ಉದ್ಘಾಟನೆಯ ಸುದ್ದಿ ಪತ್ರ ಎಂದು ಬ್ಲಾಗ್ ನಲ್ಲಿ ಹೇಳಿದ್ದಾರೆ. ಉದ್ಘಾಟನಾ ಪತ್ರದ ಹೆಸರಿನಲ್ಲಿ ಮೊದಲ ಪತ್ರ ಒಂದನ್ನು ಬರೆದಿದ್ದಾರೆ. ಈ ಪತ್ರ ನಿಮಗೆಲ್ಲ ನಮ್ಮ ಪ್ರಾಥಮಿಕ ಮಾಹಿತಿ ನೀಡಲಿದೆ. ರಾಜಮನೆತನದ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ತಿಳಿಸಲಿದೆ. ಈ ಬ್ಲಾಗ್ ಮೂಲಕ ನಮ್ಮ ಕಾರ್ಯಕ್ರಮಗಳು ನಿಮಗೆ ತಿಳಿಯಲಿದೆ ಎಂದು ಬರೆದಿದ್ದಾರೆ.
ರಾಜಮನೆತನದ ಕಾರ್ಯಕ್ರಮಗಳಲ್ಲಿ ಈ ಸೇವೆಯು ಒಂದು ಭಾಗ. ನಾವು ನೀವು ಪರಸ್ಪರ ಅರ್ಥ ಮಾಡಿಕೊಳ್ಳಲು ಈ ಪತ್ರ ನಾಂದಿಯಾಗಲಿದೆ. ನನಗೆ ಬರವಣಿಗೆ ಇಷ್ಟವಾಗಿದ್ದರಿಂದ ನನ್ನ ಆಲೋಚನೆಗಳನ್ನು ಈ ಮೂಲಕ ಹಂಚಿಕೊಳ್ಳಲಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಮೈಸೂರು: ಬಿಜೆಪಿ ಯುವ ಮೋರ್ಚಾದಿಂದ ಮಂಗಳೂರು ಚಲೋ ಪ್ರತಿಭಟನೆಯಲ್ಲಿ ಭಾಗಿ ಆಗುವವರಿಗೆ ಸ್ಥಳಾವಕಾಶ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಬೆದರಿಕೆ ತಂತ್ರಗಳಿಗೆ ನಾವು ಹೆದರೋದಿಲ್ಲ. ನೀವು ಕಲ್ಯಾಣ ಮಂಟಪದ ಮಾಲೀಕರಿಗೆ ಬೆದರಿಕೆ ಪತ್ರ ನೀಡಿ ಏನೂ ಮಾಡೋಕಾಗಲ್ಲ. ನಾವು ನಮ್ಮ ಕಾರ್ಯಕರ್ತರ ಮನೆಯಲ್ಲಿ ಪ್ರತಿಭಟನಾಕಾರರನ್ನು ಉಳಿಸುತ್ತೆವೆ. ಪ್ರಜಾ ತಾಂತ್ರಿಕವಾಗಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕು ಇದೆ. ನೀವು ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದಾಗ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿರಲಿಲ್ಲವೇ? ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿದ್ದೀರಾ ಅಂತ ಕಿಡಿಕಾರಿದ್ದಾರೆ.
ಹಿಂದೂ ಮುಖಂಡರುಗಳ ಕೊಲೆಗೆ ಕಾರಣವಾದ ಕೆಎಫ್ ಡಿ ಹಾಗೂ ಪಿಎಫ್‍ಐ ಸಂಘಟನೆಗಳನ್ನು ನಿಷೇಧ ಮಾಡಿ. ಕಾನೂನು ರೀತಿಯಲ್ಲಿ ನೀವೇ ಆ ಸಂಘಟನೆಗಳನ್ನು ನಿಷೇಧ ಮಾಡಿದ್ದರೆ ನಾವು ಬೈಕ್ ಜಾಥಾವನ್ನು ಮಾಡುತ್ತಿರಲಿಲ್ಲ. ಕೆಎಫ್ ಡಿ, ಪಿಎಫ್‍ಐ ಸಂಘಟನೆಗಳ ಮೇಲೆ ಯಾಕೆ ನಿಮಗೆ ಅಷ್ಟೊಂದು ಪ್ರೀತಿ. ಕಾನೂನು ಸುವ್ಯವಸ್ಥೆಯನ್ನು ಹಿಂದೂ ಮುಖಂಡರು ಆರ್ ಎಸ್‍ಎಸ್ ನವರು ಮಾತ್ರ ಹಾಳು ಮಾಡುತ್ತಾರೆ. ನಿಮ್ಮ ಯಾವುದೇ ಬೆದರಿಕೆಗಳಿಗೆ ನಾವು ಜಗ್ಗಲ್ಲ. ನಮ್ಮ ಹೋರಾಟ ಮುಂದುವರಿಯುತ್ತದೆ ಅಂತ ಸ್ಪಷ್ಟಪಡಿಸಿದ್ರು.
ಸಿಎಂ ಏಕವಚನಕ್ಕೆ ಪ್ರತಾಪ್ ಸಿಂಹ ಕಿಡಿ:
ಮೈಸೂರು ಮಹಾರಾಜರ ಕುರಿತು ಸಿಎಂ ಸಿದ್ದರಾಮಯ್ಯ ಹಗುರವಾಗಿ ಹೇಳಿಕೆ ನೀಡಿದ್ದರ ಬಗ್ಗೆ ಶನಿವಾರ ಮೈಸೂರು ಸಂಸದ ಪ್ರತಾಪ್ ಸಿಂಹ ಕಟುವಾಗಿ ತಿರುಗೇಟು ನೀಡಿದ್ದಾರೆ. ಮಹಾರಾಜರನ್ನು ಏಕವಚನದಲ್ಲಿ ಸಂಬೋಧಿಸಿದ್ದು ನಿಮ್ಮ ನೀಚ ಬುದ್ಧಿಯನ್ನು ತೋರುತ್ತದೆ. ಮಹಾರಾಜ ಜನರ ದುಡ್ಡಲ್ಲಿ ಮಾರ್ಕೆಟ್ ಕಟ್ಟಿದ್ದ ಎಂದು ಪ್ರಶ್ನೆ ಮಾಡುವ ನೀವು ಮೊದಲು ನಿಮ್ಮನ್ನ ನೀವೇ ಆತ್ಮಾವಲೋಕನ ಮಾಡಿಕೊಳ್ಳಿ. ಇಂದಿರಾ ಕ್ಯಾಂಟೀನ್ ಗೆ ಇಂದಿರಾಗಾಂಧಿ ಕುಟುಂಬ ದುಡ್ಡು ಕೊಟ್ಟಿದ್ದಾರಾ? ಅಕ್ಕಿ ಹಾಗೂ ಉಪ್ಪಿನ ಪ್ಯಾಕ್ ಮೇಲೆ ನಿಮ್ಮ ಫೋಟೋ ಹಾಕಿಕೊಳ್ಳಲು ಅದಕ್ಕೆ ನಿಮ್ಮ ಸ್ವಂತ ದುಡ್ಡು ಕೊಟ್ಟಿದ್ದೀರಾ? ಮಹಾರಾಜರು ಕಟ್ಟಿಸಿದ ಯೂನಿವರ್ಸಿಟಿಯಲ್ಲಿ ಪದವಿ ಪಡೆದ ನಿಮಗೆ ಅವರ ಬಗ್ಗೆ ಕನಿಷ್ಠ ಕೃತಜ್ಞತೆಯ ಇಲ್ಲವೇ ಅಂತ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ರು.
ಮಹಾರಾಜರನ್ನು ಏಕವಚನದಲ್ಲಿ ಸಂಬೋಧಿಸಿದ ನಿಮಗೆ ಅವರು ನಿರ್ಮಿಸಿದ ರಸ್ತೆಗಳಿಗೆ ಡಾಂಬರ್ ಹಾಕುವ ಶಕ್ತಿ ಇಲ್ಲ ಅಂತ ಟೀಕಿಸಿದ್ರು. ನಿಮಗೆ ಮೈಸೂರು ರಾಜಮನೆತನದ ಕುಟುಂಬದ ಬಗ್ಗೆ ಗೌರವ ಇಲ್ಲ ಅಂತ ನಮಗೆ ಎಂದೋ ತಿಳಿದಿದೆ. ಮಹಾರಾಜರ ಪತನಕ್ಕೆ ಕಾರಣವಾದ ಟಿಪ್ಪು ಜಯಂತಿ ಆಚರಿಸುವ ನಿಮ್ಮ ಬುದ್ಧಿ ಏನೆಂದು ನಮಗೆ ಗೊತ್ತಿದೆ. ಬೇರೆಯವರನ್ನು ಪ್ರಶ್ನೆ ಮಾಡುವ ಮುನ್ನ ನಿಮ್ಮನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.