Tag: ಮಹಾರಥೋತ್ಸವ

  • ಮಂತ್ರಾಲಯದಲ್ಲಿ ಗುರುರಾಯರ ಆರಾಧನಾ ಸಂಭ್ರಮ

    ಮಂತ್ರಾಲಯದಲ್ಲಿ ಗುರುರಾಯರ ಆರಾಧನಾ ಸಂಭ್ರಮ

    ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ ಸಂಭ್ರಮ ಮನೆಮಾಡಿದೆ. ಸಪ್ತರಾತ್ರೋತ್ಸವ ಹಿನ್ನೆಲೆ ಸಂಜೆಯಿಂದ ಮಠದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

    ನಾಳೆ ರಾಯರ ಪೂರ್ವಾರಾಧನೆ ನಡೆಯಲಿದೆ. ರಾಯರು ಸಶರೀರವಾಗಿ ವೃಂದಾವಸ್ಥರಾಗಿ 350 ವರ್ಷಗಳಾಗುತ್ತದೆ. ಈ ಹಿನ್ನೆಲೆ ಮಠದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ. ನಿರ್ಮಾಲ್ಯ ವಿಸರ್ಜನೆ, ಉತ್ಸವ,ರಾಯರ ಪಾದಪೂಜೆ, ಪಂಚಾಮೃತ ಅಭಿಷೇಕ, ರಜತ ಸಿಂಹವಾಹನೋತ್ಸವ ನಡೆಯಲಿದೆ. ಇದನ್ನೂ ಓದಿ: ಮೋದಿ ಭೇಟಿಗಾಗಿ ಕಾಲ್ನಡಿಗೆ ಯಾತ್ರೆ ಕೈಗೊಂಡ ಕಾಶ್ಮೀರ ಯುವಕ

    ಸಂಜೆ ಮಠದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಆಗಸ್ಟ್ 24 ರಂದು ಮಧ್ಯಾರಾಧನೆ ನಡೆಯಲಿದೆ. ತಿರುಮಲ ತಿರುಪತಿ ದೇವಾಲಯದಿಂದ ರಾಯರಿಗೆ ಪ್ರತೀ ವರ್ಷದಂತೆ ಶೇಷವಸ್ತ್ರ ಸಮರ್ಪಣೆ ನಡೆಯಲಿದೆ. ಆಗಸ್ಟ್ 25 ರಂದು ಮಹಾರಥೋತ್ಸವ ನಡೆಯಲಿದೆ. ವಿವಿಧ ರಾಜ್ಯಗಳಿಂದ ಭಕ್ತರು ದಂಡು ಮಂತ್ರಾಲಯಕ್ಕೆ ಹರಿದು ಬಂದಿದೆ.

  • ವಿಜೃಂಭಣೆಯಿಂದ ನಡೆದ ಐತಿಹಾಸಿಕ ಬೂದಿಬಸವೇಶ್ವರ ಮಹಾರಥೋತ್ಸವ

    ವಿಜೃಂಭಣೆಯಿಂದ ನಡೆದ ಐತಿಹಾಸಿಕ ಬೂದಿಬಸವೇಶ್ವರ ಮಹಾರಥೋತ್ಸವ

    ರಾಯಚೂರು: ದೇವದುರ್ಗದ ಗಬ್ಬೂರಿನ ಐತಿಹಾಸಿಕ ಬೂದಿ ಬಸವೇಶ್ವರ ಜಾತ್ರೆಯು ವೈಭವದಿಂದ ನಡೆಯಿತು. ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಜಾತ್ರೆಯ ಅದ್ಧೂರಿತನಕ್ಕೆ ಸಾಕ್ಷಿಯಾದರು.

    ಇಲ್ಲಿನ ಬೂದಿಬಸವೇಶ್ವರ ಮಠದ ಸ್ವಾಮೀಜಿ ರಥವನ್ನು ಬಾ ಬಸವ ಎಂದು ಕರೆದಾಗ ತಾನಾಗೇ ರಥ ಮುಂದೆ ಸಾಗುತ್ತದೆ ಎನ್ನುವ ಪ್ರತೀತಿಯಿದ್ದು ಈಗಲೂ ಮುಂದುವರಿದಿದೆ. ಸಂಜೆಯ ವೇಳೆಗೆ ರಥದ ಮೇಲೆ ನಕ್ಷತ್ರ ಕಂಡ ತಕ್ಷಣವೇ ರಥವನ್ನು ಎಳೆಯಲಾಯಿತು. ಲಕ್ಷಾಂತರ ಜನರು ರಥವನ್ನು ಎಳೆದು ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

    ಬೂದಿ ಬಸವೇಶ್ವರ ದೇವರಲ್ಲಿ ಬೇಡಿಕೊಂಡರೆ ಭಕ್ತರ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆಯ ಇದೆ. ಹೀಗಾಗೇ ಬೂದಿ ಬಸವೇಶ್ವರರಿಗೆ ಹೈದರಾಬಾದ್ ನಿಜಾಂ 100 ಎಕರೆ ಭೂಮಿಯನ್ನು ಧಾನವಾಗಿ ನೀಡಿದ್ದರು ಎನ್ನುವ ಇತಿಹಾಸವು ಇದೆ. ಜಿಲ್ಲೆ ಮಾತ್ರವಲ್ಲದೆ ಜಾತ್ರೆಗೆ ವಿವಿಧೆಡೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿ ಭಕ್ತರು ಪುನೀತರಾದರು.

    ಮಹಾಭಾರತದಲ್ಲಿ ಬಬ್ರುವಾಹನ ಆಸ್ಥಾನವಾಗಿದ್ದ ಮಣಿಪುರವೇ ಈಗಿನ ಗಬ್ಬೂರು ಅನ್ನೋ ಪೌರಾಣಿಕ ಹಿನ್ನೆಲೆ ಹೊಂದಿರುವ ಗಬ್ಬೂರಿನ ಜಾತ್ರೆ ಈ ಭಾಗದ ಅತ್ಯಂತ ವಿಶಿಷ್ಟ ಜಾತ್ರೆಗಳಲ್ಲೊಂದಾಗಿದೆ. ಐತಿಹಾಸಿಕ ದೇವಾಲಯಗಳನ್ನ ಹೊಂದಿರುವ ಗಬ್ಬೂರು ಹಲವಾರು ವೈಶಿಷ್ಟತೆಗಳಿಂದ ಭಕ್ತರನ್ನು ಆಕರ್ಷಿಸುತ್ತಿರುವ ಪುಣ್ಯ ಕ್ಷೇತ್ರವಾಗಿದೆ.