Tag: ಮಹಾಭಿಯೋಗ

  • ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆ| ಸಂಸತ್‌ನಲ್ಲಿ ಮಹಾಭಿಯೋಗಕ್ಕೆ ತಯಾರಿ – ಸುಪ್ರೀಂ ಮೆಟ್ಟಿಲೇರಿದ ನ್ಯಾ.ಯಶವಂತ್ ವರ್ಮಾ

    ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆ| ಸಂಸತ್‌ನಲ್ಲಿ ಮಹಾಭಿಯೋಗಕ್ಕೆ ತಯಾರಿ – ಸುಪ್ರೀಂ ಮೆಟ್ಟಿಲೇರಿದ ನ್ಯಾ.ಯಶವಂತ್ ವರ್ಮಾ

    ನವದೆಹಲಿ: ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಪತ್ತೆಯಾದ ಕಂತೆ ಕಂತೆ ನೋಟು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ (Allahabad High Court) ನ್ಯಾಯಾಧೀಶ ನ್ಯಾ.ಯಶವಂತ್ ವರ್ಮಾ (Yashwant Varma) ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧದ ಆಂತರಿಕ ಸಮಿತಿ ನೀಡಿದ ವರದಿಯನ್ನು ಅವರು ಪ್ರಶ್ನಿಸಿದ್ದಾರೆ.

    ನ್ಯಾಯಮೂರ್ತಿ ವರ್ಮಾ ಅವರನ್ನು ಅಧಿಕಾರದಿಂದ ತೆಗೆದುಹಾಕಲು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಹಾಭಿಯೋಗ (Impeachment – ಸರ್ಕಾರಿ ಸೇವೆಯಲ್ಲಿರುವ ವ್ಯಕ್ತಿಯ ಮೇಲೆ ಗಂಭೀರ ಆರೋಪ ಬಂದಾಗ ಅವರನ್ನು ಅಧಿಕಾರದಿಂದ ತೆಗೆದುಹಾಕಲು ಸಂಸತ್ತಿಗೆ ಇರುವ ಅಧಿಕಾರವನ್ನು ಮಹಾಭಿಯೋಗ ಎನ್ನುತ್ತಾರೆ) ನಿರ್ಣಯ ಮಂಡಿಸಲು ತಯಾರಿ ಆರಂಭಿಸಿದೆ ಎಂಬ ವರದಿಗಳು ಬಂದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

    ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ,ನ್ಯಾ. ವರ್ಮಾ ಅವರು ನಿವೃತ್ತ ಸಿಜೆಐ ಸಂಜೀವ್ ಖನ್ನಾ ಅವರು ಹೈಕೋರ್ಟ್ ನ್ಯಾಯಾಧೀಶ ಸ್ಥಾನದಿಂದ ತಮ್ಮನ್ನು ವಜಾಗೊಳಿಸುವಂತೆ ಮಾಡಿದ ಶಿಫಾರಸನ್ನು ಅಸಾಂವಿಧಾನಿಕ ಮತ್ತು ಕಾನೂನುಬಾಹಿರ ಎಂದು ಘೋಷಿಸುವಂತೆ ಕೋರಿದ್ದಾರೆಇದನ್ನೂ ಓದಿ: ಜಡ್ಜ್‌ ಮನೆಯಲ್ಲಿ ಕಂತೆ ಕಂತೆ ನೋಟು ಸಿಜೆಐ ಅನುಮತಿ ನೀಡದ ಹೊರತು ಎಫ್‌ಐಆರ್‌ ದಾಖಲಾಗಲ್ಲ: ಅಮಿತ್ಶಾ

    ನ್ಯಾಯಾಧೀಶರ ವಿರುದ್ಧದ ದೂರುಗಳ ವಿಚಾರಣೆಯ ಆಂತರಿಕ ಕಾರ್ಯವಿಧಾನವನ್ನು ನ್ಯಾಯಮೂರ್ತಿ ವರ್ಮಾ ಪ್ರಶ್ನಿಸಿದ್ದಾರೆ. ಇದು ಸಂಸತ್ತಿನಲ್ಲಿ (Parliament) ಹೈಕೋರ್ಟ್ ನ್ಯಾಯಾಧೀಶರನ್ನು ತೆಗೆದುಹಾಕುವ ಅಧಿಕಾರವನ್ನು ಪ್ರತ್ಯೇಕವಾಗಿ ಹೊಂದಿರುವ ಕಾನೂನಿನಿಂದ ಅವಮಾನಿಸುವ ಸಮಾನಾಂತರ, ಸಾಂವಿಧಾನಿಕವಲ್ಲದ ಕಾರ್ಯವಿಧಾನವನ್ನು ಸೃಷ್ಟಿಸುತ್ತದೆ ಎಂದು ವಾದಿಸಿದ್ದಾರೆ.

    ನ್ಯಾಯಾಧೀಶರ (ವಿಚಾರಣಾ) ಕಾಯ್ದೆ, 1968 ರ ಅಡಿಯಲ್ಲಿ ಒದಗಿಸಲಾದ ಸುರಕ್ಷತಾ ಕ್ರಮಗಳನ್ನು ಆಂತರಿಕ ಕಾರ್ಯವಿಧಾನವು ಹೊಂದಿಲ್ಲ. ಯಾವುದೇ ಔಪಚಾರಿಕ ದೂರು ದಾಖಲಾಗದೇ ಇದ್ದಾಗ ತನ್ನ ವಿರುದ್ಧ ಆಂತರಿಕ ವಿಚಾರಣೆ ನಡೆಸಲಾಗಿದೆ. ಇದು ಅನುಚಿತ ಮತ್ತು ಅಮಾನ್ಯವಾಗಿದೆ. ಸುಪ್ರೀಂ ಕೋರ್ಟ್ ಪತ್ರಿಕಾ ಪ್ರಕಟಣೆಯ ಮೂಲಕ ಆರೋಪಗಳನ್ನು ಬಹಿರಂಗಪಡಿಸಿದ್ದರಿಂದ ಅವರು ಮಾಧ್ಯಮ ವಿಚಾರಣೆಗೆ ಒಳಪಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.  ಇದನ್ನೂ ಓದಿ: ಕಂತೆ ಕಂತೆ ನೋಟು ಪತ್ತೆಯಾದ ಜಡ್ಜ್‌ ಮೇಲೆ ದಾಖಲಾಗಿತ್ತು ಸಿಬಿಐ ಎಫ್‌ಐಆರ್‌

    ಮನೆಯಲ್ಲಿ ಕಂತೆ ಕಂತೆ ನೋಟು (Cash) ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ನ್ಯಾ.ನ್ಯಾಯಮೂರ್ತಿ ಯಶವಂತ್ ವರ್ಮಾ (Justice Yashwant Varma) ಅವರನ್ನು ವಜಾಗೊಳಿಸುವಂತೆ ಮೂವರು ಹಿರಿಯ ನ್ಯಾಯಾಧೀಶರ ಸಮಿತಿ ಶಿಫಾರಸು ಮಾಡಿತ್ತು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಿಎಸ್ ಸಂಧಾವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್‌ ಇದ್ದ ಸಮಿತಿ ತನ್ನ ಅಂತಿಮ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿತ್ತು. ಇದನ್ನೂ ಓದಿ: ಬಂದ್‌ಗೆ ಮುಂದಾಗಿದ್ದ ಸಾರಿಗೆ ಸಂಘಟನೆಗಳಿಗೆ ಶಾಕ್‌ ಎಸ್ಮಾ ಜಾರಿ, 6 ತಿಂಗಳು ಪ್ರತಿಭಟನೆಗೆ ನಿಷೇಧ

    ನ್ಯಾ. ಯಶವಂತ್ ವರ್ಮಾ ಅವರ ನಿವಾಸದೊಳಗೆ ನೋಟುಗಳ ದೊಡ್ಡ ರಾಶಿ ಇರುವುದನ್ನು ಹಲವು ಮಂದಿ ನೋಡಿದ್ದಾರೆ. ಆದರೆ ವರ್ಮಾ ಅವರು ಎಂದಿಗೂ ದೂರು ದಾಖಲಿಸಿಲ್ಲ ಅಥವಾ ನ್ಯಾಯಾಂಗದ ಅಧಿಕಾರಿಗಳಿಗೆ ತಿಳಿಸಿಲ್ಲ ಎಂದು ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ಈ ನಡವಳಿಕೆಯನ್ನು ಅಸ್ವಾಭಾವಿಕ ಎಂದು ಕರೆದಿರುವ ಸಮಿತಿಯು ಅವರನ್ನು ವಜಾಗೊಳಿಸುವಂತೆ ಶಿಫಾರಸು ಮಾಡಿತ್ತು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ವರ್ಮಾ ಅವರು ಸಮರ್ಥನೀಯ ವಿವರಣೆಯನ್ನು ನೀಡಿಲ್ಲ. ಯಾವುದೇ ಪಿತೂರಿ ಇದ್ದರೆ ಅವರು ದೂರು ದಾಖಲಿಸಿಲ್ಲ ಯಾಕೆ? ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಥವಾ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಮಾಹಿತಿ ನೀಡಿಲ್ಲ ಯಾಕೆ ಎಂದು ಸಮಿತಿ ಪ್ರಶ್ನಿಸಿತ್ತು.

    ನ್ಯಾ. ವರ್ಮಾ ಅವರ ಮಗಳು ಸೇರಿದಂತೆ 55 ಸಾಕ್ಷಿಗಳನ್ನು ವಿಚಾರಣೆ ನಡೆಸಿದ ಸಮಿತಿ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿಯಿಂದ ಕೋಣೆಯ ನೆಲದಾದ್ಯಂತ ಹರಡಿರುವ 500 ರೂ. ನೋಟುಗಳ ದೊಡ್ಡ ರಾಶಿಯನ್ನು ವಿಡಿಯೋ ಮತ್ತು ಫೋಟೋಗಳನ್ನು ಪರಿಶೀಲಿಸಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ನೋಡಿ ನನಗೆ ಆಘಾತ ಮತ್ತು ಆಶ್ಚರ್ಯವಾಯಿತು. ನನ್ನ ಜೀವನದಲ್ಲಿ ಇಷ್ಟೊಂದು ಹಣವನ್ನು ನಾನು ಮೊದಲ ಬಾರಿಗೆ ನೋಡಿದ್ದೇನೆ ಎಂದು ಒಬ್ಬ ಸಾಕ್ಷಿ ಸಮಿತಿಗೆ ತಿಳಿಸಿದ್ದಾರೆ ಎಂದು ವರದಿ ಹೇಳಿತ್ತು.

  • ಟ್ರಂಪ್ ವಿರುದ್ಧ ಮಹಾಭಿಯೋಗಕ್ಕೆ ಆಗ್ರಹ – ಪ್ರಕ್ರಿಯೆ ಹೇಗೆ ನಡೆಯುತ್ತದೆ?

    ಟ್ರಂಪ್ ವಿರುದ್ಧ ಮಹಾಭಿಯೋಗಕ್ಕೆ ಆಗ್ರಹ – ಪ್ರಕ್ರಿಯೆ ಹೇಗೆ ನಡೆಯುತ್ತದೆ?

    ವಾಷಿಂಗ್ಟನ್: ಅಮೆರಿಕದಲ್ಲಿ ಟ್ರಂಪ್ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಅಧಿಕಾರವಧಿ ಮುಗಿಯುವ ಜ.20ಕ್ಕೂ ಮೊದಲೇ ಟ್ರಂಪ್‍ ಅವರನ್ನು ಪದವಿಯಿಂದ ತೊಲಗಿಸಬೇಕು ಎಂಬ ಎಂಬ ಬೇಡಿಕೆ, ಒತ್ತಡ ಹೆಚ್ಚುತ್ತಿದೆ.

    ಅಮೆರಿಕ ಸಂವಿಧಾನದ 25ನೇ ತಿದ್ದುಪಡಿ ಅನ್ವಯ ಟ್ರಂಪ್‍ರನ್ನು ಪದವಿಯಿಂದ ಕೆಳಗಿಳಿಸಬೇಕು ಎಂದು ಡೆಮಾಕ್ರೆಟಿಕ್‌ ಪಕ್ಷದ ಸದಸ್ಯರು ಮತ್ತು ಕೆಲ ರಿಪಬ್ಲಿಕನ್ನರು, ಉಪಾಧ್ಯಕ್ಷ ಮೈಕ್ ಪೆನ್ಸ್‌ ಅವರನ್ನು ಒತ್ತಾಯಿಸುತ್ತಿದ್ದಾರೆ. ಇಲ್ಲದೇ ಇದ್ದರೇ, ಮಹಾಭಿಯೋಗದ ಮೂಲಕ ಟ್ರಂಪ್‍ರನ್ನು ವಾಗ್ದಂಡನೆಗೆ ಒಳಪಡಿಸಿ ಅಧ್ಯಕ್ಷ ಪದವಿಯಿಂದ ವಜಾ ಮಾಡೋದಾಗಿ ಎಚ್ಚರಿಕೆ ನೀಡುತ್ತಿದ್ದಾರೆ.

     

    ಟ್ರಂಪ್ ದೇಶದ್ರೋಹಿ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ವ್ಯಕ್ತಿ. ಈತನನ್ನು ಕೂಡಲೇ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ವಿಶೇಷಾಧಿಕಾರ ಬಳಸಬೇಕು ಎಂದು ಸ್ಪೀಕರ್ ನ್ಯಾನ್ಸಿ ಪೆಲೋಸಿ ಸೇರಿ ಹಲವರು ಒತ್ತಾಯಿಸಿದ್ದಾರೆ. ಮಹಾಭಿಯೋಗ ಅಥವಾ ಸಂವಿಧಾನದ 25ನೇ ತಿದ್ದುಪಡಿ ಅನ್ವಯ ಕ್ರಮದ ಪೈಕಿ ಯಾವುದೇ ಪ್ರಕ್ರಿಯೆ ನಡೆದರೂ ಟ್ರಂಪ್‍ಗೆ ತೀವ್ರ ಮುಖಭಂಗ ಆಗುತ್ತದೆ. ಹೊಸ ಅಧ್ಯಕ್ಷರ ಪದಗ್ರಹಣದವರೆಗೆ ಉಪಾಧ್ಯಕ್ಷರು ತಾತ್ಕಾಲಿಕವಾಗಿ ಅಧ್ಯಕ್ಷ ಸ್ಥಾನವನ್ನು ನಿರ್ವಹಿಸಬೇಕಾಗುತ್ತದೆ.

    ಏನಿದು ಅಮೆರಿಕಾ ಸಂವಿಧಾನದ 25ನೇ ತಿದ್ದುಪಡಿ?
    1963ರಲ್ಲಿ ಜಾನ್ ಎಫ್ ಕೆನಡಿ ಹತ್ಯೆ ಬಳಿಕ ಅಮೆರಿಕಾ ಸಂವಿಧಾನಕ್ಕೆ 25ನೇ ತಿದ್ದುಪಡಿ ಮಾಡಲಾಗಿದೆ. ಅಧ್ಯಕ್ಷರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸದೇ ಇದ್ದಾಗ, ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡದಿದ್ದ ಸಂದರ್ಭದಲ್ಲಿ 25ನೇ ತಿದ್ದುಪಡಿಯ ಮೂಲಕ ಉಪಾಧ್ಯಕ್ಷರು ಸಂಪುಟ ಸಭೆ ನಡೆಸಿ ಅಧ್ಯಕ್ಷರನ್ನು ವಜಾ ಮಾಡಬಹುದು. ಸಂಪುಟ ಸಭೆಯಲ್ಲಿ ವೋಟಿಂಗ್ ನಡೆಯುತ್ತದೆ. ಅಧ್ಯಕ್ಷರ ವಿರುದ್ಧ ಹೆಚ್ಚು ಮತ ಬಿದ್ದರೆ ವಜಾ ಮಾಡಲಾಗುತ್ತದೆ.

    ಮಹಾಭಿಯೋಗ ಹೇಗೆ?
    ಕಾಂಗ್ರೆಸ್ ಪ್ರತಿನಿಧಿಗಳ ಸಭೆಗೆ ಈ ಮಹಾಭಿಯೋಗದ ಅಧಿಕಾರವಿದೆ. ಅಧ್ಯಕ್ಷರು ಅಪರಾಧ ಎಸಗಿದರೆ 435 ಸದ್ಯಸರ ಸಭೆಯಲ್ಲಿ ಮಹಾಭಿಯೋಗ ತೀರ್ಮಾನ ತೆಗೆದುಕೊಳ್ಳಬಹುದು. ಸಾಮಾನ್ಯ ಮೆಜಾರಿಟಿಯಿಂದ ಈ ತೀರ್ಮಾನಕ್ಕೆ ಗೆಲುವಾದಲ್ಲಿ ಸೆನೆಟ್‍ಗೆ ಕಳಿಸಲಾಗುತ್ತದೆ. ಸೆನೆಟ್‍ನಲ್ಲಿ ವಿಚಾರಣೆ ನಡೆದು 2/3ನೇ ಬಹುಮತದಿಂದ ಅಧ್ಯಕ್ಷರನ್ನು ಕೆಳಗೆ ಇಳಿಸಬಹುದು. ಈ ಎಲ್ಲಾ ಪ್ರಕ್ರಿಯೆಯನ್ನು ಕೇವಲ ಒಂದೇ ದಿನದಲ್ಲಿ ಮುಗಿಸಬಹುದು.

  • ಮುಖ್ಯ ನ್ಯಾಯಮೂರ್ತಿಗಳ ಮಹಾಭಿಯೋಗ ನಡೆಯುವುದು ಹೇಗೆ?

    ಮುಖ್ಯ ನ್ಯಾಯಮೂರ್ತಿಗಳ ಮಹಾಭಿಯೋಗ ನಡೆಯುವುದು ಹೇಗೆ?

    ನವದೆಹಲಿ: ಸಹೋದ್ಯೋಗಿ ನ್ಯಾಯಮೂರ್ತಿಗಳೇ ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ದೀಪಕ್ ಮಿಶ್ರಾ ವಿರುದ್ಧ ಆರೋಪ ಮಾಡಿದ್ದರು. ಇದರ ಹಿನ್ನೆಲೆಯಲ್ಲೇ ಮುಖ್ಯ ನ್ಯಾಯಮೂರ್ತಿ ಪದಚ್ಯುತಿಗೆ ಪ್ರತಿಪಕ್ಷಗಳು ಸಭಾಧ್ಯಕ್ಷರುಗಳಿಗೆ ನಿಲುವಳಿ ನೋಟಿಸ್ ಮಂಡನೆಗೆ ಸೂಚಿಸಿವೆ.

    ಪ್ರಮುಖ ವಿಪಕ್ಷವಾಗಿರುವ ಕಾಂಗ್ರೆಸ್ ನೇತೃತ್ವದಲ್ಲಿ ರಾಜ್ಯಸಭೆ ಸಭಾಧ್ಯಕ್ಷ ಮತ್ತು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಗೆ ಪದಚ್ಯುತಿ ನಿಲುವಳಿ ನೋಟಿಸ್ ನೀಡಲಾಗಿದೆ. ವೆಂಕಯ್ಯ ನಾಯ್ಡು ಅವರು ಕಾನೂನು ತಜ್ಞರ ಅಭಿಪ್ರಾಯ, ಸಲಹೆ ಸೂಚನೆ ಪಡೆಯಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

    ಭಾರತದಲ್ಲಿ ಇಲ್ಲಿಯವರೆಗೂ ಮುಖ್ಯ ನ್ಯಾಯಮೂರ್ತಿಗಳ ಮಹಾಭಿಯೋಗ ನಡೆದಿಲ್ಲ. ಮಹಾಭಿಯೋಗದ ಪ್ರಕ್ರಿಯೆ ಪೂರ್ಣಗೊಳ್ಳಲು 6 ತಿಂಗಳು ಬೇಕಾಗುತ್ತದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಅಧಿಕಾರಾವಧಿ ಇರುವುದು ಆರು ತಿಂಗಳು ಅಷ್ಟೆ. ಈಗಾಗಲೇ ಕಾಂಗ್ರೆಸ್ ಸೇರಿದಂತೆ 7 ಪಕ್ಷಗಳ 71 ಸದಸ್ಯರು ಸಹಿ ಹಾಕಿದ್ದು, ವೆಂಕಯ್ಯನಾಯ್ಡು ಅವರಿಗೆ ಕಳುಹಿಸಿಕೊಡಲಾಗಿದೆ.

    ಪದಚ್ಯುತಿ ನಿಲುವಳಿ ನೋಟಿಸ್ ಮುಂಬರುವ ಮುಖ್ಯ ನ್ಯಾಯಮೂರ್ತಿಗಳಿಗೆ ನ್ಯಾಯಬದ್ಧವಾಗಿ ನಡೆದುಕೊಳ್ಳುವಂತೆ ಒಂದು ಎಚ್ಚರಿಕೆ ಇದ್ದಹಾಗೆ ಎಂದು ಕಾಂಗ್ರೆಸ್ ಸದಸ್ಯರೊಬ್ಬರು ಹೇಳಿದ್ದಾರೆ.

    ಮುಖ್ಯ ನ್ಯಾಯಮೂರ್ತಿಗಳ ಮಹಾಭಿಯೋಗ ನಡೆಯುವುದು ಹೇಗೆ?
    ಲೋಕಸಭೆಯ ಕನಿಷ್ಠ 100 ಸದಸ್ಯರು ಪದಚ್ಯುತಿ ನಿಲುವಳಿ ನೋಟಿಸ್ ಗೆ ಸಹಿಹಾಕಿ ಸ್ಪೀಕರ್ ಗೆ ಸಲ್ಲಿಸಬೇಕು. ರಾಜ್ಯಸಭೆಯ ಕನಿಷ್ಠ 50 ಸದಸ್ಯರು ಪದಚ್ಯುತಿ ನಿಲುವಳಿ ನೋಟಿಸ್ ಗೆ ಸಹಿ ಹಾಕಿ ಸಭಾಧ್ಯಕ್ಷರಿಗೆ ಸಲ್ಲಿಸಬೇಕು.

    ಲೋಕಸಭೆಯ ಸ್ಪೀಕರ್ ಹಾಗೂ ರಾಜ್ಯಸಭೆಯ ಅಧ್ಯಕ್ಷರು ಪರಸ್ಪರ ಚರ್ಚೆ ನಡೆಸಿ, ನೋಟಿಸ್ ನಲ್ಲಿ ನೀಡಿರುವ ಅಂಶಗಳು ಚರ್ಚೆಗೆ ಅರ್ಹವೆ ಇಲ್ಲವೇ ಎಂಬುದನ್ನು ಪರಿಶೀಲಿಸುತ್ತಾರೆ. ಪರಿಶೀಲನೆ ಬಳಿಕ ಉಭಯ ಸಭಾಧ್ಯಕ್ಷರು ಪದಚ್ಯುತಿ ನಿಲುವಳಿ ನೋಟಿಸ್ ಗೆ ಮನ್ನಣೆ ನೀಡಬೇಕೇ ಅಥವಾ ನೋಟಿಸ್ ಅನ್ನು ನಿರಾಕರಿಸಬೇಕೆ ಎನ್ನುವುದನ್ನು ನಿರ್ಧಾರ ಮಾಡುತ್ತಾರೆ. ಮನ್ನಣೆ ಕೊಡಬೇಕು ಅಂತ ಅನ್ನಿಸಿದಲ್ಲಿ, ಆರೋಪದ ಬಗ್ಗೆ ತನಿಖೆ ನಡೆಸಲು ಮೂರು ಸದಸ್ಯರ ಸಮಿತಿ ರಚನೆ ಮಾಡುತ್ತಾರೆ.

    ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರು, ಹೈಕೋರ್ಟ್ ಮುಖ್ಯನ್ಯಾಯಾಧೀಶರು ಮತ್ತು ವಿಶೇಷ ನ್ಯಾಯವಾದಿ ಇರುತ್ತಾರೆ. ಸಮಿತಿ ಸದಸ್ಯರು ಆರೋಪಗಳ ಆಧಾರದ ಮೇಲೆ ತನಿಖೆ ನಡೆಸಿ, ಆರೋಪಪಟ್ಟಿ ತಯಾರು ಮಾಡುತ್ತಾರೆ. ಆರೋಪ ಪಟ್ಟಿಯ ಪ್ರತಿಯನ್ನು ಆರೋಪಿತ ಸಿಜೆಐಗೆ ಕಳುಹಿಸುತ್ತಾರೆ. ಆರೋಪಗಳಿಗೆ ಉತ್ತರ ನೀಡಲು ಸಿಜೆಐ ಅವರಿಗೆ ಕಾಲಾವಾಕಾಶ ನೀಡುತ್ತಾರೆ.

    ಸಿಜೆಐ ವಿರುದ್ಧ ಆರೋಪಗಳು, ಸಿಜೆಐ ನೀಡಿದ ಲಿಖಿತ ಉತ್ತರದ ಆಧಾರದ ಮೇರೆಗೆ ಸಮಿತಿ ತನ್ನ ವರದಿ ಸಿದ್ಧಪಡಿಸಿ ಸ್ಪೀಕರ್ ಅಥವಾ ಸಭಾಧ್ಯಕ್ಷರಿಗೆ ನೀಡುತ್ತದೆ. ವರದಿಯನ್ನು ಸಂಬಂಧಪಟ್ಟ ಸಂಸತ್ ಸದನದಲ್ಲಿ ಮಂಡಿಸುತ್ತಾರೆ.

    ಸಮಿತಿಯ ವರದಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧದ ಆರೋಪದಲ್ಲಿ ಸತ್ಯ ಕಂಡುಬಂದಲ್ಲಿ ಅಥವಾ ಮುಖ್ಯ ನ್ಯಾಯಾಧೀಶರ ಕರ್ತವ್ಯದಲ್ಲಿ ಲೋಪ ಕಂಡುಬಂದಲ್ಲಿ ಸಂಬಂಧ ಪಟ್ಟ ಸಂಸತ್ ಸದನದಲ್ಲಿ ವರದಿ ಕುರಿತು ಚರ್ಚೆ ನಡೆಸುತ್ತಾರೆ.

    ಸಂಸತ್ ಸಭೆಯಲ್ಲಿ ಸಿಜೆಐ ಪದಚ್ಯುತಿಗೊಳಿಸುವ ನಿರ್ಣಯಕ್ಕೆ ಬಹುಮತ ಲಭಿಸಿದ್ದೇ ಆದರೆ ಮತ್ತೊಂದು ಸದನದ ಅನುಮೋದನೆಗಾಗಿ ನಿರ್ಣಯವನ್ನು ರವಾನೆ ಮಾಡಲಾಗುತ್ತದೆ.

    ಎರಡೂ ಸದನಗಳಲ್ಲಿ ನಿರ್ಣಯ ಅಂಗೀಕಾರವಾದರೆ, ಬಳಿಕ ನಿರ್ಣಯವನ್ನು ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಲಾಗುತ್ತದೆ. ರಾಷ್ಟ್ರಪತಿಗಳ ಆದೇಶದ ನಂತರವಷ್ಟೇ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಅವರ ಸೇವೆಯಿಂದ ವಜಾಗೊಳಿಸಬಹುದಾಗಿದೆ.