Tag: ಮಹಾಭಾರತ

  • ಮಹಾಭಾರತದ ‘ಕರ್ಣ’ ಪಂಕಜ್ ಧೀರ್ ನಿಧನ – ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ

    ಮಹಾಭಾರತದ ‘ಕರ್ಣ’ ಪಂಕಜ್ ಧೀರ್ ನಿಧನ – ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ

    ಹಿಂದಿ ಕಿರುತೆರೆಯ ‘ಮಹಾಭಾರತ’ (Mahabharat) ಸೀರಿಯಲ್‌ನಲ್ಲಿ ಕರ್ಣನ ಪಾತ್ರ ನಿರ್ವಹಿಸಿ ಜನಪ್ರಿಯರಾಗಿದ್ದ ನಟ ಪಂಕಜ್‌ ಧೀರ್‌ (Pankaj Dheer) ಅವರು ನಿಧನರಾಗಿದ್ದಾರೆ.

    ಪಂಕಜ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕಳೆದ ತಿಂಗಳುಗಳಿಂದ ಆಸ್ಪತ್ರೆಗಳಿಗೆ ಹೋಗಿ ಬರುತ್ತಿದ್ದರು. ಇತ್ತೀಚೆಗೆ ಕಾಯಿಲೆ ತೀವ್ರಗೊಂಡಿತ್ತು. ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

    ಪಂಕಜ್ ಧೀರ್‌ ಅವರು ಚಂದ್ರಕಾಂತ, ಬಧೋ ಬಹು, ಜೀ ಹಾರರ್ ಶೋ, ಕಾನೂನ್, ಸಸುರಲ್ ಸಿಮಾರ್ ಕಾ, ಸೋಲ್ಜರ್, ಅಂದಾಜ್, ಬಾದ್‌ಶಾ, ಮತ್ತು ತುಮ್ಕೋ ನಾ ಭೂಲ್ ಪಾಯೆಂಗೆಯಂತಹ ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

    ಪಂಜಾಬ್ ಮೂಲದ ಪಂಕಜ್ ಧೀರ್, ಗೀತಾ ಬಾಲಿ ನಟಿಸಿದ ಬಹು ಬೇಟಿ ಮತ್ತು ಜಿಂದಗಿಯಂತಹ ಚಲನಚಿತ್ರಗಳನ್ನು ನಿರ್ದೇಶಿಸಿದ ಚಲನಚಿತ್ರ ನಿರ್ಮಾಪಕ ಸಿಎಲ್ ಧೀರ್ ಅವರ ಮಗ. ನಟನೆಯ ಜೊತೆಗೆ, ಪಂಕಜ್ ಧೀರ್ ತಮ್ಮ ಸಹೋದರ ಸತ್ಲುಜ್ ಧೀರ್ ಜೊತೆ ಮುಂಬೈನಲ್ಲಿ ವಿಸೇಜ್ ಸ್ಟುಡಿಯೋಸ್ ಎಂಬ ಶೂಟಿಂಗ್ ಸ್ಟುಡಿಯೋವನ್ನು ಸ್ಥಾಪಿಸುವ ಮೂಲಕ ಚಲನಚಿತ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2010 ರಲ್ಲಿ, ನಟ ಮಹತ್ವಾಕಾಂಕ್ಷಿ ನಟರಿಗಾಗಿ ಅಬ್ಬಿನ್ನೆ ಆಕ್ಟಿಂಗ್ ಅಕಾಡೆಮಿಯನ್ನು ಸ್ಥಾಪಿಸಿದ್ದರು.

    1980 ರ ದಶಕದಲ್ಲಿ ಅನೇಕ ಚಲನಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸಿದ್ದರು. ಆದರೆ, ಅವರನ್ನು ಮನೆಮಾತನ್ನಾಗಿ ಮಾಡಿದ್ದು ಮಹಾಭಾರತ ಧಾರಾವಾಹಿ. ಕರ್ಣನ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದರು.

  • ವಿಜಯದಶಮಿಗೂ ರಾಮಾಯಣಕ್ಕೂ ಇದೆ ನಂಟು- ಪಾಂಡವರಿಗೆ ಏನು ಸಂಬಂಧ?

    ವಿಜಯದಶಮಿಗೂ ರಾಮಾಯಣಕ್ಕೂ ಇದೆ ನಂಟು- ಪಾಂಡವರಿಗೆ ಏನು ಸಂಬಂಧ?

    ಶ್ವಯುಜ ಶುಕ್ಲಪಾಡ್ಯದಂದು ಆರಂಭಗೊಂಡು ನವರಾತ್ರಿ (Navarathri)  ಹಬ್ಬದ ಒಂಭತ್ತು ದಿನಗಳು ಕಳೆದ ನಂತರ ಬರುವ ಹತ್ತನೇ ದಿನವೇ ‘ದಶಮಿ’. ಇದನ್ನೇ ವಿಜಯ ದಶಮಿ (Vijaya Dashmi) ಎಂದು ಕರೆಯುತ್ತಾರೆ. ಈ ದಿನ ಸಂತೋಷದ ಸಾಂಸ್ಕೃತಿಕ, ಧಾರ್ಮಿಕ, ವೈಭವದ ಮೆರವಣಿಗೆ ದೇಶದೆಲ್ಲೆಡೆ ನಡೆಯುತ್ತದೆ.

    ವಿಜಯದಶಮಿಯ ಹಿನ್ನೆಲೆ ಏನು?
    ಕಾಡೆಮ್ಮೆ ರೂಪದ ಮಹಿಷಾಸುರ (Mahishura) ದೀರ್ಘ ತಪಸ್ಸು ಮಾಡಿ, ಯಾವುದೇ ಮನುಷ್ಯನಿಂದ, ದೇವರಿಂದ ಅಥವಾ ವಿಶಿಷ್ಟ ಶಕ್ತಿಯಿಂದ ತನ್ನನ್ನು ಸಂಹರಿಸಲು ಸಾಧ್ಯವಾಗಬಾರದು ಎಂದು ಬ್ರಹ್ಮನಿಂದ ವರವನ್ನು ಪಡೆದಿದ್ದನು. ವರ ಸಿಕ್ಕಿದ ಕೂಡಲೇ ಅಹಂಕಾರದಿಂದ ಜನರಿಗೆ ಮತ್ತು ದೇವತೆಗಳಿಗೆ ತೊಂದರೆ ಕೊಡಲು ಆರಂಭಿಸಿದ. ಈತನ ಉಪಟಳವನ್ನು ತಾಳಲಾರದೇ ದೇವತೆಗಳು ಆದಿಶಕ್ತಿಯನ್ನು ಪೂಜಿಸಿ ಮಹಿಷನನ್ನು ಹತ್ಯೆ ಮಾಡುವಂತೆ ಬೇಡಿಕೊಳ್ಳುತ್ತಾರೆ. ಪ್ರಾರ್ಥನೆ ಕೇಳಿದ ದೇವಿ ದುರ್ಗೆಯಾಗಿ ಸಿಂಹದ ಮೇಲೆ ಕುಳಿತು, ಹತ್ತು ಕೈಗಳಲ್ಲಿ ಹತ್ತು ಬಗೆಯ ಆಯುಧಗಳನ್ನು ಹಿಡಿದು ಧರೆಗಿಳಿದಳು. ರಾಕ್ಷಸನಾದ ಮಹಿಷಾಸುರನನ್ನು ದಶಮಿಯ ದಿನ ಸಂಹಾರ ಮಾಡಿದಳು. ಅಂದಿನಿಂದ ದಶಮಿಯಂದು ಮಹಿಷಾಸುರನ್ನು ಕೊಂದು ವಿಜಯ ಸಿಕ್ಕಿದ್ದಕ್ಕೆ `ವಿಜಯದಶಮಿ’ ಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ.

    ರಾಮಾಯಣಕ್ಕೆ ಏನು ಸಂಬಂಧ?
    ರಾವಣನನ್ನು ಸಂಹಾರ ಮಾಡುವ ಮೊದಲು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ವಧಿಸಿದನು. ‘ದಶಹರ’ದಂದು ದಶಕಂಠನಾಗಿದ್ದ ರಾವಣನನ್ನು ಶ್ರೀರಾಮನು ಸಂಹರಿಸಿದ ಬಳಿಕ ವಿಜಯೋತ್ಸವ ನಡೆಯಿತು ಎನ್ನುವ ಪ್ರತೀತಿ ಇದೆ. ಹೀಗಾಗಿ ಉತ್ತರಭಾರತ ಕಡೆ ದಸರಾ ಸಮಯದಲ್ಲಿ 10 ದಿನಗಳ ಕಾಲ ರಾಮನ ವಿವಿಧ ಘಟನೆಗಳನ್ನು ವಿವರಿಸುವ ರಾಮಲೀಲಾ ಕಥನ ನಡೆಯುತ್ತದೆ. ದಶಮಿಯಂದು ರಾವಣನ ಆಕೃತಿಯನ್ನು ಸುಡಲಾಗುತ್ತದೆ. ದೆಹಲಿಯಲ್ಲಿ ರಾಷ್ಟ್ರೀಯ ಮಹತ್ವ ಇರುವ ಹಬ್ಬ ಎಂಬಂತೆ ಆಚರಿಸಲಾಗುತ್ತದೆ. ರಾಮಲೀಲಾ ಮೈದಾನದಲ್ಲಿ ಈ ಹಬ್ಬಕ್ಕಾಗಿ ಭಾರೀ ಏರ್ಪಾಡು ನಡೆಯುತ್ತದೆ.

    ಪಾಂಡವರಿಗೂ ಏನು ಸಂಬಂಧ?
    ದ್ವಾಪರ ಯುಗದಲ್ಲಿ ಪಾಂಡವರು ಹದಿಮೂರು ವರ್ಷಗಳ ವನವಾಸ ಮುಗಿಸಿ ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ಪಾಂಡವರು ಒಂದು ವರ್ಷದ ಅಜ್ಞಾತವಾಸವನ್ನು ಮತ್ಸ್ಯದೇಶದಲ್ಲಿ ಕಳೆಯಲು ಮುಂದಾಗುತ್ತಾರೆ. ಈ ದೇಶದ ರಾಜನಾದ ವಿರಾಟನ ಆಸ್ಥಾನದಲ್ಲಿ ಆಗ ಧರ್ಮರಾಜ ಕಂಕಭಟ್ಟನಾದರೆ, ಭೀಮ ಬಾಣಸಿಗನಾದ ವಲಲನಾಗಿ ವೇಷ ಬದಲಾಯಿಸುತ್ತಾರೆ. ಅರ್ಜುನ ಬೃಹನ್ನಳೆಯಾಗಿ ನೃತ್ಯ ಶಿಕ್ಷಕಿಯಾಗಿ ನಕುಲ ಸಹದೇವರು ಅನುಕ್ರಮವಾಗಿ ಅಶ್ವಪಾಲಕ-ಗೋಪಾಲಕರಾದರು. ದ್ರೌಪದಿ ಸೈರಂಧ್ರಿಯಾಗಿ ವಿರಾಟನ ಪತ್ನಿಯಾದ ಸುದೇಷ್ಣೆಯ ಸೇವೆಯಲ್ಲಿ ನಿಂತಳು. ಅಜ್ಞಾತವಾಸದ ಕೊನೆಯಲ್ಲಿ ಕುರುಸೇನೆ ವಿರಾಟನ ರಾಜ್ಯದಲ್ಲಿರುವ ಗೋವುಗಳನ್ನು ಅಪಹರಿಸಿತ್ತು. ಈ ಸಮಯದಲ್ಲಿ ವಿರಾಟನ ಪುತ್ರನಾದ ಉತ್ತರಕುಮಾರ ನಾನು ಕುರುಸೇನೆಯನ್ನು ಸೆದೆ ಬಡಿಯುತ್ತೇನೆ ಎಂದು ಹೇಳಿ ಜಂಬ ಕೊಚ್ಚಿಕೊಂಡು ಯುದ್ಧಕ್ಕೆ ಹೊರಟಿದ್ದ. ಬೃಹನ್ನಳೆಯನ್ನು ಸಾರಥಿಯನ್ನಾಗಿ ಮಾಡಿ ಯುದ್ಧಕ್ಕೆ ಕರೆದುಕೊಂಡು ಹೋದ. ಯುದ್ಧದಲ್ಲಿ ಸೋಲು ಸಮೀಪವಾಗುತ್ತಿದೆ ಎಂದಾಗ  ಉತ್ತರ ಕುಮಾರ ಯುದ್ಧದಿಂದ ಹಿಂದಕ್ಕೆ ಸರಿಯುತ್ತೇನೆ. ದಯವಿಟ್ಟು ಇಲ್ಲಿಂದ ತೆರಳೋಣ ಎಂದು ಹೇಳುತ್ತಾನೆ.  ಈ ವೇಳೆ ಬೃಹನ್ನಳೆ ರೂಪದಲ್ಲಿದ್ದ ಅರ್ಜುನ ಅಜ್ಞಾತವಾಸದ ಸಮಯದಲ್ಲಿ ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದ ಶಸ್ತ್ರಾಸ್ತ್ರವನ್ನು ತೆಗೆದು ವಿರಾಟರಾಜನ ಶತ್ರುಗಳನ್ನು ಸೋಲಿಸುತ್ತಾನೆ. ನವರಾತ್ರಿ ಹಬ್ಬ ಮುಗಿಸಿ ದಶಮಿಯಂದು ಕುರುಸೇನೆಯನ್ನು ವಿರಾಟ ಸೇನೆ ಸೋಲಿಸುತ್ತದೆ. ಈ ವಿಜಯದ ಕುರುಹಾಗಿ ಒಂಭತ್ತನೇ ದಿನ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ.

    ಕಲಿಯುಗದಲ್ಲೂ ಆಚರಣೆ:
    ನವಮಿಯಂದು ಆಯುಧಗಳಿಗೆ ಪೂಜೆ ಮಾಡಿ ದಶಮಿಯಂದು ದಂಡಯಾತ್ರೆಗೆ ಹೊರಟರೆ ವಿಜಯ ಸಿದ್ಧಿ ಎನ್ನುವ ನಂಬಿಕೆ ಈ ಹಿಂದೆ ರಾಜರಲ್ಲಿತ್ತು. ಹೀಗಾಗಿ ದಶಮಿಯಂದೇ ಪೂಜೆ ಸಲ್ಲಿಸಿ ದಂಡಯಾತ್ರೆಗೆ ಹೊರಡುತ್ತಿದ್ದರು. ಈ ಪದ್ದತಿ ಈಗಲೂ ಉಳಿದುಕೊಂಡಿದ್ದು, ಸಾಂಕೇತಿಕವಾಗಿ ಕೆಲ ರಾಜವಂಶಸ್ಥರು ಸಾಂಕೇತಿಕವಾಗಿ ತಮ್ಮ ರಾಜ್ಯದ ಗಡಿಯನ್ನು ದಾಟಿ ಮತ್ತೆ ಹಿಂದಿರುಗುತ್ತಾರೆ. ವಿಜಯನಗರಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ಈ ಸೀಮೋಲ್ಲಂಘನ ಮೈಸೂರಿನ ಒಡೆಯರ ಕಾಲದಲ್ಲಿ ಮುಂದುವರಿದಿದೆ.

  • Ganesh Chaturthi | ಗಣೇಶನಿಗೆ `ಏಕದಂತ’ ಹೆಸರು ಹೇಗೆ ಬಂತು? – ಇಲ್ಲಿದೆ ಪುರಾಣದ ಕಥೆ

    Ganesh Chaturthi | ಗಣೇಶನಿಗೆ `ಏಕದಂತ’ ಹೆಸರು ಹೇಗೆ ಬಂತು? – ಇಲ್ಲಿದೆ ಪುರಾಣದ ಕಥೆ

    ಯಾವುದೇ ಕಾರ್ಯಕ್ರಮ ಅಥವಾ ಸಮಾರಂಭ ಪ್ರಾರಂಭಿಸುವ ಮೊದಲು ಯಾವುದೇ ಅಡಚಣೆ ಅಥವಾ ತೊಂದರೆ ಆಗದಂತೆ ವಿಘ್ನನಿವಾರಕ ಗಣಪತಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಗಣೇಶನಿಗೆ ಹಲವು ನಾಮ. ಗಜಾನನ, ಗಣಪತಿ, ವಕ್ರತುಂಡ, ವಿನಾಯಕ, ಏಕದಂತ, ಗಣೇಶ ಹೀಗೆ ಹತ್ತು ಹಲವು ಹೆಸರುಗಳಿಂದ ಗಣಪತಿಯನ್ನು ಆರಾಧಿಸಲಾಗುತ್ತದೆ. ಅವುಗಳಲ್ಲಿ ಏಕದಂತ ಎನ್ನುವ ಹೆಸರೂ ಒಂದು. ಗಣೇಶನ ಒಂದು ದಂತ ಮುರಿದಿರುವ ಕಾರಣ ಆತನನ್ನು ಏಕದಂತ ಎಂದು ಕರೆಯಲಾಗುತ್ತದೆ. ಗಣೇಶ ಏಕದಂತನಾಗಲು ಕಾರಣವೇನು? ಪುರಾಣದ ಕಥೆ ಏನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

    ಪರಶುರಾಮ ಮತ್ತು ಗಣೇಶನ ನಡುವೆ ಯುದ್ಧ:
    ಒಮ್ಮೆ ಕಾರ್ತವೀರ್ಯನನ್ನು ವಧೆ ಮಾಡಿ ಕೃತಾರ್ಥರಾದ ಪರಶುರಾಮರು ಕೈಲಾಸಕ್ಕೆ ಹೋದರು. ಅಲ್ಲಿ ಅವರಿಗೆ ಗಣಗಳ ಮತ್ತು ಗಣಾಧೀಶನಾದ ಗಣಪತಿಯ ಭೇಟಿ ಆಯಿತು. ಪರಶುರಾಮರಿಗೆ ಭಗವಾನ್‌ ಶಂಕರನ ಭೇಟಿ ಮಾಡುವ ಇಚ್ಛೆ ಇತ್ತು. ಆದರೆ ಆ ಸಮಯದಲ್ಲಿ ಶಿವ-ಪಾರ್ವತಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.

    ಪರಮೇಶ್ವರನಿಗೆ ನಮಸ್ಕಾರ ಮಾಡಲು ಅಂತಃಪುರಕ್ಕೆ ಹೊರಟಿದ್ದೇನೆ. ಅವರಿಗೆ ವಂದಿಸಿ ಶೀಘ್ರವಾಗಿ ಹಿಂತಿರುಗುವೆನು. ಯಾರ ಕೃಪೆಯಿಂದ ನಾನು ಕಾರ್ತವೀರ್ಯನನ್ನು ವಧಿಸಿ, ಇಪ್ಪತ್ತೊಂದು ಬಾರಿ ಭೂಮಿಯನ್ನು ಕ್ಷತ್ರೀಯ ರಹಿತ ಮಾಡಿದೆನೋ ಅಂಥಾ ಜಗದ್ಗುರುವನ್ನು ನಾನು ಶೀಘ್ರವಾಗಿ ಭೇಟಿ ಆಗಲೇಬೇಕು ಎಂದು ಪರಶುರಾಮರು ಗಣೇಶನಿಗೆ ತಿಳಿಸಿದರು. ಆದರೆ ಗಣೇಶ ಅವರನ್ನು ಒಳಗೆ ಬಿಡುವುದಿಲ್ಲ.

    ಇದರಿಂದ ಕೋಪಗೊಂಡ ಪರಶುರಾಮರು ನನ್ನನ್ನು ಒಳಗೆ ಬಿಡದಿದ್ದರೆ ನನ್ನೊಂದಿಗೆ ಯುದ್ಧ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡುತ್ತಾರೆ. ನಾನು ಗೆದ್ದರೆ ಶಿವನನ್ನು ಭೇಟಿಯಾಗಲು ನನ್ನನ್ನು ಒಳಗೆ ಬಿಡಬೇಕು ಎಂದು ಪರಶುರಾಮರು ಗಣೇಶನಿಗೆ ಸವಾಲೆಸೆದರು. ಗಣೇಶನು ಯುದ್ಧದ ಸವಾಲನ್ನು ಸ್ವೀಕರಿಸಿದನು. ಇಬ್ಬರ ನಡುವೆ ಘೋರ ಯುದ್ಧ ನಡೆಯಿತು. ಯುದ್ಧದ ಸಮಯದಲ್ಲಿ, ಪರಶುರಾಮರು ತಮ್ಮ ಕೊಡಲಿಯಿಂದ ಗಣೇಶನ ಮೇಲೆ ದಾಳಿ ಮಾಡಿದರು. ಇದನ್ನು ಎದುರಿಸಲು ಗಣೇಶ ತನ್ನ ಎಡಗಡೆಯ ದಂತವನ್ನು ಬಳಸಿದರು. ಇದರ ಪರಿಣಾಮವಾಗಿ ಗಣೇಶನ ದಂತ ಮುರಿಯುತ್ತದೆ. ಗಣೇಶನ ಒಂದು ಹಲ್ಲು ಮುರಿದ ಕಾರಣ ಆತನನ್ನು ಏಕದಂತ ಎಂದು ಕರೆಯುತ್ತಾರೆ.

    ಗಣೇಶನಷ್ಟೇ ಪರಶುರಾಮರು ಯುದ್ಧದಲ್ಲಿ ನಿಪುಣರಾಗಿರದ್ದರು. ಇವರಿಬ್ಬರ ನಡುವಿನ ಯುದ್ಧ ಎನ್ನುವಂತಹದ್ದು ಭಯಾನಕವಾಗಿದ್ದು, ಈ ಯುದ್ಧದಲ್ಲಿ ಗಣೇಶನು ತನ್ನ ಒಂದು ದಂತವನ್ನು ಕಳೆದುಕೊಳ್ಳುತ್ತಾನೆ. ಇದರ ನಂತರ ಗಣೇಶನು ಒಂದೇ ದಂತವನ್ನು ಹೊಂದಿದ್ದು, ಏಕದಂತ ಎನ್ನುವ ಹೆಸರನ್ನು ಪಡೆದುಕೊಳ್ಳುತ್ತಾನೆ.

    ಮಹಾಭಾರತದ ಕಥೆ:
    ಮತ್ತೊಂದು ಕಥೆಯ ಪ್ರಕಾರ, ಮಹಾಭಾರತವನ್ನು ಗಣೇಶ ಮಹಾಭಾರತವನ್ನ ಬರೆಯುವ ಸಮಯದಲ್ಲಿ, ಮಹರ್ಷಿ ವೇದವ್ಯಾಸರು ಗಣೇಶ ನಾನು ಹೇಳುತ್ತಾ ಹೋಗುತ್ತೇನೆ, ನೀನು ಬರೆಯುತ್ತಾ ಹೋಗಬೇಕು ಅರ್ಧಕ್ಕೆ ನಿಲ್ಲಿಸುವಂತಿಲ್ಲ ಎಂದು ತಾಕೀತು ಮಾಡಿರುತ್ತಾರೆ. ಇದಕ್ಕೆ ಒಪ್ಪಿ ಗಣೇಶ ಬರೆಯುತ್ತಿರುತ್ತಾನೆ. ಆದರೆ ಬರೆಯುವಾಗ ಯಾವುದೋ ಸಮಸ್ಯೆ ಎದುರಾಗುತ್ತದೆ. ತಕ್ಷಣ ಗಣೇಶ ತನ್ನ ದಂತವನ್ನು ಮುರಿದು ಅದರಲ್ಲಿ ಬರೆಯಲು ಆರಂಭಿಸಿದ ಎನ್ನುವ ನಂಬಿಕೆ ಇದೆ.

  • ಮೂರು ಭಾಗಗಳಲ್ಲಿ ಬರಲಿದೆ ‘ಮಹಾಭಾರತ’- ರಾಜಮೌಳಿ ಕನಸಿಗೆ ನಾನಿ ಸಾಥ್

    ಮೂರು ಭಾಗಗಳಲ್ಲಿ ಬರಲಿದೆ ‘ಮಹಾಭಾರತ’- ರಾಜಮೌಳಿ ಕನಸಿಗೆ ನಾನಿ ಸಾಥ್

    ತೆಲುಗಿನ ಖ್ಯಾತ ಡೈರೆಕ್ಟರ್ ರಾಜಮೌಳಿ (Rajamouli) ಅವರು ಮಹೇಶ್ ಬಾಬುಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇದರ ನಡುವೆ ಮುಂದಿನ ಚಿತ್ರದ ಬಗ್ಗೆ ಅವರು ಅಪ್‌ಡೇಟ್ ಹಂಚಿಕೊಂಡಿದ್ದಾರೆ. ‘ಮಹಾಭಾರತ’ (Mahabharat) ಸಿನಿಮಾ ಮಾಡೋದಾಗಿ ‘ಬಾಹುಬಲಿ’ ಡೈರೆಕ್ಟರ್ ರಾಜಮೌಳಿ ಅನೌನ್ಸ್ ಮಾಡಿದ್ದಾರೆ. ಇದನ್ನೂ ಓದಿ:ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ‘ನನ್ನರಸಿ ರಾಧೆ’ ನಟಿ

    ನ್ಯಾಚುರಲ್ ಸ್ಟಾರ್ ನಾನಿ ಮತ್ತು ಶ್ರೀನಿಧಿ ಶೆಟ್ಟಿ ನಟನೆಯ ‘ಹಿಟ್ 3’ ಸಿನಿಮಾ ಮೇ 1ರಂದು ರಿಲೀಸ್ ಆಗಲಿದೆ. ಈ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ರಾಜಮೌಳಿ ಮಾತನಾಡಿ, ‘ಮಹಾಭಾರತ’ 3 ಭಾಗಗಳಲ್ಲಿ ಬರಲಿದೆ. ಪ್ರತಿಯೊಂದು ಭಾಷೆಯ ಪ್ರೇಕ್ಷಕರು ನೋಡಬೇಕು. ಹಾಗಾಗಿ ಬಹುಭಾಷೆಗಳಲ್ಲಿ ಮಹಾಭಾರತ ಚಿತ್ರ ಮಾಡೋದಾಗಿ ಹೇಳಿದ್ದಾರೆ. ಇದನ್ನೂ ಓದಿ:ದರ್ಶನ್ ಜೊತೆಗಿನ ಹೊಸ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ- ವಾವ್ ಎಂದ ಫ್ಯಾನ್ಸ್

    ನಾನಿ ಕೂಡ ‘ಮಹಾಭಾರತ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸೋದಾಗಿ ರಾಜಮೌಳಿ ತಿಳಿಸಿದ್ದಾರೆ. ಯಾವ ಪಾತ್ರ ಎಂಬುದನ್ನು ಅವರು ಬಿಟ್ಟು ಕೊಟ್ಟಿಲ್ಲ. ತಂದೆ ವಿಜೇಂದ್ರ ಪ್ರಸಾದ್ ಅವರು 3 ಭಾಗಗಳಲ್ಲಿ ‘ಮಹಾಭಾರತ’ ತರಲು ಪ್ಲ್ಯಾನ್ ಮಾಡಿದ್ದಾರೆ. ಇದರ ಸ್ಕ್ರೀಪ್ಟ್‌ ಕೆಲಸವು ಕೆಲವು ವರ್ಷಗಳಿಂದ ನಡೆಯುತ್ತಿದೆ ಎಂದಿದ್ದಾರೆ ರಾಜಮೌಳಿ.

    ಅಂದಹಾಗೆ, ಇತ್ತೀಚೆಗೆ ‘ಮಹಾಭಾರತ’ ಸಿನಿಮಾ ಮಾಡೋದು ನನ್ನ ಕನಸು ಎಂದು ಆಮೀರ್ ಖಾನ್ ಹೇಳಿದ್ದರು. ಇದೀಗ ರಾಜಮೌಳಿ ಕೂಡ ‘ಮಹಾಭಾರತ’ ಬರುವ ಬಗ್ಗೆ ಅನೌನ್ಸ್ ಮಾಡಿದ್ದಾರೆ. ಹಾಗಾದ್ರೆ ಎರಡೆರಡು ಮಹಾಭಾರತ ಹೆಸರಿನಲ್ಲಿ ಸಿನಿಮಾ ಬರ‍್ತಾವಾ? ಎಂದು ಅಭಿಮಾನಿಗಳಲ್ಲಿ ಗೊಂದಲ ಉಂಟಾಗಿದೆ. ರಾಜಮೌಳಿ ಮತ್ತು ಆಮೀರ್ ನಡೆ ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ. ಈ ಬಗ್ಗೆ ಇಬ್ಬರೂ ಕ್ಲ್ಯಾರಿಟಿ ಕೊಡ್ತಾರಾ ಕಾಯಬೇಕಿದೆ.

  • ಮಹಾಭಾರತ ಸಿನಿಮಾ ಮಾಡೋದಾಗಿ ಘೋಷಿಸಿದ ಆಮೀರ್ ಖಾನ್

    ಮಹಾಭಾರತ ಸಿನಿಮಾ ಮಾಡೋದಾಗಿ ಘೋಷಿಸಿದ ಆಮೀರ್ ಖಾನ್

    ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಅವರು ಕನಸಿನ ಪ್ರಾಜೆಕ್ಟ್ ಬಗ್ಗೆ ರಿವೀಲ್ ಮಾಡಿದ್ದಾರೆ. ‘ಮಹಾಭಾರತ’ (Mahabharat) ಸಿನಿಮಾ ಮಾಡುವುದು ನನ್ನ ಕನಸಾಗಿತ್ತು. ಅದನ್ನು ಇದೇ ವರ್ಷ ನನಸು ಮಾಡಿಕೊಳ್ಳುತ್ತೇನೆ ಎಂದು ಆಮೀರ್ ಖಾನ್ ಹೇಳಿದ್ದಾರೆ.‌ ಇದನ್ನೂ ಓದಿ:ಶಾ ಬಾನೋ ಸಿನಿಮಾಗೆ ಬಣ್ಣ ಹಚ್ಚಲಿದ್ದಾರೆ ಯಾಮಿ ಗೌತಮ್, ಇಮ್ರಾನ್ ಹಾಶ್ಮಿ

    ರಾಮಾಯಣ ಆಯಿತು, ಈಗ ಮಹಾಭಾರತದ ಸಿನಿಮಾ ಮಾಡಲು ಬಾಲಿವುಡ್‌ನಲ್ಲಿ ತಯಾರಿ ನಡೆಯುತ್ತಿದೆ. ಆಮೀರ್ ಮಾತನಾಡಿ, ‘ಮಹಾಭಾರತ’ ನನ್ನ ದೊಡ್ಡ ಕನಸುಗಳಲ್ಲಿ ಒಂದು. ಈ ವರ್ಷ ನಾನು ಇದರ ಕೆಲಸ ಆರಂಭಿಸುತ್ತೇನೆ. ಇದನ್ನು ‘ದಿ ಲಾರ್ಡ್ ಆಫ್ ದಿ ರಿಂಗ್ಸ್’ ಮಾದರಿಯಲ್ಲಿ ಹಲವಾರು ಭಾಗಗಳಲ್ಲಿ ತರಲು ಪ್ಲ್ಯಾನ್ ಮಾಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿದ ಬಾಲಿವುಡ್ ಸ್ಟಾರ್ಸ್‌

    ಇದರ ಬರವಣಿಗೆಗೆ ಕೊಂಚ ಸಮಯ ಬೇಕಿದೆ. ಆದರೆ ಇದರಲ್ಲಿ ನಾನು ನಟಿಸುತ್ತೇನೋ ಇಲ್ಲವೋ ಖಚಿತವಿಲ್ಲ. ಆದರೆ ಪ್ರತಿಯೊಂದು ಪಾತ್ರಕ್ಕೂ ಸೂಕ್ತ ನಟರನ್ನೇ ಆಯ್ಕೆ ಮಾಡುತ್ತೇನೆ ಎಂದು ಮಹಾಭಾರತ ಸಿನಿಮಾ ಮಾಡುವ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ.


    ಅಂದಹಾಗೆ, ಕಡೆಯದಾಗಿ 2022ರಲ್ಲಿ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ಆಮೀರ್ ನಟಿಸಿದ್ದರು. ಈಗ ‘ಸಿತಾರ್ ಜಮೀನ್ ಪರ್’ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

  • ಮಹಾಭಾರತವನ್ನು ಗಣಪತಿಯೇ ಬರೆದಿದ್ದು ಯಾಕೆ?

    ಮಹಾಭಾರತವನ್ನು ಗಣಪತಿಯೇ ಬರೆದಿದ್ದು ಯಾಕೆ?

    ಹಾಭಾರತ (Mahabharata) ಯುದ್ಧ ಮುಗಿದ ನಂತರ ವೇದವ್ಯಾಸರು (Vedavyasa) ಹಿಮಾಲಯದಲ್ಲಿ ಧ್ಯಾನ ಮಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ಸೃಷ್ಟಿಕರ್ತ ಬ್ರಹ್ಮ ಮಹಾಭಾರತ ಮಹಾಕಾವ್ಯವನ್ನು ಬರೆಯುವಂತೆ ಹೇಳುತ್ತಾನೆ. ಸಂಪೂರ್ಣ ಯುದ್ಧವನ್ನು ವೀಕ್ಷಿಸಿದ್ದರಿಂದ ಮತ್ತು ಎಲ್ಲಾ ಪಾತ್ರಗಳನ್ನು ವೈಯಕ್ತಿಕವಾಗಿ ತಿಳಿದಿದ್ದರಿಂದ ನೀವೇ ಕಥೆ ಬರೆಯಲು ಸೂಕ್ತ ವ್ಯಕ್ತಿ ಎಂದು ಸೂಚಿಸುತ್ತಾನೆ.

    ಮಹಾಭಾರತ ಸಾಮಾನ್ಯ ಕಥೆಯಲ್ಲ ಎಂಬುದು ವೇದವ್ಯಾಸರಿಗೆ ಗೊತ್ತಿತ್ತು. ಇದು ಸಂಕೀರ್ಣ ಮತ್ತು ದೀರ್ಘವಾಗಿರಲಿದೆ ಎನ್ನುವುದು ತಿಳಿದಿತ್ತು. ನಾನು ಬರೆದರೆ ಬಹಳ ಸಮಯ ಬೇಕಾಗಬಹುದು ಎನ್ನುವುದರನ್ನು ಅರಿತ ವೇದವ್ಯಾಸರು ಸಮರ್ಥ ಕಥೆ ಬರೆಯುವವರಿಗೆ ಹುಡುಕಾಟ ನಡೆಸುತ್ತಿದ್ದರು. ಕೊನೆಗೆ ತಮ್ಮ ಮಹಾಜ್ಞಾನದಿಂದ ಗಣಪತಿಯಿಂದ (Ganapathi) ಮಾತ್ರ ಬರೆಯಲು ಸಾಧ್ಯ ಎಂದು ತಿಳಿದು ಆತನನ್ನು ಸಂಪರ್ಕಿಸುತ್ತಾರೆ.

    ವ್ಯಾಸರ ಮನವಿಯನ್ನು ಒಪ್ಪಿದರೂ ಗಣೇಶ ಎರಡು ಷರತ್ತನ್ನು ವಿಧಿಸುತ್ತಾನೆ. ವಿರಾಮವಿಲ್ಲದೆ ಸಂಪೂರ್ಣವಾಗಿ ಕಥೆಯನ್ನು ಹೇಳಬೇಕು. ಒಂದು ವೇಳೆ ವಿರಾಮ ನೀಡಿ ನಿಲ್ಲಿಸಿದರೆ ನಾನು ಮಧ್ಯದಲ್ಲೇ ಕಥೆ ಬರೆಯುವುದನ್ನು ನಿಲ್ಲಿಸುತ್ತೇನೆ ಎಂದು ಷರತ್ತನ್ನು ಹಾಕುತ್ತಾನೆ. ಈ ಷರತ್ತನ್ನು ವೇದವ್ಯಾಸರು ಒಪ್ಪಿದ ನಂತರ ಅವರು ಗಣೇಶನಿಗೆ, ಕಥಾವಸ್ತು ಅಥವಾ ವಾಕ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೇ ಬರೆಯುವಂತಿಲ್ಲ ಎಂದು ಷರತ್ತು ವಿಧಿಸುತ್ತಾರೆ. ಈ ಷರತ್ತನ್ನು ಒಪ್ಪಿದ ನಂತರ ಶುಭ ಮುಹೂರ್ತದಲ್ಲಿ ಲಿಪಿಕಾರ ಗಣಪತಿಗೆ ವಂದಿಸಿ ವ್ಯಾಸರು ಕಥೆ ಹೇಳಲು ಶುರು ಮಾಡುತ್ತಾರೆ. ಇದನ್ನೂ ಓದಿ: ಒಂದೇ ಕಿವಿ, ಕಾಲು, ಅರ್ಧ ಹೊಟ್ಟೆ! – ಈ ಗಣಪನ ವಿಶೇಷವೇನು?

    ಗಣೇಶ ಬಹಳ ವೇಗವಾಗಿ ಮಹಾಕಾವ್ಯವನ್ನು ಬರೆಯುತ್ತಿದ್ದ. ಇದರಿಂದಾಗಿ ವೇದವ್ಯಾಸರಿಗೆ ಸ್ವಲ್ಪ ಕಷ್ಟವಾಯಿತು. ಕಷ್ಟವಾಯಿತು ಅಂತ ನಿಲ್ಲಿಸಿದರೆ ಗಣೇಶ ಕಾವ್ಯ ಬರೆಯುವುದನ್ನು ನಿಲ್ಲಿಸುತ್ತಾನೆ ಎನ್ನುವುದನ್ನು ಅರಿತಿದ್ದ ವೇದವ್ಯಾಸರು ಮಧ್ಯೆ ಮಧ್ಯೆ ಉದ್ದೇಶಪೂರ್ವಕವಾಗಿ ಕೆಲವು ಕ್ಲಿಷ್ಟಕರ ವಾಕ್ಯಗಳನ್ನು ಹೇಳತೊಡಗಿದರು. ಇದರಿಂದಾಗಿ ಗಣೇಶ ಅರ್ಥಮಾಡಿಕೊಂಡು ಅದನ್ನು ಬರೆಯುವಷ್ಟರಲ್ಲಿ ಕೆಲ ಸಮಯ ತೆಗೆದುಕೊಳ್ಳುತ್ತಿದ್ದ. ಇದರಿಂದಾಗಿ ವೇದವ್ಯಾಸರಿಗೆ ಸ್ವಲ್ಪ ಸಮಯ ಸಿಗುತ್ತಿತ್ತು. ಈ ಸಮಯದಲ್ಲಿ ಅವರು ಮುಂದಿನ ಕಥೆಯನ್ನು ನೆನಪು ಮಾಡಿಕೊಂಡು ಹೇಳುತ್ತಿದ್ದರು..

    ಗಣೇಶ ವೇಗವಾಗಿ ಬರೆಯುತ್ತಿದ್ದಾಗ ಲೇಖನಿ ತುಂಡಾಗುತ್ತದೆ. ಈ ವೇಳೆ ಏನು ಮಾಡುವುದು ಎಂದು ತಿಳಿಯದೇ ಇದ್ದಾಗ ಬುದ್ಧಿವಂತನಾಗಿದ್ದ ಗಣೇಶ ತನ್ನ ದಂತವನ್ನು ಮುರಿದು ಅದನ್ನು ಲೇಖನಿಯನ್ನಾಗಿ ಮಾಡಿ ಕಥೆ ಬರೆಯುವುದನ್ನು ಮುಂದುವರಿಸಿದ. ಗಣೇಶ ತನ್ನ ದಂತ ಮುರಿಯಲು ಕಾರಣ ಆತನೇ ವಿಧಿಸಿದ ಷರತ್ತು. ವಿರಾಮವಿಲ್ಲದೇ ಹೇಳಿದರೆ ಮಾತ್ರ ನಾನು ಕಥೆ ಬರೆಯುತ್ತೇನೆ ಎಂದು ಹೇಳಿದ್ದರಿಂದ ಆತ ಬೇರೆ ಲೇಖನಿಯ ಮೊರೆ ಹೋಗದೇ ತನ್ನ ದಂತವನ್ನೇ ತುಂಡರಿಸಿ ಅದನ್ನು ಲೇಖನಿಯನ್ನಾಗಿ ಮಾಡಿದ್ದ. ಈ ಕಾರಣಕ್ಕೆ ಗಣೇಶನಿಗೆ ʼಏಕದಂತʼ ಎಂಬ ಹೆಸರು ಬಂದಿದೆ ಎಂದು ಪುರಾಣ ಕಥೆಯಿದೆ.

    ಮಹಾಭಾರತ 18 ಪರ್ವಗಳನ್ನು ಒಳಗೊಂಡಿದ್ದು ಇದರಲ್ಲಿ ಆದಿ ಪರ್ವ ಮೊದಲನೆಯದ್ದು. ಆದಿ ಪರ್ವದ ಮೊದಲ ಅಧ್ಯಾಯದಲ್ಲಿ ವ್ಯಾಸರು ಮಹಾಭಾರತವನ್ನು ಹೇಗೆ ನಿರ್ದೇಶಿಸಿದರು ಮತ್ತು ನಂತರ ಅದನ್ನು ಬರೆದದ್ದು ಹೇಗೆ ಎನ್ನುವುದನ್ನು ವಿವರಿಸುತ್ತದೆ.

     

  • ನಾಗರ ಪಂಚಮಿ ವಿಶೇಷ: ಜನಮೇಜಯ ಸರ್ಪಯಾಗಕ್ಕೆ ಮುಂದಾಗಿದ್ದು ಯಾಕೆ?

    ನಾಗರ ಪಂಚಮಿ ವಿಶೇಷ: ಜನಮೇಜಯ ಸರ್ಪಯಾಗಕ್ಕೆ ಮುಂದಾಗಿದ್ದು ಯಾಕೆ?

    ನಾಗರ ಪಂಚಮಿ ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ. ನಾಗರ ಪಂಚಮಿಯ (Nagara Panchami) ನಂತರ ಸಾಲು ಸಾಲು ಹಬ್ಬಗಳು ಬರತೊಡಗುತ್ತದೆ. ವರ ಮಹಾಲಕ್ಷ್ಮಿ ಹಬ್ಬ, ಗಣೇಶ ಚತುರ್ಥಿ, ರಕ್ಷಾ ಬಂಧನ… ಹೀಗೆ ಒಂದರ ಹಿಂದೆ ಒಂದು ಬರತೊಡಗುತ್ತದೆ.

    ಪುರಾಣದಲ್ಲಿ ಹಾವಿನ ಕುರಿತಾಗಿ ಹಲವು ಕಥೆಗಳು ಇದೆ. ಅದರಲ್ಲಿ ಪ್ರಮುಖವಾಗಿ ಜನಮೇಜಯ ನಡೆಸಿದ್ದ ಸರ್ಪಯಾಗ ಬಹಳ ವಿಶೇಷ. ಜನಮೇಜಯ ಯಾರು? ಆತ ಸರ್ಪಯಾಗ ನಡೆಸಿದ್ದು ಯಾಕೆ? ನಾಗರ ಪಂಚಮಿಗೆ ಏನು ಸಂಬಂಧ ಎಲ್ಲಾ ಕಥೆಗಳನ್ನು ಇಲ್ಲಿ ತಿಳಿಸಲಾಗಿದೆ.

    ಏನಿದು ಸರ್ಪಯಾಗ?
    ಅಭಿಮನ್ಯುವಿನ ಪುತ್ರ ಪರೀಕ್ಷಿತನ ಮಗನಾದ ಜನಮೇಜಯ (Janamejaya) ವೈಶಂಪಾಯ ಮಹರ್ಷಿಯಿಂದ ಮಹಾಭಾರತದ (Mahabharata) ಕಥೆಯನ್ನು ಕೇಳುತ್ತಾನೆ. ತನ್ನ ತಂದೆ ಪರೀಕ್ಷಿತನು ಸರ್ಪ ರಾಜ ತಕ್ಷಕನಿಂದ ಕಚ್ಚಿ ಮೃತಪಟ್ಟಿದ್ದನ್ನು ತಿಳಿದು ಸರ್ಪಗಳ ಮೇಲೆ ಸೇಡು ತೀರಿಸಲು ಮುಂದಾಗುತ್ತಾನೆ. ನನ್ನ ತಂದೆಯನ್ನು ಕಚ್ಚಿದ ಸರ್ಪಗಳು ಲೋಕದಲ್ಲೇ ಇರಬಾರದು ಎಂದು ಸಂಕಲ್ಪ ಮಾಡಿ ದೊಡ್ಡ ಸರ್ಪಯಾಗಕ್ಕೆ ಮುಂದಾಗುತ್ತಾನೆ. ಇದನ್ನೂ ಓದಿ: ನಾಗರ ಪಂಚಮಿ | ಭಾರತದಲ್ಲಿ ಎಲ್ಲೆಲ್ಲಿ, ಆಚರಣೆ ಹೇಗೆ?

    ಪರೀಕ್ಷಿತನು ತಕ್ಷಕನಿಂದ ಸಾವನ್ನಪ್ಪಲು ಕಾರಣವಿದೆ. ಕುರುಕ್ಷೇತ್ರ ಯುದ್ಧ ಮುಗಿದು ಕೆಲ ವರ್ಷ ಆಡಳಿತ ನಡೆಸಿದ ಪಾಂಡವರು ಸಶರೀರ ಸ್ವರ್ಗಾರೋಹಣಕ್ಕೆ ತೆರಳಿದರು. ಪಾಂಡವರ ನಂತರ ಅಭಿಮನ್ಯು – ಉತ್ತರೆಯ ಮಗ ಪರೀಕ್ಷಿತ ಹಸ್ತಿನಾವತಿಯ ಅರಸನಾದ. ಪರೀಕ್ಷಿತ ಒಮ್ಮೆ ಕಾಡಿಗೆ ಬೇಟೆಗೆಂದು ಹೋದಾಗ ಬಾಯಾರಿಕೆ ಆಗುತ್ತದೆ. ಈ ವೇಳೆ ಆತ ಶಮಿಕ ಮುನಿಯ ಆಶ್ರಮವನ್ನು ಪ್ರವೇಶಿಸುತ್ತಾನೆ. ಮುನಿ ಧ್ಯಾನಸ್ಥನಾಗಿದ್ದ ಕಾರಣ ಪರೀಕ್ಷಿತನನ್ನು ಸರಿಯಾಗಿ ಸತ್ಕರ ಮಾಡಿರಲಿಲ್ಲ. ಇದರಿಂದ ಕೋಪಗೊಂಡ ಪರೀಕ್ಷಿತ ಅಲ್ಲೇ ಸತ್ತು ಬಿದ್ದಿದ್ದ ಒಂದು ಹಾವನ್ನು ಮುನಿಯ ಕೊರಳಿಗೆ ಹಾಕಿ ಹೊರಟುಹೋಗುತ್ತಾನೆ. ನಂತರ ಮುನಿಪುತ್ರ ಶೃಂಗಿ ಆಶ್ರಮಕ್ಕೆ ಬಂದು ತಂದೆಯ ಕೊರಳಿನಲ್ಲಿ ಹಾವು ಇರುವುದನ್ನು ಕಂಡು ಸಿಟ್ಟಾಗುತ್ತಾನೆ. ಅಷ್ಟೇ ಅಲ್ಲದೇ ನನ್ನ ತಂದೆಯ ಕೊರಳಿಗೆ ಸತ್ತ ಹಾವನ್ನು ಹಾಕಿ ಅವಮಾನ ಮಾಡಿದವನು 7 ದಿನದ ಒಳಗಡೆ ಸರ್ಪ ಕಡಿದು ಸಾವನ್ನಪ್ಪಲಿ ಎಂದು ಶಪಿಸುತ್ತಾನೆ. ಈ ಶಾಪಕ್ಕೆ ತುತ್ತಾಗಿದ್ದ ಪರೀಕ್ಷಿತ ತಕ್ಷಕನಿಂದ ಸಾವನ್ನಪ್ಪುತ್ತಾನೆ.

    ತಂದೆಯ ಸಾವಿಗೆ ತಕ್ಷಕ ಕಾರಣ ಎಂದು ತಿಳಿದ ಜನಮೇಜ ದೊಡ್ಡ ಸರ್ಪಯಾಗ ಮಾಡುವಂತೆ ಋತ್ವಿಜರಿಗೆ ಸೂಚಿಸುತ್ತಾನೆ. ಸರ್ಪ ಯಾಗದಲ್ಲಿ ಋತ್ವಿಜರು ಒಂದೊಂದೇ ಸರ್ಪದ ಹೆಸರು ಹೇಳಿ ಆವಾಹನೆ ಮಾಡುತ್ತಿದ್ದರು. ಸರ್ಪವು ಪ್ರಜ್ವಲಿಸಿ ಉರಿಯುತಿದ್ದ ಯಾಗ ಕುಂಡದೊಳಗೆ ಬಿದ್ದು ಒದ್ದಾಡಿ ಬೆಂದುಹೋಗುತ್ತಿದ್ದವು.

    ಎಲ್ಲಾ ಹಾವುಗಳ ದಹನವಾಗಬೇಕೆಂಬ ಪ್ರತಿಜ್ಞೆ ಈಡೇರಬೇಕೆಂದು ಜನಮೇಜಯ ಪಣ ತೊಟ್ಟಿದ್ದ. ತನ್ನ ಸಂತತಿಯವರು ಎಲ್ಲರೂ ಬಲಿಯಾಗುತ್ತಿರುವುದನ್ನು ಕಂಡು ತಕ್ಷಕ ದೇವೇಂದ್ರನ ಮೊರೆ ಹೋಗಿ ರಕ್ಷಿಸುವಂತೆ ಕೇಳಿಕೊಳ್ಳುತ್ತಾನೆ. ಆಗ ದೇವೇಂದ್ರ ನನ್ನನ್ನು ಗಟ್ಟಿಯಾಗಿ ಹಿಡಿದಿಕೋ ಯಾವುದೇ ಯಾಗಗಳು ನಿನ್ನನ್ನು ಸೆಳೆಯಲು ಸಾಧ್ಯವಾಗುವುದಿಲ್ಲ ಎಂದು ಅಭಯ ನೀಡುತ್ತಾನೆ. ಇಂದ್ರನ ಮಾತಿನಂತೆ ತಕ್ಷಕ ಆತನನ್ನು ಗಟ್ಟಿ ಹಿಡಿದುಕೊಳ್ಳುತ್ತಾನೆ.

    ಸರ್ಪಯಾಗದ ತೀವ್ರತೆಗೆ ಬೆದರಿದ ಸರ್ಪಗಳು ತಮ್ಮ ಜರತ್ಕಾರುವಿನ ಮೊರೆ ಹೋಗುತ್ತವೆ. ಸರ್ಪಗಳ ಪ್ರಾರ್ಥನೆಗೆ ಒಗೊಟ್ಟ ಜರತ್ಕಾರು ತನ್ನ ಪುತ್ರನಾದ ಆಸ್ತಿಕ ಋಷಿಯನ್ನು ಜನಮೇಜಯನಲ್ಲಿಗೆ ಕಳುಹಿಸುತ್ತಾಳೆ. ಬ್ರಹ್ಮಚಾರಿಯಾದ ಆಸ್ತಿಕ ಜನಮೇಜಯ ನಡೆಸುತ್ತಿದ್ದ ಯಾಗಶಾಲೆಗೆ ಬರುತ್ತಾನೆ. ಇಂದ್ರ ಸಹಿತವಾಗಿ ತಕ್ಷಕ ಯಾಗಕ್ಕೆ ಬೀಳುವ ಸಮಯದಲ್ಲಿ ಯಾಗ ಶಾಲೆ ಪ್ರವೇಶಿಸಿದ ತಕ್ಷಕ ಬ್ರಹ್ಮಚಾರಿಗೆ ದಕ್ಷಿಣೆ ನೀಡದೇ ಯಾಗ ಹೇಗೆ ನಡೆಸುತ್ತೀರಿ ಎಂದು ಪ್ರಶ್ನಿಸುತ್ತಾನೆ.

    ಈ ವೇಳೆ ಇಕ್ಕಟ್ಟಿಗೆ ಸಿಲುಕಿದ ಜನಮೇಜಯ, ನಿನಗೆ ಏನು ಬೇಕೋ ಕೇಳು. ಅದನ್ನು ನಾನು ನೀಡುತ್ತೇನೆ ಎಂದು ಹೇಳುತ್ತಾನೆ. ತಕ್ಷನಿಂದ ಈ ಮಾತು ಬಂದ ಕೂಡಲೇ ಈಗಲೇ ಸರ್ಪಯಾಗ ನಿಲ್ಲಿಸು. ಇದೇ ನೀನು ನನಗೆ ನೀಡುವ ದಕ್ಷಿಣೆ ಎಂದು ಆಸ್ತಿಕ ಹೇಳುತ್ತಾನೆ. ಆಸ್ತಿಕ ಕೇಳಿದ ಈ ದಕ್ಷಿಣೆಯಿಂದ ಏನು ಮಾಡಬೇಕು ಎಂದು ತೋಚದೇ ಕೊನೆಗೆ ಕೊಟ್ಟ ಮಾತಿನಂತೆ ಯಾಗವನ್ನು ನಿಲ್ಲಿಸಿದ. ತನ್ನ ತಂದೆಯ ಸಾವಿಗೆ ಕಾರಣನಾದ ತಕ್ಷಕ ಕಣ್ಣೆದುರೇ ಇದ್ದರೂ ಜನಮೇಜಯ ಏನು ಮಾಡುವಂತಿರಲಿಲ್ಲ.

    ಯಾಗ ನಿಂತ ಬಳಿಕ ಆಸ್ತಿಕ, ಪ್ರಾಣಿ ಹಿಂಸೆ ಮಾಡಬಾರದು ಜನಮೇಜಯನಿಗೆ ಎಂದು ಬುದ್ಧಿ ಹೇಳುತ್ತಾನೆ. ನಂತರ ಇಂದ್ರ ಶೃಂಗಿಯ ಶಾಪದಿಂದ ನಿನ್ನ ತಂದೆ ಪರೀಕ್ಷಿತ ಮೃತಪಡುತ್ತಾನೆ. ಇದರಲ್ಲಿ ತಕ್ಷಕನ ಪಾತ್ರ ಏನಿಲ್ಲ ಎಂದು ತಿಳಿಹೇಳುತ್ತಾನೆ. ಇಂದ್ರನ ಹೇಳಿದ ಕಥೆಯಿಂದ ಜನಮೇಜಯನಿಗೆ ಸರ್ಪಗಳ ಮೇಲಿದ್ದ ಸಿಟ್ಟು ಕಡಿಮೆಯಾಗುತ್ತದೆ.

    ನಾಗಕುಲವೇ ನಾಶವಾಗುವ ಸಂದರ್ಭದಲ್ಲಿ ಆಸ್ತಿಕ ಬಂದು ಈ ಸರ್ಪ ಯಜ್ಞವನ್ನು ತಡೆದದ್ದು ಶ್ರಾವಣ ಮಾಸದ ಐದನೇ ದಿನ. ಆಸ್ತಿಕ ನಾಗಯಜ್ಞ ನಿಲ್ಲಿಸಿ ನಾಗಗಳ ಕುಲವನ್ನು ಉಳಿಸಿದ ದಿನವನ್ನೇ ನಾಗರ ಪಂಚಮಿಯಾಗಿ ಆಚರಿಸಲಾಗುತ್ತದೆ.

  • ಮಾಜಿ ಪತ್ನಿ ವಿರುದ್ಧ ದೂರು ನೀಡಿದ ಮಹಾಭಾರತದ ‘ಕೃಷ್ಣ’ನ ಪಾತ್ರಧಾರಿ

    ಮಾಜಿ ಪತ್ನಿ ವಿರುದ್ಧ ದೂರು ನೀಡಿದ ಮಹಾಭಾರತದ ‘ಕೃಷ್ಣ’ನ ಪಾತ್ರಧಾರಿ

    ಹಾಭಾರತ (Mahabharata) ಧಾರಾವಾಹಿಯಲ್ಲಿ ಕೃಷ್ಣನ (Krishna) ಪಾತ್ರ ಮಾಡುವ ಮೂಲಕ ಜನಪ್ರಿಯರಾಗಿರುವ ನಿತೀಶ್ ಭಾರದ್ವಾಜ್ (Nitish Bhardwaj) ತಮ್ಮ ಮಾಜಿ ಪತ್ನಿ, ಐಎಎಸ್ ಅಧಿಕಾರಿ ಸ್ಮಿತಾ (Smita) ವಿರುದ್ಧ ದೂರು (Complaint) ನೀಡಿದ್ದಾರೆ. ಮಾಜಿ ಪತ್ನಿಯಿಂದ ತಮಗೆ ಮಾನಸಿಕ ಕಿರುಕುಳ ಆಗುತ್ತಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಐಎಎಸ್ ಅಧಿಕಾರಿಯಾಗಿರುವ ಸ್ಮಿತಾ ಮತ್ತು ನಿತೇಶ್ 2019ರಲ್ಲಿ ಮದುವೆಯಾಗಿದ್ದರು. ಇವರಿಗೆ ಅವಳಿ ಜವಳಿ ಮಕ್ಕಳಿದ್ದಾರೆ. ಮದುವೆಯಾದ 12 ವರ್ಷಗಳ ನಂತರ ಈ ದಂಪತಿ ವಿಚ್ಚೇದನ ಪಡೆದಿದ್ದರು. ಇದೀಗ ತಮ್ಮ ಮಕ್ಕಳನ್ನು ತಮಗೆ ಭೇಟಿ ಆಗಲು ಆಗುತ್ತಿಲ್ಲ. ಮಾಜಿ ಪತ್ನಿ ಅದಕ್ಕೆ ಅವಕಾಶ ಕೊಡದೇ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಅವರು ದೂರು ನೀಡಿದ್ದಾರೆ.

     

    ಭೋಪಾಲ್ ಪೊಲೀಸ್ ಆಯುಕ್ತ ಹರಿನಾರಾಯಣಾಚಾರಿ ಅವರಿಗೆ ದೂರು ನೀಡಿದ್ದು, ಈ ಕುರಿತಂತೆ ಪೊಲೀಸ್ ಆಯುಕ್ತರು ಪ್ರತಿಕ್ರಿಯೆ ನೀಡಿದ್ದಾರೆ. ನಿತೀಶ್ ನೀಡಿರುವ ದೂರನ್ನು ಸ್ವೀಕರಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ತನಿಖೆಯ ನಂತರ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದಿದ್ದಾರೆ.

  • ಮಹಾಭಾರತವನ್ನು ಕಾಜಿ ನಜ್ರುಲ್ ಇಸ್ಲಾಂ ಬರೆದಿದ್ದಾರೆ: ಮಮತಾ ಬ್ಯಾನರ್ಜಿ

    ಮಹಾಭಾರತವನ್ನು ಕಾಜಿ ನಜ್ರುಲ್ ಇಸ್ಲಾಂ ಬರೆದಿದ್ದಾರೆ: ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ರಾಕೇಶ್ ರೋಷನ್ ಪ್ರಮಾದದ ಬೆನ್ನಲ್ಲೇ ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಮಹಾಭಾರತವನ್ನು (Mahabharat) ಪೂಜ್ಯ ಋಷಿ ವೇದವ್ಯಾಸರಿಂದ ಬರೆಯಲಾಗಿಲ್ಲ, ಇದನ್ನು ಬಂಡಾಯ ಕವಿ ಕಾಜಿ ನಜ್ರುಲ್ ಇಸ್ಲಾಂ (Kazi Nazrul Islam) ಬರೆದಿದ್ದಾರೆ ಎಂದು ಹೇಳಿದ್ದಾರೆ. ಇವರ ಈ ವಿವಾದಾತ್ಮಕ ಹೇಳಿಕೆಯ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.

    ಕಾಜಿ ನಜ್ರುಲ್ ಇಸ್ಲಾಂ ಬಂಗಾಳದ ಬಂಡಾಯ ಬಾರ್ಡ್ ಎಂದು ಸಾಮಾನ್ಯವಾಗಿ ಉಲ್ಲೇಖಿಸಲ್ಪಡುತ್ತಾರೆ. ಇವರು ವಸಾಹತುಶಾಹಿ ವಿರೋಧಿ ಕವಿತೆಗಳು ಮತ್ತು ಕೋಮು ಸೌಹಾರ್ದವನ್ನು ಉತ್ತೇಜಿಸುವ ಸಾಹಿತ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಇದೀಗ ಮಮತಾ ಬ್ಯಾನರ್ಜಿ ಮಹಾಭಾರತವನ್ನು ಕಾಜಿ ನಜ್ರುಲ್ ಅವರು ಬರೆದಿದ್ದರೂ ಇದರ ಕ್ರೆಡಿಟ್ ವೇದವ್ಯಾಸರಿಗೆ ಸಲ್ಲುತ್ತದೆ ಎಂದು ಹೇಳಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: 2024ಕ್ಕೆ ಮತ್ತೆ ಬರ್ತೀನಿ – ಹವಾ ಎಬ್ಬಿಸಿದ ಮೋದಿ ಟರ್ಮಿನೇಟರ್‌ ಪೋಸ್ಟರ್‌

    ಟಿಎಂಸಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧ್ಯಯನಗಳು ಒಬ್ಬ ವ್ಯಕ್ತಿಯನ್ನು ನಿಜವಾದ ಅರ್ಥದಲ್ಲಿ ಕಲಿಯುವಂತೆ ಮಾಡುವುದಿಲ್ಲ. ಒಬ್ಬ ವ್ಯಕ್ತಿ ವಿಶಾಲವಾದ ಹೃದಯವನ್ನು ಹೊಂದಿರಬೇಕು. ನಮ್ಮ ಮಹಾಪುರುಷರು ಬರೆದದ್ದನ್ನು ಓದಿ ಮತ್ತು ಅರ್ಥಮಾಡಿಕೊಳ್ಳಿ. ರವೀಂದ್ರನಾಥ, ನಜ್ರುಲ್ ಮತ್ತು ವಿವೇಕಾನಂದರ ಬಗ್ಗೆ ಓದಿ. ಮಹಾಭಾರತವನ್ನು ಬರೆದವರು ನಜ್ರುಲ್ ಇಸ್ಲಾಂ ಎಂದರು. ಇದನ್ನೂ ಓದಿ: 7,000 ರಾಖಿ ಕಟ್ಟಿಸಿಕೊಂಡು ವಿಶ್ವ ದಾಖಲೆ ಬರೆದ ಜನಪ್ರಿಯ ಆನ್‌ಲೈನ್ ಬೋಧಕ ಖಾನ್ ಸರ್

    ಈ ಹಿಂದೆ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಚಂದ್ರನಲ್ಲಿಗೆ ಹೋಗಿದ್ದಾರೆ ಎಂದು ಹೇಳಿದ್ದರು. ಅಲ್ಲದೇ ಇಂದಿರಾ ಗಾಂಧಿ ಚಂದ್ರನಲ್ಲಿಗೆ ಹೋದಾಗ ಅಲ್ಲಿಂದ ಭಾರತ ಹೇಗೆ ಕಾಣುತ್ತದೆ ಎಂದು ರಾಕೇಶ್ ಶರ್ಮಾ ಅವರನ್ನು ಕೇಳಿದ್ದಾರೆ. ಇದಕ್ಕೆ ರಾಕೇಶ್ ರೋಷನ್ ಸಾರೇ ಜಹಾಂ ಸೇ ಅಚ್ಚಾ ಎಂದು ಉತ್ತರಿಸಿದ್ದಾರೆ ಎಂಬ ಹೇಳಿಕೆಗಳನ್ನು ನೀಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇಷ್ಟು ಮಾತ್ರವಲ್ಲದೇ ಗಗನಯಾತ್ರಿ ರಾಕೇಶ್ ಶರ್ಮಾ ಅವರನ್ನು ಬಾಲಿವುಡ್ ನಟ ಹೃತಿಕ್ ರೋಷನ್ ಅವರ ತಂದೆ ರಾಕೇಶ್ ರೋಷನ್ ಎಂದು ತಪ್ಪಾಗಿ ಹೇಳಿ ಎಲ್ಲರನ್ನೂ ಗೊಂದಲಕ್ಕೀಡುಮಾಡಿದ್ದರು. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ INDIA ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಲಿ: ಎಎಪಿ ಮುಖ್ಯ ವಕ್ತಾರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲವ್ ಜಿಹಾದ್ ಮಹಾಭಾರತದಲ್ಲೂ ನಡೆದಿದೆ: ವಿವಾದಿತ ಹೇಳಿಕೆ ನೀಡಿದ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ

    ಲವ್ ಜಿಹಾದ್ ಮಹಾಭಾರತದಲ್ಲೂ ನಡೆದಿದೆ: ವಿವಾದಿತ ಹೇಳಿಕೆ ನೀಡಿದ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ

    ದಿಸ್ಪುರ್: ಲವ್ ಜಿಹಾದ್ (Love Jihad) ವಿಚಾರವಾಗಿ ಅಸ್ಸಾಂನಲ್ಲಿ (Assam) ಭಾರೀ ರಾಜಕೀಯ ನಡೆದಿದೆ. ಬಿಜೆಪಿಗರ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಕಾಂಗ್ರೆಸ್ ನಾಯಕರೊಬ್ಬರು ಕೃಷ್ಣ-ರುಕ್ಮಿಣಿ (Krishna Rukmini) ಪ್ರೇಮಗಾಥೆಗೆ ಪರೋಕ್ಷವಾಗಿ ಲವ್ ಜಿಹಾದ್ ಟಚ್ ನೀಡಿದ್ದಾರೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಇತ್ತೀಚೆಗೆ ಅಸ್ಸಾಂನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಹಿಂದೂ ಪತ್ನಿ ಮತ್ತು ಆಕೆಯ ತಂದೆ ತಾಯಿಯನ್ನು ಕೊಂದಿದ್ದ. ಈ ಪ್ರಕರಣವನ್ನು ಲವ್ ಜಿಹಾದ್ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಕರೆದಿದ್ದರು. ಈ ಹೇಳಿಕೆಯನ್ನು ವಿರೋಧಿಸುವ ಭರದಲ್ಲಿ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಬೋರಾ (Bhupen Borah) ಕೃಷ್ಣ-ರುಕ್ಮಿಣಿ ಮದುವೆ ವಿಚಾರವನ್ನು ಎಳೆದುತಂದಿದ್ದಾರೆ.

    ಲವ್ ಜಿಹಾದ್ ಮಹಾಭಾರತದಲ್ಲೂ (Mahabharat) ನಡೆದಿದೆ. ಪುರಾಣ ಗ್ರಂಥಗಳಲ್ಲಿ ಕೃಷ್ಣನು ರುಕ್ಮಿಣಿಯನ್ನು ಓಡಿಸಿಕೊಂಡು ಹೋಗಿರುವ ಉಲ್ಲೇಖವಿದೆ. ಇಂದಿನ ಕಾಲದಲ್ಲಿ ಬೇರೆ ಬೇರೆ ಧರ್ಮ, ಬೇರೆ ಬೇರೆ ಜಾತಿಗಳ ಯುವಕ-ಯುವತಿಯರು ಮದುವೆ ಆಗುವುದು ಸಾಮಾನ್ಯವಾಗಿದೆ. ಇದನ್ನು ಲವ್ ಜಿಹಾದ್‌ಗೆ ಹೋಲಿಸುವುದು ಸರಿಯಲ್ಲ ಎಂದು ಬೋರಾ ಹೇಳಿಕೆ ನೀಡಿದ್ದಾರೆ.

    ಈ ಹೇಳಿಕೆಗೆ ಕೆರಳಿದ ಹಿಮಾಂತ ಶರ್ಮಾ, ಇದು ಖಂಡನೀಯ, ಎಲ್ಲಾ ಸನಾತನಿಗಳು ಬೋರಾ ವಿರುದ್ಧ ಕೇಸ್ ದಾಖಲಿಸಿದರೆ, ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳದೇ ಇರಲು ಸಾಧ್ಯವಿಲ್ಲ. ಯಾರಾದರೂ ದೂರು ನೀಡಿದರೆ ಅವರನ್ನು ಬಂಧಿಸಲಾಗುತ್ತದೆ ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಡ್ರೋನ್ ಮೂಲಕ ಪಂಜಾಬ್‌ಗೆ ಡ್ರಗ್ಸ್ ಸಪ್ಲೈ ಮಾಡಲಾಗ್ತಿದೆ: ಪಾಕ್ ಪ್ರಧಾನಿ ಆಪ್ತ

    ತಮ್ಮ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಇದೀಗ ಭೂಪೇನ್ ಬೋರಾ ವೈಷ್ಣವ ಪ್ರಾರ್ಥನೆ ಹಾಡುವ ಮೂಲಕ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ: ರಾಹುಲ್‌ಗೆ ಮೊಣಕಾಲು ನೋವು – ಕೇರಳದಲ್ಲಿ ಆಯುರ್ವೇದ ಚಿಕಿತ್ಸೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]