ಚೆನ್ನೈ: ಉಗ್ರ ಹಫೀಜ್ ಸಯೀದ್, ಕಾಶ್ಮೀರ ವಿಷಯ ಸೇರಿದಂತೆ ಭಾರತದ ವಿರುದ್ಧವಾಗಿ ಬಹಿರಂಗವಾಗಿ ಪಾಕಿಸ್ತಾನದ ಬೆಂಬಲಕ್ಕೆ ನಿಂತಿರುವ ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ 2 ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ.
ಇಂದು ಮಧ್ಯಾಹ್ನ ಜಿನ್‍ಪಿಂಗ್ ಆಗಮಿಸಲಿರುವ ಹಿನ್ನೆಲೆಯಲ್ಲಿ ಚೆನ್ನೈ ವಿಮಾನ ನಿಲ್ದಾಣ ಸಿಂಗಾರಗೊಂಡಿದೆ. ಎಷ್ಟರ ಮಟ್ಟಿಗೆ ಅಂದರೆ ಭಾರತ-ಚೀನಾ ಸಂಸ್ಕೃತಿ ಸಂಬಂಧ ಸಾರುವ ಚಿತ್ತಾರಗಳು ಗೋಡೆ, ರಸ್ತೆ ಮೇಲೆ ಕಂಗೊಳಿಸುತ್ತಿವೆ. ಮೀನಾಂಬಕ್ಕಂ ಪೊಲೀಸ್ ಠಾಣೆ ಬಳಿಯಿರುವ ಹಳೇ ಕಟ್ಟಡವನ್ನು ಉದ್ಯಾನವನವಾಗಿ ಪರಿವರ್ತಿಸಲಾಗಿದೆ. ವಿಮಾನ ನಿಲ್ದಾಣದಿಂದ ಮಹಾಬಲಿಪುರಂ ಅಥವಾ ಮಾಮಲ್ಲಪುರಂಗೆ ಬರಲಿರುವ ಜಿನ್‍ಪಿಂಗ್ ಜೊತೆ ಪ್ರಧಾನಿ ಮೋದಿ ಅನೌಪಚಾರಿಕವಾಗಿ ಚರ್ಚೆ ನಡೆಸಲಿದ್ದಾರೆ.
ಇಂದು ಮಧ್ಯಾಹ್ನ 2 ಗಂಟೆಯ ಅಂದಾಜಿಗೆ ಚೀನಾ ಅಧ್ಯಕ್ಷ ಷಿ ಜಿನ್‍ಪಿಂಗ್ ಆಗಮಿಸಲಿದ್ದು, ಐತಿಹಾಸಿಕ ಮಹಾಬಲಿಪುರಂ ದೇವಾಲಯ, 4 ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಮಾಡಲಿದ್ದಾರೆ. ಕರಾವಳಿ ರಸ್ತೆಯ ಪ್ರತಿ 50-100 ಮೀಟರ್ ಗೂ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಅನೌಪಚಾರಿಕ ಶೃಂಗಸಭೆ ವೇಳೆ ದ್ವಿಪಕ್ಷೀಯ ಸಂಬಂಧ ವೃದ್ಧಿ ಬಗ್ಗೆ ಚರ್ಚೆ ನಡೆಸಲಿದ್ದು, ಜಾಗತಿಕ, ಪ್ರಾದೇಶಿಕ ಮಹತ್ವದ ವಿಚಾರಗಳ ಬಗ್ಗೆ ಮಾತುಕತೆ ನಡೆಯಲಿದೆ. ಈ ಸಂದರ್ಭದಲ್ಲಿ ಭಾರತ ಮತ್ತು ಚೀನಾ ನಡುವೆ ಯಾವುದೇ ಒಪ್ಪಂದ ನಡೆಯುವುದಿಲ್ಲ.
ಒಂದು ವೇಳೆ ಜಿನ್‍ಪಿಂಗ್ ಏನಾದರೂ ಕಾಶ್ಮೀರ ವಿಷಯ ಪ್ರಸ್ತಾಪಿಸಿದರೆ ವಿಶೇಷ ಸ್ಥಾನಮಾನ ರದ್ದುಗೊಳಿಸಲು ಇರುವ ಕಾರಣಗಳ ಬಗ್ಗೆ ಮೋದಿ ತಿಳಿಸಿ ಹೇಳಿದ್ದಾರೆ. ಲಡಾಖನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ರಚನೆ, ಅರುಣಾಚಲ ಪ್ರದೇಶದ ಜೊತೆಗಿನ ಗಡಿ ವಿವಾದದ ಬಗ್ಗೆಯೂ ಮೋದಿ ವಿವರಣೆ ನೀಡಿ ವಿಶ್ವಾಸ ವೃದ್ಧಿ ಕ್ರಮಗಳ ಪ್ರಸ್ತಾಪ ಇರಿಸುವ ಸಾಧ್ಯತೆ ಇದೆ.
ಮಹಾಬಲಿಪುರಂ ಯಾಕೆ?
ದೆಹಲಿ, ಮುಂಬೈ, ಬೆಂಗಳೂರು ಕೊನೇ ಪಕ್ಷ ಚೆನ್ನೈ ನಗರದಲ್ಲಾದರೂ ಭೇಟಿಯಾಗಬಹುದಿತ್ತಲ್ಲ. ಅದನ್ನು ಬಿಟ್ಟು ಮಹಾಬಲಿಪುರಂ ನಗರವನ್ನೇ ಚೀನಾದ ಅಧ್ಯಕ್ಷ ಷಿ ಜಿನ್‍ಪಿಂಗ್ ಆಯ್ಕೆ ಮಾಡಿಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ಇತಿಹಾಸ ಉತ್ತರ ನೀಡುತ್ತದೆ.
ಚೀನಾ- ಭಾರತದ ನಡುವೆ 2 ಸಾವಿರ ವರ್ಷಗಳ ಸಂಬಂಧ ಇದ್ದು ಚೀನಾ, ಆಗ್ನೇಯ ಏಷ್ಯಾದ ದೇಶಗಳ ರಫ್ತು-ಆಮದು ಹೆಬ್ಬಾಗಿಲು ಮಹಾಬಲಿಪುರಂ. ಪಲ್ಲವರ ಕಾಲದಲ್ಲಿ ಚೀನಾ ಜೊತೆ ರಕ್ಷಣೆ, ವ್ಯಾಪಾರದ ನಂಟು ಉತ್ತಮವಾಗಿತ್ತು. ಚೀನಾ ಜೊತೆ ಸಂಪರ್ಕ ಸಾಧಿಸಿದ್ದಕ್ಕೆ ಚೀನಾ ಲಿಪಿಯ ನಾಣ್ಯ, ಶಾಸನಗಳು ಪತ್ತೆಯಾಗಿವೆ. ಭಾರತ-ಚೀನಾ ನಡುವೆ ರೇಷ್ಮೆ, ಸಾಂಬಾರ ಪದಾರ್ಥಗಳ ವ್ಯಾಪಾರದ ವಹಿವಾಟು ಹೆಚ್ಚಾಗಿ ನಡೆಯುತಿತ್ತು. ಪಲ್ಲವರ ಕಾಲದಲ್ಲಿ ಕಾಂಚೀಪುರ ರೇಷ್ಮೆ ಉದ್ದಿಮೆಗೆ ಬೇಕಾದ ಕಚ್ಚಾವಸ್ತು ಚೀನಾದಿಂದ ಆಮದು ಆಗುತಿತ್ತು. ಚೀನೀ ಯಾತ್ರಿಕ ಹ್ಯೂಯೆನ್‍ತ್ಸಾಂಗ್ 7ನೇ ಶತಮಾನದಲ್ಲಿ ಕಾಂಚೀಪುರಕ್ಕೆ ಭೇಟಿ ನೀಡಿದ ಬಳಿಕ ಸಂಬಂಧ ಮತ್ತಷ್ಟು ಗಟ್ಟಿಯಾಯಿತು ಮತ್ತು ಈ ಅವಧಿಯಲ್ಲಿ ಚೀನಾಗೆ ಬೌದ್ಧಧರ್ಮವು ಪಸರಿಸಿತ್ತು ಎಂದು ಇತಿಹಾಸ ಹೇಳುತ್ತದೆ.
ಮಹಾಬಲಿಪುರಂನಲ್ಲಿ ಅಂಥದ್ದೇನಿದೆ?
ಮಹಾಬಲಿಪುರಂನ ಪ್ರಾಚೀನ ಹೆಸರು ಮಾಮಲ್ಲಪುರಂ ಆಗಿದ್ದು 7-9ನೇ ಶತಮಾನದಲ್ಲಿ ಪಲ್ಲವರ ಕಾಲದ ಪ್ರಮುಖ ಬಂದರು ನಗರಿ ಇದಾಗಿದೆ. ಚೆನ್ನೈನಿಂದ 50 ಕಿ.ಮೀ. ದೂರದಲ್ಲಿ ಬಂಗಾಳಕೊಲ್ಲಿ ಅಭಿಮುಖವಾಗಿರುವ ಮಾಮಲ್ಲಪುರಂ ಬಂದರು ಜೊತೆಗೆ ವಾಸ್ತುಶಿಲ್ಪ ಶ್ರೀಮಂತಿಕೆ ಹೊಂದಿದೆ. ಪಂಚರಥ, ಕೃಷ್ಣನ ಬೆಣ್ಣೆಮುದ್ದೆ ಬಂಡೆ, ಅರ್ಜುನ ತಪಸ್ಸಿನ ಶಿಲಾಕೆತ್ತನೆ, ತೀರ ಪ್ರದೇಶದಲ್ಲಿ ದೇವಾಲಯವಿದೆ. ಈ ಐತಿಹಾಸಿಕ ತಾಣ, ದೇವಾಲಯಗಳನ್ನು ಜಿನ್‍ಪಿಂಗ್-ಮೋದಿ ವೀಕ್ಷಿಸಲಿದ್ದಾರೆ. ಅದರಲ್ಲೂ ತೀರ ಪ್ರದೇಶದ ದೇವಾಲಯ ದಕ್ಷಿಣ ಭಾರತದ ಪುರಾತನ ದೇವಾಲಯವಾಗಿದ್ದು ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಯೂರೋಪ್‍ನ ಪ್ರವಾಸಿಗ ಮಾರ್ಕೋಪೋಲೋ ಇಲ್ಲಿಗೆ ಭೇಟಿ ನೀಡಿದ್ದ.