ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕೇಸರಿ ಧ್ವಜ ಹಾರಿಸಬೇಕೆಂದು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈಗಾಗಲೇ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಜೊತೆ ಸಿಎಂ ಬೊಮ್ಮಾಯಿ ಹಾಗೂ ಆರ್. ಅಶೋಕ್ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಮತ್ತೊಂದೆಡೆ ಪಾಲಿಕೆ ಅಖಾಡಕ್ಕೆ ಇಳಿದಿದ್ದ ಕಾಂಗ್ರೆಸ್‍ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಜೆಡಿಎಸ್ ವರಿಷ್ಠ ಎಚ್.ಡಿ ದೇವೆಗೌಡರೊಂದಿಗೆ ಕರೆ ಮಾಡಿ ಪಾಲಿಕೆಯಲ್ಲಿ ಕಾಂಗ್ರೆಸ್‍ಗೆ ಬೆಂಬಲ ನೀಡುವಂತೆ ಕೋರಿದ್ದಾರೆ.
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಘೋಷಣೆ ಆಗುತ್ತಿದ್ದಂತೆ ಮೇಯರ್ ಹಾಗೂ ಉಪ ಮೇಯರ್ ಮೀಸಲಾತಿ ಸಹ ಘೋಷಣೆಯಾಗಿದೆ. ಮೇಯರ್ ಸ್ಥಾನಕ್ಕೆ 12 ಮಂದಿ ಅರ್ಹರಾದ್ರೆ ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಲ್ಲಿ ಸದಸ್ಯರೇ ಇಲ್ಲದಂತಾಗಿದೆ.
ಈ ಬಾರಿ ಮೇಯರ್ ಸ್ಥಾನ ಹಿಂದುಳಿದ ವರ್ಗ ‘ಎ’ ಗೆ ಮೀಸಲಾಗಿದ್ದು, ಉಪ ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಹೀಗಾಗಿ ಇದೀಗ ಬಂದಿರುವ ಚುನಾವಣೆಯ ಫಲಿತಾಂಶ ಗಮನಿಸಿದಾಗ ಬಿಜೆಪಿಯೇ ಅಧಿಕಾರದ ಗದ್ದುಗೆ ಏರುತ್ತಿದ್ದು, ಬಿಜೆಪಿ ಸದಸ್ಯರುಗಳೇ ಮೇಯರ್ ಹಾಗೂ ಉಪ ಮೇಯರ್ ಆಗುವ ಎಲ್ಲ ಸಾಧ್ಯತೆಗಳಿವೆ. ಆದರೆ, ಬಿಜೆಪಿಯಲ್ಲಿಯೇ ಯಾರು ಮೇಯರ್ ಆಗಬಹುದು, ಇನ್ಯಾರು ಉಪ ಮೇಯರ್ ಆಗಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಮೇಯರ್ ಸ್ಥಾನಕ್ಕೆ 22 ಸದಸ್ಯರು ಅರ್ಹರು:
ಪಾಲಿಕೆ ವಿಜೇತರ ಪಟ್ಟಿ ಗಮನಿಸಿದಾಗ ಒಟ್ಟು 82 ವಾರ್ಡ್‍ಗಳಲ್ಲಿ ಬರೋಬ್ಬರಿ 22 ಜನ ಹಿಂದುಳಿದ ಅ ವರ್ಗಕ್ಕೆ ಸೇರಿದವರು. ಆದರೆ 22ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲವು ಸಾಧಿಸಿದ 10 ಜನರು, ಇಬ್ಬರು ಎಐಎಂಐಎಂ ಸದಸ್ಯರಿದ್ದಾರೆ. ಇನ್ನುಳಿದ 12 ಜನ ಸದಸ್ಯರು ಬಿಜೆಪಿಯಿಂದ ಗೆಲವು ಸಾಧಿಸಿದ್ದು, ಇವರಲ್ಲಿ ಒಬ್ಬರು ಮೇಯರ್ ಆಗಲಿದ್ದಾರೆ. 1ನೇ ವಾರ್ಡ್ ಅನಿತಾ ಚಳಗೇರಿ, ವಾರ್ಡ್ 3ರ ಈರೇಶ ಅಂಚಟಗೇರಿ, 10ನೇ ವಾರ್ಡ್ ಚಂದ್ರಕಲಾ ಕೊಟಬಾಗಿ, 13ನೇ ವಾರ್ಡಿನ ಸುರೇಶ ಬೇದರೆ, 27ನೇ ವಾರ್ಡಿನ ಸವಿತಾ ಮದವಾಳಕರ, 30ನೇ ವಾರ್ಡಿನ ರಾಮಪ್ಪ ಬಡಿಗೇರ, 32ರ ಸತೀಶ ಹಾನಗಲ್, 38ರ ತಿಪ್ಪಣ್ಣ ಮಜ್ಜಗಿ, 49ರ ವೀಣಾ ಭರದ್ವಾಡ, 72ರ ಸವಿತಾ ಗುಂಜಾಳ ಮೇಯರ್ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಈ ಬಾರಿ ಉಪ ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಬಂದಿರುವುದು ಹಾಗೂ ಇವರೆಲ್ಲರೂ ಮೊದಲ ಬಾರಿ ಗೆಲುವು ಸಾಧಿಸಿದ್ದರಿಂದ ಮೇಯರ್ ಸ್ಥಾನ ಪುರುಷರಿಗೆ ನೀಡುವುದು ಖಚಿತ ಎನ್ನಲಾಗುತ್ತಿದೆ.
ತಿಪ್ಪಣ್ಣ ಮಜ್ಜಗಿ – ಅಂಚಟಗೇರಿ – ಬಡಿಗೇರ ಮಧ್ಯೆ ಬಿಗ್ ಫೈಟ್:
ಮೇಯರ್ ಸ್ಥಾನಕ್ಕೆ ಈಗ ತಿಪ್ಪಣ್ಣ ಮಜ್ಜಗಿ, ಈರೇಶ ಅಂಚಟಗೇರಿ, ಸುರೇಶ ಬೇದರೆ, ರಾಮಪ್ಪ ಬಡಿಗೇರ ಮಧ್ಯೆ ಪೈಪೋಟಿ ಶುರುವಾಗಿದೆ. ಅಲ್ಲದೇ ಈರೇಶ ಅಂಟಗೇರಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಶಿಷ್ಯ. ಈಗಾಗಲೇ ಒಂದು ಬಾರಿ ಸದಸ್ಯರಾಗಿ ಅನುಭವ ಹೊಂದಿರುವವರು. ಆರ್‌ಎಸ್‌ಎಸ್ ಮೂಲವೂ ಇದೆ. ಸದ್ಯ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಕ್ಷರೂ ಇದ್ದಾರೆ. ಆದ್ದರಿಂದ ಅಂಚಟಗೇರಿ ಅವರಿಗೆ ಮೇಯರ್ ಸ್ಥಾನ ಒಲಿಯುವ ಎಲ್ಲ ಲಕ್ಷಣಗಳಿವೆ. ಇದನ್ನೂ ಓದಿ: ಬಿಎಸ್‍ಪಿ ಪಕ್ಷದ ವಿಪ್ ಉಲ್ಲಂಘನೆ – 7 ಮಂದಿ ನಗರಸಭಾ ಸದಸ್ಯರನ್ನು ಅನರ್ಹಗೊಳಿಸಿ ಡಿಸಿ ಆದೇಶ
ಸುರೇಶ್ ಬೇದರೆ ಮೊದಲ ಬಾರಿ ಆಯ್ಕೆಯಾಗಿರುವ ಕಾರಣ ಪಕ್ಷದ ಮುಖಂಡರ ತೀರ್ಮಾನಕ್ಕಾಗಿ ಕಾಯಬೇಕು. ಇನ್ನು ತಿಪ್ಪಣ್ಣ ಮಜ್ಜಗಿ ಅವರು ಎರಡನೇ ಬಾರಿ ಆಯ್ಕೆಯಾದವರು. ಇವರ ಪತ್ನಿ ಅಶ್ವಿನಿ ಮಜ್ಜಗಿ ಕಳೆದ ಬಾರಿಯ ಮೇಯರ್ ಆದವರು. ಅಶ್ವಿನಿ ಮಜ್ಜಗಿ ಅವರ ತಾಯಿಯೂ ಈ ಹಿಂದೆ ಪಾಲಿಕೆ ಉಪಮೇಯರ್ ಆಗಿದ್ದರು. ಅಲ್ಲದೇ ತಿಪ್ಪಣ್ಣ ಮಜ್ಜಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್‍ರಿಗೆ ಪರಮಾಪ್ತ ಹಾಗೂ ಪಕ್ಷದ ಕಟ್ಟಾಳಾಗಿ ಪಕ್ಷಕ್ಕೆ ದುಡಿದ ಪರಿಣಾಮ ತಿಪ್ಪಣ್ಣ ಮಜ್ಜಗಿ ಹೆಸರು ಸಹ ಪ್ರಮುಖವಾಗಿ ಕೇಳಿ ಬರುತ್ತಿದೆ.
ಧಾರವಾಡ ನಗರಕ್ಕೆ ಪಾಲಿಕೆಯಲ್ಲಿ ಮಲತಾಯಿ ಧೋರಣೆ ಸಲ್ಲಿಸಲಾಗುತ್ತಿದೆ ಎಂಬ ಆರೋಪವಿದ್ದು, ಪ್ರತ್ಯೇಕ ಪಾಲಿಕೆಗೆ ಹೋರಾಟಗಳು ಸಹ ನಡೆದಿವೆ. ಈ ಹಿನ್ನೆಲೆಯಲ್ಲಿ ಈ ಬಾರಿ ಮೇಯರ್ ಸ್ಥಾನವನ್ನು ಧಾರವಾಡಕ್ಕೆ ನೀಡುವ ಸಾಧ್ಯತೆಗಳು ಸಹ ಹೆಚ್ಚಾಗಿವೆ.
ಬಿಜೆಪಿ ಬಂಡಾಯ ಹಾಗೂ ಪಕ್ಷೇತರ ಅಭ್ಯರ್ಥಿ ಉಪಮೇಯರ್:
ರಾಜ್ಯ ಸರ್ಕಾರ ಪಾಲಿಕೆಯ ಉಪ ಮೇಯರ್ ಸ್ಥಾನವನ್ನು ಪರಿಶಿಷ್ಟ ವರ್ಗ ಮಹಿಳೆಗೆ ನೀಡಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಾಲ್ವರು ಸದಸ್ಯರಿದ್ದಾರೆ. ಆದರೆ, ನಾಲ್ವರಲ್ಲಿ ಯಾರೂ ಬಿಜೆಪಿ ಸದಸ್ಯರಿಲ್ಲ. ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳಿದ್ದು, ಅವರನ್ನು ಕೈ ಬಿಟ್ಟರೆ ಇನ್ನಿಬ್ಬರು ಪಕ್ಷೇತರರು ಇದ್ದಾರೆ. 56ನೇ ವಾರ್ಡ್‍ನಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಚಂದ್ರಕಾ ಮೇಸ್ತ್ರಿ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ 69ನೇ ವಾರ್ಡ್‍ನ ದುರ್ಗಮ್ಮ ಶಶಿಕಾಂತ ಬಿಜವಾಡ ಇದ್ದಾರೆ. ಈ ಹಿಂದಿನ ಅವಧಿಯಲ್ಲಿ ದುರ್ಗಮ್ಮ ಬಿಜವಾಡ ಅವರ ಸಂಬಂಧಿ ಲಕ್ಷ್ಮೀ ಬಿಜವಾಡ ಉಪ ಮೇಯರ್ ಸ್ಥಾನ ಅಲಂಕರಿಸಿದ್ದರು. ಇದೀಗ ಚಂದ್ರಿಕಾ ಮೇಸ್ತ್ರಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದು, ಬಿಜೆಪಿಯ ಬಂಡಾಯ ಅಭ್ಯರ್ಥಿ ದುರ್ಗಮ್ಮ ಬಿಜವಾಡ ಒಬ್ಬರೇ ಉಪ ಮೇಯರ್ ಸ್ಥಾನಕ್ಕೆ ಅರ್ಹರಾಗಿದ್ದು. ಇವರನ್ನು ಬಿಜೆಪಿಗೆ ಕರೆತಂದು ಉಪಮೇಯರ್ ಸ್ಥಾನ ನೀಡುವ ಸಾಧ್ಯತೆಗಳು ದಟ್ಟವಾಗಿದೆ. ಇದನ್ನೂ ಓದಿ: ಇಂದು ದೆಹಲಿಗೆ ಸಿಎಂ ಬೊಮ್ಮಾಯಿ – 4 ಸಚಿವ ಸ್ಥಾನ ಭರ್ತಿ ಬಗ್ಗೆ ನಡೆಯುತ್ತಾ ‘ಹೈ’ಚರ್ಚೆ?
ಈ ಮಧ್ಯೆ ಮೇಯರ್ ಸ್ಥಾನಕ್ಕೆ ತಮ್ಮ ಬೆಂಬಲಿಗರನ್ನೆ ಆಯ್ಕೆ ಮಾಡುವ ವಿಚಾರವಾಗಿ ಶಾಸಕರಾದ ಜಗದೀಶ್ ಶೆಟ್ಟರ್. ಅರವಿಂದ ಬೆಲ್ಲದ್ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಸಿಎಂ ಸ್ಥಾನವೂ ಸಿಗದೇ. ಸಚಿವ ಸ್ಥಾನದಿಂದ ವಂಚಿತರಾದ ಅರವಿಂದ ಬೆಲ್ಲದ್ ಮೇಯರ್ ಸ್ಥಾನಕ್ಕೆ ತಮ್ಮ ಆಪ್ತರನ್ನ ಸೂಚಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಇನ್ನೂ ಬೆಲ್ಲದ್ ವಿರುದ್ಧ ಮುನಿಸಿಕೊಂಡಿರುವ ಶಾಸಕ ಶೆಟ್ಟರ್ ತಮ್ಮ ಪರಮಾಪ್ತ ಶಿಷ್ಯ ತಿಪ್ಪಣ್ಣ ಮಜ್ಜಗಿಗೆ ಮೇಯರ್ ಸ್ಥಾನ ಕೊಡಿಸಲು ಈಗಾಗಲೇ ತೆರೆಮರೆ ಕಸರತ್ತು ನಡೆಸಿದ್ದು. ಈ ಮೂಲಕ ಬೆಲ್ಲದಗೆ ಮತ್ತೊಮ್ಮೆ ಟಕ್ಕರ್ ಕೊಡಲು ಸಿದ್ದರಾಗಿದ್ದಾರೆ ಅನ್ನೋ ಸುದ್ದಿ ಬಿಜೆಪಿ ವಲಯದಲ್ಲಿ ಹರಿದಾಡುತ್ತಿದೆ. ಆದ್ರೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ. ಸಿಎಂ ಬಸವರಾಜ ಬೊಮ್ಮಾಯಿ ಯಾರಿಗೆ ಬೆಂಬಲ ನೀಡುತ್ತಾರೆ ಎನ್ನುವುದು ಮಾತ್ರ ಇದೀಗ ಬಿಜೆಪಿಯಲ್ಲಿ ತೀವ್ರ ಕುತೂಹಲ ಮೂಡಿಸಿದ್ದಂತೂ ಸುಳ್ಳಲ್ಲ.
ಬೆಂಗಳೂರು: ಮೂರು ಪಾಲಿಕೆ ಫಲಿತಾಂಶ ಬೆನ್ನಲ್ಲೇ ಕಾಂಗ್ರೆಸ್ಸಿನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಈ ಮೂಲಕ ಲೋಕಲ್ ಫೈಟ್, ಹೊಣೆಗಾರಿಕೆ ರಾಜ್ಯ ಮಟ್ಟಕ್ಕೆ ಶಿಫ್ಟ್ ಆಯ್ತಾ ಅನ್ನೋ ಪ್ರಶ್ನೆ ಎದ್ದಿದೆ. ಜವಾಬ್ದಾರಿ ವಹಿಸಿಕೊಳ್ಳದೆ ತಪ್ಪಿಸಿಕೊಂಡ ನಾಯಕನ ವಿರುದ್ಧ ಹೈಕಮಾಂಡ್‍ಗೆ ದೂರು ಕೊಡಲು ಸಿದ್ಧತೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೌದು. ಮಹಾನಗರ ಪಾಲಿಕೆ ಫಲಿತಾಂಶದ ಬೆನ್ನಲ್ಲೇ ಕೈ ಪಾಳಯದಲ್ಲಿ ಚಾರ್ಜ್ ಶೀಟ್ ಪಾಲಿಟಿಕ್ಸ್ ಶುರುವಾಗಿದೆ. ಚುನಾವಣೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಚಾರ್ಜ್‍ಶೀಟ್ ಸಿದ್ಧಪಡಿಸತೊಡಗಿದ್ದು ಹೈಕಮಾಂಡ್‍ಗೆ ಸಲ್ಲಿಸಲು ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ.
ಚಾರ್ಜ್‍ಶೀಟ್ ನಲ್ಲೇನಿದೆ..?
ರಾಜ್ಯದ ಪ್ರಮುಖ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅಂತರ ಕಾಯ್ದುಕೊಂಡಿದ್ದಾರೆ. ಚುನಾವಣೆ ಇರುವುದು ಗೊತ್ತಿದ್ದರೂ ಚಿಕಿತ್ಸೆ ಹೆಸರಲ್ಲಿ ಜಿಂದಾಲ್ ಗೆ ದಾಖಲಾಗಿದ್ದಾರೆ. ಸಿದ್ದರಾಮಯ್ಯರಂತ ಜವಾಬ್ದಾರಿಯುತ ನಾಯಕ ಉದ್ದೇಶ ಪೂರ್ವಕವಾಗಿ ಅಂತರ ಕಾಯ್ದುಕೊಂಡಿದ್ದಾರೆ. ಅವರನ್ನ ಬಿಟ್ಟು ಏಕಾಂಗಿಯಾಗಿ ನಾನು ಪ್ರಚಾರಕ್ಕೆ ಹೋಗಿದ್ದರೆ ತಪ್ಪು ಸಂದೇಶ ರವಾನೆ ಆಗುತ್ತಿತ್ತು. ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಪಾಲಿಕೆ ಮತ್ತೆ ಬಿಜೆಪಿಗೆ – ಎಂಐಎಂನಿಂದಾಗಿ ಕಾಂಗ್ರೆಸ್ಸಿಗೆ ಹಿನ್ನಡೆ
ಚುನಾವಣೆ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಸಮಸ್ಯೆ ಬಗೆಹರಿಸಲು ಸಹಕರಿಸಲಿಲ್ಲ. ಟಿಕೆಟ್ ಹಂಚಿಕೆ ಗೊಂದಲ ಪರಿಹರಿಸಲು ಸ್ಥಳೀಯ ನಾಯಕರಿಗೆ ಬುದ್ಧಿ ಹೇಳಲು ಸಹಕರಿಸಲಿಲ್ಲ. ಯಾವುದೇ ರೀತಿಯ ಸಹಕಾರ ನೀಡದೆ ಚುನಾವವಣೆಯ ಹಿಂದಿನ ದಿನ ಕೇವಲ ಪ್ರೆಸ್ ಮೀಟ್ ನಡೆಸಿ ಕೈ ತೊಳೆದುಕೊಂಡರು. ಸರಿಯಾಗಿ ಪ್ರಯತ್ನ ಪಟ್ಟಿದ್ದರೆ ಎರಡು ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಬಹುದಿತ್ತು. ಹೀಗೆ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಚಾರ್ಜ್ ಶೀಟ್ ಸಿದ್ಧವಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ನಾಡದ್ರೋಹಿ ಎಂಇಎಸ್‍ಗೆ ಸೋಲು – ಬೆಳಗಾವಿಯಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ?
ಒಟ್ಟಿನಲ್ಲಿ ಮಹಾನಗರ ಪಾಲಿಕೆ ಚುನಾವಣಾ ಸೋಲಿಗೆ ಸಿದ್ದರಾಮಯ್ಯ ಅಸಹಕಾರ ಕೂಡ ಕಾರಣವಾಗಿದೆ. ಅಧ್ಯಕ್ಷರ ಜವಾಬ್ದಾರಿ ಮಾತ್ರ ಅಲ್ಲ, ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಅವರ ಜವಾಬ್ದಾರಿ ನಿರ್ವಹಿಸಬೇಕಿತ್ತು. ಆದರೆ ಸಹಕರಿಸದೆ ಸುಮ್ಮನಾದರು ಎಂಬುದು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಚಾರ್ಜ್ ಶೀಟ್ ಸಲ್ಲಿಸಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಆಂತರಿಕ ವಲಯ ಹೇಳುತ್ತಿದೆ. ಇದನ್ನೂ ಓದಿ: ಅತಂತ್ರವಾದರೂ ಬಿಜೆಪಿಗೆ ಅಧಿಕಾರ – ಕಲಬುರಗಿಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣ ಏನು?
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಆಶೀರ್ವಾದಿಂದ ಮಾಹನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಚುನಾವಣಾ ಫಲಿತಾಂಶ ಹೊರಬರುತ್ತಿದ್ದಂತೆಯೇ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ- ಧಾರವಾಡದಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿದೆ. ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿ ಸ್ಪಷ್ಟವಾದ ಬಹುಮತ ಪಡೆದುಕೊಳ್ಳುವಂತಹ ಎಲ್ಲಾ ಸಾಧ್ಯತೆಗಳಿವೆ. ಕಲಬುರಗಿಯಲ್ಲಿ ಕೂಡ ನಂಬರ್ ಒನ್ ಪಾರ್ಟಿ ಆಗುವ ಲಕ್ಷಣಗಳು ಕಾಣಿಸುತ್ತಿವೆ ಎಂದರು.
ಎಲ್ಲಾ ಮಹಾನಗರ ಪಾಲಿಕೆಯ ಅಧ್ಯಕ್ಷರುಗಳಿಗೆ, ಹಿರಿಯ ನಾಯಕರು, ಶಾಸಕರು, ಮಂತ್ರಿಗಳು, ಕಾರ್ಯಕರ್ತರಿಗೆ ಹಾಗೂ ಸಂಪೂರ್ಣವಾಗಿ ಪ್ರಚಾರ ಮಾಡಿರುವಂತಹ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರವಿಕುಮಾರ್, ಅರುಣ್ ಕುಮಾರ್ ಅವರಿಗೆ ಧನ್ಯವಾದ ಸಮರ್ಪಿಸುವುದಾಗಿ ಸಿಎಂ ಹೇಳಿದರು.
ಮತದಾರರು ನಮ್ಮ ಮೇಲೆ ಮತ್ತೊಮ್ಮೆ ವಿಶ್ವಾಸ ಇಟ್ಟುಕೊಂಡಿದ್ದಾರೆ. ಕಳೆದ ಬಾರಿ ಬೆಳಗಾವಿಯಲ್ಲಿ ಬಹಳ ಕಡಿಮೆ ಸೀಟು ಇತ್ತು. ಆದರೆ ಈ ಬಾರಿ ಅದ್ಭುತ ಪ್ರದರ್ಶನ ಆಗಿದೆ. ಬಹಳಷ್ಟು ವಿಶ್ಲೇಷಣೆಗಳು ಕೇಳಿಬಂದಿದ್ದವು. ಆದರೆ ಅವೆಲ್ಲವನ್ನೂ ಮತದಾರರು ಹುಸಿಗೊಳಿಸಿದ್ದಾರೆ. ಬೆಳಗಾವಿ ಯಾವತ್ತಿಗೂ ಬಿಜೆಪಿ ಜೊತೆಗಿರುತ್ತದೆ ಅನ್ನೋದನ್ನು ಅಲ್ಲಿನ ಮತದಾರರು ಬಹಳ ಸ್ಪಷ್ಟವಾಗಿ ತೋರಿಸಿದ್ದಾರೆ. ಹಾಗೆಯೇ ಹುಬ್ಬಳ್ಳಿ-ಧಾರವಾಡ ಕೂಡ ಬಿಜೆಪಿ ಕೋಟೆಯಾಗಿದ್ದು, ಅದನ್ನು ಸುಭದ್ರವಾಗಿ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಕಲಬುರಗಿಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಈಗಾಗಲೇ ಆಯ್ಕೆಯಾಗಿದ್ದೇವೆ. ಬಾಕಿಯಾಗಿರುವ ಇನ್ನಷ್ಟು ವಾರ್ಡ್ ಗಳಲ್ಲಿ ಅಲ್ಲಿ ಕೂಡ ಆಯ್ಕೆಯಾಗುವ ನಿರೀಕ್ಷೆ ಇದೆ. ಒಟ್ಟಾರೆಯಾಗಿ ಸರ್ಕಾರ ಬಂದು 1 ತಿಂಗಳಲ್ಲಿ ನಡೆದ ಈ ಚುನಾವಣೆಯಲ್ಲಿ ಪ್ರಥಮ ಸೂಚನೆಯನ್ನು ನೀಡಿದ್ದು, ಜನ ಮನ್ನಣೆ ನೀಡುವ ಮೂಲಕ ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದಾರೆ. ಇದು ಮುಂದಿನ ದಿನಗಳಿಗೆ ದಿಕ್ಸೂಚಿ ಆಗಿದ್ದು, ಯಡಿಯೂರಪ್ಪ ಅವರ ಆಶೀರ್ವಾದ ಹಾಗೂ ಅಮಿತ್ ಶಾ ಹಾಗೂ ಮೋದಿಯವರ ಹೆಸರು ಪ್ರೇರಣೆಯಿಂದ ಇಂದು ಗೆಲುವು ಸಾಧಿಸಿದ್ದೇವೆ ಎಂದು ತಿಳಿಸಿದರು. ಇದೇ ವೇಳೆ ಎಲ್ಲಾ ಮತದಾರರಿಗೆ ಅಭಿನಂದನೆಗಳನ್ನು ಸಿಎಂ ಸಲ್ಲಿಸಿದರು.
ಹುಬ್ಬಳ್ಳಿ/ಧಾರವಾಡ: ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ತವರಿನಲ್ಲಿ ನಡೀತಿರೋ ಮೊದಲ ಚುನಾವಣೆ ಇದಾಗಿರೋದ್ರಿಂದ ಅವಳಿ ನಗರ ಪಾಲಿಕೆಯಲ್ಲಿ ಕಮಲ ಅರಳಿಸೋ ಉಮೇದಿನಲ್ಲಿದೆ. ಈ ಬಾರಿ ಒಟ್ಟು 82 ವಾರ್ಡ್‍ಗಳಿಗೆ ಚುನಾವಣೆ ನಡೆದಿದೆ.
ಪಾಲಿಕೆಯಲ್ಲಿ ಈ ಬಾರಿ ಒಟ್ಟು 420 ಅಭ್ಯರ್ಥಿಗಳಿದ್ದು, ಅಧಿಕಾರದ ಗದ್ದುಗೆ ಏರಲು 42 ಸ್ಥಾನಗಳ ಅಗತ್ಯವಿದೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿತ್ತು. ಕಳೆದ ಮೂರು ಅವಧಿಗಳಲ್ಲಿಯೂ ಬಿಜೆಪಿ ಪ್ರಾಬಲ್ಯ ಮೆರೆದಿತ್ತು. ಹೀಗಾಗಿ ಸಿಎಂ ತವರಿನಲ್ಲಿ ಮತ್ತೊಮ್ಮೆ ಕಮಲ ಅರಳೋದು ನಿಶ್ಚಿತ ಎಂದು ಬಿಜೆಪಿ ಲೆಕ್ಕಾಚಾರ ಹಾಕುತ್ತಿದೆ. ಆದರೆ ಈ ಬಾರಿ ಬಿಜೆಪಿಗೆ ಕಾಂಗ್ರೆಸ್ ತೀವ್ರ ಪೈಪೋಟಿ ನೀಡಿದೆ. ಇದನ್ನೂ ಓದಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ
2013 ರಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ 67 ವಾರ್ಡ್‍ಗಳಿಗೆ ಮತದಾನ ನಡೆದಿತ್ತು. ಸಹಜವಾಗಿ ಬಿಜೆಪಿ, ಪಕ್ಷೇತರ ಹಾಗೂ ಕೆಜೆಪಿ ಅಭ್ಯರ್ಥಿಗೆ ತನ್ನ ತೆಕ್ಕೆಗೆ ತೆಗೆದುಕೊಂಡು ಅಧಿಕಾರ ಸ್ವೀಕಾರ ಮಾಡಿತ್ತು. ಜೆಡಿಎಸ್ ಹಾಗೂ ಕಾಂಗ್ರೆಸ್ ಸೇರಿಯೂ 34 ಆಗುತ್ತಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರ ಮಾಡೋಕೆ ಪ್ರಯತ್ನ ಸಹ ಮಾಡಿರಲಿಲ್ಲ. ಈ ಬಾರಿ ವಾರ್ಡ್‍ಗಳ ಸಂಖ್ಯೆ 82 ಆಗಿವೆ. ಇದನ್ನೂ ಓದಿ: ಕಲಬುರಗಿಯಲ್ಲಿ ಭದ್ರಕೋಟೆ ಉಳಿಸಿಕೊಳ್ಳುತ್ತಾ ಕಾಂಗ್ರೆಸ್?
ಈ ಬಾರಿ ಯಾರಿಗೆ ಹುಬ್ಬಳ್ಳಿ-ಧಾರವಾಡ ಗದ್ದುಗೆ..?
* ಒಟ್ಟು ವಾರ್ಡ್ – 82
* ಮ್ಯಾಜಿಕ್ ನಂ – 42
* ಅಭ್ಯರ್ಥಿಗಳು – 420
* ಮತದಾನ – ಶೇ.55
(ಬಿಜೆಪಿ 82, ಕಾಂಗ್ರೆಸ್ 82, ಜೆಡಿಎಸ್ 49, ಇತರೆ 207)
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಹಿನ್ನೆಲೆ ಮತ ಎಣಿಕೆ ಕೇಂದ್ರ ಬಳಿ ಪೊಲೀಸರು ಹೆಚ್ಚಿನ ಭದ್ರತೆ ವಹಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 385 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದ್ದು, ಜಿಲ್ಲೆಯ ಬಿ.ಕೆ.ಮಾಡೆಲ್ ಶಾಲೆಯಲ್ಲಿ ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ಕಾರ್ಯ ಆರಂಭವಾಗಲಿದೆ. ಮತ ಎಣಿಕೆ ನಡೆಸಲು 58 ವಾರ್ಡ್‍ಗಳಲ್ಲಿ 12 ಕೊಠಡಿಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಪ್ರತಿ ಕೊಠಡಿಗೆ ಓರ್ವರಂತೆ 12 ಚುನಾವಣಾಧಿಕಾರಿಗಳ ನಿಯೋಜನೆ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲಿ 2 ಇವಿಎಂ ಟೇಬಲ್ ಹಾಗೂ ಒಂದು ಅಂಚೆ ಮತಗಳ ಎಣಿಕೆ ಟೇಬಲ್ ವ್ಯವಸ್ಥೆಗೊಳಿಸಲಾಗಿದ್ದು, ಪ್ರತಿ ಕೊಠಡಿಗೆ ಓರ್ವ ಚುನಾವಣಾಧಿಕಾರಿ, ಮೂವರು ಎಣಿಕೆ ಮೇಲ್ವಿಚಾರಕರು ಇರಲಿದ್ದಾರೆ. ಜೊತೆಗೆ 6 ಜನ ಎಣಿಕೆ ಸಹಾಯಕರು, 3 ಸಹಾಯಕ ಸಿಬ್ಬಂದಿ, ಟ್ಯಾಬ್ಯುಲೇಷನ್ ಸಿಬ್ಬಂದಿ, ಓರ್ವ ಅಭಿಯಂತರ, ಇವಿಎಂಗಳ ಸಾಗಣೆಗೆ ಮೂವರು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಐಷಾರಾಮಿ ಕಾರು ಅಪಘಾತ
ಸದ್ಯ ಮತಎಣಿಕೆ ನಡೆಯುತ್ತಿರುವ ಕೇಂದ್ರದ ಸುತ್ತ ಶ್ವಾನದಳದಿಂದ ಪರಿಶೀಲನೆ ನಡೆಸಲಾಗಿದ್ದು, ಬೆಳಗಾವಿ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ಗೊಳಿಸಲಾಗಿದೆ. ಇಬ್ಬರು ಡಿಸಿಪಿ, ನಾಲ್ವರು ಎಸಿಪಿ 12 ಸಿಪಿಐ ಸೇರಿ 500ಕ್ಕೂ ಹೆಚ್ಚು ಪೊಲೀಸರ ನಿಯೋಜಿಸಲಾಗಿದೆ. ಅಲ್ಲದೇ ಭದ್ರತೆಗಾಗಿ ಡಿಎಆರ್, ಕೆಎಸ್ಆರ್ಪಿ ತುಕಡಿ ನಿಯೋಜನೆಯ ಜೊತೆಗೆ ನಗರದ ಸೂಕ್ಷ್ಮ ಪ್ರದೇಶಗಳಲ್ಲೂ ಬಿಗಿ ಭದ್ರತೆಗೊಳಿಸಲಾಗಿದ್ದು, ಒಟ್ಟಾರೆ ಬೆಳಗಾವಿ ನಗರದಾದ್ಯಂತ 1,200ಕ್ಕೂ ಅಧಿಕ ಜನ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೇ ರಾತ್ರಿ 12 ಗಂಟೆಯವರೆಗೂ ನಗರಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡದಂತೆ ಆದೇಶ ಹೊರಡಿಸಲಾಗಿದ್ದು, ಯಾವುದೇ ಸಂಭ್ರಮಾಚರಣೆ ಅಥವಾ ಪಟಾಕಿ ಸಿಡಿಸಿದವರ ವಿರುದ್ಧ ಕಠಿಣಕ್ರಮ ಕೈಗೊಳ್ಳುವುದಾಗಿಗೆ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ಕಲಬುರಗಿಯಲ್ಲಿ ಭದ್ರಕೋಟೆ ಉಳಿಸಿಕೊಳ್ಳುತ್ತಾ ಕಾಂಗ್ರೆಸ್?
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಹಿನ್ನೆಲೆ ಮತ ಎಣಿಕೆ ಕೇಂದ್ರದ ಒಳಗಡೆ ಹೋಗಲು ಕೌಟಿಂಗ್ ಏಜೆಂಟ್‍ಗಳು ಸಾಮಾಜಿಕ ಅಂತರ ಮರೆತು ನೂಕು ನುಗ್ಗಲು ಮಾಡುತ್ತಿದ್ದಾರೆ. ಆದರೆ ಸರತಿ ಸಾಲಿನ ಮೂಲಕ ಒಳಗಡೆ ಕಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಬೆಲೆ ಏರಿಕೆ ಜನರಿಗೆ ಈಗಾಗಲೇ ಹೊರೆಯಾಗಿದೆ. ಮತ್ತೆ ಎಲ್‍ಪಿಜಿ ಸಿಲಿಂಡರ್ ದರ 25 ರೂ. ಹೆಚ್ಚಿಸಲಾಗಿದೆ. ಇದು ನಿಲ್ಲುವ ಲಕ್ಷಣಗಳಿಲ್ಲ. ಅವರಿಗೆ ಸಮಾಧಾನ ಆಗುವವರೆಗೂ ಬೆಲೆ ಏರಿಕೆ ಮಾಡುತ್ತಲೇ ಹೋಗುತ್ತಾರೆ. ಕೇಂದ್ರ ಸರ್ಕಾರದವರು ಹಿಡನ್ ಅಜೆಂಡಾ ಇಟ್ಟುಕೊಂಡು ಬೆಲೆ ಏರಿಕೆ ಮಾಡುತ್ತಿದ್ದಾರೆ. ಜನಸಾಮಾನ್ಯರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ. ಕಾಂಗ್ರೆಸ್ ವತಿಯಿಂದ ಬೆಲೆ ಏರಿಕೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಮಾಡುತ್ತಲೇ ಇದ್ದೇವೆ. ಆದರೆ, ಜನಸಾಮಾನ್ಯರು ಈ ಬಗ್ಗೆ ಎಚ್ಚೆತ್ತುಕೊಳ್ಳುತ್ತಿಲ್ಲ. ಕೇವಲ ವಿರೋಧ ಪಕ್ಷದವರು ಪ್ರತಿಭಟನೆ ಮಾಡಿದರೇ, ರಾಜಕೀಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎನ್ನುತ್ತಾರೆ. ಹೀಗಾಗಿ, ಜನರೇ ಈ ಬಗ್ಗೆ ಹೋರಾಟ ಮಾಡಬೇಕು. ಜನರು ಪ್ರತಿಭಟನೆ ಮಾಡಿದರೇ ಮಾತ್ರ ಸರ್ಕಾರ ಹೆದರುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದೇ ವೇಳೆ ಗೋಕಾಕ್ ನಗರದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ನಗರದಲ್ಲಿ 10 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ, ಅದರಲ್ಲಿ ಒಂದು ಕ್ಯಾಮೆರಾ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಿದರೇ ಕಳ್ಳರನ್ನು ಬೇಗ ಪತ್ತೆ ಹಚ್ಚಬಹುದಾಗಿದೆ. ಜೊತೆಗೆ ಕಳ್ಳತನ ಮಾಡುವವರಿಗೂ ಭಯವಿರುತ್ತದೆ. ಹೀಗಾಗಿ, ಈ ಬಗ್ಗೆ ಡಿವೈಎಸ್‍ಪಿಗೆ ಇಂದು ಪತ್ರ ಬರೆಯುತ್ತಿದ್ದೇನೆ. ನಗರದಲ್ಲಿ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಲು ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಕ್ರಮವಾಗಿ ರಸಗೊಬ್ಬರ ಮಾರಾಟ- 97 ಯೂರಿಯಾ ಚೀಲ ವಶಕ್ಕೆ
ಇತ್ತೀಚಿನ ದಿನಗಳಲ್ಲಿ ಎಲ್ಲೆಡೆಯೂ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. 5 ಲಕ್ಷ ಜನಸಂಖ್ಯೆಗೆ 30-40 ಜನ ಪೊಲೀಸ್ ಸಿಬ್ಬಂದಿ ಮಾತ್ರ ಇದ್ದಾರೆ. ವೈಜ್ಞಾನಿಕವಾಗಿ ಈ ಕ್ರಮ ಸರಿಯಲ್ಲ. ಹೆಚ್ಚಿನ ಸಿಬ್ಬಂದಿ ನಿಯೋಜನೆ ಹಾಗೂ ಪೊಲೀಸ್ ಇಲಾಖೆಯಲ್ಲಿ ತಾಂತ್ರಿಕ ಸುಧಾರಣೆಯೇ ಇದಕ್ಕೆ ಪರಿಹಾರವಾಗಿದೆ. ಸರ್ಕಾರ ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಗೆ ನಾಳೆ ಮತದಾನ ನಡೆಯಲಿದೆ. ತೀವ್ರ ಪೈಪೋಟಿ ಹಾಗೂ ಪ್ರತಿಷ್ಠೆಯಾಗಿರುವ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಹೋರಾಟ ನಡೆಸುತ್ತಿದೆ. ಅಲ್ಲದೇ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಮೇಲೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದರೂ, ಸಿಎಂ ನಿವಾಸ ಹುಬ್ಬಳ್ಳಿಯಲ್ಲಿದ್ದರೂ, ಬೊಮ್ಮಾಯಿ ಹಾಗೂ ಅವರ ಕುಟುಂಬಕ್ಕೆ ಮತದಾನದ ಹಕ್ಕಿಲ್ಲದಾಗಿದೆ.
ಬಸವರಾಜ ಬೊಮ್ಮಾಯಿ ವಾಸವಾಗಿರುವ ಆದರ್ಶನಗರದ 46 ನೇ ವಾರ್ಡ್ ಮಹಾನಗರ ಪಾಲಿಕೆ ಚುನಾವಣೆ ಅತೀ ಹೆಚ್ಚು ಗಮನ ಸೆಳೆದಿದೆ. ಆದರೆ ಕುತೂಹಲದ ಸಂಗತಿ ಅಂದರೆ ಮಹಾನಗರದಲ್ಲಿ ಮುಖ್ಯಮಂತ್ರಿ ಅವರ ನಿವಾಸ ಇದ್ದರೂ ಮತವೇ ಇಲ್ಲ. ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಶಾಸಕರಾಗಿ ಸಿಎಂ ಆಗಿದ್ದಾರೆ. ಹೀಗಾಗಿ ಅವರ ಮನೆ ಹುಬ್ಬಳ್ಳಿಯಲ್ಲಿದ್ದರು ಅವರು ಹಾಗೂ ಕುಟುಂಬದವರ ಮತಗಳು ಇರುವುದು ಶಿಗ್ಗಾಂವಿಯಲ್ಲಿ ಈ ಕಾರಣ ಬಸವರಾಜ ಬೊಮ್ಮಾಯಿಯವರಿಗೆ ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಲು ಆಗುವುದಿಲ್ಲ. ಇದನ್ನೂ ಓದಿ:ಬೆಲೆ ಏರಿಕೆ ಬಗ್ಗೆ ಕೇಂದ್ರ ಹಣಕಾಸು ಸಚಿವರ ಜೊತೆ ಚರ್ಚೆ ಮಾಡುವೆ: ಸಿಎಂ
ಬೊಮ್ಮಾಯಿಯವರು ಹುಬ್ಬಳ್ಳಿಯಲ್ಲಿ ಹುಟ್ಟಿ ಬೆಳೆದು, ಹುಬ್ಬಳ್ಳಿಯಲ್ಲೇ ಶಿಕ್ಷಣ ಪಡೆದಿದ್ದಾರೆ. ಅಲ್ಲದೇ ಅವರ ತಂದೆಯ ಕಾಲದಿಂದಲೂ ಹುಬ್ಬಳ್ಳಿಯ ಆದರ್ಶ ನಗರದಲ್ಲಿ ನಿವಾಸವಿದೆ. ಈ ಮೊದಲು ಬೊಮ್ಮಾಯಿಯವರ ಕುಟುಂಬ ಹುಬ್ಬಳ್ಳಿಯಲ್ಲೇ ಮತದಾನ ಹಕ್ಕು ಚಲಾವಣೆ ಮಾಡುತ್ತಿದ್ದರು. ಆದರೆ ಜೆಡಿಯು ತೊರೆದು ಬಿಜೆಪಿ ಸೇರ್ಪಡೆಯಾದ ನಂತರ ಬಸವರಾಜ್ ಬೊಮ್ಮಾಯಿ ಶಿಗ್ಗಾಂವ ಸವಣೂರ ಕ್ಷೇತ್ರ ಆಯ್ದುಕೊಂಡ ಪರಿಣಾಮ ಅವರ ಮತದಾನದ ಹಕ್ಕು ಇದೀಗ ಶಿಗ್ಗಾಂವ ಕ್ಷೇತ್ರದಲ್ಲಿರುವುದರಿಂದ ಮತದಾನದ ಹಕ್ಕು ಅಲ್ಲಿಯೇ ಲಭ್ಯವಾಗಿದೆ. ಇದನ್ನೂ ಓದಿ:ಬೆಳಗಾವಿಯಲ್ಲಿ ನಾವು ಗೆದ್ದೇ ಗೆಲ್ತೇವೆ, ಬಹುಮತವನ್ನೂ ತರ್ತೇವೆ: ಫಿರೋಜ್ ಸೇಠ್
ಬಸವರಾಜ ಬೊಮ್ಮಾಯಿ ಸಿಎಂ ಆದ ನಂತರವೂ ಹುಬ್ಬಳ್ಳಿಯ ನಿವಾಸದಲ್ಲಿಯೇ ವಾಸವಾಗುತ್ತಿದ್ದಾರೆ. ಅಲ್ಲದೇ ಹುಬ್ಬಳ್ಳಿಯ ನಿವಾಸದಲ್ಲಿಯೇ ಸಾರ್ವಜನಿಕರ ಅಹವಾಲು ಆಲಿಸುತ್ತಾರೆ. ಆದರೆ ಅವರ ಮತದಾನದ ಹಕ್ಕು ಮಾತ್ರ ಶಿಗ್ಗಾಂವ ಕ್ಷೇತ್ರದಲ್ಲಿರುವುದರಿಂದ ಪಾಲಿಕೆ ಚುನಾವಣೆಯಲ್ಲಿ ಮುಖ್ಯಮಂತ್ರಿಗಳಿಗೆ ಮತದಾನದ ಹಕ್ಕಿಲ್ಲದಾಗಿದೆ. ಇದು ನಾಳೆ ನಡೆಯುವ ಪಾಲಿಕೆ ಚುನಾವಣೆ ಮೇಲೆ ಯಾವ ಪರಿಣಾಮ ಬೀರಲಿದೆ ಎನ್ನುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದೇ ಗೆಲ್ಲುತ್ತೇವೆ ಮತ್ತು ಮೆಜಾರಿಟಿ ಪಡೆದು ಪಾಲಿಕೆ ಚುಕ್ಕಾಣಿ ಹಿಯುತ್ತೇವೆ ಎಂದು ಫಿರೋಜ್ ಸೇಠ್ ಹೇಳಿದ್ದಾರೆ. ನಾವು ಜನರಲ್ಲಿ ನಮ್ಮ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮನವರಿಕೆ ಮಾಡುತ್ತೇವೆ. ಈ ಹಿಂದೆ ನಮ್ಮ 10 ವರ್ಷಗಳ ಅಧಿಕಾರಾವಧಿಯಲ್ಲಿ ಮಾಡಿದಂತೆ ಈ ಬಾರಿಯೂ ಅಭಿವೃದ್ಧಿ ಕಾರ್ಯ ಮಾಡುತ್ತೇವೆ ಎಂದಿದ್ದಾರೆ.
ಎಂಐಎಂ ಸ್ಪರ್ಧೆಯಿಂದ ಬಿಜೆಪಿಗೆ ಲಾಭವಾಗುತ್ತೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಇದು ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ನಡೆದಿದೆ. ಮತ್ತು ಅಲ್ಲಿ ಏನಾಯಿತು ಎಂಬುದು ನಿಮ್ಮೆಲ್ಲರಿಗೂ ಗೊತ್ತು. ಅಷ್ಟೇ ಇಲ್ಲಿಯೂ ಆಗುತ್ತೆ. ಕರ್ನಾಟಕ ಜನತೆ ಬುದ್ಧಿವಂತರಾಗಿದ್ದು, ಯೋಚನೆ ಮಾಡಿ ಮತ ಹಾಕುತ್ತಾರೆ ಎಂದು ನುಡಿದಿದ್ದಾರೆ. ಇದನ್ನೂ ಓದಿ:ಬೇಗ ಪಯಣ ಮುಗಿಸಿದೆ – ಸಿದ್ಧಾರ್ಥ್ ನಿಧನಕ್ಕೆ ಸಲ್ಮಾನ್ ಕಂಬನಿ
ಸೇಠ್ ಕೇವಲ ಹಿಂದೂ ಮುಸ್ಲಿಂ ಎಂದು ಚುನಾವಣೆ ಮಾಡದೇ ಭಾರತೀಯರು ಎನ್ನುವ ಅಜಂಡಾ ಮೇಲೆ ಚುನಾವಣೆ ಮಾಡಲು ನಿರ್ಧರಿಸಿದ್ದು, ಜನ ನಮ್ಮನ್ನು ಆಶೀರ್ವದಿಸುತ್ತಾರೆ ಎಂದು ಹೇಳಿದ್ದಾರೆ. ಆದರೆ ಜನರ ಚಿತ್ತ ಯಾರತ್ತ? ಎನ್ನುವುದನ್ನು ಮಾತ್ರ ಕಾದು ನೋಡಬೇಕಿದೆ.
ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ನಮ್ಮ ಪಕ್ಷ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಈ ಬಾರಿ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆ ಕುರಿತಂತೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಪ್ರತಿನಿತ್ಯ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಅವರ ಅವಧಿಯಲ್ಲಿ ಏನಾಗಿದೆ ಅಂತ ಎಲ್ಲರಿಗೂ ಗೊತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಕುಮಾರಸ್ವಾಮಿ ರೈತರು ಬೆಳೆಯುವ ಬೆಳೆಯನ್ನು ರಫ್ತು ಮಾಡಲು ಉತ್ತೇಜನ ನೀಡಲು ಸಂಸ್ಥೆ ಪ್ರಾರಂಭ ಮಾಡಬೇಕು ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ಕುರಿತಂತೆ, ರಾಜ್ಯದಿಂದ ಸಾವಿರಾರು ಕೋಟಿ ರೂಪಾಯಿ ಕೃಷಿ ಉತ್ಪನ್ನ ರಫ್ತಾಗುತ್ತದೆ. ಅದರ ಪರಿಜ್ಞಾನವೇ ಕೇಂದ್ರ ಸಚಿವರಿಗೆ ಇಲ್ಲ, ಅಧಿಕಾರಿಗಳಿಗೂ ಇಲ್ಲ ಒಟ್ಟಿನಲ್ಲಿ ಈ ಸರ್ಕಾರದಲ್ಲಿ ಅಭಿವೃದ್ಧಿಪರ ಕಾರ್ಯಕ್ರಮ ಕಾಣಲು ಸಾಧ್ಯವಿಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ:ಕಾಂಗ್ರೆಸ್‍ಗೆ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುವ ನೈತಕತೆ ಇಲ್ಲ: ಸಿ.ಟಿ.ರವಿ
ಕೋವಿಡ್ ಕಾರಣದಿಂದಾಗಿ ಸರ್ಕಾರದ ಜನ ವಿರೋಧಿ ಧೋರಣೆಯನ್ನು ಖಂಡಿಸಲು ಬೀದಿಗಿಳಿದು ಹೋರಾಟ ಮಾಡಲು ಆಗಲಿಲ್ಲ. ಆದರೆ ಆಡಳಿತರೂಢ ಬಿಜೆಪಿ ಸರ್ಕಾರದ ಪರವಾಗಿಯೂ ನಾನಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷರು ಯಡಿಯೂರಪ್ಪ ಪರವಾಗಿ ಸಾಫ್ಟ್ ಕಾರ್ನರ್ ಮಾತುಗಳನ್ನು ಹೇಳಿದ್ದಾರೆ. ಆದರೆ ನಮಗೆ ಸಾಫ್ಟ್ ಕಾರ್ನರ್ ಅವಶ್ಯಕತೆ ಇಲ್ಲ. ಅವಶ್ಯಕತೆ ಬಂದಾಗ ಹೋರಾಟಕ್ಕೆ ಧುಮುಕುತ್ತೇವೆ. ರಾಜಕಾರಣದಲ್ಲಿ ಇತ್ತೀಚೆಗೆ ಸಿದ್ಧಾಂತಗಳಲ್ಲಿ ಬೆನ್ನು ತಟ್ಟಿಕೊಳ್ಳೋ ಸ್ಥಿತಿ ಇಲ್ಲ. ಅಲ್ಲದೇ ಮೈಸೂರು ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರೇ ನಮ್ಮ ಜೊತೆ ಮೈತ್ರಿ ಮಾಡಿಕೊಳ್ಳಲು ಸಿದ್ಧ ಇರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಕಾಂಗ್ರೆಸ್ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದೆ: ಭಗವಂತ ಖೂಬಾ
ಯಡಿಯೂರಪ್ಪವನರ ಬಗ್ಗೆ ಮಾತನಾಡಿದ ಅವರು, ಪಕ್ಷ ಸಂಘಟನೆ ವಿಚಾರವಾಗಿ ನಾನು ತಪ್ಪು ಅಂತ ಹೇಳಲ್ಲ ಮತ್ತು ಅದರ ಬಗ್ಗೆ ಸಣ್ಣದಾಗಿ ಮಾತನಾಡುವುದಿಲ್ಲ. ಪ್ರಸ್ತುತ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು ಅಂತಾರೆ, ಆದರೆ ಚುನಾವಣೆಗಳಲ್ಲಿ ಎಲ್ಲಿಂದ ಈ ಮಾರ್ಗಸೂಚಿ ಜಾರಿಯಾಗುತ್ತಿದೆ? ಎಂದ ಅವರು ಧಿಡೀರನೆ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದ್ದರಿಂದ ಚುನಾವಣೆ ಅನಿವಾರ್ಯವಾಯಿತು. ಸದ್ಯ ಹೊಸದಾಗಿ ಪಕ್ಷ ಸಿದ್ಧಾಂತ ಒಪ್ಪಿಕೊಂಡು ಬರುವವರಿಗೆ ಜೆಡಿಎಸ್ ಬಾಗಿಲು ತೆರೆದಿದೆ. ಹೋಗುವವರು ಹೋಗಬೇಕೆಂದರೆ ಹೋಗಬಹುದು, ಇರುವವರು ಇರಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ:ಈ ಬಾರಿಯ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಯಶಸ್ಸಿಗೆ ಎಲ್ಲರೂ ಕೈಜೋಡಿಸಿ: ಬಿ.ಸಿ.ಪಾಟೀಲ್
ಇದೇ ವೇಳೆ, ಮೈಸೂರು ಅತ್ಯಾಚಾರ ಪ್ರಕರಣದಲ್ಲಿ ಸರ್ಕಾರದ ವೈಫಲ್ಯತೆ ಇದೆ. ಆರೋಪಿಗಳು ಈ ಹಿಂದೆ ಇದೇ ರೀತಿ ಅನೇಕ ಕೃತ್ಯವೆಸಗಿದ್ದಾರೆ ಎಂದು ಹೇಳುವ ಪೊಲೀಸ್ ಅಧಿಕಾರಿಗಳು ಇಷ್ಟು ದಿನ ಏನು ಮಾಡ್ತಿದ್ದರು ಎಂದು ಪ್ರಶ್ನಿಸಿದ್ದಾರೆ.