Tag: ಮಹರಾಷ್ಟ್ರ

  • ಬಲೂನ್ ನುಂಗಿ 4 ವರ್ಷದ ಬಾಲಕ ಸಾವು

    ಬಲೂನ್ ನುಂಗಿ 4 ವರ್ಷದ ಬಾಲಕ ಸಾವು

    ಮುಂಬೈ: ನಾಲ್ಕು ವರ್ಷದ ಮಗು ಬಲೂನ್ ನುಂಗಿ ಸಾವನ್ನಪ್ಪಿರುವ ಘಟನೆ ಮಹರಾಷ್ಟ್ರದ ಅಂಧೇರಿಯಲ್ಲಿ ನಡೆದಿದೆ.

    ಬಾಲಕ ತನ್ನ ಸಹೋದರಿಯೊಂದಿಗೆ ಬಲೂನ್‍ಗೆ ಗಾಳಿ ತುಂಬುವ ಆಟವಾಡುತ್ತಿದ್ದರು. ಈ ವೇಳೆ ಬಾಲಕ ಬಲೂನ್ ನುಂಗಿದ್ದಾನೆ. ಆಗ ಬಲೂನ್ ಗಂಟಲಿನಲ್ಲಿ ಸಿಲುಕಿಕೊಂಡು ಪರಿಣಾಮ ಬಾಲಕ ಸಾನ್ನಪ್ಪಿದ್ದಾನೆ.

    ಬಾಲಕನ ಗಂಟಲಿನಲ್ಲಿ ಬಲೂನ್ ಸಿಲುಕಿಕೊಂಡು ಒದ್ದಾಟ ನಡೆಸಿದಾಗ ಕುಟುಂಬಸ್ಥರು ಬಲೂನ್ ಹೊರ ತೆಗೆಯಲು ಪ್ರಯತ್ನಿಸಿದ್ದಾರೆ. ಬಲೂನ್ ಗಂಟಲಿನ ಒಳಗಿನ ಭಾಗದಲ್ಲಿ ಹೋಗಿ ಸಿಲುಕಿಕೊಂಡಿರುವುದರಿಂದ ತೆಗೆಯಲು ಸಾಧ್ಯವಾಗಿಲ್ಲ. ಗಾಬರಿಗೊಂಡ ಬಾಲಕನ ಪೋಷಕರು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಬಾಲಕನಿಗೆ ಚಿಕಿತ್ಸೆ ನೀಡಲು ನಿರಾಕರಿಸಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ.

    ಪೋಷಕರು ಬಾಲಕನನ್ನು ಆತುರಾತುರವಾಗಿ ಅಂಧೇರಿಯ ನಾನಾವತಿ ಆಸ್ಪತ್ರೆಗೆ ಕರೆದುಕೊಂಡು ಬರುವ ವೇಳೆಯಲ್ಲಿ ಮಾರ್ಗದ ಮಧ್ಯದಲ್ಲೇ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆಯ ಸಂಬಂಧ ಅಂಧೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

  • ಭಾರತೀಯ ಸೇನಾಧಿಕಾರಿ ಅಂತ ಜನರನ್ನು ಮೋಸ ಮಾಡ್ತಿದ್ದ ಯುವಕ ಅರೆಸ್ಟ್

    ಭಾರತೀಯ ಸೇನಾಧಿಕಾರಿ ಅಂತ ಜನರನ್ನು ಮೋಸ ಮಾಡ್ತಿದ್ದ ಯುವಕ ಅರೆಸ್ಟ್

    – ಯುವಕನ ಪತ್ನಿಯೂ ಬಂಧನ

     ಮುಂಬೈ: ಭಾರತೀಯ ಸೇನಾಧಿಕಾರಿ ಎಂದು ಹೇಳಿಕೊಂಡು ಜನರನ್ನು ಮೋಸಗೊಳಿಸುತ್ತಿದ್ದ 23 ವರ್ಷದ ಯುವಕನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಲಾಗಿದೆ.

    ಇತ್ತೀಚೆಗೆ ಭಾರತೀಯ ಸೇನಾಧಿಕಾರಿಯಂತೆ ನಟಿಸಿ ಜನರನ್ನು ಮೋಸಗೊಳಿಸುತ್ತಿರವ ವ್ಯಕ್ತಿಯನ್ನು ಬಂಧಿಸಿದ್ದೇವೆ. ಮಿಲಿಟರಿ ಗುಪ್ತಚರ ಅಧಿಕಾರಿಗಳು ಆರೋಪಿಗಳನ್ನು ಪತ್ತೆ ಹಚ್ಚಲು ಸಹಾಯ ಮಾಡಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಯೊಬ್ಬಳನ್ನೂ ಬಂಧಿಸಲಾಗಿದೆ ಎಂದು ಪುಣೆ ಗ್ರಾಮೀಣ ಪೊಲೀಸ್ ಸ್ಥಳೀಯ ಅಪರಾಧ ಶಾಖೆಯ (ಎಲ್‍ಸಿಬಿ) ಹಿರಿಯ ಇನ್ಸ್‍ಪೆಕ್ಟರ್ ಪದ್ಮಕರ್ ಘನ್ವತ್ ತಿಳಿಸಿದ್ದಾರೆ.

    ಪುಣೆ ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‍ಡಿಎ) ಬಳಿಯ ಕಿರ್ಕಾಟ್ವಾಡಿ ಪ್ರದೇಶದಲ್ಲಿ ಸೇನಾ ಅಧಿಕಾರಿಯಾಗಿ ನಟಿಸುತ್ತಿದ್ದ ಯುವಕನ್ನು ಬಂಧಿಸಿದ್ದಾರೆ. ಈ ವ್ಯಕ್ತಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಎಂದು ಹೇಳಿಕೊಂಡು ನಟಿಸುತ್ತಿದ್ದನು.  ಪೊಲೀಸ್ ಅವರ ನಿವಾಸದಿಂದ ಹಲವಾರು ನಕಲಿ ಮತ್ತು ನಕಲಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

    ಆರೋಪಿಯನ್ನು ಅಂಕಿತ್ ಕುಮಾರ್ ಸಿಂಗ್ (23) ಎಂದು ಗುರುತಿಸಲಾಗಿದೆ. ಈತ ಉತ್ತರ ಪ್ರದೇಶದ ಹಸನ್ಪುರ ಅಮ್ರೋಹ್ ಮೂಲದವನಾಗಿದ್ದಾನೆ. 10 ಗುರುತಿನ ಚೀಟಿಗಳು, ಎರಡು ಮೊಬೈಲ್‍ಗಳು, ಟ್ಯಾಬ್ಲೆಟ್, ಪ್ರಿಂಟರ್, ಲ್ಯಾಪ್‍ಟಾಪ್, ನಕಲಿ ದಾಖಲೆಗಳು ಮತ್ತು ಭಾರತೀಯ ಸೇನಾಧಿಕಾರಿ ಸಮವಸ್ತ್ರ, ಬೂಟುಗಳು, ಸೊಂಟದ ಬೆಲ್ಟ್ ಮತ್ತು ಕ್ಯಾಪ್ ಅನ್ನು ಪೊಲೀಸರು ಆರೋಪಿಯಿಂದ ವಶಪಡಿಸಿಕೊಂಡಿದ್ದಾರೆ.

    ಪೊಲೀಸರಿಗೆ ಬಂದಿರುವ ಮಾಹಿತಿಯನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾಗ ಲೆಫ್ಟಿನೆಂಟ್ ಕರ್ನಲ್ ಅಧಿಕಾರಿಯ ಸೋಗಿನಲ್ಲಿ ಆರೋಪಿ ಜನರನ್ನು ಯುವಕ ಮೋಸ ಮಾಡುತ್ತಿದ್ದನು. ಅರೋಪಿಯ ಹೆಂಡತಿ ಮೀನಾಕ್ಷಿ ಎಂಬ ಮಹಿಳೆಯನ್ನು ಬಂಧಿಸಿ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಸೇನೆಯ ನೇಮಕಾತಿ ದಂಧೆಯ ಭಾಗವಾಗಿದ್ದಾರೆಯೇ ಎಂದು ತಿಳಿಯಲು ಬ್ಯಾಂಕ್ ಖಾತೆಗಳ ಪರಿಶೀಲನೆ ಮಾಡುತ್ತೇವೆ ಪೊಲೀಸರು ತಿಳಿಸಿದ್ದಾರೆ.

  • ಮಹಾರಾಷ್ಟ್ರ ಗಡಿಯಲ್ಲಿ ಶಿವಸೇನೆ ಮತ್ತೆ ಪುಂಡಾಟಿಕೆ- ರಾಜ್ಯ ಪ್ರವೇಶಿಸಲು ಯತ್ನ

    ಮಹಾರಾಷ್ಟ್ರ ಗಡಿಯಲ್ಲಿ ಶಿವಸೇನೆ ಮತ್ತೆ ಪುಂಡಾಟಿಕೆ- ರಾಜ್ಯ ಪ್ರವೇಶಿಸಲು ಯತ್ನ

    – ಬುದ್ಧಿ ಹೇಳಿ ವಾಪಸ್ ಕಳುಹಿಸಿದ ರಾಜ್ಯದ ಪೊಲೀಸರು

    ಚಿಕ್ಕೋಡಿ/ಬೆಳಗಾವಿ: ಜಿಲ್ಲೆಯ ಗಡಿಯಲ್ಲಿ ಶಿವಸೇನೆ ಮತ್ತೆ ಪುಂಡಾಟಿಕೆ ಮುಂದುವರಿಸಿದೆ. ಮನಗುತ್ತಿ ಗ್ರಾಮದಲ್ಲಿ ತೆರವುಗೊಳಿಸಿರುವ ಶಿವಾಜಿ ಪ್ರತಿಮೆಯನ್ನು ಮತ್ತೆ ಸ್ಥಾಪಿಸಬೇಕು ಎಂದು ಶಿವಸೇನೆ ಒತ್ತಾಯಿಸಿದೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಾಜ್ಯದ ಮನಗುತ್ತಿ ಗ್ರಾಮಕ್ಕೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ್ ದೇವನ ನೇತೃತ್ವದಲ್ಲಿ ಸುಮಾರು ಎಂಬತ್ತುಕ್ಕೂ ಅಧಿಕ ಕಾರ್ಯಕರ್ತರು ನುಗ್ಗಿ ಪ್ರತಿಭಟನೆ ನಡೆಸಲು ಯತ್ನಿಸಿದರು. ಆದರೆ ಶಿವಸೇನೆ ಕಾರ್ಯಕರ್ತರು ಮನಗುತ್ತಿ ಗ್ರಾಮಕ್ಕೆ ಪ್ರವೇಶ ನೀಡದಂತೆ ಗಡಿಯಲ್ಲಿಯೇ ಶಿವಸೇನೆ ಪುಂಡರನ್ನು ಪೊಲೀಸರು ತಡೆದಿದ್ದಾರೆ.

    ಮಹಾರಾಷ್ಟ್ರದ ಗಡಿ ಗ್ರಾಮ ಕವಳಿಕಟ್ಟಿಯಿಂದ ಮನಗುತ್ತಿಗೆ ಪಾದಯಾತ್ರೆ ನಡೆಸಿದ ಶಿವಸೇನೆ ಪುಂಡರು, ಪೋಲಿಸರು ಗಡಿಯಲ್ಲಿ ತಡೆದಿದ್ದಕ್ಕೆ ಅದೇ ಸ್ಥಳದಲ್ಲಿ ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

    ಕಳೆದ ಹದಿನೈದು ದಿನಗಳ ಹಿಂದೆ ಮನಗುತ್ತಿ ಗ್ರಾಮದಲ್ಲಿ ಸ್ಥಳೀಯ ಮರಾಠಿ ಭಾಷಿಕರು ಹಾಗೂ ಮುಖಂಡರು ಒಪ್ಪಿ ಗ್ರಾಮದ ಬೇರೆಡೆಗೆ ಶಿವಾಜಿ ಪ್ರತಿಮೆ ಸ್ಥಾಪಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಪ್ರತಿಮೆ ಸ್ಥಾಪನೆ ವಿಳಂಬವಾಗುತ್ತಿದೆ ಎನ್ನುವ ಕುಂಟು ನೆಪ ಹೇಳಿಕೊಂಡು ಶಿವಸೇನೆ ಪುಂಡರು ಗಡಿಯಲ್ಲಿ ಪುಂಡಾಟಿಕೆ ಮೆರೆದಿದ್ದಾರೆ. ಈ ವೇಳೆ ಪೊಲೀಸರು ತಡೆದಿದ್ದಾರೆ. ಇದೀಗ ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣ ಶೆಟ್ಟಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

  • ಪಶ್ಚಿಮ ಬಂಗಾಳ ಬಳಿಕ ಮಹಾರಾಷ್ಟ್ರ, ಬಿಹಾರ, ಕೇರಳ ಟ್ಯಾಬ್ಲೋ ಪ್ರಸ್ತಾವನೆ ತಿರಸ್ಕಾರ

    ಪಶ್ಚಿಮ ಬಂಗಾಳ ಬಳಿಕ ಮಹಾರಾಷ್ಟ್ರ, ಬಿಹಾರ, ಕೇರಳ ಟ್ಯಾಬ್ಲೋ ಪ್ರಸ್ತಾವನೆ ತಿರಸ್ಕಾರ

    ಪಾಟ್ನಾ: ಪಶ್ಚಿಮ ಬಂಗಾಳ ನಂತರ ಮಹಾರಾಷ್ಟ್ರ, ಬಿಹಾರ, ಕೇರಳ ಸ್ತಬ್ಧಚಿತ್ರವನ್ನು ಜನವರಿ 26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‍ಗೆ ತಿರಸ್ಕರಿಸಲಾಗಿದೆ.

    ಬಿಹಾರ ಮಾಹಿತಿ ಕೇಂದ್ರ ಈ ಬಗ್ಗೆ ಸ್ಪಷ್ಟಗೊಳಿಸಿದೆ. ಪಶ್ಚಿಮ ಬಂಗಾಳ ನಂತರ ಮಹಾರಾಷ್ಟ್ರ, ಬಿಹಾರ, ಕೇರಳ ರಾಜ್ಯ ಕಳಿಸಿದ್ದ ಸ್ತಬ್ಧಚಿತ್ರಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

    ರಕ್ಷಣಾ ಖಾತೆ ಮಾಹಿತಿ ಪ್ರಕಾರ, ತಜ್ಞರ ಸಮಿತಿಯ ಆಕ್ಷೇಪಣೆ ನಂತರ ಬಿಹಾರ ಸ್ತಬ್ಧಚಿತ್ರ ಪ್ರಸ್ತಾಪನೆಯನ್ನು ತಿರಸ್ಕರಿಸಲಾಗಿದೆ. ಪಶ್ಚಿಮ ಬಂಗಾಳ ಸರ್ಕಾರ ಕನ್ಯಾಶ್ರೀ, ಹಸಿರು ರಕ್ಷಣೆ -ಸ್ವಚ್ಛ ಪರಿಸರ ಹಾಗೂ ಜಲ ಧಾರೆ ಪರಿಕಲ್ಪನೆಯ ಪ್ರಸ್ತಾಪನೆಗಳನ್ನು ಸಲ್ಲಿಸಿತ್ತು. ವಿಶಿಷ್ಟ ಪರಿಕಲ್ಪನೆ ಟ್ಯಾಬ್ಲೋ ಆಯ್ಕೆಗೆ ಪ್ರಧಾನ ಮಾನದಂಡ. ಈ ಮೂರರಲ್ಲಿ ಯಾವುದೂ ವಿಶಿಷ್ಟವಲ್ಲ ಎಂದು ಪಶ್ಚಿಮ ಬಂಗಾಳದ ಟ್ಯಾಬ್ಲೋ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿತ್ತು.

    ಹಾಗೆಯೇ ಗಣರಾಜ್ಯೋತ್ಸವ ಪರೇಡ್‍ನ ಟ್ಯಾಬ್ಲೋಗಳಲ್ಲಿ ಯಾವುದೇ ರಾಜಕೀಯ ಪಕ್ಷ ಹಾಗೂ ರಾಜಕೀಯ ಅಜೆಂಡಾಗಳ ಪರಿಕಲ್ಪನೆ ಟ್ಯಾಬ್ಲೋ ಮಾಡುವಂತಿಲ್ಲ. ಆದರೆ ಬಿಹಾರ್ ಹಾಗೂ ಮಹಾರಾಷ್ಟ್ರ ರಾಜಕೀಯ ಪರಿಕ್ಪನೆ ಟ್ಯಾಬ್ಲೋಗಳ ಪ್ರಸ್ತಾವನೆ ಸಲ್ಲಿಸಿತ್ತು. ಆದ್ದರಿಂದ ಈ ರಾಜ್ಯಗಳ ಟ್ಯಾಬ್ಲೋಗಳನ್ನು ತಜ್ಞರ ಸಮಿತಿ ತಿರಸ್ಕರಿಸಿದೆ.

    ಈ ಬಗ್ಗೆ ಆರ್‍ಜೆಡಿ ವಕ್ತಾರ ಮ್ರಿತುಂಜನ್ ತಿವಾರಿ ಪ್ರತಿಕ್ರಿಯಿಸಿ, ಈ ಹಿಂದೆ ಕೇಂದ್ರ ಸರ್ಕಾರ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಿ ಎಂಬ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಈಗ ನಮ್ಮ ಗಣರಾಜ್ಯೋತ್ಸವದ ಟ್ಯಾಬ್ಲೋಗಳನ್ನು ತಿರಸ್ಕರಿದೆ. ಬಿಜೆಪಿ ಎರಡು ಇಂಜಿನ್ ಸರ್ಕಾರ ನಡೆಸುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಕಿಡಿಕಾರಿದ್ದಾರೆ.

    ಇತ್ತ ಮಹಾರಾಷ್ಟ್ರ ಟ್ಯಾಬ್ಲೋ ಪ್ರಸ್ತಾವನೆ ತಿರಸ್ಕೃತಗೊಂಡಿದ್ದಕ್ಕೆ ಎನ್‍ಸಿಪಿ ನಾಯಕಿ ಸುಪ್ರಿಯಾ ಸುಳೆ ಟ್ವೀಟ್ ಮಾಡಿ ಹರಿಹಾಯ್ದಿದ್ದಾರೆ. ಕೇಂದ್ರ ಸರ್ಕಾರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಟ್ಯಾಂಬ್ಲೋಗಳ ಪ್ರಸ್ತಾವಣೆ ತಿರಸ್ಕರಿಸಿದೆ. ಗಣರಾಜ್ಯೋತ್ಸವ ದೇಶದ ಹಬ್ಬ. ಆದ್ದರಿಂದ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಈ ಹಬ್ಬದಲ್ಲಿ ಭಾಗಿಯಾಗಲು ಅವಕಾಶ ಕೊಡಬೇಕು. ಆದರೆ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ಕೆಲ ರಾಜ್ಯಗಳ ವಿಷಯದಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

    ಹಾಗೆಯೇ ಕೇರಳ ಟ್ಯಾಂಬ್ಲೋ ಪ್ರಸ್ತಾವನೆ ತಿರಸ್ಕೃತಗೊಂಡಿರುವುದು ರಾಜಕೀಯ ಪ್ರೇರಿತ ಎಂದು ಕೇರಳ ಕಾನೂನು ಸಚಿವ ಎ.ಕೆ ಬಾಲನ್ ಕಿಡಿಕಾರಿದ್ದಾರೆ.

    ತಜ್ಞರ ಸಮಿತಿ ರಾಜ್ಯ, ಕೇಂದ್ರಾಡಳಿತ ಪ್ರದೇಶ ಹಾಗೂ ವಿವಿಧ ಇಲಾಖೆಗಳ ಟ್ಯಾಬ್ಲೋ ಪ್ರಸ್ತಾಪನೆಗಳನ್ನು ಪರಿಶೀಲಿಸಿ, ಗಣರಾಜ್ಯೋತ್ಸವ ಪರೇಡ್‍ನ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಟ್ಯಾಬ್ಲೋಗಳನ್ನು ಅಂತಿಮಗೊಳಿಸುತ್ತದೆ. 2020ರ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾಗವಹಿಸಲು ರಾಜ್ಯಗಳಿಂದ 32 ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ 24 ಪ್ರಸ್ತಾವನೆಗಳು ಬಂದಿದ್ದವು. ಅದರಲ್ಲಿ ಒಟ್ಟು 22 ಪ್ರಸ್ತಾಪನೆಗಳನ್ನು ಅಂತಿಮ ಮಾಡಲಾಗಿದೆ.

  • ಬೆದರಿಕೆಯೊಡ್ಡಿ ಹೆತ್ತ ತಾಯಿಯನ್ನೇ ಅತ್ಯಾಚಾರಗೈದ ಕಾಮುಕ ಮಗ

    ಬೆದರಿಕೆಯೊಡ್ಡಿ ಹೆತ್ತ ತಾಯಿಯನ್ನೇ ಅತ್ಯಾಚಾರಗೈದ ಕಾಮುಕ ಮಗ

    – ಕಳೆದ ಮೂರು ತಿಂಗಳುಗಳಿಂದ ನಿರಂತರ ರೇಪ್
    – ತಾಯಿಗೆ ಹೊಡೆದು ಬಡಿದು ಕಿರುಕುಳ

    ಮುಂಬೈ: ಮಹಾರಾಷ್ಟ್ರದ ಔರಂಗಾಬಾದಿನಲ್ಲಿ 20 ವರ್ಷದ ಮಗನೋರ್ವ ಹೆತ್ತ ತಾಯಿಗೆ ಜೀವ ಬೆದರಿಕೆಯೊಡ್ಡಿ ನಿರಂತರ ಅತ್ಯಾಚಾರವೆಸೆಗಿದ ನೀಚ ಪ್ರಕರಣ ಬೆಳಕಿಗೆ ಬಂದಿದೆ.

    ಕಳೆದ ಮೂರು ತಿಂಗಳಿಂದ ತನ್ನ ಮೇಲೆ ಮಗ ಅತ್ಯಾಚಾರ ನಡೆಸುತ್ತಾ ಬಂದಿದ್ದಾನೆ ಎಂದು ತಾಯಿಯೇ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಆಧಾರದ ಮೇಲೆ ಬುಧವಾರ ಇಂತಹ ನೀಚ ಕೃತ್ಯವೆಸೆಗಿದ ಕಾಮುಕ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಸೆಕ್ಸ್ ನಂತ್ರ 500 ರೂ. ಕೇಳಿದ ಪ್ರೇಯಸಿಯನ್ನೇ ಕೊಂದ

    ಆರೋಪಿಯ ತಂದೆ 7 ವರ್ಷಗಳ ಹಿಂದೆ ಮೃತಪಟ್ಟಿದ್ದು, ಕುಟುಂಬ ನಿರ್ವಹಣೆಗಾಗಿ ತಾಯಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿಗೆ ಒಟ್ಟು 4 ಮಕ್ಕಳಿದ್ದು ಅವರಲ್ಲಿ ಆರೋಪಿ ಹಿರಿಯ ಮಗನಾಗಿದ್ದಾನೆ. ಆದರೆ ಮನೆ ನಡೆಸಲು ತಾಯಿಗೆ ನೆರವಾಗಬೇಕಿದ್ದ ಮಗ ಮಾತ್ರ ಬೇಜವಬ್ದಾರಿಯಿಂದ ಪ್ರತಿದಿನ ಮನೆಗೆ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು. ಮದ್ಯಕ್ಕಾಗಿ ಹಣ ನೀಡುವಂತೆ ತಾಯಿಯನ್ನು ಪೀಡಿಸುತ್ತಿದ್ದನು. ತಾಯಿ ಹಣ ನೀಡಲು ನಿರಾಕರಿಸಿದಾಗ ಹಲ್ಲೆ ನಡೆಸುತ್ತಿದ್ದನು. ಅಷ್ಟೇ ಅಲ್ಲದೆ ಕಳೆದ 3 ತಿಂಗಳಲ್ಲಿ ಹಲವು ಬಾರಿ ತಾಯಿಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ಕೊಲೆ ಬೆದರಿಕೆ ಕೂಡ ಹಾಕಿದ್ದಾನೆ. ಇದನ್ನೂ ಓದಿ: ನಾಲ್ಕು ವರ್ಷದವಳಿದ್ದಾಗಿಂದಲೂ ಅತ್ಯಾಚಾರ- 40 ವರ್ಷದ ಮಹಿಳೆ ಆರೋಪ

    ಈ ಬಗ್ಗೆ ಯಾರಿಗಾದರು ಹೇಳಿದರೆ ಕೊಲೆ ಮಾಡುತ್ತೇನೆ ಎಂದು ತಾಯಿಯನ್ನು ಹೆದರಿಸಿದ್ದಾನೆ. ಆದರೆ ಮಗನ ಕ್ರೌರ್ಯಕ್ಕೆ ಬೇಸತ್ತ ತಾಯಿ ಕೊನೆಗೂ ಪೊಲೀಸರ ಮೊರೆಹೋಗಿದ್ದು, ತನ್ನ ಮೇಲೆ ಮಗ ಎಸೆಗಿರುವ ದೌರ್ಜನ್ಯ ಅತ್ಯಾಚಾರದ ಕುರಿತು ಪೊಲೀಸರಿಗೆ ತಿಳಿಸಿ, ಮಗನ ವಿರುದ್ಧ ದೂರು ಕೊಟ್ಟಿದ್ದಾರೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಗನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿ, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸದ್ಯ ನ್ಯಾಯಾಲಯ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

  • ಸಾವರ್ಕರ್‌ಗೆ ಭಾರತರತ್ನ – ಮಹಾರಾಷ್ಟ್ರ ಚುನಾವಣೆಗೆ ಬಿಜೆಪಿ ಭರವಸೆ

    ಸಾವರ್ಕರ್‌ಗೆ ಭಾರತರತ್ನ – ಮಹಾರಾಷ್ಟ್ರ ಚುನಾವಣೆಗೆ ಬಿಜೆಪಿ ಭರವಸೆ

    – ಸಂಕಲ್ಪಪತ್ರ ಹೆಸರಿನ ಪ್ರಾಣಳಿಕೆ ಬಿಡುಗಡೆ
    – 5 ವರ್ಷದಲ್ಲಿ 1 ಕೋಟಿ ಉದ್ಯೋಗ

    ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಈ ಬಾರಿ ಮತ್ತೆ ಅಧಿಕಾರಕ್ಕೆ ಏರಿದರೆ ವಿನಾಯಕ ದಾಮೋದರ ಸಾವರ್ಕರ್ ಅವರಿಗೆ ಭಾರತದ ಶ್ರೇಷ್ಠ ನಾಗರಿಕ ಪ್ರಶಸ್ತಿ ಭಾರತರತ್ನವನ್ನು ಮರಣೋತ್ತರವಾಗಿ ನೀಡಲಾಗುವುದು ಎಂದು ಭರವಸೆ ನೀಡಿದೆ.

    ಬಿಜೆಪಿ ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಮೂಲಕ ವಿನಾಯಕ ದಾಮೋದರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಭರವಸೆ ನೀಡಿದೆ.

    ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿಯ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡಿದರು. 44 ಪುಟಗಳ ಸಂಕಲ್ಪ ಪತ್ರದ ಮೂಲಕ ಮತದಾರರಿಗೆ ಅನೇಕ ಭರವಸೆಗಳನ್ನು ಬಿಜೆಪಿ ನೀಡಲಾಗಿದೆ. ಸಾವರ್ಕರ್ ಅವರಿಗೆ ಭಾರತರತ್ನ ನೀಡಬೇಕು ಎಂಬ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆಗೆ ಗ್ರಾಸವಾಗಿದೆ.

    ಸಾವರ್ಕರ್ ಯಾರು?
    ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಜನಿಸಿದ್ದ ಸಾವರ್ಕರ್ ಹಿಂದೂ ಮಹಾಸಭಾವನ್ನು ಸ್ಥಾಪಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಭಾರತ ಪಾಕಿಸ್ತಾನ ವಿಭಜನೆ ಮಾಡಲು ಒಪ್ಪಿಗೆ ನೀಡಿದ್ದಕ್ಕೆ ಗಾಂಧೀಜಿ ಅವರನ್ನು ಕಟುವಾಗಿ ವಿರೋಧಿಸಿದ್ದರು. ನಾಥೂರಾಮ್ ಗೂಡ್ಸೆ ಹಿಂದೂ ಮಹಾಸಭಾದ ಸದಸ್ಯನಾಗಿದ್ದ ಮತ್ತು ಗಾಂಧೀಜಿ ಹತ್ಯೆಯ ಮಾಸ್ಟರ್ ಮೈಂಡ್ ಸಾವರ್ಕರ್ ಎಂಬ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದ ಅಡಿ ಸರ್ಕಾರ ಬಂಧಿಸಿದ್ದರೂ ಗಾಂಧೀಜಿ ಹತ್ಯೆಯಲ್ಲಿ ಭಾಗಿಯಾದ ಬಗ್ಗೆ ಸಾಕ್ಷ್ಯಗಳು ಲಭ್ಯವಿಲ್ಲದ ಕಾರಣ ಸುಪ್ರೀಂ ಕೋರ್ಟ್ ಅವರನ್ನು ಬಿಡುಗಡೆಗೊಳಿಸಿತ್ತು.

    ಸಂಕಲ್ಪ ಪತ್ರದಲ್ಲಿ ಏನಿದೆ?
    ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರದ ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ 1 ಕೋಟಿ ಉದ್ಯೋಗ ಸೃಷ್ಟಿಸಲಾಗುತ್ತದೆ. ಕೃಷಿಯಲ್ಲಿ ಬಳಸುವ ವಿದ್ಯುತ್ ಸೌರಶಕ್ತಿಯನ್ನು ಆಧರಿಸಿರುತ್ತದೆ ಮತ್ತು ರೈತರಿಗೆ 12 ಗಂಟೆಗಳಿಗಿಂತ ಹೆಚ್ಚಿನ ವಿದ್ಯುತ್ ಒದಗಿಸಲಾಗುವುದು. 2022ರ ವೇಳೆಗೆ 5 ಲಕ್ಷ ಕೋಟಿ ರೂ. ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಹೂಡಿಕೆ ಮಾಡಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತದೆ.

    ಗೋದಾವರಿ ಕಣಿವೆಯಿಂದ ಪಶ್ಚಿಮದಿಂದ ಹರಿಯುವ ನದಿಗಳ ನೀರನ್ನು ನಿಲ್ಲಿಸಿ ಮರಾಠವಾಡ ಮತ್ತು ಉತ್ತರ ಮಹಾರಾಷ್ಟ್ರದ ಬರ ಪೀಡಿತ ಭಾಗಕ್ಕೆ ಸಾಗಿಸಲಾಗುತ್ತದೆ. ಈ ಮೂಲಕ ಮುಂಬರುವ 5 ವರ್ಷಗಳಲ್ಲಿ ಮಹಾರಾಷ್ಟ್ರವನ್ನು ಬರಗಾಲದಿಂದ ಮುಕ್ತಗೊಳಿಸುತ್ತೇವೆ. ಮೂಲ ಸೌಕರ್ಯಗಳಿಗಾಗಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 5 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುವುದು.

    ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ ಗ್ರಾಮೀಣ ಪ್ರದೇಶ ಸೇರಿದಂತೆ ಒಟ್ಟು 30 ಸಾವಿರ ಕಿಲೋ ಮೀಟರ್ ರಸ್ತೆಯನ್ನು ನಿರ್ಮಿಸಲಾಗುತ್ತದೆ. ಅಷ್ಟೇ ಅಲ್ಲದೆ ಸಮಾಜ ಸುಧಾರಕ ಜ್ಯೋತಿ ರಾವ್ ಫುಲೆ, ಪತ್ನಿ ಸಾವಿತ್ರಿಭಾಯಿ ಫುಲೆ ಹಾಗೂ ವಿಡಿ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ.

  • ಗಣೇಶ ವಿಸರ್ಜನೆ ವೇಳೆ ಅವಘಡ- ಮಹಾರಾಷ್ಟ್ರದಲ್ಲಿ ಇಬ್ಬರ ಜೀವ ಉಳಿಸಿದ ಕನ್ನಡಿಗ

    ಗಣೇಶ ವಿಸರ್ಜನೆ ವೇಳೆ ಅವಘಡ- ಮಹಾರಾಷ್ಟ್ರದಲ್ಲಿ ಇಬ್ಬರ ಜೀವ ಉಳಿಸಿದ ಕನ್ನಡಿಗ

    ಯಾದಗಿರಿ: ಮಹಾರಾಷ್ಟ್ರದ ಪುಣೆಯಲ್ಲಿ ಗಣೇಶ ವಿಸರ್ಜನೆ ವೇಳೆ ಅವಘಡ ನಡೆದು ಇಬ್ಬರು ಯುವಕರು ಕೆರೆ ಪಾಲಾಗುತ್ತಿದ್ದರು, ಈ ವೇಳೆ ಪ್ರಾಣದ ಹಂಗು ತೊರೆದು ಯಾದಗಿರಿಯ ಯುವಕ ಇಬ್ಬರ ಜೀವ ಉಳಿಸಿದ್ದಾನೆ.

    ಮೂಲತಃ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೊನಹಳ್ಳಿಯ ನಿವಾಸಿಯಾಗಿರುವ ದೇವಪ್ಪ ಇಬ್ಬರ ಜೀವ ಉಳಿಸಿದ್ದಾನೆ. ಸದ್ಯ ಪುಣೆಯ ಖಾಸಗಿ ಕಂಪನಿಯೊಂದರಲ್ಲಿ ದೇವಪ್ಪ ಕೆಲಸ ಮಾಡುತ್ತಿದ್ದಾನೆ. ಶನಿವಾರ ಪುಣೆ ನಗರದಲ್ಲಿರುವ ಬ್ರಿಡ್ಜ್ ಕಮ್ ಬ್ಯಾರೇಜ್‍ನಲ್ಲಿ ಗಣೇಶ್ ವಿಸರ್ಜನೆಯನ್ನು ಮಾಡಲು ಸ್ಥಳೀಯರು ತೆರೆಳಿದ್ದರು. ಈ ವೇಳೆ ಕೆಲ ಯುವಕರು ಗಣೇಶ ಮೂರ್ತಿ ಹಿಡಿದ ಕೆರೆ ಆಳಕ್ಕೆ ಇಳಿದಿದ್ದರು. ಕೆರೆಗೆಳಿದ ಯುವಕರಲ್ಲಿ ಇಬ್ಬರಿಗೆ ಈಜುಬಾರದ ಹಿನ್ನೆಲೆ ನೀರಿನಲ್ಲಿ ಮುಳುಗುತ್ತಿದ್ದರು.

    ಇದನ್ನು ಗಮನಿಸಿದ ದೇವಪ್ಪ ಕೆರೆಗೆ ಜಿಗಿದು ಯುವಕರ ಜೀವ ಉಳಿಸಿದ್ದಾನೆ. ದೇವಪ್ಪ ಯುವಕರನ್ನು ಕಾಪಾಡುವ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಈ ದೃಶ್ಯಗಳು ಪಬ್ಲಿಕ್ ಟಿವಿ ಲಭ್ಯವಾಗಿವೆ. ನೆರೆಯ ರಾಜ್ಯದಲ್ಲಿ ಇಬ್ಬರ ಜೀವ ಉಳಿಸಿದ ಕನ್ನಡಿಗನ ಸಾಹಸ ನಿಜಕ್ಕೂ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

  • ಗಂಡು ಮಗುವಿಗೆ ಜನ್ಮ ನೀಡಿ 7 ಹೆಣ್ಮಕ್ಕಳ ತಾಯಿ ದುರ್ಮರಣ!

    ಗಂಡು ಮಗುವಿಗೆ ಜನ್ಮ ನೀಡಿ 7 ಹೆಣ್ಮಕ್ಕಳ ತಾಯಿ ದುರ್ಮರಣ!

    ಔರಂಗಾಬಾದ್(ಮುಂಬೈ): ಗಂಡು ಮಗು ಬೇಕು ಅನ್ನೋ ಮನೆ ಹಿರಿಯರ ಹಠದಿಂದಾಗಿ 7 ಹೆಣ್ಣು ಮಕ್ಕಳಿದ್ದ ಮಹಿಳೆ ಕೊನೆಗೂ ಪುತ್ರನಿಗೆ ಜನ್ಮ ನೀಡಿ ಮೃತಪಟ್ಟ ದಾರುಣ ಘಟನೆ ಔರಂಗಾಬಾದ್ ನಲ್ಲಿ ನಡೆದಿದೆ.

    ಈ ಘಟನೆ ಶುಕ್ರವಾರ ರಾತ್ರಿ ಬೀಡ್ ಜಿಲ್ಲೆಯ ಮಜಲ್ ಗಾಂವ್ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. 38 ವರ್ಷದ ಮಹಿಳೆ ತನ್ನ 10ನೇ ಹೆರಿಗೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿ ಬಳಿಕ ಸಾವನ್ನಪ್ಪಿದ್ದಾರೆ.

    ಘಟನೆ ವಿವರ:
    ಮಹಿಳೆಗೆ ಈಗಾಗಲೇ 7 ಮಂದಿ ಪುತ್ರಿಯರಿದ್ದಾರೆ. ಆದ್ರೆ ಮನೆಯವರು ಮಾತ್ರ ಪುತ್ರ ಸಂತಾನ ಬೇಕು ಅಂತ ಹಠ ಹಿಡಿದಿದ್ದಾರೆ. ಅಲ್ಲದೇ 7 ಹೆಣ್ಣು ಮಕ್ಕಳಾದ ಬಳಿಕ 2 ಬಾರಿ ಗರ್ಭಪಾತವನ್ನೂ ಮಾಡಿಸಿದ್ದಾರೆ. 10ನೇ ಮಗು ಗಂಡು ಅಂತ ತಿಳಿದ ಬಳಿಕ ಹೆರಿಗೆ ಮಾಡಿಸಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ.

    ಮಹಿಳೆ ಹೆರಿಗೆಗಾಗಿ ಶುಕ್ರವಾರ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದರು. ಗಂಡು ಶಿಶುಗೆ ಜನ್ಮವನ್ನೂ ನೀಡಿದ್ದಾರೆ. ಮಗುವಿನ ಜನನವಾದ ತಕ್ಷಣವೇ ಮಹಿಳೆಗೆ ವಿಪರೀತ ರಕ್ತಸ್ತ್ರಾವ ಆರಂಭವಾಗಿದೆ. ತೀವ್ರ ರಕ್ತಸ್ರಾವದಿಂದಾಗಿ ಮಹಿಳೆ ಪುತ್ರನಿಗೆ ಜನ್ಮ ನೀಡಿದ 24 ಗಂಟೆಯಲ್ಲಿ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ ಅಂತ ಆಸ್ಪತ್ರೆಯ ವೈದ್ಯ ಗಜಾನನ ರುದ್ರವರ್ ತಿಳಿಸಿದ್ದಾರೆ.

    ಮಹಿಳೆಗೆ ರಕ್ರಸ್ರಾವವಾಗುತ್ತಿದ್ದಂತೆಯೇ ಕೂಡಲೇ ನಾವು ಬೇರೆ ವೈದ್ಯರ ಸಹಾಯ ಪಡೆದೆವು. ಆದ್ರೆ ನಮಗೆ ಮಹಿಳೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೆರಿಗೆ ರೂಮಿನಲ್ಲಿ ನಾಲ್ವರು ವೈದ್ಯರು ಮಹಿಳೆಗೆ ಚಿಕಿತ್ಸೆ ನೀಡಿ ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದ್ರೆ ನಮ್ಮ ಎಲ್ಲಾ ಪ್ರಯತ್ನಗಳು ವಿಫಲವಾದವು. ಪ್ರಸವದ ವಿಪರೀತ ರಕ್ತಸ್ರಾವವಾದ್ದರಿಂದ ನಮ್ಮ ಯಾವ ಪ್ರಯತ್ನಗಳು ಸಫಲತೆ ಕಂಡಿಲ್ಲ ಅಂತ ಅವರು ವಿವರಿಸಿದ್ರು.

    2 ಬಾರಿ ಗರ್ಭಿಣಿಯಾದ ಮಹಿಳೆಯನ್ನ ಹೇಗಾದ್ರೂ ಮಾಡಿ ಬದುಕಿಸಿಕೊಳ್ಳಬಹುದಿತ್ತು. ಆದ್ರೆ ಇವರಿಗೆ ಇದು 10ನೇ ಹೆರಿಗೆಯಾಗಿತ್ತು. ಹೀಗಾಗಿ ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ನಡೆಸಿದ್ರೂ ಕೈಗೂಡಲಿಲ್ಲ. ಅವರಿಗೆ 2 ಯೂನಿಟ್ ರಕ್ತವನ್ನೂ ನೀಡಿದ್ದೆವು ಅಂತ ಹೇಳಿದ್ರು.

    ಮಹಿಳೆಯ ಪತಿ ಒಂದು ಸಣ್ಣ ಅಂಗಡಿಯನ್ನು ಇಟ್ಟುಕೊಂಡಿದ್ದು, ಅದರಿಂದ ಬಂದ ಹಣದಲ್ಲೇ ಜೀವನ ನಡೆಸುತ್ತಿದ್ದಾರೆ. ದೊಡ್ಡ ಮಗಳು ಜೂನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ ಅಂತ ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

    ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

    ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಪ್ರತಿಬಾರಿಯೂ ನೆರೆ ರಾಜ್ಯಗಳು ಖ್ಯಾತೆಯನ್ನು ತೆರೆಯುವುದು ಸಾಮಾನ್ಯವಾಗಿಬಿಟ್ಟಿದೆ. ಕೊಡಗಿನ ತಲಕಾವೇರಿಯಲ್ಲಿ ಹುಟ್ಟುವ ಕಾವೇರಿ ನದಿಗೆ ತಮಿಳುನಾಡು ಕಿರಿಕ್ ಮಾಡುತ್ತಿದ್ದರೆ, ಇತ್ತ ಬೆಳಗಾವಿ ಹುಟ್ಟುವ ಮಹದಾಯಿ ನದಿಗೆ ಗೋವಾ ಕ್ಯಾತೆ ತೆಗೆಯುತ್ತಿದೆ. ಮಹದಾಯಿ ನದಿಯ ತಿರುವು ಯೋಜನೆಯಿಂದ ಗೋವಾಕ್ಕೆ ಮತ್ತು ಪರಿಸರಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ಅಧ್ಯಯನಗಳು ವರದಿ ನೀಡಿದರೂ ಗೋವಾ ಸರ್ಕಾರ ಮಾತ್ರ ತನ್ನ ಮೊಂಡುವಾದವನ್ನು ಮುಂದುವರೆಸಿಕೊಂಡೆ ಬಂದಿದೆ. ಆದರೆ ಉತ್ತರ ಕರ್ನಾಟಕದ ಜನ ಕುಡಿಯುವ ನೀರಿಗಾಗಿ ತತ್ತರಿಸಿ ಹೋಗಿದ್ದು, ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಈಗ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಮಹದಾಯಿ ಯೋಜನೆ ಎಂದರೆ ಏನು? ವಿವಾದ ಯಾಕೆ ಆರಂಭವಾಯಿತು ಮತ್ತು ಪ್ರಸ್ತುತ ಯೋಜನೆ ಸ್ಥಿತಿಗತಿ ಏನು ಎಂಬುದರ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಮಲಪ್ರಭಾ ನದಿ ಸಂಜೀವಿನಿ ಯಾಕೆ?
    ಕಳಸಾ-ಬಂಡೂರಿ ನಾಲಾ ಜೋಡಣೆ ಅಥವಾ ಮಹದಾಯಿ ತಿರುವು ಹೆಸರಿನಿಂದ ಕರೆದುಕೊಳ್ಳುವ ಯೋಜನೆ ಕರ್ನಾಟಕ ಸರ್ಕಾರದ ಒಂದು ಮಹಾತ್ವಾಕಾಂಕ್ಷೆಯ ಯೋಜನೆ. ಈ ಯೋಜನೆಗಳನ್ನು ತಿಳಿದುಕೊಳ್ಳುವ ಮೊದಲು ಬೆಳಗಾವಿ, ಗದಗ್, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಯ ಸಂಜೀವಿನಿ ಎಂದೇ ಕರೆಯಿಸಿಕೊಳ್ಳುವ ಮಲಪ್ರಭಾ ನದಿಯ ಬಗ್ಗೆ ನೀವು ತಿಳಿದುಕೊಳ್ಳಬೇಕು. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕಣಕುಂಬಿ ಗ್ರಾಮದ ಮಾವೋಲಿ ಪ್ರದೇಶದಲ್ಲಿ ಹುಟ್ಟುವ ಮಲಪ್ರಭಾ ನದಿ ಪಶ್ಚಿಮಾಭಿಮುಖವಾಗಿ ಹರಿಯುತ್ತದೆ. ಈ ರೀತಿಯಾಗಿ ಹರಿದು ಬರುವ ನದಿಗೆ ಬೆಳಗಾವಿ ಜಿಲ್ಲೆಯ ಸವದತ್ತಿ ಬಳಿಯ ನವಿಲುತೀರ್ಥ ಎಂಬಲ್ಲಿ ರೇಣುಕಾಸಾಗರ ಹೆಸರಿನಲ್ಲಿ ಅಣೆಕಟ್ಟನ್ನು ಕಟ್ಟಲಾಗಿದೆ. 1962 ರಲ್ಲಿ ಆರಂಭಿಸಿ, 1972 ರಲ್ಲಿ ಪೂರ್ಣಗೊಂಡ ಈ ಜಲಾಶಯದಲ್ಲಿ 37 ಟಿಎಂಸಿ ನೀರು ಸಂಗ್ರಹವಾಗುತಿತ್ತು. ಈ ಜಲಾಶಯದಲ್ಲಿ ಸಂಗ್ರಹವಾದ ನೀರು ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಕೆಲ ತಾಲೂಕಿನ ಗ್ರಾಮಗಳಿಗೆ ಸಿಗುತಿತ್ತು. ಆದರೆ ಮಳೆ ಕಡಿಮೆಯಾಗುತ್ತಿದ್ದಂತೆ ಈ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಯಿತು. ಹೀಗಾಗಿ ನವಿಲು ತೀರ್ಥ ಜಲಾಶಯದ ನೀರಿನ ಸಮಸ್ಯೆಯನ್ನು ಪರಿಹರಿಸಲು ಸಿದ್ದವಾದ ಯೋಜನೆಯೇ ಮಹದಾಯಿ ತಿರುವು ಯೋಜನೆ.

    ಏನಿದು ಮಹದಾಯಿ ಯೋಜನೆ?
    ನವಿಲು ತೀರ್ಥ ಜಲಾಶಯ ನಿರ್ಮಾಣ ಮಾಡುವ ಮೊದಲೇ ಈ ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆ ಆಗಬಹುದು ಎನ್ನುವ ಮುಂದಾಲೋಚನೆ ಸರ್ಕಾರಕ್ಕಿತ್ತು. ಹೀಗಾಗಿ ಈ ಪ್ರದೇಶಗಳ ನದಿಗಳನ್ನು ಮೊದಲು ಜೋಡಿಸಿ, ನಂತರ ಅವುಗಳನ್ನು ಮಲಪ್ರಭೆಗೆ ಜೋಡಿಸಿ, ಕಟ್ಟಲು ಉದ್ದೇಶಿಸಿರುವ ಡ್ಯಾಂಗೆ ಮತ್ತಷ್ಟು ನೀರು ಸಂಗ್ರಹಿಸಲು ಯೋಜನೆ ರೂಪುಗೊಂಡಿತ್ತು. ಮಹದಾಯಿ ಕಣಿವೆಗೆ ಎಲ್ಲ ಉಪ ನದಿಗಳು ಸೇರುವ ಕಾರಣ ಈ ಯೋಜನೆಗೆ ‘ಮಹಾದಾಯಿ ಕಣಿವೆ ತಿರುವು ಯೋಜನೆ’ ಎಂದು ನಾಮಕರಣ ಮಾಡಲಾಯಿತು.

    ಮಹದಾಯಿ ನದಿಯ ಪಾತ್ರ ಏನು?
    ಮಲಪ್ರಭಾ ನದಿಯಂತೆ ಮಹದಾಯಿ ನದಿ ಕೂಡಾ ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ದೇವಗಾವುಡು ಗ್ರಾಮದ ಬಳಿ ಹುಟ್ಟುತ್ತದೆ. ಈ ಮಹದಾಯಿ ನದಿ ಕರ್ನಾಟಕದಲ್ಲಿ 35 ಕಿ.ಮೀ. ಹರಿದು ‘ಸುರಗ’ ಪ್ರದೇಶದಲ್ಲಿ ಗೋವಾ ರಾಜ್ಯ ಪ್ರವೇಶಿಸುತ್ತದೆ. ಗೋವಾದಲ್ಲಿ ‘ಮಾಂಡೋವಿ’ ಹೆಸರಿನಲ್ಲಿ ಕರೆಯುವ ನದಿ ಅಲ್ಲಿ ಸುಮಾರು 45 ಕಿ.ಮೀ. ಹರಿಯುತ್ತದೆ. ಮಹದಾಯಿ ನದಿ ಹಳತಾರಾ, ಕಳಸಾ, ಬಂಡೂರಿ, ಕಾರಂಜೋಳ, ಬೊಮ್ಮನರಿ ದೂದ ಸಾಗರ ಹೀಗೆ ಅನೇಕ ಉಪನದಿಗಳಿಂದ ಕೂಡಿದ ನದಿ ಕಣಿವೆ ಆಗಿದೆ. ಇದು ಹೆಚ್ಚು ಮಳೆಬೀಳುವ ಪ್ರದೇಶವಾಗಿದ್ದು ಸರಾಸರಿ 3,134 ಮಿಲಿಮೀಟರ್ ಮಳೆ ಬೀಳುತ್ತದೆ. ಮಹಾದಾಯಿ ನದಿ ಕಣಿವೆಯಿಂದ ಕಾಲುವೆ ಮೂಲಕ ಮಲಪ್ರಭಾ ನದಿಗೆ ನೀರು ವರ್ಗಾಯಿಸುವುದೇ ಈ ಯೋಜನೆಯ ಉದ್ದೇಶ.

    ಮಹದಾಯಿ ನದಿಯಲ್ಲಿ ಯಾವ ರಾಜ್ಯಕ್ಕೆ ಎಷ್ಟು ಪಾಲು?
    ಮಹದಾಯಿ ನದಿ 2032 ಚ.ಕಿ.ಮೀ ಜಲನಯನ ಪ್ರದೇಶ ಹೊಂದಿದ್ದು ಕರ್ನಾಟಕದಲ್ಲಿ 375 ಚ.ಕಿ.ಮೀ, ಮಹಾರಾಷ್ಟ್ರದಲ್ಲಿ 77 ಚ.ಕಿ.ಮೀ, ಗೋವಾದಲ್ಲಿ 1580 ಚ.ಕೀ.ಮೀ ಪ್ರದೇಶವನ್ನು ಹೊಂದಿದೆ.

    ಕಾಲುವೆ ಜೋಡಣೆ ಹೇಗೆ?
    ಗದಗ್, ಧಾರವಾಡ, ಬೆಳಗಾವಿ ಜನರ ನೀರಿನ ಸಮಸ್ಯೆ ಪರಿಹಾರಿಸಲು ಸರ್ಕಾರ ಕಳಸಾ ಹಾಗೂ ಬಂಡೂರಿ ಎಂಬ ಎರಡು ಹೊಸ ಯೋಜನೆಗಳನ್ನು ಆರಂಭಿಸಲು ಮುಂದಾಯಿತು. ಇದಕ್ಕಾಗಿ ಕಳಸಾ ಯೋಜನೆಯಲ್ಲಿ ಮೊದಲು ಕಳಸಾ ನದಿಗೆ ಅಣೆಕಟ್ಟು ಹಾಗೂ 4.8 ಕಿ.ಮಿ. ಉದ್ದದ ಕಾಲುವೆ ನಿರ್ಮಾಣ ಮಾಡುವುದು, ಇನ್ನೊಂದು ಹಳತಾರಾ ನದಿಗೆ ಅಣೆಕಟ್ಟು ನಿರ್ಮಿಸಿ ಅಲ್ಲಿ ಸಂಗ್ರಹವಾದ ನೀರನ್ನು 5.5 ಕಿ.ಮೀ. ಉದ್ದದ ಕಾಲುವೆಯ ಮೂಲಕ ಕಳಸಾ ಅಣೆಕಟ್ಟೆಗೆ ಸಾಗಿಸುವ ಉದ್ದೇಶದೊಂದಿಗೆ ಈ ಕಾಮಗಾರಿ ಆರಂಭವಾಯಿತು. ಬಂಡೂರಿ ಯೋಜನೆಯಲ್ಲಿ ಸಿಂಗಾರ ನಾಲಾ ಹಾಗೂ ವಾಟಿ ನಾಲಾಗಳಿಗೆ ಅಣೆಕಟ್ಟು ಕಟ್ಟಿ ಸಂಗ್ರಹವಾದ ನೀರನ್ನು ಬಂಡೂರಿ ಜಲಾಶಯಕ್ಕೆ ವರ್ಗಾಯಿಸುವುದು. ಇಲ್ಲಿ ಸಂಗ್ರಹವಾದ 4 ಟಿಎಂಸಿ ನೀರನ್ನು 5.15 ಕಿ.ಮೀ ಕಾಲುವೆ ಮೂಲಕ ಮಲಪ್ರಭಾ ನದಿಗೆ ವರ್ಗಾಯಿಸುವ ಯೋಜನೆಯನ್ನು ಸರ್ಕಾರ ರೂಪಿಸಿತು.

    ಯೋಜನೆ ಆರಂಭಗೊಂಡು ಅರ್ಧದಲ್ಲಿ ನಿಂತ ಕಥೆ:
    ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳುವ ಚಿಂತನೆ ಆರಂಭವಾದ ಹಿನ್ನೆಲೆಯಲ್ಲಿ 1978ರಲ್ಲಿ ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್ ಅವರು ಎಸ್.ಆರ್.ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದರು. 1980ರಲ್ಲಿ ವರದಿ ನೀಡಿದ ಸಮಿತಿ ಯೋಜನೆಯನ್ನು ಜಾರಿಗೊಳಿಸಬಹುದು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತು. ಕರ್ನಾಟಕ ಸರ್ಕಾರ 1988ರಲ್ಲಿ ಯೋಜನೆಗೆ ಒಪ್ಪಿಗೆ ನೀಡಿತು. ಆದರೆ, ಗೋವಾ ಸರ್ಕಾರದಿಂದ ಇದಕ್ಕೆ ವಿರೋಧ ವ್ಯಕ್ತವಾಯಿತು. ಈ ವೇಳೆ ಎಸ್.ಆರ್.ಬೊಮ್ಮಾಯಿ ಅವರು 1989ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಗೋವಾ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣಾ ಜೊತೆ ಮಾತುಕತೆ ನಡೆಸಿದರು. ಮಾತುಕತೆ ಫಲಪ್ರದವಾಗಿ ಯೋಜನೆಗೆ ಗೋವಾ ಒಪ್ಪಿಗೆ ನೀಡಿತು. 2000ದಲ್ಲಿ ಕಳಸಾ-ಬಂಡೂರಿ ನಾಲೆ ಯೋಜನೆಗೆ ಅರಣ್ಯ ಇಲಾಖೆಯೂ ಅನುಮತಿ ನೀಡಿತು. ಬಂಡೂರಿ ನಾಲಾ ಯೋಜನೆಗೆ 49.20 ಕೋಟಿ ರೂ. ಕಳಸಾ ನಾಲಾ ಯೋಜನೆಗೆ 44.78 ಕೋಟಿ ರೂ. ವೆಚ್ಚ ಮಾಡಲು ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿತು. 2002ರ ಏ.30ರಂದು ಕಳಸಾ ಬಂಡೂರಿ ಕಾಲುವೆ ಮೂಲಕ ನೀರನ್ನು ಹರಿಸಲು ವಾಜಪೇಯಿ ನೃತೃತ್ವದ ಕೇಂದ್ರ ಸರ್ಕಾರದ ಜಲಸಂಪನ್ಮೂಲ ಸಚಿವಾಲಯವೂ ಒಪ್ಪಿಗೆ ನೀಡಿತು. ಆದರೆ 2002ರ ಮೇನಲ್ಲಿ ಗೋವಾ ಸರ್ಕಾರ ಯೋಜನೆ ಬಗ್ಗೆ ತಕರಾರು ಎತ್ತಿದ ಪರಿಣಾಮ ಈ ಯೋಜನೆ ಈಗ ಅರ್ಧದಲ್ಲೇ ನಿಂತಿದೆ.

    ಕಾಮಗಾರಿಗೆ ತಡೆ ನೀಡುತ್ತಿರುವ ಗೋವಾದ ವಾದವೇನು?
    ಮೊದಲನೆಯದಾಗಿ ಮಹದಾಯಿ ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಒಂದು ಕಣಿವೆ ಪ್ರದೇಶ. ಹೀಗಾಗಿ ಈ ಕಣಿವೆಯಲ್ಲಿ ಹರಿಯುವ ನೀರನ್ನು ವರ್ಗಾಯಿಸಬಾರದು. ಎರಡನೇಯದಾಗಿ ಮಹದಾಯಿ ನದಿಯನ್ನು ತಿರುವು ಮಾಡಿದರೆ ಪಶ್ಚಿಮ ಘಟ್ಟದ ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಮೂರನೇಯದಾಗಿ ಈ ನೀರಿನಲ್ಲಿ ವಾಸ ಮಾಡುತ್ತಿರುವ ಸಿಗಡಿ ಮೀನು ನಮಗೆ ಅಮೂಲ್ಯವಾಗಿದೆ. ಸಿಹಿ ನೀರಿನಲ್ಲಿ ಮಾತ್ರ ಬದುಕಬಲ್ಲ ಈ ಮೀನು ಗೋವಾಕ್ಕೆ ಬರುವ ಪ್ರವಾಸಿಗರಿಗೆ ಅಚ್ಚುಮೆಚ್ಚು. ಒಂದು ವೇಳೆ ನೀರಿನ ಸಮಸ್ಯೆಯಾಗಿ ಮೀನು ಉತ್ಪಾದನೆ ಕಡಿಮೆಯಾದರೆ ಪ್ರವಾಸೋದ್ಯಮದ ಮೇಲೆ ನೇರ ಹೊಡೆತ ಬೀಳುತ್ತದೆ. ಹೀಗಾಗಿ ಮಹಾದಾಯಿ ನದಿಯ ನೀರು ತನ್ನ ರಾಜ್ಯದ ಮೂಲಕವೇ ಹಾದು ಹೋಗಬೇಕೆಂಬ ವಾದವನ್ನು ಮುಂದಿಟ್ಟುಕೊಂಡು ಬಂದಿದೆ.

    ಮಹಾರಾಷ್ಟ್ರದ ಕಿರಿಕ್ ಏನು?
    ಮಹಾರಾಷ್ಟ್ರದಲ್ಲಿ 77 ಚ.ಕಿ.ಮೀನಷ್ಟು ದೂರದವರೆಗೆ ಮಹದಾಯಿ ನದಿ ಹರಿಯುತ್ತದೆ. ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಯಾವುದೇ ತಡೆಗೋಡೆಗಳನ್ನ ನಿರ್ಮಿಸಬಾರದೆಂಬ ಕೇಂದ್ರ ಜಲ ಮಂಡಳಿ ಆದೇಶ ನೀಡಿದ್ದರೂ ಮಹಾರಾಷ್ಟ್ರ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಒಟ್ಟು 9 ಬ್ಯಾರೇಜ್ ನಿರ್ಮಿಸಿ, ಅದಕ್ಕೆ ತಿಲಹರಿ ಜಲಾಶಯ ಎಂದು ಹೆಸರಿಟ್ಟಿತು. ಈ ಪೈಕಿ 7 ಬ್ಯಾರೇಜ್ ನೀರು, ಕರ್ನಾಟಕದ ಅರಣ್ಯ ಪ್ರದೇಶವನ್ನ ಹಾಳು ಮಾಡಿತು. ಒಂದು ವೇಳೆ ಮಹದಾಯಿ ನದಿ ತಿರುವುಗೊಂಡರೆ ನಮ್ಮ ರಾಜ್ಯದ ಜನರಿಗೆ ಸಮಸ್ಯೆ ಆಗುತ್ತದೆ ಎನ್ನುವ ವಾದವನ್ನು ಮಂಡಿಸಿದೆ.

    ಕರ್ನಾಟಕದ ವಾದ ಏನು?
    ನಾವು ಈ ಯೋಜನೆಯನ್ನು ವಿದ್ಯುತ್ ಅಥವಾ ಇನ್ಯಾವುದೇ ಯೋಜನೆಗಾಗಿ ಆರಂಭಿಸಿಲ್ಲ. ಕುಡಿಯುವ ನೀರಿಗಾಗಿ ನಾವು ಈ ಯೋಜನೆಯನ್ನು ಆರಂಭಿಸಿದ್ದೇವೆ. ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕುಡಿಯುವ ನೀರಿಗೆ ಮೊದಲು ಆದ್ಯತೆ ನೀಡಬೇಕೆಂದು ಅಂತಾರಾಷ್ಟ್ರೀಯ ಜಲ ನೀತಿ ಹೇಳಿದೆ. ಅಷ್ಟೇ ಅಲ್ಲದೇ ಈ ಯೋಜನೆ ಆರಂಭಗೊಂಡರೂ ಗೋವಾ ರಾಜ್ಯಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಹೀಗಾಗಿ ನಮ್ಮ ಯೋಜನೆ ನ್ಯಾಯಸಮ್ಮತವಾಗಿದೆ ಎಂದು ವಾದವನ್ನು ನ್ಯಾಯಾಲಯಕ್ಕೆ ತಿಳಿಸಿತ್ತು.

    ಯೋಜನೆಯಿಂದ ಪರಿಸರದ ಮೇಲೆ ಹಾನಿ ಆಗುತ್ತಾ?
    ಗೋವಾ ಸರ್ಕಾರ ಈ ಯೋಜನೆ ಆರಂಭಗೊಂಡರೆ ಪರಿಸರ ಹಾಳಾಗುತ್ತದೆ ಎನ್ನುವ ವಾದ ಮಂಡಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಈ ಯೋಜನೆಯ ಬಗ್ಗೆ ಅಧ್ಯಯನ ನಡೆಸಬೇಕೆಂದು ಕೇಳಿಕೊಂಡಿತ್ತು. ಹೀಗಾಗಿ ಕೇಂದ್ರ ಸರ್ಕಾರದ ಸಲಹೆಯಂತೆ ‘ನೀರಿ’ ಸಂಸ್ಥೆ 1997ರಲ್ಲಿ ಅಧ್ಯಯನ ನಡೆಸಿತು. ತನ್ನ ವರದಿಯಲ್ಲಿ ನೀರಿ, ಈ ಯೋಜನೆಯಿಂದ ಪರಿಸರದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ, ಮುಂಗಾರು ನಂತರದ ನದಿಯ ನೀರಿನ ಹರಿವಿನಲ್ಲೂ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ತಿಳಿಸಿದೆ. ನೀರಿ ಅಲ್ಲದೇ ಕೇಂದ್ರ ಜಲ ಆಯೋಗದ ಅಧ್ಯಯನದಲ್ಲಿ 200 ಟಿಎಂಸಿ ನೀರು ಯಾವುದೇ ನೆರೆ ರಾಜ್ಯಗಳು ಬಳಸದೇ ಅನುಪಯುಕ್ತವಾಗಿ ಅರಬ್ಬಿ ಸಮುದ್ರವನ್ನು ಸೇರುತ್ತದೆ ಎಂದು ತಿಳಿಸಿತ್ತು. ಅಧ್ಯಯನಗಳು ವರದಿ ನೀಡಿದರೂ ಗೋವಾ ಈಗಲೂ ತನ್ನ ಮೊಂಡುವಾದವನ್ನು ಮುಂದುವರೆಸಿಕೊಂಡೆ ಬಂದಿದೆ.

    ನ್ಯಾಯಾಧಿಕರಣ ರಚಿಸಲು ಗೋವಾ ಪಟ್ಟು:
    ಈ ವಿಚಾರ ಇತ್ಯರ್ಥ ಆಗಬೇಕಾದರೆ ಅದು ನ್ಯಾಯಾಧಿಕರಣದಿಂದ ಮಾತ್ರ. ಹೀಗಾಗಿ ನ್ಯಾಯಾಧಿಕರಣ ರಚಿಸಿ ಎಂದು 2002ರಲ್ಲಿ ಕೇಂದ್ರ ಸರ್ಕಾರವನ್ನು ಗೋವಾ ಕೇಳಿಕೊಂಡಿತು. 2006ರಲ್ಲಿ ಕರ್ನಾಟಕ ಆರಂಭಿಸಿರುವ ಕಳಸಾ ಬಂಡೂರಿ ಯೋಜನೆಗೆ ತಡೆ ನೀಡಿ ಮತ್ತು ನ್ಯಾಯಾಧಿಕರಣವನ್ನು ರಚಿಸುವುಂತೆ ಸುಪ್ರೀಂ ಕೋರ್ಟ್‍ನಲ್ಲಿ ಮನವಿ ಮಾಡಿಕೊಂಡಿತು. 2006ರಲ್ಲಿ ಕೇಂದ್ರದ ಪರಿಸರ ಮಂತ್ರಾಲಯ, ಈ ಯೋಜನೆಯನ್ನು ಮಾತುಕತೆ ಮೂಲಕ ಬಗೆ ಹರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ 1956ರ ಅಂತರ್ ರಾಜ್ಯ ಜಲ ವಿವಾದ ಕಾಯ್ದೆಯ ಮೆರೆಗೆ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಕರ್ನಾಟಕ ಸರ್ಕಾರಕ್ಕೆ ತಿಳಿಸಿತು. 2010 ಜೂನ್‍ನಲ್ಲಿ ಕರ್ನಾಟಕ, 2010ರ ಅಕ್ಟೋಬರ್ ನಲ್ಲಿ ಮಹಾರಾಷ್ಟ್ರ ಸರ್ಕಾರ ಕೇಂದ್ರಕ್ಕೆ ನ್ಯಾಯಾಧಿಕರಣ ರಚಿಸುವಂತೆ ಮನವಿ ಮಾಡಿತು. ಅಂತಿಮವಾಗಿ ಕೇಂದ್ರ ಸರ್ಕಾರ ನವೆಂಬರ್ 16 ರಂದು 2010ರಂದು ‘ಮಹದಾಯಿ ಜಲ ವಿವಾದ ನ್ಯಾಯಧಿಕರಣ’ವನ್ನು ರಚಿಸಿದ್ದು, ಈಗ ಈ ಯೋಜನೆ ವಿವಾದ ನ್ಯಾಯಾಧಿಕರಣದ ಅಂಗಳದಲ್ಲಿದೆ. ಮೂರು ರಾಜ್ಯ ಸರ್ಕಾರಗಳು ನ್ಯಾಯಾಧಿಕರಣ ನೀಡುವ ತೀರ್ಪಿಗೆ ನಾವು ಬದ್ಧರಾಗಿರುತ್ತೇವೆ ಎನ್ನುವ ಪ್ರಮಾಣಪತ್ರವನ್ನು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿವೆ.

    ಪ್ರಸ್ತುತ ಈ ಕಾಮಗಾರಿಗಳ ಸ್ಥಿತಿ ಗತಿ ಹೇಗಿದೆ?
    ಗೋವಾ ಸರ್ಕಾರ ಕಿರಿಕಿರಿ ಮತ್ತು ನಮ್ಮ ರಾಜ್ಯ ಸರ್ಕಾರಗಳ ರಾಜಕೀಯದಿಂದಾಗಿ ಈ ಯೋಜನೆ ಆರಂಭವಾಗಲೇ ಇಲ್ಲ. ಆದರೆ 2006ರಲ್ಲಿ ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೀರಾವರಿ ಮಂತ್ರಿಯಾಗಿದ್ದ ಕೆ.ಎಸ್.ಈಶ್ವರಪ್ಪ ಕಳಸಾ ನಾಲಾ ಯೋಜನೆಗೆ ಚಾಲನೆ ನೀಡಿದರು. ಕುಂಟುತ್ತಾ, ತೆವಳುತ್ತಾ ಕಾಮಗಾರಿ ಆರಂಭವಾಯಿತು. ಈ ಯೋಜನೆಯಲ್ಲಿ ತಾತ್ಕಾಲಿಕ ಬಂಡ್ ನಿರ್ಮಾಣ ಅಗತ್ಯವಾಗಿತ್ತು. ಈ ತಾತ್ಕಾಲಿಕ ಬಂಡ್ ನಿರ್ಮಾಣಕ್ಕೆ ಕೇಂದ್ರ ಜಲ ಮಂಡಳಿ ಒಪ್ಪಿಗೆ ನೀಡಿತು. ಆದರೆ ಸುಮ್ಮನೇ ಕೂರದ ಗೋವಾ ರಾಜ್ಯ ಇದನ್ನ ವಿರೋಧಿಸಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಿ, ಅಲ್ಲಿಂದ ತಡೆಯಾಜ್ಞೆಗೆ ಪ್ರಯತ್ನಿಸಿತು. ಆಗ ಸುಪ್ರೀಂಕೋರ್ಟ್ 6 ತಿಂಗಳ ಕಾಲಾವಧಿಯಲ್ಲಿ ಈ ಬಗ್ಗೆ ದಾಖಲೆಗಳನ್ನು ತಂದು ತೋರಿಸುವಂತೆ ಸೂಚಿಸಿತು. ಹೀಗೆ ಮೂರು ಬಾರಿ ವಿನಾಕಾರಣ ಕ್ಯಾತೆ ತೆಗೆದ ಗೋವಾ ಸರ್ಕಾರ ಒಂದೂವರೆ ವರ್ಷ ಹಾಳು ಮಾಡಿತು. ಮೂರು ಬಾರಿ 6 ತಿಂಗಳ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್, ಕೊನೆಗೆ ಛೀಮಾರಿ ಹಾಕಿ ಕೊನೆಗೆ ಗೋವಾದ ಅರ್ಜಿಯನ್ನು ವಜಾಗೊಳಿಸಿತು. ಆಗಲೇ ರಾಜ್ಯ ಸರಕಾರ ಈ ಕಾಮಗಾರಿ ಬಗ್ಗೆ ಗಂಭೀರವಾಗಿ ಚಿಂತಿಸಿ, ಶೀಘ್ರವಾಗಿ ಪೂರ್ಣಗೊಳಿಸಲು ಯೋಚಿಸಬಹುದಿತ್ತು. ಆದರೆ ರಾಜಕಾರಣದಿಂದಾಗಿ ಗುತ್ತಿಗೆದಾರರನ್ನು ಬದಲಾಯಿಸುವುದು ಮತ್ತೆ ಬೇರೆಯವರಿಗೆ ನೀಡಿದ ಕಾರಣ ಕಾಮಗಾರಿ ವಿಳಂಬವಾಯಿತು. ಪ್ರಸ್ತುತ ಕಳಸಾ ನಾಲದ 5.5 ಕಿ.ಮೀ ಉದ್ದದ ಕಾಮಗಾರಿಯಲ್ಲಿ ಶೇ.95 ಭಾಗ ಪೂರ್ಣಗೊಂಡಿದೆ. ಬಂಡೂರಿ ನಾಲಾ ಯೋಜನೆಯ ಕಾಮಗಾರಿಗೆ ಚಾಲನೆಯೇ ಸಿಕ್ಕಿಲ್ಲ.

    ಪ್ರಸ್ತುತ ಕೇಂದ್ರ ಸರ್ಕಾರದ ನಿಲುವು ಏನಿದೆ?
    ಪ್ರಧಾನಿ ಮಧ್ಯಸ್ಥಿಕೆ ವಹಿಸಿದ್ದಲ್ಲಿ ಸಮಸ್ಯೆ ಪರಿಹಾರವಾಗಬಹುದು ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ವಪಕ್ಷ ನಿಯೋಗ 2015 ಆಗಸ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತ್ತು. ಈ ವೇಳೆ ಪ್ರಧಾನಿ, “ಪ್ರಸ್ತುತ ವಿವಾದ ನ್ಯಾಯಾಧಿಕರಣದ ಮುಂದೆ ಇದೆ. ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ರಾಜ್ಯದ ಮೂವರು ಮುಖ್ಯಮಂತ್ರಿಗಳು ಸೇರಿ ಮೊದಲು ಮಾತನಾಡಿಕೊಂಡು ಬನ್ನಿ. ಅಷ್ಟೇ ಅಲ್ಲದೇ ಈ ರಾಜ್ಯಗಳ ವಿರೋಧ ಪಕ್ಷಗಳನ್ನು ಮನವೊಲಿಸಿ” ಎಂಬುದಾಗಿ ನಿಯೋಗಕ್ಕೆ ಸೂಚಿಸಿದ್ದಾರೆ ಎಂದು ಕರ್ನಾಟಕದ ಬಿಜೆಪಿ ನಾಯಕರು ತಿಳಿಸಿದ್ದರು.

    2017ರ ಡಿಸೆಂಬರ್ ನಲ್ಲಿ ಏನಾಯ್ತು?
    2018 ವಿಧಾನಸಭೆ ಚುನಾವಣೆ ನಡೆಯುವ ಕಾರಣ ಮಹದಾಯಿ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ರಾಜ್ಯದ ಬಿಜೆಪಿ ನಾಯಕರು ದೆಹಲಿಯಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಜೊತೆ ಸಂಧಾನ ಸಭೆ ನಡೆಸಿದರು. ಈ ಸಂಧಾನ ಸಭೆಯ ಬಳಿಕ ಮಾನವೀಯತೆ ದೃಷ್ಟಿಯಿಂದ ನೀರು ಬಿಡಲು ಒಪ್ಪಿಗೆ ನೀಡುತ್ತೇನೆ ಎಂದು ಪರಿಕ್ಕರ್ ಬಿಎಸ್ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದರು. ಈ ಪತ್ರವನ್ನು ಬಿಎಸ್‍ವೈ ಹುಬ್ಬಳ್ಳಿಯಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಓದಿದರು. ಆದರೆ ಮಹದಾಯಿ ಹೋರಾಟಗಾರರು ಈ ರೀತಿಯ ಪತ್ರ ಬರೆಯುದರಿಂದ ವಿವಾದ ಪರಿಹಾರವಾಗುವುದಿಲ್ಲ. ಕೂಡಲೇ ವಿವಾದವನ್ನು ಪರಿಹರಿಸುವಂತೆ ಆಗ್ರಹಿಸಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪ್ರತಿಭಟಿಸಿದರು. ಅಷ್ಟೇ ಅಲ್ಲದೇ ಡಿಸೆಂಬರ್ 27 ರಂದು ಉತ್ತರ ಕರ್ನಾಟಕ ಬಂದ್ ಗೆ ಕರೆ ನೀಡಿದರು.

    ಬಿಜೆಪಿ ಆರೋಪ ಏನು?
    ಗೋವಾದಲ್ಲಿರುವ ಬಿಜೆಪಿ ಮಹದಾಯಿ ನೀರನ್ನು ಹರಿಸಲು ಒಪ್ಪಿಗೆ ನೀಡಿದೆ. ಆದರೆ ಅಲ್ಲಿನ ಕಾಂಗ್ರೆಸ್ ಒಪ್ಪಿಗೆ ನೀಡಿಲ್ಲ. 2007ರಲ್ಲಿ ಚುನಾವಣಾ ಭಾಷಣದ ವೇಳೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು ಮಹದಾಯಿ ನೀರನ್ನು ಕರ್ನಾಟಕಕ್ಕೆ ಹರಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ನಮ್ಮ ವಿರುದ್ಧ ಪ್ರತಿಭಟಿಸುವ ಬದಲು ಕಾಂಗ್ರೆಸ್ ವಿರುದ್ಧ ಪ್ರತಿಭಟಿಸಿ. ನಾವು ನೀರು ತರಲು ಸಿದ್ಧರಿದ್ದೇವೆ ಎಂದು ಹೇಳಿದ್ದರು. ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ 6 ತಿಂಗಳ ಒಳಗಡೆ ಈ ಸಮಸ್ಯೆಯನ್ನು ಬಗೆ ಹರಿಸುತ್ತೇವೆ ಎಂದು ಭರವಸೆ ನೀಡಿದ್ದರು.

    ಕಾಂಗ್ರೆಸ್ ಆರೋಪ ಏನು?
    ಈಗ ಕೇಂದ್ರದಲ್ಲಿ ಮತ್ತು ಗೋವಾದಲ್ಲಿ ಬಿಜೆಪಿ ಸರ್ಕಾರವಿದೆ. ಹೀಗಾಗಿ ರಾಜ್ಯದ ಬಿಜೆಪಿ ನಾಯಕರು ಮನಸ್ಸು ಮಾಡಿದರೆ ನೀರು ತರುವುದು ಸುಲಭ. ಪ್ರಧಾನಿ ಮೋದಿಗೆ ಒತ್ತಡ ಹಾಕಿದರೆ ಮಹದಾಯಿ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಆದರೆ ಮೋದಿ ಮಹದಾಯಿ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸುತ್ತಿದೆ. ಅಷ್ಟೇ ಅಲ್ಲದೇ ಗೋವಾದ  ಸರ್ಕಾರಕ್ಕೆ ನಾವು ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಯಡಿಯೂರಪ್ಪನವರಿಗೆ ಪತ್ರ ಬರೆಯುವ ಮೂಲಕ ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದೆ.

    –  ಜಾವೇದ್ ಅಧೋನಿ,  ಅಶ್ವಥ್ ಸಂಪಾಜೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

    https://www.youtube.com/watch?v=Pen28gCcuho


  • ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣ ಬಯಲಿಗೆಳೆದಿದ್ದ ಪೊಲೀಸ್ ಅಧಿಕಾರಿ ಆತ್ಮಹತ್ಯೆ

    ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣ ಬಯಲಿಗೆಳೆದಿದ್ದ ಪೊಲೀಸ್ ಅಧಿಕಾರಿ ಆತ್ಮಹತ್ಯೆ

     

    ಮುಂಬೈ: ಮಹಾರಾಷ್ಟ್ರದಲ್ಲಿ ಹಲವು ಅಕ್ರಮಗಳನ್ನು ಮಟ್ಟ ಹಾಕಿ ಹೆಸರು ಗಳಿಸಿದ್ದ ದಕ್ಷ ಪೊಲೀಸ್ ಅಧಿಕಾರಿ ಹಿಮಾಂಶ್ ರಾಯ್ ಶುಕ್ರವಾರ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ನಗರದ ಮಲಬಾರ್ ಹಿಲ್ಸ್‍ನಲ್ಲಿರುವ ತಮ್ಮ ನಿವಾಸದಲ್ಲಿ ಮಧ್ಯಾಹ್ನ ಸರ್ವಿಸ್ ರಿವಾಲ್ವಾರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

    ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ದಾರಿಯ ಮಧ್ಯದಲ್ಲಿಯೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ, ಶವವನ್ನು ಅಲ್ಲಿಯೇ ಇರಿಸಲಾಗಿದ್ದು, ಆಸ್ಪತ್ರೆಯ ಹೊರಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.

    ರಾಯ್ ಅವರು 1988ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದು, ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳದ (ಎಟಿಎಸ್) ಮಾಜಿ ಮುಖ್ಯಸ್ಥರಾಗಿದ್ದರು. 2013ರ ಇಂಡಿಯನ್ ಪ್ರೀಮಿಯರ್ ಲೀಗ್ ಸ್ಪಾಟ್ ಫಿಕ್ಸಿಂಗ್ ಹಗರಣ, 2012ರಲ್ಲಿ ನಡೆದ ವಕೀಲೆ ಪಲ್ಲವಿ ಪುಕರ್ಯಾಸ್ತ ಮತ್ತು ಪತ್ರಕರ್ತ ಜ್ಯೋತಿರ್ಮಯಿ ಡೇ ಹತ್ಯೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ತನಿಖೆಗಳನ್ನು ನಡೆಸಿದ್ದರು.

    ಕಳೆದ 2 ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಕೆಲ ತಿಂಗಳಿನಿಂದ ದೀರ್ಘ ರಜೆಯನ್ನು ಪಡೆದಿದ್ದರು. ಅವರ ಕೊಠಡಿಯಲ್ಲಿ 1 ಪುಟದ ಸೂಸೈಡ್ ನೋಟ್ ಪತ್ತೆಯಾಗಿದ್ದು ಕ್ಯಾನ್ಸರ್ ಕಾರಣಕ್ಕಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಅಷ್ಟೇ ಅಲ್ಲದೇ ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದುಕೊಂಡಿದ್ದಾರೆ.