Tag: ಮಹಮೂದ್ ಅಲಿ

  • ಮಹಿಳೆಯರು ತುಂಡುಡುಗೆ ಧರಿಸಿದ್ರೆ ಮಾತ್ರ ಸಮಸ್ಯೆ ಆಗುತ್ತೆ: ತೆಲಂಗಾಣ ಗೃಹ ಸಚಿವ

    ಮಹಿಳೆಯರು ತುಂಡುಡುಗೆ ಧರಿಸಿದ್ರೆ ಮಾತ್ರ ಸಮಸ್ಯೆ ಆಗುತ್ತೆ: ತೆಲಂಗಾಣ ಗೃಹ ಸಚಿವ

    ಹೈದರಾಬಾದ್: ತೆಲಂಗಾಣದ ಗೃಹ ಸಚಿವ ಮಹಮೂದ್ ಅಲಿ (Mahmood Ali) ಯವರು ಮಹಿಳೆಯರು ತುಂಡುಡುಗೆ ಧರಿಸಿದ್ರೆ ಮಾತ್ರ ಸಮಸ್ಯೆ ಆಗುತ್ತೆ ಎಂದು ಹೇಳಿದ್ದಾರೆ.

    ಹೈದರಾಬಾದ್‍ (Hyderabad) ನ ಸಂತೋಷ್ ನಗರದಲ್ಲಿರುವ ಕೆವಿ ರಂಗಾರೆಡ್ಡಿ ಕಾಲೇಜಿ (Women’s Degree College in Santosh Nagar) ನಲ್ಲಿ ವಿದ್ಯಾರ್ಥಿನಿಯರನ್ನು ಬುರ್ಕಾ ತೆಗೆದಿರಿಸಿ ಪರೀಕ್ಷೆ ಬರೆಯಲಾಗಿತ್ತು. ಈ ವಿಚಾರ ಅಲ್ಲಿ ಭಾರೀ ಚರ್ಚೆಗೀಡಾಗಿತ್ತು. ಈ ಸಂಬಂಧ ಕೆಲ ವಿದ್ಯಾರ್ಥಿನಿಯರು ಕಾಲೇಜಿನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಮಧ್ಯೆ ಗೃಹ ಸಚಿವರು ಕೂಡ ಪ್ರತಿಕ್ರಿಯಿಸಿ, ಮಹಿಳೆಯರು ಸಾಧ್ಯವಾದಷ್ಟು ದೇಹವನ್ನು ಮುಚ್ಚಿಕೊಂಡು ಬರಬೇಕು. ಮಹಿಳೆಯರು ಧರಿಸುವ (Women Dress) ಸಣ್ಣ ಸಣ್ಣ ಉಡುಪುಗಳಿಂದ ಮಾತ್ರ ಸಮಸ್ಯೆಯಾಗುತ್ತದೆ ಎಂದಿದ್ದಾರೆ.

    ನಮ್ಮದು ಸಂಪೂರ್ಣ ಜಾತ್ಯಾತೀತ ನೀತಿಯಾಗಿದೆ. ಪ್ರತಿಯೊಬ್ಬರಿಗೂ ಯಾವ ಬಟ್ಟೆ ಬೇಕಾದರೂ ಧರಿಸುವ ಹಕ್ಕಿದೆ. ಆದರೆ ಹಿಂದೂ ಅಥವಾ ಇಸ್ಲಾಮಿಕ್ ಪದ್ಧತಿಗಳ ಪ್ರಕಾರವೇ ಬಟ್ಟೆ ತೊಡಬೇಕು. ಯುರೋಪಿಯನ್ ಸಂಸ್ಕೃತಿಯನ್ನು ಅನುಸರಿಸಬಾರದು. ನಾವು ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಗೌರವಿಸಬೇಕು. ವಿಶೇಷವಾಗಿ ಮಹಿಳೆಯರು ಸಣ್ಣ ಉಡುಪುಗಳನ್ನು ಧರಿಸಬಾರದು ಮತ್ತು ಅವರು ಸಾಧ್ಯವಾದಷ್ಟು ತಮ್ಮ ದೇಹವನ್ನು ಮುಚ್ಚಿಕೊಳ್ಳಬೇಕು ಎಂದು ಹೇಳಿದರು.

    ಕಾಲೇಜಿನಲ್ಲಿ ನಡೆದಿದ್ದೇನು..?: ರಂಗಾ ರೆಡ್ಡಿ ಮಹಿಳಾ ಪದವಿ ಕಾಲೇಜಿನಲ್ಲಿ ಶುಕ್ರವಾರ ಉರ್ದು ಮಾಧ್ಯಮ ಪದವಿ ಪರೀಕ್ಷೆ ನಡೆಯುವುದಿತ್ತು. ಹೀಗಾಗಿ ಬುರ್ಕಾ ತೆಗೆದು ಪರೀಕ್ಷಾ ಕೊಠಡಿ ತೆರಳುವಂತೆ ವಿದ್ಯಾರ್ಥಿನಿಯರಿಗೆ ಸೂಚಿಸಲಾಗಿತ್ತು. ಆದರೆ ವಿದ್ಯಾರ್ಥಿನಿಯರು ಮಾತ್ರ ಬುರ್ಕಾ ಹಾಕಿಕೊಂಡೇ ಪರೀಕ್ಷಾ ಕೇಂದ್ರ ಪ್ರವೇಶಿಸಿದ್ದರು. ಈ ಹಿನ್ನೆಲಯ್ಲಲಿ ಸುಮಾರು ಅರ್ಧ ಗಂಟೆ ಕಾಲ ಅವರನ್ನು ಪರೀಕ್ಷಾ ಕೊಠಡಿಯಿಂದ ಹೊರಗೆ ನಿಲ್ಲಿಸಲಾಗಿತ್ತು. ಕೊನೆಗೆ ಬುರ್ಕಾ (Burqa) ತೆಗೆದೇ ಪರೀಕ್ಷೆ ಬರೆದಿರುವುದಾಗಿ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

    ಮುಂದಿನ ದಿನಗಳಲ್ಲಿ ಬುರ್ಕಾ ಧರಿಸದಂತೆ ಕಾಲೇಜು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೆ ಇದು ಪರೀಕ್ಷಾ ನಿಯಮಗಳಿಗೆ ವಿರುದ್ಧವಾಗಿದೆ. ಈ ಬಗ್ಗೆ ನಮ್ಮ ಪೋಷಕರು ಗೃಹ ಸಚಿವ ಮಹಮೂದ್ ಅಲಿ ಅವರಿಗೆ ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

  • ಈದ್ ಅಲ್-ಅಧಾ ಹಬ್ಬಕ್ಕೆ ಗೋವನ್ನು ಬಲಿ ಕೊಡಬೇಡಿ- ತೆಲಂಗಾಣ ಸಚಿವರಿಂದ ಮನವಿ

    ಈದ್ ಅಲ್-ಅಧಾ ಹಬ್ಬಕ್ಕೆ ಗೋವನ್ನು ಬಲಿ ಕೊಡಬೇಡಿ- ತೆಲಂಗಾಣ ಸಚಿವರಿಂದ ಮನವಿ

    ಹೈದರಾಬಾದ್: ಬಕ್ರೀದ್ ಎಂದು ಜನಪ್ರಿಯವಾಗಿರುವ ಈದ್ ಅಲ್-ಅಧಾ ಹಬ್ಬದಲ್ಲಿ ಗೋವುಗಳನ್ನು ಬಲಿ ಕೊಡಬೇಡಿ ಎಂದು ತೆಲಂಗಾಣ ಗೃಹ ಸಚಿವ ಮಹಮೂದ್ ಅಲಿ ಅವರು ಮುಸ್ಲಿಂ ಬಾಂಧವರ ಬಳಿ ಮನವಿ ಮಾಡಿದ್ದಾರೆ.

    ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಸದಸ್ಯತ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಂದು ನಿರ್ದಿಷ್ಟ ಸಮುದಾಯದ ಜನರು ಗೋವುಗಳನ್ನು ಪೂಜಿಸುತ್ತಾರೆ. ಅವರ ನಂಬಿಕೆಯನ್ನು ನಾವು ಗೌರವಿಸಬೇಕು. ಹೀಗಾಗಿ ಬಕ್ರೀದ್ ಸಮಯದಲ್ಲಿ ಗೋವುಗಳನ್ನು ಬಲಿ ಕೊಡಬೇಡಿ ಎಂದು ಮುಸ್ಲಿಂ ಬಾಂಧವರ ಬಳಿ ಕೇಳಿಕೊಂಡರು.

    ನಾನು ಎಲ್ಲಾ ಮುಸ್ಲಿಂ ಸಹೋದರರಿಗೆ ಗೋವುಗಳ ಬಲಿ ಕೊಡುವುದನ್ನು ತಪ್ಪಿಸಬೇಕೆಂದು ಮನವಿ ಮಾಡುತ್ತೇನೆ. ಹಸುವನ್ನು ಒಂದು ಧರ್ಮದಲ್ಲಿ ಗೌರವಿಸಲಾಗುತ್ತದೆ ಮತ್ತು ಪೂಜಿಸಲಾಗುತ್ತದೆ. ಮುಸ್ಲಿಂ ಬಾಂಧವರು ಗೋವುಗಳ ಬದಲಿಗೆ ಆಡು ಮತ್ತು ಇತರೆ ಸಣ್ಣ ಪ್ರಾಣಿಗಳನ್ನು ಹಬ್ಬದಲ್ಲಿ ಬಲಿ ಕೊಡಲು ಬಳಸಬಹುದು ಎಂದು ಅಲಿ ಅವರು ಸಲಹೆ ನೀಡಿದರು.

    ಈ ವೇಳೆ ಹೈದರಾಬಾದ್‍ನ ಐತಿಹಾಸಿಕ ಸ್ಥಳವಾದ ಚಾರ್ಮಿನಾರ್ ರನ್ನು ಉಲ್ಲೇಖಿಸಿ, ಈ ಸ್ಮಾರಕವು ನಮ್ಮ ಪೂರ್ವಜರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಚಾರ್ಮಿನಾರ್ ನ ನಾಲ್ಕು ಸ್ತಂಭಗಳು ಹಿಂದೂ, ಇಸ್ಲಾಂ, ಸಿಖ್ ಮತ್ತು ಕ್ರಿಶ್ಚಿಯನ್ ನಾಲ್ಕು ಧರ್ಮವನ್ನು ಪ್ರತಿನಿಧಿಸುತ್ತದೆ. ಜನರ ನಂಬಿಕೆಯನ್ನು ಒಗ್ಗುಡಿಸುವ ಉದ್ದೇಶದಿಂದ ಮೊಹಮ್ಮದ್ ಕುಲಿ ಕುತುಬ್ ಶಾಹಿ ಚಾರ್ಮಿನಾರ್ ನಿರ್ಮಿಸಿದ್ದಾರೆ ಎಂದರು.

    ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರು ಕೂಡ ಶಾಹಿಯ ರೀತಿಯೇ ಯೋಚಿಸುತ್ತಾರೆ. ಶಾಹಿಯ ನಂತರ, ಎಲ್ಲಾ ಜನರನ್ನು ಒಗ್ಗೂಡಿಸಿ ಇರಿಸುವ ನಂಬಿಕೆಯನ್ನು ಹೊಂದಿರುವ ನಾಯಕರಿದ್ದಾರೆ ಎಂದರೆ, ಅವರೇ ನಮ್ಮ ಸಿಎಂ ಕೆ.ಸಿ ರಾವ್ ಎಂದು ಹಾಡಿ ಹೊಗಳಿದರು.

    ಈ ಬಾರಿ ಬಕ್ರೀದ್ ಹಬ್ಬವನ್ನು ಆಗಸ್ಟ್ 11ರಂದು ಆಚರಿಸಲಾಗುತ್ತಿದ್ದು, ಹಬ್ಬದಲ್ಲಿ ಪ್ರಾಣಿ ಬಲಿ ನೀಡುವುದು ಸಂಪ್ರದಾಯವಾಗಿದೆ. ಹೀಗಾಗಿ ಬಕ್ರೀದ್ ಹಬ್ಬಕ್ಕೆ ಗೋವುಗಳನ್ನು ಬಲಿ ನೀಡುವವರ ವಿರುದ್ಧ ಕಾನೂನಿನ ತನ್ನ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಅಲ್ಲದೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ರಾಜ್ಯದಲ್ಲಿ ಪೊಲೀಸರು ಜಾಗರೂಕರಾಗಿದ್ದಾರೆ. ಕಳೆದ ಬಾರಿ ಎಲ್ಲಾ ಸಾರಿಗೆ ವಾಹನಗಳನ್ನು ಪೊಲೀಸರು ಪರಿಶೀಲನೆ ಮಾಡಿದ್ದರು. ಆದ್ದರಿಂದ ಗೋವುಗಳ ಬಲಿ ಪಡೆಯಬೇಡಿ ಎಂದು ಸೂಚಿಸಿದರು.