Tag: ಮಹದಾಯಿ ವಿವಾದ

  • ಕರ್ನಾಟಕದ ವಿರುದ್ಧ ಸುಪ್ರೀಂನಲ್ಲಿ ಗೋವಾದಿಂದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ

    ಕರ್ನಾಟಕದ ವಿರುದ್ಧ ಸುಪ್ರೀಂನಲ್ಲಿ ಗೋವಾದಿಂದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ

    – ಅಕ್ರಮವಾಗಿ ಕರ್ನಾಟಕ ಮಹದಾಯಿ ನದಿ ತಿರುಗಿಸುತ್ತಿದೆ

    ಪಣಜಿ: ಕರ್ನಾಟಕ ಮಹದಾಯಿ ನೀರು ತಿರುಗಿಸುತ್ತಿದೆ ಎಂದು ಆರೋಪಿಸಿ ಗೋವಾ ಸರ್ಕಾರ ಸುಪ್ರೀಂ ಕೋರ್ಟ್‍ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.

    ಈ ವಿಚಾರವಾಗಿ ಟ್ವೀಟ್ ಮಾಡಿದ ಗೋವಾ ಸಿಎಂ ಪ್ರಮೋದ್ ಸಾವಂತ್, ಇಂದು ಸುಪ್ರೀಂ ಕೋರ್ಟ್‍ನಲ್ಲಿ ಅಕ್ರಮವಾಗಿ ಮಹದಾಯಿ ನೀರು ತಿರುಗಿಸುವ ವಿಚಾರವಾಗಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ. ನಾವು ನಮ್ಮ ಹಕ್ಕುಗಳಿಗೆ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಮಹದಾಯಿ ವಿಚಾರವಾಗಿ ಗೋವಾ ಸಿಎಂ ವಿರುದ್ಧ ಕಿಡಿ ಕಾರಿದ್ದ ವಿಪಕ್ಷಗಳು ಶ್ವೇತಪತ್ರ ಹೊರಡಿಸುವಂತೆ ಆಗ್ರಹಿಸಿದ್ದವು. ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ್ದ ಗೋವಾ ಸಿಎಂ ಹಿಂದಿನ ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದರು.

    ಮಹದಾಯಿ ನದಿ ನೀರು ತಿರುವಿಗೆ ಹಿಂದಿನ ಕಾಂಗ್ರೆಸ್ ಸರ್ಕಾರ ಅವಕಾಶ ನೀಡಿತ್ತೆಂದು ಆರೋಪಿಸಿದ್ದರು. ಅಷ್ಟೇ ಅಲ್ಲದೇ ಸಾಕ್ಷ್ಯಾಧಾರಗಳ ಮೂಲಕ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದರು.

    ಕರ್ನಾಟಕ ಮತ್ತು ಗೋವಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌, ಬಿಜೆಪಿ ಪಕ್ಷಗಳಿಗೆ ಮಹದಾಯಿ ನದಿ ವಿಚಾರವೇ ದೊಡ್ಡ ವಿಷಯ. ಸದ್ಯ ಎರಡು ಕಡೆ ಬಿಜೆಪಿ ಪಕ್ಷದ ಮುಖ್ಯಮಂತ್ರಿಗಳಿದ್ದಾರೆ. ಕೇಂದ್ರದಲ್ಲೂ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವಿದೆ. ಹೀಗಾಗಿ ಬಿಜೆಪಿ ಹೇಗೆ ಈ ವಿಚಾರವನ್ನು ಇತ್ಯರ್ಥ ಮಾಡುತ್ತದೆ ಎಂಬ ಕುತೂಹಲ ಮೂಡಿದೆ.

    ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧಿಕರಣ ನೀಡಿದ್ದ ಐ ತೀರ್ಪಿಗೆ ಕೇಂದ್ರ ಸರ್ಕಾರ ನೋಟಿಫಿಕೇಷನ್ ಹೊರಡಿಸಿತ್ತು. ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ಪಡೆದು ನದಿ ಕಣಿವೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿ ಮತ್ತು ಜಲ ವಿದ್ಯುತ್ ಯೋಜನೆಗಳ ಕಾಮಗಾರಿ ಆರಂಭಿಸಬಹುದೆಂದು ಕೇಂದ್ರ ಸರ್ಕಾರ ತಿಳಿಸಿತ್ತು. ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಇಲ್ಲಿದೆ ಪೂರ್ಣ ಮಾಹಿತಿ

    ಸುದೀರ್ಘ ವಿಚಾರಣೆ ನಡೆಸಿದ್ದ ಮಹದಾಯಿ ನ್ಯಾಯಾಧಿಕರಣ 2018ರ ಅಗಸ್ಟ್ 14 ರಂದು ತನ್ನ ಐತೀರ್ಪು ಪ್ರಕಟಿಸಿತ್ತು. ಕರ್ನಾಟಕದ ಪಾಲಿಗೆ ಮಹದಾಯಿ ನದಿಯಿಂದ 13.5 ಟಿಎಂಸಿ ನೀರು ಹಂಚಿಕೆ ಮಾಡಿತ್ತು. ಇದರಲ್ಲಿ ಮಹದಾಯಿ ನದಿಯಿಂದ ಮಲಪ್ರಭೆಗೆ ಕುಡಿಯುವ ನೀರಿಗಾಗಿ 4 ಟಿಎಂಸಿ ನೀರು ಹರಿಸಲು ಒಪ್ಪಿಗೆ ಸೂಚಿಸಿತ್ತು. ಮಹದಾಯಿ ನದಿಯಿಂದ ಕರ್ನಾಟಕಕ್ಕೆ 12 ಟಿಎಂಸಿ ನೀಡಿದ್ದ ನ್ಯಾಯಾಧಿಕರಣ ಬಂಡೂರ ಯೋಜನೆಗೆ ಒಟ್ಟು 2.18 ಟಿಎಂಸಿ, ಕಳಸಾ ಯೋಜನೆಗೆ 1.72 ಟಿಎಂಸಿ, ಜಲ ವಿದ್ಯುತ್ ಯೋಜನೆಗೆ 8.02 ಟಿಎಂಸಿ, ಮಹದಾಯಿ ನದಿ ಕಣಿವೆಯಲ್ಲಿ ಬಳಸಲು 1.5 ಟಿಎಂಸಿ ನೀರು ಹಂಚಿಕೆ ಮಾಡಿತ್ತು.

    ಐತೀರ್ಪು ಎಂದರೇನು?
    ನ್ಯಾಯಾಲಯಗಳು ಪ್ರಕಟಿಸುವ ಅಂತಿಮ ಆದೇಶಕ್ಕೆ ತೀರ್ಪು(Verdict) ಎಂದರೆ ನ್ಯಾಯಾಧಿಕರಣಗಳು ನೀಡುವ ಅಂತಿಮ ಆದೇಶಕ್ಕೆ ಐತೀರ್ಪು(Award) ಎಂದು ಕರೆಯಲಾಗುತ್ತದೆ.

  • ನೀರು ಪ್ರತಿಯೊಬ್ಬರ ಹಕ್ಕು, ಮಹದಾಯಿ ಸಮಸ್ಯೆ ಬಗೆಹರಿಸುವ ಸಂಕಲ್ಪ ಮಾಡ್ತಿದ್ದೇನೆ: ಮೋದಿ

    ನೀರು ಪ್ರತಿಯೊಬ್ಬರ ಹಕ್ಕು, ಮಹದಾಯಿ ಸಮಸ್ಯೆ ಬಗೆಹರಿಸುವ ಸಂಕಲ್ಪ ಮಾಡ್ತಿದ್ದೇನೆ: ಮೋದಿ

    ಗದಗ: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಪ್ರಯುಕ್ತ ಪಕ್ಷದ ಪರ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ಇಂದು ಗದಗ ನಗರದ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜ್ ಪಕ್ಕದ ಜಮೀನಿನಲ್ಲಿ ನಡೆದ ಪ್ರಚಾರ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ರು.

    2007 ರಲ್ಲಿ ಗೋವಾ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಕರ್ನಾಟಕಕ್ಕೆ ಮಹದಾಯಿ ನೀರನ್ನು ಕೊಡುವುದಿಲ್ಲ ಎಂದಿದ್ದರು. ಗೋವಾದಲ್ಲಿ ಕಾಂಗ್ರೆಸ್ ನಿರ್ನಾಮವಾಗಿದ್ದು, ಕರ್ನಾಟಕದಲ್ಲಿ ಬಂದು ಸಮಸ್ಯೆ ಸೃಷ್ಟಿ ಮಾಡಿದ್ದಾರೆ. ಮಹದಾಯಿ ಸಮಸ್ಯೆಯನ್ನ ಮುಂದೆ ಹಾಕುವ ಪ್ರವೃತ್ತಿ ನಮ್ಮದಲ್ಲ. ನೀರು ಪ್ರತಿಯೊಬ್ಬರ ಹಕ್ಕು, ಮಹದಾಯಿ ಸಮಸ್ಯೆ ಬಗೆಹರಿಸುವ ಸಂಕಲ್ಪ ಮಾಡ್ತಿದ್ದೇನೆ ಅಂದ್ರು.

    2007ರಲ್ಲಿ ಸೋನಿಯಾ ಗಾಂಧಿ ಏನು ಹೇಳಿದ್ರು ಅಂತಾ ಸಿಎಂ ಸಿದ್ದರಾಮಯ್ಯರಿಗೆ ಗೊತ್ತಿಲ್ಲ. ಕಾರಣ ಸಿಎಂ ಕಾಂಗ್ರೆಸ್‍ನಲ್ಲಿ ಇರಲಿಲ್ಲ, ಆದ್ರೆ ಯಾವ ದಳದಲ್ಲಿ ಇದ್ರೆಂಬುದು ಅವರಿಗೂ ನೆನಪಿರಲಿಕ್ಕಿಲ್ಲ. ಯಾಕಂದ್ರೆ ಪಕ್ಷ ಬದಲಿಸೋದು ಸಿದ್ದರಾಮಯ್ಯರ ರೂಢಿಯಾಗಿದೆ ಅಂತಾ ವಾಗ್ದಾಳಿ ನಡೆಸಿದ್ರು.

    ಈ ಹಿಂದೆ ಕರ್ನಾಟಕ, ಗೋವಾ ಮತ್ತು ಕೇಂದ್ರದಲ್ಲಿಯೂ ಕಾಂಗ್ರೆಸ್ ಸರ್ಕಾರಗಳಿದ್ದರೂ, ಮಹದಾಯಿ ಸಮಸ್ಯೆಯನ್ನು ಬಗೆಹರಿಸಲಿಲ್ಲ. ಮಹದಾಯಿ ವಿಷಯವನ್ನು ರಾಜಕೀಯವಾಗಿ ಬಳಸಿಕೊಂಡು ಅದನ್ನು ಟ್ರಿಬ್ಯೂನಲ್ ಗೆ ಹಾಕಲಾಯಿತು. ಈ ಸಮಸ್ಯೆ ಮುಂದಿನ ನಿಮ್ಮ ಪೀಳಿಗೆಗೂ ಮುಂದುವರೆಯಬಾರದು ಅಂತಾ ನಾನು ಆಶಿಸುತ್ತೇನೆ ಅಂತಾ ತಿಳಿಸಿದ್ರು.

  • ಮೋದಿಗೆ ತಪ್ಪು ಮಾಹಿತಿ ಕೊಟ್ಟು ಭಾಷಣ ಮಾಡಿಸಲಾಗಿದೆ-ಮೋದಿ ‘ಪಂಚ್’ಗೆ ‘ಕೈ’ ಕೌಂಟರ್

    ಮೋದಿಗೆ ತಪ್ಪು ಮಾಹಿತಿ ಕೊಟ್ಟು ಭಾಷಣ ಮಾಡಿಸಲಾಗಿದೆ-ಮೋದಿ ‘ಪಂಚ್’ಗೆ ‘ಕೈ’ ಕೌಂಟರ್

    ಬೆಂಗಳೂರು: ಇಂದು ನಗರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪದಲ್ಲಿ ಪ್ರಧಾನಿ ಮೋದಿ ಅವರಿಗೆ ತಪ್ಪು ಮಾಹಿತಿಗಳನ್ನು ನೀಡಿ ಭಾಷಣ ಮಾಡಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ್ಯ ಜಿ.ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

    ಮೋದಿ ಸಮಾವೇಶಕ್ಕೆ ತಿರುಗೇಟು ನೀಡಲೆಂದು ಜಿ.ಪರಮೇಶ್ವರ್ ನೇತೃತ್ವದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಲಾಯಿತು. ಮೋದಿಯವರು ತಮ್ಮ ಒಂದು ಗಂಟೆ ಭಾಷಣದಲ್ಲಿ ಕೆಲವು ಭರವಸೆ ಮಾತು ಟೀಕೆ ಟಿಪ್ಪಣಿ ಮಾಡಿದ್ದಾರೆ. ಕಾಂಗ್ರೆಸ್ ಭ್ರಷ್ಟ ಸರ್ಕಾರ, ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವ ಸಮಯ ಬಂದಿದೆ ಎಂದು ಮಾತನಾಡಿದ್ದಾರೆ. ಈ ಹಿಂದೆ ಬಿಜೆಪಿ ರಾಜ್ಯದಲ್ಲಿದ್ದಾಗ ಮಾಡಿದ ಬ್ರಷ್ಟಾಚಾರ ಮಾಡಿದ್ದನ್ನು ಮೋದಿ ಮರೆತಿರುವ ಹಾಗಿದೆ. ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದಿದ್ದ ಯಡಿಯೂರಪ್ಪ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಮಾತನಾಡಿದ್ದಾರೆ. ರಾಜ್ಯ ಸರ್ಕಾರ 10% ಕಮೀಷನ್ ತೆಗೆದುಕೊಳ್ಳುತ್ತದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಕರ್ನಾಟಕದಲ್ಲಿ ಭ್ರಷ್ಟಾಚಾರದ ನಂಗಾನಾಚ್ ಆಗ್ತಿದೆ ಎಂದು ಹೇಳುವ ಮೂಲಕ ನಾಡಿನ ಸಮಸ್ತ ಜನತೆಗೆ ಅವಮಾನ ಮಾಡಿದ್ದಾರೆ. ಇದೆಲ್ಲಾ ರಾಜ್ಯ ಬಿಜೆಪಿ ನಾಯಕರು ತಪ್ಪು ಮಾಹಿತಿ ನೀಡಿದ್ದರಿಂದ ಆಗಿದೆ ಅಂತಾ ಜಿ.ಪರಮೇಶ್ವರ್ ಅಂದ್ರು.

    ಕೇಂದ್ರ ಸರ್ಕಾರಕ್ಕೆ ಕೌಂಟ್ ಡೌನ್ ಶುರು: ಮೋದಿ ತಮ್ಮ ಭಾಷಣದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಕೌಂಟ್ ಡೌನ್ ಆರಂಭವಾಗಿದೆ ಅಂತಾ ಹೇಳಿದ್ದಾರೆ. ಆದ್ರೆ ನಿಜಕ್ಕೂ ಕೇಂದ್ರ ಸರ್ಕಾರದಲ್ಲಿ ಕೌಂಟ್ ಡೌನ್ ಶುರು ಆಗಿದ್ದರ ಬಗ್ಗೆ ಬಜೆಪಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ರಾಜ್ಯ ಸರ್ಕಾರ ಅಂದೇ ಕೈ ಬಿಟ್ಟಿದೆ. ಆದ್ರೆ ಮೋದಿಯವರು ಸ್ಟೀಲ್ ಬ್ರಿಡ್ಜ್ ನಲ್ಲಿ ಹಗರಣ ನಡೆದಿದೆ ಅಂತಾ ಹೇಳ್ತಾರೆ, ಪ್ರಧಾನಿಗಳಾಗಿ ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ರು.

    ದೇಶದಲ್ಲಿ 4 ಕೋಟಿ ಜನರು ಕಗ್ಗತ್ತಲಿನಲ್ಲಿ ಇದ್ದಾರೆ ಅಂತಾ ಮಾತ್ರ ಹೇಳಿದ್ರು. ಆದ್ರೆ ಉಳಿದ 126 ಕೋಟಿ ಜನರು ಬೆಳಕಿನಲ್ಲಿದ್ದಾರೆ ಎಂಬುದನ್ನು ಹೇಳಲಿಲ್ಲ. ಇದು ಮೋದಿ ಅವರ ಋಣಾತ್ಮಕ ಮನಸ್ಥಿತಿಯನ್ನು ತೋರಿಸುತ್ತದೆ. ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆ ಕೇಂದ್ರ ಸರ್ಕಾರ 17 ಸಾವಿರ ಕೋಟಿ ಅನುದಾನ ಬಿಡುಗೊಡೆ ಮಾಡಿದ್ದು, ಅದು ಕೇವಲ ಶೇ.20ರಷ್ಟು ಮಾತ್ರ. ಸಬ್ ಅರ್ಬನ್ ಯೋಜನೆಗೆ ರಾಜ್ಯ ಸರ್ಕಾರ ಶೇ.20ರಷ್ಟು ಬಂಡವಾಳವನ್ನು ಹೂಡಿಕೆ ಮಾಡುತ್ತದೆ. ಇನ್ನುಳಿದ ಶೇ.60ರಷ್ಟು ಅನುದಾನವನ್ನು ಇನ್ನೀತರ ಹಣದ ಮೂಲಗಳಿಂದ ಪಡೆಯಲಾಗುತ್ತದೆ. ಎಲ್ಲರೂ ಸೇರಿ ಕೆಲಸವನ್ನು ಮಾಡಿದ್ದೇವೆ ಅಂತಾ ಹೇಳುವ ಬದಲು ಮೋದಿ ನಾವೇ ಮಾಡಿದ್ದೇವೆ ಅಂತಾ ಹೇಳಿಕೊಂಡಿದ್ದಾರೆ ಅಂತಾ ಅಂದ್ರು.

    ಮಹದಾಯಿ ವಿಚಾರದಲ್ಲಿ ಮೌನ: ಸುಮಾರು ಒಂದು ಗಂಟೆಗಳ ಕಾಲ ಸುದೀರ್ಘ ಭಾಷಣ ಮಾಡಿದ ಮೋದಿ ಅವರು, ಮಹದಾಯಿ ವಿಚಾರದಲ್ಲಿ ಚಕಾರ ಎತ್ತಲಿಲ್ಲ. ದೇಶದ ಪ್ರಧಾನಿಗಳಾಗಿ ಮೂರು ರಾಜ್ಯಗಳ ಸಭೆಯನ್ನು ಕರೆದು ಮಧ್ಯಸ್ಥಿಕೆಯನ್ನು ವಹಿಸಿಕೊಳ್ಳಬೇಕು. ಮಹದಾಯಿ ನೀರಿಗಾಗಿ ಉತ್ತರ ಕರ್ನಾಟಕದಲ್ಲಿ ಹೋರಾಟ ಉಗ್ರ ರೂಪ ತಾಳಿದೆ. ಮಹದಾಯಿ ಹೋರಾಟದ ಬಗ್ಗೆ ಮಾತನಾಡದ ಇವರದು ರೈತ ಪರ ಸರ್ಕಾರ ಅಂತಾ ಹೇಳಿಕೊಳ್ಳುತ್ತಾರೆ ಎಂದು ಕುಟುಕಿದರು.

    ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ ಅಂತಾ ಹೇಳ್ತಾರೆ. ಆದ್ರೆ ಕರ್ನಾಟಕ ಅಪರಾಧ ನಡೆಯುವ ಟಾಪ್ 10 ರಾಜ್ಯಗಳಲ್ಲಿ ಬರುವುದಿಲ್ಲ. ಬಿಜೆಪಿ ಆಡಳಿತ ಹೊಂದಿರುವ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ ಅಪರಾಧ ಸಂಖ್ಯೆಗಳು ಹೆಚ್ಚು ನಡೆಯುತ್ತವೆ. ಕೇವಲ ರಾಜಕೀಯ ಉದ್ದೇಶಕ್ಕೆ ಈ ರೀತಿಯ ಹೇಳಿಕೆ ನೀಡುವುದು ರಾಜ್ಯಕ್ಕೆ ಅವಮಾನ ಮಾಡಿದಂತಾಗುತ್ತದೆ ಎಂದು ಆಕ್ರೋಶವನ್ನು ಹೊರ ಹಾಕಿದರು.

  • ಮಹದಾಯಿ ಸಂಧಾನಕ್ಕೆ ಸಮಯ, ಸ್ಥಳ ನಿಗದಿ ಮಾಡಿ ಹೇಳಿ – ಫಡ್ನವಿಸ್‍ಗೆ ಸಿಎಂ ಪತ್ರ

    ಮಹದಾಯಿ ಸಂಧಾನಕ್ಕೆ ಸಮಯ, ಸ್ಥಳ ನಿಗದಿ ಮಾಡಿ ಹೇಳಿ – ಫಡ್ನವಿಸ್‍ಗೆ ಸಿಎಂ ಪತ್ರ

    ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿವಾದ ಕುರಿತು ಸಂಧಾನ ಚರ್ಚೆ ನಡೆಸಲು ಸಮಯ ಹಾಗೂ ಸ್ಥಳವನ್ನು ನಿಗದಿ ಮಾಡಿ ತಿಳಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

    ಮಹದಾಯಿ ಸಮಸ್ಯೆ ಕುರಿತು ಚರ್ಚೆ ನಡೆಸಲು ಈಗಾಗಲೇ ಗೋವಾ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಪತ್ರದಲ್ಲಿ ಸ್ಪಷ್ಟಪಡಿಸಿಲಾಗಿದ್ದು, ಮಾತುಕತೆ ಮೂಲಕ ಮಹದಾಯಿ ವಿವಾದ ಬಗೆಹರಿಸಿಕೊಳ್ಳುವ ಅಗತ್ಯತೆ ಇದೆ. ನ್ಯಾಯಾಧಿಕರಣದ ವಿಚಾರಣೆಯು 2018 ಫೆಬ್ರವರಿ 06 ರಿಂದ 21 ರ ಒಳಗೆ ನಡೆಯಲಿದ್ದು ಈ ಅವಧಿಗೂ ಮುನ್ನ ವಿವಾದ ಬಗೆಹರಿಸಿಕೊಳ್ಳಬೇಕಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಉತ್ತರ ಕನ್ನಡದ ನೀರಿನ ಸಮಸ್ಯೆ ಬಗೆ ಹರಿಸುವ ಮಹದಾಯಿ ನದಿ ಹಂಚಿಕೆ ವಿವಾದ ಕುರಿತು ಗೋವಾ ಸಿಎಂ ಮನೋಹರ್ ಪರಿಕ್ಕರ್ ಸಂಧಾನ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಪತ್ರ ಬರೆದಿದ್ದಾರೆ ಎಂದು ತಿಳಿಸಿದ್ದರು. ಈ ಹೇಳಿಕೆ ಉತ್ತರವಾಗಿ ಸಿಎಂ ಸಿದ್ದರಾಮಯ್ಯ ಅವರು ಗೋವಾ ಸರ್ಕಾರಕ್ಕೆ ಮಾತುಕತೆ ನಡೆಸುವಂತೆ ಪತ್ರ ಬರೆದಿದ್ದರು.

  • ಡಿಸೆಂಬರ್ 27 ರಂದು ಉತ್ತರ ಕರ್ನಾಟಕ ಬಂದ್

    ಡಿಸೆಂಬರ್ 27 ರಂದು ಉತ್ತರ ಕರ್ನಾಟಕ ಬಂದ್

    ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಮಹದಾಯಿ ನೀರಾವರಿ ಹೋರಾಟ ಮತ್ತಷ್ಟು ತೀವ್ರಗೊಂಡಿದ್ದು, ಡಿಸೆಂಬರ್ 27 ರಂದು ಉತ್ತರ ಕರ್ನಾಟಕ ಬಂದ್ ಮಾಡಲು ಕಳಸಾ ಬಂಡೂರಿ ಮಹದಾಯಿ ಹೋರಾಟ ಸಮಿತಿ ಹಾಗೂ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ.

    ಕಳಸಾ ಬಂಡೂರಿ ರೈತ ಹಿತರಕ್ಷಣಾ ಸಮಿತಿ ಮುಖಂಡರು ಶುಕ್ರವಾರ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಬಿಜೆಪಿ ವಿರುದ್ಧ ಪ್ರತಿಭಟಿಸಿದರು. ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಇತ್ಯರ್ಥ ಪಡಿಸುವ ನಿರೀಕ್ಷೆ ಕೊನೆಗೂ ಹುಸಿಯಾಗಿದೆ. ಯೋಜನೆ ಜಾರಿ ವಿಚಾರದಲ್ಲಿ ಸರ್ಕಾರಗಳು ಮಾತು ತಪ್ಪಿವೆ ಎಂದು ಆರೋಪಿಸಿದರು.

    ನಿರೀಕ್ಷೆ ಹುಸಿಯಾದ ಹಿನ್ನೆಲೆಯಲ್ಲಿ ಈ ವೇಳೆ ಮಹದಾಯಿ ಹೋರಾಟ ಸಮಿತಿ ಕರೆ ನೀಡಿದ್ದ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ, ಪ್ರವೀಣ್ ಶೆಟ್ಟಿ ಬಣ, ಆಟೋ ಚಾಲಕರ ಸಂಘ, ಎಪಿಎಂಸಿ ವರ್ತಕರು ಬೆಂಬಲ ನೀಡಿದ್ದಾರೆ.

    ಮಹದಾಯಿ ವಿವಾದವನ್ನು ಬಗೆ ಹರಿಸಿಲು ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಮಧ್ಯಪ್ರವೇಶಿಸಿ, ವಿವಾದಿತ ರಾಜ್ಯಗಳ ನಡುವೆ ಸಂಧಾನ ಮಾತುಕತೆ ಸಭೆ ನಡೆಸಬೇಕು. ಇದನ್ನು ಬಿಟ್ಟು ಪೊಳ್ಳು ಭರವಸೆ ನೀಡಿ ರೈತರ ಕಣ್ಣಿಗೆ ಮಣ್ಣೆರೆಚುವ ಕ್ರಮವನ್ನು ಬಿಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಳಸಾ ಬಂಡೂರಿ ಹೋರಾಟಗಾರರು ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಪ್ರತಿಭಟನಾನಿರತು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಇಂದಿನಿಂದ ಮಹದಾಯಿ ನೀರಿನ ಚಿಂತೆಯನ್ನು ಬಿಟ್ಟು ಬಿಡಿ: ಬಿಎಸ್‍ವೈ

    ಇದೇ ವೇಳೆ ಬಿಜೆಪಿ ನಾಯಕರು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಹೋರಾಟಗಾರರು, ಬಿಜೆಪಿ ನಾಯಕರು ರಾಜಕೀಯಕ್ಕಾಗಿ ಕಳಸಾ ಬಂಡೂರಿ ಯೋಜನೆಯನ್ನು ಬಳಸಿಕೊಳ್ಳುವದನ್ನು ಬಿಡಬೇಕು. ಬಿಜೆಪಿ ನಾಯಕರಿಗೆ ನಿಜವಾಗಲೂ ಈ ಭಾಗದ ಜನರ ಬಗ್ಗೆ ಕಾಳಜಿ ಇದ್ದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮಧ್ಯಪ್ರವೇಶ ಮಾಡಲು ಒತ್ತಾಯಿಸಬೇಕು ಎಂದು ಅಗ್ರಹಿಸಿದರು. ಇದನ್ನೂ ಓದಿ: ಮಾತುಕತೆಗಷ್ಟೇ ಒಪ್ಪಿಗೆ, ನಮ್ಮ ಹಕ್ಕುಗಳಿಗೆ ತೊಂದರೆ ಆಗಬಾರದು ಪರಿಕ್ಕರ್ ಬರೆದ ಪತ್ರದಲ್ಲಿ ಏನಿದೆ?

    ಬಂದ್ ಗೆ ಕರೆ ನೀಡಿದ್ದರಿಂದ ಕಳಸಾ ಹೋರಾಟ ತೀವ್ರವಾಗಿರುವ ಗದಗ್, ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ, ಬೆಳಗಾವಿ, ಹಾವೇರಿಯಲ್ಲಿ ಜನಜೀವನ ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ.

    https://www.youtube.com/watch?v=_JWv-dVmm8E

  • ಇಂದಿನಿಂದ ಮಹದಾಯಿ ನೀರಿನ ಚಿಂತೆಯನ್ನು ಬಿಟ್ಟು ಬಿಡಿ: ಬಿಎಸ್‍ವೈ

    ಇಂದಿನಿಂದ ಮಹದಾಯಿ ನೀರಿನ ಚಿಂತೆಯನ್ನು ಬಿಟ್ಟು ಬಿಡಿ: ಬಿಎಸ್‍ವೈ

    ಹುಬ್ಬಳ್ಳಿ: ಬೇರೆಯವರ ಮಾತಿಗೆ ನೀವು ಯಾರು ಕಿವಿಗೊಡಬೇಡಿ. ಕುಡಿಯಲು ನಾವು ಮಹದಾಯಿ ನೀರನ್ನು ತಂದೇ ತರುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.

    ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಹಲವು ಪ್ರಯತ್ನಗಳ ಫಲವಾಗಿ ಅಮಿತ್ ಶಾ ನೇತೃತ್ವದಲ್ಲಿ ಬುಧವಾರ ರಾಜ್ಯ ಬಿಜೆಪಿ ನಾಯಕರು ಮತ್ತು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಮಾತುಕತೆ ನಡೆಸಿದ್ದೇವೆ. ಕುಡಿಯುವ ನೀರನ್ನು ತರುವ ಜವಾಬ್ದಾರಿಯನ್ನು ನಾನು, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ ತೆಗೆದುಕೊಳ್ಳುತ್ತೇವೆ. ಇಂದಿನಿಂದ ನೀರಿನ ಚಿಂತೆಯನ್ನು ಬಿಟ್ಟು ಬಿಡಿ ಎಂದು ಹೇಳಿದರು.

    ಪರಿಕ್ಕರ್ ಬರೆದ ಪತ್ರವನ್ನು ಇಟ್ಟುಕೊಂಡು ಯಾರೋ ಆಗದವರು ಹೀಗೆ ಮಾಡಿದ್ದಾರೆ. ನೀರನ್ನು ನಾನು ತಂದೆ ತರುವೆ. ಬೇರೆಯವರ ಮಾತಿಗೆ ಕಿವಿ ಗೊಡಬೇಡಿ. ನಾನು ಇಂದು ಹೇಳಿದ ಮಾತಿನಂತೆ ನೀರು ತಂದೆ ತರುವೆ. ಉತ್ತರ ಕರ್ನಾಟಕದ ಎಲ್ಲ ಕೆರೆಗಳ ನೀರು ತುಂಬಿಸುವ ಜವಾಬ್ದಾರಿ ನಮ್ಮದು ಎಂದು ಬಿಎಸ್‍ವೈ ಭರವಸೆ ನೀಡಿದರು. ಇದನ್ನೂ ಓದಿ: ಮಾತುಕತೆಗಷ್ಟೇ ಒಪ್ಪಿಗೆ, ನಮ್ಮ ಹಕ್ಕುಗಳಿಗೆ ತೊಂದರೆ ಆಗಬಾರದು ಪರಿಕ್ಕರ್ ಬರೆದ ಪತ್ರದಲ್ಲಿ ಏನಿದೆ?

    ನಾವು ಅಮಿತ್ ಶಾ ಸಮ್ಮುಖದಲ್ಲಿ ಒಂದು ಗಂಟೆ ಚರ್ಚೆ ಮಾಡಿದ್ದು ನ್ಯಾಯ ಒದಗಿಸಲು ನಾವು ಬದ್ಧರಾಗಿದ್ದೇವೆ. ನಮ್ಮೆಲ್ಲರ ಜವಾಬ್ದಾರಿಯನ್ನು ಪೂರ್ಣ ಮಾಡುತ್ತೇವೆ ಎನ್ನುವ ಭರವಸೆ ನೀಡುತ್ತೇವೆ. ನ್ಯಾಯಾಧಿಕರದಲ್ಲಿ ಸಮರ್ಪಕವಾದ ಮಾಹಿತಿ ಸಲ್ಲಿಸಿ ಅರ್ಜಿ ಹಾಕಿ ಮಹದಾಯಿ ನೀರನ್ನು ತರುತ್ತೇವೆ ಎಂದು ಯಡಿಯೂರಪ್ಪ ಆಶ್ವಾಸನೆ ನೀಡಿದರು.

    https://www.youtube.com/watch?v=TZ9qqTLPXD0

    https://www.youtube.com/watch?v=IgAGJ9tffNg

    https://www.youtube.com/watch?v=k8H4IP59_Sk

    https://www.youtube.com/watch?v=c5Mb4OAwpa8

     

  • ಅಮಿತ್ ಶಾ ಮಧ್ಯಸ್ಥಿಕೆಯಲ್ಲಿ ಮಹದಾಯಿ ವಿವಾದ ಇತ್ಯರ್ಥ?

    ಅಮಿತ್ ಶಾ ಮಧ್ಯಸ್ಥಿಕೆಯಲ್ಲಿ ಮಹದಾಯಿ ವಿವಾದ ಇತ್ಯರ್ಥ?

    ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆದ ಮಹದಾಯಿ ಸಂಧಾನ ಸಭೆ ಬಹುತೇಕ ಯಶಸ್ವಿಯಾಗಿದ್ದು, ಗುರುವಾರ ಹುಬ್ಬಳ್ಳಿಯಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯಲ್ಲಿ ಅಧಿಕೃತವಾಗಿ ಬಿಜೆಪಿಯ ನಿರ್ಧಾರ ಪ್ರಕಟವಾಗಲಿದೆ.

    ಅಮಿತ್ ಶಾ ನಿವಾಸದಲ್ಲಿ ನಡೆದ ಸಭೆಯಲ್ಲಿ ಬಿಎಸ್ ಯಡಿಯೂರಪ್ಪ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಕೇಂದ್ರ ಸಚಿವರಾದ ಅನಂತ್ ಕುಮಾರ್, ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿಗಳಾದ ಪ್ರಕಾಶ್ ಜಾವಡೇಕರ್, ಪಿಯೂಶ್ ಗೋಯಲ್, ಮುರಳೀಧರ್ ರಾವ್, ಪ್ರಹ್ಲಾದ್ ಜೋಷಿ, ಜಗದೀಶ್ ಶೆಟ್ಟರ್, ಸುರೇಶ್ ಅಂಗಡಿ ಭಾಗವಹಿಸಿದ್ದರು.

    ಸುಮಾರು ಅರ್ಧಗಂಟೆಗಳ ಕಾಲ ನಡೆದ ಸಭೆಯಲ್ಲಿ ಮಹದಾಯಿ ವಿವಾದ ಕುರಿತಂತೆ ರಾಜ್ಯ ನಾಯಕರು ಗೋವಾ ಸಿಎಂ ಮನೋಹರ್ ಪರಿಕ್ಕರ್ ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಚುನಾವಣಾ ದೃಷ್ಟಯಿಂದಲೂ ಈ ವಿವಾದ ಎಷ್ಟು ಮಹತ್ವದ್ದು ಎಂಬುದನ್ನು ಪರಿಕ್ಕರ್ ವಿವರಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಮಾತುಕತೆ ವೇಳೆ ಅಮಿತ್ ಶಾ ಕೂಡಾ ನೀರು ನೀಡುವಂತೆ ಪರಿಕ್ಕರ್ ಗೆ ಮನವೊಲಿಸುವ ಯತ್ನ ಮಾಡಿದರು ಎನ್ನಲಾಗಿದೆ.

    ಮಾತುಕತೆ ಒಪ್ಪಿರುವ ಪರಿಕ್ಕರ್ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಗಳನ್ನು ನಾಳೆಯೊಳಗೆ ತಿಳಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ನಾಳೆ ಹುಬ್ಬಳ್ಳಿಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗಿಯಾಗಲಿರುವ ಪರಿವರ್ತನಾ ಯಾತ್ರೆಯಲ್ಲಿ ಅಧಿಕೃತ ಘೋಷಣೆ ಮಾಡಲು ತೀರ್ಮಾನಿಸಲಾಗಿದೆ.

    ಈ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿಎಸ್‍ವೈ, ಇಂದು ನಡೆದ ಸಭೆ ಬಹುತೇಕ ಫಲಪ್ರದವಾಗಿದ್ದು, ಅಮಿತ್ ಶಾ ಸಂಧಾನಕ್ಕೆ ಗೋವಾ ಸಿಎಂ ಮನೋಹರ್ ಪರಿಕ್ಕರ್ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

    ಸಭೆಯಲ್ಲಿ ಕಳಸ ಬಂಡೂರಿ ವಿಚಾರದಲ್ಲಿ ಮಹತ್ವಪೂರ್ಣ ಮಾತುಕತೆ ನಡೆಸಿದ್ದೇವೆ. ಹಲವಾರು ವಿಷಯಗಳ ಬಗ್ಗೆ ಗೋವಾ ಸಿಎಂ ಜೊತೆ ಮುಕ್ತವಾಗಿ ಮಾತನಾಡಿದ್ದೇವೆ. ಮಹದಾಯಿ ನಿರ್ಣಯದ ಬಗ್ಗೆ ಹುಬ್ಬಳ್ಳಿ ಪರಿವರ್ತನಾ  ರ‍್ಯಾಲಿಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಿದ್ದೇವೆ ಎಂದು ತಿಳಿಸಿದರು.

    ಸಭೆ ಒಳಗಿನ ಮಾಹಿತಿ ಬಹಿರಂಗ ಪಡಿಸದ ಯಡಿಯೂರಪ್ಪ ಕೇವಲ ಪರಿಕ್ಕರ್ ಸಕಾರಾತ್ಮಕ ವಾಗಿ ಸ್ಮಂದಿಸಿದ್ದಾರೆ ಎಂದು ಹೇಳಿದರು. ಒಟ್ಟಿನಲ್ಲಿ ಸಭೆಯ ಒಳಗಿನ ಗೌಪ್ಯತೆಯನ್ನು ಕಾಪಾಡಿಕೊಂಡಿರುವ ಬಿಜೆಪಿ ಗುರುವಾರ ಅಧಿಕೃತವಾಗಿ ತನ್ನ ನಿರ್ಧಾರವನ್ನು ಪರಿವರ್ತನಾ ಸಭೆಯಲ್ಲಿ ತಿಳಿಸಲಿದೆ.

    https://www.youtube.com/watch?v=QDNG04rghcI